ಭದ್ರಾವತಿ: ಮಹಿಳೆಯೊಬ್ಬರ ಚಿನ್ನದ ಸರ ಹಾಗೂ ಬೆಳ್ಳಿ ಕರಡಿಕೆ ಕಳುವು ಮಾಡಿದ್ದ ವ್ಯಕ್ತಿಗೆ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆ ಮಾರನಹಳ್ಳಿಯಲ್ಲಿ ತಮ್ಮ ಮನೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರವನ್ನು ದುಷ್ಕರ್ಮಿಯೊಬ್ಬ ಕದ್ದೊಯ್ದ ಘಟನೆ ನಡೆದಿತ್ತು.
ಮಹಿಳೆಯೊಬ್ಬರು ತಮ್ಮ ಮನೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿದ್ದ ವೇಳೆ ತಿಮ್ಲಾಪುರದ ಜಯ ಸುನಿಲ್ ಎಂಬ ವ್ಯಕ್ತಿಯು ಹಿಂದಿನಿಂದ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಬೆಳ್ಳಿಯ ಕರಡಿಗೆಯನ್ನು ಕಿತ್ತುಕೊಂಡು ಪರಾರಿಯಾಗಿದ್ದನು.
ದೂರಿನ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದ ಅಂದಿನ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಕೆ.ಎಂ ಯೋಗೇಶ್ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.
ಭದ್ರಾವತಿ ಹಳೇನಗರದ ಸೂಕ್ಷ್ಮ ಕೆತ್ತನೆಗಳ ಕಲಾವಿದ ವರುಣ್ ಆಚಾರ್ ಈ ಬಾರಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಅತಿಸೂಕ್ಷ್ಮ ಗಣೇಶ ಮಾದರಿಯನ್ನು ತಯಾರಿಸಿ ಗಮನ ಸೆಳೆದಿದ್ದಾರೆ.
ಭದ್ರಾವತಿ, ಆ. ೩೦: ಹಳೇನಗರದ ಸೂಕ್ಷ್ಮ ಕೆತ್ತನೆಗಳ ಕಲಾವಿದ ವರುಣ್ ಆಚಾರ್ ಈ ಬಾರಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಅತಿಸೂಕ್ಷ್ಮ ಗಣೇಶ ಮಾದರಿಯನ್ನು ತಯಾರಿಸಿ ಗಮನ ಸೆಳೆದಿದ್ದಾರೆ.
ಪೆನ್ಸಿಲ್ ತುದಿಯಲ್ಲಿ ಸುಮಾರು ೦.೫ ಎಂ.ಎಂ ಎತ್ತರದ ಅತಿಸೂಕ್ಷ್ಮವಾದ ಗಣೇಶ ಮಾದರಿಯನ್ನು ಕೇವಲ ೨ ಗಂಟೆ ೨.೫ ನಿಮಿಷದಲ್ಲಿ ತಯಾರಿಸಿದ್ದಾರೆ. ವರುಣ್ ಅವರು ಈಗಾಗಲೇ ಅಕ್ಕಿ ಕಾಳು, ಸೀಮೆ ಸುಣ್ಣ, ಪೆನ್ಸಿಲ್ ಸೇರಿದಂತೆ ಅತಿ ಸೂಕ್ಷ್ಮ ವಸ್ತುಗಳನ್ನು ಬಳಸಿ ಹಲವಾರು ಸೂಕ್ಷ್ಮ ಕಲಾ ಮಾದರಿಗಳನ್ನು ತಯಾರಿಸಿದ್ದು, ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ಸಾಧನೆ ಸಹ ಮಾಡಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಭದ್ರಾವತಿ ಹಳೇನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿರುವ ಒಣ ಗಾಂಜಾ.
