Tuesday, August 31, 2021

ಅಪ್ಪಾಜಿ ಪುಣ್ಯ ಸ್ಮರಣೆ ಅಂಗವಾಗಿ ಸೆ.೨ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಭದ್ರಾವತಿ, ಆ. ೩೧: ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಮೊದಲ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಸೆ.೨ರಂದು ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೩ ಗಂಟೆ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಗರಸಭೆ ವಾರ್ಡ್ ನಂ.೩೧ರ ಜಿಂಕ್‌ಲೈನ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ವಾರ್ಡ್ ನಗರಸಭಾ ಸದಸ್ಯ ಪಲ್ಲವಿ ಎಸ್ ದಿಲೀಪ್ ನೇತೃತ್ವದಲ್ಲಿ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗು ತಾಲೂಕು ಸರ್ಕಾರಿ ಆಸ್ಪತ್ರೆ ಸಹಕಾರದೊಂದಿಗೆ ಶಿಬಿರ ಆಯೋಜಿಸಲಾಗಿದೆ.
    ಚರ್ಮ ವೈದ್ಯರು, ದಂತ ತಜ್ಞರು, ಸರ್ಜನ್, ಕಿವಿ, ಮೂಗು, ಗಂಟಲು, ಮಕ್ಕಳ ತಜ್ಞರು ಮತ್ತು ಕಣ್ಣಿನ ತಜ್ಞರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಆರೋಗ್ಯ ತಪಾಸಣೆ ಜೊತೆಗೆ ಉಚಿತವಾಗಿ ಇಸಿಜಿ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಸಹನಡೆಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ನಗರಸಭೆ ವಾರ್ಡ್ ನಂ.೨೯ ಚುನಾವಣೆ : ಬಿಜೆಪಿಯಿಂದ ವ್ಯಾಪಕ ಪ್ರಚಾರ

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಪ್ರಚಾರದ ಭರಾಟೆ ಹೆಚ್ಚಾಗಿದ್ದು, ಮಂಗಳವಾರ ಬಿಜೆಪಿ ಅಭ್ಯರ್ಥಿ ರಮಾ ವೆಂಕಟೇಶ್ ಪರವಾಗಿ ಜಿಲ್ಲಾ ಹಾಗು ಸ್ಥಳೀಯ ಮುಖಂಡರು ಮನೆ ಮನೆಗೆ ತೆರಳಿ ವ್ಯಾಪಕ ಪ್ರಚಾರ ನಡೆಸಿದರು.
       ಭದ್ರಾವತಿ, ಆ. ೩೧: ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಪ್ರಚಾರದ ಭರಾಟೆ ಹೆಚ್ಚಾಗಿದ್ದು, ಮಂಗಳವಾರ ಬಿಜೆಪಿ ಅಭ್ಯರ್ಥಿ ರಮಾ ವೆಂಕಟೇಶ್ ಪರವಾಗಿ ಜಿಲ್ಲಾ ಹಾಗು ಸ್ಥಳೀಯ ಮುಖಂಡರು ಮನೆ ಮನೆಗೆ ತೆರಳಿ ವ್ಯಾಪಕ ಪ್ರಚಾರ ನಡೆಸಿದರು.
    ಬಹಿರಂಗ ಪ್ರಚಾರಕ್ಕೆ ೧ ದಿನ ಮಾತ್ರ ಬಾಕಿ ಉಳಿದಿದೆ. ಈ ಹಿನ್ನಲೆಯಲ್ಲಿ ವಿವಿಧ ಪಕ್ಷಗಳ ಪ್ರಮುಖರು ತಮ್ಮ ಅಭ್ಯರ್ಥಿಗಳ ಪರವಾರ ಪ್ರಚಾರಕ್ಕೆ ಮುಂದಾಗಿದ್ದಾರೆ.
    ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಆರ್.ಎಸ್ ಶೋಭಾ, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಯುವ ಘಟಕದ ಅಧ್ಯಕ್ಷ ವಿಜಯ್‌ರಾಜ್, ಪ್ರಮುಖರಾದ ಸೂಡಾ ಸದಸ್ಯರಾದ ವಿ. ಕದಿರೇಶ್, ರಾಮಲಿಂಗಯ್ಯ, ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಜಿ. ಆನಂದಕುಮಾರ್, ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ಜನ್ನಾಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನವೀನ್‌ಕುಮಾರ್, ಎಂ. ಮಂಜುನಾಥ್, ಶಿವಕುಮಾರ್, ಮಣಿ, ಮಂಜಪ್ಪ, ನಂಜಪ್ಪ, ಹೇಮಾವತಿ ವಿಶ್ವನಾಥ್, ಮಂಜುಳ, ಮಲ್ಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಾಮಾಜಿಕ ಜಾಲತಾಣದ ಗ್ರಾಮಾಂತರ ಅಧ್ಯಕ್ಷರಾಗಿ ಪ್ರವೀಣ್ ನಾಯಕ್

ಭದ್ರಾವತಿ ತಾಲೂಕಿನ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಪ್ರವೀಣ್‌ನಾಯಕ್ ನೇಮಕಗೊಂಡಿದ್ದು, ಆದೇಶ ಪತ್ರವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್ ವಿತರಿಸಿದರು.
    ಭದ್ರಾವತಿ, ಆ. ೩೧: ತಾಲೂಕಿನ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಪ್ರವೀಣ್‌ನಾಯಕ್ ನೇಮಕಗೊಂಡಿದ್ದಾರೆ.
    ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಎಸ್.ಆರ್ ಸೌಗಂಧಿಕಾ ಅವರ ಸೂಚನೆ ಮೇರೆಗೆ ಜಿಲ್ಲಾಧ್ಯಕ್ಷ ಎನ್.ಡಿ ಪ್ರವೀಣ್‌ಕುಮಾರ್ ನೇಮಕ ಆದೇಶ ಹೊರಡಿಸಿದ್ದು, ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕೆಂದು ಆದೇಶ ಪತ್ರದಲ್ಲಿ ಸೂಚಿಸಿದ್ದಾರೆ.
    ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಆದೇಶ ಪತ್ರವನ್ನು ಪ್ರವೀಣ್‌ನಾಯಕ್ ಅವರಿಗೆ ವಿತರಿಸಿದರು. ಕೆಪಿಸಿಸಿ ಸಾಮಾಜಿಕ ಜಾಲತಾಣದ ತಾಲೂಕು ಅಧ್ಯಕ್ಷ ಸದಾಶಿವಮೂರ್ತಿ, ಉಪಾಧ್ಯಕ್ಷ ವಿನೋದ್, ಗ್ರಾಮಾಂತರ ಕಾರ್ಯದರ್ಶಿ ಹೇಮಾ ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, August 30, 2021

ಕಟ್ಟಡ ಕಾರ್ಮಿಕರು ಕಡ್ಡಾಯವಾಗಿ ಗುರುತಿನ ಚೀಟಿ ಪಡೆಯಿರಿ : ಬಿ.ಕೆ ಮೋಹನ್

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದ ಸಮುದಾಯ ಭವನದಲ್ಲಿ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ಸೆಂಟ್ರಲ್ ಯೂನಿಯನ್ ವತಿಯಿಂದ ಕೂಡ್ಲಿಗೆರೆ ಹಾಗು ಹರಳಿಹಳ್ಳಿ ಗ್ರಾಮದ ವ್ಯಾಪ್ತಿಯ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
    ಭದ್ರಾವತಿ, ಆ. ೩೦: ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕೆಂದು ನಗರಸಭಾ ಸದಸ್ಯ ಬಿ.ಕೆ ಮೋಹನ್ ಹೇಳಿದರು.
    ಅವರು ತಾಲೂಕಿನ ಕೂಡ್ಲಿಗೆರೆ ಗ್ರಾಮದ ಸಮುದಾಯ ಭವನದಲ್ಲಿ ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ಸೆಂಟ್ರಲ್ ಯೂನಿಯನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೂಡ್ಲಿಗೆರೆ ಹಾಗು ಹರಳಿಹಳ್ಳಿ ಗ್ರಾಮದ ವ್ಯಾಪ್ತಿಯ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಿಸಿ ಮಾತನಾಡಿದರು.
    ಕಟ್ಟಡ ಕಾರ್ಮಿಕರು ಗುರುತಿನ ಚೀಟಿ ಹೊಂದುವುದರಿಂದ ಸಂಕಷ್ಟದ ಸಮಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ತಕ್ಷಣ ಪಡೆದುಕೊಳ್ಳಬಹುದಾಗಿದೆ. ಅರ್ಹ ಕಾರ್ಮಿಕರು ಸೌಲಭ್ಯಗಳಿಂದ ವಂಚಿತವಾಗಬಾರದು ಎಂದರು.
    ಯೂನಿಯನ್ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸಂಜಯ್‌ಕುಮಾರ್, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ತಾಂತ್ರಿಕ ಸಲಹೆಗಾರ ಮನೋಹರ್, ಸಂಘಟನಾ ಕಾರ್ಯದರ್ಶಿ ಕುಮಾರ್, ಉಪಾಧ್ಯಕ್ಷ ನಾಗೇಂದ್ರರೆಡ್ಡಿ, ಕೂಡ್ಲಿಗೆರೆ ಭಾಗದ ಅಧ್ಯಕ್ಷ ರುದ್ರಮುನಿ, ತಾಲೂಕು ಗ್ರಾಮಾಂತರ ಅಧ್ಯಕ್ಷ ಹಬೀಬ್, ಶಿವಣ್ಣಗೌಡ ಹಾಗು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.


ನಗರಸಭೆ ವಾರ್ಡ್ ನಂ.೨೯ರ ಚುನಾವಣೆ : ೩ ಪಕ್ಷಗಳಿಂದ ಪ್ರಚಾರದ ಭರಾಟೆ

ಪಕ್ಷಗಳಿಗೆ ಗೆಲ್ಲುವ ಪ್ರತಿಷ್ಠೆ, ಉಳಿಸಿಕೊಳ್ಳುವ ತವಕ, ಅದೃಷ್ಟ ಪರೀಕ್ಷೆ


ಭದ್ರಾವತಿ ನಗರಸಭೆ ವಾಡ್ ನಂ.೨೯ರ ಚುನಾವಣೆ ಹಿನ್ನಲೆಯಲ್ಲಿ ಮತದಾರರನ್ನು ಸೆಳೆಯಲು ಮನೆ ಮನೆಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದು ಆರೋಪಿಸಿ ೩ ಪಕ್ಷಗಳ ನಡುವೆ ಸೋಮವಾರ ಸಂಜೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.
    ಭದ್ರಾವತಿ, ಆ. ೩೦; ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಪ್ರಚಾರದ ಭರಾಟೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ೩ ಪಕ್ಷಗಳು ತೀವ್ರ ಪೈಪೋಟಿಗೆ ಮುಂದಾಗಿವೆ.
    ಸೆ.೩ರಂದು ಮತದಾನ ನಡೆಯಲಿದ್ದು, ಉಳಿದಿರುವ ೨ ದಿನಗಳಲ್ಲಿ ವ್ಯಾಪಕ ಪ್ರಚಾರಕ್ಕೆ ೩ ಪಕ್ಷಗಳು ಸಿದ್ದತೆಗಳನ್ನು ಕೈಗೊಂಡಿವೆ. ಈಗಾಗಲೇ ವಾರ್ಡ್ ವ್ಯಾಪ್ತಿಯಲ್ಲಿ ೩-೪ ಸುತ್ತಿನ ಪ್ರಚಾರ ನಡೆಸಲಾಗಿದೆ.
    ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಗೆಲ್ಲುವುದು ಪ್ರತಿಷ್ಠೆಯಾಗಿದ್ದರೇ, ಜೆಡಿಎಸ್ ಪಕ್ಷಕ್ಕೆ ಉಳಿಸಿಕೊಳ್ಳುವ ತವಕ, ಈ ನಡುವೆ ಬಿಜೆಪಿ ಅದೃಷ್ಟ ಪರೀಕ್ಷೆಗೆ ಎದುರು ನೋಡುತ್ತಿದೆ. ೩ ಪಕ್ಷಗಳ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ ಚುನಾವಣೆ ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
    ಇವೆಲ್ಲದರ ನಡುವೆ ಚುನಾವಣಾ ಅಕ್ರಮಗಳು ಸಹ ಹೆಚ್ಚಾಗುತ್ತಿದ್ದು, ಮತದಾರರನ್ನು ಸೆಳೆಯಲು ನಾನಾ ರೀತಿಯ ಅಕ್ರಮಗಳನ್ನು ನಡೆಸಲಾಗುತ್ತಿದೆ ಎಂಬ ದೂರುಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ. ಅಕ್ರಮಗಳ ವಿಚಾರಕ್ಕೆ ಸಂಬಂಧಿಸಿದಂತೆ ೩ ಪಕ್ಷಗಳು ಪರಸ್ಪರ ದೋಷಾರೋಪಣೆಗಳನ್ನು ಮಾಡುತ್ತಿವೆ. ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ೩ ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮಾಹಿತಿ ಅರಿತು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.

