Wednesday, June 30, 2021

ಕೇಂದ್ರ, ರಾಜ್ಯ ಸರ್ಕಾರಗಳಿಂದ ಲಸಿಕಾ ರಾಜಕಾರಣ : ಕಾಂಗ್ರೆಸ್ ಆರೋಪ

ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ


ಭದ್ರಾವತಿ ರಂಗಪ್ಪ ವೃತ್ತದಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಮನ್ ಕೀ ಬಾತ್ ಸಾಕು ಲಸಿಕೆ ಬೇಕು, ಲಸಿಕೆ ರಾಜಕಾರಣ ನಿಲ್ಲಿಸಿ ಇತ್ಯಾದಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
   ಭದ್ರಾವತಿ, ಜೂ. ೩೦: ಕೋವಿಡ್-೧೯ರ ಸಂಕಷ್ಟದ ಸಮಯದಲ್ಲಿ ಕೇಂದ್ರ ಹಾಗು ರಾಜ್ಯ ಬಿಜೆಪಿ ಸರ್ಕಾರಗಳು ಲಸಿಕಾ ರಾಜಕಾರಣ ನಡೆಸುತ್ತಿದ್ದು, ಪ್ರತಿಯೊಬ್ಬರಿಗೂ ಲಸಿಕೆ ನೀಡುವಲ್ಲಿ ವಿಫಲವಾಗಿವೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಆರೋಪಿಸಿದರು.
   ಬುಧವಾರ ನಗರದ ರಂಗಪ್ಪ ವೃತ್ತದಲ್ಲಿ ಮನ್ ಕೀ ಬಾತ್ ಸಾಕು ಲಸಿಕೆ ಬೇಕು, ಲಸಿಕೆ ರಾಜಕಾರಣ ನಿಲ್ಲಿಸಿ ಇತ್ಯಾದಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಮುಖಂಡರು,  ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಸಹ ಇದುವರೆಗೂ ಕೇಂದ್ರ ಹಾಗು ರಾಜ್ಯ ಬಿಜೆಪಿ ಸರ್ಕಾರಗಳು ಲಸಿಕೆ ನೀಡದೆ ನಿರ್ಲಕ್ಷ್ಯ ವಹಿಸಿವೆ. ತಕ್ಷಣ ಪ್ರತಿಯೊಬ್ಬರು ಲಸಿಕೆ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ನೇತೃತ್ವ ವಹಿಸಿದ್ದರು. ನಗರಸಭಾ ಸದಸ್ಯರಾದ ಜಾರ್ಜ್, ಆರ್. ಶ್ರೇಯಸ್, ಲತಾ ಚಂದ್ರಶೇಖರ್, ರಿಯಾಜ್ ಅಹಮದ್, ಮುಖಂಡರಾದ ಎಚ್.ಎಸ್ ಶಂಕರ್‌ರಾವ್, ಎಂ. ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ಯುವ ಕಾಂಗ್ರೆಸ್ ಗ್ರಾಮಾಂತರ ಘಟಕ ಉಪಾಧ್ಯಕ್ಷ ಪ್ರವೀಣ್ ಕಲ್ಪನಹಳ್ಳಿ  ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಭದ್ರಾವತಿಯಲ್ಲಿ ೪೫ ಕೊರೋನಾ ಸೋಂಕು ಪತ್ತೆ

ಭದ್ರಾವತಿ, ಜೂ. ೩೦: ತಾಲೂಕಿನ ಬುಧವಾರ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದ್ದು, ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.
   ತಾಲೂಕಿನ ಗ್ರಾಮಾಂತರ ಭಾಗದಲ್ಲಿ ೨೨ ಹಾಗು ನಗರ ಭಾಗದಲ್ಲಿ ೨೩ ಸೋಂಕು ಸೇರಿದಂತೆ ಒಟ್ಟು ೪೫ ಸೋಂಕು ಪತ್ತೆಯಾಗಿವೆ. ನಗರ ಭಾಗದಲ್ಲಿ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಸ್ವಲ್ಪ ಮಟ್ಟಿಗೆ ಸೋಂಕು ಏರಿಕೆಯಾಗಿರುವುದು ಪುನಃ ಆತಂಕ ಹೆಚ್ಚು ಮಾಡಿದೆ.  

ಜು.೨ರಂದು ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

ಭದ್ರಾವತಿ, ಜೂ. ೩೦: ತಾಲೂಕಿನ ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ ಶಾಲಾ ಮಕ್ಕಳಿಗೆ ಜು.೨ರಂದು ಮಧ್ಯಾಹ್ನ ೩.೩೦ಕ್ಕೆ ಉಚಿತ ನೋಟ್ ವಿತರಣೆ ನಡೆಯಲಿದೆ.
    ಅರಳಿಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಟ್ರಸ್ಟ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಸೇವಾ ಕಾರ್ಯಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಶಾಲಾ ಮಕ್ಕಳ ಪೋಷಕರು, ಗ್ರಾಮದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಎ. ಧರ್ಮೇಂದ್ರ ಕೋರಿದ್ದಾರೆ.

ಜು.೧ರಿಂದ ಶೈಕ್ಷಣಿಕ ಚಟುವಟಿಕೆ ಆರಂಭ : ಮಕ್ಕಳು ಶಾಲೆಗಳಿಗೆ ಹಾಜರಾಗದೆ ಮನೆಗಳಲ್ಲಿಯೇ ಇದ್ದು ಕಲಿಯಿರಿ

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಮಾಹಿತಿ


ಭದ್ರಾವತಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಮಾತನಾಡಿದರು.
   ಭದ್ರಾವತಿ, ಜೂ. ೩೦: ತಾಲೂಕಿನಲ್ಲಿ ಜು.೧ರಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಲಿದ್ದು, ಮಕ್ಕಳು ಶಾಲೆಗಳಿಗೆ ಹಾಜರಾಗದೆ ಮನೆಗಳಲ್ಲಿಯೇ ಕಲಿಕೆಗೆ ಅಗತ್ಯವಿರುವ ವ್ಯವಸ್ಥೆಗಳನ್ನು ರೂಪಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ತಿಳಿಸಿದರು.
    ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್-೧೯ರ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಭೌತಿಕವಾಗಿ ತರಗತಿಗಳನ್ನು ಆರಂಭಿಸುತ್ತಿಲ್ಲ. ಪೋಷಕರು ದಾಖಲಾತಿ ಪ್ರಕ್ರಿಯೆಗೆ ಮಾತ್ರ ಮಕ್ಕಳನ್ನು ಶಾಲೆಗಳಿಗೆ ಕರೆತರಬೇಕಾಗಿದೆ. ಉಳಿದಂತೆ ಮಕ್ಕಳ ಕಲಿಕೆಗೆ ಸಂಬಂಧಿಸಿದಂತೆ ೨ ಹಂತದ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ಮಕ್ಕಳು ಮನೆಗಳಲ್ಲಿಯೇ ಇದ್ದು ಕಲಿಕೆ ಆರಂಭಿಸಬೇಕಾಗಿದೆ. ಈಗಾಗಲೇ ಕಳೆದ ೧೫ ದಿನಗಳಿಂದ ತಾಲೂಕಿನಾದ್ಯಂತ ಟಿ.ವಿ, ಮೊಬೈಲ್ ಸೌಲಭ್ಯಗಳನ್ನು ಹೊಂದಿರುವ ಹಾಗು ಯಾವುದೇ ಸೌಲಭ್ಯಗಳನ್ನು ಹೊಂದಿಲ್ಲದ ಮಕ್ಕಳನ್ನು ಗುರುತಿಸಲಾಗಿದೆ. ಈ ಮಕ್ಕಳಿಗೆ ೨ ರೀತಿಯ ಯೋಜನೆ ಮೂಲಕ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
   ಯೋಜನೆ-೧ರಲ್ಲಿ ಯಾವುದೇ ಸೌಲಭ್ಯ ಹೊಂದಿಲ್ಲದ ಮಕ್ಕಳಿಗೆ ಕಲಿಕೆಗೆ ಅಗತ್ಯವಿರುವ ಅಭ್ಯಾಸ ಚಟುವಟಿಕೆಗಳ ನಕಲು ಪ್ರತಿಗಳನ್ನು ಆಯಾ ಶಾಲೆಗಳ ಶಿಕ್ಷಕರು ಮಕ್ಕಳ ಮನೆಗಳಿಗೆ ತಲುಪಿಸಲಿದ್ದಾರೆ. ಯೋಜನೆ ೨ರಲ್ಲಿ ಟಿ.ವಿ, ಮೊಬೈಲ್ ಹೊಂದಿರುವ ಮಕ್ಕಳಿಗೆ ಆನ್‌ಲೈನ್ ಮೂಲಕ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ದೂರದರ್ಶನ ಚಂದನ ವಾಹಿನಿಲ್ಲಿ ೧ ರಿಂದ ೧೦ನೇ ತರಗತಿ ವರೆಗಿನ ಮಕ್ಕಳಿಗೆ ಪ್ರತಿದಿನ ಸಂವೇದ ಕಾರ್ಯಕ್ರಮದಡಿ ಪಾಠಗಳು ಪ್ರಸಾರವಾಗಲಿದ್ದು, ಮಕ್ಕಳು ಮನೆಗಳಲ್ಲಿಯೇ ಇದ್ದು ಕಲಿಯಬಹುದಾಗಿದೆ ಎಂದರು.
       ಮಕ್ಕಳ ದಾಖಲಾತಿಗೆ ಮನವಿ :
   ತಾಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಹಾಗು ಪ್ರೌಡಶಾಲೆಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ದಾಖಲಾತಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಈ ಬಾರಿ ಕೇವಲ ಶೇ.೪೦ರಷ್ಟು ದಾಖಲಾತಿ ನಡೆದಿದೆ. ನಿಗದಿತ ಅವಧಿಯಲ್ಲಿ ಮಕ್ಕಳನ್ನು ಶಾಲೆಗಳಿಗೆ ಕರೆತಂದು ದಾಖಲಾತಿ ಮಾಡುವಂತೆ ಟಿ.ಎನ್ ಸೋಮಶೇಖರಯ್ಯ ಪೋಷಕರಲ್ಲಿ ಮನವಿ ಮಾಡಿದರು.
    ಸುದ್ದಿಗೋಷ್ಠಿಯಲ್ಲಿ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಶಿವಪ್ರಸಾದ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವೈ. ಗಣೇಶ್, ಶಿಕ್ಷಣ ಸಂಯೋಜಕರಾದ ರವಿಕುಮಾರ್, ತಿಪ್ಪಮ್ಮ, ಸಿ.ಆರ್.ಪಿ ಚನ್ನಪ್ಪ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಪಂಚಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ : ವಿಐಎಸ್‌ಎಲ್ ಕಾರ್ಮಿಕರಿಂದ ನಡೆದ ೩ ದಿನಗಳ ಹೋರಾಟ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಮುಷ್ಕರ ನಡೆಸಿದರು.
    ಭದ್ರಾವತಿ, ಜೂ. ೩೦: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಮುಷ್ಕರ ನಡೆಸಿದರು.
    ಕಾರ್ಖಾನೆ ಮುಂಭಾಗ ಬೆಳಿಗ್ಗೆ ಮುಷ್ಕರ ಆರಂಭಿಸಿದ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಉಕ್ಕು ಪ್ರಾಧಿಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವೇತನ ಪರಿಷ್ಕರಣೆ ಅವಧಿ ಮುಕ್ತಾಯಗೊಂಡು ಸುಮಾರು ೫ ವರ್ಷಗಳು ಕಳೆದರೂ ಸಹ ಇದುವರೆಗೂ ವೇತನ ಪರಿಷ್ಕರಣೆ ಮಾಡಿರುವುದಿಲ್ಲ.  ತಕ್ಷಣ ಕಾಯಂ ಹಾಗು ಗುತ್ತಿಗೆ ಕಾರ್ಮಿಕರಿಗೆ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದರು.
   ಕಾರ್ಮಿಕರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ ಶೇ.೧೫ ಎಂಜಿಬಿ, ಶೇ.೩೫ ಪರ್ಕ್ಸ್ ಹಾಗು ಶೇ.೯ ಪೆನ್ಸನ್ ವಂತಿಗೆ ನೀಡುವ ಜೊತೆಗೆ ವೆಲೆಫೇರ್ ಅಲೋಯನ್ಸ್ ಹೆಚ್ಚಿಸುವಂತೆ ಹಾಗು ಕೋವಿಡ್-೧೯ ಸೋಂಕಿಗೆ ಒಳಗಾದ ಕಾರ್ಮಿಕರ ಅವಲಂಬಿತರಿಗೆ ಉದ್ಯೋಗ ಕಲ್ಪಿಸಿಕೊಡುವಂತೆ ಆಗ್ರಹಿಸಿದರು.
    ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಹೋರಾಟದ ನೇತೃತ್ವ ವಹಿಸಿದ್ದರು. ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.  
   ಸೋಮವಾರ ಕಪ್ಪುಪಟ್ಟಿ ಧರಿಸಿ ಹಾಗು ಮಂಗಳವಾರ ಸತ್ಯಾಗ್ರಹ ಮೂಲಕ ಹೋರಾಟ ನಡೆಸಲಾಯಿತು. ಒಟ್ಟು ೩ ದಿನಗಳ ಕಾಲ ನಡೆದ ಹೋರಾಟ ಯಶಸ್ವಿಯಾಗಿ ಮುಕ್ತಾಯಗೊಂಡಿತು.


