Wednesday, March 3, 2021

ರಮೇಶ್‌ಜಾರಕಿಹೊಳಿ ಸಚಿವ, ಶಾಸಕ ಸ್ಥಾನದಿಂದ ವಜಾಗೊಳಿಸಿ : ವಿವಿಧ ಪಕ್ಷ, ಸಂಘಟನೆಗಳಿಂದ ಆಗ್ರಹ

ರಮೇಶ್ ಲ ಜಾರಕಿಹೊಳಿಯವರನ್ನು ತಕ್ಷಣ ಸಚಿವ ಸಂಪುಟದಿಂದ ಕೈಬಿಟ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಬುಧವಾರ ಕಾಂಗ್ರೆಸ್ ಯುವ ಘಟಕದಿಂದ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಮಾ. ೩: ಯುವತಿಯೋರ್ವಳಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ ಲೈಂಗಿಕ ದೌರ್ಜನ್ಯವೆಸಗಿರುವ ಜಲ ಸಂಪನ್ಮೂಲ ಖಾತೆ ಸಚಿವ ರಮೇಶ್ ಲ. ಜಾರಕಿಹೊಳಿಯವರನ್ನು ತಕ್ಷಣ ಸಚಿವ ಹಾಗು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ವಿವಿಧ ರಾಜಕೀಯ ಪಕ್ಷಗಳ, ಸಂಘಟನೆಗಳ ಪ್ರಮುಖರು ಆಗ್ರಹಿಸಿದ್ದಾರೆ.


ಆಮ್ ಆದ್ಮಿ ಪಾರ್ಟಿ ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮೆ ಜಾವೇದ್.
     ಆಮ್ ಆದ್ಮಿ ಪಾರ್ಟಿ ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮೆ ಜಾವೇದ್ ಸಚಿವರ ಲೈಂಗಿಕ ದೌರ್ಜನ್ಯವನ್ನು ಖಂಡಿಸಿದ್ದಾರೆ.  ವಿಶ್ವ ಮಹಿಳಾ ದಿನಾಚರಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಯಡಿಯೂರಪ್ಪನವರ ಸರ್ಕಾರಕ್ಕೆ ಮಹಿಳೆಯರ ಮೇಲೆ ಸ್ವಲ್ಪವೂ ಗೌರವವಿಲ್ಲ. ಸದನದಲ್ಲಿ ಆಶ್ಲೀಲ ಚಿತ್ರ ವೀಕ್ಷಣೆ ಮಾಡಿದವರಿಗೆ ಸಚಿವ ಸ್ಥಾನ ನೀಡಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. ಇದೀಗ ಸಚಿವ ರಮೇಶ್ ಲ ಜಾರಕಿಹೊಳಿಯವರು ಯುವತಿಯೊಬ್ಬರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ನಡೆಸುವ ಮೂಲಕ ವಂಚಿಸಿರುವುದು ನಾಡಿನ ಘನತೆಗೆ ಕಪ್ಪು ಚುಕ್ಕಿಯಾಗಿದೆ. ತಕ್ಷಣ ಯಡಿಯೂರಪ್ಪನವರು ರಮೆಶ್ ಲ ಜಾರಕಿಹೊಳಿ ಸಚಿವ ಸ್ಥಾನ ಹಿಂಪಡೆಯಬೇಕು. ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಕ್ಷಣ ಶಾಸಕ ಸ್ಥಾನದಿಂದಲೂ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
     

    ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್
     ಇದೆ ರೀತಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಸಹ ದೌರ್ಜನ್ಯವನ್ನು ಖಂಡಿಸಿದ್ದಾರೆ. ರಮೇಶ್ ಲ ಜಾರಕಿಹೊಳಿ ಸಚಿವ ಸ್ಥಾನ ಹಾಗು ಶಾಸಕ ಸ್ಥಾನ ವಜಾಗೊಳಿಸುವ ಮೂಲಕ ಸಂತ್ರಸ್ಥ ಯುವತಿ ಹಾಗು ಕುಟುಂಬಕ್ಕೆ ಮತ್ತು ಸಾಮಾಜಿಕ ಕಾರ್ಯಕರ್ತ ದಿನೇಶ್‌ಕಲ್ಲಹಳ್ಳಿಯವರಿಗೆ ಗೃಹ ಸಚಿವ ಬೊಮ್ಮಾಯಿ ಸೂಕ್ತ ಭದ್ರತೆ ನೀಡಬೇಕೆಂದು ಆಗ್ರಹಿಸಿದ್ದಾರೆ.
      ಕಾಂಗ್ರೆಸ್ ಯುವ ಘಟಕದಿಂದ ಮುಖ್ಯಮಂತ್ರಿಗಳಿಗೆ ಮನವಿ:
    ಸಚಿವ ರಮೇಶ್ ಜಾರಕಿಹೊಳಿಯವರ ಲೈಂಗಿಕ ದೌರ್ಜನ್ಯದ ದೃಶ್ಯಗಳು ಹೊರಬಿದ್ದಿದ್ದು, ಸಚಿವರ ಈ ನೀಚ ಕೃತ್ಯಕ್ಕೆ ನಾಡಿನ ಜನರು ತಲೆ ತಗ್ಗಿಸುವಂತಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ಸಚಿವ ಸಂಪುಟದಿಂದ ಅವರನ್ನು ಕೈಬಿಟ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಬುಧವಾರ ಕಾಂಗ್ರೆಸ್ ಯುವ ಘಟಕದಿಂದ ಮನವಿ ಸಲ್ಲಿಸಲಾಯಿತು.
     ಮುಖ್ಯಮಂತ್ರಿಗಳು ಈ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಯುವ ಘಟಕದ ಅಧ್ಯಕ್ಷ ಜಿ. ವಿನೋದ್ ಕುಮಾರ್, ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಅಹ್ಮದ್, ನಗರ ಕಾರ್ಯದರ್ಶಿ ವರುಣ್‌ಕುಮಾರ್, ಎ.ಪಿ ಭರತ್ ಉಪಸ್ಥಿತರಿದ್ದರು.

ಶಿಕ್ಷಣ ಎಂದರೆ ಕೇವಲ ಉದ್ಯೋಗ್ಯಕ್ಕಾಗಿ ಎಂಬ ಸಂಕುಚಿತ ಭಾವನೆ ದೂರವಾಗಲಿ : ಡಾ. ಬಿ.ಜಿ ಧನಂಜಯ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಉದ್ಘಾಟಿಸಿದರು.
   ಭದ್ರಾವತಿ, ಮಾ. ೩: ಶಿಕ್ಷಣ ಎಂದರೆ ಕೇವಲ ಉದ್ಯೋಗ್ಯಕ್ಕಾಗಿ ಎಂಬ ಸಂಕುಚಿತ ಭಾವನೆ ದೂರವಾಗಿ ಅಭಿವೃದ್ಧಿ ಮತ್ತು ಪ್ರಗತಿಯ ಸಾಧನ ಎಂಬ ಅರಿವು ಮೂಡಬೇಕು ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ತಿಳಿಸಿದರು.
  ಅವರು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
   ಶಿಕ್ಷಣ ಎಂದರೆ ಜ್ಞಾನಸಂಪಾದನೆ ಎಂಬ ಅರಿವು ಸಹ ಮೂಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ದೊಡ್ಡಮಟ್ಟದ ಪರಿವರ್ತನೆ ಸಾಧ್ಯ. ಜಗತ್ತಿನ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಶಿಕ್ಷಣದಿಂದ ಪರಿಹಾರ ಸಾಧ್ಯ. ಈ ಹಿನ್ನಲೆಯಲ್ಲಿ ಯುವ ಸಮೂಹ ಶಿಕ್ಷಣವನ್ನು ನಿರ್ಲಕ್ಷಿಸಬಾರದು. ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕೆಂದರು.
     ಕಾರ್ಯಕ್ರಮದಲ್ಲಿ ಪ್ರೊ. ಮಲ್ಲಪ್ಪ, ಡಾ. ಅಮೃತೇಶ್ವರ್, ಪ್ರೊ. ಚಂದ್ರಪ್ಪ, ಪ್ರೊ. ಉಮೇಶ್‌ಕುಮಾರ್, ಪ್ರೊ. ಹೆಗ್ಗಡೆ, ಪ್ರೊ. ವಿಶ್ವನಾಥ್, ಡಾ. ಕಲ್ಪನಾ, ಉಷಾಬೆಳ್ಳಕ್ಕಿ, ರವಿಕುಮಾರ್, ಮನೋಹರ್ ಮತ್ತು ಬೋಧಕೆತರ ವರ್ಗದವರು ಉಪಸ್ಥಿತರಿದ್ದರು.
   ಗಿರೀಶ್ ಪ್ರಾರ್ಥಿಸಿದರು. ಯಶಸ್ವಿನಿ ನಿರೂಪಿಸಿದರು. ಸುಷ್ಮ ವಂದಿಸಿದರು. ಈ ಕಾರ್ಯಕ್ರಮವನ್ನು ದ್ವಿತೀಯ ಹಾಗು ತೃತಿಯ ಪದವಿ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿತ್ತು.

