Friday, August 18, 2023

ಸೆ.೬ರಂದು ಭದ್ರಾವತಿಯಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ

ಆ.೨೪ ಆಯ್ಕೆ ಸ್ಪರ್ಧೆ, ೩೦ ಮೊದಲ ಸುತ್ತಿನ ಸ್ಪರ್ಧೆ, ಸೆ.೬ ಅಂತಿಮ ಸುತ್ತಿನ ಸ್ಪರ್ಧೆ

ಎಸ್‌ಡಿಸಿಎಎ ಕರ್ನಾಟಕ ಸ್ಟಾರ್ ಸಿಂಗರ್-೨೦೨೩ ಸೀಸನ್-೧ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಸೆ.೬ರಂದು ಭದ್ರಾವತಿಯಲ್ಲಿ ಆಯೋಜಿಸಿರುವ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಮಾಹಿತಿ ನೀಡಿದರು.
    ಭದ್ರಾವತಿ, ಆ. ೧೮: ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ರೇಣುಕಾ ಟವರ್ಸ್, ರಂಗಪ್ಪ ವೃತ್ತ ಇವರ ಆಶ್ರಯದಲ್ಲಿ ದಿವಂಗತ ಶಂಕರ್‌ನಾಗ್ ಸಂಸ್ಮರಣೆ ಕಾರ್ಯಕ್ರಮದ ಅಡಿಯಲ್ಲಿ ಪ್ರಪ್ರಥಮ ಬಾರಿಗೆ ನಗರದಲ್ಲಿ ಎಸ್‌ಡಿಸಿಎಎ ಕರ್ನಾಟಕ ಸ್ಟಾರ್ ಸಿಂಗರ್-೨೦೨೩ ಸೀಸನ್-೧ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಸೆ.೬ರಂದು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಪರ್ಧೆಯಲ್ಲಿ ೧೮ ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದೆ. ಪ್ರಥಮ ಬಹುಮಾನ ೨೫ ಸಾವಿರ, ದ್ವಿತೀಯ ಬಹುಮಾನ ೧೫ ಸಾವಿರ, ತೃತೀಯ ಬಹುಮಾನ ೧೦ ಸಾವಿರ ರು. ಮತ್ತು ಪಾರಿತೋಷಕ ಹಾಗು ಸಮಾಧಾನಕಾರ ಬಹುಮಾನ ೨ ಸಾವಿರ ರು. ನೀಡಲಾಗುವುದು. ಹೆಸರು ನೋಂದಾಯಿಸಲು ಆ.೨೩ ಕಡೆಯ ದಿನವಾಗಿದ್ದು, ಪ್ರವೇಶ ಶುಲ್ಕ ೭೫೦ ರು. ನಿಗದಿಪಡಿಸಲಾಗಿದೆ ಎಂದರು.
    ನಗರದ ನ್ಯೂಟೌನ್ ಉಂಬ್ಳೆಬೈಲು ರಸ್ತೆ ಲಯನ್ಸ್ ಕ್ಲಬ್‌ನಲ್ಲಿ ಆ.೨೪ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೬ ಗಂಟೆವರೆಗೆ ಆಯ್ಕೆ ಸ್ಪರ್ಧೆ ನಡೆಯಲಿದ್ದು, ೩೦ರಂದು ಮೊದಲ ಸುತ್ತಿನ ಸ್ಪರ್ಧೆ ನಡೆಯಲಿದೆ. ಸೆ.೬ರಂದು ಅಂತಿಮ ಸುತ್ತಿನ ಸ್ಪರ್ಧೆ ಸಂಜೆ ೫ ಗಂಟೆಗೆ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಹಿನ್ನಲೆ ಗಾಯಕರಾದ ಗುರುರಾಜ್, ಅಜಯ್ ವಾರಿಯರ್ ಮತ್ತು ಸುರೇಖಾ ಹೆಗಡೆ, ವಾದ್ಯಗೋಷ್ಠಿ ಕಲಾವಿದರಾಗಿ ದೀಪಕ್ ಜಯಶೀಲನ್, ರಾಮರಾವ್ ರಂಗಧೋಳ್, ಮೆಲ್ವಿನ್ ಲೀಮಾ, ರಮೇಶ್, ಮೋನಿಕ್ ಜಯಶೀಲನ್, ವಿಠ್ಠಳ್ ರಂಗಧೋಳ್ ಮತ್ತು ವೀರೇಶ್ ಹಾಗು ನಿರೂಪಕರಾಗಿ ಯೋಗೀಶ್ ಮಿರ್ಜಾನ್ ಭಾಗವಹಿಸಲಿದ್ದಾರೆ ಎಂದರು.
    ಸ್ಪರ್ಧೆ ಜೊತೆಗೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಕಲಾವಿದರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಹಾಗು ಹಿರಿಯ ಕಲಾವಿದರಿಗೆ ಜಯಶೀಲನ್ ಮತ್ತು ಗೀತಾಂಜಲಿ ಪ್ರಶಸ್ತಿ ಪ್ರದಾನ ಹಾಗು ಗೌರವ ಸಮರ್ಪಣೆ ನಡೆಯಲಿದೆ ಎಂದರು.
    ಸಂಘದ ಗೌರವ ಸಲಹೆಗಾರ ಬಿ.ಆರ್ ವಿಕ್ರಂ, ಪ್ರಧಾನ ಕಾರ್ಯದರ್ಶಿ ಬಿ. ಚಿದಾನಂದ, ಸಹ ಕಾರ್ಯದರ್ಶಿ ಚರಣ್ ಕವಾಡ್, ಸದಸ್ಯರಾದ ಶಂಕರ್‌ಬಾಬು, ವೈ.ಕೆ ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬಿ.ವೈ ರಾಘವೇಂದ್ರ ಹುಟ್ಟುಹಬ್ಬ : ಹಣ್ಣು, ಬ್ರೆಡ್ ವಿತರಣೆ