Tuesday, June 29, 2021

ಕೊರೋನಾ ಲಸಿಕಾ ಕೇಂದ್ರದಲ್ಲಿನ ಗೊಂದಲ ಬಗೆಹರಿಸಿ : ಮನವಿ

    ಭದ್ರಾವತಿ, ಜೂ. ೨೯: ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಕೊರೋನಾ ಲಸಿಕೆ ಸಂಬಂಧ ಉಂಟಾಗಿರುವ ಗೊಂದಲ ಬಗೆಹರಿಸುವಂತೆ ಜನತಾದಳ (ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
    ಕೊರೋನಾ ಲಸಿಕೆ ನೀಡುವ ಸಂಬಂಧ ಉಂಟಾಗಿರುವ ಮಾಹಿತಿ ಕೊರತೆಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಲಸಿಕಾ ಕೇಂದ್ರದಲ್ಲಿ ಪ್ರತಿದಿನ ಲಭ್ಯವಿರುವ ಲಸಿಕೆ ಪ್ರಮಾಣ, ಲಸಿಕೆ ನೀಡುವ ದಿನ, ೨ನೇ ಡೋಸ್ ನೀಡುವ ದಿನ, ನಿಗದಿಪಡಿಸಲಾಗಿರುವ ವಯಸ್ಸಿನ ಮಾನದಂಡ ಇತ್ಯಾದಿ ಮಾಹಿತಿ ಸಾರ್ವಜನಿಕರಿಗೆ ತಿಳಿಯುವಂತೆ ಪ್ರಚಾರಪಡಿಸುವ ಮೂಲಕ ಗೊಂದಲ ಬಗೆಹರಿಸುವಂತೆ ಕೋರಿದ್ದಾರೆ.
      ಕೊರೋನಾ ಸೋಂಕು ಇಳಿಮುಖ:
   ತಾಲೂಕಿನ ಸೋಂಕಿನ ಪ್ರಮಾಣ ಬಹುತೇಕ ಇಳಿಮುಖವಾಗಿದ್ದು, ಮಂಗಳವಾರ ಕೇವಲ ೧೮ ಸೋಂಕು ಪತ್ತೆಯಾಗಿದೆ. ಗ್ರಾಮಾಂತರ ಭಾಗದಲ್ಲಿ ೭ ಹಾಗು ನಗರ ಭಾಗದಲ್ಲಿ ೧೧ ಸೋಂಕು ಸೇರಿದಂತೆ ಒಟ್ಟು ೧೮ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಯಾರು ಸಹ ಮೃತಪಟ್ಟಿಲ್ಲ ಎಂಬುದು ಸಮಾಧಾನಕರವಾದ ಸಂಗತಿಯಾಗಿದೆ.

ಜು.೧ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಜೂ. ೨೯: ಮೆಸ್ಕಾಂ ಲಕ್ಕವಳ್ಳಿ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜು.೧ ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಗೋಣಿಬೀಡು, ಸಿಂಗನಮನೆ, ಗ್ಯಾರೇಜ್ ಕ್ಯಾಂಪ್, ಶಾಂತಿನಗರ, ಶಂಕರಘಟ್ಟ, ತಾವರಘಟ್ಟ, ಎಚ್.ಕೆ ಜಂಕ್ಷನ್, ಕುವೆಂಪು ವಿಶ್ವ ವಿದ್ಯಾನಿಲಯ, ರಂಗನಾಥಪುರ, ತಮ್ಮಡಿಹಳ್ಳಿ, ಮಾಳೇನಹಳ್ಳಿ, ನಲ್ಲಿಸರ, ಮಲ್ಲಿಗೇನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸುವಂತೆ ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ಛಲವಾದಿ ಸಮಾಜದ ಅಭಿವೃದ್ಧಿಗೆ ಬದ್ಧ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ನಗರಸಭಾ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜೂ. ೨೯: ಛಲವಾದಿ ಸಮಾಜದ ಅಭಿವೃದ್ಧಿಗೆ  ಬದ್ಧವಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
    ಅವರು ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ನಗರಸಭಾ ಸದಸ್ಯರುಗಳಿಗೆ ಹಾಗು ವಿವಿಧ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಮಾಜದ ಹಿರಿಯ ಮುಖಂಡ ಡಿ. ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜ ಬೆಳೆದು ಬಂದ ದಾರಿ ಹಾಗು ಸಮಾಜದ ಬೇಡಿಕೆಗಳನ್ನು ವಿವರಿಸಿದರು.
    ನಗರಸಭೆ ನೂತನ ಸದಸ್ಯರಾದ ಚನ್ನಪ್ಪ, ಕೆ. ಉದಯ್‌ಕುಮಾರ್, ಸರ್ವಮಂಗಳ ಮತ್ತು ಪ್ರೇಮಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ಗೌರವಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಚ್.ಎಂ ಮಹಾದೇವಯ್ಯ, ಕಾರ್ಯದರ್ಶಿ ಲೋಕೇಶ್ ಮಾಳೇನಹಳ್ಳಿ, ಖಜಾಂಚಿ ಮಂಜುನಾಥ್, ನಗರಸಭಾ ಸದಸ್ಯ ಸುದೀಪ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಹಿರಿಯ ಮುಖಂಡ ಎಸ್.ಎಸ್ ಭೈರಪ್ಪ ಸ್ವಾಗತಿಸಿದರು. ಶಿಕ್ಷಕ ಎ. ತಿಪ್ಪೇಸ್ವಾಮಿ ನಿರೂಪಿಸಿದರು. ನಾಗೇಶ್ ವಂದಿಸಿದರು.

ಜು.೧ರಿಂದ ಶೈಕ್ಷಣಿಕ ಚಟುವಟಿಕೆ ಆರಂಭ : ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಮಸ್ಯೆ

ಭದ್ರಾವತಿ ಅರಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
    ಭದ್ರಾವತಿ, ಜೂ. ೨೯: ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಜು.೧ರಿಂದ ಆರಂಭಿಸಲು ಶಿಕ್ಷಣ ಇಲಾಖೆ ಸಕಲ ಸಿದ್ದತೆಗಳನ್ನು ಕೈಗೊಂಡಿದೆ. ಆದರೆ ಶಾಲಾ ಆರಂಭದ ಬಗ್ಗೆ ಬಹುತೇಕ ಪೋಷಕರಿಗೆ ಇನ್ನೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಆರಂಭವಾದರೂ ಸಹ ಮಕ್ಕಳು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.
   ಕೋವಿಡ್-೧೯ರ ಹಿನ್ನಲೆಯಲ್ಲಿ ಬಹುತೇಕ ಮಕ್ಕಳು ಕಳೆದ ಸುಮಾರು ೨ ವರ್ಷಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೆಲವು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅದರಲ್ಲೂ ಸರ್ಕಾರಿ ಶಾಲೆಗಳ ಮಕ್ಕಳ ಸ್ಥಿತಿ ಅಯೋಮಯವಾಗಿದೆ. ಈ ನಡುವೆ ಸರ್ಕಾರ ಇದೀಗ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸದೆ ಏಕಾಏಕಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಮುಂದಾಗಿದೆ. ಇದಕ್ಕೆ ಅಗತ್ಯವಿರುವ ಸಿದ್ದತೆಗಳನ್ನು ಕೈಗೊಂಡಿದೆಯಾದರೂ ಇದರ ಬಗ್ಗೆ ಪೋಷಕರಿಗೆ ಖಾತರಿಯಾಗುತ್ತಿಲ್ಲ.
    ತಾಲೂಕಿನಲ್ಲಿ ಸರ್ಕಾರಿ ಹಾಗು ಅನುದಾನಿತ ಒಟ್ಟು ೪೩೪ ಶಾಲೆಗಳಿದ್ದು, ಎಲ್ಲಾ ಶಾಲೆಗಳಲ್ಲೂ ಜು.೧ರಿಂದ ಚಟುವಟಿಕೆಗಳು ಆರಂಭಗೊಳ್ಳಲಿವೆ. ಮಕ್ಕಳು ಶಾಲೆಗಳಿಗೆ ಹಾಜರಾಗದಿದ್ದರೂ ಮೊದಲು ದಾಖಲಾತಿಯಾಗುವುದು ಅನಿವಾರ್ಯವಾಗಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ಬಹುತೇಕ ಪೋಷಕರು ಆತಂಕದಲ್ಲಿದ್ದು, ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವ ಮನಸ್ಥಿತಿಯಿಂದ ದೂರ ಉಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ಅದರಲ್ಲೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವುದು ಬಹುತೇಕ ಕಷ್ಟಕರ ಕೆಲಸವಾಗಿದೆ. ಇದು ಶಿಕ್ಷಣ ಇಲಾಖೆಗೆ ಸವಾಲಾಗಿ ಪರಿಣಾಮಿಸಿದೆ.  
   ಖಾಸಗಿ ಶಾಲೆಗಳು ಕಳೆದ ೨ ವರ್ಷಗಳಿಂದ ನಿರಂತರವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಿವೆ. ಅಲ್ಲದೆ ಮಕ್ಕಳ ಕಲಿಕಾ ಸಾಮರ್ಥ್ಯಗಳನ್ನು ಅರಿತುಕೊಳ್ಳಲು ಹಲವು ವಿನೂತನ ಪ್ರಯೋಗಗಳಿಗೆ ಮುಂದಾಗಿವೆ. ಜೊತೆಗೆ ಪೋಷಕರೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿವೆ. ಈ ಹಿನ್ನಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಸಮಸ್ಯೆ ಕಂಡು ಬರುತ್ತಿಲ್ಲ.

Monday, June 28, 2021

ಭದ್ರಾವತಿಯಲ್ಲಿ ಕೊರೋನಾಗೆ ೭ ಬಲಿ

   ಭದ್ರಾವತಿ, ಜೂ. ೨೮: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾದರೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಸೋಮವಾರ ಒಂದೇ ದಿನ ೭ ಜನ ಬಲಿಯಾಗಿದ್ದಾರೆ.
    ನಗರ ಭಾಗದಲ್ಲಿ ಒಟ್ಟು ೧೩ ಸೋಂಕು ದೃಢಪಟ್ಟಿದ್ದು, ಒಟ್ಟು ೬ ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಗ್ರಾಮೀಣ ಭಾಗದಲ್ಲಿ ೧೮ ಸೋಂಕು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ತಾಲೂಕಿನಲ್ಲಿ ೩೧ ಸೋಂಕು ಪತ್ತೆಯಾಗಿದ್ದು, ೭ ಮಂದಿ ಬಲಿಯಾಗಿದ್ದಾರೆ.



ಕೊರೋನಾ ಗೆದ್ದ ಡಿ.ಸಿ ಮಾಯಣ್ಣ :
    ಕೊರೋನಾ ಸೋಂಕಿಗೆ ಒಳಗಾಗಿ ಸುಮಾರು ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ೮೭ರ ಹರೆಯದ ಹಿರಿಯ ಕಾರ್ಮಿಕ ಮುಖಂಡ ಕಾಮ್ರೇಡ್ ಡಿ.ಸಿ ಮಾಯಣ್ಣ ಗುಣಮುಖರಾಗಿದ್ದಾರೆ.
ನಗರದಲ್ಲಿ ದಲಿತ ಮುಖಂಡ ಎಂ. ಶ್ರೀನಿವಾಸನ್ ಸೇರಿದಂತೆ ಹಲವಾರು ಹೋರಾಟಗಾರರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ನಡುವೆ ಡಿ.ಸಿ ಮಾಯಣ್ಣ ಚೇತರಿಸಿಕೊಂಡು ಮನೆಗೆ ಹಿಂದಿರುಗಿರುವುದು ಹೋರಾಟಗಾರರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದೆ. ಆಮ್ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಡಿ.ಸಿ ಮಾಯಣ್ಣ ಅವರಿಗೆ ಭಗವಂತ ಇನ್ನೂ ಹೆಚ್ಚಿನ ಆರೋಗ್ಯ ಕರುಣಿಸಲೆಂದು ಪ್ರಾರ್ಥಿಸುವ ಜೊತೆಗೆ ಮುಂದಿನ ಹೋರಾಟಗಳಿಗೆ ಡಿ.ಸಿ ಮಾಯಣ್ಣ ಶಕ್ತಿ ತುಂಬಲೆಂದು ಹಾರೈಸಿದ್ದಾರೆ.

ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್-೧೯ ಲಸಿಕೆ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪದವಿ ವಿದ್ಯಾರ್ಥಿಗಳಿಗೆ ಕೋವಿಡ್-೧೯ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
   ಭದ್ರಾವತಿ, ಜೂ. ೨೮: ನಗರದ ವಿವಿಧೆಡೆ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್-೧೯ ಲಸಿಕೆ ಉಚಿತವಾಗಿ ನೀಡಲಾಗುತ್ತಿದ್ದು, ಸೋಮವಾರ ಲಸಿಕಾ ಅಭಿಯಾನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಮತ್ತು ಬೊಮ್ಮನಕಟ್ಟೆ ಸರ್.ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜು ಸೇರಿದಂತೆ ಹಲವೆಡೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
   ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಹಿರಿಯ ವೈದ್ಯೆ ಡಾ.ಎಂ.ಆರ್ ಗಾಯತ್ರಿ, ನಗರಸಭಾ ಸದಸ್ಯ ಕೆ. ಸುದೀಪ್‌ಕುಮಾರ್ ಮತ್ತು ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಹಾಗು ಪ್ರಾಧ್ಯಾಪಕ ವೃಂದ ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಬೊಮ್ಮನಕಟ್ಟೆ ಸರ್.ಎಂ.ವಿ ವಿಜ್ಞಾನ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ವಿಷ್ಣುಮೂರ್ತಿ ಹಾಗು ಪ್ರಾಧ್ಯಾಪಕ ವೃಂದ ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ಬೊಮ್ಮನಕಟ್ಟೆ ಸರ್‌ಎಂವಿ ಸರ್ಕಾರಿ ವಿಜ್ಞಾನ  ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪದವಿ ವಿದ್ಯಾರ್ಥಿಗಳಿಗೆ ಕೋವಿಡ್-೧೯ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.


