Thursday, August 31, 2023

ಚರಂಡಿ‌ ಕಾಮಗಾರಿಗೆ ಗುದ್ದಲಿಪೂಜೆ

ಭದ್ರಾವತಿ ನಗರಸಭೆ 19ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಶ್ಚಿಮ)ಯಲ್ಲಿ ಆಯೋಜಿಸಲಾಗಿದ್ದ ಚರಂಡಿ ಕಾಮಗಾರಿಗೆ ನಗರಸಭೆ ಸದಸ್ಯ ಬಸವರಾಜ್ ಬಿ. ಆನೇಕೊಪ್ಪ ಗುದ್ದಲಿಪೂಜೆ ನರವೇರಿಸಿದರು.
    ಭದ್ರಾವತಿ: ನಗರಸಭೆ 19ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಶ್ಚಿಮ)ಯಲ್ಲಿ ಆಯೋಜಿಸಲಾಗಿದ್ದ ಚರಂಡಿ ಕಾಮಗಾರಿಗೆ ನಗರಸಭೆ ಸದಸ್ಯ ಬಸವರಾಜ್ ಬಿ. ಆನೇಕೊಪ್ಪ ಗುದ್ದಲಿಪೂಜೆ ನರವೇರಿಸಿದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್, ಶಾಲಾ ಅಭಿವೃದ್ಧಿ ಸಮಿತಿಯ ವೆಂಕಟೇಶ್ ಉಜ್ಜೀನಿಪುರ, ಸ್ಥಳೀಯ ಮುಖಂಡರಾದ ನಾಗೇಶ್, ಶ್ಯಾಮ್, ಭಾಸ್ಕರ್, ವೆಂಕಟಯ್ಯ, ರವಿ, ಗುತ್ತಿಗೆದಾರ ಲೋಕೇಶ್ ಸೇರಿದಂತೆ ಶಾಲೆಯ ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ : ಭವ್ಯ ಮೆರವಣಿಗೆಗೆ ಚಾಲನೆ

ಭದ್ರಾವತಿಯಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆ (ಈಡಿಗ ಸಮಾಜದ 26 ಪಂಗಡಗಳ ಒಕ್ಕೂಟ) ಮತ್ತು ಆರ್ಯ ಈಡಿಗ ಮಹಿಳಾ ಸಮಾಜ, ಕೇರಳ ಸಮಾಜ ಹಾಗು ಈಡಿಗ ಸಮಾಜ ಮತ್ತು ಬಿಲ್ಲವ ಸಮಾಜದ ವತಿಯಿಂದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಕಾರದೊಂದಿಗೆ ಗುರುವಾರ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ ಅಂಗವಾಗಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು.
    ಭದ್ರಾವತಿ: ಶ್ರೀ ನಾರಾಯಣಗುರು ವಿಚಾರ ವೇದಿಕೆ (ಈಡಿಗ ಸಮಾಜದ 26 ಪಂಗಡಗಳ ಒಕ್ಕೂಟ) ಮತ್ತು ಆರ್ಯ ಈಡಿಗ ಮಹಿಳಾ ಸಮಾಜ, ಕೇರಳ ಸಮಾಜ ಹಾಗು ಈಡಿಗ ಸಮಾಜ ಮತ್ತು ಬಿಲ್ಲವ ಸಮಾಜದ ವತಿಯಿಂದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಕಾರದೊಂದಿಗೆ ಗುರುವಾರ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯೋತ್ಸವ ಅಂಗವಾಗಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು.
    ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರದೊಂದಿಗೆ ನಗರದ ಹುತ್ತಾಕಾಲೋನಿಯಿಂದ ಆರಂಭಗೊಂಡ ಮೆರವಣಿಗೆ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಹಾಗು ರಂಗಪ್ಪ ವೃತ್ತ ಮೂಲಕ ತಾಲೂಕು ಪಂಚಾಯಿತಿ ಆವರಣ ತಲುಪಿತು.
    ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗರಾಜ್, ಶ್ರೀ ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಎನ್. ನಟರಾಜ್‌, ಕೇರಳ ಸಮಾಜದ ಅಧ್ಯಕ್ಷ ಗಂಗಾಧರ್‌, ಆರ್ಯ ಈಡಿಗ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಭಾಗ್ಯಮ್ಮ ಪುಟ್ಟಸ್ವಾಮಿಗೌಡ, ವೇದಿಕೆ ಗೌರವಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಹಿಳೆಯರು ಆರೋಗ್ಯ ಕಾಳಜಿ ಕುರಿತು ಅರಿವು ಬೆಳೆಸಿಕೊಳ್ಳಿ : ಡಾ. ಎಂ.ವಿ ಅಶೋಕ್

ಭದ್ರಾವತಿ ತಾಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ -2ರ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ರೋಟರಿ ಕ್ಲಬ್ ಹಾಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂಘದ ಎನ್ ಜಿ ಓ ಸದಸ್ಯರುಗಳಿಗೆ ಎನ್‌ಆರ್ ಎಚ್ ಎಂ ಕಾರ್ಯಾಗಾರ ಯುವ ಮುಖಂಡ ಬಿ.ಎಂ ರವಿಕುಮಾರ್ ಉದ್ಘಾಟಿಸಿದರು.
    ಭದ್ರಾವತಿ, ಆ. 31: ಮಹಿಳೆಯರು ಸಾಮಾನ್ಯ ಖಾಯಿಲೆಗಳ ಕುರಿತು ಅರಿವು ಹೊಂದಬೇಕು. ಪ್ರಾಥಮಿಕ ಹಂತದಲ್ಲಿಯೇ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿದಾಗ ಸಂಪೂರ್ಣವಾಗಿ ಗುಣಮುಖರಾಗಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಹೇಳಿದರು.
    ಅವರು ಗುರುವಾರ ತಾಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ -2ರ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ರೋಟರಿ ಕ್ಲಬ್ ಹಾಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂಘದ ಎನ್ ಜಿ ಓ ಸದಸ್ಯರುಗಳಿಗೆ ಎನ್‌ಆರ್ ಎಚ್ ಎಂ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರತಿಯೊಂದು ಸಾಮಾನ್ಯ ಖಾಯಿಲೆಯ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ಕಾರ್ಯಾಗಾರದ ಸದುಪಯೋಗಪಡೆದುಕೊಳ್ಳಬೇಕೆಂದರು.
    ಸ್ತ್ರೀ ರೋಗ, ಪ್ರಸೂತಿ ಹಾಗು ಬಂಜೇತನ ತಜ್ಞೆ ಡಾ. ಎಚ್.ಎಲ್ ವರ್ಷ ಮಹಿಳೆಯರ ಆರೋಗ್ಯ ಕುರಿತು ಮಾಹಿತಿ ನೀಡಿದರು. ಯುವ ಮುಖಂಡ ಬಿ.ಎಂ ರವಿಕುಮಾರ್ ಕಾರ್ಯಾಗಾರ ಉದ್ಘಾಟಿಸಿದರು. ಯೋಜನಾಧಿಕಾರಿ ಮಾಧವ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಎನ್ ಸಿ ಡಿ ಆಪ್ತಸಮಾಲೋಚಕಿ ಶ್ರೀದೇವಿ ಪ್ರಾರ್ಥಿಸಿದರು. ಜ್ಞಾನ ಸಮನ್ವಯಾಧಿಕಾರಿ ಸೌಮ್ಯ ಸ್ವಾಗತಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ. ಸುಶೀಲಬಾಯಿ ನಿರೂಪಿಸಿ, ಯೋಜನೆಯ ಹೊಸಮನೆ ಮೇಲ್ವಿಚಾರಕಿ ಪುಷ್ಪಲತಾ ವಂದಿಸಿದರು.

ಶ್ರೀ ನುಲಿಯ ಚಂದಯ್ಯನವರ 916ನೇ ಜಯಂತ್ಯೋತ್ಸವ

ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕುಳುವ ಸಮಾಜ(ಕೊರಚ-ಕೊರಮ-ಕೊರವ) ಹಾಗು ತಾಲೂಕು ಪಂಚಾಯಿತಿ ಮತ್ತು ನಗರಸಭೆ ಸಹಯೋಗದೊಂದಿಗೆ ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ನುಲಿಯ ಚಂದಯ್ಯನವರ 916ನೇ ಜಯಂತ್ಯೋತ್ಸವದಲ್ಲಿ ಕೊರಚ-ಕೊರಮ-ಕೊರವ ಸಮಾಜದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಆ. 31: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕುಳುವ ಸಮಾಜ(ಕೊರಚ-ಕೊರಮ-ಕೊರವ) ಹಾಗು ತಾಲೂಕು ಪಂಚಾಯಿತಿ ಮತ್ತು ನಗರಸಭೆ ಸಹಯೋಗದೊಂದಿಗೆ ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶ್ರೀ ನುಲಿಯ ಚಂದಯ್ಯನವರ 916ನೇ ಜಯಂತ್ಯೋತ್ಸವ ನಡೆಯಿತು.
    ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ದಲಿತ ನೌಕರರ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಸಿ. ಜಯಪ್ಪ ಹೆಬ್ಬಳಗೆರೆ ಉಪನ್ಯಾಸ ನೀಡಿದರು.
    ತಹಸೀಲ್ದಾರ್ ಗ್ರೇಡ್-2 ವಿ. ರಂಗಮ್ಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ನಗರಸಭೆ ಮಾಜಿ ಸದಸ್ಯ ಶಿವರಾಜ್, ದಲಿತ ನೌಕರರ ಒಕ್ಕೂಟದ ತಾಲೂಕು ಗೌರವಾಧ್ಯಕ್ಷ ಎಂ. ಈಶ್ವರಪ್ಪ, ಯುವ ಮುಖಂಡ ಬಿ.ಎಂ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕೊರಚ-ಕೊರಮ-ಕೊರವ ಸಮಾಜದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮೊದಲು ನಗರದ ರಂಗಪ್ಪ ವೃತ್ತದಿಂದ ತಾಲೂಕು ಪಂಚಾಯಿತಿವರೆಗೂ ಶ್ರೀ ನುಲಿಯ ಚಂದಯ್ಯನವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು. ಶ್ರೀನಿವಾಸ್ ಜಾಜೂರ್ ನಿರೂಪಿಸಿ, ನಾಗೇಶ್ ಸ್ವಾಗತಿಸಿ, ನವೀನ್ ವಂದಿಸಿದರು.

ರಾಖಿಯನ್ನು ಕಟ್ಟಿಸಿಕೊಂಡ ಕೈಗಳು ಸದಾ ಶ್ರೇಷ್ಠ ಕಾರ್ಯಗಳಲ್ಲಿ ತೊಡಗಿರಲಿ : ಮಾಲಾ ಅಕ್ಕ

ಭದ್ರಾವತಿ ನ್ಯೂಟೌನ್‌ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರೋಟರಿ ಕ್ಲಬ್‌ ಸಹಯೋಗದೊಂದಿಗೆ ಪವಿತ್ರ ರಕ್ಷಾ ಬಂಧನ ಆಚರಿಸಲಾಯಿತು.
    ಭದ್ರಾವತಿ, ಆ. ೩೧ : ನಗರದ ನ್ಯೂಟೌನ್‌ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರೋಟರಿ ಕ್ಲಬ್‌ ಸಹಯೋಗದೊಂದಿಗೆ ಪವಿತ್ರ ರಕ್ಷಾ ಬಂಧನ ಆಚರಿಸಲಾಯಿತು.
    ವಿಶ್ವ ವಿದ್ಯಾಲಯದ ಮಾಲಾ ಅಕ್ಕ ಮಾತನಾಡಿ,  ರಾಖಿಯನ್ನು ಕೈಗೆ ಕಟ್ಟಲಾಗುತ್ತದೆ. ಕೈಗಳು ನಾವು ಮಾಡುವ ಕರ್ಮಗಳ
ಸೂಚಕವಾಗಿದೆ. ನಮ್ಮ ಕರ್ತವ್ಯಗಳನ್ನು ನಾವು ಹೆಚ್ಚಾಗಿ ಕೈಗಳಿಂದಲೇ ಮಾಡುತ್ತೇವೆ. ಕೆಲವು ಕಾರ್ಯಗಳನ್ನು ಮಾಡಲು ಸಾಧ್ಯವಾಗದಿದ್ದರೆ "ನಮ್ಮ ಕೈಗಳು ಬಂಧಿತವಾಗಿವೆ" ಎಂದು ಹೇಳುತ್ತೇವೆ. ನಮ್ಮಿಂದ ತಪ್ಪು ಕರ್ಮಗಳು ಆಗದಂತೆ ರಕ್ಷಾ ಬಂಧನವು ನಮ್ಮನ್ನು "ಕಟ್ಟಿಹಾಕುತ್ತದೆ" ಅಥವಾ ತಪ್ಪಿಸುತ್ತದೆ. ರಾಖಿಯನ್ನು ಕಟ್ಟಿಸಿಕೊಂಡ ಕೈಗಳು ಸದಾ ಶ್ರೇಷ್ಠ ಕಾರ್ಯಗಳಲ್ಲಿ ತೊಡಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
    ಕೈಗೆ ಕಟ್ಟಿದ ರಾಖಿಯ ದಾರವು ಭಗವಂತನ ಕೈಯಲ್ಲಿದೆ. ಇದುವೇ ʻʻಬಂಧನʼʼದ ಅರ್ಥವಾಗಿದೆ. ನಮ್ಮ ಜೀವನದ ಸೂತ್ರವು ಭಗವಂತನ ಕೈಯಲ್ಲಿ ಸುರಕ್ಷಿತವಾಗಿದೆ. ಭಗವಂತನೊಬ್ಬನೇ ನಮಗೆ ರಕ್ಷಕನು, ಇತರರು ಯಾರೂ ಅಲ್ಲ. ಕೆಟ್ಟ ಕಾರ್ಯಗಳು ನಮ್ಮಿಂದ ಆಗದಿರುವುದು  ಇದುವೇ ರಕ್ಷಣೆಯ ಅರ್ಥ, ಜ್ಞಾನ ಮತ್ತು ಅನುಭೂತಿಯಿಂದ ಮಾತ್ರ ಇದು ಸಾಧ್ಯ. ಈ ಜಗತ್ತಿನಲ್ಲಿ ಸರ್ವರಿಗೂ ರಕ್ಷಣೆಯ ಅವಶ್ಯಕತೆ ಇದೆ. ನಾವು ಒಬ್ಬ ಭಗವಂತನ ಛತ್ರ ಛಾಯೆಯಲ್ಲಿ ಇರುವುದೇ ನಿಜವಾದ ರಕ್ಷಣೆಯಾಗಿದೆ ಎಂದರು.
    ಸಹೋದರ - ಸಹೋದರಿ ಸಂಬಂಧವು ದಿವ್ಯತೆಯನ್ನು ಸೂಚಿಸುತ್ತದೆ. ನಮ್ಮ ಎಲ್ಲ ಸಂಬಂಧಗಳಲ್ಲಿ ಸ್ಥಿತಿಯನ್ನು ತರಿಸುತ್ತದೆ. ಈ ದಿವ್ಯ ಸಂಬಂಧವು ಸತ್ಯ ಪ್ರೇಮ, ನಂಬಿಕೆ, ವಿಶ್ವಾಸ, ನಿಸ್ವಾರ್ಥತೆ ಮತ್ತು ಸ್ವಚ್ಛತೆಯಿಂದ ಮಾತ್ರ ರೂಪುಗೊಳ್ಳುತ್ತದೆ. ರಾಖಿಯ ದಾರವು ಪವಿತ್ರತೆ, ಶಾಂತಿ ಹಾಗೂ ಸಮೃದ್ಧಿಯನ್ನೂ ಹಾಗು ದಾರದ ಗಂಟು ದಿವ್ಯ ಉದ್ದೇಶದ ಪ್ರತಿ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ರಾಖಿಯ ಹೂ ನಮ್ಮ ಜೀವನದಲ್ಲಿ ನಾವು ಧಾರಣೆ ಮಾಡಬೇಕಾಗಿರುವ ದಿವ್ಯ ಗುಣಗಳ ಪ್ರತೀಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌  ಹಾಗು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಭಕ್ತರು  ಪಾಲ್ಗೊಂಡಿದ್ದರು.  ಆಶ್ರಮದ ಆಶ್ರಮದ ಸೇವಾಕರ್ತರು ಉಪಸ್ಥಿತರಿದ್ದರು.
    ಮಾಲಾ ಅಕ್ಕ ಪ್ರತಿಯೊಬ್ಬರಿಗೂ ರಾಖಿ ಕಟ್ಟುವ ಮೂಲಕ ಸಿಹಿ ವಿತರಿಸಿದರು. ಬ್ರಹ್ಮ ಭೋಜನದ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಕುಡಿದ ಅಮಲಿನಲ್ಲಿ ತನ್ನ ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪುತ್ರ