ದಲಿತ ಸಂಘರ್ಷ ಸಮಿತಿ ಮುಖಂಡರಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ


ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಹಾಗು ಪ್ರೊ. ಬಿ. ಕೃಷ್ಣಪ್ಪನವರ ೮೩ನೇ ಜನ್ಮದಿನ  ಅಂಗವಾಗಿ ಸೋಮವಾರ ಶಿವಮೊಗ್ಗ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ನೂರಾರು ದಲಿತ ಮುಖಂಡರು, ಕಾರ್ಯಕರ್ತರು ಭದ್ರಾವತಿ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
    ಭದ್ರಾವತಿ, ಆ. ೩೦: ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಹಾಗು ಪ್ರೊ. ಬಿ. ಕೃಷ್ಣಪ್ಪನವರ ೮೩ನೇ ಜನ್ಮದಿನ  ಅಂಗವಾಗಿ ಸೋಮವಾರ ಶಿವಮೊಗ್ಗ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ನೂರಾರು ದಲಿತ ಮುಖಂಡರು, ಕಾರ್ಯಕರ್ತರು ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
    ತಾಲೂಕು ಸಂಚಾಲಕ ರವಿನಾಯ್ಕ ಮಾತನಾಡಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಡಾ. ಬಿ.ಆರ್ ಅಂಬೇಡ್ಕರ್ ಹಾಗು ಪ್ರೊ. ಬಿ. ಕೃಷ್ಣಪ್ಪನವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
    ತಾಲೂಕು ನಗರ ಸಂಚಾಲಕ ತಮ್ಮಯ್ಯ, ಸಂಘಟನಾ ಸಂಚಾಲಕರಾದ ಶಿವಾನಾಯಕ, ಮುತ್ತು, ಅಣ್ಣಪ್ಪ, ಜೀವಾ, ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, August 29, 2021

ಬಿಳಿಕಿ ಹಿರೇಮಠಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ

ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠಕ್ಕೆ ಗೃಹ ಸಚಿವ ಅರಗಜ್ಞಾನೇಂದ್ರ ಭಾನುವಾರ ರಾತ್ರಿ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದರು.
    ಭದ್ರಾವತಿ, ಆ. ೨೯: ತಾಲೂಕಿನ ಬಿಳಿಕಿ ಹಿರೇಮಠಕ್ಕೆ ಗೃಹ ಸಚಿವ ಅರಗಜ್ಞಾನೇಂದ್ರ ಭಾನುವಾರ ರಾತ್ರಿ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದರು.
    ಹಿರೇಮಠದಲ್ಲಿ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಜನ್ಮ ಸುವರ್ಣ ಮಹೋತ್ಸವ ಹಾಗು ಸುವರ್ಣ ಭವನ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ರಾತ್ರಿ ಆಗಮಿಸಿ ಶ್ರೀಗಳಿಗೆ ಹುಟ್ಟುಹಬ್ಬದ ಶುಭಕೋರಿದರು. ಈ ಸಂದರ್ಭದಲ್ಲಿ ಹಿರೇಮಠದ ಪ್ರಮುಖರು, ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಯುವ ಘಟಕದಿಂದ ಬಿಳಿಕಿ ಶ್ರೀಗಳಿಗೆ ಗುರು ನಮನ

ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ೫೦ ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಭಾನುವಾರ ಶ್ರೀ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಶ್ರೀಗಳಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ ಗುರು ನಮನ ಸಲ್ಲಿಸಲಾಯಿತು.
    ಭದ್ರಾವತಿ, ಆ. ೨೯: ತಾಲೂಕಿನ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ೫೦ ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಭಾನುವಾರ ಶ್ರೀ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಶ್ರೀಗಳಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ ಗುರು ನಮನ ಸಲ್ಲಿಸಲಾಯಿತು.
    ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್ ಅಬ್ಲಿಗೆರೆ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ತಾಲೂಕು ಅಧ್ಯಕ್ಷ ಎಚ್. ಮಂಜುನಾಥ್, ಉಪಾಧ್ಯಕ್ಷರಾದ ಆರ್.ಎನ್ ರುದ್ರೇಶ್, ಬಿ.ಎಸ್ ಶ್ರೀಕಾಂತ್, ಮಹಾದೇವ, ಪ್ರಧಾನ ಕಾರ್ಯದರ್ಶಿ ಕೆ.ಆರ್ ಆನಂದ್, ಖಜಾಂಚಿ ಬಿ.ಎಂ ರಮೇಶ್, ಸಹ ಕಾರ್ಯದರ್ಶಿ ಬಸವರಾಜ, ತಿಪ್ಪೇಸ್ವಾಮಿ, ಆನಂದಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಧರ್ಮಮಾರ್ಗದಿಂದ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯ : ಕೆ.ಎಸ್ ಈಶ್ವರಪ್ಪ

ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಜನ್ಮ ಸುವರ್ಣ ಮಹೋತ್ಸವ ಹಾಗು ಸುವರ್ಣ ಭವನ ಉದ್ಘಾಟನಾ ಸಮಾರಂಭ ಪಂಚಾಯತ್ ರಾಜ್ ಹಾಗು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್ ಈಶ್ವರಪ್ಪ ನೆರವೇರಿಸಿದರು.
    ಭದ್ರಾವತಿ, ಆ. ೨೯: ಸಮಾಜದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡು ಕೊಳ್ಳಬೇಕಾದರೆ ಎಲ್ಲರೂ ಧರ್ಮ ಮಾರ್ಗದಲ್ಲಿ ಸಾಗುವುದು ಅನಿವಾರ್ಯವಾಗಿದೆ ಎಂದು ಪಂಚಾಯತ್ ರಾಜ್ ಹಾಗು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
    ಅವರು ಭಾನುವಾರ ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಜನ್ಮ ಸುವರ್ಣ ಮಹೋತ್ಸವ ಹಾಗು ಸುವರ್ಣ ಭವನ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು.
ಸಮಾಜದಲ್ಲಿ ನೂರಾರು ಸಮಸ್ಯೆಗಳಿದ್ದು, ಈ ನಡುವೆಯೂ ಮಠಮಂದಿರಗಳು ಸಮಾಜದ ಏಳಿಗೆಗಾಗಿ ಶ್ರಮಿಸುವ ಜೊತೆಗೆ ಉತ್ತಮ ಧರ್ಮ ಸಂಸ್ಕಾರ ನೀಡುತ್ತಿವೆ. ಧರ್ಮ ಮಾರ್ಗದಲ್ಲಿ ಸಾಗಿದರೆ ಮಾತ್ರ ಎಲ್ಲದಕ್ಕೂ ಪರಿಹಾರ ಕೊಂಡುಕೊಳ್ಳಬಹುದಾಗಿದೆ ಎಂದರು.
    ಗುರುಗಳು ತ್ಯಾಗಿಗಳಾಗಿದ್ದು, ಯಾವುದೇ ಸ್ವಾರ್ಥ ಬಯಸದೆ ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿರುತ್ತಾರೆ. ಇಂತಹ ಗುರುಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಸಮಾಜದ ಏಳಿಗೆಗಾಗಿ ಗುರುಗಳು ಹೇಳಿದಂತೆ ನಡೆದುಕೊಳ್ಳಲು ಸಿದ್ದ. ಬಿಳಿಕಿ ಶ್ರೀ ಮತ್ತು ಬೆಕ್ಕಿನ ಕಲ್ಮಠ ಶ್ರೀಗಳಿಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
    ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೀಠಾಧಿಪತಿಯಾಗಿ ೩೧ ವರ್ಷಗಳು ಕಳೆದಿವೆ. ಯಾವುದೇ ಆದಾಯವಿಲ್ಲದಿದ್ದರೂ ಸಹ ಕೇವಲ ಅಂಚಿನ ಮನೆಯಲ್ಲಿದ್ದ ಮಠ ಇಂದು ಬೃಹದಾಗಿ ಬೆಳೆದಿದೆ. ಸಮಾಜದ ಪ್ರತಿಯೊಬ್ಬರು ಮಠದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ಮಠವಿದ್ದರೆ ಸಮಾಜ, ಸಮಾಜವಿದ್ದರೆ ಮಠ ಎಂಬುದು ಈ ಮೂಲಕ ಸಾಬೀತು ಮಾಡಿ ತೋರಿಸಲಾಗಿದೆ ಎಂದರು.
    ದಿವ್ಯ ಸಾನಿಧ್ಯವಹಿಸಿದ್ದ ಶಿವಮೊಗ್ಗ ಆನಂದಪುರ ಶ್ರೀ ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಮನೆಗೂ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಮಠಗಳು ಸಮಾಜ ಮುಖಿಯಾಗಿರಬೇಕು. ಸರ್ಕಾರ ಮಾಡುವ ಕೆಲಸಗಳನ್ನು ಮಠಮಂದಿರಗಳು ಮಾಡುತ್ತಿವೆ. ಈ ಹಿನ್ನಲೆಯಲ್ಲಿ ಮಠಮಂದಿರಗಳು ಸಹ ಬೆಳವಣಿಗೆ ಹೊಂದಬೇಕು. ಇವುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರದ್ದಾಗಿದೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರ ಅವಶ್ಯಕವಾಗಿದೆ. ಮಠ ಮಂದಿರಗಳು ಪ್ರತಿಯೊಬ್ಬರಿಗೂ ಉತ್ತಮ ಸಂಸ್ಕಾರ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಮಾನವ ಕುಲದ ಕಲ್ಯಾಣಕ್ಕಾಗಿ ಶ್ರಮಿಸುತ್ತಿವೆ. ಆದರೆ ಸಮಾಜದಲ್ಲಿ ಕೆಲವರು ಧರ್ಮದ ಹೆಸರಿನಲ್ಲಿ ಅಪಪ್ರಚಾರ ನಡೆಸುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
    ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಶ್ರೀ ಜ್ಞಾನಪ್ರಭು ಸಿದ್ದರಾಮ ರಾಜದೇಶೀಕೇಂದ್ರ ಸ್ವಾಮೀಜಿ, ಶ್ರೀ ವಿರೂಪಾಕ್ಷ ಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮಹಾಂತ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುದ್ದಲೀಶ್ವರ ಸ್ವಾಮೀಜಿ, ಡಾ. ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ,  ಶ್ರೀ ಚನ್ನವೀರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ. ಶ್ರೀ ಬಸವಜಯಚಂದ್ರ ಸ್ವಾಮೀಜಿ, ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಮತ್ತು ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಸ್ವಾಮೀಜಿ ಉಪಸ್ಥಿತರಿರುವರು.
    ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ ಕಾಂತೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ, ಹಿರೇಮಠದ ಗೌರವಾಧ್ಯಕ್ಷ ಟಿ.ವಿ ಈಶ್ವರಯ್ಯ, ಮನೋಹರ್ ಅಬ್ಲಿಗೆರೆ, ಸಿದ್ದಲಿಂಗಯ್ಯ, ಪಾಪಿಬಾಯಿ, ಬಿ.ಎಂ. ಸಂತೋಷ್, ಯಶವಂತರಾವ್ ಘೋರ್ಪಡೆ, ಎ. ಮಾಧು, ಬಿ.ಟಿ ನಾಗರಾಜ್, ಎಂ.ಎಸ್ ಜನಾರ್ಧನ ಅಯ್ಯಂಗಾರ್, ಎ.ಟಿ ರವಿ, ನಂದಿ ಮಲ್ಲಿಕಾರ್ಜುನ, ಡಾ.ಜಿ.ಎಂ ನಟರಾಜ್, ಪ್ರಶಾಂತ್, ಸಿದ್ದಬಸಪ್ಪ, ಎಂ.ಎಸ್ ಬಸವರಾಜ್, ವಸಂತ್, ಮಂಜುನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  



ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಜನ್ಮ ಸುವರ್ಣ ಮಹೋತ್ಸವ ಹಾಗು ಸುವರ್ಣ ಭವನ ಉದ್ಘಾಟನಾ ಸಮಾರಂಭದಲ್ಲಿ ೫೦ ವರ್ಷ ಪೂರೈಸಿದ ಬಿಳಿಕಿ ಶ್ರೀ ಹಾಗೂ ೭೦ ವರ್ಷ ಪೂರೈಸಿದ ಬೆಕ್ಕಿನಕಲ್ಮಠ ಶ್ರೀಗಳಿಗೆ ಭಕ್ತ ವೃಂದದಿಂದ ಗುರು ನಮನ ಸಲ್ಲಿಸಲಾಯಿತು.  

Saturday, August 28, 2021

ಆ.೩೦ರಂದು ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

ಭದ್ರಾವತಿ, ಆ. ೨೮: ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನಲೆಯಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಆ.೩೦ರಂದು ಪ್ರಾಣಿವಧೆ, ಮಾಂಸ ಮಾರಾಟ ಹಾಗು ಮಾಂಸಹಾರ ತಯಾರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕುರಿ, ಕೋಳಿ ಮತ್ತು ಇತರೆ ಮಾಂಸ ಮಾರಾಟಗಾರರು ಮಾಂಸ ಮಾರಾಟ ಮಾಡುವುದನ್ನು ಹಾಗು ಬಾರ್ & ರೆಸ್ಟೋರೆಂಟ್ ಮತ್ತು ಮಾಂಸಹಾರಿ ಹೋಟೆಲ್‌ಗಳಲ್ಲಿ ಮಾಂಸಹಾರ ತಯಾರಿಸುವುದನ್ನು ಸಹ ನಿಷೇಧಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ನಗರಸಭೆ ಪೌರಾಯುಕ್ತರು ಎಚ್ಚರಿಸಿದ್ದಾರೆ.

