ಸೋಮವಾರ, ನವೆಂಬರ್ 30, 2020

ತಂಬಾಕು ಕುರಿತು ಜಾಗೃತಿಗಾಗಿ ‘ಗುಲಾಬಿ ಅಂದೋಲನ’

ಭದ್ರಾವತಿಯಲ್ಲಿ ಸೋಮವಾರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಹಾಗು ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಗುಲಾಬಿ ನೀಡುವ ಮೂಲಕ ಆರೋಗ್ಯ ಅರಿವು ಮೂಡಿಸುವ ಗುಲಾಬಿ ಅಂದೋಲನ ನಡೆಯಿತು.
ಭದ್ರಾವತಿ, ನ. ೩೦: ದೇಶದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯ ಜಾಗೃತಿಗಾಗಿ ನಡೆಸಿದ ಹಲವು ವಿಭಿನ್ನ ಬಗೆಯ ಕಾರ್ಯಕ್ರಮಗಳು ಇಂದಿಗೂ ನೆನಪಿನಲ್ಲಿ ಉಳಿದುಕೊಂಡಿವೆ. ಸಂಚಾರಿ ಪೊಲೀಸರು ಅನಗತ್ಯವಾಗಿ ಮನೆಯಿಂದ ಹೊರಬರುವ ಹಾಗು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಗುಲಾಬಿ ನೀಡುವುದು, ಸಿಹಿ ಹಂಚುವುದು ಇತ್ಯಾದಿ ವಿಶಿಷ್ಟ ರೀತಿಯ ಕಾರ್ಯಕ್ರಮಗಳನ್ನು ನಡೆಸಿ ಗಮನ ಸೆಳೆದಿತ್ತು. ಇದೀಗ ಇದೆ ಮಾದರಿ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಕೈಗೊಂಡಿದೆ.
   ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಹಾಗು ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಗುಲಾಬಿ ನೀಡುವ ಮೂಲಕ ಆರೋಗ್ಯ ಅರಿವು ಮೂಡಿಸುವ ಗುಲಾಬಿ ಅಂದೋಲನಕ್ಕೆ ಸೋಮವಾರ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಚಾಲನೆ ನೀಡಲಾಯಿತು.
    ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಳೇಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್, ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್ ಹಾಗು ತಂಬಾಕು ನಿಯಂತ್ರಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.


ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಿ : ಶಶಿಕುಮಾರ್ ಎಸ್. ಗೌಡ

ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಮನವಿ

ಒಕ್ಕಲಿಗ ಅಭಿವೃದ್ಧಿ ನಿಗಮ ಹಾಗು ರಾಜ್ಯದಲ್ಲಿರುವ ೧೫೦ಕ್ಕೂ ಹೆಚ್ಚು ಸಣ್ಣಪುಟ್ಟ ಸಮುದಾಯಗಳಿಗೂ ನಿಗಮ, ಮಂಡಳಿ ಸ್ಥಾಪಿಸಬೇಕೆಂದು ಒತ್ತಾಯಿಸಿ ಭದ್ರಾವತಿಯಲ್ಲಿ ಸೋಮವಾರ ಸಂಯುಕ್ತ ಜನಾತದಳವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೩೦: ಪ್ರಸ್ತುತ ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಸಾಮಾಜಿಕ, ಶೈಕ್ಷಣಿಕ ಹಾಗು ಆರ್ಥಿಕವಾಗಿ ಹಿಂದುಳಿದಿದ್ದು, ಈ ಸಮುದಾಯದ ಏಳಿಗೆಗೆ ಮುಖ್ಯಮಂತ್ರಿಗಳು ಒಕ್ಕಲಿಗ ಅಭಿವೃದ್ಧಿ ನಿಗಮ ಹಾಗು ರಾಜ್ಯದಲ್ಲಿರುವ ೧೫೦ಕ್ಕೂ ಹೆಚ್ಚು ಸಣ್ಣಪುಟ್ಟ ಸಮುದಾಯಗಳಿಗೂ ನಿಗಮ, ಮಂಡಳಿ ಸ್ಥಾಪಿಸಬೇಕೆಂದು ಸಂಯುಕ್ತ ಜನಾತದಳ ಒತ್ತಾಯಿಸುತ್ತದೆ ಎಂದು ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ತಿಳಿಸಿದರು.
   ಸೋಮವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ, ಮೈಸೂರು ಸಂಸ್ಥಾನದ ಪಿಟೀಲ್ ವಾದಕ ಚೌಡಯ್ಯ, ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ರಾಷ್ಟ್ರಕವಿ ಕುವೆಂಪು, ಚಲನಚಿತ್ರ ನಟ ಅಂಬರೀಷ್, ಹೃದಯ ತಜ್ಞ ಡಾ. ಮಂಜುನಾಥ್ ಸೇರಿದಂತೆ ಒಕ್ಕಲಿಗ ಸಮುದಾಯದ ಅನೇಕ ಮಹಾನ್ ವ್ಯಕ್ತಿಗಳು ನಾಡಿನಲ್ಲಿ ಜಾತಿ, ಧರ್ಮ ಮೀರಿದ ಸೇವೆಯನ್ನು ಸಲ್ಲಿಸಿರುತ್ತಾರೆ. ಕೃಷಿ, ಆರೋಗ್ಯ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ, ರಂಗಭೂಮಿ, ಸಿನಿಮಾ, ಕೈಗಾರಿಕೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.
    ರಾಜ್ಯದಲ್ಲಿ ಮೂರನೇ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿರುವ ಒಕ್ಕಲಿಗ ಸಮಾಜ ಪ್ರಸ್ತುತ ಸಂಕಷ್ಟಕ್ಕೆ ಒಳಗಾಗಿದೆ. ನಾಡಿಗೆ ಅನ್ನಕೊಟ್ಟ ಒಕ್ಕಲಿಗ ರೈತಾಪಿ ವರ್ಗ ಅತಿವೃಷ್ಠಿ, ಅನಾವೃಷ್ಠಿ ಹಾಗು ಕೊರೋನಾದಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ. ಅಲ್ಲದೆ ಈ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಈ ಹಿನ್ನಲೆಯಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಅನಿವಾರ್ಯವಾಗಿದೆ ಎಂದರು.
    ಇದೆ ರೀತಿ ರಾಜ್ಯದಲ್ಲಿರುವ ಸುಮಾರು ೧೫೦ಕ್ಕೂ ಹೆಚ್ಚು ಸಣ್ಣಪುಟ್ಟ ಸಮುದಾಯಗಳಿಗೂ ನಿಗಮ ಮಂಡಳಿ ಸ್ಥಾಪಿಸುವ ಮೂಲಕ ಎಲ್ಲಾ ಸಮುದಾಯಗಳು ಹಂತ ಹಂತವಾಗಿ ಅಭಿವೃದ್ದಿ ಹೊಂದಲು ಸಹಕರಿಸಬೇಕೆಂದು ಮನವಿ ಮಾಡಿದರು.
     ಪಕ್ಷ ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಬಂಜಾರ ಯುವ ಘಟಕದ ಅಧ್ಯಕ್ಷ ಕೃಷ್ಣನಾಯ್ಕ್, ಮುಖಂಡರಾದ ವೆಂಕಟೇಶ್, ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಾಲೂಕು ಆಡಳಿತ, ನಗರಸಭೆಯಿಂದ ಹಳೇಸೀಗೇಬಾಗಿ ಸರ್ಕಾರಿ ಕೆರೆ ಅಳತೆ, ಬೌಂಡರಿ ನಿಗದಿ

ತಹಸೀಲ್ದಾರ್‌ರವರ ಆದೇಶದ ಮೇರೆಗೆ ಭೂದಾಖಲೆಗಳ ಸಹಾಯಕ ನಿರ್ದೇಶಕರ ತಂಡ ಹಾಗು ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಮೊದಲ ಹಂತವಾಗಿ ಸೋಮವಾರ ಭದ್ರಾವತಿ ಹಳೇಸೀಗೇಬಾಗಿ ಸರ್ವೆ ನಂ.೩೩ರ ಸುಮಾರು ೧೮ ಎಕರೆ ೧೯ ಗುಂಟೆ ವಿಸ್ತೀರ್ಣವುಳ್ಳ ಸರ್ಕಾರಿ ಕೆರೆ ಅಳತೆ ಕಾರ್ಯ ಕೈಗೊಂಡು ಬೌಂಡರಿ ನಿಗದಿಪಡಿಸಿದವು.
ಭದ್ರಾವತಿ, ನ. ೩೦: ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳ ಅಳತೆ ಕಾರ್ಯ ಕೈಗೊಂಡು ಬೌಂಡರಿ ನಿಗದಿಪಡಿಸುವ ಮೂಲಕ ಅಭಿವೃದ್ಧಿಪಡಿಸಿ ಬೇಸಿಗೆಯಲ್ಲಿ ರೈತರಿಗೆ, ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು. ಅಲ್ಲದೆ ಕೆಲವು ಕೆರೆಗಳನ್ನು ಪ್ರವಾಸಿ ತಾಣಗಳಾಗಿ ಪರಿವರ್ತಿಸುವಂತೆ ಆಗ್ರಹಿಸಿ ಕಳೆದ ಸುಮಾರು ೧ ವರ್ಷದಿಂದ ನಗರದ ಜನ್ನಾಪುರದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ನಡೆಸುತ್ತಿದ್ದ ಹೋರಾಟಕ್ಕೆ ತಾಲೂಕು ಆಡಳಿತ ಮತ್ತು ನಗರಸಭೆ ಆಡಳಿತ ಪೂರಕವಾಗಿ ಸ್ಪಂದಿಸಿವೆ.
   ತಹಸೀಲ್ದಾರ್‌ರವರ ಆದೇಶದ ಮೇರೆಗೆ ಭೂದಾಖಲೆಗಳ ಸಹಾಯಕ ನಿರ್ದೇಶಕರ ತಂಡ ಹಾಗು ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಮೊದಲ ಹಂತವಾಗಿ ಸೋಮವಾರ ಹಳೇಸೀಗೇಬಾಗಿ ಸರ್ವೆ ನಂ.೩೩ರ ಸುಮಾರು ೧೮ ಎಕರೆ ೧೯ ಗುಂಟೆ ವಿಸ್ತೀರ್ಣವುಳ್ಳ ಸರ್ಕಾರಿ ಕೆರೆ ಅಳತೆ ಕಾರ್ಯ ಕೈಗೊಂಡು ಬೌಂಡರಿ ನಿಗದಿಪಡಿಸಿದವು.
     ಕೆರೆ ವಿಶಾಲವಾಗಿದ್ದು, ಕೆರೆಯಲ್ಲಿ ಆಳೆತ್ತರ ಹೂಳು ತುಂಬಿಕೊಂಡು ಗಿಡಗಂಟಿಗಳು ಬೆಳೆದು ನಿಂತಿವೆ. ಕೆರೆಯ ಸುತ್ತಲು ತೆಂಗು ಹಾಗು ಅಡಕೆ ತೋಟಗಳಿದ್ದು, ಕೆರೆಯನ್ನು ಅಭಿವೃದ್ಧಿಪಡಿಸಿದ್ದಲ್ಲಿ ರೈತರಿಗೆ ಹಾಗು ಜಾನುವಾರುಗಳಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಥಳೀಯ ರೈತರು ಹಾಗು ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಪೌರಾಯುಕ್ತ ಮನೋಹರ್‌ಗೆ ಮನವರಿಕೆ ಮಾಡಿಕೊಟ್ಟರು. ಅಳತೆ ಹಾಗು ಬೌಂಡರಿ ನಿಗದಿ ಕಾರ್ಯಕ್ಕೆ ಯಾವುದೇ ರೀತಿ ಅಡಚಣೆಯಾಗದಂತೆ ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
    ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ‍್ಮನ್ ಆರ್. ವೇಣುಗೋಪಾಲ್, ಪದಾಧಿಕಾರಿಗಳಾದ ರಮಾ ವೆಂಕಟೇಶ್, ಶೈಲಜಾ ರಾಮಕೃಷ್ಣ, ಭವಾನಿ ಶಂಕರ್, ಗ್ಸೇವಿಯರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸ್ನೇಹ ಯುವಕರ ಸಂಘದಿಂದ ಕನ್ನಡ ರಾಜ್ಯೋತ್ಸವ

ಭದ್ರಾವತಿ ತಾಲೂಕಿನ ಗುಡ್ಡದ ನೇರಲೆಕೆರೆ ಸ್ನೇಹ ಯುವಕರ ಸಂಘದ ವತಿಯಿಂದ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಭದ್ರಾವತಿ, ನ. ೩೦: ತಾಲ್ಲೂಕಿನ ಗುಡ್ಡದ ನೇರಲೆಕೆರೆ ಸ್ನೇಹ ಯುವಕರ ಸಂಘದ ವತಿಯಿಂದ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್ ಮಣಿಶೇಖರ್ ಸಸಿ ನೆಡುವ ಮೂಲಕ ಉದ್ಘಾಟಿಸಿದರು. ಕೊಮಾರನಹಳ್ಳಿ ಪಂಚಾಯ್ತಿ ಸದಸ್ಯೆ ಸರಸ್ವತಿ, ಮುಖಂಡರಾದ ಕೃಷ್ಣಪ್ಪ, ರವಿಕುಮಾರ್ , ಗಂಗಾಧರಯ್ಯ, ರಾಮೇಗೌಡ್ರು, ಗೋವಿಂದರಾಜ್, ಸಂಘದ ಸದಸ್ಯರಾದ ಸಂಪತ್ ಕುಮಾರ್, ಗಣೇಶ್,ಗಿರೀಶ್, ಅವಿನಾಶ್,ರವಿ ಆರ್ ಪವನ್,   ತಿಮ್ಮೇಗೌಡ, ದೇವಿಂದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಭಾನುವಾರ, ನವೆಂಬರ್ 29, 2020

ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಉಚಿತ ರಕ್ತದಾನ ಶಿಬಿರ

ಭದ್ರಾವತಿ ನಗರಸಭೆ ವಾರ್ಡ್ ನಂ.೨೨ರ ಉಜ್ಜನೀಪುರದಲ್ಲಿ ಭಾನುವಾರ ಮಾಜಿ ಶಾಸಕ ಎಂ ಜೆ ಅಪ್ಪಾಜಿ ಹಾಗೂ ಮುಖಂಡ ಪೆರುಮಾಳ್ ಸ್ಮರಣಾರ್ಥ ಉಚಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಭದ್ರಾವತಿ, ನ. ೨೯ : ನಗರಸಭೆ ವಾರ್ಡ್ ನಂ.೨೨ರ ಉಜ್ಜನೀಪುರದಲ್ಲಿ ಭಾನುವಾರ ಮಾಜಿ ಶಾಸಕ ಎಂ ಜೆ ಅಪ್ಪಾಜಿ ಹಾಗೂ ಮುಖಂಡ ಪೆರುಮಾಳ್ ಸ್ಮರಣಾರ್ಥ ಉಚಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಶಿವಮೊಗ್ಗ ಸುಬ್ಬಯ್ಯ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶಿಬಿರದ ನೇತೃತ್ವ ನಗರಸಭಾ ಸದಸ್ಯ ಬದರಿನಾರಾಯಣ ವಹಿಸಿದ್ದರು. ಮುಖಂಡರಾದ ಆರ್ ಕರುಣಾಮೂರ್ತಿ, ಎಂ ಎ ಅಜಿತ್, ಬಸವರಾಜ ಆನೆಕೊಪ್ಪ, ಗುಣಶೇಖರ,  ಜೆಡಿಎಸ್ ಕಾರ್ಯಕರ್ತರು, ಎಂ ಜೆ ಅಪ್ಪಾಜಿ ಅಭಿಮಾನಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಶನಿವಾರ, ನವೆಂಬರ್ 28, 2020

ನ.೨೯ರಂದು ರಾಷ್ಟ್ರೀಯ ಬಜರಂಗದಳ ಹೊಸಮನೆ ಘಟಕ ಉದ್ಘಾಟನೆ


ಭದ್ರಾವತಿ, ನ. ೨೮: ಹಲವಾರು ವರ್ಷಗಳಿಂದ ಹಿಂದೂ ಧರ್ಮ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರೀಯ ಬಜರಂಗದಳ ಹೊಸಮನೆ ಘಟಕದ ಉದ್ಘಾಟನೆ ನ.೨೯ರಂದು ಸಂಜೆ ೫.೩೦ಕ್ಕೆ ನಡೆಯಲಿದೆ.
     ಶಿವಾಜಿ ವೃತ್ತದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಧರ್ಮ ಮತ್ತು ರಾಷ್ಟ್ರೀಯತೆ ಕುರಿತು ಬಾಲ ವಾಗ್ಮಿ ಹಾರಿಕ ಮಂಜುನಾಥ್ ಭಾಷಣ ಮಾಡಲಿದ್ದು, ರಾಷ್ಟ್ರೀಯ ಬಜರಂಗದಳದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಬಿ.ವಿ ಚಂದನ್‌ರಾವ್ ಕೋರಿದ್ದಾರೆ.