    ಭದ್ರಾವತಿ, ಆ. 30: ಮಗನೊಬ್ಬ ಕುಡಿದ ಅಮಲಿನಲ್ಲಿ ತನ್ನ ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ  ನಡೆದಿದೆ.
     ಸುಲೋಚನಮ್ಮ(57) ಕೊಲೆಯಾದ ದುರ್ದೈವಿ. ಮಗ ಸಂತೋಷನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
    ಟ್ರ್ಯಾಕ್ಟರ್‌ ಚಾಲಕನಾಗಿರುವ  ಸಂತೋಷ್ ಕುಡಿತದ ಚಟಕ್ಕೆ ಬಲಿಯಾಗಿದ್ದು, ಆಗಾಗ ತಾಯಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.
    ಇದರಿಂದ ಬೇಸತ್ತ ತಾಯಿ ಸುಲೋಚನಮ್ಮ ಮಗನೊಂದಿಗೆ ವಾಸವಿರದೆ  ಪ್ರತ್ಯೇಕವಾಗಿ ವಾಸವಾಗಿದ್ದರು.  ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ತಾಯಿ ಮನೆಗೆ ಬಂದಿದ್ದ ಸಂತೋಷ್ ಹಣ ಕೊಡುವಂತೆ ಪೀಡಿಸಿದ್ದಾನೆ. ಹಣ ನೀಡಲು ನಿರಾಕರಿಸಿದ ತಾಯಿಯೊಂದಿಗೆ ಜಗಳಕ್ಕಿಳಿದು ಅಲ್ಲಿಯೇ ಇದ್ದ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
      ಸೋಮವಾರ ಮಧ್ಯಾಹ್ನ ಪಕ್ಕದ ಮನೆಯ ಮಹಿಳೆಯೊಬ್ಬರು ಸುಲೋಚನಮ್ಮ ಅವರ ಮನೆಗೆ ಹೋದಾಗ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ. ಸುಲೋಚನಮ್ಮ ಅವರ ಮೊದಲ ಮಗ ಮಂಗಳವಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್  ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, August 30, 2023

ಶ್ರೀ ಕೃಷ್ಣ ವೇಷ ಪ್ರದರ್ಶನ : 200ಕ್ಕೂ ಹೆಚ್ಚು ಮಕ್ಕಳು

ಭದ್ರಾವತಿಯಲ್ಲಿ ತರುಣಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ವೇಷ ಪ್ರದರ್ಶನ ಮಂಗಳವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
    ಭದ್ರಾವತಿ : ತರುಣಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ವೇಷ ಪ್ರದರ್ಶನ ಮಂಗಳವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎಸ್ ರಾಜೇಶ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ತರುಣ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
    ನಗರದ 35 ಶಾಲೆಗಳ 5 ವರ್ಷದೊಳಗಿನ ಸುಮಾರು 200ಕ್ಕೂ ಹೆಚ್ಚು ಮಕ್ಕಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಬಹುಮಾನ ಹಾಗು ಸಿಹಿ ವಿತರಿಸಲಾಯಿತು.
    ಲಯನ್ಸ್ ಕ್ಲಬ್ ಖಜಾಂಚಿ ಎನ್. ಶ್ರೀನಿವಾಸ್, ತರುಣ ಭಾರತಿ ವಿದ್ಯಾ ಕೇಂದ್ರದ ಕಾರ್ಯದರ್ಶಿ ಗಿರೀಶ್, ತರುಣ ಭಾರತಿ ವಿಶ್ವಸ್ಥ ಮಂಡಳಿ ಪ್ರಮುಖರಾದ ಡಾ. ಡಾ. ಮಹಾಬಲೇಶ್ವರ, ಮಧುಕರ್ ಕಾನಿಟ್ಕರ್, ಎಸ್.ಎನ್ ಸುಭಾಷ್, ನಂದಿನಿ ಮಲ್ಲಿಕಾರ್ಜುನ, ಶಿಶುಮಂದಿರದ ಸಂಚಾಲಕಿ ಸರ್ವಮಂಗಳ, ಸುಜಾತ, ಸವಿತಾ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು.

ʻಗೃಹ ಲಕ್ಷ್ಮೀʼ ಯೋಜನೆ ನೇರ ಸಂವಾದ ಯಶಸ್ವಿ

ನಗರಸಭೆಯಿಂದ ೯ ಸ್ಥಳಗಳಲ್ಲಿ ವ್ಯವಸ್ಥೆ

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ೨,೦೦೦ ರು. ನೀಡುವ ಮಹತ್ವಾಕಾಂಕ್ಷೆ  ʻಗೃಹ ಲಕ್ಷ್ಮೀ ʼ ಯೋಜನೆಗೆ ಬುಧವಾರ ಕಾಂಗ್ರೆಸ್‌ ಯುವ ನಾಯಕ ರಾಹುಲ್‌ ಗಾಂಧಿ ಅವರು ಮೈಸೂರಿನಲ್ಲಿ ಚಾಲನೆ ನೀಡಿದ್ದು, ಈ ಸಂಬಂಧ ಭದ್ರಾವತಿ ನಗರದ ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇರ  ಸಂವಾದ ಕಾರ್ಯಕ್ರಮ ನಗರಸಭೆ ಮಾಜಿ ಅಧ್ಯಕ್ಷ  ಬಿ.ಕೆ ಮೋಹನ್‌ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಆ. ೩೦ :  ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ೨,೦೦೦ ರು. ನೀಡುವ ಮಹತ್ವಾಕಾಂಕ್ಷೆ  ʻಗೃಹ ಲಕ್ಷ್ಮೀ ʼ ಯೋಜನೆಗೆ ಬುಧವಾರ ಕಾಂಗ್ರೆಸ್‌ ಯುವ ನಾಯಕ ರಾಹುಲ್‌ ಗಾಂಧಿ ಅವರು ಮೈಸೂರಿನಲ್ಲಿ ಚಾಲನೆ ನೀಡಿದ್ದು, ಈ ಸಂಬಂಧ ನಗರದ ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇರ  ಸಂವಾದ ಕಾರ್ಯಕ್ರಮ ನಗರಸಭೆ ಮಾಜಿ ಅಧ್ಯಕ್ಷ  ಬಿ.ಕೆ ಮೋಹನ್‌ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ನಗರಸಭೆ ವತಿಯಿಂದ ನಗರ ವ್ಯಾಪ್ತಿಯಲ್ಲಿ ಒಟ್ಟು ೯ ಸ್ಥಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಕಲ್ಪಿಸಲಾಗಿತ್ತು.  ಆಯಾ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು.
    ಕಾರ್ಯಕ್ರಮದಲ್ಲಿ ʻಗೃಹಲಕ್ಷ್ಮೀʼ ಯೋಜನೆ ಫಲಾನುಭವಿಗಳು, ಮಹಿಳಾ ಸಂಘ-ಸಂಸ್ಥೆಗಳ ಪ್ರಮುಖರು, ಕಾಂಗ್ರೆಸ್‌ ಮಹಿಳಾ ಘಟಕದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
    ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇರ  ಸಂವಾದ ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ನಾಗರಾಜಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್‌, ನಗರಸಭಾ ಸದಸ್ಯಾದ ಜಾರ್ಜ್‌, ಆರ್.‌ ಶ್ರೇಯಸ್‌, ಶಶಿಕಲಾ ಬಿ.ಎಸ್‌ ನಾರಾಯಣಪ್ಪ, ಅನುಪಮ ಚನ್ನೇಶ್‌, ಪೌರಾಯುಕ್ತ ಎಚ್.ಎಂ ಮನುಕುಮಾರ್‌, ಕಂದಾಯಾಧಿಕಾರಿ ರಾಜ್‌ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಎಸ್.‌ ಕುಮಾರ್‌  ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಐಎಸ್‌ಎಲ್‌ ನಿವೃತ್ತ ಉದ್ಯೋಗಿ ಮಂಜುನಾಥ್‌ ಯಲ್ಲೋಜಿ ನಿಧನ

ಮಂಜುನಾಥ್‌ ಯಲ್ಲೋಜಿ
    ಭದ್ರಾವತಿ, ಆ. ೩೦: ವಿಐಎಸ್‌ಎಲ್‌ ಕಾರ್ಖಾನೆ ನಿವೃತ್ತ ಉದ್ಯೋಗಿ, ಕಬಡ್ಡಿ ಕ್ರೀಡಾ ತರಬೇತಿದಾರ ಮಂಜುನಾಥ್‌ ಯಲ್ಲೋಜಿ(೬೬) ಮಂಗಳವಾರ ರಾತ್ರಿ ನಿಧನ ಹೊಂದಿದರು.
    ಇಬ್ಬರು ಗಂಡು ಇದ್ದಾರೆ. ವಿಐಎಸ್‌ಎಲ್‌ ಅತಿಥಿ ಗೃಹದಲ್ಲಿ ಪ್ರಭಾರ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಮಂಜುನಾಥ್‌ರವರು ಮೂಲತಃ ಕಬಡ್ಡಿ ಕ್ರೀಡಾಪಟು ಆಗಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಅಲ್ಲದೆ ತರಬೇತಿದಾರರಾಗಿ  ಯುವ ಕ್ರೀಡಾಪಟುಗಳಿಗೆ ಮಾರ್ಗದರ್ಶಕರಾಗಿದ್ದರು.
    ಇವರ ನಿಧನಕ್ಕೆ ವಿಐಎಸ್‌ಎಲ್‌ ಕಾರ್ಖಾನೆ  ಕಾರ್ಯಪಾಲಕ ನಿರ್ದೇಶಕ ಬಿ.ಎಲ್‌ ಚಂದ್ವಾನಿ, ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.‌ ಪ್ರವೀಣ್‌ಕುಮಾರ್‌, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್‌,  ಅಧಿಕಾರಿಗಳು, ಕಾರ್ಮಿಕರು ಹಾಗು ಗುತ್ತಿಗೆ ಕಾರ್ಮಿಕರು ಮತ್ತು ನಿವೃತ್ತ ಕಾರ್ಮಿಕರು, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Tuesday, August 29, 2023

ಆ.೩೧ರಂದು ಬ್ರಹ್ಮಶ್ರೀ ನಾರಾಯಣಗುರುಗಳ ೧೬೯ನೇ ಜಯಂತ್ಯೋತ್ಸವ

ಆ.೩೧ರಂದು ಬ್ರಹ್ಮಶ್ರೀ ನಾರಾಯಣಗುರುಗಳ ೧೬೯ನೇ ಜಯಂತ್ಯೋತ್ಸವ ಕುರಿತು ಮಂಗಳವಾರ ಭದ್ರಾವತಿಯಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷರು, ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.  
    ಭದ್ರಾವತಿ, ಆ. ೨೯ : ಶ್ರೀ ನಾರಾಯಣಗುರು ವಿಚಾರ ವೇದಿಕೆ(ಈಡಿಗ ಸಮಾಜದ ೨೬ ಪಂಗಡಗಳ ಒಕ್ಕೂಟ) ಮತ್ತು ಆರ್ಯ ಈಡಿಗ ಮಹಿಳಾ ಸಮಾಜ, ಕೇರಳ ಸಮಾಜ ಹಾಗು ಈಡಿಗ ಸಮಾಜ ಮತ್ತು ಬಿಲ್ಲವ ಸಮಾಜದ ವತಿಯಿಂದ ರಾಷ್ಟ್ರೀ ಯ ಹಬ್ಬಗಳ ಆಚರಣಾ ಸಮಿತಿ ಸಹಕಾರದೊಂದಿಗೆ ಆ.೩೧ರಂದು ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಮಧ್ಯಾಹ್ನ ೧೨ ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಎನ್. ನಟರಾಜ್‌ ಹೇಳಿದರು.
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರು ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿವೆ. ಅವರ ೧೬೯ನೇ ಜಯಂತ್ಯೋತ್ಸವ ಅರ್ಥಪೂರ್ಣವಾಗಿ ನಡೆಯಬೇಕಾಗಿದ್ದು, ಈ ನಿಟ್ಟಿನಲ್ಲಿ ವೇದಿಕೆ ಹೆಚ್ಚಿನ ಶ್ರಮವಹಿಸುತ್ತಿದೆ ಎಂದರು.
    ಅಂದು ಬೆಳಿಗ್ಗೆ ೧೦.೩೦ಕ್ಕೆ ಬ್ರಹ್ಮಶ್ರೀ ನಾರಾಯಣಗುರು ಭಾವಚಿತ್ರದೊಂದಿಗೆ ಲೋಯರ್‌ ಹುತ್ತಾದಿಂದ ತಾಲೂಕು ಪಂಚಾಯಿತಿವರೆಗೂ ಮೆರವಣಿಗೆ ನಡೆಯಲಿದ್ದು, ನಂತರ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್‌ ಉದ್ಘಾಟಿಸಲಿದ್ದಾರೆ. ತಹಸೀಲ್ದಾರ್‌ ನಾಗರಾಜಪ್ಪ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಣ್ಣಪ್ಪ ಮಳಿಮಠ್‌ ಉಪನ್ಯಾಸ ನೀಡಲಿದ್ದಾರೆ.
    ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್‌ ಈರೆಗೊಡು, ಕೇರಳ ಸಮಾಜದ ಅಧ್ಯಕ್ಷ ಗಂಗಾಧರ್‌, ಆರ್ಯ ಈಡಿಗ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಭಾಗ್ಯಮ್ಮ ಪುಟ್ಟಸ್ವಾಮಿಗೌಡ, ವೇದಿಕೆ ಗೌರವಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಕೋಗಲೂರು ತಿಪ್ಪೇಸ್ವಾಮಿ, ಗಂಗಾಧರ್‌ ಸೇರಿದಂತೆ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಾಲಯ ಲೋಕಾರ್ಪಣೆ

ಭದ್ರಾವತಿ ಆನೆಕೊಪ್ಪ, ಎಂಪಿಎಂ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಾಲಯದ ಆಲಯ ಪ್ರವೇಶ ಮತ್ತು ಸ್ಥಿರಬಿಂಬ ಪ್ರತಿಷ್ಠಾಪನೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಈ ಸಂಬಂಧ ನೂತನ ವಿಗ್ರಹಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ಭದ್ರಾವತಿ, ಆ. 29: ನಗರದ ಆನೆಕೊಪ್ಪ, ಎಂಪಿಎಂ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಾಲಯದ ಆಲಯ ಪ್ರವೇಶ ಮತ್ತು ಸ್ಥಿರಬಿಂಬ ಪ್ರತಿಷ್ಠಾಪನೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
    ಬೆಳಿಗ್ಗೆ ನಾಗಪೂಜೆ, ಆಲಯ ಪ್ರವೇಶ, ಗೋ ಪೂಜೆ, ಮಹಾಪ್ರತಿಷ್ಠೆ, ನಂತರ ಚಂಡಿಕಾ ಹೋಮ, ಮಹಾಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಶ್ರೀ ಕ್ಷೇತ್ರ ನಾಗರಕಟ್ಟೆ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
    ಆನೆಕೊಪ್ಪ, ಉಜ್ಜನಿಪುರ, ಕಾಗದನಗರ, ತಿಮ್ಲಾಪುರ, ಬುಳ್ಳಾಪುರ, ಜೆಪಿಎಸ್ ಕಾಲೋನಿ, ಸುರಗಿತೋಪು, ಹುಡ್ಕೋ ಕಾಲೋನಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತಾಧಿಗಳು ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾದರು.