Friday, August 27, 2021

ಅಂತರ್ಜಾತಿ ವಿವಾಹ : 30ಕ್ಕೂ ಹೆಚ್ಚು ದಂಪತಿಗಳಿಗೆ ರಾಷ್ಟ್ರೀಯ ಉಳಿತಾಯ ಪತ್ರ ವಿತರಣೆ

ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದಡಿ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ 3 ವರ್ಷ ಅವಧಿಯ ನಿಶ್ಚಿತ ಠೇವಣಿಯ ರಾಷ್ಟ್ರೀಯ ಉಳಿತಾಯ ಪತ್ರವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಶುಕ್ರವಾರ ವಿತರಿಸಿದರು.
    ಭದ್ರಾವತಿ, ಆ. 27: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದಡಿ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ 3 ವರ್ಷ ಅವಧಿಯ ನಿಶ್ಚಿತ ಠೇವಣಿಯ ರಾಷ್ಟ್ರೀಯ ಉಳಿತಾಯ ಪತ್ರವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಶುಕ್ರವಾರ ವಿತರಿಸಿದರು.
    ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು 30ಕ್ಕೂ ಹೆಚ್ಚು ದಂಪತಿಗಳಿಗೆ ಉಳಿತಾಯ ಪತ್ರಗಳನ್ನು ವಿತರಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಸಿದ್ದಬಸಪ್ಪ, ಸಹಾಯಕ ನಿರ್ದೇಶಕ ಗ್ರೇಡ್-1 ಎಸ್. ಗೋಪಿನಾಥ್, ವಾರ್ಡ್‌ನ್ ಎಸ್.ವಿ ಶಶಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಛೇರಿಗಾಗಿ ಕಟ್ಟಡ ದಾನ

ಭದ್ರಾವತಿ ನಗರದ ಬಿ.ಎಚ್ ರಸ್ತೆಯಲ್ಲಿರುವ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಛೇರಿಗಾಗಿ ಜನ್ನಾಪುರ ನಿವಾಸಿ ಟಿ.ಆರ್ ಶ್ರೀಧರ್ ಎಂಬುವರು ಜಯಶ್ರೀ ಕಲ್ಯಾಣ ಮಂಟಪದ ಮುಂಭಾಗ ನೂತನವಾಗಿ ಕಟ್ಟಿಸಿರುವ ನಿವಾಸದ ಮೇಲ್ಭಾಗದ ಕಟ್ಟಡದಲ್ಲಿ ಶಾಶ್ವತವಾಗಿ ನೆಲೆಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಈ ಸಂಬಂಧ ದಾನ ಪತ್ರ ಹಸ್ತಾಂತರಿಸಿದರು.
    ಭದ್ರಾವತಿ, ಆ. ೨೭: ನಗರದ ಬಿ.ಎಚ್ ರಸ್ತೆಯಲ್ಲಿರುವ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಛೇರಿಗಾಗಿ ಜನ್ನಾಪುರ ನಿವಾಸಿ ಟಿ.ಆರ್ ಶ್ರೀಧರ್ ಎಂಬುವರು ಜಯಶ್ರೀ ಕಲ್ಯಾಣ ಮಂಟಪದ ಮುಂಭಾಗ ನೂತನವಾಗಿ ಕಟ್ಟಿಸಿರುವ ನಿವಾಸದ ಮೇಲ್ಭಾಗದ ಕಟ್ಟಡದಲ್ಲಿ ಶಾಶ್ವತವಾಗಿ ನೆಲೆಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
    ಈ ಸಂಬಂಧ ಸೊಸೈಟಿ ಆಡಳಿತ ಮಂಡಳಿಗೆ ದಾನಪತ್ರ ಸಹ ಬರೆದುಕೊಟ್ಟಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ದಾನ ಪತ್ರವನ್ನು ಸೊಸೈಟಿ ಅಧ್ಯಕ್ಷ ಜೆ.ಎನ್ ಆನಂದರಾವ್ ಸ್ವೀಕರಿಸಿದರು. ಸೆ.೧ರಿಂದ ನೂತನ ಕಟ್ಟಡದಲ್ಲಿ ಕಛೇರಿಯ ಕಾರ್ಯ ಚಟುವಟಿಕೆಗಳು ಆರಂಭಗೊಳ್ಳಲಿವೆ.
    ಉಪಾಧ್ಯಕ್ಷ ಕೇಶವಮೂರ್ತಿ, ನಿರ್ದೇಶಕರಾದ ಜಿ. ರಮಾಕಾಂತ, ಸಿ.ಕೆ ರಾಮರಾವ್, ತಾರಾಮಣಿ, ಶ್ವೇತ, ಕೆ. ಮಂಜುನಾಥ್, ಕೆ.ಎಸ್ ಸುಬ್ರಮಣ್ಯ, ಎಸ್.ಸಿ ನೀಲಕಂಠ ಜೋಯ್ಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆ.೨೮ರಂದು ವಿದ್ಯುತ್ ಸ್ಥಗಿತ


ಭದ್ರಾವತಿ, ಆ. ೨೭: ಮೆಸ್ಕಾಂ ಘಟಕ-೨ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.೨೮ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.
ಹೊಸಸೇತುವೆ ರಸ್ತೆ, ಸಿದ್ದಾರೂಢ ನಗರ, ಶಂಕರ ಮಠದ ರಸ್ತೆ, ಕನಕನಗರ, ಹಳೇನಗರ, ಕೋಟೆ ಏರಿಯಾ, ಖಾಜಿ ಮೊಹಲ್ಲಾ, ಕಂಚಿನಬಾಗಿಲು, ಕೆಎಸ್‌ಆರ್‌ಟಿಸಿ ಘಟಕದ ಸುತ್ತಮುತ್ತ, ಅಂಬೇಡ್ಕರ್ ನಗರ, ಹನುಮಂತ ನಗರ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ಧರ್ಮ ಜಾಗೃತಿ ಮೂಡಿಸುತ್ತಿರುವ ಬಿಳಿಕಿ ಶ್ರೀಗಳಿಗೆ ೫೦ರ ಸಂಭ್ರಮ

ಆ.೨೯ರಂದು ಜನ್ಮ ಸುವರ್ಣ ಮಹೋತ್ಸವ, ಸುವರ್ಣಭವನ ಉದ್ಘಾಟನೆ

ಬಿಳಿಕಿ ಶ್ರೀಗಳು ಮತ್ತು ಸುವರ್ಣ ಮಹೋತ್ಸವ ಭವನ
* ಅನಂತಕುಮಾರ್
    ಭದ್ರಾವತಿ: 'ಮಾನವ ಜನ್ಮ ಶ್ರೇಷ್ಠ, ಮಾನವ ಕುಲಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ' ಎಂಬ ಧ್ಯೇಯ ಘೋಷ ಹೊಂದುವ ಮೂಲಕ ಮಲೆನಾಡಿನಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿರುವ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದಿಂದ ತಾಲೂಕಿನ ಬಿಳಿಕಿ ಗ್ರಾಮದಲ್ಲಿ ಸ್ಥಾಪಿಸಲ್ಪಟ್ಟ ಶಾಖಾ ಹಿರೇಮಠ ಇಂದು ಬೃಹತ್ ಧಾರ್ಮಿಕ ಕೇಂದ್ರವಾಗಿ ರೂಪುಗೊಂಡಿದೆ.    
    ನಗರ ಪ್ರದೇಶದಿಂದ ಸುಮಾರು ೧೦ ಕಿ.ಮೀ ದೂರದಲ್ಲಿರುವ ಬಿಳಿಕಿ ಇನ್ನೂ ಗ್ರಾಮೀಣ ಪರಿಸರದಿಂದ ಮುಕ್ತವಾಗಿಲ್ಲ. ಈ ಕಾರಣದಿಂದಲೇ ಬಿಳಿಕಿ ಗ್ರಾಮದಲ್ಲಿರುವ ಹಿರೇಮಠ ತನ್ನ ಸೌಂದರ್ಯವನ್ನು ರಕ್ಷಿಸಿಕೊಂಡಿದೆ. ಜನದಟ್ಟಣೆ ಇಲ್ಲ. ವಾಹನಗಳ ಕಿರಿಕಿರಿ ಇಲ್ಲ. ಕಸದ ರಾಶಿ ಇಲ್ಲ. ಸ್ವಚ್ಛ ಗ್ರಾಮ, ಆರೋಗ್ಯ ಗ್ರಾಮ ಎಂಬ ಮಹಾತ್ಮ ಗಾಂಧಿಯವರ ಮಾತು ಬಿಳಿಕಿ ಗ್ರಾಮಸ್ಥರು ನಿಜವಾಗಿಸಿದ್ದಾರೆ. ಪಾನ ಮುಕ್ತ ಗ್ರಾಮ ಸಹ ಇದಾಗಿದೆ.
    ಪೀಠಾಧ್ಯಕ್ಷರಾಗಿ ಕಳೆದ ೩ ದಶಕಗಳಿಂದ ಹಿರೇಮಠದ ಬೆಳವಣಿಗೆಗೆ ಶಕ್ತಿ ಮೀರಿ ಶ್ರಮಿಸುತ್ತಿರುವ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳಿಗೆ ಇದೀಗ ೫೦ರ ಸಂಭ್ರಮ. ಬಾಲ್ಯದಿಂದಲೇ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಧರ್ಮ ಮಾರ್ಗದಲ್ಲಿ ಸಾಗಿ ಬಂದಿರುವ ಶ್ರೀಗಳು ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಸಹ ಮೈಗೂಡಿಸಿಕೊಂಡಿದ್ದಾರೆ.
        ಶ್ರೀಗಳ ಪ್ರಾಥಮಿಕ ಶಿಕ್ಷಣ :
    ಹಿರೇಮಠದ ಪೂರ್ವಾಶ್ರಮದ ಶ್ರೀಮತಿ ನಾಗಮ್ಮ ಮತ್ತು ವೇ|| ಮುರುಗೇಂದ್ರಯ್ಯನವರ ಸುಪುತ್ರರಾಗಿ ಜನಿಸಿ, ತಮ್ಮ ಬಾಲ್ಯದ ಅಧ್ಯಯನವನ್ನು ಬಿಳಿಕಿ ಮತ್ತು ಕಡದಕಟ್ಟೆ ಗ್ರಾಮಗಳಲ್ಲಿ ಪೂರೈಸಿ ನಂತರ ಸಾಲೂರು ಹಿರೇಮಠದ ಲಿಂ|| ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ವೈದಿಕ, ಜ್ಯೋತಿಷ್ಯ, ಆಗಮ ಶಾಸ್ತ್ರಗಳಲ್ಲಿ ಪರಿಣಿತರಾದರು. ಶ್ರೀ ಜಗದ್ಗುರು ಶ್ರೀ ಪಂಚಪೀಠಾಧೀಶ್ವರರ ಸಾನಿಧ್ಯದಲ್ಲಿ ೧೯೯೦ ಫೆಬ್ರವರಿ ೨ ರಂದು ಶ್ರೀ ಮಠದ ಪಟ್ಟಾಧಿಕಾರ ಸ್ವೀಕರಿಸಿದರು.
    ಹಿರೇಮಠಕ್ಕೆ ಶ್ರೀಗಳ ಸೇವೆ :
    ಹಿರೇಮಠಕ್ಕೆ ಯಾವುದೇ ಮೂಲ ಆದಾಯಗಳು ಇಲ್ಲದಿದ್ದರೂ ಸಹ ಭಕ್ತರ ದೇಣಿಗೆ ನೆರವಿನಿಂದ ಎಲ್ಲರ ಸಹಕಾರ ದೊಂದಿಗೆ ಶಿಥಿಲಾವಸ್ಥೆಯಲ್ಲಿದ್ದ ಮಠವನ್ನು ಶ್ರೀಗಳು ತಮ್ಮ ದ್ವಾದಶ ಪಟ್ಟಾಧಿಕಾರದ ಸಂದರ್ಭದಲ್ಲಿ ನವೀಕರಣಗೊಳಿಸಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಮತ್ತು ಶ್ರೀ ಗುರು ನಿವಾಸವನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಗೊಳಿಸಿದ್ದಾರೆ. ೦೨-೦೨-೨೦೧೫ರಲ್ಲಿ ತಮ್ಮ ೨೫ನೇ ವರ್ಷದ ಪಟ್ಟಾಧಿಕಾರದ ಸಂಭ್ರಮಾಚರಣೆ ಸಂದರ್ಭದಲ್ಲಿ ಶ್ರೀ ಗುರು ಸಿದ್ದೇಶ್ವರ ಪ್ರಸಾದ ನಿಲಯವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಇದೀಗ ಜನ್ಮ ಸುವರ್ಣ ಮಹೋತ್ಸವದಂದು ಸುವರ್ಣ ಭವನ ಲೋಕಾರ್ಪಣೆಗೆ ಮುಂದಾಗಿದ್ದಾರೆ.
       ಆ.೨೯ರಂದು ಜನ್ಮ ಸುವರ್ಣ ಮಹೋತ್ಸವ, ಸುವರ್ಣ ಭವನ ಉದ್ಘಾಟನೆ:
    ಹಿರೇಮಠದ ಆವರಣದಲ್ಲಿ ಆ.೨೯ರಂದು ಬೆಳಿಗ್ಗೆ ೧೧.೩೦ಕ್ಕೆ ಜನ್ಮ ಸುವರ್ಣ ಮಹೋತ್ಸವ ಹಾಗು ಸುವರ್ಣ ಭವನದ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಶಿವಮೊಗ್ಗ ಆನಂದಪುರ ಶ್ರೀ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಬಾಳೆಹೊನ್ನೂರು ಖಾಸಾ ಶಾಖಾಮಠ, ಎಡೆಯೂರು, ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಅರಸೀಕೆರೆ ಯಳ್ನಾಡು ಸಂಸ್ಥಾನಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ರಾಜದೇಶೀಕೇಂದ್ರ ಸ್ವಾಮೀಜಿ, ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷ ಲಿಂಗ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಮಳೆಮಠದ ಶ್ರೀ ಮಹಾಂತ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ರಟ್ಟೇಹಳ್ಳಿ ಕಬ್ಬಿಣ ಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಬಂಕಾಪುರ ಸದಾಶಿವಪೇಟೆ, ವಿರಕ್ತಮಠದ ಶ್ರೀ ಗುದ್ದಲೀಶ್ವರ ಸ್ವಾಮೀಜಿ, ಜಡೆ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಹುಣಸಘಟ್ಟ ಹಾಲಸ್ವಾಮಿಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಶಂಕರದೇವರಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೆ. ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಕವಲೇದುರ್ಗ ಮಠದ ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಡಾ. ಶ್ರೀ ಬಸವಜಯಚಂದ್ರ ಸ್ವಾಮೀಜಿ, ಮೇಟಿಕುರ್ಕೆ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಮತ್ತು ಹಣ್ಣೆ ಹಿರೇಮಠದ ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಸ್ವಾಮೀಜಿ ಉಪಸ್ಥಿತರಿರುವರು.
    ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್‌ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಸಮಾರಂಭ ಉದ್ಘಾಟಿಸಲಿದ್ದು, ಸಂಸದ ಬಿ.ವೈ ರಾಘವೇಂದ್ರ ಸುವರ್ಣ ಭವನ ಉದ್ಘಾಟಿಸುವರು. ಗೃಹ ಸಚಿವ ಅರಗಜ್ಞಾನೇಂದ್ರ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸುವರು. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಎಸ್ ಜ್ಯೋತಿ ಪ್ರಕಾಶ್ ಮತ್ತು ಹಿರೇಮಠದ ಗೌರವಾಧ್ಯಕ್ಷ ಟಿ.ವಿ ಈಶ್ವರಯ್ಯ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Thursday, August 26, 2021

ವಾರ್ಡ್ ನಂ.೨೯ ಚುನಾವಣೆ : ಅಂತಿಮ ಕಣದಲ್ಲಿ ೩ ಅಭ್ಯರ್ಥಿಗಳು

  

ಬಿ.ಜಿ ಲೋಯಿತಾ ನಂಜಪ್ಪ-ಕಾಂಗ್ರೆಸ್ ಅಭ್ಯರ್ಥಿ

    ಭದ್ರಾವತಿ, ಆ. ೨೬: ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ರಂಗೇರಿದ್ದು, ಅಂತಿಮ ಕಣದಲ್ಲಿ ೩ ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
    ಚುನಾವಣೆ ಸ್ಪರ್ಧಿಸಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಗುರುವಾರ ಯಾರು ಸಹ ನಾಮಪತ್ರ ಹಿಂಪಡೆಯದ ಕಾರಣ ಅಂತಿಮ ಕಣದಲ್ಲಿ ೩ ಮಂದಿ ಉಳಿದುಕೊಂಡಿದ್ದಾರೆ.
    