ಎರಡು ದಿನಗಳ ಅಭ್ಯಾಸ ವರ್ಗಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ಚಾಲನೆ

ಭಾರತೀಯ ಜನತಾ ಪಕ್ಷದ ವತಿಯಿಂದ ಭದ್ರಾವತಿ ಜನ್ನಾಪುರ ಮಲ್ಲೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಅಭ್ಯಾಸ ವರ್ಗ ಶನಿವಾರ ಪಕ್ಷದ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ಉದ್ಘಾಟಿಸಿದರು.
ಭದ್ರಾವತಿ, ನ. ೨೮: ಭಾರತೀಯ ಜನತಾ ಪಕ್ಷದ ವತಿಯಿಂದ ನಗರದ ಜನ್ನಾಪುರ ಮಲ್ಲೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಅಭ್ಯಾಸ ವರ್ಗ ಶನಿವಾರ ಪಕ್ಷದ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ಉದ್ಘಾಟಿಸಿದರು.
    ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಜಿ. ಧರ್ಮಪ್ರಸಾದ್, ಬಿ.ಕೆ ಶ್ರೀನಾಥ್, ಶಿವರಾಜ್, ವೆಂಕ್ಯಾನಾಯ್ಕ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ್, ಮಂಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಪಕ್ಷದ ವಿವಿಧ ಮೋರ್ಚಾಗಳ, ಶಕ್ತಿ ಕೇಂದ್ರಗಳ, ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಅಭ್ಯಾಸ ವರ್ಗದಲ್ಲಿ ಪಾಲ್ಗೊಂಡಿದ್ದರು.  

ಎಸ್‌ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿ ಛಲವಾದಿ ಕೃಷ್ಣ ನೇಮಕ

ಛಲವಾದಿ ಕೃಷ್ಣ
ಭದ್ರಾವತಿ, ನ. ೨೮: ಭಾರತೀಯ ಜನತಾ ಪಕ್ಷದ ಎಸ್‌ಸಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾಗಿ ಹೊಸಮನೆ ನಿವಾಸಿ ಛಲವಾದಿ ಕೃಷ್ಣ ನೇಮಕಗೊಂಡಿದ್ದಾರೆ.
ಕೃಷ್ಣರವರು ಸುಮಾರು ೨೫ ವರ್ಷಗಳಿಂದ ಪಕ್ಷದಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಈ ಹಿಂದೆ ಎಸ್‌ಸಿ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿದೆ. ಇವರಿಗೆ ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು, ಎಸ್‌ಸಿ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ಒಕ್ಕಲಿಗರು ಸೇರಿದಂತೆ ಎಲ್ಲಾ ಸಮಾಜದವರ ನಿಗಮ ಮಂಡಳಿ ರಚನೆ ಮಾಡಿ

ಜನತಾದಳ(ಸಂಯುಕ್ತ) ವತಿಯಿಂದ ನ.೩೦ರಂದು ಸರ್ಕಾರಕ್ಕೆ ಮನವಿ

ಶಶಿಕುಮಾರ್ ಎಸ್. ಗೌಡ   ಬಾಬುದೀಪಕ್ ಕುಮಾರ್
ಭದ್ರಾವತಿ, ನ. ೨೮: ರಾಜ್ಯದಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ ಹಾಗು ಸುಮಾರು ೧೫೦ಕ್ಕೂ ಹೆಚ್ಚು ಸಣ್ಣಪುಟ್ಟ ಸಮುದಾಯಗಳಿದ್ದು, ಇವುಗಳಿಗೂ ನಿಗಮ ಮಂಡಳಿ ರಚನೆ ಮಾಡಬೇಕೆಂದು ಆಗ್ರಹಿಸಿ ನ.೩೦ರಂದು ಬೆಳಿಗ್ಗೆ ೧೧ ಗಂಟೆಗೆ ಜನತಾದಳ(ಸಂಯುಕ್ತ) ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಹಾಗು ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್‌ಕುಮಾರ್ ತಿಳಿಸಿದ್ದಾರೆ.
      ಬೆಂಗಳೂರು ಮಹಾನಗರ ನಿರ್ಮಾಣ ಮಾಡಿದ ನಾಡಪ್ರಭು ಕೆಂಪೇಗೌಡ, ಪಿಟೀಲು ವಿದ್ವಾಂಸರಾದ ಚೌಡಯ್ಯ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳು ರಾಜಕೀಯ, ಸಾಹಿತ್ಯ, ಕಲೆ, ಶೈಕ್ಷಣಿಕ, ರಂಗಭೂಮಿ, ಚಲನಚಿತ್ರ, ಕೃಷಿ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರೂ ಸಹ ಶೇ.೭೫ರಷ್ಟು ಒಕ್ಕಲಿಗರು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಈ ಹಿನ್ನಲೆಯಲ್ಲಿ ನಿಗಮ ರಚನೆ ಮಾಡುವುದು ಸೂಕ್ತವಾಗಿದೆ. ಇದೆ ರೀತಿ ರಾಜ್ಯದಲ್ಲಿ ೧೫೦ಕ್ಕೂ ಹೆಚ್ಚು ಸಣ್ಣಪುಟ್ಟ ಸಮುದಾಯಗಳಿದ್ದು, ಈ ಸಮುದಾಯಗಳಿಗೂ ನಿಗಮ ಮಂಡಳಿ ರಚನೆ ಮಾಡಬೇಕಾಗಿದೆ. ಎಲ್ಲಾ ಸಮಾಜದವರು ಹಂತ ಹಂತವಾಗಿ ಅಭಿವೃದ್ಧಿ ಹೊಂದಬೇಕೆಂಬುದು ಪಕ್ಷದ ಆಶಯವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದು, ಎಲ್ಲಾ ಸಮುದಾಯದ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ಪಕ್ಷಾತೀತವಾಗಿ ಪಾಲ್ಗೊಳ್ಳುವ ಮೂಲಕ ಸಹಕರಿಸುವಂತೆ ಕೋರಿದ್ದಾರೆ.

ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಎಸ್. ರಾಜಶೇಖರ ಉಪ್ಪಾರ ನೇಮಕ

ಎಸ್. ರಾಜಶೇಖರ ಉಪ್ಪಾರ
ಭದ್ರಾವತಿ, ನ. ೨೮: ಭಾರತೀಯ ಜನತಾ ಪಕ್ಷದ ಓಬಿಸಿ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಎಸ್ ರಾಜಶೇಖರ ಉಪ್ಪಾರ ನೇಮಕಗೊಂಡಿದ್ದಾರೆ.
     ಕಳೆದ ೧೫ ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಈ ಹಿಂದೆ ಹೊಸಮನೆ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪಕ್ಷ ಸೇರ್ಪಡೆಗೂ ಮೊದಲು ವಿದ್ಯಾರ್ಥಿ ಪರಿಷತ್‌ನಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ತಾಲೂಕು ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇವರನ್ನು ಓಬಿಸಿ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ಅಭಿನಂದಿಸಿದ್ದಾರೆ.




ಶುಕ್ರವಾರ, ನವೆಂಬರ್ 27, 2020

ನ.೨೯ರಂದು ವಿದ್ಯುತ್ ಇಲ್ಲ

ಭದ್ರಾವತಿ, ನ.೨೮: ಮೆಸ್ಕಾಂ ನಗರ ಉಪವಿಭಾಗದ ಘಟಕ-೫ರ ವ್ಯಾಪ್ತಿಯ ಮಾಚೇನಹಳ್ಳಿ ೧೧೦/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.೨೯ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
      ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಡೈರಿ ವೃತ್ತ, ಜೇಡಿಕಟ್ಟೆ, ವಿಶ್ವೇಶ್ವರಯ್ಯನಗರ, ಶಿವರಾಮನಗರ, ಬಿ.ಎಚ್ ರಸ್ತೆ, ರಾ.ಮೀ.ಪೋ.ಪ ವಸತಿ ಗೃಹಗಳು, ಜಯಂತಿ ಗ್ರಾಮ, ರಾಮಮೂರ್ತಿ ಮಿನರಲ್ಸ್, ಬಾಳೇನಹಳ್ಳಿ, ಗೌಡ್ರಕೊಪ್ಪ, ವೀರಭದ್ರ ಕಾಲೋನಿ, ಹೊನ್ನವಿಲೆ, ಶೆಟ್ಟಿಹಳ್ಳಿ, ಮಾಚೇನಹಳ್ಳಿ, ಮಲ್ನಾಡ್ ಆಸ್ಪತ್ರೆ, ಅರೇಕೊಪ್ಪ, ಬಿದರೆ, ನಿದಿಗೆ, ದುಮ್ಮಳ್ಳಿ, ಓತಿಘಟ್ಟ, ಸೋಗಾನೆ, ಆಚಾರಿ ಕ್ಯಾಂಪ್, ರೆಡ್ಡಿ ಕ್ಯಾಂಪ್ ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.


ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆ, ನ.೨೮ರಿಂದ ೨ ದಿನ ಪ್ರಶಿಕ್ಷಣ ವರ್ಗ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಓಬಿಸಿ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಾಲತೇಶ್ ಉದ್ಘಾಟಿಸಿದರು.
ಭದ್ರಾವತಿ, ನ. ೨೭: ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಓಬಿಸಿ ಮೋರ್ಚಾದ ಕಾರ್ಯಕಾರಿಣಿ ಸಭೆ ನಡೆಯಿತು.
    ಸಭೆಯನ್ನು ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಾಲತೇಶ್ ಉದ್ಘಾಟಿಸಿದರು. ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ಕಾರ್ಯದರ್ಶಿ ಪ್ರದೀಪ್, ತಾಲೂಕು ಮಂಡಲದ ಅಧ್ಯಕ್ಷ ಎಂ. ಪ್ರಭಾಕರ್, ತಾಲೂಕು ಓಬಿಸಿ ಮೋರ್ಚಾ ಅಧ್ಯಕ್ಷ ಸುಬ್ರಹ್ಮಣಿ, ಪ್ರಧಾನ ಕಾರ್ಯದರ್ಶಿ ಆರ್.ಪಿ ವೆಂಕಟೇಶ್, ರಾಜಶೇಖರ್, ಮಂಜಪ್ಪ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
          ನ.೨೮ರಂದು ಪ್ರಶಿಕ್ಷಣ ವರ್ಗ :
     ಪಕ್ಷದ ತಾಲೂಕು ಮಟ್ಟದ ಪ್ರಶಿಕ್ಷಣ ವರ್ಗ ನ.೨೮ ಮತ್ತು ೨೯ ಎರಡು ದಿನ ಜನ್ನಾಪುರದ ಮಲ್ಲೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ. ನ.೨೮ರ ಬೆಳಿಗ್ಗೆ ೯.೩೦ಕ್ಕೆ ಜಿಲ್ಲಾಧ್ಯಕ್ಷ ಮೇಘರಾಜ್ ಉದ್ಘಾಟಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮಾಧ್ಯಮ್ ಪ್ರಮುಖ್ ಬಿ.ಎಸ್ ಶ್ರೀನಾಥ್ ಕೋರಿದ್ದಾರೆ.