ಸಂಸದ ಬಿ.ವೈ ರಾಘವೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಬಿ.ವೈ ರಾಘವೇಂದ್ರ ಅಭಿಮಾನಿ ಬಳಗ ಹಾಗೂ ಬಿಜೆಪಿ ಮಂಡಲ ವತಿಯಿಂದ ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಿಸಲಾಯಿತು.
    ಭದ್ರಾವತಿ, ಆ. ೧೮:  ಸಂಸದ ಬಿ.ವೈ ರಾಘವೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಬಿ.ವೈ ರಾಘವೇಂದ್ರ ಅಭಿಮಾನಿ ಬಳಗ ಹಾಗೂ ಬಿಜೆಪಿ ಮಂಡಲ ವತಿಯಿಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಿಸಲಾಯಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ ಬಿ.ವೈ ರಾಘವೇಂದ್ರ ಅಭಿಮಾನಿ ಬಳಗ ಹಾಗೂ ಬಿಜೆಪಿ ಮಂಡಲ ವತಿಯಿಂದ ಸಂಸದ ಬಿ.ವೈ ರಾಘವೇಂದ್ರ ಅವರ ಹುಟ್ಟುಹಬ್ಬ ಆಚರಿಸಲಾಯಿತು.
    ನಗರದ ವಿವಿಧ ದೇವಸ್ಥಾನಗಳಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಿಸಲಾಯಿತು.
    ಪಕ್ಷದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಜಿಲ್ಲಾ ಕಾರ್ಯದರ್ಶಿ ಎಂ. ಪ್ರಭಾಕರ್. ಮಂಡಲ ಪ್ರಧಾನ ಕಾರ್ಯದರ್ಶಿ ಚೆನ್ನೇಶ್. ಮುಖಂಡರಾದ ನಗರಸಭಾ ಸದಸ್ಯ ವಿ. ಕದಿರೇಶ್, ಮಂಗೋಟೆ ರುದ್ರೇಶ್. ಮಂಜುನಾಥ್ ಕದಿರೇಶ್. ತೀರ್ಥಯ್ಯ. ಜಿ. ಆನಂದ್‌ಕುಮಾರ್, ಎಂ. ಮಂಜುನಾಥ್, ಮಂಡಲ ಉಪಾಧ್ಯಕ್ಷೆ ಅನ್ನಪೂರ್ಣ ಸಾವಂತ್ ಹಾಗು ವಿವಿಧ ಮೋರ್ಚಾಗಳ ಮತ್ತು ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು, ಆಸ್ಪತ್ರೆ ವೈದ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Thursday, August 17, 2023