ಆರ್. ನಾಗರತ್ನ ಅನಿಲ್‌ಕುಮಾರ್-ಜೆಡಿಎಸ್ ಅಭ್ಯರ್ಥಿ
    ಕಾಂಗ್ರೆಸ್ ಪಕ್ಷದಿಂದ ನ್ಯಾಯವಾದಿ ಬಿ.ಜಿ ಲೋಯಿತಾ ನಂಜಪ್ಪ, ಜೆಡಿಎಸ್ ಪಕ್ಷದಿಂದ ಹಾಲಿ ಸದಸ್ಯ ಅನಿಲ್‌ಕುಮಾರ್ ಅವರ ಪತ್ನಿ ಆರ್. ನಾಗರತ್ನ ಹಾಗು ಬಿಜೆಪಿ ಪಕ್ಷದಿಂದ ಹಲವು ಸಮಾಜಮುಖಿ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ರಮಾವೆಂಕಟೇಶ್ ಸ್ಪರ್ಧಿಸಿದ್ದಾರೆ.
       ವಾರ್ಡ್ ನಂ.೨೯ರ ಪರಿಚಯ:
    ಹೆಚ್ಚಿನ ಪ್ರಮಾಣದಲ್ಲಿ ಶ್ರೀಮಂತ ವರ್ಗದವರು ವಾಸಿಸುತ್ತಿರುವ ಈ ವಾರ್ಡ್ ಜನ್ನಾಪುರ ಭಾಗದಲ್ಲಿದ್ದು, ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್), ರಾಜಪ್ಪ ಬಡಾವಣೆ ಹಾಗು ಸಿದ್ದಾಪುರ ಎನ್‌ಟಿಬಿ ಬಡಾವಣೆಯನ್ನು ಈ ವಾರ್ಡ್ ಒಳಗೊಂಡಿದೆ. ಮೂಲ ನಿವಾಸಿಗಳು ಕಡಿಮೆ ಸಂಖ್ಯೆಯಲ್ಲಿದ್ದು, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ೧೬೮೬ ಪುರುಷ ಹಾಗು ೧೬೮೮ ಮಹಿಳಾ ಮತದಾರರು ಸೇರಿ ಒಟ್ಟು ೩೩೭೪ ಮತದಾರನ್ನು ಒಳಗೊಂಡಿದೆ.



ರಮಾ ವೆಂಕಟೇಶ್-ಬಿಜೆಪಿ ಅಭ್ಯರ್ಥಿ    
    ಸೆ.೩ರಂದು ಮತದಾನ ನಡೆಯಲಿದ್ದು, ಸೆ.೬ರಂದು ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಈಗಾಗಲೇ ಒಟ್ಟು ೩೫ ವಾರ್ಡ್‌ಗಳ ಪೈಕಿ ೧ ಪಕ್ಷೇತರ, ೧೮ ಕಾಂಗ್ರೆಸ್, ೧೧ ಜೆಡಿಎಸ್ ಮತ್ತು ೪ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಮೂಲಸೌಕರ್ಯಕ್ಕೆ ಆಗ್ರಹಿಸಿ ಪಂಚಾಯಿತಿ ಮುಂಭಾಗ ಪ್ರತಿಭಟನೆ

ಭದ್ರಾವತಿ ತಾಲೂಕಿನ ಕಂಬದಾಳ್-ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಕೆ ಸಂಗಮೇಶ್ವರ್ ಬಡಾವಣೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಗುರುವಾರ ಬಡಾವಣೆ ನಿವಾಸಿಗಳುಪ್ರತಿಭಟನೆ ನಡೆಸಿದರು.
    ಭದ್ರಾವತಿ, ಆ. ೨೬:  ತಾಲೂಕಿನ ಕಂಬದಾಳ್-ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಕೆ ಸಂಗಮೇಶ್ವರ್ ಬಡಾವಣೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಗುರುವಾರ ಬಡಾವಣೆ ನಿವಾಸಿಗಳುಪ್ರತಿಭಟನೆ ನಡೆಸಿದರು.
      ಸ್ಥಳೀಯ ಮುಖಂಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷಪ್ಪ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಬಡಾವಣೆ ಅಸ್ತಿತ್ವಕ್ಕೆ ಬಂದು ಸುಮಾರು ೩ ವರ್ಷಗಳು ಕಳೆದಿದ್ದು, ಇದುರವೆಗೂ ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿರುವುದಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಲಾಯಿತು.  
    ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲತಾ ಅವರಿಗೆ ಮನವಿ ಸಲ್ಲಿಸಲಾಯಿತು.

ಅಕ್ರಮ ಗಾಂಜಾ ಸಾಗಾಟ : ೩ ಯುವಕರ ಸೆರೆ

ಅಕ್ರಮವಾಗಿ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ೩ ಯುವಕರನ್ನು ಬಂಧಿಸುವಲ್ಲಿ ಭದ್ರಾವತಿನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ಗುರುವಾರನಡೆದಿದೆ.
    ಭದ್ರಾವತಿ, ಆ. ೨೬: ಅಕ್ರಮವಾಗಿ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ೩ ಯುವಕರನ್ನು  ಬಂಧಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ಗುರುವಾರನಡೆದಿದೆ.
    ಕೂಲಿಬ್ಲಾಕ್ ಶೆಡ್ ನಿವಾಸಿಗಳಾದ ಡ್ಯಾನಿಯಲ್ ಅಲಿಯಾಸ್ ಡ್ಯಾನಿ(೨೨), ಆದಿಲ್ ಬಾಷಾ(೨೬) ಮತ್ತು ನ್ಯೂಕಾಲೋನಿ ನಿವಾಸಿ ಚರಣ ಅಲಿಯಾಸ್ ಕುರಚರಣರಾಜ್ ಯಾದವ್ ಅವರನ್ನು ಬಂಧಿಸಲಾಗಿದೆ.
    ಬಂಧಿತ ಯುವಕರಿಂದ ಒಟ್ಟು ೧.೩೦ ಲಕ್ಷ ರು. ಮೌಲ್ಯ ೧೧ ಕೆ.ಜಿ ೪೪೦ ಗ್ರಾಂ ತೂಕದ ಗಾಂಜಾ ಹಾಗು ಕೃತ್ಯಕ್ಕೆ ಬಳಸಿದ ಸುಮಾರು ೧.೫೦ ಲಕ್ಷ ರು. ಮೌಲ್ಯದ ಕಾರನ್ನು ವಶಕ್ಕೆ ಪಡೆಯಲಾಗಿದ್ದು, ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಕಾಗದನಗರದಿಂದ ನ್ಯೂಟೌನ್ ವ್ಯಾಪ್ತಿಯ ಕಡೆಗೆ ೪ ಜನ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸ್ ಉಪಾಧೀಕ್ಷಕ ಸಾಹಿಲ್ ಬಾಗ್ಲಾ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
    ಸಿಬ್ಬಂದಿಗಳಾದ ವೆಂಕಟೇಶ್, ಮಂಜುನಾಥ್, ಅಶೋಕ್, ಸುನಿಲ್‌ಕುಮಾರ್, ಎಚ್. ಪಾಲಕ್ಷನಾಯ್ಕ, ಮಲ್ಲಿಕಾರ್ಜುನ ಮತ್ತು ಕುಮಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
    ಜಿಲ್ಲಾ ರಕ್ಷಣಾಧಿಕಾರಿಗಳು ಹಾಗು ಹೆಚ್ಚುವರಿ ರಕ್ಷಣಾಧಿಕಾರಿಗಳು ಕಾರ್ಯಾಚರಣೆ ನಡೆಸಿರುವ ತಂಡವನ್ನು ಅಭಿನಂದಿಸಿದ್ದಾರೆ.

ಎನ್‌ಎಂಪಿ ಯೋಜನೆಯಡಿ ದೇಶದ ಆಸ್ತಿ ಮಾರಾಟ : ಕೇಂದ್ರ ಸರ್ಕಾರದ ವಿರುದ್ಧ ರೈಲ್ವೆ ತಡೆ ಚಳುವಳಿ

ತಕ್ಷಣ ಕೇಂದ್ರ ಸರ್ಕಾರ ವಜಾ ಮಾಡಿ, ನಗರ, ಗ್ರಾಮಾಂತರ ಯುವ ಕಾಂಗ್ರೆಸ್ ಆಗ್ರಹ


ರಾಷ್ಟ್ರೀಯ ಹಣಗಳಿಕೆ ನೀತಿ(ಎನ್‌ಎಂಪಿ) ಯೋಜನೆಯಡಿ ದೇಶದ ೬ ಲಕ್ಷ ಕೋಟಿ ಸಾರ್ವಜನಿಕ ಆಸ್ತಿಯನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಗುರುವಾರ ನಗರದ ರೈಲ್ವೆ ನಿಲ್ದಾಣ ಮುಂಭಾಗ  ತಾಲೂಕು ನಗರ ಮತ್ತು ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ  ರೈಲ್ವೆ ತಡೆ ಚಳುವಳಿ ನಡೆಸಲಾಯಿತು.  
    ಭದ್ರಾವತಿ, ಆ. ೨೬: ರಾಷ್ಟ್ರೀಯ ಹಣಗಳಿಕೆ ನೀತಿ(ಎನ್‌ಎಂಪಿ) ಯೋಜನೆಯಡಿ ದೇಶದ ೬ ಲಕ್ಷ ಕೋಟಿ ಸಾರ್ವಜನಿಕ ಆಸ್ತಿಯನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಗುರುವಾರ ನಗರದ ರೈಲ್ವೆ ನಿಲ್ದಾಣ ಮುಂಭಾಗ  ತಾಲೂಕು ನಗರ ಮತ್ತು ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ  ರೈಲ್ವೆ ತಡೆ ಚಳುವಳಿ ನಡೆಸಲಾಯಿತು.  
    ದೇಶಕ್ಕೆ ಉಜ್ವಲ ಭವಿಷ್ಯ ಕಲ್ಪಿಸಿಕೊಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಸಾರ್ವಜನಿಕ ವಲಯದ ಆಸ್ತಿಗಳನ್ನು ರಾಷ್ಟ್ರೀಯ ಹಣಗಳಿಕೆಯ ನೀತಿಯಡಿ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ  ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಲಾಯಿತು.
    ಈಗಾಗಲೇ ಎನ್‌ಎಂಪಿ ಯೋಜನೆಯಡಿಯಲ್ಲಿ ಸುಮಾರು ೨೬,೭೦೦ ರಾಷ್ಟ್ರೀಯ ಹೆದ್ದಾರಿಗಳನ್ನು, ೧೫೦ ರೈಲುಗಳನ್ನು, ೪೦೦ ರೈಲ್ವೆ  ನಿಲ್ದಾಣಗಳನ್ನು, ೨೫ ವಿಮಾನ ನಿಲ್ದಾಣಗಳನ್ನು, ೯ ಬಂದರುಗಳನ್ನು, ೨ ರಾಷ್ಟ್ರೀಯ ಕ್ರೀಡಾಂಗಣಗಳು, ವಿದ್ಯುತ್ ಘಟಕಗಳು, ಟೆಲಿಕಾಂ ನೆಟ್‌ವರ್ಕ್‌ಗಳನ್ನು ಹೀಗೆ ೧೩ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಜನರನ್ನು ಖಾಸಗಿ ಕಂಪನಿಗಳ ಗುಲಾಮರನ್ನಾಗಿ ಮಾಡಲು ಹೊರಟಿರುವುದು ಕೇಂದ್ರದ ಬಿಜೆಪಿ ಸರ್ಕಾರದ ಸರ್ವಾಧಿಕಾರಿ, ಜನವಿರೋಧಿ ನೀತಿ ಎದ್ದು ಕಾಣುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ರಾಷ್ಟ್ರಪತಿಗಳು ತಕ್ಷಣ ದೇಶದ ಸಾರ್ವಜನಿಕ ಆಸ್ತಿಗಳನ್ನು ಮಾಡುವಂತಹ ದೇಶವಿರೋಧಿ ಯೋಜನೆಗಳಿಗೆ ಕಡಿವಾಣ ಹಾಕಿ ಖಾಸಗಿ ಕಂಪನಿಗಳ ಪರವಾಗಿರುವ ಹಾಗು ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.
    ಯುವ ಕಾಂಗ್ರೆಸ್ ನಗರ ಅಧ್ಯಕ್ಷ  ಜಿ.ವಿನೋದ್ ಕುಮಾರ್ ಮತ್ತು ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಮಹಮದ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ನಗರ ಉಪಾಧ್ಯಕ್ಷ ತೇಜಸ್ ಗೌಡ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ಗಂಗಾಧರ್, ಐಸಾಕ್, ಶಂಕರ್, ವಾಸಿಂ, ಲಿಯಾಂದರ್, ಜಾವಿದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಆ.೨೮ರಂದು ಶ್ರಾವಣ ಸಂಭ್ರಮ ಕವಿಗೋಷ್ಠಿ

ಭದ್ರಾವತಿ, ಆ. ೨೬: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಶಿವಮೊಗ್ಗ ತಾಲೂಕು ಶಾಖೆ ವತಿಯಿಂದ ಆ.೨೮ರಂದು ಮಧ್ಯಾಹ್ನ ೩.೩೦ಕ್ಕೆ ಕಾಗದನಗರದ ವನಿತಾ ಸಮಾಜದಲ್ಲಿ ಶ್ರಾವಣ ಸಂಭ್ರಮ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
    ಕರ್ನಾಟಕ ಸಾಹಿತ್ಯ ಆಕಾಡೆಮಿ  ಸದಸ್ಯೆ ದೀಪ್ತಿಶ್ರೀಹರ್ಷ ಉದ್ಘಾಟಿಸಲಿದ್ದು, ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್, ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಎಚ್. ತಿಮ್ಮಪ್ಪ, ಬಿ. ಮಂಜಪ್ಪ, ಎಂ.ಆರ್ ಮಂಜುನಾಥ್, ಬಿ. ಗುರು, ಕೋಡ್ಲುಯಜ್ಞಯ್ಯ ಮತ್ತು ಕಮಲಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ವೇದಿಕೆ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
    ಕವಿಗಳಾದ ಪಿ.ಕೆ ಸತೀಶ್, ಉಮ್ಮರ್ ಕೋಯಾ, ಪೀಟರ್, ಮಾಯಮ್ಮ, ಎಚ್.ಆರ್ ಸುಧಾ, ನಿಹಾರಿಕ, ಎನ್.ಎಸ್ ಸುಬ್ರಮಣ್ಯ, ಸಿ. ಚೈತ್ರ, ಗುಣ, ಸಿದ್ದೋಜಿರಾವ್, ನರೇಂದ್ರ ಘೋರ್ಪಡೆ, ಪುಟ್ಟರಾಜು, ಎಂ. ಹನುಮಂತಪ್ಪ, ಸೂಫಿಯ ತಬಸ್ಸುಂ, ಬಿ.ಕೆ ನಿತಿನ್, ಜ್ಞಾನೇಶ್, ಶ್ರೀಧರೇಶ್ ಭಾರದ್ವಾಜ್ ಮತ್ತು ಲಕ್ಷ್ಮಿ ಭಾಗವಹಿಸಲಿದ್ದಾರೆ.