ಛಲವಾದಿಗಳ ಸಮಾಜದ ವಾರ್ಷಿಕ ಮಹಾಸಭೆ

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲ್ಲೂಕು ಛಲವಾದಿಗಳ(ಪರಿಶಿಷ್ಟ ಜಾತಿ) ಸಮಾಜದ ಸರ್ವ ಸದಸ್ಯರ ೧೯ನೇ ವಾರ್ಷಿಕ ಸಭೆ ಸಂಘದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಭದ್ರಾವತಿ, ನ. ೨೭ : ನಗರದ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲ್ಲೂಕು ಛಲವಾದಿಗಳ(ಪರಿಶಿಷ್ಟ ಜಾತಿ) ಸಮಾಜದ ಸರ್ವ ಸದಸ್ಯರ ೧೯ನೇ ವಾರ್ಷಿಕ ಸಭೆ ಸಂಘದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
   ಸಮಾಜದ ಕಾರ್ಯ ಚಟುವಟಿಕೆಗಳ ಹಾಗು ಲೆಕ್ಕಪತ್ರಗಳ ವರದಿ ಮಂಡಿಸಲಾಯಿತು. ಇದಕ್ಕೂ ಮೊದಲು ಸಂವಿಧಾನ ದಿನದ ಅಂಗವಾಗಿ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
    ಸಮಾಜದ ಪ್ರಮುಖರಾದ ಪ್ರಧಾನ ಕಾರ್ಯದರ್ಶಿ ಎಚ್.ಎಂ ಮಹಾದೇವಯ್ಯ, ಕಾರ್ಯದರ್ಶಿ ಲೋಕೇಶ್ ಮಾಳಿನಹಳ್ಳಿ, ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ, ಹುಚ್ಚಯ್ಯ ಹಾಗು ಸಮಾಜದ ಮಹಿಳಾ ಸದಸ್ಯರುಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ನ.೩೦, ಡಿ.೪ರಂದು ನಗರಸಭೆ ವ್ಯಾಪ್ತಿಯಲ್ಲಿರುವ ೨ ಕೆರೆಗಳ ಅಳತೆ ಕಾರ್ಯ, ಬೌಂಡರಿ ನಿಗದಿ

ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್ ಜುಲೈ ತಿಂಗಳಿನಲ್ಲಿ ಜನ್ನಾಪುರ ಕೆರೆಯನ್ನು ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಂದರ್ಭ.
ಭದ್ರಾವತಿ, ನ. ೨೭: ನಗರದ ಜನ್ನಾಪುರದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ‍್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರು ಕಳೆದ ಸುಮಾರು ೧ ವರ್ಷದಿಂದ ನಡೆಸುತ್ತಿದ್ದ ಹೋರಾಟ ಯಶಸ್ವಿಯಾಗಿದ್ದು, ನಿರಂತರ ಹೋರಾಟದ ಪರಿಣಾಮ ತಾಲೂಕು ಆಡಳಿತ ಇದೀಗ ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳ ಅಳತೆ ಕಾರ್ಯ ಕೈಗೊಂಡು ಬೌಂಡರಿ ನಿಗದಿಪಡಿಸಲು ಮುಂದಾಗಿದೆ.
    ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳ ಅಳತೆ ಕಾರ್ಯ ಕೈಗೊಂಡು ಬೌಂಡರಿ ನಿಗದಿಪಡಿಸುವ ಮೂಲಕ ಅಭಿವೃದ್ಧಿಪಡಿಸಿ ಬೇಸಿಗೆಯಲ್ಲಿ ರೈತರಿಗೆ, ಜಾನುವಾರುಗಳಿಗೆ ಅವಕಾಶ ಕಲ್ಪಿಸಿಕೊಡಬೇಕು. ಅಲ್ಲದೆ ಕೆಲವು ಕೆರೆಗಳನ್ನು ಪ್ರವಾಸಿ ತಾಣಗಳಾಗಿ ಪರಿವರ್ತಿಸುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಸದರಿಗೆ, ಸ್ಥಳೀಯ ಶಾಸಕರಿಗೆ, ಜಿಲ್ಲಾಡಳಿತ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ, ತಾಲೂಕು ಆಡಳಿತ ಮತ್ತು ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.
    ಪೌರಾಯುಕ್ತ ಮನೋಹರ್ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿವಹಿಸಿ ತಾಲೂಕು ಆಡಳಿತ ಬೌಂಡರಿ ನಿಗದಿಪಡಿಸಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಮೊದಲ ಹಂತವಾಗಿ ನ.೩೦ರಂದು ಬೆಳಿಗ್ಗೆ ೧೧ ಗಂಟೆಗೆ ಹಳೇಸೀಗೇಬಾಗಿ ಸರ್ವೆ ನಂ.೩೩ರ ಸುಮಾರು ೧೮ ಎಕರೆ ೧೯ ಗುಂಟೆ ವಿಸ್ತೀರ್ಣವುಳ್ಳ ಸರ್ಕಾರಿ ಕೆರೆ ಹಾಗು ಡಿ.೪ರಂದು ಬೆಳಿಗ್ಗೆ ೧೧ ಗಂಟೆಗೆ ಸರ್ವೆ ನಂಬರ್ ೭೦ರ ಸುಮಾರು ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆ ಅಳತೆ ಕಾರ್ಯ ಕೈಗೊಂಡು ಬೌಂಡರಿ ನಿಗದಿಪಡಿಸಲು ಮುಂದಾಗಿದೆ.  

ನ.೨೯ರಂದು ೫೬ನೇ ವರ್ಷದ ಕಾರ್ತಿಕ ದೀಪೋತ್ಸವ


ಭದ್ರಾವತಿ, ನ. ೨೭: ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹನ.೨೯ರಂದು ೩ನೇ ವರ್ಷದ ಗುರು ಪೂಜೆ ಹಾಗು ೫೬ನೇ ವರ್ಷದ ಕಾರ್ತಿಕ ದೀಪೋತ್ಸವ ನ.೨೯ರಂದು ಸಂಜೆ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದ್ದು, ಭಕ್ತಾಧಿಗಳು ಸಹಕರಿಸಬೇಕೆಂದು ನಗರದ ತರೀಕೆರೆ ರಸ್ತೆಯಲ್ಲಿರುವ ಶ್ರೀ ಶಿವಸುಬ್ರಮಣ್ಯ ಸ್ವಾಮಿ ಆಶ್ರಮದ ಆಡಳಿತ ಮಂಡಳಿ ತಿಳಿಸಿದೆ.


ಗುರುವಾರ, ನವೆಂಬರ್ 26, 2020

ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡ ನಾಡಿನಲ್ಲಿ ಜೀವಂತ ಸಾಹಿತ್ಯಗಳಾಗಿ ಉಳಿದಿವೆ : ಎಚ್.ಎನ್ ಮಹಾರುದ್ರ

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ದತ್ತಿ ದಾನಿಗಳಾದ ವಿಜಾಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಡಾ. ಎಸ್.ಎಸ್ ವಿಜಯರವರ ಸಹಕಾರೊಂದಿಗೆ ಕಾಗದನಗರದ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮವನ್ನು ಎಂಪಿಎಂ ಶಿಕ್ಷಣ ಸಂಸ್ಥೆಗಳ ಕೋಶಾಧ್ಯಕ್ಷ ಎಂ.ಡಿ ರವಿಕುಮಾರ್ ಉದ್ಘಾಟಿಸಿದರು. 
ಭದ್ರಾವತಿ, ನ. ೨೬: ವಚನ ಸಾಹಿತ್ಯ, ದಾಸ ಸಾಹಿತ್ಯ ಸೇರಿದಂತೆ ಹಲವು ಸಾಹಿತ್ಯಗಳು ಕನ್ನಡ ನಾಡಿನಲ್ಲಿ ಎಂದಿಗೂ ಜೀವಂತವಾಗಿ ಉಳಿದುಕೊಳ್ಳುವ ಸಾಹಿತ್ಯಗಳಾಗಿವೆ. ಈ ಹಿನ್ನಲೆಯಲ್ಲಿ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ಲಭಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ತಿಳಿಸಿದರು.
      ಅವರು ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ದಾನಿಗಳಾದ ವಿಜಾಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಡಾ. ಎಸ್.ಎಸ್ ವಿಜಯರವರ ಸಹಕಾರೊಂದಿಗೆ ಕಾಗದನಗರದ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
     ಕನ್ನಡಕ್ಕೆ ತನ್ನದೇ ಆದ ಪರಂಪರೆ ಇದ್ದು, ವೈಭವದ ಭಾಷೆಯಾಗಿದೆ. ವಿಶೇಷವಾದ ಸ್ಥಾನಮಾನ ನೀಡಲಾಗಿದೆ. ಇಂತಹ ಭಾಷೆ ಮೇಲಿನ ಅಭಿಮಾನ ಹೆಚ್ಚಾಗಬೇಕು. ಎಲ್ಲಾ ಭಾಷೆಗಳನ್ನು ಕಲಿಯಬೇಕು. ಆದರೆ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ವಚನ ಸಾಹಿತ್ಯ ಎಂಬುದು ಬದುಕಿನ ಸಾಹಿತ್ಯವಾಗಿದೆ. ನಮ್ಮ ಬದುಕು ವಚನಗಳ ಆಶಯದಂತೆ ರೂಪುಕೊಳ್ಳಬೇಕು. ಈ ಹಿನ್ನಲೆಯಲ್ಲಿ ನಾವುಗಳು ವಚನಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕೆಂದರು.
   ಪ್ರಾಂಶುಪಾಲ ಆರ್. ಸತೀಶ್ ಮಾತನಾಡಿ, ದೇಶದ ಸಂವಿಧಾನ ಎಲ್ಲರೂ ಸಮಾನತೆ, ಸಹಬಾಳ್ವೆಯಿಂದ ಬದುಕುವಂತಹ ಅವಕಾಶ ಕಲ್ಪಿಸಿಕೊಟ್ಟಿದೆ. ಇಂತಹ ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕೆಂದು ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಿದರು.
ಕುರಿತು ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎ. ತಿಪ್ಪೇಸ್ವಾಮಿ ವಚನಗಾರ್ತಿಯರ ವಚನ ಗಾಯನ ಮತ್ತು ವ್ಯಾಖ್ಯಾನ ಕುರಿತು ಉಪನ್ಯಾಸ ನೀಡಿದರು.
    ಎಂಪಿಎಂ ಶಿಕ್ಷಣ ಸಂಸ್ಥೆಗಳ ಕೋಶಾಧ್ಯಕ್ಷ ಎಂ.ಡಿ ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಜಿ.ಎನ್ ಲಕ್ಷ್ಮೀಕಾಂತ, ಮುಖ್ಯೋಪಾಧ್ಯಾಯಿನಿ ಭಾರತಿ, ಕಸಾಪ ಕಾರ್ಯದರ್ಶಿಗಳಾದ ಸಿ. ಚನ್ನಪ್ಪ, ವೈ.ಕೆ ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಕಾರ್ಖಾನೆ ಖಾಸಗಿಕರಣ ವಿರೋಧಿಸಿ ಪ್ರತಿಭಟನೆ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಖಾಸಗಿಕರಣ ವಿರೋಧಿಸಿ ಗುರುವಾರ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ನ. ೨೬: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ  ಖಾಸಗಿಕರಣಗೊಳಿಸಬಾರದು ಹಾಗು ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಕಾರ್ಖಾನೆ ಮುಂಭಾಗ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುತ್ತಿದೆ. ಅಲ್ಲದೆ ಹಲವಾರು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕ ವರ್ಗವನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದರು.
     ವಿಐಎಸ್‌ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಕರಣಗೊಳಿಸಬಾರದು. ಇದರಿಂದ ಭವಿಷ್ಯದಲ್ಲಿ ಕಾರ್ಖಾನೆ ಶಾಶ್ವತವಾಗಿ ಮುಚ್ಚಿ ಹೋಗಲಿದೆ. ಕಾರ್ಮಿಕರು ಬೀದಿ ಪಾಲಾಗಲಿದ್ದು, ಉದ್ಯೋಗ ಹುಡುಕಿಕೊಂಡು ಬೇರೆಡೆಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದೀಗ ನಿವೃತ್ತ ಕಾರ್ಮಿಕರು ವಾಸಿಸುತ್ತಿರುವ ಮನೆಗಳನ್ನು ಖಾಲಿ ಮಾಡಿಸುವ ಹುನ್ನಾರ ನಡೆಸಲಾಗುತ್ತಿದ್ದು, ೩೦-೪೦ ವರ್ಷ ಕಾರ್ಖಾನೆಯಲ್ಲಿ ದುಡಿದ ಕಾರ್ಮಿಕರು, ಕುಟುಂಬ ವರ್ಗದವರು ಅತಂತ್ರರಾಗಿ ಬದುಕುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಕ್ಷಣ ಖಾಸಗಿಕರಣ ಪ್ರಕ್ರಿಯೆ ಕೈಬಿಡಬೇಕು. ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಬೇಕು. ಕಾರ್ಮಿಕರಿಗೆ ನಿರಂತರವಾಗಿ ಕೆಲಸ ನೀಡಬೇಕೆಂದು ಆಗ್ರಹಿಸಿದರು.
    ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಪದಾಧಿಕಾರಿಗಳಾದ ಬಸಂತಕುಮಾರ್, ಅಮೃತ್, ರಾಘವೇಂದ್ರ, ಮೋಹನ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ರಾಕೇಶ್, ನಿವೃತ್ತ ಕಾರ್ಮಿಕರ ಸಂಘದ ನರಸಿಂಹಚಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸುರೇಶ್ ಸೇರಿದಂತೆ ಕಾಯಂ ಮತ್ತು ಗುತ್ತಿಗೆ ಕಾರ್ಮಿಕರು, ಇನ್ನಿತರರು ಪಾಲ್ಗೊಂಡಿದ್ದರು.  

ವಿವಿಧ ಬೇಡಿಕೆ ಈಡೇರಿಕೆಗಾಗಿ ಗ್ರಾಮೀಣ ನೌಕರರ ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘಟನೆ(ಎಐಜಿಡಿಎಸ್‌ಯು)ವತಿಯಿಂದ ಗುರುವಾರ ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಸಮೀಪದಲ್ಲಿರುವ ಪ್ರಧಾನ ಅಂಚೆ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ನ. ೨೬: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘಟನೆ(ಎಐಜಿಡಿಎಸ್‌ಯು)ವತಿಯಿಂದ ಗುರುವಾರ ನಗರದ ವಿಐಎಸ್‌ಎಲ್ ಕಾರ್ಖಾನೆ ಸಮೀಪದಲ್ಲಿರುವ ಪ್ರಧಾನ ಅಂಚೆ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
   ಗ್ರಾಮೀಣ ಅಂಚೆ ನೌಕರರನ್ನು ಖಾಯಂಗೊಳಿಸಬೇಕು, ಸೇವಾವಧಿಯಲ್ಲಿ ಕಾಲ ಕಾಲಕ್ಕೆ ಬಡ್ತಿ ನೀಡಬೇಕು, ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು, ೧೮೦ ದಿನಗಳ ರಜಾ ನಗದೀಕರಣಕ್ಕೆ ಮಂಜೂರಾತಿ ನೀಡಬೇಕು, ತಡೆಹಿಡಿದ ತುಟ್ಟಿ ಭತ್ಯೆಯನ್ನು ಬಿಡುಗಡೆಗೊಳಿಸಬೇಕು, ಹಬ್ಬದ ಮುಂಗಡ ಹಣವನ್ನು ಬಡ್ಡಿ ರಹಿತವಾಗಿ ನೀಡಬೇಕು, ಗುಂಪು ವಿಮಾ ಮೊತ್ತ ಹೆಚ್ಚಿಸಬೇಕು ಮತ್ತು ಕಾನೂನು ಬದ್ದವಲ್ಲದ ಫೆಡಿಲಿಟಿ ಬಾಂಡ್ ನೀತಿ ರದ್ದುಗೊಳಿಸಬೇಕು ಸೇರಿದಂತೆ ಇತ್ಯಾದಿ ೧೨ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
  ಸಂಘಟನೆಯ ಶಿವಮೊಗ್ಗ ವಿಭಾಗದ ಖಜಾಂಚಿ ಎಚ್.ವಿ ರಾಜ್‌ಕುಮಾರ್ ನೇತೃತ್ವ ವಹಿಸಿದ್ದರು. ಅಂಚೆ ಕಛೇರಿಯ ಎಲ್ಲಾ ಗ್ರಾಮೀಣ ಅಂಚೆ ನೌಕರರು ಪಾಲ್ಗೊಂಡಿದ್ದರು.