ಭದ್ರಾವತಿ ವಿವಿಧೆಡೆ ಜಿಲ್ಲಾ ಯೋಜನಾ ನಿರ್ದೇಶಕರ ಭೇಟಿ : ಪರಿಶೀಲನೆ

ಶಿವಮೊಗ್ಗ ಜಿಲ್ಲಾ ನಿರ್ದೇಶಕರಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಅಧಿಕಾರಿ ಮನೋಹರ್ ಅವರು ಮಂಗಳವಾರ ಭದ್ರಾವತಿ ನಗರದ ವಿವಿಧೆಡೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
    ಭದ್ರಾವತಿ, ಡಿ. ೨೯ : ಶಿವಮೊಗ್ಗ ಜಿಲ್ಲಾ ನಿರ್ದೇಶಕರಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಅಧಿಕಾರಿ ಮನೋಹರ್ ಅವರು ಮಂಗಳವಾರ ನಗರದ ವಿವಿಧೆಡೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
    ನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾ ಭವನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನ ಹಾಗು ಕನಕಮಂಟಪ ಮೈದಾನದ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಪೌರಕಾರ್ಮಿಕರ ವಸತಿ ಸಮುಚ್ಚಯ ಹಾಗು ಪುಟ್ ಪಾತ್ ಪರಿಶೀಲನೆ ನಡೆಸಿದರು.

    ನಗರಸಭೆ ಕಂದಾಯಾಧಿಕಾರಿ ರಾಜ್ ಕುಮಾರ್, ಕಿರಿಯ ಇಂಜಿನಿಯರ್ ಗಳಾದ ಕೆ. ಪ್ರಸಾದ್, ಸಂತೋಷ್ ಪಾಟೀಲ್, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಡಿ. ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, August 28, 2023

ಎಸ್‌ಎವಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಭದ್ರಾವತಿ ನ್ಯೂಟೌನ್‌ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಎಸ್‌ಎವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡು ಕೀರ್ತಿ ತಂದಿದ್ದಾರೆ.
    ಭದ್ರಾವತಿ, ಆ. ೨೮:  ನಗರದ ನ್ಯೂಟೌನ್‌ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಎಸ್‌ಎವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡು ಕೀರ್ತಿ ತಂದಿದ್ದಾರೆ.
    ನಗರದ ವಿಐಎಸ್‌ಎಲ್‌  ಕ್ರೀಡಾಂಗಣದಲ್ಲಿ ಸಂತ ಚಾರ್ಲ್ಸ್ ಪದವಿ ಪೂರ್ವ ಕಾಲೇಜಿನ ಸಹಕಾರದೊಂದಿಗೆ ಜರುಗಿದ ೨ ದಿನಗಳ  21 ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಎಸ್. ಧನುಶ್ ವೈಯಕ್ತಿಕವಾಗಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದು,  ಅಲ್ಲದೆ  ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಹಾಗೂ ಒಟ್ಟು ಸಮಗ್ರ ಪ್ರಶಸ್ತಿಯನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.
    ಈ ಕಾಲೇಜು ಕಳೆದ ೫ ವರ್ಷಗಳಿಂದ ನಿರಂತರವಾಗಿ ಸಮಗ್ರ ಪ್ರಶಸ್ತಿ ಪಡೆಯುತ್ತಿರುವುದು ವಿಶೇಷವಾಗಿದ್ದು, ವಿಜೇತ ವಿದ್ಯಾರ್ಥಿಗಳನ್ನು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆಶೀರ್ವದಿಸಿದ್ದಾರೆ.  
    ಕಾಲೇಜಿನ  ಆಡಳಿತಾಧಿಕಾರಿ ಬಿ. ಜಗದೀಶ್‌,   ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಲೋಹಿತ್, ಕಾಲೇಜಿನ ಉಪನ್ಯಾಸಕರು ಹಾಗು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.    

ಇಸ್ಪೀಟ್‌ ಅಡ್ಡೆ ಮೇಲೆ ದಾಳಿ : ಪ್ರಕರಣ ದಾಖಲು

ಭದ್ರಾವತಿ, ಆ. ೨೮ : ಹಳೇನಗರ ವ್ಯಾಪ್ತಿಯಲ್ಲಿ ಪ್ರವೀಣ್ ಎಂಬ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ತಂಡವನ್ನು ಪತ್ತೆಹಚ್ಚಲಾಗಿದೆ.
  ನಗರಸಭೆ ಉದ್ಯಾನವನ ಹಿಂಭಾಗದಲ್ಲಿರುವ ಭದ್ರಾ ಹೊಳೆಯ ದಡದಲ್ಲಿ ಇಸ್ಪೀಟು ಜೂಜಾಟದಲ್ಲಿ ೪-೬ ಜನರ ತಂಡ ಜೂಜಾಟದಲ್ಲಿ ತೊಡಗಿದ್ದನ್ನು ಪತ್ತೆಮಾಡಿ ಪ್ರಕರಣ ದಾಖಲಿಸಲಾಗಿದೆ.

ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಸೆ.೩೧ರಿಂದ ೩ ದಿನಗಳ ಕಾಲ ಆರಾಧನಾ ಮಹೋತ್ಸವ

ಶ್ರೀ ರಾಘವೇಂದ್ರ ಗುರು ಸಾರ್ವಭೌಮರು
    ಭದ್ರಾವತಿ, ಆ. ೨೮: ಹಳೇನಗರದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಜ ಸೇವಾ ಸಮಿತಿಯಿಂದ ೩೫೨ನೇ ರಥೋತ್ಸವ ಮತ್ತು ಆರಾಧನಾ ಮಹೋತ್ಸವ ಆ.೩೧ ರಿಂದ ಸೆ.೨ರವರೆಗೆ ೩ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
    ಉಡುಪಿ ಪೇಜಾವರ ಶ್ರೀ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಕೃಪಾಶೀರ್ವಾದದೊಂದಿಗೆ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೨ನೇ ಮಹೋತ್ಸವ ಮತ್ತು ಆರೋಧನಾ ಮಹೋತ್ಸವ ಜರುಗಲಿದೆ. ಪ್ರತಿ ದಿನ ಬೆಳಿಗ್ಗೆ ೬ ಗಂಟೆಗೆ ಸುಪ್ರಭಾತ, ೭ಕ್ಕೆ ಪಂಚಾಮೃತ ಅಭಿಷೇಕ, ೮ಕ್ಕೆ ಭಕ್ತರ ಮನೆಗಳಲ್ಲಿ ಪಾದಪೂಜೆ ಮತ್ತು ೮.೩೦ಕ್ಕೆ ಡೋಲೋತ್ಸವ ನಡೆಯಲಿದೆ.
    ಆ.೩೧ರಂದು ಗಾಂಧಿನಗರ, ಕೇಶವಪುರ ಹಾಗು ಹೊಸಮನೆ ಬಡಾವಣೆ ವ್ಯಾಪ್ತಿಯಲ್ಲಿ, ಸೆ.೧ರಂದು ಹಳೇನಗರದ ಬ್ರಾಹ್ಮಣರ ಬೀದಿಯ  ಭಕ್ತರ ಮನೆಗಳಲ್ಲಿ ಹಾಗು ೨ರಂದು ಮಠದಲ್ಲಿ ಪಾದಪೂಜೆ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿ ಸಹ ಮಠದಲ್ಲಿ ತುಲಾಭಾರ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.

ಅತ್ಯುತ್ತಮ ವಿಜ್ಞಾನ, ತಂತ್ರಜ್ಞಾನ ಸಾಕ್ಷ್ಯಚಿತ್ರಕ್ಕಾಗಿ ಡಾ. ದೇಬ್ಜಾನಿ ಹಾಲ್ಡರ್‌ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಆರ್‌ವಿ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಮತ್ತು ಕ್ರಿಯೇಟಿವ್ ಆರ್ಟ್ಸ್‌ನಲ್ಲಿ ಫಿಲ್ಮ್ ಮೇಕಿಂಗ್ ಕಾರ್ಯಕ್ರಮದ ಮುಖ್ಯಸ್ಥೆ ಡಾ. ದೇಬ್ಜಾನಿ ಹಾಲ್ಡರ್ ಅವರು ೬೯ನೇ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
    ಬೆಂಗಳೂರು, ಆ. ೨೮: ಆರ್‌ವಿ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಮತ್ತು ಕ್ರಿಯೇಟಿವ್ ಆರ್ಟ್ಸ್‌ನಲ್ಲಿ ಫಿಲ್ಮ್ ಮೇಕಿಂಗ್ ಕಾರ್ಯಕ್ರಮದ ಮುಖ್ಯಸ್ಥೆ ಡಾ. ದೇಬ್ಜಾನಿ ಹಾಲ್ಡರ್ ಅವರು ೬೯ನೇ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
    ಅವರ 'ಎಥೋಸ್ ಆಫ್ ಡಾರ್ಕ್‌ನೆಸ್' ಸಾಕ್ಷ್ಯಚಿತ್ರಕ್ಕಾಗಿ ಅತ್ಯುತ್ತಮ ವಿಜ್ಞಾನ ಮತ್ತು ತಂತ್ರಜ್ಞಾನ ಚಲನಚಿತ್ರ ಪ್ರಶಸ್ತಿ ಲಭಿಸಿದೆ.
    ಸಾಕ್ಷ್ಯಚಿತ್ರವು ಸಿನಿಮಾದ ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ ಮತ್ತು ಅದನ್ನು ಬೆಳೆಯಲು ಕಾರಣವಾದವರ ಕುರಿತಾಗಿನ ಉದ್ಯಮದ ಕುರುಡುತನವನ್ನು ವಿವರಿಸುತ್ತದೆ. ದೃಶ್ಯಗಳು ಮತ್ತು ಪ್ರತಿಭೆಗಳಿಗೆ ಸಮಾಜದ ಹೊಗಳಿಕೆಯ ನಡುವೆ, ಇದರ ನಿಜವಾದ ನಾಯಕರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಈ ಚಿತ್ರವು ಈ ನಿರ್ಲಕ್ಷಿತ ಸಿನಿಮಾ ತಂತ್ರಜ್ಞಾನ ಜಗತ್ತಿನ ನಿಜವಾದ ನಾಯಕರನ್ನು ಪರಿಚಯಿಸಿಕೊಡುವ ಯತ್ನ ಮಾಡುತ್ತದೆ.
    ಡಾ. ದೇಬ್ಜಾನಿ ಹಾಲ್ಡರ್ ಪ್ರತಿಕ್ರಿಯಿಸಿ, '೬೯ ನೇ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಈ ಅರ್ಹವಾದ ಮನ್ನಣೆಗಾಗಿ ನಾವು ನಿಜವಾಗಿಯೂ ಗೌರವ ಮತ್ತು ಕೃತಜ್ಞರಾಗಿರುತ್ತೇವೆ. 'ಎಥೋಸ್ ಆಫ್ ಡಾರ್ಕ್ನೆಸ್' ಸಾಕ್ಷ್ಯಚಿತ್ರವು ಸಿನಿಮಾದಲ್ಲಿ ಆಗಾಗ್ಗೆ ಕಡೆಗಣಿಸಲ್ಪಟ್ಟ ಅಂಶದ ಮೇಲೆ ಬೆಳಕು ಚೆಲ್ಲುತ್ತದೆ. ಪರದೆಯ ಹಿಂದೆ ಕೆಲಸ ಮಾಡುವವರು ಅಪರಿಚಿತರಾಗಿರುತ್ತಾರೆ. ನನ್ನ ಸಹ ನಿರ್ದೇಶಕ ಅವಿಜಿತ್ ಬ್ಯಾನರ್ಜಿ ಸೇರಿದಂತೆ ನನ್ನ ತಂಡದ ಎಲ್ಲಾ ಸದಸ್ಯರಿಗೆ ನಾನು ಕೃತಜ್ಞನಾಗಿದ್ದೇನೆ' ಎಂದರು.
    ಆರ್‌ವಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ವೈ.ಎಸ್.ಆರ್. ಮೂರ್ತಿ, ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಮತ್ತು ಕ್ರಿಯೇಟಿವ್ ಆರ್ಟ್ಸ್ ಕುಲಪತಿ ಡಾ.ಪಿಯುಷ್ ರಾಯ್ ಮಾತನಾಡಿ, ಡಾ. ದೇಬ್ಜಾನಿ ಹಾಲ್ಡರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಭೂಮಿ ಮೇಲೆ ಜೀವಿಗಳಿಗೆ ಮಳೆ ಇಲ್ಲದೆ ಬದುಕಿಲ್ಲ : ಡಾ.ಎಸ್.ಎಸ್ ಸತ್ಯನಾರಾಯಣ