ವಿವಿಧ ಬೇಡಿಕೆ ಈಡೇರಿಕೆಗಾಗಿ ಕಾರ್ಮಿಕರಿಂದ ೩ ದಿನ ಹೋರಾಟ

ಮೊದಲ ದಿನ ಕಪ್ಪುಪಟ್ಟಿ ಧರಿಸಿ ಸೈಲ್ ವಿರುದ್ಧ ಆಕ್ರೋಶ


    ಭದ್ರಾವತಿ, ಜೂ. ೨೮: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರದಿಂದ ೩ ದಿನಗಳವರೆಗೆ ಹೋರಾಟ ಆರಂಭಿಸಿದ್ದಾರೆ.
    ಕಾರ್ಖಾನೆ ಮುಂಭಾಗ ಕಪ್ಪು ಬ್ಯಾಡ್ಜ್ ಧರಿಸಿ ಉಕ್ಕು ಪ್ರಾಧಿಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ವೇತನ ಪರಿಷ್ಕರಣೆ ಅವಧಿ ಮುಕ್ತಾಯಗೊಂಡು ಸುಮಾರು ೫ ವರ್ಷಗಳು ಕಳೆದರೂ ಸಹ ಇದುವರೆಗೂ ವೇತನ ಪರಿಷ್ಕರಣೆ ಮಾಡಿರುವುದಿಲ್ಲ.  ತಕ್ಷಣ ಕಾಯಂ ಹಾಗು ಗುತ್ತಿಗೆ ಕಾರ್ಮಿಕರಿಗೆ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಲಾಯಿತು.
    ಕಾರ್ಮಿಕರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ ಶೇ.೧೫ ಎಂಜಿಬಿ, ಶೇ.೩೫ ಪರ್ಕ್ಸ್ ಹಾಗು ಶೇ.೯ ಪೆನ್ಸನ್ ವಂತಿಗೆ ನೀಡುವ ಜೊತೆಗೆ ವೆಲೆಫೇರ್ ಅಲೋಯನ್ಸ್ ಹೆಚ್ಚಿಸುವಂತೆ ಹಾಗು ಕೋವಿಡ್-೧೯ ಸೋಂಕಿಗೆ ಒಳಗಾದ ಕಾರ್ಮಿಕರ ಅವಲಂಬಿತರಿಗೆ ಉದ್ಯೋಗ ಕಲ್ಪಿಸಿಕೊಡುವಂತೆ ಆಗ್ರಹಿಸಲಾಯಿತು.
   ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಹೋರಾಟದ ನೇತೃತ್ವ ವಹಿಸಿದ್ದರು. ಪದಾಧಿಕಾರಿಗಳಾದ ಯು.ಎ ಬಸಂತ್‌ಕುಮಾರ್, ಕೆ.ಆರ್ ಮನು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.  ಮಂಗಳವಾರ ಕಾರ್ಖಾನೆ ಮುಂಭಾಗ ಸತ್ಯಾಗ್ರಹ ಹಾಗು ಬುಧವಾರ ಒಂದು ದಿನದ ಮುಷ್ಕರ ನಡೆಯಲಿದೆ.

Sunday, June 27, 2021

ನಾಡಪ್ರಭು ಕೆಂಪೇಗೌಡ, ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹುಟ್ಟುಹಬ್ಬ

ನೂತನ ನಗರಸಭಾ ಸದಸ್ಯರಿಗೆ ಸನ್ಮಾನ, ಅಭಿನಂದನೆ

ಕೆಂಪೇಗೌಡ ಯುವ ಪಡೆ ವತಿಯಿಂದ ಭಾನುವಾರ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡ ಹಾಗು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ನಗರಸಭಾ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  
       ಭದ್ರಾವತಿ, ಜೂ. ೨೭: ಕೆಂಪೇಗೌಡ ಯುವ ಪಡೆ ವತಿಯಿಂದ ಭಾನುವಾರ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡ ಹಾಗು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ನಗರಸಭಾ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ನೂತನ ನಗರಸಭಾ ಸದಸ್ಯರಾದ ಆರ್. ಮೋಹನ್‌ಕುಮಾರ್, ಪಲ್ಲವಿ ದಿಲೀಪ್, ವಿಜಯ, ಲತಾ ಚಂದ್ರಶೇಖರ್, ಜಯಶೀಲ ಸುರೇಶ್ ಮತ್ತು ಸವಿತಾ ಉಮೇಶ್ ಅವರನ್ನು ಸನ್ಮಾನಿಸಲಾಯಿತು. ಕೆಂಪೇಗೌಡ ಯುವ ಪಡೆ ಅಧ್ಯಕ್ಷ ಆರ್. ಮೋಹನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ದುಷ್ಯಂತ(ದಿಲೀಪ), ಖಜಾಂಚಿ ಪ್ರಕಾಶ್ ಮತ್ತು ಶರತ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಕಾರ್ಯಕ್ರಮದ ಆರಂಭದಲ್ಲಿ ನಾಡಪ್ರಭು ಕೆಂಪೇಗೌಡ ಹಾಗು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಯುವ ಮುಖಂಡ ಎಂ.ಎ ಅಜಿತ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ಶಿಮೂಲ್ ಅಧ್ಯಕ್ಷ ಆನಂದ್, ಟಿ. ಚಂದ್ರೇಗೌಡ, ಕಬಡ್ಡಿ ಕೃಷ್ಣೇಗೌಡ, ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿವಲಿಂಗೇಗೌಡ, ಧರ್ಮೇಗೌಡ, ಅಶೋಕ್‌ಕುಮಾರ್, ಚುಂಜಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ೫ ಕೋ. ರು. ವೆಚ್ಚದಲ್ಲಿ ಕಾರ್ಮಿಕರ ಭವನ ನಿರ್ಮಾಣ : ಬಿ.ವೈ ರಾಘವೇಂದ್ರ


ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿದರು.
   ಭದ್ರಾವತಿ, ಜೂ. ೨೭: ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಭದ್ರಾವತಿ ತಾಲೂಕಿನಲ್ಲಿ ಸುಮಾರು ೫ ಕೋ. ರು. ವೆಚ್ಚದಲ್ಲಿ ಕಾರ್ಮಿಕರ ಭವನ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
   ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿಯಲ್ಲಿ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಮಾತ್ರವಲ್ಲದೆ ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು ಹಾಗು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಸುಮಾರು ೨೫ ರಿಂದ ೩೦ ಸಾವಿರದಷ್ಟು ಕಾರ್ಮಿಕರಿದ್ದಾರೆ. ಕೇಂದ್ರ ಸರ್ಕಾರ ಕಾರ್ಮಿಕರು ಹಾಗು ಅವರ ಕುಟುಂಬ ವರ್ಗದವರ ಹಲವು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಮಿಕರ ಭವನ ಸ್ಥಾಪಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಒಂದು ಭವನ ಮಂಜೂರಾತಿಯಾಗಿದ್ದು, ಭವನವನ್ನು ಭದ್ರಾವತಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
    ದೇಶಾದ್ಯಂತ ವಲಸೆ ಕಾರ್ಮಿಕರು ಕೋವಿಡ್‌ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇದೀಗ ವಲಸೆ ಕಾರ್ಮಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆ ರೂಪಿಸಲಾಗಿದೆ. ವಲಸೆ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಈ ಯೋಜನೆಯಡಿ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿವೆ. ರಾಜ್ಯದಲ್ಲಿ ಈ ಯೋಜನೆ ೨ ಜಿಲ್ಲೆಗಳಿಗೆ ಮಾತ್ರ ಮಂಜೂರಾಗಿದ್ದು, ಈ ಪೈಕಿ ೧ ಶಿವಮೊಗ್ಗ ಜಿಲ್ಲೆಯಾಗಿದೆ ಎಂದರು.
     ಈಗಾಗಲೇ ಈ ಯೋಜನೆಗೆ ಸರ್ವೇ ನಂ.೧೦೪, ೧೦೫ ಮತ್ತು ೧೦೩ರಲ್ಲಿ  ಸುಮಾರು ೧೦ ಎಕರೆ ಸ್ಥಳ ಗುರುತಿಸಿ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು ೨೦೦೦ ವಲಸೆ ಕಾರ್ಮಿಕರಿದ್ದು, ಈ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಕುರಿತು ಹೆಚ್ಚಿನ ಪ್ರಚಾರ ನಡೆಸಿ ಮಾಹಿತಿ ತಿಳಿಸಲಾಗುವುದು ಎಂದರು.
   ಉಳಿದಂತೆ ಕ್ಷಿಪ್ರ ಕಾರ್ಯಾಪಡೆ ಘಟಕ(ಆರ್‌ಎಎಫ್)ದ ಅಭಿವೃದ್ಧಿ ಕಾರ್ಯಗಳು ಶೀಘ್ರವಾಗಿ ನಡೆಯಲಿವೆ. ವಿಐಎಸ್‌ಎಲ್ ಕಾರ್ಖಾನೆ ಸಮಸ್ಯೆಗಳು ಸಹ ಒಂದು ಹಂತದಲ್ಲಿ ಬಗೆಹರಿಯುತ್ತಿದ್ದು, ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.
    ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ನಗರಸಭಾ ಸದಸ್ಯರಾದ ಅನುಪಮ, ಶಶಿಕಲಾ, ಅನಿತಾ, ಪ್ರಮುಖರಾದ ಎಂ. ಪ್ರಭಾಕರ್, ವಿ. ಕದಿರೇಶ್, ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ಚನ್ನೇಶ್, ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆಂಪೇಗೌಡರ ಆಡಳಿತ ವ್ಯವಸ್ಥೆ ಇಂದಿಗೂ ಮಾದರಿ : ಬಿ.ಕೆ ಸಂಗಮೇಶ್ವರ್


ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಭಾನುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
      ಭದ್ರಾವತಿ, ಜೂ. ೨೭: ನಾಡಪ್ರಭು ಕೆಂಪೇಗೌಡರು ಸರ್ವ ಜನಾಂಗದ ಅಭಿವೃದ್ಧಿಗಾಗಿ ಬೆಂಗಳೂರು ನಿರ್ಮಿಸಿದರು. ಅಂದಿನ ಕಾಲದಲ್ಲಿಯೇ ಜನಪರವಾದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಆಡಳಿತ ವ್ಯವಸ್ಥೆ ಇಂದಿಗೂ ಮಾದರಿಯಾಗಿ ಉಳಿದುಕೊಂಡಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
      ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಭಾನುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕೆಂಪೇಗೌಡರು ಇಂದಿನ ಸಮಾಜಕ್ಕೆ ಮಹಾನ್ ಆದರ್ಶ ವ್ಯಕ್ತಿಯಾಗಿ ಉಳಿದುಕೊಂಡಿದ್ದಾರೆ. ನಾವುಗಳು ಇಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಆಚರಿಸುವ ಜೊತೆಗೆ ಮುಂದಿನ ಪೀಳಿಗೆಗೆ ಅವರ ಕುರಿತು ತಿಳಿಸಿಕೊಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನಲೆಯಲ್ಲಿ ಅವರ ಜಯಂತಿ ಸಾರ್ಥಕವಾಗಬೇಕೆಂದರು.
    ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಆನಂದ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಮತ್ತು  ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನಾಡಪ್ರಭು ಕೆಂಪೇಗೌಡರ ಕುರಿತು ಮಾತನಾಡಿದರು.
    ನಗರಸಭೆ ಪೌರಾಯುಕ್ತ ಕೆ. ಪರಮೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್, ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಕೆಂಪೇಗೌಡ ಯುವ ಪಡೆ ಅಧ್ಯಕ್ಷ ಆರ್. ಮೋಹನ್‌ಕುಮಾರ್, ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಕೃಷ್ಣೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಗರಸಭಾ ಸದಸ್ಯರಾದ ರೇಖಾ ಟಿ. ಪ್ರಕಾಶ್, ಜಯಶೀಲ ಸುರೇಶ್, ವಿಜಯ, ಪಲ್ಲವಿ ದಿಲೀಪ್, ಸವಿತಾ ಉಮೇಶ್, ಲತಾ ಚಂದ್ರಶೇಖರ್, ಬಸವರಾಜ ಬಿ. ಆನೇಕೊಪ್ಪ, ಕೆ. ಉದಯ್‌ಕುಮಾರ್, ಕಾಂತರಾಜ್, ಸುದೀಪ್‌ಕುಮಾರ್, ಬಿ.ಎಂ ಮಂಜುನಾಥ್, ಸೈಯದ್ ರಿಯಾಜ್, ಚನ್ನಪ್ಪ ಎಂಪಿಎಂ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ದಿನೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

Saturday, June 26, 2021

ಚನ್ನಗಿರಿ ಅರಣ್ಯ ವಲಯದ ವಾಚರ್ ಆತ್ಮಹತ್ಯೆಗೆ ಯತ್ನ

ಆರ್‌ಎಫ್‌ಓ ವಿರುದ್ಧ ಕಿರುಕುಳ ಆರೋಪ


ದಿನಗೂಲಿ ನೌಕರ ಮಹಾದೇವಪ್ಪ
   ಭದ್ರಾವತಿ, ಜೂ. ೨೬: ತಾಲೂಕಿನ ಅರಣ್ಯ ವಿಭಾಗದ ಚನ್ನಗಿರಿ ವಲಯದ ಕ್ಷೇಮಾಭಿವೃದ್ಧಿಯ ದಿನಗೂಲಿ ನೌಕರರೊಬ್ಬರು ಆರ್‌ಎಫ್‌ಓ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
    ದಿನಗೂಲಿ ನೌಕರ ಮಹಾದೇವಪ್ಪ ಆತ್ಮಹತ್ಯೆಗೆ ಯತ್ನಿಸಿದ್ದು, ಇವರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
    ಮಹಾದೇವಪ್ಪ ಚನ್ನಗಿರಿ ವಲಯದಲ್ಲಿ ವಾಚರ್ ಕರ್ತವ್ಯ ನಿರ್ವಹಿಸುತ್ತಿದ್ದು, ವಲಯಾಧಿಕಾರಿ ಸತೀಶ್‌ರವರು ಇವರಿಗೆ ಕಗ್ಗಿ ಅರಣ್ಯ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಿದ್ದರು. ಆದರೆ ಮಹಾದೇವಪ್ಪರವರು ಕಗ್ಗಿ ಅರಣ್ಯ ಶಾಖೆ ವಾಸದ ಸ್ಥಳದಿಂದ ಸುಮಾರು ೪೦ ಕಿ.ಮೀ ದೂರದಲ್ಲಿರುವ ಹಿನ್ನಲೆಯಲ್ಲಿ ಹಾಗು ಆರೋಗ್ಯ ಸರಿ ಇಲ್ಲದ ಕಾರಣ ಚನ್ನಗಿರಿ ವಲಯದಲ್ಲಿಯೇ ಮುಂದುವರೆಸುವಂತೆ ಕೋರಿದ್ದರು ಎನ್ನಲಾಗಿದೆ.
    ಈ ನಡುವೆ  ಮಹಾದೇವಪ್ಪ ಅವರಿಗೆ ವಲಯಾಧಿಕಾರಿ ಸತೀಶ್‌ರವರು ಕಗ್ಗಿ ಅರಣ್ಯ ಶಾಖೆಯಲ್ಲೇ ಕರ್ತವ್ಯ ನಿರ್ವಹಿಸುವಂತೆ  ಒತ್ತಡ ಹಾಕಿದ್ದರು. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಹಿನ್ನಲೆಯಲ್ಲಿ ಮಹಾದೇವಪ್ಪ ಅವರ ಎದುರಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಆದರೆ ಈ ಕುರಿತು ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಾಗಿದೆ.

ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡವರ ಸ್ಮರಣೆ

ಭಾರತೀಯ ಜನತಾ ಪಕ್ಷ ಭದ್ರಾವತಿ ತಾಲೂಕು ಮಂಡಲ ವತಿಯಿಂದ ಶನಿವಾರ ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ದೇಶಾದ್ಯಂತ ಜಾರಿಗೊಳಿಸಲಾಗಿದ್ದ ತುರ್ತು ಪರಿಸ್ಥಿತಿ ವಿರುದ್ಧ ಅಂದು ಹೋರಾಟದಲ್ಲಿ ಪಾಲ್ಗೊಂಡಿದ್ದವರನ್ನು ಸ್ಮರಿಸುವ ಮೂಲಕ ಅವರನ್ನು ಗೌರವಿಸಲಾಯಿತು.
   ಭದ್ರಾವತಿ, ಜೂ. ೨೬: ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಶನಿವಾರ ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ದೇಶಾದ್ಯಂತ ಜಾರಿಗೊಳಿಸಲಾಗಿದ್ದ ತುರ್ತು ಪರಿಸ್ಥಿತಿ ವಿರುದ್ಧ ಅಂದು ಹೋರಾಟದಲ್ಲಿ ಪಾಲ್ಗೊಂಡಿದ್ದವರನ್ನು ಸ್ಮರಿಸುವ ಮೂಲಕ ಅವರನ್ನು ಗೌರವಿಸಲಾಯಿತು.
   ೧೯೭೫ರ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗು ಜನ ಸಂಘದ ನೇತೃತ್ವದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿದ್ದ ಕ್ಷೇತ್ರದ ನಿವಾಸಿಗಳಾದ ರುದ್ರಪ್ಪ, ಸುದರ್ಶನಮೂರ್ತಿ, ಬಾರದಮ್ಮ, ಮಧುಕರ್‌ಕಾನಿಟ್ಕರ್, ಇಂದ್ರಸೇನಾ, ರಾಮಲಿಂಗಯ್ಯ ಮತ್ತು ಟಿ. ವೆಂಕಟೇಶ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
   ಅಲ್ಲದೆ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಹೋರಾಟವನ್ನು ಸ್ಮರಿಸಲಾಯಿತು.
    ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ರಾಜ್ಯ ಕಾರ್ಯಕಾರಣಿ ಸದಸ್ಯೆ ಆರ್.ಎಸ್ ಶೋಭಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಯುವ ಘಟಕದ ಅಧ್ಯಕ್ಷ ವಿಜಯ್, ನಗರಸಭಾ ಸದಸ್ಯೆ ಶಶಿಕಲಾ, ಪ್ರಮುಖರಾದ ವಿಶ್ವನಾಥರಾವ್ ಕೋಠಿ, ಚಂದ್ರಪ್ಪ, ಬಿ.ಎಸ್ ನಾರಾಯಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಿ : ಮಧುಸೂದನ್

ಎಚ್‌ಡಿಎಫ್‌ಸಿ ಬ್ಯಾಂಕ್ ಶಿವಮೊಗ್ಗ ಶಾಖೆ ಇದರ ಸಹಯೋಗದೊಂದಿಗೆ ಭದ್ರಾವತಿ ತರುಣ ಭಾರತಿ ವಿದ್ಯಾಕೇಂದ್ರದ ವತಿಯಿಂದ ನಗರದ ನ್ಯೂ ಕಾಲೋನಿಯಲ್ಲಿರುವ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವನಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
   ಭದ್ರಾವತಿ, ಜೂ. ೨೬: ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ಇಂದಿನ ದಿನಗಳಲ್ಲಿ ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ವನಮಹೋತ್ಸವ ಕಾರ್ಯಕ್ರಮ ಹೆಚ್ಚು ಸಹಕಾರಿಯಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಶಿವಮೊಗ್ಗ ಶಾಖಾ ಅಧಿಕಾರಿ ಮಧುಸೂದನ್ ಹೇಳಿದರು.
   ಎಚ್‌ಡಿಎಫ್‌ಸಿ ಬ್ಯಾಂಕ್ ಶಿವಮೊಗ್ಗ ಶಾಖೆ ಇದರ ಸಹಯೋಗದೊಂದಿಗೆ ತರುಣ ಭಾರತಿ ವಿದ್ಯಾಕೇಂದ್ರದ ವತಿಯಿಂದ ನಗರದ ನ್ಯೂ ಕಾಲೋನಿಯಲ್ಲಿರುವ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
   ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ತಿಳಿಸಿಕೊಡುವ ಜೊತೆಗೆ ಪರಿಸರ ಸಂರಕ್ಷಣೆಯಂತಹ ಸಮಾಜ ಮುಖಿ ಕಾರ್ಯಗಳನ್ನು ವಿದ್ಯಾಸಂಸ್ಥೆ ಆಯೋಜಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
      ವಿಶ್ವ ಭೂಷಣ ವಿಶ್ವಸ್ಥ ಮಂಡಳಿ ಅಧ್ಯಕ್ಷ ಡಾ.ಎಂ.ಎಚ್ ವಿದ್ಯಾಶಂಕರ್ ಮಾತನಾಡಿ,  ಪ್ರಸ್ತುತ ಎದುರಾಗಿರುವ ಕೋವಿಡ್-೧೯ರ ಸಂಕಷ್ಟದ ಸಂದರ್ಭದಲ್ಲಿ ಆಮ್ಲಜನಕದ ಪ್ರಾಮುಖ್ಯತೆ ಎಲ್ಲರಿಗೂ ತಿಳಿಯುತ್ತಿದೆ. ಈ ಹಿನ್ನಲೆಯಲ್ಲಿ ಸಹಜವಾಗಿ ಪರಿಸರ ಪ್ರಜ್ಞೆ ಬೆಳೆಯುತ್ತಿದೆ. ಸಸಿಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ತರುಣ ಭಾರತಿ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ಹೆಚ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಾಲಭಾರತಿ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ, ರಾಮಚಂದ್ರ, ರಮೇಶ್, ಕಿರಣ್, ವಿಶ್ವವಂದ್ಯ, ರವಿ, ಉಮೇಶ್, ಶಾಂತಮ್ಮ, ಪುರುಷೋತ್ತಮ್, ದೀಪಿಕಾ, ರಾಧಿಕಾ ಮತ್ತು ಸವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಾಲಾ ಆವರಣದಲ್ಲಿ ೭೫ಕ್ಕೂ ಹೆಚ್ಚಿನ ಹಣ್ಣಿನ  ಗಿಡಗಳನ್ನು ನೆಡಲಾಯಿತು.  

ಎಂಪಿಎಂ ಆಸ್ಪತ್ರೆಯಲ್ಲಿ ಹೆಚ್ಚುವರಿ ಲಸಿಕಾ ಕೇಂದ್ರ ಉದ್ಘಾಟನೆ

ಭದ್ರಾವತಿ ನಗರಸಭೆ ವಾರ್ಡ್ ನಂ.೧೯ರ ವ್ಯಾಪ್ತಿಯ ಎಂಪಿಎಂ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ತೆರೆಯಲಾಗಿರುವ ಕೋವಿಡ್-೧೯ ಲಸಿಕಾ ಕೇಂದ್ರವನ್ನು ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
   ಭದ್ರಾವತಿ, ಜೂ. ೨೬: ನಗರಸಭೆ ವಾರ್ಡ್ ನಂ.೧೯ರ ವ್ಯಾಪ್ತಿಯ ಎಂಪಿಎಂ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ತೆರೆಯಲಾಗಿರುವ ಕೋವಿಡ್-೧೯ ಲಸಿಕಾ ಕೇಂದ್ರವನ್ನು ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
   ವಾರ್ಡ್ ಸದಸ್ಯ ಬಸವರಾಜ ಬಿ. ಆನೇಕೊಪ್ಪರವರು ಎಂಪಿಎಂ ಆಸ್ಪತ್ರೆಯಲ್ಲಿ ಲಸಿಕಾ ಕೇಂದ್ರ ತೆರೆಯುವಂತೆ ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಶಾಸಕರ ಗಮನಕ್ಕೂ ತಂದಿದ್ದರು. ಈ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಲಸಿಕಾ ಕೇಂದ್ರ ತೆರೆಯಲಾಗಿದೆ.
    ನಗರಸಭಾ ಸದಸ್ಯರಾದ ಬಸವರಾಜ ಬಿ ಆನೇಕೊಪ್ಪ, ಜಯಶೀಲ ಸುರೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಎಂಪಿಎಂ ನಗರಾಡಳಿತ ಇಲಾಖೆ ಅಧಿಕಾರಿ ಸತೀಶ್, ಮುಖಂಡರಾದ ತಿಮ್ಮಪ್ಪ, ವೆಂಕಟೇಶ್ ಉಜ್ಜನಿಪುರ, ಗಿರ್ಗೇಶ್, ರಮೇಶ್, ದಿನೇಶ್, ಪ್ರವೀಣ್‌ಕುಮಾರ್, ಗಂಗಾಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, June 25, 2021

ಸರ್ಕಾರಿ ನೌಕರರು ಕರ್ತವ್ಯದ ಜೊತೆಗೆ ಸೋಂಕಿಗೆ ಒಳಗಾಗದಂತೆ ಎಚ್ಚರ ವಹಿಸಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಶುಕ್ರವಾರ ಹೊಸಸೇತುವೆ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ನೌಕರರಿಗೆ ಲಸಿಕೆ ಹಾಕುವ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
   ಭದ್ರಾವತಿ, ಜೂ. ೨೫: ಸರ್ಕಾರಿ ನೌಕರರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ ಕೊರೋನಾ ಸೋಂಕಿಗೆ ಒಳಗಾಗದಂತೆ ತಮ್ಮ ಆರೋಗ್ಯ ರಕ್ಷಿಸಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
   ಅವರು ಶುಕ್ರವಾರ ಹೊಸಸೇತುವೆ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ನೌಕರರಿಗೆ ಲಸಿಕೆ ಹಾಕುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸಮಾಜಕ್ಕೆ ಸರ್ಕಾರಿ ನೌಕರರ ಕೊಡುಗೆ ಅಪಾರವಾಗಿದ್ದು, ನೌಕರರು ಕರ್ತವ್ಯದ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅದರಲ್ಲೂ ಕೊರೋನಾ ಸೋಂಕಿಗೆ ಒಳಗಾಗದಂತೆ ಹೆಚ್ಚಿನ ಜಾಗೃತಿ ವಹಿಸಬೇಕೆಂದರು.
  ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ನಗರಸಭಾ ಸದಸ್ಯ ಸುದೀಪ್‌ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ವಿದ್ಯಾಸಂಸ್ಥೆ ಛೇರ್‍ಮನ್ ಬಿ.ಎಲ್ ರಂಗಸ್ವಾಮಿ, ಎ.ಜೆ. ರಂಗನಾಥಪ್ರಸಾದ್, ಡಿ.ಎಸ್ ರಾಜಪ್ಪ, ಶ್ರೀಕಾಂತ್, ರಾಜ್‌ಕುಮಾರ್, ದಿನೇಶ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ೩೫ ಸೋಂಕು : ಒಬ್ಬರು ಬಲಿ

ಭದ್ರಾವತಿ, ಜೂ. ೨೫: ಲಾಕ್‌ಡೌನ್ ಸಡಿಲಗೊಂಡು ೫ ದಿನ ಕಳೆದಿದ್ದು, ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಸೋಂಕಿನ ಪ್ರಮಾಣ ೫೦ರ ಗಡಿ ದಾಟಿಲ್ಲ.
   ಶುಕ್ರವಾರ ೩೫ ಸೋಂಕು ದೃಢಪಟ್ಟಿದ್ದು, ೮೬೭ ಮಾದರಿ ಸಂಗ್ರಹಿಸಲಾಗಿದೆ. ೨೧ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ೭೦೩೬ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ೬೯೩೭ ಮಂದಿ ಗುಣಮುಖರಾಗಿದ್ದಾರೆ. ೯೯ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ. ಸೋಂಕಿಗೆ ಒಬ್ಬರು ಮೃತಪಟ್ಟಿದ್ದಾರೆ.
    ಒಟ್ಟು ೭೫ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ಪ್ರದೇಶದಲ್ಲಿ ೨೩ ಕಂಟೈನ್‌ಮೆಂಟ್ ಜೋನ್‌ಗಳಿವೆ. ಇದುವರೆಗೂ ೧೪೩ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಾಂತರ ವ್ಯಾಪ್ತಿಯಲ್ಲಿ ೨೦ ಜೋನ್‌ಗಳಿದ್ದು, ೨೯ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.