ಭದ್ರಾವತಿ ವಿವಿಧೆಡೆ ಸಂವಿದಾನ ದಿನ ಆಚರಣೆ

ಭದ್ರಾವತಿ ಬೈಪಾಸ್ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಗುರುವಾರ ವಿಶೇಷವಾಗಿ ಸಂವಿಧಾನ ದಿನ ಆಚರಿಸಲಾಯಿತು.
ಭದ್ರಾವತಿ, ನ. ೨೬: ನಗರದ ರಂಗಪ್ಪ ವೃತ್ತ, ಅಗ್ನಿಶಾಮಕ ಠಾಣೆ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ವಿವಿಧೆಡೆ ಗುರುವಾರ ಸಂವಿಧಾನ ದಿನ ಆಚರಿಸಲಾಯಿತು.
       ಅಗ್ನಿಶಾಮಕ ಠಾಣೆಯಲ್ಲಿ ಸಂವಿಧಾನ ದಿನ ಆಚರಣೆ :
   ನಗರದ ಬೈಪಾಸ್ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ವಿಶೇಷವಾಗಿ ಸಂವಿಧಾನ ದಿನ ಆಚರಿಸಲಾಯಿತು. ಮಕ್ಕಳಿಗೆ ಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಮತ್ತು ಸಂಸತ್ ಅಣುಕು ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲದೆ ಅಗ್ನಿ ಅವಗಡಗಳ ಕುರಿತು ಜಾಗೃತಿ ಮೂಡಿಸಲಾಯಿತು. ಠಾಣಾಧಿಕಾರಿ ವಸಂತ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಕೊರೋನಾ ಸಂಕಷ್ಟದ ಸಮಯದಲ್ಲಿ ಹಮ್ಮಿಕೊಳ್ಳಲಾಗಿರುವ ವಿಶೇಷ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. 
  

ಭದ್ರಾವತಿ ರಂಗಪ್ಪ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಎಸ್‌ಸಿ ಮೋರ್ಚಾ ವತಿಯಿಂದ ಸಂವಿಧಾನ ದಿನ ಆಚರಿಸಲಾಯಿತು.
     ಬಿಜೆಪಿ ಎಸ್‌ಸಿ ಮೋರ್ಚಾದಿಂದ ಸಂವಿಧಾನ ದಿನ ಆಚರಣೆ:
   ರಂಗಪ್ಪ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಎಸ್‌ಸಿ ಮೋರ್ಚಾ ವತಿಯಿಂದ ಸಂವಿಧಾನ ದಿನ ಆಚರಿಸಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮೊದಲು ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಇರುವ ಭಾರತರತ್ನ, ಸಂವಿಧಾನ ಶಿಲ್ಪಿ, ಡಾ. ಬಾಬಾ ಸಾಹೇಬ್ ಅಂಬೇಡ್‌ರವರ ಪ್ರತಿಮೆ ಮಾಲಾರ್ಪಣೆ ಮಾಡಲಾಯಿತು.
    ಎಸ್‌ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಕಾರ್ಯದರ್ಶಿ ಚನ್ನೇಶ್, ಮುಖಂಡರಾದ ವಿ. ಕದಿರೇಶ್, ಕೂಡ್ಲಿಗೆರೆ ಹಾಲೇಶ್, ಬಿ.ಕೆ ಶ್ರೀನಾಥ್, ರಾಮನಾಥ ಬರ್ಗೆ, ಕುಪ್ಪಸ್ವಾಮಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನ ಆಚರಿಸಲಾಯಿತು.
      ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನ ಆಚರಣೆ:
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನ ಆಚರಣೆ ಪ್ರಯುಕ್ತ ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮಾತನಾಡಿ, ಭಾರತೀಯ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠ ಹಾಗು ಬಲಿಷ್ಠ ಸಂವಿಧಾನವಾಗಿದೆ. ಎಲ್ಲರೂ ಸಂವಿಧಾನವನ್ನು ಗೌರವಿಸುವ ಮೂಲಕ ಅದರಂತೆ ಮುನ್ನಡೆಬೇಕೆಂದರು.
ಉಪನ್ಯಾಸಕರಾದ ಡಾ. ಬಿ.ಜಿ ಅಮೃತೇಶ್ವರ, ಎನ್‌ಯುಆರ್ ಹೆಗಡೆ, ಡಾ. ಬಸವರಾಜ್, ಮಲ್ಲಪ್ಪ, ಉಮೇಶ್, ರೇವಣ್ಣಸಿದ್ದಪ್ಪ, ಡಾ. ಜಿ.ಆರ್ ರಾಜಶೇಖರ್, ಮನೋಹರ್ ಹಾಗು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮಾನವ ಹಕ್ಕುಗಳ ರಕ್ಷಣೆ, ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಕಾರ್ಮಿಕ ಘಟಕದ ಉಪ ನಿರ್ದೇಶಕರಾಗಿ ಎನ್. ಉಮೇಶ್

ಎನ್ ಉಮೇಶ್
ಭದ್ರಾವತಿ, ನ. ೨೬: ಭಾರತ ಸರ್ಕಾರದಿಂದ ಸಾಮಾಜಿಕ ಸೇವಾ ಟ್ರಸ್ಟ್‌ಗಳ ಕಾಯಿದೆಯಡಿ ನೋಂದಾಯಿಸಲ್ಪಟ್ಟಿರುವ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಕಾರ್ಮಿಕ ಘಟಕದ ತಾಲ್ಲೂಕು ಉಪ ನಿರ್ದೇಶಕರಾಗಿ ಸುರಗಿತೋಪಿನ ಎನ್. ಉಮೇಶ್ ನೇಮಕಗೊಂಡಿದ್ದಾರೆ.
   ಮಂಡಳಿಯ ಅಧ್ಯಕ್ಷರ ಆದೇಶದ ಮೇರೆಗೆ ಪ್ರಧಾನ ಕಾರ್ಯದರ್ಶಿಗಳು ನೇಮಕಾತಿಗೆ ಆದೇಶ ಹೊರಡಿಸಿದ್ದಾರೆಂದು ರಾಷ್ಟ್ರೀಯ ಹೆಚ್ಚುವರಿ ಮುಖ್ಯ ನಿರ್ದೇಶಕ ಆರ್. ಸ್ಕಂದ ಶರತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಉಮೇಶ್‌ರವರು ನಗರದ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಹಲವಾರು ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಾರ್ಮಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಬುಧವಾರ, ನವೆಂಬರ್ 25, 2020

ಮಕ್ಕಳಿಗೆ ಪುಸ್ತಕ ಓದುವ, ಬರೆಯುವ, ಸಾಹಿತ್ಯದ ಅಭಿರುಚಿ ಮೂಡಿಸುವ ಪ್ರಯತ್ನ ನಡೆಯುತ್ತಿಲ್ಲ

'ನಾಡ ದೇವಿಗೆ ನಮನ ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ವಿಷಾದ

ಭದ್ರಾವತಿ ಅಂತರಗಂಗೆ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಕನ್ನಡ ಸಾಹಿತ್ಯಾಭಿಮಾನಿಗಳ ಬಳಗ ಅಂತರಗಂಗೆ ಆಯೋಜಿದ್ದ 'ನಾಡ ದೇವಿಗೆ ನಮನ ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮವನ್ನು ಡಾ. ಮೋಹನ್ ಚಂದ್ರಗುತ್ತಿ, ಡಿ. ಮಂಜುನಾಥ್, ಕೋಗಲೂರು ತಿಪ್ಪೇಸ್ವಾಮಿ ಸೇರಿದಂತೆ ಇತರರು ಉದ್ಘಾಟಿಸಿದರು.
    ಭದ್ರಾವತಿ, ನ. ೨೫; ಪರಸ್ಪರ ನಡುವೆ ಮಾತುಕತೆಗಳು ಕಡಿಮೆಯಾಗುತ್ತಿವೆ. ಟಿ.ವಿ ಮಾದ್ಯಮಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಹಾಗು ಮೊಬೈಲ್‌ಗಳ ಮೊರೆ ಹೋಗಿ ಪುಸ್ತಕ ಓದುವ, ಬರೆಯುವ ಹಾಗು ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸುವ ಪ್ರಯತ್ನ ಪೋಷಕರಿಂದಾಗುತ್ತಿಲ್ಲ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ವಿಷಾದ ವ್ಯಕ್ತಪಡಿಸಿದರು.
   ಅವರು ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಕನ್ನಡ ಸಾಹಿತ್ಯಾಭಿಮಾನಿಗಳ ಬಳಗ ಅಂತರಗಂಗೆ ಆಯೋಜಿದ್ದ 'ನಾಡ ದೇವಿಗೆ ನಮನ ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರಿಂದ ಕನ್ನಡ ನಾಡು, ಭಾಷೆ, ಸಂಸ್ಕೃತಿ ಬೆಳೆದು ಬಂದಿದೆ ಹೊರತು. ಬೇರೆ ಯಾರಿಂದಲೂ ಅಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಾಗಿದೆ. ಕನ್ನಡ ರಾಜ್ಯೋತ್ಸವ ಆಚರಣೆ ಎಂದರೆ ಕೇವಲ ದ್ವಜಾರೋಹಣ ಮಾಡಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡುವುದಷ್ಟೆ ಅಲ್ಲ. ಮಕ್ಕಳಿಗೆ ಉತ್ತಮ ಗುಣ, ನಡತೆ, ಸಂಸ್ಕೃತಿಯ ಜೊತೆಗೆ ಭಾಷೆಯ ಮಹತ್ವ ಹೇಳಿ ಕೊಡುವುದಾಗಿದೆ ಎಂದರು.  
     ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ರಾಜ್ಯೋತ್ಸವ ಎಂದಾಕ್ಷಣ ಸಂಭ್ರಮಿಸಬೇಕಾದ ದಿನಗಳು ಇದುವರೆಗೂ ಒದಗಿ ಬರದಿರುವುದು ಈ ನಾಡಿನ ದೊಡ್ಡ ದುರಂತವಾಗಿದೆ. ಮಕ್ಕಳಿಗೆ ಯಾವ ಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು ಎಂಬುದರ ಬಗ್ಗೆ ಪೋಷಕರಲ್ಲಿಯೇ ಗೊಂದಲವಿದೆ, ಆಂಗ್ಲ ಭಾಷೆಯಲ್ಲಿ ಶಿಕ್ಷಣ ದೊರೆಯದಿದ್ದರೆ ಮುಂದಿನ ದಿನಗಳು ಕಷ್ಟವಾಗುತ್ತದೆ ಎಂಬ ತಪ್ಪು ಕಲ್ಪನೆಗಳು ಪ್ರತಿ ಪೋಷಕರಲ್ಲೂ ಮೂಡುತ್ತಿವೆ. ಎಲ್ಲಾ ಭಾಷೆಯನ್ನು ಕಲಿಯಬೇಕು. ಯಾವುದೇ ಭಾಷೆಯನ್ನು ಕಡೆಗಣಿಸಬಾರದು. ಆದರೆ ಮೊದಲ ಆದ್ಯತೆ ಕನ್ನಡ ಭಾಷೆಗೆ ನೀಡಬೇಕೆಂದರು.  
  ಕನ್ನಡ ಭಾಷೆಯಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವೇದಿಕೆ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ನಾಗರಾಜ್, ವಿ.ಎಚ್ ಹರೀಶ್‌ಬಾಬು, ಎಸ್.ಕೆ ಗುರುಸ್ವಾಮಿ, ಬಿ. ನಾಗೇಶ್, ಶ್ರೀಧರ್, ಅಶೋಕ್, ಪೀಟರ್, ಗುರು, ಲೋಕೇಶ್ ಶಿವಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ವಿಐಎಸ್‌ಎಲ್ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ

ಭದ್ರಾವತಿ, ನ. ೨೫: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಖಾಸಗಿಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಈ ಹಿನ್ನಲೆಯಲ್ಲಿ ಇದರ ವಿರುದ್ಧ ಹೋರಾಟ ನಡೆಸಲು ಇದೀಗ ಹಿರಿಯ ಕಾರ್ಮಿಕ ಮುಖಂಡ ಎಸ್.ಎನ್ ಬಾಲಕೃಷ್ಣ ನೇತೃತ್ವದಲ್ಲಿ ವಿಐಎಸ್‌ಎಲ್ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
      ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಬಿ.ಕೆ ಸಂಗಮೇಶ್ವರ್, ಕಾರ್ಯಾಧ್ಯಕ್ಷರಾಗಿ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಜೆ.ಎನ್ ಚಂದ್ರಹಾಸ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಉಪಾಧ್ಯಕ್ಷರಾಗಿ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಜೆ.ಎಸ್ ನಾಗಭೂಷಣ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ನಗರಸಭೆ ಸದಸ್ಯ ಎಂ.ಎ ಅಜಿತ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಗುರೇಶ್ ಮತ್ತು ಕಾಂಗ್ರೆಸ್ ಮುಖಂಡ ಬಾಲಕೃಷ್ಣ ನೇಮಕಗೊಂಡಿದ್ದಾರೆ.
     ಕಾರ್ಯದರ್ಶಿಗಳಾಗಿ ಬಸಂತ್‌ಕುಮಾರ್, ಬಿ.ಆರ್ ನಾಗರಾಜ್, ಸಿ.ವಿ ರಾಘವೇಂದ್ರ, ಎಸ್. ಮೋಹನ್, ಎಚ್. ರವಿಕುಮಾರ್, ರಾಕೇಶ್, ಬಿ.ಎನ್ ರಾಜು, ನರಸಿಂಹಚಾರ್, ಗೌರವ ಸಲಹೆಗಾರರಾಗಿ ಡಿ.ಸಿ ಮಾಯಣ್ಣ, ಕರಿಯಪ್ಪ, ಎಸ್. ಮಣಿಶೇಖರ್, ಜೆ.ಪಿ ಯೋಜೇಶ್, ಎಸ್. ಕುಮಾರ್, ಬಸವಂತಪ್ಪ, ಸುರೇಶ್, ಮಹಮ್ಮದ್ ಸನಾವುಲ್ಲಾ, ಸತ್ಯ, ಬಿ.ಜಿ ರಾಮಲಿಂಗಯ್ಯ, ರವಿ, ಸುಧಾಮಣಿ, ಲಕ್ಷ್ಮಿದೇವಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎಸ್ ಭೈರಪ್ಪ, ನರಸಿಂಹಮೂರ್ತಿ, ಎಂ. ನಾರಾಯಣ, ಕಾಂತರಾಜ್, ವೆಂಕೆಟೇಶ್, ಕೆಂಪಯ್ಯ, ಆರ್. ಶಂಕರ್, ನಂಜಪ್ಪ, ಎಂ.ಎಚ್ ತಿಪ್ಪೇಸ್ವಾಮಿ, ಸುರೇಶ್ ವರ್ಮಾ, ಯಲ್ಲೋಜಿರಾವ್, ರಾಮಚಂದ್ರ, ಮಾದೇಗೌಡ, ಎಸ್. ಗುಣಕರ, ಎಂ.ಎಲ್ ಯೋಗೀಶ, ಎಸ್.ಪಿ ರಾಜಣ್ಣ, ಪಿ. ರಾಜು, ಎ.ಎಲ್.ಡಬ್ಲ್ಯೂ ಕುಮಾರ್, ಪ್ರಹಲ್ಲಾದ, ಪ್ರದೀಪ್‌ಕುಮಾರ್ ಮತ್ತು ಕೆ.ಆರ್ ಮನುರವರನ್ನು ಆಯ್ಕೆ ಮಾಡಲಾಗಿದೆ.