ಭದ್ರಾವತಿ, ಆ. ೩೦ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಯುವಕರನ್ನು ಹಳೇನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಅಮೀರ್‌ಜಾನ್ ಕಾಲೋನಿ ನಿವಾಸಿ ಮೊಹಮ್ಮದ್ ಖಾಲಿದ್(೨೧), ಸೀಗೇಬಾಗಿ ನಿವಾಸಿಗಳಾದ ಮೊಹಮ್ಮದ್ ಸಾಹಿಲ್(೧೮) ಮತ್ತು ಸಯ್ಯದ್ ಅರ್ಬಾಜ್(೨೬) ಹಾಗು ಅನ್ವರ್ ಕಾಲೋನಿ ನಿವಾಸಿ ಮೊಹಮ್ಮದ್ ಅರ್ಷನ್(೨೩)ನನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು ೬೯,೦೦೦ ರು. ಮೌಲ್ಯದ ೨ ಕೆ.ಜಿ ೧೫೦ ಗ್ರಾಂ ತೂಕದ ಒಣ ಗಾಂಜಾ ಹಾಗು ೮೦೦ ರು. ನಗದು, ೩ ಮೊಬೈಲ್ ಮತ್ತು ೨ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಹೊಳೆಹೊನ್ನೂರು ರಸ್ತೆಯಿಂದ ಹೊಸಸೀಗೇಬಾಗಿ ಕಡೆಗೆ ಹೋಗುವ ರಸ್ತೆಯ ಸಮೀಪದ ಅಂಗಡಿಯ ಮುಂಭಾಗದ ಕಚ್ಚಾರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸ್ ಉಪಾಧೀಕ್ಷಕ, ನಗರವೃತ್ತ ನಿರೀಕ್ಷಕ ಹಾಗು ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಮವಾರ ದಾಳಿ ನಡೆಸಿದೆ.
ಭದ್ರಾವತಿ ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ಅವರ ಯೋಗ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಭದ್ರಾವತಿ, ಆ. ೩೦ : ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ಅವರ ಯೋಗ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಡಿ. ನಾಗರಾಜ್ ಅವರು ಕಳೆದ ೪ ದಶಕಗಳಿಂದ ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಲಕ್ಷಾಂತರ ಜನರಿಗೆ ಯೋಗ ತರಬೇತಿ ನೀಡುವ ಮೂಲಕ ಅವರು ಸಹ ಯೋಗ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ. ಅಲ್ಲದೆ ಡಿ. ನಾಗರಾಜ್ ಅವರು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ, ಬಿರುದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಯೋಗ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಇವರಿಗೆ ೨೦೨೦ನೇ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು ನೀಡಿದೆ. ರಾಷ್ಟ್ರೀಯ ಕ್ರೀಡಾದಿನವಾದ ಸೋಮವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕ್ರೀಡಾ ಮತ್ತು ರೇಷ್ಮೆ ಸಚಿವ ಡಾ. ಕೆ.ಸಿ ನಾರಾಯಣಗೌಡ, ವಿಧಾನಪರಿಷತ್ ಸದಸ್ಯ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ್, ಡಾ. ಶಾಲಿನಿರಜನೀಶ್, ಡಾ.ಎಚ್.ಎನ್ ಗೋಪಾಲಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರಾದ ಡಿ. ನಾಗರಾಜ್ ಅವರನ್ನು ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ ಡಾ. ರಾಮಮೂರ್ತಿ ಹಾಗು ಕಾರ್ಯದರ್ಶಿ ಡಾ. ಡಿ. ಪುಟ್ಟೇಗೌಡ ಮತ್ತು ಯೋಗಪಟುಗಳು, ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.
ಭದ್ರಾವತಿ ನಗರಸಭೆ ವಾರ್ಡ್ ನಂ.೨೧ರ ಸದಸ್ಯೆ ವಿಜಯ ಅವರು ಈ ಬಾರಿ ಗೌರಿ-ಗಣೇಶ ಹಬ್ಬವನ್ನು ವಾರ್ಡ್‌ನಲ್ಲಿ ವಿಶಿಷ್ಟವಾಗಿ ಆಚರಿಸುವ ಮೂಲಕ ಸ್ಥಳೀಯರೊಂದಿಗೆ ಸಂಭ್ರಮ ಹಂಚಿಕೊಂಡರು.
ಭದ್ರಾವತಿ, ಆ. ೩೦: ನಗರಸಭೆ ವಾರ್ಡ್ ನಂ.೨೧ರ ಸದಸ್ಯೆ ವಿಜಯ ಅವರು ಈ ಬಾರಿ ಗೌರಿ-ಗಣೇಶ ಹಬ್ಬವನ್ನು ವಾರ್ಡ್‌ನಲ್ಲಿ ವಿಶಿಷ್ಟವಾಗಿ ಆಚರಿಸುವ ಮೂಲಕ ಸ್ಥಳೀಯರೊಂದಿಗೆ ಸಂಭ್ರಮ ಹಂಚಿಕೊಂಡರು.