ಭದ್ರಾವತಿ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ನಾಡು-ನುಡಿ ವೇದಿಕೆ ಭೂಮಿಕಾ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ಕವಿಗಳ ಋತು ವಿಲಾಸ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ.ಎಚ್.ಎಸ್ ಸತ್ಯನಾರಾಯಣ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಆ. ೨೮ : ಮಳೆ ಇಲ್ಲದೆ ಭೂಮಿ ಮೇಲೆ ಯಾವ ಜೀವಿಯೂ ಬದುಕುಲಾರದು. ಈ ಹಿನ್ನಲೆಯಲ್ಲಿ ಮಳೆ ಬರಲೇ ಬೇಕು. ಕವಿಗಳ ಆಶಯ ಸಹ ಇದೆ ಆಗಿದ್ದು, ಈ ನಿಟ್ಟಿನಲ್ಲಿ ಕನ್ನಡದ ಕವಿಗಳು ವರ್ಷದ ಮಳೆ ಋತು ಕುರಿತು ತಮ್ಮದೇ ಭಾವನೆ ವ್ಯಕ್ತಪಡಿಸಿದ್ದಾರೆಂದು ವಿಮರ್ಶಕ ಡಾ.ಎಚ್.ಎಸ್ ಸತ್ಯನಾರಾಯಣ ಹೇಳಿದರು.
    ಅವರು ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ನಾಡು-ನುಡಿ ವೇದಿಕೆ ಭೂಮಿಕಾ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ಕವಿಗಳ ಋತು ವಿಲಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಳೆಯಿಲ್ಲದೆ ಇಳೆಯುಂಟೆ? ಭೂಮಿಯ ಮೇಲಿನ ಜೀವಕೋಟಿ ಬದುಕುಳಿಯಲು ಮಳೆ ಬೇಕು. ಹಾಗೆಂದೇ ಕನ್ನಡ ಕವಿಗಳು ವರ್ಷ ಋತುವನ್ನು ಬಣ್ಣಿಸಿರುವ ಪರಿ ಅನನ್ಯವಾಗಿದೆ. ಪಂಪ, ರನ್ನ, ಹರಿಹರ, ಕುಮಾರವ್ಯಾಸ, ರತ್ನಾಕರವರ್ಣಿಯಿಂದ ಮೊದಲ್ಗೊಂಡು ಆಧುನಿಕ ಕವಿಗಳು ಮಳೆಯನ್ನು ಜೀವನಾಡಿಯಾಗಿ ಕಂಡಿರುವ ಬಗೆಯನ್ನು  ವಿವರಿಸಿದರು.
    ಬಿಎಂಶ್ರೀ, ಬೇಂದ್ರೆ, ಕುವೆಂಪು, ಪುತೀನ ಕೆ.ಎಸ್ ನರಸಿಂಹಸ್ವಾಮಿ, ಜಿ.ಎಸ್ ಶಿವರುದ್ರಪ್ಪ, ಕಣವಿ, ನಿಸಾರ್ ಅಹಮದ್, ಸು.ರಂ ಎಕ್ಕುಂಡಿ ಕಂಬಾರ, ಎಂ.ಆರ್ ಕಮಲ, ಪ್ರತಿಭಾ ನಂದಕುಮಾರ್ ಮುಂತಾದವರ ಕವಿತೆಗಳಲ್ಲಿ ಚಿತ್ರಿತವಾಗಿರುವ ಮಳೆಯ ವರ್ಣನೆಯನ್ನು ಸಭೆಗೆ ಪರಿಚಯಿಸಿದರು. ಅಲ್ಲದೆ ಜನಪದದ ಅನೇಕ ಮಳೆಯ ಹಾಡುಗಳನ್ನು ಉಲ್ಲೇಖಿಸುತ್ತಾ ಕನ್ನಡದ ಸುಪ್ರಸಿದ್ಧ ಕವಿಗಳ ರಚನೆಗಳನ್ನು ಚರ್ಚಿಸಿದರು.
    ವೇದಿಕೆ ಅಧ್ಯಕ್ಷ ಅಧ್ಯಕ್ಷ ಡಾ. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಕವಿಗಳು ಕಂಡ ಋತು ವಿಲಾಸವನ್ನು ಅಭ್ಯಸಿಸುವುದೇ ಒಂದು ಸೊಗಸೆಂದು ಬಣ್ಣಿಸಿದರು. ಈ ಬಗೆಯ ಕಾರ್ಯಕ್ರಮದಿಂದಲಾದರೂ ವರುಣ ದೇವ ಮಳೆಯನ್ನು ಕರುಣಿಸಲೆಂದು ಆಶಿಸಿದರು.
    ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ. ವೀಣಾ ಭಟ್ ಸ್ವಾಗತಿಸಿದರು. ಸದಸ್ಯರಾದ ಕೆ. ಆನಂದ್ ಅತಿಥಿಗಳ ಪರಿಚಯ ನಡೆಸಿಕೊಟ್ಟರು. ಡಾ. ನಾಗರಾಜ್ ಕಾರ್ಯಕ್ರಮ ನಿರೂಪಿಸಿ, ರಾಮಾಚಾರಿ ವಂದಿಸಿದರು.

ವಿಐಎಸ್‌ಎಲ್‌ನಲ್ಲಿ ಎನ್‌ಆರ್‌ಎಂ ಘಟಕ ಆರಂಭ : ಕಾರ್ಮಿಕರಲ್ಲಿ ಸಂತಸ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಮಿಕರು ಹೊಂದಿದ್ದ ಆತಂಕ ಇದೀಗ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿದ್ದು, ಸೋಮವಾರ ಬೆಳಿಗ್ಗೆ ಕಾರ್ಖಾನೆಯ ಎನ್‌ಆರ್‌ಎಂ ಘಟಕ ಆರಂಭಗೊಂಡಿದೆ.
    ಭದ್ರಾವತಿ, ಆ. ೨೮: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಮಿಕರು ಹೊಂದಿದ್ದ ಆತಂಕ ಇದೀಗ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿದ್ದು, ಸೋಮವಾರ ಬೆಳಿಗ್ಗೆ ಕಾರ್ಖಾನೆಯ ಎನ್‌ಆರ್‌ಎಂ ಘಟಕ ಆರಂಭಗೊಂಡಿದೆ. ಇದರಿಂದಾಗಿ ಕಾರ್ಮಿಕರಲ್ಲಿ ಸಂತಸ ಮನೆ ಮಾಡಿದೆ.
    ಕಳೆದ ಸುಮಾರು ೬ ದಿನಗಳ ಹಿಂದೆ ಉಕ್ಕು ಪ್ರಾಧಿಕಾರ ಬಿಲಾಯ್ ಘಟಕದಿಂದ ಕಾರ್ಖಾನೆಗೆ ೧೯ ವ್ಯಾಗನ್‌ಗಳಲ್ಲಿ ಬ್ಲೂಮ್‌ಗಳು ಕಾರ್ಖಾನೆಗೆ ಬಂದಿದ್ದು, ಎನ್‌ಆರ್‌ಎಂ ಘಟಕ ಆರಂಭಗೊಂಡಿದೆ. ಈ ನಡುವೆ ಕಳೆದ ಸುಮಾರು ೮ ತಿಂಗಳಿನಿಂದ ಕಾರ್ಖಾನೆ ಮುಂಭಾಗದಲ್ಲಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ತಮ್ಮ ಹೋರಾಟ ಮುಂದುವರೆಸಿದ್ದಾರೆ. ಅಲ್ಲದೆ ಕಾರ್ಮಿಕರಿಗೆ ಕಡ್ಡಾಯವಾಗಿ ೨೬ ದಿನ ಕೆಲಸ ನೀಡುವಂತೆ ಕಾರ್ಖಾನೆ ಆಡಳಿತ ಮಂಡಳಿಗೆ ಆಗ್ರಹಿಸಿದ್ದಾರೆ.


    ಎನ್‌ಆರ್‌ಎಂ ಘಟಕ ಆರಂಭವಾಗಿರುವ ಕುರಿತು ಕಾರ್ಮಿಕರು ವಾಟ್ಸಫ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಮುಂದಿನ ಹೋರಾಟ ಕುರಿತು ಸಲಹೆ, ಸೂಚನೆ ನೀಡುವಂತೆ ಕೋರಿದ್ದಾರೆ.  

ಸರ್ಕಾರಿ ಸಂಚಿ ಹೊನ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಭದ್ರಾವತಿ ಹಳೇನಗರದ ಸರ್ಕಾರಿ ಸಂಚಿ ಹೊನ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಕೀರ್ತಿ ತಂದಿದ್ದಾರೆ.
    ಭದ್ರಾವತಿ, ಆ. ೨೮ : ಹಳೇನಗರದ ಸರ್ಕಾರಿ ಸಂಚಿ ಹೊನ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಕೀರ್ತಿ ತಂದಿದ್ದಾರೆ.
    ೨ ದಿನಗಳ ೨೦೨೩-೨೦೨೪ನೇ ಸಾಲಿನ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಹಾಗೂ ವಿದ್ಯಾರ್ಥಿನಿ ತೇಜಸ್ವಿ ಬಾಯಿ ಸಮಗ್ರ ಪ್ರಶಸ್ತಿ ಪಡೆದುಕೊಂಡು ಕೀರ್ತಿ ತಂದಿದ್ದಾರೆ.
    ವಿಜೇತ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಬಿ ಕೆ ಸಂಗಮೇಶ್ವರ ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಯೋಜನಾ ನಿರ್ದೇಶಕರಾಗಿ ಮನೋಹರ್

ಮನೋಹರ್ 
    ಭದ್ರಾವತಿ, ಆ. ೨೮ : ಶಿವಮೊಗ್ಗ ಜಿಲ್ಲಾ ಯೋಜನಾ ನಿರ್ದೇಶಕರಾಗಿ ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿ ಮನೋಹರ್ ಅಧಿಕಾರ ಸ್ವೀಕರಿಸಿದ್ದಾರೆ.
    ಈ ಹಿಂದಿನ ಯೋಜನಾಧಿಕಾರಿಯಾಗಿದ್ದ ಎಂ.ಎಂ ಕರಭೀಮಣ್ಣನವರ್ ವಯೋನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ತೆರವಾಗಿದ್ದ ಹುದ್ದೆಗೆ ಮನೋಹರ್ ಅವರನ್ನು ಸರ್ಕಾರ ನೇಮಕಗೊಳಿಸಿದ್ದು, ಮನೋಹರ್‌ರವರು ಈ ಹಿಂದೆ ಎರಡು ಬಾರಿ ಇಲ್ಲಿನ ನಗರಸಭೆ ಪೌರಾಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
    ಕೆಎಂಎಎಸ್ ಗ್ರೇಡ್-೧ ಅಧಿಕಾರಿಯಾಗಿರುವ ಮನೋಹರ್‌ರವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಜಿಲ್ಲಾ ಯೋಜನಾ ನಿರ್ದೇಶಕರಾಗಿರುವುದು ಇಲ್ಲಿನ ಜನರಲ್ಲಿ ಸಂತಸವನ್ನುಂಟು ಮಾಡಿದೆ.

Sunday, August 27, 2023

ಬೆಳ್ಳಿಗೆರೆ ಗ್ರಾಮದಲ್ಲಿ ವ್ಯಕ್ತಿ ಮೃತ

    ಭದ್ರಾವತಿ, ಆ. ೨೭: ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಗೆರೆ ಗ್ರಾಮದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
    ಬಾಬು(೪೫) ಮೃತಪಟ್ಟಿದ್ದು, ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಮತ್ತೊಂದೆಡೆ ಕೊಲೆ ಮಾಡಲಾಗಿದೆ ಎಂಬ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹಬ್ಬಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು,  ಪ್ರಕರಣ ದಾಖಲಾಗಿಲ್ಲ.

ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಕ್ರೀಡಾ ತರಬೇತಿ

ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪಾಪಣ್ಣ, ಕಾರ್ತಿಕ್‌

ಭದ್ರಾವತಿ ಕ್ರೀಡಾಪಟುಗಳಾದ ಪಾಪಣ್ಣ ಮತ್ತು ಕಾರ್ತಿಕ್‌ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುತ್ತಿದ್ದು, ಇವರ ನಿಸ್ವಾರ್ಥ ಸೇವೆಯನ್ನು ನ್ಯೂಟೌನ್‌ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಅಭಿನಂದಿಸಿದೆ.
    ಭದ್ರಾವತಿ,  ಆ. ೨೭ :  ಇಬ್ಬರು ಕ್ರೀಡಾಪಟುಗಳು ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುವ ಮೂಲಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಇವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
    ಹಳೆನಗರದ ನಿವಾಸಿ ಪಾಪಣ್ಣ ಹೆಚ್ಚು ಓದಿಲ್ಲದಿದ್ದರೂ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಹಲವಾರು ವರ್ಷಗಳಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುವ ಮೂಲಕ ಆ ಮಕ್ಕಳು ತಾಲೂಕು ಹಾಗು ಜಿಲ್ಲಾಮಟ್ಟದ ಕ್ರೀಡಾಕೂಟಗಳಿಗೆ ಆಯ್ಕೆಯಲ್ಲಿ ನೆರವಾಗುತ್ತಿದ್ದಾರೆ.  ಅಲ್ಲದೆ ವೃತ್ತಿಯಲ್ಲಿ ಪಾಪಣ್ಣ ಕೂಲಿ ಕೆಲಸಗಾರನಾಗಿದ್ದು,  ದುಡಿದ ಹಣದಲ್ಲಿ ಬಡ ಕ್ರೀಡಾಪಟುಗಳಿಗೆ ಕೈಲಾದ ನೆರವು ನೀಡುತ್ತಿದ್ದಾರೆ.
    ಇದೆ ರೀತಿ  ಹುಣಸೇಕಟ್ಟೆ ನಿವಾಸಿ, ವಿದ್ಯಾರ್ಥಿ ಕಾರ್ತಿಕ್  ಕೂಡ ಕ್ರೀಡಾಪಟು ಆಗಿದ್ದು, ಸರ್ಕಾರಿ ಶಾಲೆಗಳಿಗೆ ತೆರಳಿ ಕ್ರೀಡಾ ತರಬೇತಿ ನೀಡುತ್ತಿದ್ದಾರೆ.   ಈ ಇಬ್ಬರು ಕ್ರೀಡಾ ತರಬೇತಿದಾರರು  ನಗರದ ನ್ಯೂಟೌನ್‌ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ ಕೋರಿಕೆ ಮೇರೆಗೆ  ಕ್ರೀಡಾ ತರಬೇತಿದಾರರಾಗಿ ವಿದ್ಯಾರ್ಥಿನಿಯರಿಗೆ ಉಚಿತ ತರಬೇತಿ ನೀಡುವ ಮೂಲಕ  ಖೋ ಖೋ ದ್ವಿತೀಯ , ಥ್ರೋ ಬಾಲ್ ಪ್ರಥಮ, ಕಬಡ್ಡಿ ಪ್ರಥಮ ಹಾಗೂ ವೈಯಕ್ತಿಕ ಆಟಗಳಲ್ಲಿ  ಅತ್ಯುನ್ನತ ಸಾಧನೆ ಮಾಡಿದ್ದಾರೆ.
    ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಕ್ರೀಡಾಪಟುಗಳಾದ ಪಾಪಣ್ಣ ಮತ್ತು ಕಾರ್ತಿಕ್ ಅವರನ್ನು ಕಾಲೇಜು  ಆಡಳಿತ ಮಂಡಳಿ ಅಭಿನಂದಿಸಿದೆ. ಈ ಇಬ್ಬರ ಸೇವೆ ರಾಜ್ಯಾದ್ಯಂತ ವ್ಯಾಪಿಸಲಿ ಎಂಬ ಆಶಯ ಕ್ರೀಡಾಪಟುಗಳದ್ದಾಗಿದೆ.