ವಿಐಎಸ್‌ಎಲ್ ಸೇರಿದಂತೆ ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆ

ಭದ್ರಾವತಿ ವಿಐಎಸ್‌ಎಲ್ ರಜತ ಮಹೋತ್ಸವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ೭೭ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಲಾ ಮಕ್ಕಳಿಂದ ದೇಶ ಭಕ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸೇರಿದಂತೆ ವಿವಿಧೆಡೆ  ೭೭ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
    ಕಾರ್ಖಾನೆಯ ವಿಐಎಸ್‌ಎಲ್ ರಜತ ಮಹೋತ್ಸವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ೭೭ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ ಧ್ವಜಾರೋಹಣ ನೆರವೇರಿಸಿದರು.  
    ಕಾರ್ಖಾನೆಯ ಭದ್ರತಾ ಪಡೆ, ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್‌ಸಿಸಿ ಹಾಗು ನಗರದ ವಿವಿಧ ಪ್ರೌಢಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಂದ ಪಥಸಂಚಲನ, ಸೈಂಟ್ ಚಾರ್ಲ್ಸ್ ಆಂಗ್ಲ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಬ್ಯಾಂಡ್ ಸೆಟ್ ಹಾಗೂ ದೇಶ ಭಕ್ತಿಗೀತೆ ಗಾಯನ ನಂತರ ಬಾಲಭಾರತಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
    ಮೈಜಿಓಟಿ.ಇನ್ (MyGov.in)   ಆಯೋಜಿಸಿದ್ದ ರಾಷ್ಟ್ರೀಯ ಪೋಸ್ಟರ್ ವಿನ್ಯಾಸ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕಾರ್ಖಾನೆಯ ನೀರು ಸರಬರಾಜು ಇಲಾಖೆಯ ಜೆ.ನಾಗೇಂದ್ರ ಅವರ ಪುತ್ರಿ ಶ್ರೇಯಾ ಎನ್. ಗೌಡ ಹಾಗೂ ಕುವೆಂಪು ವಿಶ್ವವಿದ್ಯಾನಿಲಯ ದೂರಶಿಕ್ಷಣ ನಡೆಸಿದ ಪದವಿ ಕಲಾ ವಿಭಾಗದ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಪಡೆದ ಕಾರ್ಖಾನೆಯ ಪ್ರಯೋಗಾಲಯ ವಿಭಾಗದ ಮೇಲ್ವಿಚಾರಕ ಎಲ್. ಮಧುಕುಮಾರ್‌ರವರ ಪತ್ನಿ ಎಚ್.ಎಂ ಪುಷ್ಪಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಅತಿಥಿಗಳನ್ನು ಬರಮಾಡಿಕೊಂಡರು.  ಸಹಾಯಕ ಮಹಾ ಪ್ರಬಂಧಕರು (ಹಣಕಾಸು) ಇಳಯರಾಜ ನಿರೂಪಿಸಿದರು. ಸಾರ್ವಜನಿಕ ಸಂಪರ್ಕ, ಟ್ರಾಫಿಕ್, ನಗರಾಡಳಿತ ಮತ್ತು ಭದ್ರತಾ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ತಮಿಳು ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ :  
    ನಗರದ ತರೀಕೆರೆ ರಸ್ತೆಯ ತಮಿಳು ಸಂಘದ ವತಿಯಿಂದ ೭೭ನೇ ಸ್ವಾತಂತ್ರ್ಯ ದಿನಾಚಾರಣೆ ನಡೆಯಿತು. ಸಂಘದ ಅಧ್ಯಕ್ಷ ಜಿ.ಎನ್ ರವಿಕುಮಾರ್  ಧ್ವಜಾರೋಹಣ ನೆರವೇರಿಸಿದರು.
ಖಂಜಾಂಚಿ ಎ. ವೀರಭದ್ರನ್, ಸಂಘದ ನಿರ್ದೇಶಕರುಗಳಾದ ಸಿ. ವಡಿವೇಲು, ಮುತ್ತುಸ್ವಾಮಿ, ವಿ. ಮಂಜುಳ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿ. ಮಣಿ ಸ್ವಾಗತಿಸಿದರು. ಸಹ ಕಾರ್ಯದರ್ಶಿ ವಿ. ರಾಜ ವಂದಿಸಿದರು.