ಶಾಸಕ ಬಿ.ಕೆ ಸಂಗಮೇಶ್ವರ್ ಮೊಮ್ಮಗನ ಮೊದಲನೇ ವರ್ಷದ ಹುಟ್ಟುಹಬ್ಬ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರ ೨ನೇ ಪುತ್ರ ಬಸವೇಶ್ ಅವರ ಪುತ್ರನ ಮೊದಲನೇ ವರ್ಷದ ಹುಟ್ಟುಹಬ್ಬ ತಾಲೂಕಿನ ತಮ್ಮಡಿಹಳ್ಳಿ ಶ್ರೀಗಂಧ ಫಾರಂ ಹೌಸ್‌ನಲ್ಲಿ ಬುಧವಾರ ಅದ್ದೂರಿಯಾಗಿ ಜರುಗಿತು.
    ಭದ್ರಾವತಿ, ಆ. ೨೬: ಶಾಸಕ ಬಿ.ಕೆ ಸಂಗಮೇಶ್ವರ್ ಅವರ ೨ನೇ ಪುತ್ರ ಬಸವೇಶ್ ಅವರ ಪುತ್ರನ ಮೊದಲನೇ ವರ್ಷದ ಹುಟ್ಟುಹಬ್ಬ ತಾಲೂಕಿನ ತಮ್ಮಡಿಹಳ್ಳಿ ಶ್ರೀಗಂಧ ಫಾರಂ ಹೌಸ್‌ನಲ್ಲಿ ಬುಧವಾರ ಅದ್ದೂರಿಯಾಗಿ ಜರುಗಿತು.
    ಕೋವಿಡ್-೧೯ರ ಹಿನ್ನಲೆಯಲ್ಲಿ ನಗರ ಪ್ರದೇಶದಿಂದ ಹೊರವಲಯದಲ್ಲಿ ಮೊಮ್ಮಗನ ಹುಟ್ಟುಹಬ್ಬ ಆಚರಣೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಕೈಗೊಂಡಿದ್ದರು. ಹುಟ್ಟುಹಬ್ಬಕ್ಕೆ ನಿರೀಕ್ಷೆಗೂ ಹೆಚ್ಚಿನ ಜನರು ಆಗಮಿಸಿ ಮೊಮ್ಮಗನಿಗೆ ಶುಭ ಕೋರಿದರು.
    ಕಾರ್ಯಕರ್ತರು, ಅಭಿಮಾನಿಗಳು, ಕುಟುಂಬ ವರ್ಗದವರು ಮಾತ್ರವಲ್ಲದೆ. ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಹ ಪಾಲ್ಗೊಂಡಿದ್ದರು.

ಅಶೋಕ್‌ರಾವ್ ವಾಗ್ಮೋಡೆ ನಿಧನ

ಅಶೋಕ್‌ರಾವ್ ವಾಗ್ಮೋಡೆ
    ಭದ್ರಾವತಿ, ಆ. ೨೬: ಎಂಪಿಎಂ ಕಾರ್ಖಾನೆಯ ಗುತ್ತಿಗೆದಾರ, ಮರಾಠ ಸಮಾಜದ ಮುಖಂಡರಾದ ಅಶೋಕ್‌ರಾವ್ ವಾಗ್ಮೋಡೆ(೬೦) ನಿಧನ ಹೊಂದಿದರು.
    ಮೃತರು ವಿಐಎಸ್‌ಎಲ್ ಆಸ್ಪತ್ರೆ ಮುಂಭಾಗದಲ್ಲಿರುವ ಸುನಿಲ್ ಮೆಡಿಕಲ್ ಸ್ಟೋರ್ ಮಾಲೀಕ ಸುನಿಲ್ ಅವರ ತಂದೆಯಾಗಿದ್ದು, ಪತ್ನಿ ಮತ್ತು ಪುತ್ರ ಸುನಿಲ್ ಹಾಗು ಸೊಸೆ, ಮೊಮಕ್ಕಳನ್ನು ಹೊಂದಿದ್ದರು. ಮೃತರ ನಿಧನಕ್ಕೆ ಮರಾಠ ಸಮಾಜದ ಪ್ರಮುಖರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Wednesday, August 25, 2021

೩ ದಿನಗಳ ಕಾಲ ಅದ್ದೂರಿಯಾಗಿ ಜರುಗಿದ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೦ನೇ ಆರಾಧನಾ ಮಹೋತ್ಸವ – Prathikshana

೩ ದಿನಗಳ ಕಾಲ ಅದ್ದೂರಿಯಾಗಿ ಜರುಗಿದ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೦ನೇ ಆರಾಧನಾ ಮಹೋತ್ಸವ – Prathikshana

೩ ದಿನಗಳ ಕಾಲ ಅದ್ದೂರಿಯಾಗಿ ಜರುಗಿದ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೦ನೇ ಆರಾಧನಾ ಮಹೋತ್ಸವ

ಭದ್ರಾವತಿ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ೩೫೦ ಆರಾಧನಾ ಮಹೋತ್ಸವದ ೩ ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು.
    ಭದ್ರಾವತಿ, ಆ. ೨೫ : ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ೩೫೦ ಆರಾಧನಾ ಮಹೋತ್ಸವದ ೩ ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು.
    ಬುಧವಾರ ಬೆಳಗ್ಗೆ ರಾಯರ ಬೃಂದಾವನಕ್ಕೆ ಹಾಲಿನ ಅಭಿಷೇಕ, ಹೂವಿನ ಅಲಂಕಾರ ಮತ್ತು ಪ್ರಾಕಾರದಲ್ಲಿ ರಾಜಬೀದಿ ಉತ್ಸವ ನಡೆಯಿತು. ಮಧ್ಯಾಹ್ನ ೧೨ ಗಂಟೆಗೆ ತೀರ್ಥಪ್ರಸಾದ ವಿನಿಯೋಗ, ಮಹಾಮಂಗಳಾರತಿ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.
    ಸಂಜೆ ಹರಿಪ್ರಿಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಮತ್ತು ಶ್ರೀಕೃಷ್ಣ ಚಂಡೆ ಬಳಗದಿಂದ ಉತ್ಸವ ಹಾಗೂ ಕರಾವಳಿ ವಿಪ್ರ ಬಳಗದಿಂದ ನೃತ್ಯ ಕಾರ್ಯಕ್ರಮ ನಡೆಯಿತು.
    ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳೀಧರ ತಂತ್ರಿ, ಉಪಾಧ್ಯಕ್ಷೆ ಸುಮಾ ರಾಘವೇಂದ್ರ,  ಪ್ರಧಾನ ಕಾರ್ಯದರ್ಶಿ ರಮಾಕಾಂತ್, ನಿರಂಜನ ಆಚಾರ್,  ಪವನ್‌ಕುಮಾರ್ ಉಡುಪ, ಪ್ರಮೋದ್ ಹಾಗೂ ಪ್ರಧಾನ ಅರ್ಚಕ ಸತ್ಯನಾರಾಯಣ, ಗೋಪಾಲಚಾರಿ, ಶ್ರೀನಿವಾಸ, ಸಹಾಯಕ ಅರ್ಚಕ ಮಾಧುರಾವ್, ಶ್ರೀಪತಿ, ಮಧು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, August 24, 2021

ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಕರಾವೇ ಮಹಿಳಾ ಘಟಕ ಪ್ರತಿಭಟನೆ : ಗೃಹ ಸಚಿವರಿಗೆ ಮನವಿ

ಭದ್ರಾವತಿ ಡೈರಿ ಸರ್ಕಲ್‌ನಲ್ಲಿ ಹೆದ್ದಾರಿ ಪಕ್ಕದಲ್ಲಿರುವ ೨ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಆ. ೨೪: ಡೈರಿ ಸರ್ಕಲ್‌ನಲ್ಲಿ ಹೆದ್ದಾರಿ ಪಕ್ಕದಲ್ಲಿರುವ ೨ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಗೃಹ ಸಚಿವ ಅರಗಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
    ಗೃಹ ಸಚಿವ ಅರಗಜ್ಞಾನೇಂದ್ರ ಅವರು ಮಂಗಳವಾರ ಕೆಎಸ್‌ಆರ್‌ಪಿ ೮ನೇ ಪಡೆಗೆ ಆಗಮಿಸಿದ ಸಂದರ್ಭದಲ್ಲಿ ಕರಾವೇ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಎರಡು ಮದ್ಯದಂಗಡಿಗಳನ್ನು ತಕ್ಷಣ ಬೇರೆಡೆಗೆ ಸ್ಥಳಾಂತರಿಸುವ ಜೊತೆಗೆ ವಿದ್ಯಾರ್ಥಿಗಳು, ಮಹಿಳೆಯರು, ಪ್ರಯಾಣಿಕರು ಹಾಗು ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಬೇಕೆಂದು ಆಗ್ರಹಿಸಲಾಯಿತು. ಮನವಿ ಸ್ವೀಕರಿಸಿದ ಸಚಿವರು ತಕ್ಷಣ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.  
    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರದ, ತಾಲೂಕು ಅಧ್ಯಕ್ಷೆ ಮಹೇಶ್ವರಿ, ಯಾಸ್ಮಿನ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಾರ್ವಜನಿಕವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿ

ರಾಮ್ ಸೇನಾ ಕರ್ನಾಟಕ ತಾಲೂಕು ಶಾಖೆ ವತಿಯಿಂದ ಭದ್ರಾವತಿಯಲ್ಲಿ ಈ ಬಾರಿ ಸಾರ್ವಜನಿಕವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಮಂಗಳವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಆ. ೨೪: ಕೋವಿಡ್-೧೯ ಪರಿಮಿತಿಯಲ್ಲಿ ಈ ಬಾರಿ ವಿನಾಯಕ ಚತುರ್ಥಿಯಂದು ಸಾರ್ವಜನಿಕವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಮಂಗಳವಾರ ರಾಮ್ ಸೇನಾ ಕರ್ನಾಟಕ ತಾಲೂಕು ಶಾಖೆವತಿಯಿಂದ ತಹಸೀಲ್ದಾರ್ ಆರ್. ಪ್ರದೀಪ್‌ಗೆ ಮನವಿ ಸಲ್ಲಿಸಲಾಯಿತು.
    ರಾಮ್ ಸೇನಾ ಕರ್ನಾಟಕ ಜಿಲ್ಲಾಧ್ಯಕ್ಷ ಉಮೇಶ್‌ಗೌಡ, ತಾಲೂಕು ಅಧ್ಯಕ್ಷ ಸಚಿನ್ ಎಂ. ವರ್ಣೇಕರ್, ಪ್ರವೀಣ್‌ಶೆಟ್ಟಿ, ಪವನ್, ಮಹೇಶ್ ಶೇಟ್, ಪ್ರತೀಕ್ ಜಿ ಶೇಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಔರದ್ಕರ್ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಗೃಹ ಸಚಿವರಿಗೆ ಮನವಿ

ರಾಜ್ಯದಲ್ಲಿ ಔರದ್ಕರ್ ವರದಿಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿ ನಿವಾಸಿ ಜನತಾದಳ (ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಮಂಗಳವಾರ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಗೃಹ ಸಚಿವ ಅರಗಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ.
    ಭದ್ರಾವತಿ, ಆ. ೨೪: ರಾಜ್ಯದಲ್ಲಿ ಔರದ್ಕರ್ ವರದಿಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜನತಾದಳ (ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಮಂಗಳವಾರ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಗೃಹ ಸಚಿವ ಅರಗಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ.
    ಅಕ್ಕಪಕ್ಕದ ರಾಜ್ಯಗಳಲ್ಲಿ ಪೊಲೀಸರಿಗೆ ಹೆಚ್ಚಿನ ವೇತನ, ಭತ್ಯೆ ಜೊತೆಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ರಾಜ್ಯದಲ್ಲೂ ಇದೆ ಮಾದರಿಯನ್ನು ಅನುಸರಿಸಬೇಕು. ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಔರದ್ಕರ್ ವರದಿ ನೆನೆಗುದಿಗೆ ಬಿದ್ದಿದ್ದು, ತಕ್ಷಣ ವರದಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
    ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತು ಸರ್ವೋಚ್ಛ ನ್ಯಾಯಾಲಯ ಸಹ ಕಳವಳ ವ್ಯಕ್ತಪಡಿಸುವ ಜೊತೆಗೆ ೨೦೧೬ರಲ್ಲಿ ನೀಡಿರುವ ಆದೇಶದಂತೆ ಹೆದ್ದಾರಿ ಪಕ್ಕದಲ್ಲಿ ೫೦೦ ಮೀಟರ್ ವ್ಯಾಪ್ತಿಯೊಳಗಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು.  ಬಹುತೇಕ ಮೈಕ್ರೋ ಫೈನಾನ್ಸ್ ಕಂಪನಿಗಳು ಬಡ ಮಹಿಳೆಯರಿಗೆ ಸಾಲ ನೀಡಿದ್ದು, ಕೊರೋನಾ ಸಂದರ್ಭದಲ್ಲೂ ಮರುಪಾವತಿಗೆ ಕಾಲಾವಕಾಶ ನೀಡದೆ ಕಿರುಕುಳ ನೀಡುತ್ತಿವೆ. ಈ ಸಂಬಂಧ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.  