ಸ್ವ ಉದ್ಯೋಗ ಪ್ರೇರಣಾ ಶಿಬಿರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ಭದ್ರಾವತಿ ತಾಲೂಕಿನ ಅಂತರಗಂಗೆ ವಲಯದ ಗಾಂಧಿನಗರದ ವಿಘ್ನನೇಶ್ವರ ಜ್ಞಾನವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವ ಉದ್ಯೋಗ ಪ್ರೇರಣಾ ಶಿಬಿರ ಮಹಿಳಾ ಉದ್ಯಮಿ ಅನ್ನಪೂರ್ಣ ಸತೀಶ್‌ ಉದ್ಘಾಟಿಸಿದರು.
    ಭದ್ರಾವತಿ, ಆ. ೨೭:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ತಾಲೂಕಿನ ಅಂತರಗಂಗೆ ವಲಯದ ಗಾಂಧಿನಗರದ ವಿಘ್ನನೇಶ್ವರ ಜ್ಞಾನವಿಕಾಸ ಕೇಂದ್ರದಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರ ನಡೆಯಿತು.
    ಅನು ಗಾರ್ಮೆಂಟ್ಸ್ ಮಹಿಳಾ ಉದ್ಯಮಿ  ಅನ್ನಪೂರ್ಣ ಸತೀಶ್‌ ಶಿಬಿರ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷೆ ವಿನೋದ ಅಧ್ಯಕ್ಷತೆ ವಹಿಸಿದ್ದರು.
    ಸ್ವ ಉದ್ಯೋಗಕ್ಕೆ ಸಂಬಂಧಿಸಿದಂತೆ ಒಬ್ಬ ಮಹಿಳೆಯಲ್ಲಿ ಇರಬೇಕಾದ ಆಸಕ್ತಿ, ಮಾತುಗಾರಿಕೆ ಮತ್ತು ಆರ್ಥಿಕ ಸಹಾಯವನ್ನು ಬ್ಯಾಂಕುಗಳ ಮೂಲಕ ಪಡೆಯುವ ವಿಧಾನಗಳ ಕುರಿತು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ(ರುಡ್‌ ಸೆಟ್) ಹೊಳಲೂರು,  ನಿರ್ದೇಶಕ ಕಾಂತೇಶ್ ಅಂಬಿಗರ್ ಮಾಹಿತಿ ನೀಡಿದರು.
    ರುಡ್‌ ಸೆಟ್ ಸಂಸ್ಥೆಯಲ್ಲಿ ಪಡೆಯಬಹುದಾದ ತರಬೇತಿಗಳು, ಅವಧಿ ಮತ್ತು ಸಂಸ್ಥೆಯ ನಿಯಮಗಳನ್ನು ಉಪನ್ಯಾಸಕರಾದ ಸುರೇಶ್ ವೈ ಹಳ್ಳಿ ರವರು ಮಾಹಿತಿ ನೀಡಿದರು.‌
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಮಾತನಾಡಿ,  ಸದಸ್ಯರು ಸ್ವಉದ್ಯೋಗ ಆರಂಭ ಮಾಡಿದಲ್ಲಿ ಮಾತ್ರ ಪಡೆದುಕೊಂಡ ತರಬೇತಿ ಫಲಪ್ರದವಾಗಲು ಸಾಧ್ಯ.  ಮಹಿಳೆಯರು ಸ್ವಉದ್ಯೋಗದಿಂದ ಸ್ವಾವಲಂಬಿಯಾಗಿ ಬದುಕಬೇಕೆಂದರು.
    ಸ್ವ ಉದ್ಯೋಗ ತರಬೇತಿದಾರರಾದ ಮಣಿ, ಶಾಲಾ ಮುಖ್ಯ ಶಿಕ್ಷಕ ನಾಗರಾಜ್, ವಲಯ ಮೇಲ್ವಿಚಾರಕರಾದ ಕುಮಾರ್, ಶ್ರೀನಿವಾಸ್,  ಜ್ಞಾನವಿಕಾಸ ಸಮನ್ವಯಧಿಕಾರಿಗಳಾದ ಪ್ರೀತಿ, ಸೌಮ್ಯ, ಸೇವಾಪ್ರತಿನಿಧಿ ಶ್ವೇತಾ, ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಮೀನುಗಾರಿಕೆ ಇಲಾಖೆ ಹೊರಗುತ್ತಿಗೆ ನೌಕರರ ದಿಡೀರ್ ಪ್ರತಿಭಟನೆ

ಭದ್ರಾವತಿ ಬಿಆರ್‌ಪಿ ಮೀನುಗಾರಿಕೆ ಇಲಾಖೆಯ  ಹೊರಗುತ್ತಿಗೆ ನೌಕರರು ಇಎಸ್‌ಐ ಹಾಗು ಪಿಎಫ್‌ ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
    ಭದ್ರಾವತಿ, ಆ. ೨೭ : ಬಿಆರ್‌ಪಿ ಮೀನುಗಾರಿಕೆ ಇಲಾಖೆಯ  ಹೊರಗುತ್ತಿಗೆ ನೌಕರರು ಇಎಸ್‌ಐ ಹಾಗು ಪಿಎಫ್‌ ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
    ಇಲಾಖೆ ಕರ್ತವ್ಯ ನಿರ್ವಹಿಸುತ್ತಿರುವ  ಸುಮಾರು ೫೪ ಹೊರಗುತ್ತಿಗೆ ನೌಕರರಿಗೆ ಕಳೆದ ೩ ವರ್ಷಗಳಿಂದ ಗುತ್ತಿಗೆದಾರರು ಇಎಸ್‌ಐ ಹಾಗು ಪಿಎಫ್‌ ಸೌಲಭ್ಯ ನೀಡದೆ ವಂಚಿಸುತ್ತಿದ್ದಾರೆಂದು ಆರೋಪಿಸಲಾಯಿತು.
    ನೌಕರರು ಯೂನಿಕ್‌ ಸೆಕ್ಯೂರಿಟಿ ಏಜೆನ್ಸಿ ಗುತ್ತಿಗೆದಾರರ ವಿರುದ್ಧ ಬೆಳಿಗ್ಗೆ ಆರಂಭಿಸಿದ ಪ್ರತಿಭಟನೆ ಸಂಜೆವರೆಗೂ ಮುಂದುವರೆಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುತ್ತಿಗೆದಾರರಿಗೆ ತಕ್ಷಣ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಈ ನಡುವೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದು ನೌಕರರನ್ನು ಮತ್ತಷ್ಟು ಆಕ್ರೋಶಗೊಳ್ಳುವಂತೆ ಮಾಡಿತು.
    ಹೊರಗುತ್ತಿಗೆ ನೌಕರರ ಸಮಸ್ಯೆ ತಕ್ಷಣ ಬಗೆಹರಿಸುವ ಮೂಲಕ ಸಂಕಷ್ಟದಲ್ಲಿರುವ ನೌಕರರ ಹಿತ ಕಾಪಾಡುವಂತೆ ಆಗ್ರಹಿಸಲಾಯಿತು.

Saturday, August 26, 2023

ವೇಳಾಂಗಣಿ ಮಾತೆ ಪುಣ್ಯ ಕ್ಷೇತ್ರದಲ್ಲಿ ಆ.೨೯ರಿಂದ ಮಾತೆಯ ಮಹೋತ್ಸವ : ಫಾದರ್ ಸ್ಟೀವನ್ ಡೇಸಾ

ಭದ್ರಾವತಿ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆಯ ಪುಣ್ಯ ಕ್ಷೇತ್ರದಲ್ಲಿ ಆ.೨೯ ರಿಂದ ಸೆ.೮ರವರೆಗೆ ಮಾತೆಯ ಮಹೋತ್ಸವ ಆಚರಣೆ ಕುರಿತು ದೇವಾಲಯದ ಧರ್ಮ ಗುರು  ಫಾದರ್ ಸ್ಟೀವನ್ ಡೇಸಾ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಭದ್ರಾವತಿ, ಆ. ೨೬:  ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆಯ ಪುಣ್ಯ ಕ್ಷೇತ್ರದಲ್ಲಿ ಆ.೨೯ ರಿಂದ ಸೆ.೮ರವರೆಗೆ ಮಾತೆಯ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಾಲಯದ ಧರ್ಮ ಗುರು  ಫಾದರ್ ಸ್ಟೀವನ್ ಡೇಸಾ ಹೇಳಿದರು.
    ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ ಮಾತೆಯ ಮಹೋತ್ಸವ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಮಹೋತ್ಸವದಲ್ಲಿ ಮಾತೆಯ ಜಯಂತ್ಯೋತ್ಸವ ಹಾಗು ವಾರ್ಷಿ ಮಹೋತ್ಸವ ನಡೆಯಲಿದೆ. ಈ ಸಂಬಂಧ ಪ್ರತಿ ದಿನ ಧಾರ್ಮಿಕ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
    ಆ.೨೯ರಂದು ಸಂಜೆ ೫.೩೦ಕ್ಕೆ ಧ್ವಜಾರೋಹಣ ನಡೆಯಲಿದ್ದು, ಮೇರಿ ಮಾತೆ : ಸ್ತ್ರೀಯರಲ್ಲೆಲ್ಲಾ ಧನ್ಯರು ನೀವು  ಮತ್ತು  ೩೦ರಂದು ಮೇರಿ ಮಾತೆ : ಧರ್ಮಸಭೆಯ ಶ್ರೀಮಾತೆ ಹಾಗು  ೩೧ರಂದು ಮೇರಿ ಮಾತೆ : ದಂಪತಿಗಳ ಮಾರ್ಗದರ್ಶಕಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ ಎಂದರು.
    ಸೆ.೧ರಂದು ಮೇರಿ ಮಾತೆ: ಮಕ್ಕಳಿಗೆ ಆಶ್ರಯದಾತೆ, ೨ರಂದು ಮೇರಿ ಮಾತೆ : ಮಹಿಳೆ ಮತ್ತು ಹೆಣ್ಣು ಮಗುವಿನ ಚೇತನ, ೩ರಂದು ಮೇರಿ ಮಾತೆ : ಯುವ ಜನತೆಯ ಆಶಾಕಿರಣ, ೪ರಂದು ಮೇರಿ ಮಾತೆ : ವ್ಯಾದಿಷ್ಠರಿಗೆ ಸೌಖ್ಯದಾತೆ,  ೫ರಂದು ಮೇರಿಮಾತೆ: ಶಿಕ್ಷಕರ ಪ್ರೋತ್ಸಾಹ ದಾತೆ, ೬ರಂದು ಮೇರಿ ಮಾತೆ : ಧಾರ್ಮಿಕ ಸಂಗಾತಿ, ೭ರಂದು ಮೇರಿ ಮಾತೆ : ಯಾತ್ರಿಕರ ಆಶ್ರಯದಾತೆ ಹಾಗು ೮ರಂದು ಮೇರಿ ಮಾತೆ : ಸ್ತ್ರೀಯರಲ್ಲೆಲ್ಲಾ ಧನ್ಯರು ನೀವು ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮಗಳು ಜರುಗಲಿವೆ ಎಂದರು.
    ಸೆ.೩ರಂದು ಬೆಳಿಗ್ಗೆ ೮.೩೦ ರಿಂದ ಸಂಜೆ ೭ ಗಂಟೆವರೆಗೆ ಆಧ್ಯಾತ್ಮಿಕ ನವೀಕರಣ ಧ್ಯಾನ ಕೂಟ ಮತ್ತು ನವೇನ, ಬಲಿಪೂಜೆ ನಡೆಯಲಿದ್ದು, ಶಿವಮೊಗ್ಗ ಧರ್ಮಕ್ಷೇತ್ರದ ವಂದನೀಯ ರೋಮನ್ ಪಿಂಟೊ ಪ್ರಬೋಧಕರಾಗಿ ಆಗಮಿಸಲಿದ್ದಾರೆ.  ೭ರಂದು ಸಂಜೆ ೫ ಗಂಟೆಗೆ ಜಪಸರ, ಬಲಿಪೂಜೆ, ಪ್ರಬೋಧನೆ ಮತ್ತು ನವೇನ, ಸಂಜೆ ೬.೩೦ಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಮಾತೆಯ ಅಲಂಕೃತ ತೇರಿನ ಭಕ್ತಿಯುತ ಮೆರವಣಿಗೆ ನಡೆಯಲಿದೆ. ೮ರಂದು ಮಾತೆಯ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ೭, ೮.೩೦, ೧೦ ಮತ್ತು ೧೧ ಗಂಟೆಗೆ ಪೂಜೆಗಳು, ಮಧ್ಯಾಹ್ನ ೧೨.೩೦ಕ್ಕೆ ಅನ್ನದಾನ, ಸಂಜೆ ೫.೩೦ಕ್ಕೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹೋತ್ಸವ ಯಶಸ್ವಿಗೊಳಿಸುವಂತೆ ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರಮುಖರಾದ ಅಂತೋನಿ ವಿಲ್ಸನ್, ಎಲಿಜಾ ಲಾರೆನ್ಸ್, ಫಿಲೋಮಿನಾ ಫಿಲಿಪ್ಸ್, ಅನಿಲ್ ಡಿಸೋಜಾ, ಜೆಸ್ಸಿಗೋನ್ಸಾಲಿನ್ಸ್, ಪೌಲ್ ಡಿಸೋಜಾ ಮತ್ತು  ಜಾಕಬ್ ಒರಿಯನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪಿಲ್ಲಿ ಇಸ್ರಾಯೆಲ್‌ನಿಧನ

ಪಿಲ್ಲಿ ಇಸ್ರಾಯೆಲ್‌
    ಭದ್ರಾವತಿ, ಆ. ೨೬: ನಗರದ ಉಜ್ಜನಿಪುರ ನಿವಾಸಿ, ಎಂಪಿಎಂ ನಿವೃತ್ತ ಗುತ್ತಿಗೆ ಕಾರ್ಮಿಕ ಪಿಲ್ಲಿ ಇಸ್ರಾಯೆಲ್‌(೬೦) ನಿಧನ ಹೊಂದಿದರು.
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದರು. ಹೃದಯಾಘಾತದಿಂದ ನಿಧನ ಹೊಂದಿದ್ದು, ನಗರದ ಬೈಪಾಸ್‌ರಸ್ತೆ ಮಿಲ್ಟ್ರಿಕ್ಯಾಂಪ್‌ಬಳಿ ಇರುವ ಪ್ರೊಟೆಸ್ಟೆಂಟ್‌ಕ್ರೈಸ್ತ ಸಮಾದಿಯಲ್ಲಿ ಇವರ ಅಂತ್ಯ ಸಂಸ್ಕಾರ ನೆರವೇರಿತು.
 ಇಸ್ರಾಯೆಲ್‌ರವರು ಎಂಪಿಎಂ ಗುತ್ತಿಗೆ ಕಾರ್ಮಿಕ ಸಂಘದ ಸಮಿತಿ ಸದಸ್ಯರಾಗಿ ಹಾಗು ಸುಮಾರು ೧೦ ವರ್ಷಗಳಿಂದ ಬುಳ್ಳಾಪುರ ಸಿಎಸ್‌ಐ ತೆಲುಗು ಜೂಬ್ಲಿ ಚರ್ಚ್‌ಸಮಿತಿ ಸದಸ್ಯರಾಗಿ  ಸೇವೆ ಸಲ್ಲಿಸಿದ್ದರು.
    ಇತ್ತೀಚೆಗೆ ನ್ಯೂಟೌನ್‌ಸೈಂಟ್‌ಚಾರ್ಲ್ಸ್‌ಶಾಲೆಯ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ನಿಧನಕ್ಕೆ ಸಿಎಸ್‌ಐ ತೆಲುಗು ಜೂಬ್ಲಿ ಚರ್ಚ್‌ಸಭಾ ಪಾಲಕರಾದ ರೆವರೆಂಡ್‌ಬಾಬಿರಾಜ್‌, ಸಮಿತಿ ಸದಸ್ಯರಾದ ಸುವರ್ಣಮ್ಮ, ಇಟ್ಟೆ ಸಂತೋಷ್‌ಕುಮಾರ್‌, ಚಲ್ತುರಿ ಡ್ಯಾನಿಯೆಲ್‌ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೆ.೫ರಂದು ನೂತನ ಸಮುದಾಯ ಭವನ ಕಟ್ಟಡ ಉದ್ಘಾಟನೆ

    ಭದ್ರಾವತಿ, ಆ. ೨೬ : ಹಳೇನಗರದ ಶ್ರೀ ಬಸವೇ‍ಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಗುರುವೀರ ಮಡಿವಳ ಮಾಚಿದೇವ ಸಂಘದ ವತಿಯಿಂದ ಸೆ.೫ರಂದು ಬೆಳಿಗ್ಗೆ ೧೦.೩೦ಕ್ಕೆ ಮನ ಮನೆಗೆ ಮಾಚಿದೇವ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮ ಹಾಗು ನೂತನ ಸಮುದಾಯ ಭವನ ಕಟ್ಟಡ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
    ಶ್ರೀ ಬಸವ ಮಾಚಿದೇವ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿ‍ಧ್ಯವಹಿಸಲಿದ್ದು,  ಶಾಸಕ ಬಿ.ಕೆ ಸಂಗಮೇಶ್ವರ್‌ ನೂತನ ಸಮುದಾಯ ಭವನ ಉದ್ಘಾಟಿಸಲಿದ್ದಾರೆ. ೨೦೨೩ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
    ಸೆ.೨ರೊಳಗೆ ಮಾಹಿತಿ ಸಲ್ಲಿಸಿ:
    ಪ್ರತಿಭಾವಂತ ವಿದ್ಯಾರ್ಥಿಗಳು ಸೆ.೨ರ ಸಂಜೆ ೫ ಗಂಟೆಯೊಳಗೆ ಅಂಕಪಟ್ಟಿ, ಭಾವಚಿತ್ರ ಮತ್ತು ಆಧಾರ್‌ ಕಾರ್ಡ್‌ ಪ್ರತಿಯನ್ನು ಸಂಘದ ಕಛೇರಿಗೆ ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ: ೮೪೯೬೯೩೯೩೬೯ ಅಥವಾ ೯೯೭೨೭೧೭೦೦೯ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Friday, August 25, 2023

ಚುನಾವಣೆ : ಸದಸ್ಯರಿಗೆ ಸೂಚನೆ


    ಭದ್ರಾವತಿ : ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಆಡಳಿತ ಮಂಡಳಿ ಚುನಾವಣೆ ನಡೆಸಲು ಆ.೨೩ರಂದು ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಕಛೇರಿಯ ಸೂಚನಾ ಫಲಕದಲ್ಲಿ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಮತ ಚಲಾಯಿಸಲು ಅರ್ಹತೆ ಇರುವ ಮತದಾರರ ಕರಡುಪಟ್ಟಿ ಮತ್ತು ಸಂಘದ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಇರುವ ಮತದಾರರ ಕರಡು ಪಟ್ಟಿ ಮತ್ತು ಸಂಘದ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಲು ಆರ್ಹತೆ ಇರುವ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಸದಸ್ಯರಿಂದ ಆಕ್ಷೇ ಪಣೆಗಳು ಇದ್ದಲ್ಲಿ ಸೆ.೬ರಂದು ಸಂಜೆ ೫ ಗಂಟೆಯೊಳಗಾಗಿ ಸಂಘದ ಕಛೇರಿಯಲ್ಲಿ ಕಾರ್ಯದರ್ಶಿಯವರಿಗೆ ಅರ್ಜಿ ಸಲ್ಲಿಸುವುದು.