ಅರುಳು ದಾಸ್ ನಿಧನ

ಅರುಳುದಾಸ್
ಭದ್ರಾವತಿ, ಮಾ. ೩: ನಗರದ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಸಂತ ಮದರ್ ತೆರೇಸಾ ಸಮುದಾಯದ ವೇಲೂರುಶೆಡ್ ನಿವಾಸಿ ಅರುಳುದಾಸ್(೪೨) ಮೃತಪಟ್ಟಿದ್ದಾರೆ.
    ಪತ್ನಿ, ಓರ್ವ ಪುತ್ರನನ್ನು ಬಿಟ್ಟಗಲಿದ್ದಾರೆ. ಅರಳುದಾಸ್(ರಾಡ್‌ಬೆಂಡರ್) ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುದುರೆಗಳು ಓಡಿಸಿಕೊಂಡು ಬಂದಿದ್ದರಿಂದ ಕೆಳಗೆ ಬಿದ್ದು ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರ ನಿಧನಕ್ಕೆ ನಗರದ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳಿಗೆ ಚಾಲನೆ

ಭದ್ರಾವತಿ ನ್ಯೂಟೌನ್ ರಜತ ಮಹೋತ್ಸವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ಚಟುವಟಿಕೆಗಳಿಗೆ ಬೆಂಗಳೂರಿನ ಅಕ್ಷರ ದಾಸೋಹ ಆಯುಕ್ತರ ಕಛೇರಿಯ ಸಹನಿರ್ದೇಶಕ ಟಿ. ನಾರಾಯಣಗೌಡ ಚಾಲನೆ ನೀಡಿದರು.
    ಭದ್ರಾವತಿ, ಮಾ. ೩: ನಗರದ ನ್ಯೂಟೌನ್ ರಜತ ಮಹೋತ್ಸವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
   ಬೆಂಗಳೂರಿನ ಅಕ್ಷರ ದಾಸೋಹ ಆಯುಕ್ತರ ಕಛೇರಿಯ ಸಹನಿರ್ದೇಶಕ ಟಿ. ನಾರಾಯಣಗೌಡ ವಿಶೇಷವಾಗಿ ಆಯುರ್ವೇದಿಕ್ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಕಲಿಕೆ ಜೊತೆಗೆ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಯಾಗಿ ಹೊರಹೊಮ್ಮುವಂತೆ ಕರೆ ನೀಡಿದರು.
    ದೈಹಿಕ ಶಿಕ್ಷಕ ಶಿವಲಿಂಗೇಗೌಡ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಉದ್ದೇಶ ಹಾಗು ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಶಿವಮೊಗ್ಗ ಉದ್ಯಮಿ ಸಮೀರ್ ೮ನೇ ತರಗತಿ ಮಕ್ಕಳಿಗೆ ಕೊಡುಗೆಯಾಗಿ ಶಾಲಾ ಬ್ಯಾಗ್‌ಗಳನ್ನು ನೀಡಿದ್ದು, ಈ ಬ್ಯಾಗ್‌ಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
   ಉಪಪ್ರಾಚಾರ್ಯ ಕೆ.ಎಚ್ ಮೋಹನೇಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಮಹಾದೇವಿ ಪ್ರಾರ್ಥಿಸಿದರು. ಸಾವಿತ್ರಿ ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿ ಎನ್.ಕೆ ಪಾಲಾಕ್ಷಪ್ಪ ನಿರೂಪಿಸಿದರು. ಶಿಕ್ಷಕಿ ಛಾಯಶ್ಯಾಮಸುಂದರ್ ವಂದಿಸಿದರು.  

