
ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಮಹಾರಾತ್ರಿ ಆಚರಣೆ ಅಂಗವಾಗಿ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
ಭದ್ರಾವತಿ: ನಗರದ ವಿವಿಧೆಡೆ ಈಶ್ವರ ದೇವಾಲಯಗಳಲ್ಲಿ ಮಹಾಶಿವರಾತ್ರಿ ಹಬ್ಬ ಈ ಬಾರಿ ಸಹ ವಿಜೃಂಭಣೆಯಿಂದ ಆಚರಿಸಲಾಯಿತು. ಬಹುತೇಕ ದೇವಾಲಯಗಳಲ್ಲಿ ಭಕ್ತ ಸಮೂಹವೇ ಕಂಡು ಬಂದಿತು. ದೇವಾಲಯಗಳು ಹಸಿರು ತೋರುಣಗಳಿಂದ, ವಿದ್ಯುತ್ ಹಾಗು ಪುಷ್ಪಾಂಲಕಾರಗಳಿಂದ ಆಕರ್ಷಕವಾಗಿ ಕಂಗೊಳಿಸಿದವು. ಹಗಲು-ರಾತ್ರಿ ಬಿಡುವಿಲ್ಲದೆ ಧಾರ್ಮಿಕ ಆಚರಣೆಗಳು ಜರುಗಿದವು. ಇದಕ್ಕೆ ಪೂರಕವೆಂಬಂತೆ ಭಕ್ತರು ಸಹ ಪಾಲ್ಗೊಂಡು ಭಕ್ತಿ ಮೆರೆದರು.
ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ :
ಹೊಸಮನೆ ಎನ್.ಎಂ.ಸಿ ಎಡಭಾಗದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ರುದ್ರಾಭಿಷೇಕ, ರುದ್ರಹೋಮ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಅಲ್ಲದೆ ಕೇಶವಪುರ ಬಡಾವಣೆಯ ಶ್ರೀ ಕೃಷ್ಣ ಸತ್ಸಂಗ ಮತ್ತು ಕದಳಿ ವೇದಿಕೆ ತಂಡಗಳಿಂದ ಭಜನೆ, ಜ್ಞಾನವಾಹಿನಿ ಭಜನೆ ತಂಡದಿಂದ ಭಜನೆ, ಹೊಸಮನೆ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯಿಂದ ಮ್ಯಾನ್ಯೂಲ್ ಭಕ್ತಿಗಾಯನ ಲಹರಿ, ಧರ್ಮಶಾಸ್ತ್ರ ಭಜನಾ ಮಂಡಳಿಯಿಂದ ಭಜನೆ ಹಾಗು ಶಿವಮೊಗ್ಗ ಗಾಯಕ ಪ್ರೀತಮ್ ಮತ್ತು ತಂಡದಿಂದ ಭಕ್ತಿಗೀತೆಗಳು ಜರುಗಿದವು.
ಶ್ರೀ ಭದ್ರಾ ಶಿವಾಲಯ ಸಮಿತಿ ಅಧ್ಯಕ್ಷ ಜಿ. ಆನಂದಕುಮಾರ್ ನೇತೃತ್ವ ವಹಿಸಿದ್ದರು. ಸಮಿತಿ ಪದಾಧಿಕಾರಿಗಳು ಹಾಗು ಸದಸ್ಯರು, ಸ್ಥಳೀಯ ಮುಖಂಡರು, ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಗರದ ವಿವಿಧ ಭಾಗಗಳಿಂದ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಶ್ರೀ ಸಂಗಮೇಶ್ವರ ದೇವಾಲಯ:
ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಸ್ವಾಮಿಯ ದರ್ಶನ ಪಡೆಯಲು ಬುಧವಾರ ಬೆಳಿಗ್ಗೆಯಿಂದಲೇ ಭಕ್ತಾರು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು.