ಆ.೨೬ರಂದು ವಿಶ್ವ ಜಾನಪದ ದಿನಾಚರಣೆ



    ಭದ್ರಾವತಿ, ಆ. ೨೫:   ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ವತಿಯಿಂದ ಆ.೨೬ರ ಶನಿವಾರ ಸಂಜೆ ೪ ಗಂಟೆಗೆ ಭಂಡಾರಹಳ್ಳಿ  ಶ್ರೀ ಕಣಿವೆ ಮಾರಮ್ಮ ದೇವಾಲಯದ ಆವರಣದಲ್ಲಿ ವಿಶ್ವ ಜಾನಪದ ದಿನಾಚರಣೆ ಆಯೋಜಿಸಲಾಗಿದೆ.
    ನಗರಸಭೆ ಅಧ್ಯಕ್ಷೆ ಶೃತಿ ವಸಂತ ಕುಮಾರ್‌ ಕಾರ್ಯಕ್ರಮ  ಉದ್ಘಾಟಿಸುವರು. ಪರಿಷತ್‌ ತಾಲೂಕು ಅಧ್ಯಕ್ಷ  ಎಂ.ಆರ್.‌ ರೇವಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
    ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ  ಡಿ. ಮಂಜುನಾಥ್,  ನಗರಸಭೆ ಉಪಾಧ್ಯಕ್ಷೆ  ಸರ್ವಮಂಗಳಾ ಭೈರಪ್ಪ, ಪೌರಾಯುಕ್ತ  ಮನುಕುಮಾರ್, ಶ್ರೀ ಕಣಿವೆ ಮಾರಮ್ಮ ದೇವಾಲಯ ಸಮಿತಿ ಅಧ್ಯಕ್ಷ  ಪರಮೇಶ್ವರಪ್ಪ,  ಕೆ.ಬಿ.ಗಂಗಾಧರ್,  ಹನುಮಂತಪ್ಪ, ಕೆ.ಜಿ.ರವಿಕುಮಾರ್,  ಬಿ. ಗಂಗಾಧರ್, ರಾಜಣ್ಣ, ಕೋಡ್ಲು ಯಜ್ಜಯ್ಯ, ಸುಧಾಮಣಿ, ಗೊಂದಿ ಜಯರಾಂ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಕಲಾ ಪ್ರಕಾರಗಳಾದ ಡೊಳ್ಳು ಕುಣಿತ, ಚೌಡಿಕೆ ಪದ, ಜಾನಪದ ಗಾಯನ, ಗೀಗೀ ಪದ ಹಾಗೂ ಬಣಜಾರ್ ನೃತ್ಯ ಪ್ರದರ್ಶನ ನಡೆಯಲಿದೆ.   

ಬೆರಳುಮುದ್ರೆ ಪರಿಶೀಲನೆ ಮೂಲಕ ವ್ಯಕ್ತಿ ಪತ್ತೆ ಪ್ರಕರಣ

ಗ್ರಾಮಾಂತರ ಠಾಣೆ ಇಬ್ಬರು ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗು ನ್ಯಾಯಾಲಯದ ವಿಚಾರಣೆಯಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯೋರ್ವನನ್ನು ಬೆರಳುಮುದ್ರೆ ಪರಿಶೀಲನೆ ಮೂಲಕ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಭದ್ರಾವತಿ ಗ್ರಾಮಾಂತರ ಪೊಲೀಸ್‌ಠಾಣೆಯ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್‌ವತಿಯಿಂದ ಅಭಿನಂದಿಸಲಾಯಿತು.
    ಭದ್ರಾವತಿ, ಆ. ೨೫:  ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗು ನ್ಯಾಯಾಲಯದ ವಿಚಾರಣೆಯಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯೋರ್ವನನ್ನು ಬೆರಳುಮುದ್ರೆ ಪರಿಶೀಲನೆ ಮೂಲಕ ಪತ್ತೆಹಚ್ಚುವಲ್ಲಿ ಯಶಸ್ವಿಯಾದ  ಗ್ರಾಮಾಂತರ ಪೊಲೀಸ್‌ಠಾಣೆಯ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್‌ವತಿಯಿಂದ ಅಭಿನಂದಿಸಲಾಯಿತು.
    ಗ್ರಾಮಾಂತರ ಠಾಣೆಯ ಸಿಬ್ಬಂದಿಗಳಾದ ಮಂಜುನಾಥ್ ಮತ್ತು  ಗಂಗಾಧರ್ ನಾಶಿರವರು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಅನುಮಾನಾಸ್ಪದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಆತನ ಬೆರಳು ಮುದ್ರೆ ಪರಿಶೀಲನೆ ನಡೆಸುವ ಮೂಲಕ ಆತ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಹಾಗು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವುದನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು.
    ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್‌ವತಿಯಿಂದ ಮಂಜುನಾಥ್‌ಮತ್ತು ಗಂಗಾಧರ್‌ನಾಶಿ ಅವರಿಗೆ ಸನ್ಮಾನಿಸಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್‌, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್‌ಭೂಮರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆಆರ್‌ಎಸ್ ಪಕ್ಷದ ವತಿಯಿಂದ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಲು ಬೆಂಗಳೂರಿಗೆ ಪಾದಯಾತ್ರೆ

    ಭದ್ರಾವತಿ, ಆ. ೨೫ :  ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕೆಆರ್‌ಎಸ್‌ ಪಕ್ಷದಿಂದ ಆ.26 ರಂದು ಬೆಳ್ತಂಗಡಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಹಾಗೂ ತಾಲೂಕು ಉಸ್ತುವಾರಿ ಸಮೀರ್ ಹೇಳಿದರು.
    ಅವರು  ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಅ.2012 ರಂದು ಅತ್ಯಾಚಾರಕ್ಕೆ ಒಳಗಾಗಿ ಧಾರುಣವಾಗಿ ಕೊಲೆಯಾದ 17 ವರ್ಷದ ಯುವತಿಯ ದುರಂತ ಪ್ರಕರಣದಲ್ಲಿ ಇಲ್ಲಿಯವೆಗೂ ಯಾರಿಗೂ ಶಿಕ್ಷೆಯಾಗಿಲ್ಲ.  ಅಲ್ಲದೆ ಆರೋಪಿ ಎಂದು ಬಂಧಿಸಲಾಗಿದ್ದ ವ್ಯಕ್ತಿಯನ್ನು ಸೂಕ್ತ ಸಾಕ್ಷಾಧಾರಗಳಿಲ್ಲದೆ ಆರೋಪಮುಕ್ತ ವನ್ನಾಗಿಸಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ರಾಜ್ಯಾದ್ಯಂತ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೆಆರ್‌ಎಸ್ ಪಕ್ಷ ಸಹ ಸೌಜನ್ಯಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಂಡಿದೆ. ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು ಸೆ.8 ರಂದು ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದರು.
    ಬೆಳ್ತಂಗಡಿಯಿಂದ ಆರಂಭವಾಗುವ ಪಾದಯಾತ್ರೆಯು ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮೂಲಕ ಬೆಂಗಳೂರು ತಲುಪಲಿದ್ದು, ಸೌಜನ್ಯ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮರು ತನಿಖೆ ನಡೆಸಬೇಕು. ವಿಶೇಷ ಪೊಲೀಸ್ ತನಿಖಾ ತಂಡ ರಚಿಸಬೇಕು. ಮಕ್ಕಳ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಸಂತ್ರಸ್ಥ ಕುಟುಂಬಗಳಿಗೆ ಮಾನಸಿಕ ಹಾಗೂ ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿʻಸೌಜನ್ಯ ಮಹಿಳಾ ಸುರಕ್ಷಾ ಆಯೋಗʼ ರಚಿಸ ಬೇಕು. ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಾಗುತ್ತಿದ್ದು, ಇಲಾಖೆಯಲ್ಲಿನ ಲೋಪದೋಷ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರವು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಕರ್ನಾಟಕದ ಜನತೆಯ ಪರವಾಗಿ ಸರ್ಕಾರಕ್ಕೆ ಹಕ್ಕೊತ್ತಾಯಿಸಲಾಗುವುದು ಎಂದರು.
    ಪಕ್ಷದ ತಾಲೂಕು ಅಧ್ಯಕ್ಷ ನಾಗರಾಜರಾವ್ ಸಿಂಧೆ ಮಾತನಾಡಿ, ಇತ್ತೀಚೆಗೆ ರಾಜ್ಯದಲ್ಲಿ ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ. ಜನರಿಗೆ ಕಾನೂನಿನ ಇಲ್ಲವಾಗಿದೆ. ಅದರಿಂದಾಗಿ ಮತ್ತಷ್ಟು ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಚ್ಚರಿಸುವ ಸಲುವಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು. ಪಕ್ಷದ ಪ್ರಮುಖರಾದ ತೀರ್ಥಕುಮಾರ್‌, ಯೋಗಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಆ.೩೦ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ : ಸಂವಾದ ಕಾರ್ಯಕ್ರಮ

ನಗರಸಭೆ ವ್ಯಾಪ್ತಿಯ ೯ ಸ್ಥಳಗಳಲ್ಲಿ ವ್ಯವಸ್ಥೆ : ಶೃತಿ ವಸಂತಕುಮಾರ್‌

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಶೃತಿ ವಸಂತಕುಮಾರ್‌ ಮಾತನಾಡಿದರು.
    ಭದ್ರಾವತಿ, ಆ. ೨೫: ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ೨,೦೦೦ ರು. ನೀಡುವ ಮಹತ್ವಾಕಾಂಕ್ಷೆ  ʻಗೃಹ ಲಕ್ಷ್ಮೀ ʼ ಯೋಜನೆಗೆ ಆ.೩೦ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಅಂದು ನಡೆಯಲಿರುವ ಫಲಾನುಭವಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ನಗರಸಭೆ ವ್ಯಾಪ್ತಿಯ ೯ ಸ್ಥಳಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್‌ಹೇಳಿದರು.
    ಅವರು ಈ ಕುರಿತು ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ ೧೨ ಗಂಟೆಗೆ  ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಹಾಯಧನ ಬಿಡುಗಡೆ ಮತ್ತು ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು.  
    ಈ ಸಂಬಂಧ ನಗರಸಭಾ ವ್ಯಾಪ್ತಿಯ ೯ ಸ್ಥಳಗಳಲ್ಲಿ ನೇರ ಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ʻಗೃಹ ಲಕ್ಷ್ಮೀʼ ಯೋಜನೆಯ ಫಲಾನುಭವಿಗಳು, ಸಾರ್ವಜನಿಕರು, ಜನಪ್ರತಿನಿದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ  ಕಾರ್ಯಕ್ರಮ ಯಶಸ್ವಿಗೊಳಿಬೇಕೆಂದು ಕೋರಿದರು.
    ಶಾಸಕರಿಂದ ಚಾಲನೆ:
    ನಗರದ ವೀರಶೈವ ಸಭಾ ಭವನದಲ್ಲಿ ಯೋಜನೆಗೆ ಶಾಸಕ ಬಿ.ಕೆ ಸಂಗಮೇಶ್ವರ್‌ ಚಾಲನೆ ನೀಡಲಿದ್ದು, ನಗರ ವ್ಯಾಪ್ತಿಯಲ್ಲಿ ೩೯,೮೮೩ ಹಾಗು ಗ್ರಾಮಾಂತರ ಭಾಗದಲ್ಲಿ ೩೦,೩೩೭ ಸೇರಿದಂತೆ ಒಟ್ಟು ೭೦,೨೨೦ ʻಗೃಹಲಕ್ಷ್ಮೀʼ ಫಲಾನುಭವಿಗಳಿದ್ದಾರೆ.  ಸರ್ಕಾರದ ಈ ಯೋಜನೆಯ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದರು.
    ನೇರ ಪ್ರಸಾರ ಕಾರ್ಯಕ್ರಮದ ಕೇಂದ್ರಗಳು:
    ವೀರಶೈವ ಸಭಾ ಭವನ, ತಾಲ್ಲೂಕು ಕಛೇರಿ ರಸ್ತೆ, ಭದ್ರಾವತಿ (03, 04, 05, 06), ಮಲ್ಲೇಶ್ವರ ಕಲ್ಯಾಣ ಮಂಟಪ, ಜನ್ನಾಪುರ, ಭದ್ರಾವತಿ(28, 29, 30, 31, 32), ಬಸವ ಮಂಟಪ, ಮಾಧವನಗರ, ತರೀಕೆರೆ ರಸ್ತೆ, ಭದ್ರಾವತಿ (13, 16, 17, 18),  ಶ್ರೀ ವಿದ್ಯಾದಿರಾಜ ಸಭಾ ಭವನ, ಕಡದಕಟ್ಟೆ, ಭದ್ರಾವತಿ (01, 02 33, 34, 35),  ಮದರಸಾ ಶಾದಿ ಮಹಲ್, ಅನ್ವರ್ ಕಾಲೋನಿ, ಭದ್ರಾವತಿ (07, 08, 09), ಹಿಂದೂ ಮಹಾಸಭಾ ಗಣಪತಿ ಸಮುದಾಯ ಭವನ, ಹೊಸಮನೆ, ಭದ್ರಾವತಿ (10, 11, 12, 14, 15), ಲಯನ್ಸ್ ಕಮ್ಯೂನಿಟಿ ಹಾಲ್, ಶುಗರ್ ಟೌನ್, ಜೆ.ಟಿ.ಎಸ್ ಶಾಲೆ ಪಕ್ಕ, ಭದ್ರಾವತಿ (25, 26, 27), ಡಾನ್ ಬೋಸ್ಕೊ ಐ.ಟಿ.ಐ ಅಡಿಟೋರಿಯಂ, ಉಜ್ಜನೀಪುರ, ಭದ್ರಾವತಿ (19, 20, 21, 22) ಮತ್ತು ಎಸ್.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜು, ಆಡಿಟೋರಿಯಂ, ಬೊಮ್ಮನಕಟ್ಟೆ (23, 24)
    ಪೌರಾಯುಕ್ತ ಎಚ್.ಎಂ ಮನುಕುಮಾರ್‌, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್‌, ನಗರಸಭಾ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Thursday, August 24, 2023

ಚಂದ್ರಯಾನ-೩ ಯಶಸ್ವಿ : ಬಿಜೆಪಿ ಸಂಭ್ರಮಾಚರಣೆ

ಚಂದ್ರಯಾನ -3  ಯಶಸ್ವಿಯಾದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷ ಭದ್ರಾವತಿ ತಾಲೂಕು ಮಂಡಲ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು.
ಭದ್ರಾವತಿ, ಆ. ೨೪ :  ಚಂದ್ರಯಾನ -3  ಯಶಸ್ವಿಯಾದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು.
  ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಗರದ ರಂಗಪ್ಪವೃತ್ತದಿಂದ ತಿರಂಗಾ ಯಾತ್ರೆ ಮೂಲಕ ಅಂಬೇಡ್ಕರ್ ವೃತ್ತದ ವರೆಗೆ ಪಕ್ಷದ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ದೇಶದ ಹೆಮ್ಮೆಯ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಪ್ರಶಂಸಿಸಿದರು.
    ಚಂದಿರನ ದಕ್ಷಿಣ ಧ್ರುವದ ಮಾಹಿತಿಗಾಗಿ ಪ್ರಪಂಚದ ಎಲ್ಲಾ ದೇಶಗಳು ಭಾರತವನ್ನೇ ಅವಲಂಬನೆ ಯಾಗುವ ರೀತಿ ಸಾಧನೆಗೈದ ನಮ್ಮ ವಿಜ್ಞಾನಿಗಳ ಕಾರ್ಯ ಅಭಿನಂದನಾರ್ಹ ಎಂದರು.  ಸಿಹಿ ಹಂಚಲಾಯಿತು.