Tuesday, March 2, 2021

ಮಹಿಳಾ ಸೇವಾ ಸಮಾಜದಿಂದ ದಾಸಶ್ರೇಷ್ಠರ ಆರಾಧನೆ

ಪ್ರತಿಭಾವಂತರಿಗೆ 'ವಿದೂಷಿ ಹನುಮಂತಮ್ಮ ಸ್ಮಾರಕ' ಪ್ರಶಸ್ತಿ ಪ್ರದಾನ



ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ದಾಸಶ್ರೇಷ್ಠರಾದ ಪುರಂದರದಾಸರು, ಕನಕದಾಸರು ಹಾಗು ತ್ಯಾಗರಾಜರ ಆರಾಧನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಪ್ರತಿಭಾವಂತರಿಗೆ 'ವಿದೂಷಿ ಹನುಮಂತಮ್ಮ ಸ್ಮಾರಕ' ಪ್ರಶಸ್ತಿ ಪ್ರದಾನ ಮಾಡಿ  ಅಭಿನಂದಿಸಲಾಯಿತು.
    ಭದ್ರಾವತಿ, ಮಾ. ೨: ಪ್ರತಿವರ್ಷದಂತೆ ಈ ಬಾರಿ ಸಹ ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ದಾಸಶ್ರೇಷ್ಠರಾದ ಪುರಂದರದಾಸರು, ಕನಕದಾಸರು ಹಾಗು ತ್ಯಾಗರಾಜರ ಆರಾಧನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
    ಸಂಗೀತ ಪರೀಕ್ಷೆ ಜ್ಯೂನಿಯರ್ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಚಂದನ, ಸೀನಿಯರ್ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಜಿ.ವಿ ಶಾಂತಲಾ, ವೀಣೆ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶ್ರಾವಣಿಯವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸುವ ಜೊತೆಗೆ 'ವಿದೂಷಿ ಹನುಮಂತಮ್ಮ ಸ್ಮಾರಕ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
   ಸಂಗೀತ ಶಿಕ್ಷಕಿಯರಾದ ವಸುಧಮುಕುಂದ್, ಪುಷ್ಪಸುಬ್ರಮಣ್ಯ, ಉಮಾರಾವ್ ಉಪಸ್ಥಿತರಿದ್ದರು. ಸೇವಾ ಸಮಾಜದ ಅಧ್ಯಕ್ಷೆ  ಹೇಮಾವತಿ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.
    ಪದಾಧಿಕಾರಿಗಳಾದ ಉಪಾಧ್ಯಕ್ಷೆ ಕಮಲಕುಮಾರಿ, ಕಾರ್ಯದರ್ಶಿ ಶೋಭಗಂಗರಾಜ್, ಖಜಾಂಚಿ ಜಯಂತಿಶೇಟ್, ಪ್ರಮುಖರಾದ ಶಕುಂತಲ, ಚಂದ್ರಲರಾಜ್, ಭಾಗ್ಯನಿಜಗುಣ, ಕಮಲರಾಯ್ಕರ್, ಇಂದಿರಾ ರಮೇಶ್, ಶಾರದ, ಅನ್ನಪೂರ್ಣ ಸತೀಶ್, ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪರಾವ್, ಮಾಜಿ ಅಧ್ಯಕ್ಷೆ ಯಶೋಧ ವೀರಭದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗಲಭೆ : ಮಾ.೫ರ ವರೆಗೆ ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

   ಭದ್ರಾವತಿ, ಮಾ. ೨: ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಮಾ.೫ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಆದೇಶ ಹೊರಡಿಸಿದ್ದಾರೆ.
    ಫೆ.೨೭ ಮತ್ತು ೨೮ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಉಂಟಾದ ಗಲಭೆ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಗುಪ್ತ ವರದಿ ಆಧರಿಸಿ ಮಾ.೨ರ ಮಧ್ಯಾಹ್ನ ೧೧ ಗಂಟೆಯಿಂದ ಮಾ.೫ರ ಮಧ್ಯರಾತ್ರಿ ೧೨ ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮಾ.೩ರಂದು ಆಯ-ವ್ಯಯ ಮಂಡನೆ

   ಭದ್ರಾವತಿ, ಮಾ. ೨: ಈ ಬಾರಿ ನಗರಸಭೆ ಆಯ-ವ್ಯಯ ಮಂಡನೆ ಮಾ.೩ರ ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಸಭಾಂಗಣದಲ್ಲಿ ನಡೆಯಲಿದೆ.
  ನಗರಸಭೆ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದು, ಪೌರಾಯುಕ್ತ ಮನೋಹರ್ ಉಪಸ್ಥಿತರಿರುವರು. ಈಗಾಗಲೇ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ರಾಜಕೀಯ ಮುಖಂಡರು ಸೇರಿದಂತೆ ಇನ್ನಿತರರು ಹಲವಾರು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ನಗರಸಭೆ ಆದಾಯ ಕ್ರೋಢೀಕರಣದ ಜೊತೆಗೆ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತು ಭರವಸೆ ನೀಡಿತ್ತು. ಈ ಹಿನ್ನಲೆಯಲ್ಲಿ ಈ ಬಾರಿ ಬಜೆಟ್‌ನಲ್ಲಿ ನಗರದ ನಾಗರೀಕರು ಹಲವಾರು ನಿರೀಕ್ಷೆಗಳನ್ನು ಎದುರು ನೋಡುತ್ತಿದ್ದಾರೆ.