ಕಸಾಪ ವತಿಯಿಂದ ನ.೨೬ರಂದು ದತ್ತಿ ಕಾರ್ಯಕ್ರಮ

ಭದ್ರಾವತಿ, ನ. ೨೫: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ದಾನಿಗಳಾದ ವಿಜಾಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಡಾ. ಎಸ್.ಎಸ್ ವಿಜಯ ಸಹಕಾರೊಂದಿಗೆ ನ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ಕಾಗದನಗರದ ಆಂಗ್ಲ ಶಾಲೆ(ಪಿಟಿಇಎಸ್)ಯ ದತ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ಎಂಪಿಎಂ ಶಿಕ್ಷಣ ಸಂಸ್ಥೆಗಳ ಕೋಶಾಧ್ಯಕ್ಷ ಎಂ.ಡಿ ರವಿಕುಮಾರ್ ಉದ್ಘಾಟಿಸಲಿದ್ದು, ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ವಚನಗಾರ್ತಿಯರ ವಚನ ಗಾಯನ ಮತ್ತು ವ್ಯಾಖ್ಯಾನ ಕುರಿತು ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎ. ತಿಪ್ಪೇಸ್ವಾಮಿ ಉಪನ್ಯಾಸ ನೀಡಲಿದ್ದು, ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ಆಶಯ ನುಡಿಗಳನ್ನಾಡಲಿದ್ದಾರೆ. ಪ್ರಾಂಶುಪಾಲರಾದ ಆರ್. ಸತೀಶ್, ಜಿ.ಎನ್ ಲಕ್ಷ್ಮೀಕಾಂತ, ಮುಖ್ಯೋಪಾಧ್ಯಾಯಿನಿ ಭಾರತಿ, ಕಸಾಪ ಕಾರ್ಯದರ್ಶಿಗಳಾದ ಸಿ. ಚನ್ನಪ್ಪ, ವೈ.ಕೆ ಹನುಮಂತಯ್ಯ, ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.


ಮಂಗಳವಾರ, ನವೆಂಬರ್ 24, 2020

ಗುಣವತಿಗೆ ಡಾಕ್ಟರೇಟ್ ಪದವಿ


ಗುಣವತಿ
ಭದ್ರಾವತಿ, ನ. ೨೪: ಬೆಂಗಳೂರಿನ ಕರ್ನಾಟಕ ರಾಜ್ಯ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೂಲತಃ ನಗರದ ಹುತ್ತಾ ಕಾಲೋನಿ ನಿವಾಸಿ ಗುಣವತಿಯವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
    ಗುಣವತಿಯವರು ಕೆ.ಪಿ ಪೂರ್ಣಚಂದ್ರ ತೇಜಸ್ವಿ ಹಾಗು ನಾಗೇಶ್ ಹೆಗಡೆಯವರ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆಯ ಸ್ವರೂಪ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ಲಭಿಸಿದೆ. ಇವರು ವಿಐಎಸ್‌ಎಲ್ ಕಾರ್ಖಾನೆಯ ನಿವೃತ್ತ ಉದ್ಯೋಗಿ, ಕನ್ನಡಪರ ಹೋರಾಟಗಾರ, ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಶಿವಮಾಧುರವರ ಪುತ್ರಿಯಾಗಿದ್ದಾರೆ.  

ರೈತ ಮುಖಂಡರೊಬ್ಬರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಅಪಪ್ರಚಾರ

ನ್ಯಾಯ ಒದಗಿಸಿಕೊಡಲು ಡಿ.ಬಿ ಹಳ್ಳಿ ನಿವಾಸಿ ಎಂ.ಎಸ್ ಶಿವಕುಮಾರ್ ಮನವಿ

ಭದ್ರಾವತಿ, ನ. ೨೪: ರೈತ ಮುಖಂಡರೊಬ್ಬರ ಕುಮ್ಮಕ್ಕಿನಿಂದ ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಹಾಗು ನನ್ನ ವಿರುದ್ಧ ಇತ್ತೀಚೆಗೆ ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ ಮಾಡಿ ಸುಳ್ಳು ಹೇಳಿಕೆ ನೀಡಲಾಗಿದೆ ಎಂದು ಡಿ.ಬಿ ಹಳ್ಳಿ ನಿವಾಸಿ ಎಂ.ಎಸ್ ಶಿವಕುಮಾರ್ ಆರೋಪಿಸಿದ್ದಾರೆ.
   ಈ ಕುರಿತು ದಾಖಲೆಗಳೊಂದಿಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮದ ರೈತ ಮುಖಂಡರೊಬ್ಬರು ರೈತ ಸಂಘದ ಪ್ರಭಾವದಿಂದ ನನ್ನ ವಿರುದ್ಧ ಇತರರನ್ನು ಬಳಸಿಕೊಂಡು ಪಿತೂರಿ ನಡೆಸುತ್ತಿದ್ದಾರೆ. ನನ್ನ ಮೇಲೆ ಹಲ್ಲೆ, ದೌರ್ಜನ್ಯ, ಕೊಲೆಯತ್ನ ನಡೆಸಲು ಮುಂದಾಗಿದ್ದು, ಇವರ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಪೊಲೀಸ್ ಇಲಾಖೆ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
    ನಮ್ಮ ಆಸ್ತಿಗಳ ಮೇಲೆ ವಿನಾಕಾರಣ ನಗರದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿಸಿದ್ದು, ಇದರ ವಿಚಾರಣೆ ನಡೆದು ತೀರ್ಪು ನಮ್ಮ ಪರವಾಗಿ ಬಂದಿರುತ್ತದೆ. ಮತ್ತೊಂದು ಪ್ರಕರಣದ ವಿಚಾರಣೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಈ ನಡುವೆ ನನ್ನ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಬೆದರಿಕೆ ಹಾಕಿ ಆಸ್ತಿಯನ್ನು ಕಬಳಿಸಲು ಯತ್ನಿಸಲಾಗುತ್ತಿದೆ. ಅಲ್ಲದೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಲಾಗಿದೆ. ಮಾರಶೆಟ್ಟಿಹಳ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಮಾಡಿರುವ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾಗಿವೆ ಎಂದು ಆರೋಪಿಸಿದ್ದಾರೆ.
   ನನ್ನ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ದನಾಗಿದ್ದು, ನನಗೆ ನ್ಯಾಯ ಒದಗಿಸಿಕೊಡುವಂತೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪುನರ್ ರಚನೆ

ಅಧ್ಯಕ್ಷರಾಗಿ ಎಂ. ವಿಜಯರಾಜ್, ಬಿ.ಎಸ್ ಕಲ್ಪನ ಸುದರ್ಶನ್, ಪಿ. ಗಣೇಶ್‌ರಾವ್ ನೇಮಕ

ಯುವ ಮೋರ್ಚಾ ಅಧ್ಯಕ್ಷ ಎಂ. ವಿಜಯರಾಜ್
ಭದ್ರಾವತಿ, ನ. ೨೪: ಭಾರತೀಯ ಜನತಾ ಪಕ್ಷದ ತಾಲೂಕು ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪುನರ್ ರಚನೆ ಅಧ್ಯಕ್ಷ ಎಂ. ಪ್ರಭಾಕರ್ ಅಧ್ಯಕ್ಷತೆಯಲ್ಲಿ ನಡೆದಿದ್ದು, ಯುವ ಮೋರ್ಚಾ ಅಧ್ಯಕ್ಷರಾಗಿ ಎಂ. ವಿಜಯರಾಜ್, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಬಿ.ಎಸ್ ಕಲ್ಪನ ಸುದರ್ಶನ್ ಮತ್ತು ಎಸ್.ಸಿ ಮೋರ್ಚಾ ಅಧ್ಯಕ್ಷರಾಗಿ ಪಿ. ಗಣೇಶ್ ರಾವ್ ನೇಮಕಗೊಂಡಿದ್ದಾರೆ.
       ಯುವ ಮೋರ್ಚಾ: ಅಧ್ಯಕ್ಷರಾಗಿ ಎಂ. ವಿಜಯರಾಜ್, ಉಪಾಧ್ಯಕ್ಷರಾಗಿ ಎಸ್. ಕಿರಣ್ ಕುಮಾರ್, ಜೆ. ಕೃಷ್ಣ, ಸಚಿನ್ ರೇವಣ್‌ಕರ್ ಮತ್ತು ಹೇಮಂತ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ನಕುಲ್ ಮತ್ತು ಜಿ. ಯೋಗೇಶ್‌ಕುಮಾರ್, ಕಾರ್ಯದರ್ಶಿಗಳಾಗಿ ದೇವರಾಜ್, ಗೋಪಿನಾಥ್, ಧನ್ಯಕುಮಾರ್ ಮತ್ತು ಜಾನು, ಖಜಾಂಚಿಯಾಗಿ ವಿಜಯ್, ಸದಸ್ಯರುಗಳಾಗಿ ಲಕ್ಷ್ಮಣ್, ಪ್ರಕಾಶ್(ಮಾವಿನಕೆರೆ), ಆದರ್ಶ್, ಅನಂತು, ವಿಘ್ನೇಶ್, ಪ್ರದೀಪ್, ರಾಘವೇಂದ್ರ, ಆಕಾಶ್, ಕೆ. ಲಕ್ಷ್ಮಣ್ ಮತ್ತು ಪುನಿತ್ ಗೌಡ ನೇಮಕಗೊಂಡಿದ್ದಾರೆ.
     ಮಹಿಳಾ ಮೋರ್ಚಾ: ಅಧ್ಯಕ್ಷರಾಗಿ ಬಿ.ಎಸ್ ಕಲ್ಪನ ಸುದರ್ಶನ್, ಉಪಾಧ್ಯಕ್ಷರಾಗಿ ಜಯಲಕ್ಷ್ಮಿ, ರೇಖಾ ಪದ್ಮಾವತಿ, ವಿ. ಶಾಮಲ ಮತ್ತು ಮಧುಮಾಲ, ಪ್ರಧಾನ ಕಾರ್ಯದರ್ಶಿಗಳಾಗಿ ಬಿ.ಎಂ. ಮಂಜುಳ ಮತ್ತು ಶಕುಂತಲ, ಕಾರ್ಯದರ್ಶಿಗಳಾಗಿ ಕವಿತ, ಆರತಿ, ರಾಜೇಶ್ವರಿ ಮತ್ತು ಸುಶೀಲ, ಖಜಾಂಚಿಯಾಗಿ ಸಿಂಧು, ಸದಸ್ಯರಾಗಿ ರಕ್ಷ್ಮೀಣಿ, ಉಮಾಲಕ್ಷ್ಮಿ, ಉಜಾಲಬಾಯಿ, ಭಾಗ್ಯ, ವಾಣಿ, ಧನಲಕ್ಷ್ಮಿ, ಉಷಾ, ವನಜಾಕ್ಷಿ ಮತ್ತು ವಿದ್ಯಾಲಕ್ಷ್ಮಿ ನೇಮಕಗೊಂಡಿದ್ದಾರೆ.


ಎಸ್.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್
    ಎಸ್.ಸಿ ಮೋರ್ಚಾ : ಅಧ್ಯಕ್ಷರಾಗಿ ಪಿ. ಗಣೇಶ್‌ರಾವ್, ಉಪಾಧ್ಯಕ್ಷರಾಗಿ ಡಾ. ಪುಷ್ಪಲತಾ, ಕುಪ್ಪಣ್ಣ, ಮಂಜನಾಯ್ಕ ಮತ್ತು ದುರ್ಗೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ಸುಶ್ಮಿತಾ ಮತ್ತು ಮಂಜುನಾಥ್, ಕಾರ್ಯದರ್ಶಿಗಳಾಗಿ ನಾಗೇಶ್, ಗಿರೀಶ್, ಮಾಲತೇಶ್ ಮತ್ತು ಮಂಜುನಾಥ್, ಖಜಾಂಚಿಯಾಗಿ ರವಿಕುಮಾರ್ ನಾಯ್ಕ್, ಸದಸ್ಯರಾಗಿ ಅವಿನಾಶ್, ಚಂದ್ರು, ಜಗನ್ನಾಥ್, ರಾಜೇಶ್ವರಿ, ರವಿಕುಮಾರ್ ನಾಯ್ಕ್, ಹನುಮಂತನಾಯ್ಕ್, ಸಂದೀಪ್, ಮುರಳಿ ಮತ್ತು ಗೋಪಾಲ್ ನಾಯ್ಕ್ ನೇಮಕಗೊಂಡಿದ್ದಾರೆ.  

ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಕೇಶವಮೂರ್ತಿ ನಿಧನ

ಕೇಶವಮೂರ್ತಿ
ಭದ್ರಾವತಿ, ನ. ೨೪: ನಗರಸಭೆ ಚಾಲಕ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಕೇಶವಮೂರ್ತಿ(೪೮) ಮಂಗಳವಾರ ನಿಧನ ಹೊಂದಿದರು.
     ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಹಳೇನಗರದ ಕನಕಮಂಟ ಮೈದಾನದ ಪಕ್ಕದಲ್ಲಿರುವ ನಗರಸಭೆ ವಸತಿ ಗೃಹದಲ್ಲಿ ವಾಸವಾಗಿದ್ದ ಇವರು ಕಳೆದ ೪-೫ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  
    ಪ್ರಸ್ತುತ ನಗರಸಭೆ ಕಂದಾಯಾಧಿಕಾರಿಗಳ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರ ನಿಧನಕ್ಕೆ ನಗರಸಭೆ ಪೌರಾಯುಕ್ತ ಮನೋಹರ್, ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.