ಚಂದ್ರಯಾನ-೩ ಯಶಸ್ವಿ : ನೋಟು ಮೂಲಕ ಇಸ್ರೋ ಸಾಧನಗೆ ಅಭಿನಂದನೆ

ಚಂದ್ರಯಾನ-೦೩
ಭದ್ರಾವತಿ, ಆ. ೨೪:  ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ  ಸಂಗ್ರಹಗಾರ ಗಣೇಶ್‌ರವರು ಚಂದ್ರಯಾನ-೦೩ ಯಶಸ್ವಿಯಾದ ಹಿನ್ನಲೆಯಲ್ಲಿ ಇಸ್ರೋ ಸಾಧನೆಯನ್ನು ನೋಟು  ಸಮರ್ಪಿಸಿ ಅಭಿನಂದಿಸಿದ್ದಾರೆ.
    ಐತಿಹಾಸಿಕ ಸಾಧನೆಯ ದಿನಾಂಕ ಹೊಂದಿರುವ ರು.೧೦ ಮುಖ ಬೆಲೆಯ ನೋಟು ಸಮರ್ಪಿಸಿದ್ದಾರೆ.  

ಐತಿಹಾಸಿಕ ಸಾಧನೆಯ ದಿನಾಂಕ ಹೊಂದಿರುವ ನೋಟು.
ರಾಜಕಾರಣಿಗಳು, ಮಠಾಧೀಶರು, ಚಲನಚಿತ್ರ ನಟರು, ಸಾಹಿತಿಗಳು, ಕವಿ, ಕ್ರೀಡಾಪಟು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಸಭೆ ಸಮಾರಂಭಗಳಲ್ಲಿ ಅವರ ಜನ್ಮದಿನಾಂಕ ಹೊಂದಿರುವ ನೋಟು ಉಡುಗೊರೆಯಾಗಿ ನೀಡುವ ಮೂಲಕ ಶುಭ ಹಾರೈಸುವ ಹಾಗು ನಿಧನರಾದ ಸಂದರ್ಭದಲ್ಲಿ ಮರಣ ದಿನಾಂಕ ಹೊಂದಿರುವ ನೋಟಿನ ಮೂಲಕ ಸಂತಾಪ ಸೂಚಿಸುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದಾರೆ.


ಹಿರಿಯ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ  ಸಂಗ್ರಹಗಾರ ಗಣೇಶ್‌

Wednesday, August 23, 2023

ಕೋಟ್ಪಾ ಕಾಯ್ದೆಯಡಿ ೨೨ ಪ್ರಕರಣ ದಾಖಲು : ೩,೫೦೦ ರು. ದಂಡ ವಸೂಲಿ

ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ  ಸುತ್ತಮುತ್ತಲ ವ್ಯಾಪ್ತಿಯಲ್ಲಿ  ಹಾಗೂ ತರೀಕೆರೆ ರಸ್ತೆಯಲ್ಲಿ ಬುಧವಾರ ಕೋಟ್ಪಾ ಕಾಯ್ದೆಯಡಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ಭದ್ರಾವತಿ, ಆ. ೨೩ :  ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ  ಸುತ್ತಮುತ್ತಲ ವ್ಯಾಪ್ತಿಯಲ್ಲಿ  ಹಾಗೂ ತರೀಕೆರೆ ರಸ್ತೆಯಲ್ಲಿ ಬುಧವಾರ ಕೋಟ್ಪಾ ಕಾಯ್ದೆಯಡಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ಕಾರ್ಯಾಚರಣೆಯಲ್ಲಿ ಒಟ್ಟು ೨೨ ಪ್ರಕರಣಗಳನ್ನು ದಾಖಲಿಸಿಕೊಂಡು ೩,೫೦೦ ರು. ದಂಡ ಸಂಗ್ರಹಿಸಲಾಗಿದೆ. ಅಲ್ಲದೆ ತಂಬಾಕು ಮಾರಾಟಗಾರರಿಗೆ ತಿಳುವಳಿಕೆ ನೀಡಲಾಗಿದೆ.
    ತಂಡದ ನೇತೃತ್ವ  ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಹಾಗೂ ಜಿಲ್ಲಾ ಕಾರ್ಯಕ್ರಮ ಅಧಿಕಾರಿಯಾಗಿರುವ ಡಾ. ಓ. ಮಲ್ಲಪ್ಪ ವಹಿಸಿದ್ದರು. ತಂಡದಲ್ಲಿ ಜಿಲ್ಲಾ ಸಲಹೆಗಾರ  ಹೇಮಂತ್ ರಾಜ್ ಅರಸ್,  ಸಮಾಜ ಕಾರ್ಯಕರ್ತ ರವಿರಾಜ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆನಂದಮೂರ್ತಿ ಹಾಗು ಸಿಬ್ಬಂದಿಗಳು ಭಾಗವಹಿಸಿದ್ದರು.

ಡಾ. ಅಮದಾ ಸಿ. ಮುನಿರಾಜ್‌ಗೆ ಪಿಎಚ್‌ಡಿ : ಬಿಜಿಎಸ್‌ ಆಡಳಿತ ಮಂಡಳಿ ಸನ್ಮಾನ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ (ಬಿಜಿಎಸ್)ದ  ಪ್ರಾಂಶುಪಾಲರಾದ  ಡಾ. ಅಮದಾ ಸಿ. ಮುನಿರಾಜ್ ರವರಿಗೆ ಪಿಎಚ್‌ಡಿ ಪದವಿ ಲಭಿಸಿದ್ದು, ಈ ಹಿನ್ನಲೆಯಲ್ಲಿ ಇವರನ್ನು ವಿದ್ಯಾಲಯದ  ಆಡಳಿತ ಮಂಡಳಿವತಿಯಿಂದ ಸನ್ಮಾನಿಸಲಾಯಿತು.
    ಭದ್ರಾವತಿ, ಆ. ೨೩ : ತಾಲೂಕಿನ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕೇಂದ್ರೀಯ ವಿದ್ಯಾಲಯ (ಬಿಜಿಎಸ್)ದ  ಪ್ರಾಂಶುಪಾಲರಾದ  ಡಾ. ಅಮದಾ ಸಿ. ಮುನಿರಾಜ್ ರವರಿಗೆ ಪಿಎಚ್‌ಡಿ ಪದವಿ ಲಭಿಸಿದ್ದು, ಈ ಹಿನ್ನಲೆಯಲ್ಲಿ ಇವರನ್ನು ವಿದ್ಯಾಲಯದ  ಆಡಳಿತ ಮಂಡಳಿವತಿಯಿಂದ ಸನ್ಮಾನಿಸಲಾಯಿತು.
    ಡಾ. ಅಮದಾ ಸಿ. ಮುನಿರಾಜ್‌ರವರು ಹಲವಾರು ವರ್ಷಗಳಿಂದ ವಿದ್ಯಾಲಯದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ನಡುವೆ ಹೆಚ್ಚಿನ ವಿದ್ಯಾಭ್ಯಾಸ ಪೂರೈಸಿ  ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ.
    ಆಡಳಿತ ಅಧಿಕಾರಿ ಬಿ. ಜಗದೀಶ, ಉಪಪ್ರಾಂಶುಪಾಲ ಎಂ.ಎಂ ವೀರರಾಜೇಂದ್ರ ಸ್ವಾಮಿ, ಮುಖ್ಯೋಪಾಧ್ಯಾಯಿನಿ ಕೆ.ಎನ್ ದಿವ್ಯ,ವಾಹನ ವ್ಯವಸ್ಥಾಪಕ ಸೋಮಶೇಖರ್  ಸೇರಿದಂತೆ ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶ್ರೀ ವಿನಯ್‌ ಗುರೂಜಿ ಹುಟ್ಟುಹಬ್ಬದ ಪ್ರಯುಕ್ತ ಆ.೨೪ರಂದು ಆರೋಗ್ಯ ಶಿಬಿರ

    ಭದ್ರಾವತಿ, ಆ. ೨೩ : ತಾಲೂಕಿನ ಗೋಣಿಬೀಡು ಮಲ್ಲಿಗೇನಹಳ್ಳಿ ಶ್ರೀ ನವನಾಗ ಬ್ರಹ್ಮ ದತ್ತ ಕ್ಷೇತ್ರ ಸೇವಾ ಟ್ರಸ್ಟ್‌ ವತಿಯಿಂದ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ ಹಾಗು ಶಂಕರ್‌ ಕಣ್ಣಿನ ಆಸ್ಪತ್ರೆ ಮತ್ತು ಬಿಆರ್‌ಪಿ ಸಂಯುಕ್ತ ಆಸ್ಪತ್ರೆ ಸಹಯೋಗದೊಂದಿಗೆ ಆ. ೨೪ರ ಗುರುವಾರ ಬೃಹತ್‌ ರಕ್ತದಾನ ಮತ್ತು ಆರೋಗ್ಯ ಹಾಗು ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
    ಚಿಕ್ಕಮಗಳೂರು ಗೌರಿಗದ್ದೆ ದತ್ತಾಶ್ರಮದ ಅವಧೂತ ಶ್ರೀ ವಿನಯ್‌ ಗುರೂಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಬಿ.ಆರ್‌.ಪಿ ಬಸ್‌ ನಿಲ್ದಾಣ ಮುಂಭಾಗ  ಒಕ್ಕಲಿಗರ ಸಂಘದಲ್ಲಿ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೯೦೬೧೮೧೦೬೬ ಅಥವಾ ೯೪೪೯೫೩೩೯೬೧ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಸಾರ್ವಜನಿಕರ ಶಿಬಿರದ ಸದುಯಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

೫೦ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರಿಗೆ ಐಎಂಎ ಸನ್ಮಾನ

ಭಾರತೀಯ ವೈದ್ಯಕೀಯ ಸಂಘದ ಭದ್ರಾವತಿ ತಾಲೂಕು ಶಾಖೆವತಿಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಅ. ೨೩:  ಭಾರತೀಯ ವೈದ್ಯಕೀಯ ಸಂಘದ ತಾಲೂಕು ಶಾಖೆವತಿಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ನಗರದಲ್ಲಿ sಸುಮಾರು ೫೦ ವರ್ಷಗಳಿಗೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರ ಸೇವೆಯನ್ನು ಶ್ಲಾಘಿಸುವ ಜೊತೆಗೆ ಇಂದಿನ ಯುವ ವೈದ್ಯರಿಗೆ ಮಾದರಿಯಾಗುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಐಎಂಎ ತಾಲೂಕು ಶಾಖೆಯಿಂದ ಕೋರಲಾಯಿತು.
    ಹಿರಿಯ ವೈದ್ಯರಾದ ಡಾ. ಪದ್ಮಾವತಿ, ಡಾ. ರಾಜಣ್ಣ, ಡಾ.ಆರ್.ಆರ್ ಶೆಟ್ಟಿ, ಡಾ. ಕೃಷ್ಣ ಎಸ್ ಭಟ್, ಡಾ.ಎಂ. ರವೀಂದ್ರನಾಥ್ ಕೋಠಿ, ಮೆಗ್ಗಾನ್ ಆಸ್ಪತ್ರೆ ನಿವೃತ್ತ ಜಿಲ್ಲಾ ಸರ್ಜನ್ ಡಾ. ನಂದಾ ಆರ್. ಕೋಠಿ, ಹಾಗು ಡಾ. ಹಂಚಾಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಚಿಕ್ಕಮಗಳೂರು ಗೌರಿಗದ್ದೆ ದತ್ತಾಶ್ರಮದ ಅವಧೂತ ಶ್ರೀ ವಿನಯ್ ಗುರುಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ವೈದ್ಯಕೀಯ ಸಂಘದ ಪದಾಧಿಕಾರಿಗಳಾದ ಡಾ. ವಿದ್ಯಾ, ಡಾ. ವೀಣಾ ಭಟ್, ಡಾ. ಸುನಿತಾ ಭಟ್, ಡಾ.ಪ್ರಶಾಂತ ಭಟ್, ,. ಡಾ.ಅರುಣ್ ಶೆಟ್ಟಿ ರವರುಗಳು ಉಪಸ್ಥಿತರಿದ್ದರು.

‘ಕ್ರಾಂತಿಕಾರಿ ಗದ್ದರ್-ಒಂದು ನೆನಪು’ ಕಾರ್ಯಕ್ರಮ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಭದ್ರಾವತಿ ತಾಲೂಕು ಶಾಖೆ ವತಿಯಿಂದ ಉಂಬ್ಳೆಬೈಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ 'ಕ್ರಾಂತಿಕಾರಿ ಗದ್ದರ್-ಒಂದು ನೆನಪು' ಕಾರ್ಯಕ್ರಮ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್. ಮಲ್ಲಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
    ಭದ್ರಾವತಿ, ಆ. ೨೩: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ)  ತಾಲೂಕು ಶಾಖೆ ವತಿಯಿಂದ ಉಂಬ್ಳೆಬೈಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ  'ಕ್ರಾಂತಿಕಾರಿ ಗದ್ದರ್-ಒಂದು ನೆನಪು' ಕಾರ್ಯಕ್ರಮ ಬುಧವಾರ ನಡೆಯಿತು.
      ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್. ಮಲ್ಲಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಸಂಚಾಲಕ ಕೆ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು.  ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಪ್ರಸ್ತಾವಿಕ ನುಡಿಗಳನ್ನಾಡಿದರು.    
       ಜಿಲ್ಲಾ  ಸಂಚಾಲಕ ಚಿನ್ನಯ್ಯ, ಮುಖಂಡರಾದ ಕರ್ನಾಟಕ ಜನಶಕ್ತಿ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್, ದೇವೇಂದ್ರಪ್ಪ,  ಸಿ. ಜಯಪ್ಪ, ಜಿ. ರಾಜು, ಕಾಣಿಕ್ ರಾಜ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tuesday, August 22, 2023

ಜೆಡಿಎಸ್‌ ಎಸ್‌ಸಿ ಘಟಕ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವೆಂಕಟೇಶ್‌ ರಾಜೀನಾಮೆ

ಭದ್ರಾವತಿ ಜಾತ್ಯಾತೀತ ಜನತಾದಳ ಪರಿಶಿಷ್ಟ ಜಾತಿ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಂಗಳವಾರ ಉಜ್ಜನಿಪುರ ವೆಂಕಟೇಶ್‌ ರಾಜೀನಾಮೆ ಸಲ್ಲಿಸಿದ್ದಾರೆ.
    ಭದ್ರಾವತಿ, ಆ. ೨೨ : ಜಾತ್ಯಾತೀತ ಜನತಾದಳ ಪರಿಶಿಷ್ಟ ಜಾತಿ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಂಗಳವಾರ ಉಜ್ಜನಿಪುರ ವೆಂಕಟೇಶ್‌ ರಾಜೀನಾಮೆ ಸಲ್ಲಿಸಿದ್ದಾರೆ.
    ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಕಳೆದ ಸುಮಾರು ೮ ತಿಂಗಳಿನಿಂದ ಪ್ರಧಾನ ಕಾರ್ಯದರ್ಶಿ ಹುದ್ದೆ ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಇದೀಗ ವೈಯಕ್ತಿಕ ಕಾರಣಗಳಿಂದ ಹುದ್ದೆ ನಿರ್ವಹಿಸಲು ಸಾಧ್ಯವಾಗದಿರುವ ಹಿನ್ನಲೆಯಲ್ಲಿ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ವೆಂಕಟೇಶ್‌ ಮನವರಿಕೆ ಮಾಡಿದ್ದಾರೆ.