ಜೀವವಿಮಾ ಪ್ರತಿನಿಧಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಿ

ಭದ್ರಾವತಿ ನಗರದ ಅಂಡರ್‌ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಭಾರತೀಯ ಜೀವವಿಮಾ ನಿಗಮದ ಶಾಖಾ ಕಛೇರಿ ಆವರಣದಲ್ಲಿ ವಿಶ್ರಾಂತಿ ಅಂದೋಲನದ ಅಂಗವಾಗಿ ನಡೆದ ಸಭೆಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜೀವವಿಮಾ ಪ್ರತಿನಿಧಿಗಳು ಆಗ್ರಹಿಸಿದರು.
   ಭದ್ರಾವತಿ, ಜೂ. ೨೫:  ಕರ್ತವ್ಯದ ಸಮಯದಲ್ಲಿ ಕೊರೋನಾ ಸೋಂಕಿನ ಪರಿಣಾಮ ಮೃತಪಟ್ಟ ಭಾರತೀಯ ಜೀವವಿಮಾ ನಿಗಮದ ಜೀವವಿಮಾ ಪ್ರತಿನಿಧಿಗಳ ಕುಟುಂಬಕ್ಕೆ ೧ ಕೋ. ರು. ಪರಿಹಾರದ ಜೊತೆಗೆ ಅನಾಥರಾದ ಪ್ರತಿನಿಧಿಗಳ ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸುವುದು ಸೇರಿದಂತೆ ಬೇಡಿಕೆಗಳನ್ನು ಈಡೇರಿಸುವಂತೆ ಶುಕ್ರವಾರ ಆಗ್ರಹಿಸಲಾಯಿತು.
   ನಗರದ ಅಂಡರ್‌ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಭಾರತೀಯ ಜೀವವಿಮಾ ನಿಗಮದ ಶಾಖಾ ಕಛೇರಿ ಆವರಣದಲ್ಲಿ ವಿಶ್ರಾಂತಿ ಅಂದೋಲನದ ಅಂಗವಾಗಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೀವವಿಮಾ ಪ್ರತಿನಿಧಿಗಳ ಸಂಘದ ಪ್ರಮುಖರು, ಪಾಲಿಸಿದಾರರಿಗೆ ಕೊರೋನಾ ಸಂದರ್ಭದಲ್ಲಿ ಪಾಲಿಸಿ ಪ್ರೀಮಿಯಂ ಮೇಲಿನ ೩ ತಿಂಗಳ ಬಡ್ಡಿಯನ್ನ ಮನ್ನಾ ಮಾಡಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ಲ್ಯಾಪ್ಸ್ ಆದ ಪಾಲಿಸಿಗಳನ್ನು ಬಡ್ಡಿ ರಹಿತವಾಗಿ ಹಾಗು ಫಾರ್ಮಲಿಟಿ ರಹಿತವಾಗಿ ಪುನರುಜ್ಜೀವನಗೊಳಿಸಬೇಕೆಂದು ಒತ್ತಾಯಿಸಿದರು.
    ಐಆರ್‌ಡಿಎ ನೋಟಿಫಿಕೇಷನ್ ಪ್ರಕಾರ ಕಮಿಷನ್ ಜಾರಿಗೊಳಿಸಬೇಕು. ಆನಂದ ಮುಖಾಂತರ ಮಾಡುವ ಪ್ರತಿ ಪಾಲಿಸಿಗಳಿಗೆ ೧೧೦೦ ರು. ಭತ್ಯೆಯಾಗಿ ನೀಡಬೇಕು. ಏಜೆಂಟ್ಸ್ ರೆಗ್ಯೂಲೇಷನ್ ಆಕ್ಟ್‌ನ ಕೆಲವು ನಿಯಮಗಳು ತಕ್ಷಣವೇ ಬದಲಾವಣೆಯಾಗಬೇಕು. ಆನ್‌ಲೈನ್ ಮತ್ತು ಆಫ್‌ಲೈನ್ ಪಾಲಿಸಿಗಳ ಮೇಲೆ ಪ್ರೀಮಿಯಂನಲ್ಲಿ ಯಾವುದೇ ವ್ಯತ್ಯಾಸವಿರಬಾರದು. ಪ್ರತಿನಿಧಿಗಳ ಕಲ್ಯಾಣ ನಿಧಿ ಸ್ಥಾಪಿಸಿ ೨೦೦ ಕೋ. ರು. ಮೀಸಲಿಡಬೇಕು. ಗುಂಪು ವಿಮೆ ೨೫ ರಿಂದ ೫೦ ಲಕ್ಷದವರೆಗೆ ಅಪಘಾತ ಸಹಿತವಾಗಬೇಕು. ೧ ಲಕ್ಷ ರು. ಕೋವಿಡ್ ಮುಂಗಡ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
    ಸಂಘದ ಅಧ್ಯಕ್ಷ ಆರ್. ಮಂಜುನಾಥ್, ಉಪಾಧ್ಯಕ್ಷ ಆನಂದ ಪ್ರಕಾಶ್ ರಾವ್, ಕಾರ್ಯದರ್ಶಿ ಸಿ.ಎ ಮುನಿರಾಜು, ಜಂಟಿ ಕಾರ್ಯದರ್ಶಿ ಆರ್. ನರಸಿಂಹಯ್ಯ, ಖಜಾಂಚಿ ಎಚ್.ಕೆ ಶಿವರಾಮು, ನಂಜುಂಡಪ್ಪ, ಟಿ. ರಮೇಶ್, ಪಿ. ಸುರೇಶ್, ಕೆ.ಎಚ್. ಮಂಜುನಾಥನಾಯ್ಕ್, ಬಿ.ಎಂ. ನಂಜುಂಡಪ್ಪ, ಅನಿತಾ ಮಲ್ಲೇಶ್, ಸಂಪತ್‌ಕುಮಾರ್, ವಿ. ಮಂಜುನಾಥ್‌ರಾವ್, ಪಿ.ಎಚ್ ನಾಗರಾಜ್, ಎಸ್. ಸಂಪತ್, ಮಾದೇಶ, ಚಂದ್ರಕಲಾ, ಪ್ರಿಯಾ, ಶೋಭಾ, ಕೆ.ಎಸ್ ನಟರಾಜ್, ಎಂ. ಲಿಂಗರಾಜು, ಜಿ. ಶಿವಕುಮಾರ್, ನರೇಂದ್ರ ಬಾಬು, ಡಿ. ಲಕ್ಷ್ಮೀಕಾಂತ, ಬಿಜಿಸಿ ಕುಮಾರ್, ಎಂ. ಶಿವಮೂರ್ತಿ, ಓ. ರಾಮನಾಯ್ಕ್, ಶ್ರೀನಿವಾಸ್ ರೆಡ್ಡಿ ಮತ್ತು ಆರ್. ಮಲ್ಲೇಶಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Thursday, June 24, 2021

ಜೂ.೨೫ರಂದು ಎಲ್‌ಐಸಿ ಪ್ರತಿನಿಧಿಗಳ ವಿಶ್ರಾಂತಿ ಅಂದೋಲನ ಸಭೆ

ಭದ್ರಾವತಿ, ಜೂ. ೨೪: ಭಾರತೀಯ ಜೀವವಿಮಾ ನಿಗಮದ ಜೀವವಿಮಾ ಪ್ರತಿನಿಧಿಗಳ ವತಿಯಿಂದ ಜೂ.೩೦ರ ವರೆಗೆ ವಿಶ್ರಾಂತಿ ಅಂದೋಲನ ಹಮ್ಮಿಕೊಳ್ಳಲಾಗಿದೆ.
    ಅಂದೋಲನದ ಅಂಗವಾಗಿ ಜೂ.೨೫ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಜೀವವಿಮಾ ಶಾಖೆಯ ಆವರಣದಲ್ಲಿ ಪ್ರತಿನಿಧಿಗಳ ಸಭೆ ನಡೆಯಲಿದ್ದು, ಹಲವು ಬೇಡಿಕೆಗಳ ಕುರಿತು ಪ್ರತಿನಿಧಿಗಳು ಘೋಷಣಾ ವಾಕ್ಯ ಮಂಡಿಸಲಿದ್ದಾರೆ.

ಭದ್ರಾವತಿಯಲ್ಲಿ ೨೭ ಕೊರೋನಾ ಸೋಂಕು

   ಭದ್ರಾವತಿ, ಜೂ. ೨೪: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು, ಗುರುವಾರ ಕೇವಲ ೨೭ ಪ್ರಕರಣಗಳು ದಾಖಲಾಗಿವೆ.
   ಒಟ್ಟು ೫೯೩ ಮಾದರಿ ಸಂಗ್ರಹಿಸಲಾಗಿದ್ದು, ೨೭ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ೧೯ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇದುವರೆಗೂ ಒಟ್ಟು ೭೦೦೧ ಸೋಂಕು ಪ್ರಕರಣ ದಾಖಲಾಗಿದೆ. ಈ ಪೈಕಿ ೬೮೩೪ ಮಂದಿ ಗುಣಮುಖರಾಗಿದ್ದಾರೆ. ೧೪೬ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ. ನಗರ ಪ್ರದೇಶದಲ್ಲಿ ೨೬ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ೧೩೫ ತೆರವುಗೊಳಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿ ೨೬ ಜೋನ್‌ಗಳಿದ್ದು, ೧೯ ತೆರವುಗೊಳಿಸಲಾಗಿದೆ.

ಉನ್ನತ ಶಿಕ್ಷಣದಿಂದ ಅರ್ಥಿಕ ಅಭಿವೃದ್ಧಿ, ಸಾಮಾಜಿಕ ಪರಿವರ್ತನೆ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಬೊಮ್ಮನಕಟ್ಟೆ ಸರ್‌ಎಂವಿ ವಿಜ್ಞಾನ ಕಾಲೇಜು ಹಾಗು ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
  ಭದ್ರಾವತಿ, ಜೂ. ೨೪: ಉನ್ನತ ಶಿಕ್ಷಣದಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
   ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಬೊಮ್ಮನಕಟ್ಟೆ ಸರ್‌ಎಂವಿ ವಿಜ್ಞಾನ ಕಾಲೇಜು ಹಾಗು ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
   ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ತಾಂತ್ರಿಕ ನೈಪುಣ್ಯತೆ ಹೊಂದಬೇಕು. ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಟ್ಯಾಬ್‌ಗಳನ್ನು ಜ್ಞಾನ ಸಂಪಾದನೆಗೆ ಉಪಯೋಗಿಸಿಕೊಳ್ಳಬೇಕು. ಸರ್ಕಾರ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪುತ್ತಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
   ಶಿಕ್ಷಕರು ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಬೋಧನೆ ಜೊತೆಗೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂದು ಕರೆ ನೀಡಿದರು.
   ಪ್ರಾಂಶುಪಾಲ ಡಾ. ರವೀಂದ್ರ ಹಾಗು ಕಾಲೇಜಿನ ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ಬಿ.ಜಿ ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಡಾ. ಎಂ.ಜಿ ಉಮಾಶಂಕರ್ ಸ್ವಾಗತಿಸಿದರು. ಸಹಾಯಕ ಉಪನ್ಯಾಸಕ ಡಾ. ವರದರಾಜು ನಿರೂಪಿಸಿದರು. ಪ್ರಾಂಶುಪಾಲ ಡಾ. ವಿಷ್ಣುಮೂರ್ತಿ ವಂದಿಸಿದರು.

ಕೊರೋನಾ ಸೋಂಕು ನಿಯಂತ್ರಣಕ್ಕೆ ಎಲ್ಲೆಡೆ ಜಾಗೃತಿ ಅಗತ್ಯ : ಕೆ.ಎಸ್ ಈಶ್ವರಪ್ಪ

ಭದ್ರಾವತಿ ತರೀಕೆರೆ ರಸ್ತೆಯ ವಳ್ಳುವರ್ ಕಲ್ಯಾಣ ಮಂಟಪದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಡವರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಚಾಲನೆ ನೀಡಿದರು.
  ಭದ್ರಾವತಿ, ಜೂ. ೨೪: ಕೊರೋನಾ ಸೋಂಕು ನಿಯಂತ್ರಣದಲ್ಲಿ ಗ್ರಾಮೀಣ ಜನರ ಪಾತ್ರ ಹೆಚ್ಚಿನದ್ದಾಗಿದ್ದು, ಪ್ರಸ್ತುತ ಎಲ್ಲೆಡೆ ಜಾಗೃತಿ ಅತಿ ಅವಶ್ಯಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
  ಅವರು ಗುರುವಾರ ನಗರದ ತರೀಕೆರೆ ರಸ್ತೆಯ ವಳ್ಳುವರ್ ಕಲ್ಯಾಣ ಮಂಟಪದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಡವರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
    ಪ್ರಸ್ತುತ ಕೋವಿಡ್-೧೯ರ ಪರಿಣಾಮ ಪ್ರಪಂಚದಾದ್ಯಂತ ಹಲವಾರು ಸಂಕಷ್ಟ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಶಕ್ತಿ ಮೀರಿ ಶ್ರಮಿಸುತ್ತಿವೆ. ಈ ನಡುವೆ ಲೆಕ್ಕವಿಲ್ಲದಷ್ಟು ದಾನಿಗಳು, ಸ್ವಯಂ ಸೇವಾ ಸಂಸ್ಥೆಗಳು ತಮ್ಮದೇ ಆದೆ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿವೆ. ಕೋವಿಡ್ ನಿಯಂತ್ರಣಕ್ಕೆ ಕೇವಲ ನೆರವಿನ ಅಗತ್ಯ ಮಾತ್ರವಲ್ಲದೆ ಜಾಗೃತಿ ಸಹ ಅತಿ ಅವಶ್ಯಕವಾಗಿದೆ ಎಂದರು.
    ಗ್ರಾಮಮಟ್ಟದಲ್ಲಿ ಜಾಗೃತಿ ಪಡೆ ಹಾಗು ಗ್ರಾಮಸ್ಥರು ಕೋವಿಡ್-೧೯ರ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳು ಶ್ಲಾಘನೀಯವಾಗಿದ್ದು, ಪ್ರತಿ ಹಂತದ ಎಚ್ಚರಿಕೆ ಕ್ರಮಗಳು ನಿಯಂತ್ರಣಕ್ಕೆ ಸಹಕಾರಿಯಾಗಿವೆ. ಗ್ರಾಮಮಟ್ಟದಲ್ಲಿ ಅನುಸರಿಸುತ್ತಿರುವ ಕ್ರಮಗಳನ್ನು ನಗರಮಟ್ಟದಲ್ಲೂ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ದೊಡ್ಡ ಮಟ್ಟದ ಜಾಗೃತಿ ಅಭಿಮಾನ ನಡೆಯಬೇಕಾಗಿದೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗಬೇಕೆಂಬ ಉದ್ದೇಶದೊಂದಿಗೆ ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿನ ಅರ್ಹ ಕಡು ಬಡವರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ವಾರ್ಡ್‌ಗಳ ಅರ್ಹ ಫಲಾನುಭವಿಗಳಿಗೆ ದಿನಸಿ ಸಾಮಗ್ರಿಗಳು ತಲುಪಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
    ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ಪೌರಾಯುಕ್ತ ಕೆ. ಪರಮೇಶ್ ಹಾಗು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಎಲ್ಲಾ ವಾರ್ಡ್‌ಗಳ ನಗರಸಭಾ ಸದಸ್ಯರು, ಒಂದೊಂದು ವಾರ್ಡ್‌ಗಳಿಂದ ತಲಾ ಇಬ್ಬರು ಫಲಾನುಭವಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.