ಸೋಮವಾರ, ನವೆಂಬರ್ 23, 2020

ಕರ್ತವ್ಯ ಲೋಪ : ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ವಿರುದ್ಧ ದೂರು

ದಿನಗೂಲಿ/ಪಿಸಿಪಿ ನೌಕರರಿಂದ ಸ್ವಂತ ಜಮೀನಿನಲ್ಲಿ ಜೋಳ ಮುರಿದು ತುಂಬಿಸುವ ಕೆಲಸಕ್ಕೆ

ಅರಣ್ಯ ಇಲಾಖೆಯ ದಿನಗೂಲಿ/ಪಿಸಿಪಿ ನೌಕರರನ್ನು ಮೀರಿ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಜೋಳ ಮುರಿದು ತುಂಬಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದು.
ಭದ್ರಾವತಿ, ನ. ೨೩: ಅರಣ್ಯ ಇಲಾಖೆಯ ಮಾವಿನಕಟ್ಟೆ ವಲಯ(ಶಾಂತಿಸಾಗರ)ದ ವಲಯ ಅರಣ್ಯಾಧಿಕಾರಿಯೊಬ್ಬರು ಕರ್ತವ್ಯ ಲೋಪ ವೆಸಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೋಮವಾರ ದೂರು ಸಲ್ಲಿಸಿದ್ದಾರೆ.
     ವಲಯ ಅರಣ್ಯಾಧಿಕಾರಿಯವರು ತಮ್ಮ ವಲಯದ ಎಲ್ಲಾ ದಿನಗೂಲಿ/ಪಿಸಿಪಿ ನೌಕರರನ್ನು ತಮ್ಮ ವಲಯದ ವ್ಯಾಪ್ತಿ ಮೀರಿ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಜೋಳ ಮುರಿದು ತುಂಬಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲಸ ಮಾಡುವ ಜಮೀನಿನ ಸ್ಥಳಕ್ಕೆ ತೆರಳಿ ವಿಡಿಯೋ ಚಿತ್ರೀಕರಣ ನಡೆಸಲಾಗಿದೆ. ಈ ಕುರಿತು ಈಗಾಗಲೇ ನ.೧೯ರಂದು ದೂರವಾಣಿ ಮೂಲಕ ಮಾಹಿತಿ ಸಹ ನೀಡಲಾಗಿದೆ. ವಲಯ ಅರಣ್ಯಾಧಿಕಾರಿಗಳು ಕೆಲಸಕ್ಕೆ ಕರೆತಂದಿರುವ ಸತ್ಯ ಸಂಗತಿಯನ್ನು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಪಿಸಿಪಿ ನೌಕರರು ಹೊರ ಹಾಕಿದ್ದಾರೆ. ಅಲ್ಲದೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಹ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
     ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಮಾಡಿರುವ ನಷ್ಟ, ದ್ರೋಹದ ಹಿನ್ನಲೆಯಲ್ಲಿ ತಕ್ಷಣ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.  



ವಿಐಎಸ್‌ಎಲ್ ಖಾಸಗಿಕರಣ ಭೀತಿ : ವಾಸದ ಗೃಹಗಳನ್ನು ನಿವೃತ್ತ ಕಾರ್ಮಿಕರಿಗೆ ವಹಿಸಿಕೊಡಿ

ಸಹಿ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ವಸತಿ ಗೃಹಗಳನ್ನು ಶಾಶ್ವತವಾಗಿ ನಿವೃತ್ತ ಕಾರ್ಮಿಕರಿಗೆ ವಹಿಸಿಕೊಡಲು ಪತ್ರದ ಮೂಲಕ ಸಹಿ ಅಭಿಯಾನ ನಡೆಸಲಾಗುತ್ತಿದೆ.

      ಭದ್ರಾವತಿ, ನ. ೨೩: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಃ ಖಾಸಗಿಕರಣಗೊಳ್ಳುವ ಭೀತಿ ಎದುರಾಗಿದ್ದು, ಮುಂದಿನ ಹೋರಾಟಗಳ ಬಗ್ಗೆ ರೂಪುರೇಷೆಗಳು ಸಿದ್ದಗೊಳ್ಳುತ್ತಿರುವ ನಡುವೆ ನಿವೃತ್ತ ಕಾರ್ಮಿಕರು ತಮ್ಮ ಭವಿಷ್ಯದ ಬದುಕಿನ ಸೂರಿಗಾಗಿ ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.
      ದೇಶದ ಬೃಹತ್ ಕೈಗಾರಿಕೆಗಳಲ್ಲಿ ಒಂದಾಗಿರುವ ವಿಐಎಸ್‌ಎಲ್ ಕಾರ್ಖಾನೆ ಇದೀಗ ಖಾಸಗಿಯವರಿಗೆ ವಹಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ಸುಕವಾಗಿದ್ದು, ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳು ಕಾರ್ಮಿಕ ವಲಯವನ್ನು ಆತಂಕಕ್ಕೆ ಎಡೆ ಮಾಡಿಕೊಟ್ಟಿವೆ. ಈ ಹಿಂದೆ ಸಹ ಖಾಸಗಿಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಕಾರ್ಮಿಕ ಸಂಘಟನೆಗಳು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳು, ಮಠಮಂದಿರಗಳು, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಮಸ್ತ ನಾಗರೀಕರು ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮ ಖಾಸಗಿಕರಣ ಕೈಬಿಡಲಾಗಿತ್ತು. ಇದೀಗ ಪುನಃ ಹೋರಾಟದ ಲಕ್ಷಣಗಳು ಎದ್ದು ಕಾಣುತ್ತಿವೆ.
     ಕಾರ್ಖಾನೆಯಲ್ಲಿ ಸುಮಾರು ೩೦-೪೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕಾರ್ಮಿಕರು ತಮಗೆ ಬಂದ ನಿವೃತ್ತಿ ಹಣದಲ್ಲಿ ಬದುಕು ಕಟ್ಟಿಕೊಂಡಿದ್ದು, ಯಾವುದೇ ಸ್ವಂತ ಸೂರಿಲ್ಲದ ಬಹುತೇಕ ನಿವೃತ್ತ ಕಾರ್ಮಿಕರು ಲಕ್ಷಾಂತರ ರು. ವೆಚ್ಚದಲ್ಲಿ ಕಾರ್ಖಾನೆಯ ಹಾಳಾದ ವಸತಿ ಗೃಹಗಳನ್ನು ವಾಸಿಸಲು ಯೋಗ್ಯವಾದ ರೀತಿಯಲ್ಲಿ ದುರಸ್ತಿಪಡಿಸಿಕೊಂಡು ವಾಸಿಸುತ್ತಿದ್ದಾರೆ. ಇದೀಗ ಈ ಮನೆಗಳನ್ನು ಸಹ ಖಾಸಗಿಯವರಿಗೆ ವಹಿಸಿಕೊಡುವ ಭೀತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ನಿವೃತ್ತ ಕಾರ್ಮಿಕರು ವಾಸದ ಗೃಹಗಳನ್ನು ಶಾಶ್ವತವಾಗಿ ತಮಗೆ ವಹಿಸಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಲು ಮುಂದಾಗಿದ್ದಾರೆ.
     ನಿವೃತ್ತ ಕಾರ್ಮಿಕರು ಪತ್ರದ ಮೂಲಕ ಸಹಿ ಅಭಿಯಾನ ಕೈಗೊಂಡು ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕಳೆದ ಸುಮಾರು ಒಂದು ವಾರದಿಂದ ಪ್ರತಿಯೊಂದು ಮನೆಗೆ ತೆರಳಿ ಸಹಿ ಸಂಗ್ರಹಿಸುತ್ತಿದ್ದು, ಈ ಕಾರ್ಯದಲ್ಲಿ ನಿವೃತ್ತ ಕಾರ್ಮಿಕರಾದ ನರಸಿಂಹಚಾರ್, ರಾಜಪ್ಪ, ಜಗದೀಶ್, ನಂಜಪ್ಪ, ಸುಬ್ರಮಣ್ಯ, ಕೆಂಪಯ್ಯ, ನಾಗರಾಜ್, ವಿ ಪ್ರಸಾದ್ ಸೇರಿದಂತೆ ಇನ್ನಿತರರು ತೊಡಿಗಿಸಿಕೊಂಡಿದ್ದಾರೆ.

ರು.೫೦ ಲಕ್ಷ ವೆಚ್ಚದಲ್ಲಿ ೧೧ ಅಡಿ ಎತ್ತರದ ಅಂಬೇಡ್ಕರ್ ಕಂಚಿನ ಪ್ರತಿಮೆ ಪ್ರತಿಸ್ಥಾಪನೆಗೆ ಆಗ್ರಹ

ಡಿಎಸ್‌ಎಸ್‌ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ

ಭದ್ರಾವತಿ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ವೃತ್ತವನ್ನು ಅಭಿವೃದ್ಧಿಪಡಿಸಿ ಹೆಚ್ಚಿನ ಅನುದಾನ ಬಳಸಿ ಸುಮಾರು ೧೧ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘಷ ಸಮಿತಿ ವತಿಯಿಂದ ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೨೩: ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ವೃತ್ತವನ್ನು ಅಭಿವೃದ್ಧಿಪಡಿಸಿ ಹೆಚ್ಚಿನ ಅನುದಾನ ಬಳಸಿ ಸುಮಾರು ೧೧ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘಷ ಸಮಿತಿ ವತಿಯಿಂದ ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
    ರಾಜ್ಯ ಖಜಾಂಚಿ ಸತ್ಯ ಮಾತನಾಡಿ, ಸಮಿತಿ ವತಿಯಿಂದ ಈ ಹಿಂದೆ ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮ ಅಂಡರ್ ಬ್ರಿಡ್ಜ್ ವೃತ್ತಕ್ಕೆ ೨೦೦೪ರಲ್ಲಿ ಅಂದಿನ ಶಾಸಕರಾಗಿದ್ದ ದಿವಂಗತ ಎಂ.ಜೆ ಅಪ್ಪಾಜಿ ಹಾಗು ನಗರಸಭೆ ಆಡಳಿತ ಅಂಬೇಡ್ಕರ್ ವೃತ್ತ ಹೆಸರನ್ನು ಶಿಫಾರಸ್ಸು ಮಾಡಿದ ಪರಿಣಾಮ ಸರ್ಕಾರದಿಂದ ಅಧಿಕೃತವಾಗಿ ನಾಮಕರಣಗೊಳಿಸಿ ಉದ್ಘಾಟಿಸಲಾಯಿತು. ನಂತರ ೨೦೦೬ರಲ್ಲಿ ತಾವು ಶಾಸಕರಾಗಿದ್ದ ಅವಧಿಯಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದು, ೨೦೦೭ರಲ್ಲಿ ಬಿ.ಎಸ್ ಯಡಿಯೂರಪ್ಪ ೬ ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ್ದರು ಎಂದರು.
   ತದ ನಂತರ ವೃತ್ತವನ್ನು ಅಭಿವೃದ್ಧಿಗೊಳಿಸಿ ೧೧ ಅಡಿ ಎತ್ತರದ ನೂತನ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಹೋರಾಟ ನಡೆಸಲಾಯಿತು. ಇದರ ಪರಿಣಾಮ ನಗರಸಭೆ ಆಡಳಿತ ಸುಮಾರು ರು. ೨೫ ಲಕ್ಷ ಅನುದಾನ ಮೀಸಲಿರಿಸಿತ್ತು. ಅಂದಿನ ಜಿಲ್ಲಾಧಿಕಾರಿಯಾಗಿದ್ದ ವಿ.ಪಿ ಇಕ್ಕೇರಿಯವರು ರು.೧೦ ಲಕ್ಷ ಹೆಚ್ಚಿನ ಅನುದಾನ ಮೀಸಲಿರಿಸುವಂತೆ ನಗರಸಭೆ ಆಡಳಿತಕ್ಕೆ ಸೂಚಿಸಿದ್ದರು. ಪ್ರಸ್ತುತ ವೃತ್ತವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ  ರು.೩೫ ಲಕ್ಷ ಅನುದಾನದ ಜೊತೆಗೆ ಹೆಚ್ಚುವರಿಯಾಗಿ ರು.೧೫ ಲಕ್ಷ ಸೇರಿಸಿ ಒಟ್ಟು ರು. ೫೦ ಲಕ್ಷ ವೆಚ್ಚದಲ್ಲಿ ನೂತನ ಪ್ರತಿಮೆ ಪ್ರತಿಷ್ಠಾಪಿಸಬೇಕು. ವೃತ್ತವನ್ನು ಮತ್ತಷ್ಟು ವಿಸ್ತರಿಸಿ ನಗರವನ್ನು ಸುಂದರಗೊಳಿಸುವ ಜೊತೆಗೆ ಸುಗಮ ಸಂಚಾರ ವ್ಯವಸ್ಥೆಗೆ ಅನುಕೂಲ ಕಲ್ಪಿಸಿಕೊಡುವಂತೆ ಕೋರಿದರು.
    ಮನವಿ ಸ್ವೀಕರಿಸಿದ ಶಾಸಕ ಬಿ.ಕೆ ಸಂಗಮೇಶ್ವರ್, ನೂತನ ಪ್ರತಿಮೆ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಭದ್ರಾವತಿ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ವೃತ್ತವನ್ನು ಅಭಿವೃದ್ಧಿಪಡಿಸಿ ಹೆಚ್ಚಿನ ಅನುದಾನ ಬಳಸಿ ಸುಮಾರು ೧೧ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಮಾತನಾಡಿದರು.
     ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಮುಖಂಡರಾದ ಡಿ. ರಾಜು, ಈಶ್ವರಪ್ಪ ಸೇರಿದಂತೆ ಇನ್ನಿತರರು ಮಾತನಾಡಿದರು. ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ನಗರಸಭೆ ಪೌರಾಯುಕ್ತ ಮನೋಹರ್, ಕಂದಾಯಾಧಿಕಾರಿ ಪ್ರಶಾಂತ್, ಪೊಲೀಸ್ ನಗರವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಉಪಸ್ಥಿತರಿದ್ದರು.
    ಡಿಎಸ್‌ಎಸ್ ತಾಲೂಕು ಸಂಚಾಲಕ ಕೆ. ರಂಗನಾಥ್, ರಾಜ್ಯ ಸಹ ಸಂಚಾಲಕಿ ಪಿ.ಆರ್ ಶಾಂತಿ, ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್, ಜಿಲ್ಲಾ ಸಮಿತಿ ಸದಸ್ಯ ಜಿಂಕ್‌ಲೈನ್ ಮಣಿ, ಶಿವಶಂಕರ್, ಕೆ. ಸುರೇಶ್, ಆರ್. ಸಂದೀಪ, ನರಸಿಂಹ, ಪಿ.ಸಿ ರಾಜು(ದಾಸ), ಅವಿನಾಶ್, ಪ್ರಸನ್ನ, ಪೊಬಾಲನ್, ಕೆ. ಕುಪ್ಪಸ್ವಾಮಿ, ಮಂಜುಮಣಿ, ಗೋವಿಂದ, ಕಬಡ್ಡಿ ಸುಬ್ಬು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಭಾನುವಾರ, ನವೆಂಬರ್ 22, 2020