ವಿಐಎಸ್‌ಎಲ್‌ನಲ್ಲಿ ಕೊನೆಗೂ ಉತ್ಪಾದನೆ ಆರಂಭಕ್ಕೆ ಕ್ಷಣಗಣನೆ

ಬಿಲಾಯ್‌ ಘಟಕದಿಂದ ೧೯ ವ್ಯಾಗನ್‌ಗಳಲ್ಲಿ ಬಂದು ತಲುಪಿದ ಬ್ಲೂಮ್‌ಗಳು

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇದೀಗ ಪುನಃ ಉತ್ಪಾದನೆ ಆರಂಭಿಸುವುದು ಬಹುತೇಕ ಖಚಿತವಾಗಿದ್ದು, ಅಗತ್ಯವಿರುವ ಕಚ್ಛಾ ಸಾಮಾಗ್ರಿಗಳು ಮಂಗಳವಾರ ಕಾರ್ಖಾನೆ ತಲುಪಿವೆ. ಇವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು.
    ಭದ್ರಾವತಿ, ಆ. ೨೨ :  ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇದೀಗ ಪುನಃ ಉತ್ಪಾದನೆ ಆರಂಭಿಸುವುದು ಬಹುತೇಕ ಖಚಿತವಾಗಿದ್ದು, ಅಗತ್ಯವಿರುವ ಕಚ್ಛಾ ಸಾಮಾಗ್ರಿಗಳು ಮಂಗಳವಾರ ಕಾರ್ಖಾನೆ ತಲುಪಿವೆ. ಇದರಿಂದಾಗಿ ಕಾರ್ಖಾನೆ ಆಡಳಿತ ಮಂಡಳಿ ಹಾಗು ಕಾರ್ಮಿಕ ವಲಯದಲ್ಲಿ ಸಂತಸ ಮನೆ ಮಾಡಿದೆ.
    ಕಾರ್ಖಾನೆ ಮುಂಭಾಗದಲ್ಲಿ ಕಳೆದ ಸುಮಾರು ೮ ತಿಂಗಳಿನಿಂದ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಿರಂತರವಾಗಿ ನಡೆಸುತ್ತಿರುವ ಹೋರಾಟಕ್ಕೆ ಒಂದು ಹಂತದಲ್ಲಿ ಜಯ ಲಭಿಸಿದೆ.  
    ಆ.೧೦ರಿಂದ ಕಾರ್ಖಾನೆಯಲ್ಲಿ ಬಾರ್‌ ಮಿಲ್‌ ಆರಂಭಿಸುವುದಾಗಿ ಉಕ್ಕು ಪ್ರಾಧಿಕಾರ  ಈ ಹಿಂದೆ ಘೋಷಿಸಿತ್ತು. ಅಲ್ಲದೆ ಈ ಕುರಿತು ಕಾರ್ಖಾನೆ ಅಧಿಕಾರಿಗಳು ಪ್ರಕಟಣೆ ಸಹ ಹೊರಡಿಸಿದ್ದರು. ಆದರೆ ಕಚ್ಛಾ ಸಾಮಾಗ್ರಿಗಳು ಪೂರೈಕೆಯಾಗದಿರುವುದು ಸೇರಿದಂತೆ ಕೆಲವು ಕಾರಣಗಳಿಂದಾಗಿ ಮುಂದೂಡಲ್ಪಟ್ಟಿತ್ತು.
    ಇದೀಗ ಅಗತ್ಯವಿರುವ ಕಚ್ಛಾ ಸಾಮಾಗ್ರಿಗಳು ಉಕ್ಕು ಪ್ರಾಧಿಕಾರದ ಬಿಲಾಯ್‌ ಘಟಕದಿಂದ ಮೊದಲ ಹಂತವಾಗಿ ಸುಮಾರು ೧೯ ವ್ಯಾಗನ್‌ಗಳಲ್ಲಿ ಬ್ಲೂಮ್‌ಗಳು ಬಂದು ತಲುಪಿವೆ. ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರು ಇವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿದರು.
    ಈ ನಡುವೆ ಗುತ್ತಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಮಾತನಾಡಿ, ಕಾರ್ಖಾನೆಯ ಆಧುನಿಕರಣ ಹಾಗೂ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳು ಶಾಶ್ವತವಾಗಿ ಪರಿಹಾರ ವಾಗುವವರೆಗೂ ನಮ್ಮ ಹೋರಾಟ ನಡೆಯಲಿದ್ದು, ಮುಂದಿನ  ಹೋರಾಟಗಳಲ್ಲೂ ಕಾರ್ಮಿಕರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.  

ಪಾರ್ವತಿ ಸಾಲೇರ ಇಂಜಿನಿಯರಿಂಗ್‌ನಲ್ಲಿ ಪ್ರಥಮ ‌ರ‍್ಯಾಂಕ್ : ಸನ್ಮಾನ

ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ ೨೦೨೩ನೇ ಶೈಕ್ಷಣಿಕ ಸಾಲಿನಲ್ಲಿ ನಡೆಸಿದ  ಇಂಜಿನಿಯರಿಂಗ್‌ ಪರೀಕ್ಷೆಯ ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಪ್ರಥಮ ‌ರ‍್ಯಾಂಕ್ ಪಡೆದ ಭದ್ರಾವತಿ ನಗರದ ಜನ್ನಾಪುರ ನಿವಾಸಿ ಪಾರ್ವತಿ ಸಾಲೇರ .ಜೆ ಅವರನ್ನು ನ್ಯೂಟೌನ್‌ ಅಮಲೋದ್ಭವಿ ಮಾತೆ ದೇವಾಲಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಆ. ೨೨: ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ ೨೦೨೩ನೇ ಶೈಕ್ಷಣಿಕ ಸಾಲಿನಲ್ಲಿ ನಡೆಸಿದ  ಇಂಜಿನಿಯರಿಂಗ್‌ ಪರೀಕ್ಷೆಯ ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಪ್ರಥಮ ‌ರ‍್ಯಾಂಕ್ ಪಡೆದ ನಗರದ ಜನ್ನಾಪುರ ನಿವಾಸಿ ಪಾರ್ವತಿ ಸಾಲೇರ .ಜೆ ಅವರನ್ನು ನ್ಯೂಟೌನ್‌ ಅಮಲೋದ್ಭವಿ ಮಾತೆ ದೇವಾಲಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಪಾರ್ವತಿ ಸಾಲೇರ .ಜೆ ಅವರು ಜಮೀನ್ದಾರ್‌ ಜ್ಯೋತಿ ಸಾಲೇರ .ಎಸ್‌ ಹಾಗು ಐಶ್ವರ್ಯ ದಂಪತಿಯ ಪುತ್ರಿಯಾಗಿದ್ದು, ಇವರು ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ೬ ಚಿನ್ನದ ಪದಕದೊಂದಿಗೆ ಪ್ರಥಮ ‌ರ‍್ಯಾಂಕ್ ಪಡೆದುಕೊಂಡು ಕೀರ್ತಿತಂದಿದ್ದಾರೆ. ವಿಶೇಷವಾಗಿ ಪಾರ್ವತಿಯವರು ಕ್ಷೇತ್ರದಲ್ಲಿ ೨ ಬಾರಿ ಶಾಸಕರಾಗಿ ನಿಧನ ಹೊಂದಿರುವ ಸಾಲೇರ ಎಸ್‌ ಸಿದ್ದಪ್ಪ ಅವರ ಮೊಮ್ಮಗಳು ಎಂಬುದು ಹೆಮ್ಮೆಯ ಸಂಗತಿಯಾಗಿದೆ.
    ಇವರ ಸಾಧನೆಯನ್ನು ಅಭಿನಂದಿಸಿ ದೇವಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಧರ್ಮಗುರು ಫಾದರ್‌ ಲಾನ್ಸಿ ಡಿಸೋಜ, ಕಾರ್ಯದರ್ಶಿ ಅಂತೋಣಿ ವಿಲ್ಸನ್‌, ಸೈಂಟ್‌ ಚಾರ್ಲ್ಸ್‌ ಸಂಸ್ಥೆಯ ಸುಪೀರಿಯರ್‌ ಸಿಸ್ಟರ್‌ ಜೆಸಿಂತಾ ಡಿಸೋಜಾ, ವ್ಯಾಲೆಂಟೀನಾ ಸಿಕ್ವೆರಾ, ಆರ್.ಎಸ್‌ ಪೀಟರ್‌ ಜೋಸೆಫ್‌, ಅಂತೋನಿ ಕ್ರೂಸ್‌ , ಸಲಿನ್‌ ಗೊನ್ಸಲ್ವಿಸ್‌, ರೋಸಿ ಡಿಸೋಜ, ನಿರ್ಮಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಿಕಲಚೇತನ ಕ್ರೀಡಾಪಟು ಎಸ್. ಜ್ಯೋತಿ ಸಾಧನೆ

ಯರೇಹಳ್ಳಿ ಗ್ರಾಮ ಪಂಚಾಯಿತಿ ಅಭಿನಂದನೆ

ಭದ್ರಾವತಿ ತಾಲೂಕಿನ ಯರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಣೀನರಸೀಪುರ ಗ್ರಾಮದ ನಿವಾಸಿ, ವಿಕಲಚೇತನ ಕ್ರೀಡುಪಟು, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್. ಜ್ಯೋತಿ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆಯೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇವರನ್ನು ಮಂಗಳವಾರ ಗ್ರಾಮ ಪಂಚಾಯಿತಿ ಸನ್ಮಾನಿಸಿ ಅಭಿನಂದಿಸಿತು.
    ಭದ್ರಾವತಿ, ಆ. ೨೨ : ತಾಲೂಕಿನ ಯರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಣೀನರಸೀಪುರ ಗ್ರಾಮದ ನಿವಾಸಿ, ವಿಕಲಚೇತನ ಕ್ರೀಡುಪಟು, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್. ಜ್ಯೋತಿ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆಯೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ಮಲೇಷಿಯಾದಲ್ಲಿ ಜರುಗಿದ ಕ್ರೀಡಾಕೂಟದ  ಪ್ಯಾರ ಥ್ರೋಬಾಲ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು  ದೇಶಕ್ಕೆ ಕೀರ್ತಿ ತಂದಿದ್ದಾರೆ.  ಜ್ಯೋತಿಯವರು ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಇವರ ಸಾಧನೆಯನ್ನು ರಾಜ್ಯ ಸರ್ಕಾರ ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲೂ ಜ್ಯೋತಿಯವರು ಸಾಧನೆ ಮಾಡಿರುವುದು ಉಕ್ಕಿನ ನಗರದ ಕೀರ್ತಿ ಪತಾಕೆಯನ್ನು ಮತ್ತಷ್ಟು ಹೆಚ್ಚಿಸಿದೆ.
    ಯರೇಹಳ್ಳಿ ಗ್ರಾಮ ಪಂಚಾಯಿತಿ ಅಭಿನಂದನೆ:
    ಜ್ಯೋತಿಯವರ ಸಾಧನೆಯನ್ನು ಯರೇಹಳ್ಳಿ ಗ್ರಾಮ ಪಂಚಾಯಿತಿ ಪ್ರಶಂಸಿಸುವ ಜೊತೆಗೆ ಅಭಿನಂದಿಸಿದೆ. ಮಂಗಳವಾರ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಶಾಂತಬಾಯಿ ರಮೇಶ್‌ .ಬಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ ಹಾಗು ಸಿಬ್ಬಂದಿಗಳು  ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.  

ಬೆರಳು ಮುದ್ರೆ ಪರಿಶೀಲನೆ : ತಲೆಮರೆಸಿಕೊಂಡಿದ್ದ ವ್ಯಕ್ತಿ ಸೆರೆ

ಭದ್ರಾವತಿ ಬೆರಳು ಮುದ್ರೆ ಪರಿಶೀಲನೆ ಮೂಲಕ ೬ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯೋರ್ವನನ್ನು ಪತ್ತೆ ಮಾಡುವಲ್ಲಿ ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಭದ್ರಾವತಿ, ಆ. ೨೨: ಬೆರಳು ಮುದ್ರೆ ಪರಿಶೀಲನೆ ಮೂಲಕ ೬ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯೋರ್ವನನ್ನು ಪತ್ತೆ ಮಾಡುವಲ್ಲಿ ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.


    ಆಕಾಶ್ ಗೌಡ ಅಲಿಯಾಸ್ ಅಪ್ಪ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ರಾತ್ರಿ ಗಸ್ತು ವೇಳೆಯಲ್ಲಿ ಈತ ಅನುಮಾನಸ್ಪದವಾಗಿ ಸಿಕ್ಕಿ ಬಿದ್ದಿದ್ದಾನೆ. ತಕ್ಷಣ ಜಾಗೃತರಾದ ಪೊಲೀಸರು ಎಂಸಿಸಿಟಿಎನ್‌ಎಸ್ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ನ ಮೂಲಕ ಈತನ ಬೆರಳು ಮುದ್ರೆ ಪರಿಶೀಲನೆ ನಡೆಸಿದ್ದು, ೬ ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಈತನನ್ನು ಬಂಧಿಸಿ ಮುಂದಿನ ಕ್ರಮ ಕ್ರೈಗೊಂಡಿದ್ದಾರೆ.
    ಪೊಲೀಸ್ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಹಾಗು ಪೊಲೀಸ್ ಉಪಾಧೀಕ್ಷಕ ನಾಗರಾಜ್ ಅಭಿನಂದಿಸಿದ್ದಾರೆ.

ಆ.೨೯ರಂದು ಶ್ರೀಕೃಷ್ಣ ವೇಷ ಪ್ರದರ್ಶನ

    ಭದ್ರಾವತಿ, ಆ. ೨೨ : ತರುಣಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ವೇಷ ಪ್ರದರ್ಶನ ಆ.೨೯ರ ಮಂಗಳವಾರ ಹಮ್ಮಿಕೊಳ್ಳಲಾಗಿದೆ.
    ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಪ್ರದರ್ಶನ ಮಧ್ಯಾಹ್ನ ೧.೩೦ಕ್ಕೆ ನಡೆಯಲಿದ್ದು, ಪ್ರದರ್ಶನದಲ್ಲಿ ೫ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಎಲ್ಲಾ ಮಕ್ಕಳಿಗೂ ಬಹುಮಾನ ಹಾಗು ಸಿಹಿ ವಿತರಿಸಲಾಗುವುದು ಎಂದು ತರುಣಭಾರತಿ ಶಿಶುಮಂದಿರದ ಸಂಚಾಲಕಿ ಸರ್ವಮಂಗಳ ತಿಳಿಸಿದ್ದಾರೆ.