ನ್ಯಾ. ಎ.ಜೆ ಸದಾಶಿವ ಆಯೋಗ ವರದಿ ಜಾರಿ ಹೇಳಿಕೆಗೆ ಖಂಡನೆ

ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ವಿರುದ್ಧ ಬಂಜಾರ ಸಮುದಾಯ ಆಕ್ರೋಶ


ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸುವ ಸಂಬಂಧ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಹಾಗು ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಒತ್ತಾಯಿಸಿ ಭದ್ರಾವತಿಯಲ್ಲಿ ತಾಲ್ಲೂಕು ಬಂಜಾರ ( ಲಂಬಾಣಿ) ಯುವಕರ ಸಂಘ ಹಕ್ಕು ಹೋರಾಟ ಸಮಿತಿ ವತಿಯಿಂದ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸುವ ಸಂಬಂಧ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ನೀಡಿರುವ ಹೇಳಿಕೆಯನ್ನು ತಾಲ್ಲೂಕು ಬಂಜಾರ ( ಲಂಬಾಣಿ) ಯುವಕರ ಸಂಘ ಹಕ್ಕು ಹೋರಾಟ ಸಮಿತಿ ಖಂಡಿಸಿದೆ.
    ಅವರು ಮಂಗಳವಾರ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.  ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಕುರಿತು ಪರಿಶಿಷ್ಟ ಜಾತಿಯಲ್ಲಿರುವ ೧೦೧ ಜಾತಿಗಳಲ್ಲೂ ಗೊಂದಲವಿದೆ. ಶೋಷಿತ ವರ್ಗಗಳ ಜನರ ಹಿತಾಸಕ್ತಿ ಕಾಪಾಡ ಬೇಕಾಗಿರುವ ಕೇಂದ್ರ ಸಚಿವರು ಪದೆ ಪದೇ ಕೇವಲ ಒಂದು ಸಮುದಾಯವನ್ನು ಪ್ರತಿನಿಧಿಸಿರುವಂತೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  
    ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದಾಗಿ ಹೇಳಿಕೆ ನೀಡುವ ಪರಿಣಾಮ ಪರಿಶಿಷ್ಟ ಜಾತಿಯಲ್ಲಿರುವ ೧೦೧ ಜಾತಿಗಳ ಪೈಕಿ ಒಂದು ಜಾತಿ ಹೊರತು ಉಳಿದ ೧೦೦ ಜಾತಿಗಳಲ್ಲಿ ಆತಂಕ ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ ಪದೆ ಪದೇ ಹೇಳಿಕೆ ನೀಡುತ್ತಿರುವ ಸಚಿವ ನಾರಾಯಣಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡಬೇಕೆಂದರು ಆಗ್ರಹಿಸಿದರು.
    ತಕ್ಷಣ ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಅದರ ಸಾಧಕಭಾದಕಗಳನ್ನು ಸಮಗ್ರವಾಗಿ ಚರ್ಚಿಸಿ ಅಭಿಪ್ರಾಯ ಮಂಡಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಸಂಘದ ಯುವಘಟಕದ ಅಧ್ಯಕ್ಷ ಕೃಷ್ಣನಾಯ್ಕ ನೇತೃತ್ವವಹಿಸಿದ್ದರು. ಮುಖಂಡರಾದ ಮಂಜನಾಯ್ಕ,  ಹನುಮನಾಯ್ಕ, ಪ್ರವೀಣ್‌ಕುಮಾರ್, ನಾಗಾನಾಯ್ಕ, ಹೇಮಂತ್, ಭಂಜನಿನಾಯ್ಕ, ಶಂಕ್ರನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Monday, August 23, 2021

ಯುವ ಸಂಕಲ್ಪ ಯಾತ್ರೆ : ಸೈಕಲ್ ಜಾಥಾ

೭೫ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಯುವ ಸಂಕಲ್ಪ ಯಾತ್ರೆಯನ್ನು ಭದ್ರಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಸೈಕಲ್ ಜಾಥಾ ಮೂಲಕ ನಡೆಸಲಾಯತು.
    ಭದ್ರಾವತಿ, ಆ. ೨೩:  ೭೫ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಯುವ ಸಂಕಲ್ಪ ಯಾತ್ರೆಯನ್ನು ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಸೈಕಲ್ ಜಾಥಾ ಮೂಲಕ ನಡೆಸಲಾಯತು
    ಜಾಥಾದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್,  ರಾಜ್ಯ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಜಿ. ಆನಂದಕುಮಾರ್, ಯುವ ಮೋರ್ಚಾ ತಾಲೂಕು ಅಧ್ಯಕ್ಷ ವಿಜಯ್‌ರಾಜ್, ಪ್ರಧಾನ ಕಾರ್ಯದರ್ಶಿಗಳಾದ ಯೋಗೇಶ್, ನಕುಲ್, ಜಿಲ್ಲಾ ಕಾರ್ಯದರ್ಶಿ ಧನುಷ್ ಭೋಸ್ಲೆ, ಉಪಾಧ್ಯಕ್ಷ ಕಿರಣ್, ಕೃಷ್ಣ, ಧನ್ಯ, ಜಾನು ಹಾಗೂ ಖಜಾಂಚಿ ವಿಜಯ್, ಪ್ರದೀಪ್, ವಿಜ್ಞೇಶ್, ಮದನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಆ.೨೪ರಂದು ದಲಿತ ಮುಖಂಡ ಎಂ. ಶ್ರೀನಿವಾಸನ್ ಪುಣ್ಯ ಸ್ಮರಣೆ

ಎಂ. ಶ್ರೀನಿವಾಸನ್
    ಭದ್ರಾವತಿ, ಆ. ೨೩: ದಲಿತ ಮುಖಂಡ, ಪ್ರಗತಿಪರ ಹೋರಾಟಗಾರ ಎಂ. ಶ್ರೀನಿವಾಸನ್ ಅವರ ಮೊದಲ ಪುಣ್ಯ ಸ್ಮರಣೆ ಕಾರ್ಯಕ್ರಮ ಆ.೨೪ರಂದು ಬೆಳಿಗ್ಗೆ ನ್ಯೂಟೌನ್ ಲಯನ್ಸ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ನಡೆಯಲಿದೆ.
    ಎಂ. ಶ್ರೀನಿವಾಸನ್ ಜಿಲ್ಲಾ ಆದಿದ್ರಾವಿಡ ತಮಿಳು ಹಿತ ರಕ್ಷಣಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಜೊತೆಗೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಾರ್ಮಿಕ, ರೈತ ಹಾಗು ಪ್ರಗತಿಪರ ಹೋರಾಟಗಳಲ್ಲಿ ಪಾಲ್ಗೊಳ್ಳುವ ಮೂಲಕ ಚಿರಪರಿಚಿತರಾಗಿದ್ದರು.
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾ ಆದಿದ್ರಾವಿಡ ತಮಿಳು ಹಿತ ರಕ್ಷಣಾ ಸಮಿತಿ ಅಧ್ಯಕ್ಷ, ಎಂ. ಶ್ರೀನಿವಾಸನ್ ಪುತ್ರ ಎಸ್. ನಿತ್ಯಾನಂದನ್ ಕೋರಿದ್ದಾರೆ.

ಬಿಜೆಪಿ ಅಭ್ಯರ್ಥಿ ರಮಾವೆಂಕಟೇಶ್ ನಾಮಪತ್ರ ಸಲ್ಲಿಕೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಬಿಜೆಪಿ ಅಭ್ಯರ್ಥಿ ರಮಾವೆಂಕಟೇಶ್ ನಾಮಪತ್ರ ಸಲ್ಲಿಸಿದರು.
    ಭದ್ರಾವತಿ, ಆ. ೨೩: ನಗರಸಭೆ ವಾರ್ಡ್ ನಂ.೨೯ರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಬಿಜೆಪಿ ಅಭ್ಯರ್ಥಿ ರಮಾವೆಂಕಟೇಶ್ ನಾಮಪತ್ರ ಸಲ್ಲಿಸಿದರು.
    ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವದಲ್ಲಿ ತರೀಕೆರೆ ರಸ್ತೆಯ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ತೆರೆಯಲಾಗಿರುವ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು.
    ಜನ್ನಾಪುರ ಶಕ್ತಿಕೇಂದ್ರದ ಅಧ್ಯಕ್ಷ ನವೀನ್‌ಗೌಡ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಯುವ ಘಟಕದ ಅಧ್ಯಕ್ಷ ವಿಜಯ್ ರಾಜ್, ರೂಪನಾಗರಾಜ್, ಚಂದ್ರಪ್ಪ, ಧನುಷ್ ಬೋಸ್ಲೆ, ನಕುಲ್ ರೇವಣ್‌ಕರ್, ಗೋಕುಲ್ ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆರಾಧನಾ ಮಹೋತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಸೋಮವಾರ ೩೫೦ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಆ. ೨೩: ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಸೋಮವಾರ ೩೫೦ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
    ಬೆಳಿಗ್ಗೆ ನಿರ್ಮಾಲ್ಯ, ಪಂಚಾಮೃತ ಅಭಿಷೇಕ, ನಂತರ ಹಲವು ಭಕ್ತರ ಮನೆಗಳಲ್ಲಿ ಪಾದಪೂಜೆ ನಡೆಯಿತು. ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಸಂಜೆ ಹರಿದಾಸ ಮಹಿಳಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಿತು.
    ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್, ನಿರಂಜನ್ ಆಚಾರ್, ಪವನ್‌ಕುಮಾರ್ ಉಡುಪ, ಪ್ರಮೋದ್, ಪ್ರಧಾನ ಅರ್ಚಕ ಸತ್ಯನಾರಾಯಣಚಾರ್, ಗೋಪಾಲ್‌ಆಚಾರ್, ಶ್ರೀನಿವಾಸಚಾರ್, ಮಾಧುರಾವ್, ಜಯತೀರ್ಥ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ನಗರಸಭೆ ವಾರ್ಡ್ ನಂ.೨೯ ಚುನಾವಣೆ : ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ನಾಮಪತ್ರ ಸಲ್ಲಿಕೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನೂರಾರು ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದರು.
    ಭದ್ರಾವತಿ, ಆ. ೨೩: ನಗರಸಭೆ ವಾರ್ಡ್ ನಂ.೨೯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ನಾಮಪತ್ರ ಸಲ್ಲಿಸಿದರು.
    ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಕ್ಷೇತ್ರಕ್ಕೆ ಹಾಲಿ ನಗರಸಭಾ ಸದಸ್ಯ ಅನಿಲ್‌ಕುಮಾರ್ ತಮ್ಮ ಪತ್ನಿ ಆರ್. ನಾಗರತ್ನ ಅವರನ್ನು ಕಣಕ್ಕಿಳಿಸಿದ್ದು, ಬೆಳಿಗ್ಗೆ ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಆರ್. ನಾಗರತ್ನ ವಿಶೇಷ ಪೂಜೆ ಸಲ್ಲಿಸಿದ ನಂತರ ನೂರಾರು ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ  ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿರವರ ನಿವಾಸದವರೆಗೂ ಸಾಗಿ ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ತರೀಕೆರೆ ರಸ್ತೆಯ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ತೆರೆಯಲಾಗಿರುವ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು.
      ಜೆಡಿಎಸ್ ವರಿಷ್ಠರಾದ ಶಾರದ ಅಪ್ಪಾಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪಿ ಯೋಗೇಶ್, ಮಾಜಿ ಸದಸ್ಯ ಎಸ್. ಕುಮಾರ್, ಮುಖಂಡರಾದ ಅನಿಲ್‌ಕುಮಾರ್, ಎಂ.ಎ ಅಜಿತ್, ಡಿ.ಟಿ ಶ್ರೀಧರ್, ಕರಿಯಪ್ಪ, ಲೋಕೇಶ್ವರ್ ರಾವ್, ಎಂ. ರಾಜು, ಬದರಿನಾರಾಯಣ, ನಂಜುಂಡೇಗೌಡ, ಮೈಲಾರಪ್ಪ, ಉಮೇಶ್, ದಿಲೀಪ್, ಕೇಬಲ್ ಸುರೇಶ್, ಪ್ರಕಾಶ್,  ಮಹಾದೇವಯ್ಯ, ನಗರಸಭಾ ಸದಸ್ಯರಾದ ಉದಯ್‌ಕುಮಾರ್, ಕೋಟೇಶ್ವರ್‌ರಾವ್, ರೇಖಾ, ಎಸ್. ಜಯಶೀಲ, ಆರ್. ಮೋಹನ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



Sunday, August 22, 2021

ಚಿನ್ನ ಬೆಳ್ಳಿ ವರ್ತಕ ಬದರಿನಾರಾಯಣ ಶರ್ಮ ನಿಧನ

ಬದ್ರಿನಾರಾಯಣ ಶರ್ಮಾ
    ಭದ್ರಾವತಿ, ಆ. ೨೨:  ಹಳೇನಗರದ ಎನ್‌ಎಸ್‌ಟಿ ರಸ್ತೆ ನಿವಾಸಿ ಚಿನ್ನ ಬೆಳ್ಳಿ ವರ್ತಕ ಬದ್ರಿನಾರಾಯಣ ಶi(೮೮) ಭಾನುವಾರ ಬೆಳಗ್ಗೆ ನಿಧನ ಹೊಂದಿದರು.
     ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು ಹಾಗು ಮೊಮ್ಮಕ್ಕಳನ್ನು ಹೊಂದಿದ್ದರು.  ಇವರ ಅಂತ್ಯಕ್ರಿಯೆ ಸಂಜೆ ಜೈನ್ ರುದ್ರಭೂಮಿಯಲ್ಲಿ ನೆರವೇರಿತು. ಎನ್‌ಎಸ್‌ಟಿ ರಸ್ತೆಯ ಚಿನ್ನ ಬೆಳ್ಳಿ ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮೃತರಿಗೆ ಗೌರವ ಸೂಚಿಸಿದರು.    