ಭದ್ರಾವತಿ ಜನ್ನಾಪುರ ಶ್ರೀ ಮಾರಿಕಾಂಬ ಸೇವಾ ಸಮಿತಿ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

    ಜನ್ನಾಪುರ ಅಂಬೇಡ್ಕರ್‌ ಸಮುದಾಯ ಭವನ:
    ಜನ್ನಾಪುರ ಶ್ರೀ ಮಾರಿಕಾಂಬ ಸೇವಾ ಸಮಿತಿ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
    ವಿರೂಪಾಕ್ಷಪ್ಪ ಧ್ವಜಾರೋಹಣ ನೆರವೇರಿಸಿದರು. ಪ್ರಮುಖರಾದ ತಮಟೆ ಜಗದೀಶ್, ಎಲ್‌. ಸುರೇಶ್, ಎಂ. ಮಂಜುನಾಥ್, ಎಸ್.‌ ಪಂಕಜ್,  ಸಿ.ಎಂ ಮೋಹನ್ ಕುಮಾರ್, ನರಸಿಂಹಯ್ಯ, ಜಿಂಕ್ ಲೈನ್ ಮಣಿ, ಕಾಣಿಕ್ ರಾಜ್, ಸಿದ್ದರಾಜಣ್ಣ, ಮಂಜುನಾಥ್, ವೆಂಕಟೇಶ್, ರತ್ನ, ಮಧು, ಬಿ. ಕಮಲಾಕರ ಮತ್ತು  ಕೆ.ಎಸ್‌ ರವಿಕುಮಾರ್ ಹಾಗು ಸ್ಥಳೀಯರು ಇನ್ನಿತರರು ಪಾಲ್ಗೊಂಡಿದ್ದರು.

ಸಹಕಾರ ಸಂಘಕ್ಕೆ ೧೨ ಜನ ನಿರ್ದೇಶಕರ ಆಯ್ಕೆ

    ಭದ್ರಾವತಿ, ಆ. ೧೮: ತಾಲೂಕಿನ ಅಂತರಗಂಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ೧೨ ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ.
    ಸಹಕಾರ ಸಂಘಕ್ಕೆ ಆ.೧೩ರಂದು ನಡೆದ ಚುನಾವಣೆಯಲ್ಲಿ ಸೇವ್ಯಾನಾಯ್ಕ(ಪರಿಶಿಷ್ಟ ಜಾತಿ), ಎಸ್. ರಮೇಶ್(ಪರಿಶಿಷ್ಟ ಪಂಗಡ), ಸತೀಶ್(ಕಣ್ಣಯ್ಯ)(ಪ್ರವರ್ಗ ಎ), ಎನ್. ಉಮೇಶ್, ಪ್ರವರ್ಗ ಬಿ, ಪಾರ್ವತಮ್ಮ(ಮಹಿಳಾ ಮೀಸಲು), ಶಿವಮ್ಮ(ಮಹಿಳಾ ಮೀಸಲು), ಎಸ್.ಕೆ ಗುರುಸ್ವಾಮಿ(ಸಾಮಾನ್ಯ), ಜಯರಾಮ್(ಸಾಮಾನ್ಯ), ಪರುಶೋಜಿರಾವ್(ಸಾಮಾನ್ಯ), ಬಿ.ಟಿ ಮಹಾದೇವ(ಸಾಮಾನ್ಯ), ಎಂ. ರಮೇಶ್(ಸಾಮಾನ್ಯ) ಮತ್ತು ಬಿ. ನಾಗರಾಜ್(ಸಾಲಗಾರರಲ್ಲದ ಕ್ಷೇತ್ರ) ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಕಾಲೇಜು ವಿದ್ಯಾರ್ಥಿನಿ ನಾಪತ್ತೆ