Wednesday, June 23, 2021

ಭದ್ರಾವತಿಯಲ್ಲಿ ೪೭ ಸೋಂಕು

ಭದ್ರಾವತಿ, ಜೂ. ೨೩: ತಾಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಸ್ವಲ್ಪ ಏರಿಕೆಯಾಗಿದ್ದು, ಬುಧವಾರ ಒಬ್ಬರು ಮೃತಪಟ್ಟಿದ್ದಾರೆ.
   ಕೆಲವು ದಿನಗಳಿಂದ ಇಳಿಯಾಗಿದ್ದ ಸೋಂಕು ಪುನಃ ಏರಿಕೆಯಾಗಿದೆ. ಗ್ರಾಮಾಂತರ ಭಾಗದಲ್ಲಿ ೨೪ ಹಾಗು ನಗರ ಭಾಗದಲ್ಲಿ ೨೩ ಸೇರಿ ಒಟ್ಟು ೪೭ ಪ್ರಕರಣಗಳು ದಾಖಲಾಗಿವೆ. ಸೋಂಕಿಗೆ ಒಬ್ಬರು ಮೃತಪಟ್ಟಿದ್ದಾರೆ.

ಗಾಯಗೊಂಡಿದ್ದ ನಾಗರ ಹಾವಿಗೆ ಚಿಕಿತ್ಸೆ ನೀಡಿ ಮಾನವೀಯತೆ

ಭದ್ರಾವತಿಯಲ್ಲಿ ಯುವಕರ ತಂಡವೊಂದು ಗಾಯಗೊಂಡಿದ್ದ ನಾಗರ ಹಾವಿಗೆ ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಡುವ ಮೂಲಕ ಮಾನವೀಯತೆ ಮರೆದಿರುವ ಘಟನೆ ಬುಧವಾರ ನಡೆದಿದೆ.
   ಭದ್ರಾವತಿ, ಜೂ. ೨೩: ನಗರದ ಯುವಕರ ತಂಡವೊಂದು ಗಾಯಗೊಂಡಿದ್ದ ನಾಗರ ಹಾವಿಗೆ ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಡುವ ಮೂಲಕ ಮಾನವೀಯತೆ ಮರೆದಿರುವ ಘಟನೆ ಬುಧವಾರ ನಡೆದಿದೆ.
   ಕಾಗದನಗರದ ರಸ್ತೆಯೊಂದರಲ್ಲಿ ಅಪಘಾತದಿಂದ ಗಾಯಗೊಂಡಿದ್ದ ನಾಗರ ಹಾವನ್ನು ರಕ್ಷಿಸಿ ತಕ್ಷಣ ಚಿಕಿತ್ಸೆ ನೀಡುವಲ್ಲಿ ಜಾಸ್ವಾ, ಬೆನ್ಸನ್, ಸತ್ಯ ಮತ್ತು ಭರತ್‌ರಾವ್ ತಂಡ ಯಶಸ್ವಿಯಾಗಿದೆ. ಚೇತರಿಸಿಕೊಂಡ ನಂತರ ಅರಣ್ಯಕ್ಕೆ  ಬಿಟ್ಟು ಬಂದಿದ್ದಾರೆ.

ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಬುಧವಾರ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
  ಭದ್ರಾವತಿ, ಜೂ. ೨೩: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಬುಧವಾರ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
   ಸರ್ವೆ ನಂ.೧೧೨ರ ಸುಮಾರು ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಸುಮಾರು ೮೦೦ ವರ್ಷಗಳ ಇತಿಹಾಸವುಳ್ಳ ಸರ್ಕಾರಿ ಹಿರೇಕೆರೆ ಸುತ್ತಲೂ ಬಸಿಕಾಲುವೆ(ಟ್ರಂಚ್) ನಿರ್ಮಿಸುವುದು. ಕೆರೆಯ ನೀರು ಸರಾಗವಾಗಿ ಹರಿಯಲು ೪ ಅಡಿ ವಿಸ್ತೀರ್ಣವುಳ್ಳ ೮ ಪೈಪ್‌ಗಳನ್ನು ಅಳವಡಿಸುವುದು. ನಗರಸಭೆ ನ್ಯೂಟೌನ್ ಶಾಖಾ ಕಛೇರಿಯಲ್ಲಿ ಜನಸಂದಣಿ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಪ್ರತಿನಿತ್ಯ ಕ್ರಿಮಿನಾಶಕ ಸಿಂಪಡಿಸುವುದು ಹಾಗು  ಆವರಣದಲ್ಲಿ ಬ್ಯಾರಿಕೇಡ್ ಅಳವಡಿಸುವಂತೆ ಕೋರಲಾಗಿದೆ.
    ನಗರಸಭೆ ವ್ಯಾಪ್ತಿಯ ನ್ಯೂಟೌನ್ ಭಾಗದಲ್ಲಿ ಈಗಾಗಲೇ ಒಳಚರಂಡಿ ಕಾಮಗಾರಿ ಕೆಲಸ ಪೂರ್ಣಗೊಂಡಿದ್ದು, ತಕ್ಷಣ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ಪೂರ್ಣಗೊಳಿಸುವುದು. ಜನ್ನಾಪುರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಕಾಮಗಾರಿಗಳನ್ನು ಪೂರ್ಣಗೊಳಿಸುವುದು. ನಗರಸಭೆ ನ್ಯೂಟೌನ್ ಶಾಖಾ ಕಛೇರಿಯಲ್ಲಿ ಮನೆ ಹಾಗು ನೀರಿನ ಕಂದಾಯ ಪಾವತಿಸಲು ಕೌಂಟರ್ ತೆರೆಯುವಂತೆ ಮನವಿ ಮಾಡಲಾಗಿದೆ.
   ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್, ಕಾರ್ಯಾಧ್ಯಕ್ಷೆ ರಮಾವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಆರ್. ಮುರುಗೇಶ್, ಸಂಚಾಲಕರಾದ ಶೈಲಜಾ ರಾಮಕೃಷ್ಣ, ಗೀತಾಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, June 22, 2021

ಗೋಣಿಬೀಡು, ಮಲ್ಲಿಗೇನಹಳ್ಳಿ ವ್ಯಾಪ್ತಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

ಭದ್ರಾವತಿ ತಾಲೂಕಿನ ಗೋಣಿಬೀಡು, ಮಲ್ಲಿಗೇನಹಳ್ಳಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದೆ.
ಭದ್ರಾವತಿ, ಜೂ. ೨೨: ತಾಲೂಕಿನ ಗೋಣಿಬೀಡು, ಮಲ್ಲಿಗೇನಹಳ್ಳಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚು ಮಾಡಿದೆ.
    ಬೆಳಿಗ್ಗೆ ೧೦ ಗಂಟೆ ಸಮಯದಲ್ಲಿ  ಒಂಟಿ ಸಲಗ ಕಾಣಿಸಿಕೊಂಡಿದೆ. ತಕ್ಷಣ ಅಕ್ಕಪಕ್ಕದ ಗ್ರಾಮಸ್ಥರು ಪಟಾಕಿ ಸಿಡಿಸಿ ಕಾಡಿಗೆ ಓಡಿಸಿದ್ದಾರೆ. ಒಂಟಿ ಸಲಗ ಕಾಣಿಸಿಕೊಂಡಿರುವ ರಸ್ತೆಯಲ್ಲಿಯೇ ಬೆಳಗಿನ ಸಮಯದಲ್ಲಿ ಜನರು ವಾಯುವಿಹಾರಕ್ಕೆ ತೆರಳುತ್ತಾರೆ. ಇದರಿಂದಾಗಿ ಆತಂಕ ಹೆಚ್ಚು ಮಾಡಿದೆ.
   ಒಂಟಿ ಸಲಗ ಕಾಣಿಸಿಕೊಂಡಿರುವ ದೃಶ್ಯ ಸಾಮಾಜಿಕ ಸುದ್ದಿ ಜಾಲಗಳಲ್ಲಿ ಹರಿಡಾಡುತ್ತಿದೆ. ಒಂಟಿ ಸಲಗ ಕಾಣಿಸಿಕೊಂಡಿರುವುದು ನಿಜ ಎಂದು ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಭದ್ರಾ ಅಭಯಾರಣ್ಯದಿಂದ ಆನೆಗಳು ಬಂದು ಹೋಗುವುದು ಸಹಜ ಎಂದು ತಿಳಿಸಿದ್ದಾರೆ.

ಕೇವಲ ೧೮ ಸೋಂಕು : ೩ ಬಲಿ

ಭದ್ರಾವತಿ, ಜೂ. ೨೨: ತಾಲೂಕಿನಲ್ಲಿ ಕೊರೋನಾ ಸೋಂಕು ಬಹುತೇಕ ಉಳಿಮುಖವಾಗಿದ್ದು, ಮಂಗಳವಾರ ಕೇವಲ ೧೮ ಸೋಂಕು ಮಾತ್ರ ಪತ್ತೆಯಾಗಿದೆ. 
    ಗ್ರಾಮಾಂತರ ಭಾಗದಲ್ಲಿ ೧೦ ಹಾಗು ನಗರ ಭಾಗದಲ್ಲಿ ೮ ಸೋಂಕು ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಸೋಂಕಿಗೆ ೩  ಮಂದಿ ಬಲಿಯಾಗಿದ್ದಾರೆ. ಸೋಂಕು ಕಡಿಮೆಯಾದರೂ ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದು ಆತಂಕ ಹೆಚ್ಚು ಮಾಡಿದೆ.

ಜೂ.೨೩ರಂದು ಉಚಿತ ಟ್ಯಾಬ್ ವಿತರಣೆ

ಭದ್ರಾವತಿ, ಜೂ. ೨೨: ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಬೊಮ್ಮನಕಟ್ಟೆ ಸರ್‌ಎಂವಿ ವಿಜ್ಞಾನ ಕಾಲೇಜು ಹಾಗು ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಕಾರ್ಯಕ್ರಮ ಜೂ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಂಶುಪಾಲರಾದ ಡಾ. ವಿಷ್ಣುಮೂರ್ತಿ, ಡಾ. ರವೀಂದ್ರ, ಪ್ರೊ. ವರದರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನ : ಸಸಿ ನೆಡುವ ಕಾರ್ಯಕ್ರಮ

ಭದ್ರಾವತಿ, ಜೂ. ೨೨: ಜನ ಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನ ದಿನದ ಅಂಗವಾಗಿ ಬಿಜೆಪಿ ರೈತ ಮೋರ್ಚಾ ತಾಲೂಕು ಮಂಡಲ ವತಿಯಿಂದ ಜೂ.೨೩ರಂದು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ಬಿಳಿಕಿ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಠದ ಶ್ರೀ ರಾಚೋಟೇಶ್ವರಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಮಂಡಲದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವಿ ಸಂತೋಷ್ ಕೋರಿದ್ದಾರೆ.

ಬಿ.ಎಸ್ ಶಾಂತಣ್ಣ ನಿಧನ

ಬಿ.ಎಸ್ ಶಾಂತಣ್ಣ
   ಭದ್ರಾವತಿ, ಜೂ. ೨೨:  ನಗರದ ಹೊಸಮನೆ ಓಎಸ್‌ಎಂ ನಿವಾಸಿ, ವೀರಶೈವ ಸಮಾಜದ ಮುಖಂಡ ಬಿ.ಎಸ್ ಶಾಂತಣ್ಣ(೬೭) ನಿಧನ ಹೊಂದಿದರು.
    ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವಪುತ್ರ ಹೊಂದಿದ್ದರು. ಮೃತರ  ಅಂತ್ಯಕ್ರಿಯೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ  ನೆರವೇರಿಸಲಾಯಿತು. ಶಾಸಕ ಬಿ.ಕೆ. ಸಂಗಮೇಶ್ವರ್, ತಾಲೂಕು ವೀರಶೈವ ಸಮಾಜ ಸೇರಿದಂತೆ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

Monday, June 21, 2021

ಲಾಕ್‌ಡೌನ್ ಸಡಿಲ : ಜನ ಸಂದಣಿ


ಸೆಮಿ ಲಾಕ್‌ಡೌನ್ ಸಡಿಲಗೊಳಿಸಿದ ಹಿನ್ನಲೆಯಲ್ಲಿ ಸೋಮವಾರ ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಕಂಡು ಬಂದ ದೃಶ್ಯ.
   ಭದ್ರಾವತಿ, ಜೂ. ೨೧: ಸೆಮಿ ಲಾಕ್‌ಡೌನ್ ಸಡಿಲಗೊಳಿಸದ ಹಿನ್ನಲೆಯಲ್ಲಿ ಸೋಮವಾರ ನಗರದಲ್ಲಿ ಮಧ್ಯಾಹ್ನದವರೆಗೂ ಜನಸಂದಣಿ ಕಂಡು ಬಂದಿತು.
   ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳ ಎಂದಿನಂತೆ ಸಂಚರಿಸಿದವು. ಲಾರಿ, ಆಟೋ, ಕಾರು ಸೇರಿದಂತೆ ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿತ್ತು. ಬಹುತೇಕ ಎಲ್ಲಾ ಅಂಗಡಿಮುಂಗಟ್ಟುಗಳು ತೆರೆಯಲ್ಪಟ್ಟಿದ್ದವು. ಅದರಲ್ಲೂ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಜನಸಂದಣಿ ಅಧಿಕವಾಗಿತ್ತು. ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು.
   ಲಾಕ್‌ಡೌನ್ ಆರಂಭಗೊಂಡಾಗಿನಿಂದಲೂ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣವನ್ನು ಸೇವೆಗೆ ಮುಕ್ತಗೊಳಿಸಲಾಗಿತ್ತು. ದೂರದ ಊರುಗಳು ಹಾಗು ಶಿವಮೊಗ್ಗ-ಭದ್ರಾವತಿ ನಡುವೆ ಬಸ್‌ಗಳು ಸಂಚರಿಸಿದವು.