ಪ್ರತಿ ವರ್ಷದಂತೆ ಈ ಬಾರಿ ಸಹ ವೀರಶೈವ ಸೇವಾ ಸಮಿತಿವತಿಯಿಂದ ಧಾರ್ಮಿಕ ಆಚರಣೆಗಳು ಜರುಗಿದವು. ಮಂಗಳವಾರ ಸಂಜೆ ಗಣಹೋಮ, ರುದ್ರಹೋಮ, ನವಗ್ರಹ ಪೂಜೆ ಜರುಗಿದವು. ಬೆಳಿಗ್ಗೆ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ, ಶ್ರೀ ಸಂಗಮೇಶ್ವರಸ್ವಾಮಿ, ನಂದಿ, ನಾಗದೇವತೆ ದೇವರುಗಳಿಗೆ ರುದ್ರಾಭಿಷೇಕ ನೆರವೇರಿತು. ವೀರಶೈವ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಶಿವರಾತ್ರಿ ಆಚರಣಾ ಉಸ್ತುವಾರಿ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ದೇವಸ್ಥಾನದ ಸಮೀಪ ಸೇವಾಕರ್ತರಿಂದ ಭಕ್ತರಿಗೆ ಕಲ್ಲಂಗಡಿ ಹಣ್ಣು, ಕೋಸಂಬರಿ, ಪಾನಕ ವಿತರಣೆ ನೆರವೇರಿತು. ಸ್ಥಳೀಯ ಸಂಘ-ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು.
ಶ್ರೀ ಮರುಳಸಿದ್ದೇಶ್ವರಸ್ವಾಮಿ ದೇವಸ್ಥಾನ :
ಡೈರಿ ಸಮೀಪದ ಜೇಡಿಕಟ್ಟೆಯಲ್ಲಿರುವ ಮರುಳಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಇಷ್ಟಲಿಂಗ ಪೂಜೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನ ದಾಸೋಹ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
ದೇವಸ್ಥಾನದ ಮುಖ್ಯ ಅರ್ಚಕ ತಿಪ್ಪೇಸ್ವಾಮಿ, ಶ್ರೀ ಮರುಳಸಿದ್ದೇಶ್ವರಸ್ವಾಮಿ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಜೇಡಿಕಟ್ಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು.
ಲೋಯರ್ ಹುತ್ತಾ ಬಿ.ಎಚ್ ರಸ್ತೆಯಲ್ಲಿರುವ ಶ್ರೀ ಭದ್ರೇಶ್ವರ ದೇವಸ್ಥಾನ, ಅಪ್ಪರ್‌ಹುತ್ತಾದಲ್ಲಿರುವ ಶ್ರೀ ನಂದಿ, ಈಶ್ವರ ಮತ್ತು ಸಂಕಷ್ಟಹರ ಗಣಪತಿ ದೇವಸ್ಥಾನ, ನಗರದ ನ್ಯೂಟೌನ್ ಶಿವ ಸಾಯಿ ಕೃಪಾ ಧಾಮ, ಕಾಗದನಗರದ ಶ್ರೀ ಈಶ್ವರ ದೇವಸ್ಥಾನ, ಜನ್ನಾಪುರ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಕೆ.ಸಿ ಬಡಾವಣೆ ಹಾಲಪ್ಪ ಶೆಡ್‌ನಲ್ಲಿರುವ ಶ್ರೀ ನಾಗದೇವಾಲಯ, ವೀರಾಪುರ ಹುಲಿಬಂಡೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮಹಾಶಿವರಾತ್ರಿ ವಿಜೃಂಭಣೆಯಿಂದ ಜರುಗಿತು.
ಭದ್ರಾವತಿ ಹೊಸಮನೆ ಎನ್.ಎಂ.ಸಿ ಎಡಭಾಗದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ರುದ್ರಾಭಿಷೇಕ, ರುದ್ರಹೋಮ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಶ್ರೀ ಭದ್ರಾ ಶಿವಾಲಯ ಸಮಿತಿ ಅಧ್ಯಕ್ಷ ಜಿ. ಆನಂದಕುಮಾರ್ ನೇತೃತ್ವ ವಹಿಸಿದ್ದರು. ಸಮಿತಿ ಪದಾಧಿಕಾರಿಗಳು ಹಾಗು ಸದಸ್ಯರು, ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.