ಕಲಾವತಿ
    ಭದ್ರಾವತಿ, ಆ. ೧೭: ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೋವಿ ಕಾಲೋನಿ ೩ನೇ ಕ್ರಾಸ್ ಬಲಭಾಗ ನಿವಾಸಿ,  ಸರ್.ಎಂ.ವಿ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿನಿ ಲೀಲಾವತಿ(೧೮) ನಾಪತ್ತೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
    ಲೀಲಾವತಿ ಆ.೧೪ರಿಂದ ಕಾಣೆಯಾಗಿದ್ದು, ೪.೫ ಅಡಿ ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಕೈಯಲ್ಲಿ ಎಲ್ ಆಕಾರದ ಹಚ್ಚೆ ಗುರುತು ಇರುತ್ತದೆ. ಬೋವಿ ಕಾಲೋನಿ ಲೋಕೇಶ್‌ರವರ ಪುತ್ರಿಯಾಗಿದ್ದು, ಕಾಣೆಯಾದಾಗ ಸರ್‌ಎಂವಿ ಕಾಲೇಜಿನ ಸಮವಸ್ತ್ರ, ನೀಲಿ ಬಣ್ಣದ ಪ್ಯಾಂಟ್ ಮತ್ತು ಕೋಟು, ತೆಳು ನೀಲಿ ಬಣ್ಣದ ಟಾಪ್ ಧರಿಸಿದ್ದು, ಡಿಪ್ಲೋಮಾ ಪೂರೈಸಿ ಕಳೆದ ೧೫ ದಿನಗಳಿಂದ ನಗರಸಭೆ ವತಿಯಿಂದ ವೃತ್ತಿ ತರಬೇತಿ ಶಿಕ್ಷಣ ಪಡೆಯುತ್ತಿದ್ದರು.
    ಯಾರಿಗಾದರೂ ಸುಳಿವು ಕಂಡು ಬಂದಲ್ಲಿ ತಕ್ಷಣ ಹಳೇನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಅಥವಾ ಮೊ: ೭೬೧೯೨೬೦೭೬೧ ಸಂಖ್ಯೆ ಕರೆ ಮಾಡಬಹುದಾಗಿದೆ.