ಛಲವಾದಿಗಳ ಸಮಾಜದಿಂದ ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯನವರಿಗೆ ಶ್ರದ್ದಾಂಜಲಿ


ಭದ್ರಾವತಿ ತಾಲೂಕು ಛಲವಾದಿಗಳ (ಪ.ಜಾ) ಸಮಾಜದ ವತಿಯಿಂದ ಸೋಮವಾರ ಇತ್ತೀಚೆಗೆ ನಿಧನ ಹೊಂದಿದ ದಲಿತ ಕವಿ, ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯನವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೨೧: ತಾಲೂಕು ಛಲವಾದಿಗಳ (ಪ.ಜಾ) ಸಮಾಜದ ವತಿಯಿಂದ ಸೋಮವಾರ ಇತ್ತೀಚೆಗೆ ನಿಧನ ಹೊಂದಿದ ದಲಿತ ಕವಿ, ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯನವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
   ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ಸಮಾಜದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಸಿದ್ದಲಿಂಗಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.
   ಸಮಾಜದ ಗೌರವಾಧ್ಯಕ್ಷ ಎಂ. ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದ ಅಧ್ಯಕ್ಷ, ನಗರಸಭಾ ಸದಸ್ಯ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.
    ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬದರಿನಾರಾಯಣ, ಮುಖಂಡರಾದ ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ ಹಾಗು ಎಂ.ಎನ್ ಹುಚ್ಚಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಕಾರ್ಯದರ್ಶಿ ಲೋಕೇಶ್ ಮಾಳೆನಹಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಚ್.ಎಂ ಮಹಾದೇವಯ್ಯ ನಿರೂಪಿಸಿದರು. ಜಿ. ನಾಗೇಶ್ ವಂದಿಸಿದರು.

ಭದ್ರಾವತಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಭದ್ರಾವತಿಯಲ್ಲಿ ವಿಶ್ವ ಹಿಂದೂ ಪರಿಷತ್, ಪತಂಜಲಿ ಯೋಗ ಸಮಿತಿ ಹಾಗು ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ಸಹಯೋಗದೊಂದಿಗೆ  ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಸೋಮವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜರುಗಿತು.
   ಭದ್ರಾವತಿ, ಜೂ. ೨೧ : ವಿಶ್ವ ಹಿಂದೂ ಪರಿಷತ್, ಪತಂಜಲಿ ಯೋಗ ಸಮಿತಿ ಹಾಗು ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ಸಹಯೋಗದೊಂದಿಗೆ  ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಸೋಮವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜರುಗಿತು.
    ತಾಲೂಕು ಪ್ರಭಾರಿ ಕೆ.ಎಸ್ ಚನ್ನಪ್ಪ, ಪತಂಜಲಿ ಯೋಗ ಸಮಿತಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಅನ್ನಪೂರ್ಣ ಸತೀಶ್, ಕೋಕಿಲಾ ಉಮಾಪತಿ, ವಿಶ್ವ ಹಿಂದೂ ಪರಿಷತ್ ಪ್ರಾಂತ ಉಪಾಧ್ಯಕ್ಷ ಹಾ. ರಾಮಪ್ಪ, ಜಿಲ್ಲಾ ಉಪಾಧ್ಯಕ್ಷ ಡಿ.ಆರ್ ಶಿವಕುಮಾರ್, ನಗರ ಕಾರ್ಯದರ್ಶಿ ವೈ.ಎಸ್ ರಾಮಮೂರ್ತಿ, ಸಹ ಕಾರ್ಯದರ್ಶಿ ಪಿ.ಮಂಜುನಾಥರಾವ್ ಪವರ್, ನಗರ ಉಪಾಧ್ಯಕ್ಷ ಎ.ಜಿ ನಾಗರಾಜ್, ಕೋಶಾಧ್ಯಕ್ಷ ಎನ್.ಎಸ್ ಮಹೇಶ್ವರಪ್ಪ, ಬಿಜೆಪಿ ಕಾರ್ಯದರ್ಶಿ ಕೆ.ಆರ್ ಸತೀಶ್, ಒಬಿಸಿ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಮುರಳಿ, ಮಾರುತಿರಾವ್, ಸುಬ್ರಮಣಿ, ಹರಿಪ್ರಸಾದ್‌ಶರ್ಮ, ರಾಹುಲ್, ಸಿಂಚನ, ರೋಜಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Sunday, June 20, 2021

ಬಂಗಾರದ ಸರ ಅಪಹರಣ ಪ್ರಕರಣ : ಕ್ಷಿಪ್ರ ಕಾರ್ಯಾಚರಣೆ ನಡೆಸಿ ಒಂದೇ ಗಂಟೆಯಲ್ಲಿ ೩ ಯುವಕರ ಸೆರೆ

ಭದ್ರಾವತಿ ಪೇಪರ್‌ಟೌನ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಗಾರದ ಸರ ಅಪಹರಿಸಿ ಪರಾರಿಯಾಗಿದ್ದ ೩ ಯುವಕರನ್ನು ಬಂಧಿಸಿವುದು.
   ಭದ್ರಾವತಿ, ಜೂ. ೨೦:  ಕಾಗದನಗರ ಅಂಚೆ ಕಛೇರಿ ರಸ್ತೆಯಲ್ಲಿ ಎಂಪಿಎಂ ಜೆಂಟ್ಸ್ ಕ್ಲಬ್ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ದೆಯೊಬ್ಬರ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ ೩ ಯುವಕರನ್ನು ಪಿ.ಐ ಪೇಪರ್ ಟೌನ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ ೧ ಗಂಟೆ ಅವಧಿಯಲ್ಲಿ ಬಂಧಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
    ಸುಮಾರು ೧೧.೪೫ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ೩ ಯುವಕರು ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಸ್ಥಳೀಯರು ವಾಹನ ಹಿಂಬಾಲಿಸಿ ಕೊಂಡು ಹೋಗಿ ತಕ್ಷಣ ತುರ್ತು ಸಂಖ್ಯೆ ೧೧೨ಕ್ಕೆ ಕರೆ ಮಾಡಿ ದ್ವಿಚಕ್ರ ವಾಹನ ಸಂಖ್ಯೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲಾ ಚೆಕ್ ಪೋಸ್ಟ್‌ಗಳಿಗೆ ಮಾಹಿತಿ ರವಾನಿಸಿದ್ದು, ಮಧ್ಯಾಹ್ನ ೧೨.೪೫ರ ಸಮಯದಲ್ಲಿ ಕಾರೇಹಳ್ಳಿ ಚೆಕ್ ಪೋಸ್‌ನಲ್ಲಿ ಯುವಕರು ಸಿಕ್ಕಿ ಬಿದಿದ್ದಾರೆ.
   ಎರೇಹಳ್ಳಿ ಗ್ರಾಮದ ನಿವಾಸಿ ಪವನ್(೧೯), ಉಂಬ್ಳೆಬೈಲ್ ರಸ್ತೆ ಸಂಜಯ್ ಕಾಲೋನಿ ನಿವಾಸಿ ವಿ. ವಿಷ್ಣು ಅಲಿಯಾಸ್ ಪೊಲ್ಲಾರ್ಡ್(೧೯) ಮತ್ತು ಹೆಬ್ಬಂಡಿ ಗ್ರಾಮದ ನಿವಾಸಿ ಎಂ ಮಹೇಶ್(೧೯) ಬಂಧಿತ ಯುವಕರಾಗಿದ್ದು, ಒಂದು ಬಂಗಾರದ ಸರ ಮತ್ತು ೨ ಬಂಗಾರದ ಲಕ್ಷ್ಮೀ ಕಾಸ್ ಸೇರಿದಂತೆ ಒಟ್ಟು ೧೦೩ ಗ್ರಾಂ ತೂಕದ ಒಟ್ಟು ೪,೬೩,೫೦೦ ರು. ಮೌಲ್ಯದ ಬಂಗಾರದ ಆಭರಣಗಳನ್ನು ಹಾಗು ಕೃತ್ಯಕ್ಕೆ ಬಳಸಿದ ೨ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಬಂಧಿತ ೩ ಯುವಕರು ೨೦೧೯ರಲ್ಲಿ ಪೇಪರ್‌ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ೨ ಪ್ರಕರಣ ಹಾಗು ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ೨ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
    ಜಿಲ್ಲಾ ಪೊಲೀಸ್ ಅಧೀಕ್ಷಕ, ಹೆಚ್ಚುವರಿ ಅಧೀಕ್ಷಕ ಹಾಗು ಸಹಾಯಕ ಅಧೀಕ್ಷಕರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಈ.ಓ. ಮಂಜುನಾಥ್, ಪೇಪರ್‌ಟೌನ್ ಠಾಣಾಧಿಕಾರಿಗಳಾದ ಶಿಲ್ಪಾ ನಾಯನೇಗಲಿ, ಸಹಾಯಕ ಠಾಣಾಧಿಕಾರಿ ರತ್ನಾಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಚನ್ನಕೇಶವ, ಅರುಣ, ಗಂಗಾಧರ, ಹನಮಂತ ಆವಟ್ಟಿ, ಚಿನ್ನನಾಯ್ಕ, ಧರ್ಮನಾಯ್ಕ ಮತ್ತು ಮಂಜುನಾಥ ಪಾಲ್ಗೊಂಡಿದ್ದರು.

ನಗರಸಭೆ ಸದಸ್ಯ ಬಿ.ಕೆ ಮೋಹನ್ ೬೦ನೇ ಹುಟ್ಟುಹಬ್ಬ ಆಚರಿಸಿದ ಗ್ರಾಮಾಂತರ ಯುವ ಕಾಂಗ್ರೆಸ್

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಸದಸ್ಯ ಬಿ.ಕೆ ಮೋಹನ್‌ರವರ ೬೦ನೇ ಹುಟ್ಟುಹಬ್ಬದ ಅಂಗವಾಗಿ ಭಾನುವಾರ  ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
   ಭದ್ರಾವತಿ, ಜೂ. ೨೦: ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಸದಸ್ಯ ಬಿ.ಕೆ ಮೋಹನ್‌ರವರ ೬೦ನೇ ಹುಟ್ಟುಹಬ್ಬದ ಅಂಗವಾಗಿ ಭಾನುವಾರ  ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
   ಹುಟ್ಟುಹಬ್ಬಕ್ಕೆ ಶುಭಕೋರಿದ ಯುವ ಕಾಂಗ್ರೆಸ್ ಮುಖಂಡರು ಗ್ರಾಮಾಂತರ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.
    ಅಧ್ಯಕ್ಷ ಅಫ್ತಾಬ್ ಅಹಮದ್, ಉಪಾಧ್ಯಕ್ಷರಾದ ಪ್ರವೀಣ್ ಕಲ್ಪನಹಳ್ಳಿ, ತಬ್ರೆಜ್ ಖಾನ್, ನಗರಸಭೆ ಸದಸ್ಯರಾದ ಬಿ.ಎಂ ಮಂಜುನಾಥ್, ಯುವ ಮುಖಂಡರಾದ ಬಿ.ಎಸ್ ಗಣೇಶ್, ಕೆ.ಎನ್ ನಾಗೇಶ್, ಸಜ್ಜಾದ್, ಫೈಸಲ್, ಅಭಿ, ಸಮೀರ್,  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ನಮ್ಮೆಲ್ಲರೂ ದಾರಿದೀಪ : ಬಸವರಾಜ ಬಿ ಆನೇಕೊಪ್ಪ

ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ೬೮ನೇ ಜನ್ಮದಿನದ ಅಂಗವಾಗಿ ಕಾಗದನಗರ ವಾರ್ಡ್ ನಂ.೧ರ ಪಾರ್ಕ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮರೆತೇವೆಂದರು ಮರೆಯಲಿ ನಿನ್ನ ಹೆಂಗ..! ವಿಶೇಷ ಕಾರ್ಯಕ್ರಮ ಜೆಡಿಎಸ್  ಮುಖಂಡರಾದ ಶಾರದ ಅಪ್ಪಾಜಿ ಉದ್ಘಾಟಿಸಿದರು.
    ಭದ್ರಾವತಿ, ಜೂ. ೨೦: ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಭದ್ರಾವತಿ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿಗೆ ಪಾತ್ರರಾಗಿದ್ದರು. ಅವರಲ್ಲಿ ಸಾಮಾಜಿಕ ಬದ್ಧತೆ, ಜನಪರ ಕಾಳಜಿ ನಮ್ಮೆಲ್ಲರೂ ದಾರಿದೀಪವಾಗಿದೆ ಎಂದು ವಾರ್ಡ್ ನಂ.೧೯ರ ನಗರಸಭಾ ಸದಸ್ಯ ಬಸವರಾಜ ಬಿ.  ಆನೇಕೊಪ್ಪ ಹೇಳಿದರು.
    ಅವರು ಭಾನುವಾರ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ೬೮ನೇ ಜನ್ಮದಿನದ ಅಂಗವಾಗಿ ಕಾಗದನಗರ ವಾರ್ಡ್ ನಂ.೧ರ ಪಾರ್ಕ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮರೆತೇವೆಂದರು ಮರೆಯಲಿ ನಿನ್ನ ಹೆಂಗ..! ವಿಶೇಷ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
ಅಪ್ಪಾಜಿಯವರು ಯಾವುದೇ ಜಾತಿ, ಧರ್ಮ, ಜನಾಂಗಕ್ಕೆ ಮೀಸಲಾಗಿರದೆ ಎಲ್ಲರ ಅಭಿವೃದ್ಧಿಗೆ ಮುಂದಾಗಿದ್ದರು. ಈ ಹಿನ್ನಲೆಯಲ್ಲಿ ಅವರು ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆಂದರು.
    ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಕಾರ್ಯಕ್ರಮ ಉದ್ಘಾಟಿಸಿದರು. ವಾರ್ಡ್ ೧೯ರ ವ್ಯಾಪ್ತಿಯಲ್ಲಿನ ಆಶಾ ಕಾರ್ಯಕರ್ತರು, ಪೌರಕಾರ್ಮಿಕರು ಹಾಗು ಬಡವರ್ಗದವರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.
    ನಗರಸಭಾ ಸದಸ್ಯೆ ಜಯಶೀಲ, ಕಾಗದನಗರ ಆಂಗ್ಲ ಶಾಲೆ ಪ್ರಾಂಶುಪಾಲ ಸತೀಶ್, ಮುಖಂಡರಾದ ಡಿ.ಟಿ ಶ್ರೀಧರ್, ಲೋಕೇಶ್ವರ್‌ರಾವ್, ತಿಮ್ಮಪ್ಪ, ಎಸ್. ಚಂದ್ರಶೇಖರ್, ಕೇಬಲ್ ಸುರೇಶ್, ರಮೇಶ್, ಡಾ. ಮಂಜುನಾಥ್,  ಕಮಲಕರ್, ವಿಲಿಯಂ, ಗಿರ್ಗೇಶ್, ವೆಂಕಟೇಶ್ ಉಜ್ಜನಿಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಮಟೆ ಜಗದೀಶ್ ತಂಡದಿಂದ ಜಾನಪದ ಗಾಯನ ನಡೆಯಿತು.