ವಾರ್ಡ್ ನಂ.೨೯ರ ಚುನಾವಣೆ : ಆ.೨೩ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

೩ ಪಕ್ಷಗಳಿಂದ ಅಭ್ಯರ್ಥಿಗಳು ಘೋಷಣೆ, ಬಿಜೆಪಿ ಅಭ್ಯರ್ಥಿಯಾಗಿ ರಮಾ ವೆಂಕಟೇಶ್

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ರಮಾ ವೆಂಕಟೇಶ್ ಆಯ್ಕೆಯಾಗಿದ್ದು, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಸೋಮವಾರ ಅಭ್ಯರ್ಥಿಯನ್ನು ಅಭಿನಂದಿಸುವ ಮೂಲಕ ಅಧಿಕೃತವಾಗಿ ಘೋಷಿಸಿದರು.
    ಭದ್ರಾವತಿ, ಆ. ೨೨: ನಗರಸಭೆ ವಾರ್ಡ್ ನಂ.೨೯ರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆ.೨೩ರ ಸೋಮವಾರ ಕೊನೆಯ ದಿನವಾಗಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ೩ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿವೆ.
    ಕಾಂಗ್ರೆಸ್ ಪಕ್ಷದಿಂದ ನ್ಯಾಯವಾದಿ ಲೋಯಿತಾ ನಂಜಪ್ಪ, ಜೆಡಿಎಸ್ ಪಕ್ಷದಿಂದ ಹಾಲಿ ನಗರಸಭಾ ಸದಸ್ಯ ಅನಿಲ್‌ಕುಮಾರ್ ಅವರ ಪತ್ನಿ ಅರ್. ನಾಗರತ್ನ ಹಾಗು ಬಿಜೆಪಿ ಪಕ್ಷದಿಂದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ರಮಾ ವೆಂಕಟೇಶ್ ಅವರನ್ನು ಕಣಕ್ಕಿಳಿಸಲು ಮುಂದಾಗಿವೆ. ೩ ಪಕ್ಷಗಳು ಸಹ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿರುವುದು ವಿಶೇಷವಾಗಿದೆ.
    ಭಾನುವಾರ ಸಂಜೆ ಜನ್ನಾಪುರ ಬಬ್ಬೂರು ಕಮ್ಮೆ ಸೇವಾ ಸಂಘದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಸಮ್ಮುಖದಲ್ಲಿ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಎಂ. ಪ್ರಭಾಕರ್, ಪ್ರಮುಖರಾದ ಆರ್.ಎಸ್. ಶೋಭಾ, ಎಂ. ಮಂಜುನಾಥ್, ಚಂದ್ರಪ್ಪ ಸೇರಿದಂತೆ ಇನ್ನಿತರರು ವಾರ್ಡ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶಕ್ತಿಮೀರಿ ಶ್ರಮಿಸಬೇಕೆಂದು ಕರೆ ನೀಡಿದರು.
    ಅಭ್ಯರ್ಥಿ ರಮಾ ವೆಂಕಟೇಶ್ ಮಾತನಾಡಿ, ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಆತ್ಮ ವಿಶ್ವಾಸ ಹೊಂದಿದ್ದೇನೆ. ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
    ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಹನುಮಂತನಾಯ್ಕ, ರೂಪನಾಗರಾಜ್, ಶೈಲಜಾ ರಾಮಕೃಷ್ಣ, ಗಾಯತ್ರಿ ಹಾಗು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
    ಜೆಡಿಎಸ್ ಅಭ್ಯರ್ಥಿಯಿಂದ ಆರ್. ನಾಗರತ್ನ ಈಗಾಗಲೇ ವಾರ್ಡ್ ವ್ಯಾಪ್ತಿಯಲ್ಲಿ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಷ್ಟ್ರೀಯ ನಾಯಕರ ಚಿಂತನೆ, ಆದರ್ಶಗಳು ಒಂದು ಪಕ್ಷಕ್ಕೆ ಸೀಮಿತವಾಗಬಾರದು

ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯಲ್ಲಿ ಡಾ. ಬಿ.ಜಿ ಧನಂಜಯ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸದ್ಭಾವನಾ ದಿನದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
    ಭದ್ರಾವತಿ : ಉದಾತ್ತ ಮತ್ತು ಒಳ್ಳೆಯ ಚಿಂತನೆಗಳು ಯಾವ ಮೂಲದಿಂದ ಬಂದರೂ ಸಹ ಅದನ್ನು ಸ್ವೀಕರಿಸುವುದೇ ಭಾರತೀಯತೆ. ಇದು ಭಾರತೀಯರ ಉದಾತ್ತ ಗುಣ ಎಂಬುದನ್ನು ಮಾಜಿ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ಅವರು ತೋರಿಸಿಕೊಟ್ಟಿದ್ದರು ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಹೇಳಿದರು.
    ಅವರು ಕಾಲೇಜಿನಲ್ಲಿ ರಾಷ್ಟ್ರೀಯ ಸದ್ಭಾವನಾ ದಿನದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
    ಏಕತೆ ಮತ್ತು ಸಮಗ್ರತೆಗೆ ವಿಶೇಷ ಒತ್ತುನೀಡಿ ಮಾದರಿ ಆಡಳಿತ ನೀಡುವ ಜೊತೆಗೆ ರಾಷ್ಟ್ರೀಯ ನಾಯಕರ ಚಿಂತನೆ ಮತ್ತು ಆದರ್ಶಗಳು ಒಂದು ಪಕ್ಷಕ್ಕೆ ಸೀಮಿತವಾಗಿರಬಾರದು ಎಂಬುದನ್ನು ತೋರಿಸಿಕೊಟ್ಟಿದ್ದರು.
    ಡಿಜಿಟಲ್ ತಂತ್ರಜ್ಞಾನದತ್ತ ಯುವಕರನ್ನು ಆಕರ್ಷಿಸುವಲ್ಲಿ ಕಾರಣಕರ್ತರಾಗುವ ಜೊತೆಗೆ ಅಲ್ಪ ಕಾಲದಲ್ಲಿಯೇ ಎಲ್ಲಾ ನಾಯಕರನ್ನು ಆಕರ್ಷಿಸಿ ದೇಶಕ್ಕೆ ತಾಂತ್ರಿಕ ಸ್ಪರ್ಶನೀಡಿದ ಅಪರೂಪದ ರಾಜಕೀಯ ಮುತ್ಸದ್ದಿ ಯಾಗಿದ್ದರು. ವೈಜ್ಞಾನಿಕ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಆತ್ಮವಿಶ್ವಾಸ ಮತ್ತು ಭರವಸೆಯ ಕನಸ ಬಿತ್ತಿದ್ದರು. ಇಂತಹ ಮಹಾನ್ ಪುರುಷರ ಆದರ್ಶಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
    ರೋವರ‍್ಸ್ ಮತ್ತು ರೇಜರ‍್ಸ್ ಸಂಚಾಲಕ ಕೆ.ಬಿ ರೇವಣ ಸಿದ್ದಪ್ಪ, ಉಪನ್ಯಾಸಕ ಡಾ. ತಿಪ್ಪೇಶ್ ಸೇರಿದಂತೆ ಕಾಲೇಜಿನ ಉಪನ್ಯಾಸಕ ಹಾಗು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೊದಲ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

    ಭದ್ರಾವತಿ, ಆ. ೨೨: ನಗರದ ನ್ಯೂಟೌನ್ ಸರ್ಕಾರಿ ವಿಐಎಸ್‌ಎಸ್‌ಜೆ ಪಾಲಿಟೆಕ್ನಿಕ್‌ನಲ್ಲಿ ಪ್ರಸಕ್ತ ಸಾಲಿನ ಮೊದಲನೇ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.
    ೩ ವರ್ಷ ಅವಧಿಯ ಸಿವಿಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು ಮೆಟಲರ್ಜಿಕಲ್ ಇಂಜಿನಿಯರಿಂಗ್ ವೃತ್ತಿ ವಿಷಯಗಳಿಗೆ ತಲಾ ೬೦+೩ ಸ್ಥಾನಗಳು ಮೀಸಲಿವೆ.
    ಎಸ್‌ಎಸ್‌ಎಲ್‌ಸಿ/ಸಿಬಿಎಸ್‌ಇ/ಐಸಿಎಸ್‌ಇ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ೩೫ ಅಂಕಗಳೊಂದಿಗೆ ತೇರ್ಗಡೆ ಹೊಂದಿರುವವರು ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶ ಪಡೆಯಲು ಅರ್ಹರಾಗಿದ್ದು, ಐಟಿಐ ಹಾಗು ಪಿಯುಸಿ(ವಿಜ್ಞಾನ) ಪಾಸ್ ಆದ ವಿದ್ಯಾರ್ಥಿಗಳಿಗೆ ನೇರವಾಗಿ ೩ನೇ ಸೆಮಿಸ್ಟರ್ ಪ್ರವೇಶಕ್ಕೆ ಅವಕಾಶವಿದೆ.
    ಅರ್ಜಿ ಸಲ್ಲಿಸಲು ಆ. ೨೫ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಮೊ: ೯೯೮೬೦೭೨೬೯೭ ಅಥವಾ ೮೨೭೭೪೯೮೪೭೧ ಸಂಖ್ಯೆ ಕರೆ ಮಾಡಬಹುದಾಗಿದೆ.

Saturday, August 21, 2021

ಪ್ರವೇಶಾತಿ


ಭದ್ರಾವತಿ ವಿಐಎಸ್‌ಎಸ್‌ಜೆ ಪಾಲಿಟೆಕ್ನಿಕ್‌ನಲ್ಲಿ ಪ್ರವೇಶಾತಿ ಅವಧಿ ವಿಸ್ತರಣೆ


ಹೆಚ್ಚುವರಿ ಶುಲ್ಕ ವಸೂಲಾತಿ ನಿಲ್ಲಿಸಿ : ಖಾಸಗಿ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ಚರಿಕೆ

ಸಾರ್ವಜನಿಕರ ದೂರು, ಎಎಪಿ ಪಕ್ಷದ ಹೋರಾಟಕ್ಕೆ ಸ್ಪಂದನೆ

ಭದ್ರಾವತಿಯಲ್ಲಿ ಅನುದಾನ ಹಾಗು ಅನುದಾನ ರಹಿತ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ಪಡೆಯದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶಿಸಿರುವುದು.
    ಭದ್ರಾವತಿ, ಆ. ೨೧: ಶಿಕ್ಷಣ ಸಂವಿಧಾನ ಬದ್ಧವಾದ ಮೂಲಭೂತ ಹಕ್ಕು,  ಸಮಾಜದ ಎಲ್ಲಾ ವರ್ಗದವರಿಗೂ ಸುಲಭವಾಗಿ ಲಭಿಸುವಂತಾಗಬೇಕೆಂಬ ಆಶಯದೊಂದಿಗೆ ಹೋರಾಟ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ ಈ ನಿಟ್ಟಿನಲ್ಲಿ ಒಂದು ಹಂತದಲ್ಲಿ ಯಶಸ್ಸು ಸಾಧಿಸಿದೆ.
    ಖಾಸಗಿ ಶಾಲೆಗಳು ಶಾಲಾ ಶುಲ್ಕದ ನೆಪದಲ್ಲಿ ನಡೆಸುತ್ತಿರುವ ಅಕ್ರಮಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಎಎಪಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಕೋವಿಡ್-೧೯ರ ಪರಿಣಾಮ ಸಮಾಜದಲ್ಲಿ ಉಂಟಾಗಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
    ಕಳೆದ ಸುಮಾರು ೨ ವರ್ಷಗಳಿಂದ ಕೋವಿಡ್-೧೯ ಮಹಾಮಾರಿಯಿಂದಾಗಿ ಪ್ರಪಂಚದಾದ್ಯಂತ ಜನರ ಬದುಕು ಅದರಲ್ಲೂ ಬಡ ಹಾಗು ಮಧ್ಯಮ ವರ್ಗದವರ ಬದುಕು ತೀರ ಸಂಕಷ್ಟಕ್ಕೆ ಒಳಗಾಗಿದೆ. ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಖಾಸಗಿ ಶಾಲೆಗಳು ಶಾಲಾ ಶುಲ್ಕದ ನೆಪದಲ್ಲಿ ಹೆಚ್ಚುವರಿ ಹಣ ವಸೂಲಾತಿ ಮಾಡುವ ಮೂಲಕ ಶೋಷಣೆ ನಡೆಸುತ್ತಿವೆ. ಈ ನಡುವೆ ಕೇವಲ ಬೋಧನಾ ಶುಲ್ಕ ಮಾತ್ರ ಶೇ.೭೦ರಷ್ಟು ಮಾತ್ರ ಪಡೆದುಕೊಳ್ಳಲು ಸರ್ಕಾರವೇ ಆದೇಶಿಸಿದ್ದರೂ ಸಹ ಖಾಸಗಿ ಶಾಲೆಗಳು ವಸೂಲಾತಿಯಲ್ಲಿ ತೊಡಗಿವೆ. ಆನ್‌ಲೈನ್ ತರಗತಿ ನೆಪದಲ್ಲಿ ಹೆಚ್ಚುವರಿ ಹಣ ಪಡೆಯುವುದು. ಬಾಕಿ ಹಣ ಪಾವತಿಸಿದ ನಂತರ ವರ್ಗಾವಣೆ ಪತ್ರ ಕೊಡುವುದಾಗಿ ಬೆದರಿಕೆ ಹಾಕುವುದು ಇತ್ಯಾದಿ ಶೋಷಣೆಗಳು ನಡೆಯುತ್ತಿವೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದವು. ಅಲ್ಲದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಾಗು ತಹಸೀಲ್ದಾರ್ ಅವರಿಗೆ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಮನವಿಗಳು ಸಹ ಸಲ್ಲಿಕೆಯಾಗಿದ್ದವು.
    ಈ ನಡುವೆ ಎಎಪಿ ಸಹ ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮ ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುದಾನ ಹಾಗು ಅನುದಾನ ರಹಿತ ಖಾಸಗಿ ಶಾಲೆಗಳು ಸರ್ಕಾರ ನಿಗದಿಪಡಿಸಿರುವ ಶುಲ್ಕ ಹೊರತುಪಡಿಸಿ ಹೆಚ್ಚುವರಿ ಶುಲ್ಕ ಪಡೆಯದೆ ಕೇವಲ ಬೋಧನಾ ಶುಲ್ಕ ಶೇ.೭೦ರಷ್ಟು ಮಾತ್ರ ಪಡೆದುಕೊಳ್ಳುವಂತೆ ಆದೇಶಿಸಿದ್ದಾರೆ. ಒಂದು ವೇಳೆ ಆದೇಶ ಉಲ್ಲಂಘಿಸಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ವಿಐಎಸ್‌ಎಲ್ ಪುನಶ್ಚೇತನಕ್ಕೆ ಆಗ್ರಹಿಸಿ ಕೇಂದ್ರ ಉಕ್ಕು ಸಚಿವರಿಗೆ ಜೆಡಿಯು ಮನವಿ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ಕರ್ನಾಟಕ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಕೇಂದ್ರ ಉಕ್ಕು ಸಚಿವ ಆರ್.ಪಿ.ಸಿ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
    ಭದ್ರಾವತಿ, ಆ. ೨೧: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ಕರ್ನಾಟಕ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಕೇಂದ್ರ ಉಕ್ಕು ಸಚಿವ ಆರ್.ಪಿ.ಸಿ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
    ನಗರದ ನಿವಾಸಿಗಳಾದ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಹಾಗು ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್‌ರವರು ವಿಐಎಸ್‌ಎಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಸಂಬಂಧ ಕೇಂದ್ರ ಸಚಿವರಿಗೆ ಒತ್ತಾಯಿಸುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಮಹಿಮ ಜೆ. ಪಟೇಲ್‌ರವರು ಜೆಡಿಯು ಪಕ್ಷದವರೇ ಆದ ಉಕ್ಕು ಸಚಿವ ಆರ್.ಪಿ.ಸಿ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸುವ ಮೂಲಕ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಂತೆ ಆಗ್ರಹಿಸಿದ್ದಾರೆ.
    ಪಕ್ಷದ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್, ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್, ರಾಜ್ಯ ಸಭಾ ಮಾಜಿ ಸದಸ್ಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ, ಕರ್ನಾಟ ರಾಜ್ಯ ಉಸ್ತುವಾರಿ ಸಂಜಯ್ ಝಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಧನಂಜಯ, ಉಪಾಧ್ಯಕ್ಷ ಸುಭಾಷ್ ಕಪಾಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕೇಂದ್ರ ಸಚಿವರು ತಕ್ಷಣ ಮನವಿಗೆ ಪೂರಕವಾಗಿ ಸ್ಪಂದಿಸಿ ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿಗೆ ಮುಂದಾಗಬೇಕು. ಯುವ ಘಟಕದ ನೇತೃತ್ವದಲ್ಲಿ ಪುನಃ ಸಚಿವರನ್ನು ಭೇಟಿ ಮಾಡಿ ಕಾರ್ಖಾನೆ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಹಾಗು ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್‌ರವರು ತಿಳಿಸಿದ್ದಾರೆ.