ಸರ್.ಎಂ ವಿಶ್ವೇಶ್ವರಾಯ ವಿವಿದೋದ್ದೇಶ ಸಹಕಾರ ಸಂಘ ರು. ೬೨,೪೮೫ ಲಾಭ

ಭದ್ರಾವತಿ ನ್ಯೂಟೌನ್ ಸರ್.ಎಂ ವಿಶ್ವೇಶ್ವರಾಯ ವಿವಿದೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ೫೪ನೇ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು.
ಭದ್ರಾವತಿ, ನ. ೨೨: ಮಾಜಿ ಶಾಸಕ ದಿವಂಗತ ಅಬ್ದುಲ್ ಖುದ್ದೂಸ್ ಅನ್ವರ್‌ರವರ ಪರಿಶ್ರಮದಿಂದ ಸ್ಥಾಪಿತವಾಗಿ ೫ ದಶಕಗಳನ್ನು ಪೂರೈಸಿರುವ ನಗರದ ನ್ಯೂಟೌನ್ ಸರ್.ಎಂ ವಿಶ್ವೇಶ್ವರಾಯ ವಿವಿದೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ರು. ೬೨,೪೮೫ ಲಾಭ ಗಳಿಸಿದ್ದು, ಸದಸ್ಯರುಗಳಿಗೆ ಹೊಸ ಯೋಜನೆಗಳನ್ನು ರೂಪಿಸಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಎಚ್.ಎಸ್ ಸಿದ್ದಯ್ಯ ತಿಳಿಸಿದರು.
    ಅವರು ಭಾನುವಾರ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದ್ದ ೫೪ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಸದಸ್ಯರುಗಳಿಂದ ಒಟ್ಟು ರು. ೪೬ ಲಕ್ಷ ಠೇವಣಿ ಇದ್ದು, ರು. ೧೦.೬೭ ಲಕ್ಷ ಷೇರು ಬಂಡವಾಳ ಹೊಂದಲಾಗಿದೆ. ಒಟ್ಟು ರು.೬೮,೯೯,೩೭೦ ಸಾಲ ನೀಡಲಾಗಿದ್ದು, ರು. ೫೯,೧೦,೮೮೬ ವಸೂಲಾತಿ ಮಾಡಲಾಗಿದೆ. ಬಾಕಿ ಸಾಲದ ಮೊತ್ತ ರು.೭೩,೫೦,೩೯೮ ಬರಬೇಕಾಗಿದ್ದು, ಈ ನಡುವೆ ಬೈಲಾ ತಿದ್ದುಪಡಿ ಮಾಡಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೂ ಸದಸ್ಯತ್ವ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸದಸ್ಯರುಗಳಿಗೆ ಸಂಬಳ ಆಧಾರ ಸಾಲ, ಜಾಮೀನು ಆಧಾರ ಸಾಲ, ನಿವೇಶನ/ಗೃಹ ಖರೀದಿ/ರಿಪೇರಿ ಸಾಲ ಸ್ವಸಹಾಯ ಗುಂಪುಗಳ ಸಾಲ ಮತ್ತು ವ್ಯಾಪಾರ ಉತ್ತೇಜಕ ಸಾಲಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.
   ಸಂಘದ ಸಂಸ್ಥಾಪಕ ಅಧ್ಯಕ್ಷ ಮಾಜಿ ಶಾಸಕ ದಿವಂಗತ ಅಬ್ದುಲ್ ಖುದ್ದೂಸ್ ಅನ್ವರ್‌ರವರ ಪುತ್ರ, ಸಂಘದ ಅಧ್ಯಕ್ಷರಾಗಿದ್ದ ಸಿ.ಕೆ ಅಸ್ಮತ್‌ಪಾಷರವರು ಕಳೆದ ೨ ತಿಂಗಳ ಹಿಂದೆ ನಿಧನ ಹೊಂದಿದ್ದು, ಇವರಿಗೆ ಸಂತಾಪ ಸೂಚಿಸಲಾಯಿತು.
    ಸಂಘದ ಛೇರ‍್ಮನ್ ಬೋರೇಗೌಡ, ಕಾರ್ಯದರ್ಶಿ ಮುಕುಂದಪ್ಪ, ಖಜಾಂಚಿ ಸಿ. ದಾಸಿ, ನಿರ್ದೇಶಕರಾದ ಎನ್. ರಂಗಸ್ವಾಮಿ, ಎಚ್. ಮಲ್ಲೇಶ್, ರಾಜ, ಗಂಗಾಧರ ಗೌಡ, ಮಹಮ್ಮದ್  ಬುಡೇನ್, ಮಂಜುನಾಥ ಮತ್ತು ಶಾರದಮ್ಮ ಉಪಸ್ಥಿತರಿದ್ದರು.

ಬಸ್ ನಿಲ್ದಾಣ ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ನಗರಸಭೆಗೆ ಮನವಿ

ಭದ್ರಾವತಿ ಚನ್ನಗಿರಿ ರಸ್ತೆಯ ಉಪನೋಂದಣಾಧಿಕಾರಿಗಳ ಕಛೇರಿ ಮುಂಭಾಗ ನೆಲಸಮಗೊಳಿಸಿರುವ ೨ ಬಸ್ ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕನಾ೯ಟಕ ಜನ ಸೈನ್ಯ ವಿದ್ಯಾರ್ಥಿ ಘಟಕದ ವತಿಯಿಂದ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೨೨: ನಗರದ ಚನ್ನಗಿರಿ ರಸ್ತೆಯ ಉಪನೋಂದಣಾಧಿಕಾರಿಗಳ ಕಛೇರಿ ಮುಂಭಾಗ ನೆಲಸಮಗೊಳಿಸಿರುವ ೨ ಬಸ್ ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕನಾ೯ಟಕ ಜನ ಸೈನ್ಯ ವಿದ್ಯಾರ್ಥಿ ಘಟಕದ ವತಿಯಿಂದ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ಯಾವುದೇ ರೀತಿ ಟೆಂಡರ್ ಕರೆಯದೆ ಬಸ್ ನಿಲ್ದಾಣಗಳನ್ನು ಅನಧಿಕೃತವಾಗಿ ನೆಲಸಮ ಮಾಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಿದ್ದು, ತಕ್ಷಣ ತಾತ್ಕಾಲಿಕವಾಗಿ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕೆಂದು ಹಾಗು ಕಾನೂನು ಬಾಹಿರವಾಗಿ ಬಸ್ ನಿಲ್ದಾಣಗಳನ್ನು ನೆಲಸಮಗೊಳಿಸಿರುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
    ಮನವಿ ಸ್ವೀಕರಿಸಿದ ನಗರಸಭೆ ಇಂಜಿನಿಯರ್ ರಂಗರಾಜಪುರೆ ಮುಂದಿನ ಕ್ರಮ ಕೈಗೊಳ್ಳುವ ಭರವಸೆ  ನೀಡಿದರು. ಘಟಕದ ಅಧ್ಯಕ್ಷ ದೀಕ್ಷಿತ್, ಕಾರ್ಯಕರ್ತರಾದ ಸುದೈವ, ಮನೋಜ್, ಮಂಜುನಾಥ್, ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶನಿವಾರ, ನವೆಂಬರ್ 21, 2020

ಪ್ರೇಮಪಾಶ ಪುಸ್ತಕ ಬಿಡುಗಡೆ

ಭದ್ರಾವತಿ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಹಿಂದೂ ಯುವ ಜಾಗೃತಿವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಚೈತ್ರಾ ಕುಂದಾಪುರರವರ ಪ್ರೇಮಪಾಶ (ಪ್ರೀತಿಯೆಂಬ ಜಿಹಾದಿನ ಪರದೆ) ಪುಸ್ತಕ ಬಿಡುಗಡೆಗೊಳಿಸಲಾಯಿತು.
     ಭದ್ರಾವತಿ, ನ. ೨೧: ದೇಶದ ಸನಾತನ ಧರ್ಮ, ಸಂಸ್ಕೃತಿ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಚೈತ್ರಾ ಕುಂದಾಪುರರವರ ಪ್ರೇಮಪಾಶ (ಪ್ರೀತಿಯೆಂಬ ಜಿಹಾದಿನ ಪರದೆ) ಪುಸ್ತಕ ಬಿಡುಗಡೆ ಸಮಾರಂಭ ಶನಿವಾರ ನಗರದ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಹಿಂದೂ ಯುವ ಜಾಗೃತಿವತಿಯಿಂದ ಆಯೋಜಿಸಲಾಗಿತ್ತು.
ಎಂ.ಎಸ್.ಎಂ.ಇ ನಿರ್ದೇಶಕ ಎಚ್.ಸಿ ರಮೇಶ್ ಪುಸ್ತಕ ಬಿಡುಗಡೆಗೊಳಿಸಿದರು. ಲೇಖಕಿ ಚೈತ್ರಾ ಕುಂದಾಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ಸುದರ್ಶನ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಯುವ ಉದ್ಯಮಿ ಎನ್. ಗೋಕುಲ್‌ಕೃಷ್ಣನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಟಿ.ಎಸ್ ದುಗ್ಗೇಶ್

ಟಿ.ಎಸ್ ದುಗ್ಗೇಶ್
ಭದ್ರಾವತಿ, ನ. 21: ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ನಗರದ ಟವನ್ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಟಿ.ಎಸ್ ದುಗ್ಗೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
   ಶನಿವಾರ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಪ್ರತಿಸ್ಪರ್ಧಿ ಇಲ್ಲದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು. ದುಗ್ಗೇಶ್‌ರವರು ಹಲವಾರು ವರ್ಷಗಳಿಂದ ಟವನ್ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಗುರುತಿಸಿಕೊಂಡಿದ್ದರು.  ಇತ್ತೀಚಿಗೆ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್‌ಗೆ ತಾಲೂಕಿನ ಅರಕೆರೆ ಎಚ್.ಎಲ್ ಷಡಾಕ್ಷರಿ, ಗೊಂದಿ ಜಯರಾಮ್, ಎಚ್.ಎಸ್ ಸಂಜೀವಕುಮಾರ್ ಮತ್ತು ಟಿ.ಎಸ್ ದುಗ್ಗೇಶ್ ಸೇರಿದಂತೆ 4 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಯೂನಿಯನ್ ಒಟ್ಟು 14 ನಿರ್ದೇಶಕ ಸ್ಥಾನಗಳನ್ನು ಹೊಂದಿದ್ದು, ಈ ಹಿಂದೆ ತಾಲೂಕಿನ ಅರಕೆರೆ ಎಚ್.ಎಲ್ ಷಡಾಕ್ಷರಿಯವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
    ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟಿ.ಎಸ್ ದುಗ್ಗೇಶ್‌ರವರಿಗೆ  ನಗರದ ಟವನ್ ಭಾವಸಾರ ಕ್ಷತ್ರಿಯ ಕೊ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷರು, ನಿರ್ದೇಶಕರುಗಳು ಹಾಗು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಡಿ ಯುವಕರಿಗೆ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಿ ಕೊಡಿ

ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಮತ್ತು ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ಆಲಿ ಮನವಿ

ಭದ್ರಾವತಿ, ನ. ೨೧: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರುದ್ಯೋಗಿಗಳಿಗೆ ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಮತ್ತು ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ಆಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾ ಪಂಚಾಯಿತಿ ಮುಖ್ಯ  ಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮನವಿ ಸಲ್ಲಿಸಿದ್ದಾರೆ.
   ಜಿಲ್ಲಾ ಪಂಚಾಯಿತಿ ವತಿಯಿಂದ ತಾಲೂಕಿನ ದೊಣಬಘಟ್ಟ ಗ್ರಾಮದ ಸರ್ವೆ ನಂ. ೭೧ರ ಬ್ರಹ್ಮದೇವರಕಟ್ಟೆ ಕೆರೆ ಅಭಿವೃದ್ಧಿಗೆ ರು.೯ ಲಕ್ಷ,  ಸರ್ವೆ ನಂ.೨೫ರ ಎರೆಕಟ್ಟೆ ಕೆರೆ ಅಭಿವೃದ್ಧಿಗೆ ರು. ೯ ಲಕ್ಷ ಅನುದಾನ ಮಂಜೂರಾತಿಯಾಗಿದೆ. ಪ್ರಸ್ತುತ ಕೋವಿಡ್-೧೯ರ ಹಿನ್ನಲೆಯಲ್ಲಿ ಗ್ರಾಮದ ಯುವಕರು ಉದ್ಯೋಗ ವಿಲ್ಲದೆ ಪರದಾಡುತ್ತಿದ್ದಾರೆ. ಈ ನಡುವೆ ಕೆಲವರು ಬೇರೆ ಊರುಗಳಿಗೆ ವಲಸೆ ಹೋಗುತ್ತಿದ್ದು, ಈ ಹಿನ್ನಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡುವ ಮೂಲಕ ಹಿತ ಕಾಪಾಡಬೇಕು.
   ಪ್ರಸ್ತುತ ಗ್ರಾಮದಲ್ಲಿ ಭತ್ತದ ಕಟಾವು ಮುಗಿದಿದ್ದು, ಇದೀಗ ಕೆರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸೂಕ್ತ ಸಮಯವಾಗಿದೆ. ಕೆರೆಗಳು ಅಭಿವೃದ್ಧಿಗೊಂಡಲ್ಲಿ ಶುದ್ದ ನೀರು ಸರಬರಾಜು ಜೊತೆಗೆ ಸ್ವಚ್ಛತೆಯಿಂದ ಗ್ರಾಮದಲ್ಲಿ ರೋಗರುಜಿನ ಹರಡದಂತೆ ತಡೆಗಟ್ಟೆ ಬಹುದಾಗಿದೆ.  ಅಲ್ಲದೆ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಯುವಕರು ಉತ್ಸುಕರಾಗಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಎರಡು ಕೆರೆಗಳ ಸರ್ವೆ ಕಾರ್ಯ ಕೈಗೊಂಡು ಬೌಂಡರಿ ನಿಗದಿಪಡಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೆಂದು ಕೋರಿದ್ದಾರೆ.

ಶುಕ್ರವಾರ, ನವೆಂಬರ್ 20, 2020

ದೊಂಬಿದಾಸ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅಗ್ರಹ.

ರಾಜು ಆರ್ ದೊಂಬಿದಾಸ

ಭದ್ರಾವತಿ, ಅ. ೨೦: ರಾಜ್ಯದಲ್ಲಿರುವ ದೊಂಬಿದಾಸ ಜನಾಂಗದ ಅಭಿವೃದ್ಧಿಗಾಗಿ ದೊಂಬಿದಾಸ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿದಾಸ ಯುವಸೇನೆ ರಾಜ್ಯಾಧ್ಯಕ್ಷ ರಾಜು ಅರ್ ದೊಂಬಿದಾಸ ಅಗ್ರಹಿಸಿದ್ದಾರೆ.
ದೊಂಬಿದಾಸ ಜನಾಂಗದ ಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯೋಗದ ದೃಷ್ಟಿಯಿಂದ ನಿಗಮ ಸ್ಥಾಪಿಸಿ ಅನುದಾನದ ಮೀಸಲಿಡಬೇಕು. ಅರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುವಂತಹ ಯೋಜನೆಗಳನ್ನು ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.