Saturday, June 19, 2021

ರಾಹುಲ್‌ಗಾಂಧಿ ಜನ್ಮದಿನ : ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಹಣ್ಣು ವಿತರಣೆ

ಭದ್ರಾವತಿ : ರಾಹುಲ್ ಗಾಂಧಿ ಜನ್ಮ ದಿನಾಚರಣೆ ಅಂಗವಾಗಿ ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ವಿತರಿಸಲಾಯಿತು.
   ಭದ್ರಾವತಿ, ಜೂ. ೧೯: ರಾಹುಲ್ ಗಾಂಧಿ ಜನ್ಮ ದಿನಾಚರಣೆ ಅಂಗವಾಗಿ ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ವಿತರಿಸಲಾಯಿತು.
    ಕಾರ್ಯಾಧ್ಯಕ್ಷ ಅಫ್ತಾಬ್ ಅಹಮದ್, ಉಪಾಧ್ಯಕ್ಷ ಪ್ರವೀಣ್ ಕಲ್ಪನಹಳ್ಳಿ, ನಗರಸಭೆ ೬ನೇ ವಾರ್ಡ್ ಸದಸ್ಯ ಆರ್. ಶ್ರೇಯಸ್(ಚಿಟ್ಟೆ), ತಬ್ರೆಜ್ ಖಾನ್ ಸಜ್ಜಾದ್, ಫೈಸಲ್ ಅಭಿ, ವಾಹಿದ್ ಖಾನ್, ತೇಜಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಬಿ.ಕೆ ಮೋಹನ್ ಜನ್ಮದಿನಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ:
  ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಸದಸ್ಯ ಬಿ.ಕೆ ಮೋಹನ್‌ರವರ ೬೦ನೇ ಹುಟ್ಟುಹಬ್ಬ ಜೂ.೨೦ರ ಭಾನುವಾರ ನಡೆಯಲಿದ್ದು, ಇದರ ಅಂಗವಾಗಿ ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜೂ.೨೦ರಂದು ನಗರದ ವಿವಿಧೆಡೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹುಟ್ಟುಹಬ್ಬ ಆಚರಣೆ

ಮಾಜಿ ಶಾಸಕ ಎಂ.ಜೆ ಅಪ್ಪಾಜಿ
    ಭದ್ರಾವತಿ, ಜೂ. ೧೯: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ೬೮ನೇ ಹುಟ್ಟುಹಬ್ಬ ಜೂ.೨೦ರಂದು ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳಿಂದ ನಗರದ ವಿವಿಧೆಡೆ ಸರಳವಾಗಿ ನಡೆಯಲಿದೆ.
  ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನ ಹೊಂದಿದ ನಂತರ ನಡೆಯುತ್ತಿರುವ ಮೊದಲ ಹುಟ್ಟುಹಬ್ಬ ಇದಾಗಿದ್ದು, ಕುಟುಂಬ ವರ್ಗದವರಿಂದ ಬಿ.ಎಚ್ ರಸ್ತೆ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಸಂಜೆ ೬ ಗಂಟೆಗೆ ಹುಟ್ಟುಹಬ್ಬದ ಅಂಗವಾಗಿ ಸಿಹಿ ವಿತರಣೆ ನಡೆಯಲಿದೆ.
    ಕಾಗದನಗರ ವಾರ್ಡ್ ನಂ.೧ರ ಪಾರ್ಕ್ ಮೈದಾನದಲ್ಲಿ ನಗರಸಭಾ ಸದಸ್ಯ ಬಸವರಾಜ್ ಬಿ. ಆನೇಕೊಪ್ಪ ನೇತೃತ್ವದಲ್ಲಿ ಮರೆತೇವೆಂದರು ಮರೆಯಲಿ ನಿನ್ನ ಹೆಂಗ..! ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹುಟ್ಟುಹಬ್ಬದ ಅಂಗವಾಗಿ ಬಡವರಿಗೆ ದಿನಸಿ ಸಾಮಗ್ರಿ ವಿತರಣೆ ನಡೆಯಲಿದೆ.
        ವಾರ್ಡ್ ನಂ.೨೧ರ ನಗರಸಭಾ ಸದಸ್ಯೆ ವಿಜಯ ಹಾಗು ಸಮಾಜ ಸೇವಕ ಅಶೋಕ್‌ಕುಮಾರ್ ನೇತೃತ್ವದಲ್ಲಿ ಉಜ್ಜನಿಪುರ ಬೈಪಾಸ್ ರಸ್ತೆಯಲ್ಲಿರುವ ಸರ್.ಎಂ. ವಿಶೇಶ್ವರಯ್ಯ ಪ್ರತಿಮೆ ಬಳಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. 
            ನಗರಸಭೆ ವಾರ್ಡ್ ನಂ.೨೫ರ ನಗರಸಭಾ ಸದಸ್ಯ ಉದಯ್‌ಕುಮಾರ್, ಮುಖಂಡ ಎಂ. ರಾಜು ನೇತೃತ್ವದಲ್ಲಿ ಹುಟ್ಟುಹಬ್ಬದ ಅಂಗವಾಗಿ ಬೆಳಿಗ್ಗೆ ೯.೩೦ಕ್ಕೆ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದ ಬಳಿ ಪ್ರೊ. ಬಿ. ಕೃಷ್ಣಪ್ಪ ವೃತ್ತದಲ್ಲಿ ಅನ್ನಸಂತರ್ಪಣೆ ನಡೆಯಲಿದೆ.
     ಇದೆ ರೀತಿ ಜಿಂಕ್‌ಲೈನ್, ಬಾರಂದೂರು, ಕಾರೇಹಳ್ಳಿ, ಬಿಆರ್‌ಪಿ ಮತ್ತು ಗೋಣಿಬೀಡು ಸೇರಿದಂತೆ ಹಲವೆಡೆ ಅಭಿಮಾನಿಗಳು, ಕಾರ್ಯಕರ್ತರಿಂದ ಹುಟ್ಟುಹಬ್ಬ ಆಚರಣೆ ನಡೆಯಲಿದೆ.

Friday, June 18, 2021

ಕಸ ವಿಲೇವಾರಿ ವಾಹನ ಸೇವೆಗೆ ಸಮರ್ಪಣೆ


ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಮಂಜೂರಾಗಿರುವ ವಾಹನಗಳನ್ನು ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಆಯಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಿಗೆ ಹಸ್ತಾಂತರಿಸುವ ಮೂಲಕ ಸೇವೆಗೆ ಸಮರ್ಪಿಸಿದರು.
ಭದ್ರಾವತಿ, ಜೂ. ೧೮: ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಮಂಜೂರಾಗಿರುವ ವಾಹನಗಳನ್ನು ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಆಯಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಿಗೆ ಹಸ್ತಾಂತರಿಸುವ ಮೂಲಕ ಸೇವೆಗೆ ಸಮರ್ಪಿಸಿದರು.
ತಾಲೂಕಿನಲ್ಲಿ ಒಟ್ಟು ೪೧ ಗ್ರಾಮ ಪಂಚಾಯಿತಿಗಳಿದ್ದು, ಒಂದೊಂದು ಗ್ರಾಮ ಪಂಚಾಯಿತಿಗೂ ತಲಾ ಒಂದೊಂದು ವಾಹನ ಮೀಸಲಿಡಲಾಗಿದೆ. ಸದ್ಯಕ್ಕೆ ೭ ಗ್ರಾಮ ಪಂಚಾಯಿತಿಗಳಿಗೆ ವಾಹನಗಳು ಬಂದಿದ್ದು, ಉಳಿದ ವಾಹನಗಳು ಸಹ ಶೀಘ್ರದಲ್ಲಿಯೇ ಬರಲಿವೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಹಾಗು ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಮಂಜೂರಾಗಿರುವ ವಾಹನಗಳನ್ನು ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ಆಯಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಿಗೆ ಹಸ್ತಾಂತರಿಸುವ ಮೂಲಕ ಸ್ವತಃ ವಾಹನ ಚಾಲನೆಗೆ ಮುಂದಾಗಿ ಗಮನ ಸೆಳೆದರು.

ಸೋಂಕು ಇಳಿಕೆ : ಒಂದೇ ದಿನ ೬ ಬಲಿ

   ಭದ್ರಾವತಿ, ಜೂ. ೧೮: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಆದರೆ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಶುಕ್ರವಾರ ಒಂದೇ ದಿನ ೬ ಮಂದಿ ಮೃತಪಟ್ಟಿದ್ದಾರೆ.
    ಒಟ್ಟು ೧೦೫೫ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೫೨ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ೧೮ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ಒಟ್ಟು ೬೭೪೧ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೬೫೭೧ ಮಂದಿ ಗುಣಮುಖರಾಗಿದ್ದಾರೆ. ೧೭೦ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿದ್ದು, ಇದುವರೆಗೂ ಒಟ್ಟು ೧೮೯ ಮೃತಪಟ್ಟಿದ್ದಾರೆ.
    ಒಟ್ಟು ೧೫೮ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಒಟ್ಟು ೩೬ ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯವಾಗಿವೆ. ಇದುವರೆಗೂ ೧೦೩ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮೀಣ ವ್ಯಾಪ್ತಿಯಲ್ಲಿ ೨೭ ಜೋನ್‌ಗಳು ಸಕ್ರಿಯವಾಗಿವೆ.

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವೈದ್ಯರಿಂದ ಪ್ರಧಾನಿಗೆ ಮನವಿ


ಕರ್ತವ್ಯ ನಿರತ ವೈದ್ಯರು ಕಪ್ಪು ಪಟ್ಟಿ ಧರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ನೇತೃತ್ವದಲ್ಲಿ ಶುಕ್ರವಾರ  ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
    ಭದ್ರಾವತಿ, ಜೂ. ೧೮: ಕರ್ತವ್ಯ ನಿರತ ವೈದ್ಯರು ಕಪ್ಪು ಪಟ್ಟಿ ಧರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ನೇತೃತ್ವದಲ್ಲಿ ಶುಕ್ರವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
     ಆರೋಗ್ಯ ಸೇವೆಗಳ ಸಿಬ್ಬಂದಿ ಮತ್ತು ವೈದ್ಯಕೀಯ ಸಂಸ್ಥೆಗಳು(ಹಿಂಸೆ ಮತ್ತು ಆಸ್ತಿಗೆ ಹಾನಿ ನಿಷೇಧ) ಮಸೂದೆ-೨೦೧೯ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸಮಾಜ ವಿರೋಧಿ ಶಕ್ತಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಕೋವಿಡ್-೧೯ರ ಪರಿಣಾಮ ಮೃತಪಟ್ಟ ವೈದ್ಯರನ್ನು ಕೋವಿಡ್ ಹುತಾತ್ಮರೆಂದು ಗುರುತಿಸಬೇಕು. ಹುತಾತ್ಮ ಯೋಧರನ್ನು ಗುರುತಿಸಲು ಮತ್ತು ಪರಿಶೀಲಿಸಲು ಕೇಂದ್ರೀಯ ಆರೋಗ್ಯ ಗುಪ್ತಚರ ಬ್ಯೂರೋ(ಸಿಬಿಎಚ್‌ಐ) ಮೂಲಕ ಪರಿಣಾಮ ವ್ಯವಸ್ಥೆಯನ್ನು ರೂಪಿಸಬೇಕು. ಹುತಾತ್ಮ ವೈದ್ಯರ ಕುಟುಂಬಗಳಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡಬೇಕೆಂದು ಮನವಿ ಮಾಡಲಾಗಿದೆ.
     ಪ್ರಸ್ತುತ ಕೊರೋನಾ ಸೋಂಕು ಎದುರಿಸಲು ಲಸಿಕೆಯೊಂದೇ ಪರಿಣಾಮಕಾರಿ ವಿಧಾನ ಎಂಬುದು ಬಹುತೇಕ ಸಾಬೀತಾಗಿದ್ದು, ಹೆಚ್ಚಿನ ಪ್ರಾಣ ಹಾನಿ, ಸೋಂಕಿನ ತೀವ್ರತೆ ತಡೆಯಲು ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಬೇಕು. ಕೋವಿಡ್-೧೯ರ ನಂತರ ಎದುರಾಗಿರುವ ಸಮಸ್ಯೆಗಳನ್ನು ಸಂಪೂರ್ಣವಾಗಿ ಅರಿಯಲು ಅಧ್ಯಯನ ಮಾಡಲು ಮತ್ತು ಔಷಧದ ಎಲ್ಲಾ ವಿಭಾಗಗಳಲ್ಲಿ ಬಹುಮುಖಿ ಚಿಕಿತ್ಸಾ ಮಾರ್ಗಸೂಚಿಗಳನ್ನು ಹೊರತರಲು ಪ್ರತ್ಯೇಕ ಸಂಶೋಧನಾ ಕೋಶವನ್ನು ಸ್ಥಾಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
     ಐಎಂಎ ತಾಲೂಕು ಶಾಖೆ ಅಧ್ಯಕ್ಷೆ ಡಾ. ವೀಣಾ ಎಸ್. ಭಟ್, ಕಾರ್ಯದರ್ಶಿ ಡಾ. ಎಂ.ಸಿ ಸ್ವರ್ಣಲತಾ,  ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ. ಡಾ. ಗ್ಲಾಡಿಸ್, ಡಾ. ನಿತೀನ್, ಡಾ. ಶಿವಪ್ರಕಾಶ್, ಡಾ. ಗುರುಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.