ಭದ್ರಾವತಿಯಲ್ಲಿ ಭಾನುವಾರ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲೂಕು ಛಲವಾದಿಗಳ (ಪರಿಶಿಷ್ಟ ಜಾತಿ) ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಛಲವಾದಿ ಜಗದ್ಗುರು ಶ್ರೀ ಬಸವನಾಗಿದೇವ ಶರಣರು ಪಾಲ್ಗೊಂಡಿದ್ದರು.
ಭದ್ರಾವತಿ, ಸೆ. ೧೩: ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸಂವಿಧಾನವನ್ನು ಕೇವಲ ಅಸ್ಪೃಶ್ಯರು, ದಲಿತರು, ಶೋಷಿತರಿಗಾಗಿ ರಚಿಸಿಲ್ಲ. ಅವರು ಬರೆದಿರುವ ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಅನ್ವಯವಾಗುತ್ತದೆ. ಇದನ್ನು ಎಲ್ಲರೂ ಅರಿತುಕೊಂಡಾಗ ಮಾತ್ರ ಸಂವಿಧಾನದ ರಕ್ಷಣೆ ಸಾಧ್ಯ ಎಂದು ಚಿತ್ರದುರ್ಗದ ಛಲವಾದಿ ಜಗದ್ಗುರು ಶ್ರೀ ಬಸವನಾಗಿದೇವ ಶರಣರು ತಿಳಿಸಿದರು.
ಅವರು ಭಾನುವಾರ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲೂಕು ಛಲವಾದಿಗಳ (ಪರಿಶಿಷ್ಟ ಜಾತಿ) ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಗಜ್ಯೋತಿ ಬಸವಣ್ಣನವರ ಆದರ್ಶಗಳು ಸಂವಿಧಾನದಲ್ಲಿ ಅಡಗಿವೆ. ಸಮಾಜದಲ್ಲಿ ಪ್ರತಿಯೊಂದು ಸಮುದಾಯಗಳಿಗೂ ಒಂದೊಂದು ಇತಿಹಾಸ, ಗುರು ಪರಂಪರೆ ಇದೆ. ಆ ಸಮುದಾಯಗಳನ್ನು ಅವುಗಳ ನೆಲೆಗಟ್ಟಿನಲ್ಲಿ ಮಠಾಧೀಶರುಗಳು ನೋಡುತ್ತಿದ್ದಾರೆ. ಆದರೆ ಸಂವಿಧಾನದ ಆಶಯವನ್ನು ತಾಳಿ ಮಾಡಿ ನೋಡುತ್ತಿಲ್ಲ. ಈ ಹಿನ್ನಲೆಯಲ್ಲಿ ಚಿತ್ರದುರ್ಗದ ಮುರುಘ ಶರಣರ ಮಾರ್ಗಸೂಚಿಯಂತೆ ಸಂವಿಧಾನದ ಆಶಯಗಳನ್ನು ಅರಿಯುವ ನಿಟ್ಟಿನಲ್ಲಿ ಪರಿವರ್ತನ ಮಠಾಧೀಶರ ಒಕ್ಕೂಟ ರಚಿಸಲಾಗಿದೆ. ಈ ಒಕ್ಕೂಟ ಅಂಬೇಡ್ಕರ್‌ರವರ ಸಂವಿಧಾನದ ಆಶಯಗಳ ಈಡೇರಿಕೆಗಾಗಿ ಹೋರಾಟ ನಡೆಸಲಿದೆ. ಸಂವಿಧಾನದ ಆಶಯಗಳನ್ನು ಸಮುದಾಯಗಳು ಅರಿತು ಮುನ್ನಡೆದಾಗ ಬಸವಣ್ಣನವರ ವಚನದಂತೆ ಅದೇ ಬಹಿರಂಗ ಶುದ್ಧಿ, ಅದೇ ಅಂತರಂಗದ ಶುದ್ಧಿ ಎಂದರು.
ಛಲವಾದಿ ಗುರುಪೀಠ ೨೦೦೨ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಸಮುದಾಯವನ್ನು ಸಂಘಟಿಸುವ ಕಾರ್ಯದಲ್ಲಿ ಮಠ ತೊಡಗಿದ್ದು, ಯಾವುದೇ ಅಸ್ಪೃಶ್ಯ ಸಮುದಾಯ ಶೋಷಣೆಗೆ ಒಳಗಾದಲ್ಲಿ ತಕ್ಷಣ ಸ್ಪಂದಿಸುತ್ತಿದೆ. ಸಮುದಾಯದಿಂದ ಎಂದಿಗೂ ಪೀಠ ದೂರ ಉಳಿದಿಲ್ಲ. ತಾಲೂಕಿನಲ್ಲಿ ಸಮುದಾಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡಬಾರದು. ಎಲ್ಲರೂ ಒಗ್ಗಟ್ಟಾಗಿ ಸಂಘಟನೆಗೆ ಮುಂದಾಗಬೇಕು. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಸಂವಿಧಾನದ ಆಶಯಗಳನ್ನು ಅರಿತು ಮುನ್ನಡೆಯಬೇಕೆಂದರು.
ಹಿರಿಯೂರು ಅಚಲ ಸದ್ಗುರು ಆಶ್ರಮದ ಶ್ರೀ ಲಕ್ಷ್ಮಣಾರ್ಯ ಸ್ವಾಮೀಜಿ, ಸಮಾಜದ ಪ್ರಮುಖರಾದ ಸುರೇಶ್, ಎಸ್.ಎಸ್ ಭೈರಪ್ಪ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್, ಬದರಿನಾರಾಯಣ, ಜಯರಾಜ್, ಮಹಾದೇವಯ್ಯ, ಹುಚ್ಚಯ್ಯ, ಈ.ಪಿ ಬಸವರಾಜ್, ಲೋಕೇಶ್, ಮಹೇಶ್, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಸಿದ್ದರು. ಸಮಾಜದ ಮಾಜಿ ಅಧ್ಯಕ್ಷ ಡಿ. ನರಸಿಂಹಮೂರ್ತಿ ಸ್ವಾಗತಿಸಿದರು. ಶಿಕ್ಷಕ ಎ. ತಿಪ್ಪೇಸ್ವಾಮಿ ನಿರೂಪಿಸಿದರು.