ಕೋವಿಡ್-೧೯ ಸಂಕಷ್ಟಕ್ಕೆ ಡಾನ್ ಬೋಸ್ಕೋ ಸ್ಪಂದನೆ

ಆರೋಗ್ಯ ಉಪಕರಣ, ಔಷಧ ಸಾಮಗ್ರಿ ವಿತರಣೆ

ಭದ್ರಾವತಿ ಬೈಪಾಸ್ ರಸ್ತೆ ಉಜ್ಜನಿಪುರದಲ್ಲಿರುವ ಡಾನ್ ಬೋಸ್ಕೋ ಐಟಿಐ ವಿದ್ಯಾರ್ಥಿಗಳಿಗೆ ಕೋವಿಡ್-೧೯ ಆರೋಗ್ಯ ಉಪಕರಣಗಳು ಹಾಗು ಔಷಧ ಸಾಮಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಆ. ೨೧:  ಕೋವಿಡ್-೧೯ರ ಹಿನ್ನೆಲೆಯಲ್ಲಿ ಎಲ್ಲೆಡೆ ಸಂಕಷ್ಟ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಹಲವು ರೀತಿಯಲ್ಲಿ ನೆರವಿಗೆ ಮುಂದಾಗುವಲ್ಲಿ ಡಾನ್ ಬೋಸ್ಕೋ ಸಂಸ್ಥೆ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಪಾದರ್ ಆರೋಗ್ಯರಾಜ್ ಹೇಳಿದರು.
     ಅವರು ಶನಿವಾರ ನಗರದ ಬೈಪಾಸ್ ರಸ್ತೆ ಉಜ್ಜನಿಪುರದಲ್ಲಿರುವ ಡಾನ್ ಬೋಸ್ಕೋ ಐಟಿಐ ವಿದ್ಯಾರ್ಥಿಗಳಿಗೆ ಕೋವಿಡ್-೧೯ ಆರೋಗ್ಯ ಉಪಕರಣಗಳು ಹಾಗು ಔಷಧ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
    ಸಂಸ್ಥೆಯ ಬೆಂಗಳೂರು ಕೇಂದ್ರ ಕಛೇರಿಯು ಕೋವಿಡ್-೧೯ ಎದುರಿಸುವ ನಿಟ್ಟಿನಲ್ಲಿ ಅಗತ್ಯವಿರುವ ನೆರವನ್ನು ಕಲ್ಪಿಸಿಕೊಡುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಸೇವಾ ಕಾರ್ಯ ಸಾರ್ಥಕಗೊಳ್ಳುತ್ತದೆ ಎಂದರು.
   ಡಾನ್ ಬೋಸ್ಕೋ ಸಂಸ್ಥೆ ವತಿಯಿಂದ ಈಗಾಗಲೇ ನಗರದ ನಿರ್ಮಲ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ, ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನರು ಸೇರಿದಂತೆ ಇನ್ನಿತರರಿಗೆ ಕೋವಿಡ್-೧೯ ಆರೋಗ್ಯ ಉಪಕರಣಗಳು ಹಾಗು ಔಷಧ ಸಾಮಗ್ರಿಗಳನ್ನು ವಿತರಿಸಲಾಗಿದೆ. ಜೊತೆಗೆ ಸ್ಥಳೀಯ ಕಡು ಬಡವರಿಗೆ ದಿನಸಿ ಸಾಮಾಗ್ರಿಗಳನ್ನು ಸಹ  ವಿತರಿಸಲಾಗಿದೆ.
    ಕಾಲೇಜಿನ ಪ್ರಾಂಶುಪಾಲ ಪಾದರ್ ಜೋಮಿ, ಆಡಳಿತಾಧಿಕಾರಿ ಪಾದರ್ ಸೋನಿಚೆನ್ ಮ್ಯಾಥ್ಯೂ, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Friday, August 20, 2021

ನಗರದೆಲ್ಲೆಡೆ ಅದ್ದೂರಿಯಾಗಿ ಜರುಗಿದ ವರಮಹಾಲಕ್ಷ್ಮೀ ಹಬ್ಬ

ಮಹಿಳೆಯರ ಅಚ್ಚುಮೆಚ್ಚಿನ ಹಬ್ಬಗಳಲ್ಲಿ ಒಂದಾಗಿರುವ ವರಮಹಾಲಕ್ಷ್ಮಿ ಹಬ್ಬ ಶುಕ್ರವಾರ ಭದ್ರಾವತಿ ನಗರದೆಲ್ಲೆಡೆ ಮನೆ ಮನೆಗಳಲ್ಲಿ ಅದ್ದೂರಿಯಾಗಿ ನಡೆಯಿತು.
   ಭದ್ರಾವತಿ, ಆ. ೨೦: ಮಹಿಳೆಯರ ಅಚ್ಚುಮೆಚ್ಚಿನ ಹಬ್ಬಗಳಲ್ಲಿ ಒಂದಾಗಿರುವ ವರಮಹಾಲಕ್ಷ್ಮಿ ಹಬ್ಬ ಶುಕ್ರವಾರ ನಗರದೆಲ್ಲೆಡೆ ಮನೆ ಮನೆಗಳಲ್ಲಿ ಅದ್ದೂರಿಯಾಗಿ ನಡೆಯಿತು.
   ಈ ಬಾರಿ ಶ್ರಾವಣ ಮಾಸದ ೨ನೇ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬವನ್ನು ಕೋವಿಡ್-೧೯ರ ಭೀತಿ ನಡುವೆಯೂ ಮನೆ ಮನೆಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
    ವರಮಹಾಲಕ್ಷ್ಮೀಯನ್ನು ವೈಭವಯುತವಾಗಿ ಅಲಂಕರಿಸಿ, ವಿವಿಧ ಹಣ್ಣು ಹಂಪಲು, ಬಗೆ ಬಗೆಯ ತಿಂಡಿ ತಿನಿಸುಗಳ ಮೂಲಕ ಆರಾಧಿಸಲಾಯಿತು. ಈ ನಡುವೆ ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ವಾಣಿಜ್ಯ ರಸ್ತೆಗಳಲ್ಲಿ ಜನಜಂಗುಳಿ ಕಂಡು ಬಂದಿತು. ಕೆಲವು ದೇವಾಯಗಳಲ್ಲೂ ವರಮಹಾಲಕ್ಷ್ಮೀ ಆರಾಧನೆ ನಡೆಯಿತು.

ಕಾಂಗ್ರೆಸ್ ಕಾರ್ಮಿಕ ವಿಭಾಗದ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಎಚ್. ಮಂಜುನಾಥ್ ನೇಮಕ

ಕಾಂಗ್ರೆಸ್ ಕಾರ್ಮಿಕ ವಿಭಾಗದ ಭದ್ರಾವತಿ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಎಚ್. ಮಂಜುನಾಥ್ ನೇಮಕಗೊಂಡಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಆದೇಶ ಪತ್ರ ವಿತರಿಸಿದರು.
    ಭದ್ರಾವತಿ, ಆ. ೨೦: ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ನ್ಯೂಟೌನ್ ಲಿಂಗಾಯಿತರ ಬೀದಿ ನಿವಾಸಿ ಎಚ್. ಮಂಜುನಾಥ್ ನೇಮಕಗೊಂಡಿದ್ದಾರೆ.
    ಪ್ರದೇಶ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ. ಪುಟ್ಟಸ್ವಾಮಿ ಗೌಡ ನಿರ್ದೇಶನದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಸೂಚನೆ ಮೇರೆಗೆ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಎಂ.ಕೆ ಪ್ರಮೋದ್ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಕಾರ್ಮಿಕ ವಿಭಾಗದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ.
    ಮಂಜುನಾಥ್ ಈಗಾಗಲೇ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಯೂನಿಯನ್ ತಾಲೂಕು ಶಾಖೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅರಿವು ಹೊಂದಿದ್ದಾರೆ.
    ಆದೇಶ ಪತ್ರವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್ ವಿತರಿಸಿದರು. ಪ್ರಮುಖರಾದ ವಿಭಾಗದ ಜಿಲ್ಲಾಧ್ಯಕ್ಷ ಎಂ.ಕೆ ಪ್ರಮೋದ್ ನಗರಸಭಾ ಸದಸ್ಯ ಜಾರ್ಜ್, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಯೂನಿಯನ್ ತಾಲೂಕು ಶಾಖೆ ಅಧ್ಯಕ್ಷ ಚಂದ್ರಶೇಖರ್, ತಾಂತ್ರಿಕ ಸಲಹೆಗಾರ ಮನೋಹರ್, ಕಾರ್ಯಾಧ್ಯಕ್ಷ ಬಿ.ಎಸ್ ಅಭಿಲಾಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
        ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ನೇಮಕಗೊಳ್ಳಲು ಕಾರಣಕರ್ತರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ಎಚ್. ಮಂಜುನಾಥ್ ಕೃತಜ್ಞತೆ ಸಲ್ಲಿಸಿದ್ದಾರೆ.

ಅರಸು ಎಂದಿಗೂ ಮರೆಯಲಾಗದ ಒಬ್ಬ ಅದ್ಭುತ ಆದರ್ಶ ವ್ಯಕ್ತಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕು ಕಛೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
      ಭದ್ರಾವತಿ, ಆ. ೨೦: ಕರ್ನಾಟಕ ರಾಜ್ಯ ರಾಜಕಾರಣದ ಇತಿಹಾಸದಲ್ಲಿ ದೇವರಾಜ ಅರಸು ಎಂದಿಗೂ ಮರೆಯಲಾಗದ ಒಬ್ಬ ಅದ್ಭುತ ಆದರ್ಶ ವ್ಯಕ್ತಿಯಾಗಿದ್ದು, ಇಂದಿಗೂ ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶುಕ್ರವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದಿನ ರಾಜಕಾರಣದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಅಂದು ಅರಸು ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ಸಹ ತಮಗಾಗಿ ಏನನ್ನು ಸಹ ಮಾಡಿಕೊಳ್ಳಲಿಲ್ಲ. ಸದಾ ಕಾಲ ಹಿಂದುಳಿದವರು, ದೀನದಲಿತರ ಪರವಾಗಿ ಚಿಂತನೆಗಳನ್ನು ನಡೆಸುವ ಮೂಲಕ ಅವರ ಅಭ್ಯುದಯಕ್ಕಾಗಿ ಶ್ರಮಿಸಿದರು.  ಪ್ರಾಮಾಣಿಕ ಹಾಗು ಸಜ್ಜನ ಗುಣಗಳಿಂದಾಗಿ ಎಲ್ಲಾ ರಾಜಕಾರಣಿಗಳಿಗಿಂತಲೂ ವಿಭಿನ್ನವಾಗಿ ಕಂಡು ಬರುತ್ತಾರೆ. ಈ ಹಿನ್ನಲೆಯಲ್ಲಿ ಅವರನ್ನು ಇಂದಿಗೂ ನಾವುಗಳು ನೆನಪು ಮಾಡಿಕೊಳ್ಳುತ್ತಿದ್ದೇವೆ. ಇವರ ಆದರ್ಶತನಗಳನ್ನು ಇಂದಿನ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ತಹಸೀಲ್ದಾರ್ ಆರ್. ಪ್ರದೀಪ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ರಾಜೇಶ್ವರಿ, ಮೀನಾಕ್ಷಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ಟಿ. ವೆಂಕಟೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಹಿಂದುಳಿದ ವರ್ಗಗಳ ಇಲಾಖೆಯ ರಮೇಶ್, ಕಂದಾಯಾಧಿಕಾರಿ ಪ್ರಶಾಂತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.