ಆಟೋ ಚಾಲಕರು ಸಂಚಾರಿ ನಿಯಮ ಕಡ್ಡಾಯವಾಗಿ ಪಾಲಿಸಿ

ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್ ಮನವಿ

ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಗುರುವಾರ ಆಟೋ ಚಾಲಕರು ಮತ್ತು ಮಾಲೀಕರಿಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಸಭೆ ಅಧ್ಯಕ್ಷತೆವಹಿಸಿದ್ದ ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್ ಅವರನ್ನು ಆಟೋ ಚಾಲಕರ ಸಂಘದಿಂದ ಅಭಿನಂದಿಸಲಾಯಿತು.
    ಭದ್ರಾವತಿ, ಆ. ೧೭: ಆಟೋ ಚಾಲಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಇಲಾಖೆಯೊಂದಿಗೆ ಸಹಕರಿಸುವಂತೆ ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್ ಮನವಿ ಮಾಡಿದರು.
    ಅವರು ಗುರುವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರು ಮತ್ತು ಮಾಲೀಕರಿಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.
    ಆಟೋ ಚಾಲಕರ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಆಟೋ ಚಾಲಕರು ರಸ್ತೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಿಲ್ಲ. ಆಟೋ ಚಾಲಕರಿಂದಲೇ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಆಟೋ ಚಾಲಕರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಸಹಕರಿಸುವಂತೆ ಕೋರಿದರು.
    ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲ ಮಾತನಾಡಿ, ಆಟೋ ಚಾಲಕರ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿವೆ. ಎಲ್ಲಿಬೇಕೆಂದರಲ್ಲಿ ಆಟೋ ನಿಲ್ಲಿಸುವಂತಿಲ್ಲ. ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುವಂತಿಲ್ಲ. ತಪ್ಪು ಮಾಡಿದ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ತಪಾಸಣೆ ವೇಳೆ ಚಾಲನಾ ಪರವಾನಗಿ, ವಾಹನ ಮಾಲೀಕತ್ವ ದಾಖಲಾತಿ, ವಿಳಾಸ ದೃಢೀಕರಣ, ಆಧಾರ್ ಕಾರ್ಡ್ ಸೇರಿದಂತೆ ಸೂಕ್ತ ದಾಖಲಾತಿಗಳನ್ನು ನೀಡಲೇಬೇಕು. ಇಲಾಖೆಗೆ ಪ್ರತಿಯೊಬ್ಬ ಆಟೋ ಚಾಲಕನ ಮಾಹಿತಿ ಅಗತ್ಯವಾಗಿದೆ. ಆಟೋ ಚಾಲಕರ ಸಂಘಗಳು ತಕ್ಷಣ ಮಾಹಿತಿ ಸಂಗ್ರಹಿಸಿ ನೀಡಬೇಕು. ಒಂದು ವೇಳೆ ಅಗತ್ಯವಿದ್ದಲ್ಲಿ ಎಲ್ಲಾ ಸಂಘಗಳಿಗೆ ತಾವೇ ಖುದ್ದಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗುವುದು ಎಂದರು.
    ಆಟೋ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಆಟೋ ಚಾಲಕರು ಇಲಾಖೆಗೆ ಸಂಪೂರ್ಣ ಸಹಕಾರ ನೀಡಲು ಬದ್ಧರಾಗಿದ್ದಾರೆ. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಆಟೋ ಚಾಲಕರಿಂದ ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರವಹಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಆಟೋ ಚಾಲಕರು ತಮ್ಮ ಅಳಲನ್ನು ತೋರ್ಪಡಿಸಿಕೊಂಡರು. 
    ಪೊಲೀಸ್ ನಗರ ವೃತ್ತ ನಿರೀಕ್ಷಕ ಜೆ. ಶ್ರೀಶೈಲ ಕುಮಾರ್ ಹಾಗು ವಿವಿಧ ಠಾಣೆಗಳ ಠಾಣಾಧಿಕಾರಿಗಳು, ಸಂಚಾರಿ ಪೊಲೀಸರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Wednesday, August 16, 2023

ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಗಾಯ

    ಭದ್ರಾವತಿ, ಆ. ೧೬ : ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.
    ದೇವರನರಸೀಪುರ ನಿವಾಸಿ ಕುಮಾರ್‌ರವರ ತಮ್ಮ ಜಗದೀಶ್ ತನ್ನ ಸ್ನೇಹಿತ ಹೇಮಂತ್ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹೇಮಂತ್ ಅತಿವೇಗವಾಗಿ ಹಾಗು ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಪರಿಣಾಮ ಹಿಂಬದಿಯಲ್ಲಿ ಕುಳಿತ್ತಿದ್ದ ಜಗದೀಶ್ ಕೆಳಗೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.