ಸಿ.ಎಂ ಖಾದರ್ ಪ್ರಚೋದನಾಕಾರಿ ಹೇಳಿಕೆ ಹಿನ್ನಲೆಯಲ್ಲಿ ಅಭಿಯಾನ : ಬಜರಂಗದಳ ಆರೋಪ
![](https://blogger.googleusercontent.com/img/a/AVvXsEitz2SEbvmP4JNV-aEzPPk7lLr3RqfbJdDYSiW0DHZpCZVjn1bsdHFumhxVd2yp27qaBrWQ70TXsbWtGTQYi92HwhXC49iATxsH8-7nXvFw87hfRIs-5H9c-V-q1wpsw1-aikKZbg1bZcYYQWNOk82CjiNEaef4_G6FQj9rtbTYNPYjOXQS-j0Wsu6bNA=w400-h215-rw)
ಭದ್ರಾವತಿ ಹೊಸಮನೆ ಶಿವಾಜಿ ವೃತ್ತದಲ್ಲಿ ಬಜರಂಗದಳ ಕಾರ್ಯಕರ್ತರು ಕೋಳಿ ಹಾಗು ಮಾಂಸದಂಗಡಿಗಳಲ್ಲಿ ಹಲಾಲ್ ಅಭಿಮಾನ ಕೈಗೊಂಡಿರುವುದು.
ಭದ್ರಾವತಿ, ಮಾ. ೩೧: ಒಂದೆಡೆ ಹಲಾಲ್ ಅಭಿಯಾನದ ಹೆಸರಿನಲ್ಲಿ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು, ಮತ್ತೊಂದೆಡೆ ಮಾಂಸದಂಗಡಿ ತೆರವುಗೊಳಿಸುವಂತೆ ಬೆದರಿಕೆ ಹಾಕಿದ್ದಾರೆಂಬ ಎರಡು ಪ್ರತ್ಯೇಕ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಘಟನೆ ನಡೆದಿದೆ.
ಬಜರಂಗದಳ ಕಾರ್ಯಕರ್ತರು ನಗರದಲ್ಲಿ ಹಲಾಲ್ ಸಂಬಂಧ ಅಭಿಯಾನ ಕೈಗೊಂಡು ಬಿ.ಎಚ್ ರಸ್ತೆ ಜನತಾ ಹೋಟೆಲ್‌ನಲ್ಲಿ ಹಿಂದುಗಳಿಗೆ ಹಲಾಲ್ ಅಲ್ಲದ ಊಟ ನೀಡುವಂತೆ ಮಾಲೀಕರಿಗೆ ಮನವಿ ಮಾಡಿದ್ದು, ಈ ಸಂದರ್ಭದಲ್ಲಿ ಊಟ ಮಾಡುತ್ತಿದ್ದ ಕೆಲವು ವ್ಯಕ್ತಿಗಳು ಈ ವಿಚಾರಕ್ಕೆ ವಿನಾಕಾರಣ ತಕರಾರು ತೆಗೆದಿದ್ದಾರೆ. ಈ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಈ ಸಂಬಂಧ ಬಜರಂಗದಳ ಪ್ರಮುಖರಾದ ವಡಿವೇಲು, ಶ್ರೀಕಾಂತ್, ಗುಂಡ, ಸವಾಯಿ ಸಿಂಗ್, ಮಂಜ, ಲೋಕಿ ಮತ್ತು ಸಂಜು ಸೇರಿದಂತೆ ಒಟ್ಟು ೭ ಜನರ ವಿರುದ್ಧ ಹಲ್ಲೆ ನಡೆಸಿದ್ದಾರೆಂಬ ದೂರು ಹಳೇನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹೊಸಮನೆ ಶಿವಾಜಿ ವೃತ್ತದಲ್ಲಿ ಅಭಿಯಾನ ಕೈಗೊಂಡಿದ್ದ ಬಜರಂಗದಳ ಕಾರ್ಯಕರ್ತರು, ಕೋಳಿ ಹಾಗು ಮಾಂಸದಂಗಡಿಗಳಿಗೆ ಭೇಟಿ ನೀಡಿ ಈ ಭಾಗದಲ್ಲಿ ಶೇ.೯೦ರಷ್ಟು ಹಿಂದೂಗಳಿದ್ದು, ಈ ಹಿನ್ನಲೆಯಲ್ಲಿ ಹಲಾಲ್ ಅಲ್ಲದೆ ಮಾಂಸ ನೀಡುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಒಂದು ಮಾಂಸದಂಗಡಿಯಲ್ಲಿ ಹಲಾಲ್ ಅಲ್ಲದ ಮಾಂಸ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ಈ ಹಿನ್ನಲೆಯಲ್ಲಿ ಕಾರ್ಯಕರ್ತರು ಅಂಗಡಿ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಇದರಿಂದಾಗಿ ಅಂಗಡಿ ಮಾಲೀಕ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಕಾರ್ಯಕರ್ತರ ವಿರುದ್ಧ ಬೆದರಿಕೆ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ವಿನಾಕಾರಣ ಪ್ರಕರಣ ದಾಖಲು:
ಬಜರಂಗದಳ ಪ್ರಮುಖ್ ವಡಿವೇಲು ಮಾತನಾಡಿ, ನಮ್ಮ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಲಾಗಿದೆ. ಜನತಾ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ಎಸ್‌ಡಿಪಿಐ ಕಾರ್ಯಕರ್ತನೋರ್ವ ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಹಿನ್ನಲೆಯಲ್ಲಿ ಬಜರಂಗದಳ ಕಾರ್ಯಕರ್ತರು ಆಕ್ರೋಶಗೊಂಡು ಮಾತಿನ ಚಕಮಕಿ ನಡೆಸಿದ್ದಾರೆ. ಈ ವಿಚಾರವನ್ನು ದೊಡ್ಡದು ಮಾಡಿ ಕಾರ್ಯಕರ್ತರ ವಿರುದ್ಧ ಹಲ್ಲೆ ಮಾಡಿದ್ದಾರೆಂದು ಸುಳ್ಳು ದೂರು ದಾಖಲಿಸಲಾಗಿದೆ ಎಂದರು.
ಸಿ.ಎಂ ಖಾದರ್ ವಿರುದ್ಧ ಆರೋಪ :
ಕೇಂದ್ರ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಸಹೋದರ ಸಿ.ಎಂ ಖಾದರ್ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬಜರಂಗದಳ ಪ್ರಮುಖ್ ವಡಿವೇಲು ತಿಳಿಸಿದ್ದಾರೆ.
ಹಲಾಲ್ ಸಂಬಂಧ ಸಿ.ಎಂ ಖಾದರ್ ಪ್ರಚೋದನಾಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಬಜರಂಗದಳ ಕಾರ್ಯಕರ್ತರು ನಗರದಲ್ಲಿ ಅಭಿಮಾನ ಕೈಗೊಳ್ಳುವಂತಾಯಿತು. ಪ್ರಸ್ತುತ ನಡೆದಿರುವ ಅಹಿತಕರ ಬೆಳವಣಿಗೆಗಳಿಗೆ ಸಿ.ಎಂ ಖಾದರ್ ಕಾರಣಕರ್ತರಾಗಿದ್ದು, ಈ ಹಿನ್ನಲೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಲ್ಲದೆ ವಿನಾಕಾರಣ ಸುಳ್ಳು ದೂರು ನೀಡಿರುವ ಎಸ್‌ಡಿಪಿಐ ಕಾರ್ಯಕರ್ತನ ವಿರುದ್ಧ ಸಹ ದೂರು ನೀಡಲಾಗುವುದು ಎಂದರು.
ಮುಸ್ಲಿಂ ವ್ಯಾಪಾರಸ್ಥರ ಮೇಲೆ ಹಲ್ಲೆ :
ನಗರದದಲ್ಲಿ ಬಜರಂಗದಳ ಕಾರ್ಯಕರ್ತರು ಕೋಳಿ ಹಾಗು ಮಾಂಸದಂಗಡಿಗಳಿಗೆ ಹಾಗು ಹೋಟೆಲ್‌ಗಳಿಗೆ ನುಗ್ಗಿ ಮುಸ್ಲಿಂ ವ್ಯಾಪಾರಸ್ಥರು ಹಾಗು ಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದು, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.
ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಇದೀಗ ಹಲಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಬಜರಂಗದಳ ಕಾರ್ಯಕರ್ತರ ವರ್ತನೆ ಮಿತಿಮೀರಿದ್ದು, ಸಮಾಜದಲ್ಲಿ ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಪೊಲೀಸ್ ಇಲಾಖೆ ತಕ್ಷಣ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮುಸ್ಲಿಂ ವ್ಯಾಪಾರಸ್ಥರಿಗೆ ರಕ್ಷಣೆ ನೀಡಬೇಕೆಂದು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಸಯ್ಯದ್ ರಿಜ್ವಾನ್ ಒತ್ತಾಯಿಸಿದ್ದಾರೆ.