ಭದ್ರಾ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಬಳಿ ಭದ್ರಾ ನದಿಯಲ್ಲಿ ಶುಕ್ರವಾರ ಬೆಳಗ್ಗೆ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ.
ಭದ್ರಾವತಿ, ನ. ೨೦ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಬಳಿ ಭದ್ರಾ ನದಿಯಲ್ಲಿ ಶುಕ್ರವಾರ ಬೆಳಗ್ಗೆ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ.
      ಸುಮಾರು ೧೦ ರಿಂದ ೧೨ ಅಡಿಯಷ್ಟು ಉದ್ದವಿರುವ ಬೃಹತ್ ಗಾತ್ರದ ಮೊಸಳೆ ಕಂಡು ಬಂದಿದ್ದು,  ಸೇತುವೆ ಮೇಲೆ ಸಂಚರಿಸುತ್ತಿದ್ದ ಪಾದಚಾರಿಗಳು, ವಾಹನ ಸವಾರರು ಕೆಲ ಕ್ಷಣ ಮೊಸಳೆಯನ್ನು ಕುತೂಹಲದಿಂದ ವೀಕ್ಷಿಸಿದರು.
    ಈ ಭಾಗದಲ್ಲಿ ಮೊಸಳೆಗಳು ಹೆಚ್ಚಾಗಿದ್ದು ಆಗಾಗ ಕಂಡು ಬರುತ್ತಿವೆ. ಈ ಹಿಂದೆ ಮೊಸಳೆಗಳು ನದಿ ದಡದಲ್ಲಿ ತಿರುಗಾಡುವವರು, ಸ್ನಾನ ಮಾಡಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಬರುವವರ ಮೇಲೆ  ಹಾಗು ಜಾನುವಾರುಗಳ ಮೇಲೆ ದಾಳಿ ನಡೆದಿರುವ ಘಟನೆಗಳು ನಡೆದಿವೆ. ನಗರಸಭೆ ಆಡಳಿತ ನದಿಗೆ ಯಾವುದೇ ರೀತಿಯ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ನೀಡಿದ್ದರೂ ಸಹ ಈ ಭಾಗದಲ್ಲಿ ರಾತ್ರಿ ವೇಳೆ ಕಣ್ತಪ್ಪಿಸಿ ಮಾಂಸದಂಗಡಿಗಳ ತ್ಯಾಜ್ಯ ತಂದು ಸುರಿಯಲಾಗುತ್ತಿದೆ.
     ಮುಂದಿನ ದಿನಗಳ ಮೊಸಳೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಮೊಸಳೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಅಗತ್ಯವಿದೆ.


ಗ್ರಾಮ ಪಂಚಾಯಿತಿ ಅವ್ಯವಹಾರ ಖಂಡಿಸಿ : ಗ್ರಾಮಸ್ಥರಿಂದ ಪ್ರತಿಭಟನೆ

ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ, ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗು ಎನ್‌ಆರ್‌ಇಜಿ ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ನ. ೨೦: ತಾಲೂಕಿನ ಕೂಡ್ಲಿಗೆರೆ ಹೋಬಳಿ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗು ಎನ್‌ಆರ್‌ಇಜಿ ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
   ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಕಲಿ ದಾಖಲಾತಿ ಸೃಷ್ಟಿಸಿ ವೈಯಕ್ತಿಕವಾಗಿ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ. ಕಾಮಗಾರಿ ಅನುಷ್ಠಾನ ಆಗದೆ ಕೂಲಿ ಹಣ ಪಾವತಿಸಿರುವುದು, ಅಸ್ತಿತ್ವದಲ್ಲಿ ಇಲ್ಲದ ವ್ಯಕ್ತಿಗೆ, ಸ್ಥಳಾಂತರಗೊಂಡ ವ್ಯಕ್ತಿಗೆ,  ಕೆಲಸ ನಿರ್ವಹಿಸದ ವ್ಯಕ್ತಿಗೆ ಹಣ ಪಾವತಿಸಲಾಗಿದೆ. ಅಲ್ಲದೆ ಅಪ್ರಾಪ್ತ ವಯಸ್ಸಿನ ಶಾಲಾ ಮಕ್ಕಳಿಗೂ ಈ ಯೋಜನೆಯಡಿ ಹಣ ಪಾವತಿಸಲಾಗಿದೆ. ಆಡಳಿತ ಮಂಜೂರಾತಿ ಪಡೆಯದೆ, ತಾಂತ್ರಿಕ ಅಂದಾಜು ಪ್ರತಿ ಇಲ್ಲದೆ, ತಾಂತ್ರಿಕ ಮಂಜೂರಾತಿ ಪಡೆಯದೆ ಹಾಗು ಗ್ರಾಮಸಭೆಯಲ್ಲಿ ಆಯ್ಕೆ ಮಾಡದೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಒಂದು ಕಾಮಗಾರಿಗೆ ಆಡಳಿತ ಮಂಜೂರಾತಿ ನೀಡಿ ಬೇರೊಂದು ಕಾಮಗಾರಿ ನಡೆಸಲಾಗಿದೆ. ಒಟ್ಟಾರೆ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಲಾಯಿತು.
   ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೇರಿ ಗ್ರಾಮದಲ್ಲಿ ರಾಮಣ್ಣನ ಕೆರೆಗೆ ನೀರು ಹೋಗುವ ಕಾಲುವೆಯನ್ನು ಮುಚ್ಚಿ ಕೆರೆಗೆ ನೀರು ಹಾಯುವರಿಯಾಗದಂತೆ ಅಕ್ರಮವಾಗಿ ತಡೆಯಲಾಗಿದೆ. ಅಲ್ಲದೆ ಇದುವರೆಗೂ ರಾಮಣ್ಣನ ಕೆರೆಯನ್ನು ಹರಾಜು ಮಾಡದೆ ನಿರ್ಲಕ್ಷವಹಿಸಲಾಗಿದೆ. ಇತ್ತೀಚೆಗೆ ಮಳೆಯಿಂದ ಹಾನಿಯಾಗಿ ಶಿಥಿಲಗೊಂಡಿರುವ ಮನೆಗಳಿಗೆ ಮನೆ ನೀಡದೆ ಮನೆ ಇರುವವರಿಗೆ ಮನೆ ನೀಡಿದ್ದು, ಅಕ್ರಮ ವಿದ್ಯುತ್ ಬಿಲ್, ಕುಡಿಯುವ ನೀರಿನ ದುರಸ್ತಿ ಹಾಗು ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾಕಷ್ಟು ದುರುಪಯೋಗವಾಗಿದೆ ಎಂದು ದೂರಲಾಯಿತು.
    ತಕ್ಷಣ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗು ಡಾಟಾ ಎಂಟ್ರಿ ಆಪರೇಟರ್ ಸೇರಿದಂತೆ ಅಕ್ರಮಗಳಿಗೆ  ಕಾರಣಕರ್ತರಾಗಿರುವವರ ವಿರುದ್ಧ ಕಾನೂರು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
   ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್, ಮನವಿ ಸ್ವೀಕರಿಸಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ಮಾಹಿತಿ ತರಲಾಗಿದೆ. ಈ ಹಿನ್ನಲೆಯಲ್ಲಿ ಅವರು ಖುದ್ದಾಗಿ ಶನಿವಾರ ಆಗಮಿಸಲಿದ್ದು, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಭರವಸೆ ನೀಡಿದರು.
    ಪ್ರತಿಭಟನೆಯಲ್ಲಿ ಪ್ರಮುಖರಾದ ರಾಮಚಂದ್ರ, ರವಿಕುಮಾರ್(ಗಂಗೂರು), ಮೋಹನ್, ಮಂಜು, ಕಿರಣ್ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೧ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಅಕ್ರಮವಾಗಿ ಆಸ್ತಿ ಕಬಳಿಸಲು ಯತ್ನ : ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

ವಂಚನೆಗೊಳಗಾದ ರುದ್ರೇಶ್ ಕುಟುಂಬದಿಂದ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ

ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ವೆ ನಂ.೯೧/೩ರ ೦-೧೮ ಗುಂಟೆ ಆಸ್ತಿಯನ್ನು ನಕಲಿ ಖಾತೆ ಸೃಷ್ಠಿ ಮಾಡಿಕೊಂಡು ಕಬಳಿಸಲು ಯತ್ನಿಸುತ್ತಿರುವ ಎಂ.ಎಸ್ ಶಿವಕುಮಾರ್ ಎಂಬುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಮುಂಭಾಗ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಭದ್ರಾವತಿ, ನ. ೨೦: ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ವೆ ನಂ.೯೧/೩ರ ೦-೧೮ ಗುಂಟೆ ಆಸ್ತಿಯನ್ನು ನಕಲಿ ಖಾತೆ ಸೃಷ್ಠಿ ಮಾಡಿಕೊಂಡು ಕಬಳಿಸಲು ಯತ್ನಿಸುತ್ತಿರುವ ಎಂ.ಎಸ್ ಶಿವಕುಮಾರ್ ಎಂಬುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಮುಂಭಾಗ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ದಾವಣಗೆರೆ ಜಿಲ್ಲೆ ನಿಟ್ಟುವಳ್ಳಿ ಗ್ರಾಮದ ನಿವಾಸಿ ರುದ್ರೇಶ್ ಮೂಲತಃ ಡಿ.ಬಿ ಹಳ್ಳಿ ಗ್ರಾಮದವರಾಗಿದ್ದು, ಇವರ ಕುಟುಂಬಕ್ಕೆ ಸೇರಿದ ಹಾಗು ಅವರ ಅಜ್ಜಿಯವರಿಗೆ ದತ್ತಕ ಪತ್ರದ ಮೂಲಕ ಬಂದಂತಹ ವ್ಯವಸಾಯದ ಸ್ವತ್ತುಗಳು ಮತ್ತು ನಿವೇಶನ ಹಾಗು ಮನೆಯ ಸ್ವತ್ತುಗಳನ್ನು  ಎಂ.ಎಸ್ ಶಿವಕುಮಾರ್ ಮತ್ತು ಈತನ ಪತ್ನಿ ಎಸ್. ಸುಮಾರವರು ಕಬಳಿಸಲು ಅಕ್ರಮ ದಾರಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆದು ಆಸ್ತಿ ಹಕ್ಕನ್ನು ಖಾತ್ರಿಪಡಿಸಲಾಗಿದೆ. ಈ ನಡುವೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಚಾಲ್ತಿಯಲ್ಲಿದ್ದು, ಈ ಸಂದರ್ಭದಲ್ಲಿ ಅಕ್ರಮವಾಗಿ ನಕಲಿ ಖಾತೆ ಸೃಷ್ಟಿ ಮಾಡಿಕೊಂಡು ವಂಚಿಸಲಾಗುತ್ತಿದೆ ಎಂದು ಧರಣಿ ಸತ್ಯಾಗ್ರಹ ಕೈಗೊಂಡಿರುವ ರುದ್ರೇಶ್ ಕುಟುಂಬದವರು ಆರೋಪಿಸಿದರು.
   ಶಿವಕುಮಾರ್ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಸೆಸ್‌ಮೆಂಟ್ ರಿಜಿಸ್ಟರ್‌ನಲ್ಲಿ ಸ್ವ ಹಸ್ತದಿಂದ ಬರೆದುಕೊಂಡು ನಕಲಿ ಖಾತೆ ಸೃಷ್ಟಿಸಿಕೊಂಡಿದ್ದು, ಇದು ತನಿಖೆಯಿಂದ ದೃಢಪಟ್ಟಿರುವುದರಿಂದ ಈ ಸಂಬಂಧ ಖಾತೆಯು ದೃಢೀಕೃತವಾದುದ್ದಲ್ಲ ಹಾಗು ಎಂ.ಆರ್.ನಂ. ದಾಖಲು ಆಗಿರುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಿಂಬರಹ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಸುಮಾರು ೨ ತಿಂಗಳ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
    ತಕ್ಷಣ ಸರ್ಕಾರಿ ಕಛೇರಿ ಹಾಗು ಅಧಿಕಾರಿಗಳಿಗೆ ವಂಚಿಸಿರುವ ಶಿವಕುಮಾರ್ ಮತ್ತು ಆತನ ಪತ್ನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮ ಖಾತೆ ರದ್ದುಪಡಿಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಲಾಯಿತು.
     ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ಡಿ.ವಿ ವೀರೇಶ್, ಹಿರಯಣ್ಣಯ್ಯ, ನಾಗರಾಜ್, ಬಸವರಾಜ, ರುದ್ರೇಶ್‌ರವರ ತಾಯಿ ಗಂಗಮ್ಮ, ಮುಖಂಡರಾದ ಬಿ.ಎನ್ ರಾಜು, ಬಿ.ವಿ ಗಿರೀಶ್, ಕೆ. ಮಂಜುನಾಥ್ ಹಾಗು ಡಿ.ಬಿ ಹಳ್ಳಿ ಗ್ರಾಮದ ಪ್ರಮುಖರು ಸೇರಿದಂತೆ ಇತರರು ಧರಣಿ ಸತ್ಯಾಗ್ರಹದಲ್ಲಿ ನೈತಿಕ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಂಡಿದ್ದರು.

ಗುರುವಾರ, ನವೆಂಬರ್ 19, 2020

ನ.೨೦ರಂದು ತಾಲೂಕು ಪಂಚಾಯಿತಿ ಮುಂಭಾಗ ಧರಣಿ ಸತ್ಯಾಗ್ರಹ

ಭದ್ರಾವತಿ, ನ. ೧೯: ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ವೆ ನಂ.೯೧/೩ರ ೦-೧೮ ಗುಂಟೆ ಆಸ್ತಿಯನ್ನು ನಕಲಿ ಖಾತೆ ಸೃಷ್ಠಿ ಮಾಡಿಕೊಂಡು ಕಬಳಿಸಲು ಯತ್ನಿಸುತ್ತಿರುವ ಎಂ.ಎಸ್ ಶಿವಕುಮಾರ್ ಎಂಬುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಮುಂಭಾಗ ನ.೨೦ರ ಬೆಳಿಗ್ಗೆ ೧೧.೩೦ಕ್ಕೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
     ದಾವಣಗೆರೆ ಜಿಲ್ಲೆ ನಿಟ್ಟುವಳ್ಳಿ ಗ್ರಾಮದ ನಿವಾಸಿ ರುದ್ರೇಶ್ ಮೂಲತಃ ಡಿ.ಬಿ ಹಳ್ಳಿ ಗ್ರಾಮದವರಾಗಿದ್ದು, ಇವರ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸೂಕ್ತ ದಾಖಲೆಗಳೊಂದಿಗೆ ಸುಮಾರು ೨ ತಿಂಗಳ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಬಾಹ್ಯ ಬೆಂಬಲ ನೀಡಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್ ತಿಳಿಸಿದ್ದಾರೆ.


ಆದಿದ್ರಾವಿಡ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿ ಎಸ್. ನಿತ್ಯಾನಂದನ್

ಎಸ್. ನಿತ್ಯಾನಂದನ್
ಭದ್ರಾವತಿ: ಜಿಲ್ಲಾ ಪರಿಶಿಷ್ಟ ಜಾತಿ ಆದಿದ್ರಾವಿಡ(ತಮಿಳು)ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷರಾಗಿ ಎಸ್. ನಿತ್ಯಾನಂದನ್ ಆಯ್ಕೆಯಾಗಿದ್ದಾರೆ.
     ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಿಲ್ಲಾ ಸಮಿತಿ ಗೌರವಾಧ್ಯಕ್ಷರಾಗಿ ಇ. ಚಂದ್ರಶೇಖರನ್, ತಾಲೂಕು ಅಧ್ಯಕ್ಷರಾಗಿ ಜಯಪಾಲ್‌ರವರು ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಸಮಿತಿ ವತಿಯಿಂದ ಅಭಿನಂದಿಸಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಕೆ. ಪೆರುಮಾಳ್ ತಿಳಿಸಿದ್ದಾರೆ.