ಹಿಂದೂ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬ ತನ್ನದೇ ಆದ ಮಹತ್ವ ಪಡೆದುಕೊಂಡಿದ್ದು, ವಾರ್ಡ್‌ನ ಎಲ್ಲಾ ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಹಬ್ಬದ ಮಹತ್ವ ತಿಳಿಸಿಕೊಡುವ ಜೊತೆಗೆ ವಾರ್ಡ್ ನಿವಾಸಿಗಳ ನೋವು-ನಲಿವುಗಳಿಗಗೆ ಸದಾ ಕಾಲ ಸ್ಪಂದಿಸುತ್ತೇನೆ ಎಂಬ ಸಂದೇಶವನ್ನು ವಿಜಯ ಅವರು ಹಬ್ಬದ ಸಂಭ್ರಮದ ಮೂಲಕ ತೋರ್ಪಡಿಸಿಕೊಂಡಿದ್ದಾರೆ.
ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಮುಖಂಡರಾದ ಡಿ.ಟಿ ಶ್ರೀಧರ್, ಮೈಲಾರಪ್ಪ, ಅಶೋಕ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭೆ ವಾರ್ಡ್ ನಂ.೨ರ ವ್ಯಾಪ್ತಿಯ ಭದ್ರಾ ನದಿ ತಗ್ಗು ಪ್ರದೇಶದ ಕವಲಗುಂದಿ ಗ್ರಾಮದ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.
ಭದ್ರಾವತಿ, ಆ. ೩೦: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕವಲಗುಂದಿ ತಗ್ಗು ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರ ನೀಡಲಾಗಿದ್ದು, ಅಲ್ಲದೆ ಮನೆ ನಿರ್ಮಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ರೀತಿಯ ನೆರವು ಸಹ ನೀಡಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಅವರು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಗರಸಭೆ ವಾರ್ಡ್ ನಂ.೨ರ ವ್ಯಾಪ್ತಿಯ ಭದ್ರಾ ನದಿ ತಗ್ಗು ಪ್ರದೇಶದ ಕವಲಗುಂದಿ ಗ್ರಾಮದ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ಇಲ್ಲಿನ ನಿವಾಸಿಗಳು ಪ್ರತಿವರ್ಷ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿದ ಸಂದರ್ಭದಲ್ಲಿ ಜಲಾವೃತಗೊಂಡು ಸಂತ್ರಸ್ಥರಾಗುತ್ತಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರ ಪಡೆದು ಕ್ರಮ ಕೈಗೊಳ್ಳಲಾಗಿದೆ. ಸಂತ್ರಸ್ಥರಿಗೆ ಹಕ್ಕುಪತ್ರ ವಿತರಣೆ ಜೊತೆಗೆ ಮುಂದಿನ ದಿನಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ಅಥವಾ ಮನೆ ಕಟ್ಟಿಸಿಕೊಡಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹಲವಾರು ವಸತಿ ಯೋಜನೆಗಳನ್ನು ಜಾರಿಗೆ ತಂದಿವೆ. ಅಲ್ಲದೆ ರಾಜ್ಯ ಸರ್ಕಾರ ಪ್ರಾಕೃತಿಕ ವಿಕೋಪಗಳಿಂದ ಹಾನಿಯಾಗುವ ದಾಖಲೆ ರಹಿತ ಅನಧಿಕೃತ ಮನೆಗಳು ಸೇರಿದಂತೆ ಎಲ್ಲಾ ಮನೆಗಳಿಗೂ ಸಹ ಸೂಕ್ತ ಪರಿಹಾರ ನೀಡಲಿದೆ. ದೇಶದಲ್ಲಿ ಈ ರೀತಿಯ ಪರಿಹಾರ ನೀಡುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಹಾಗು ತಾಲೂಕಿನಲ್ಲಿ ಮಳೆಯಿಂದಾಗಿ ಹಾನಿಯಾಗಿರುವ ಮನೆಗಳಿಗೆ ತಕ್ಷಣ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಬಡಜನರಿಗೆ ತೊಂದರೆ ನೀಡಬಾರದು. ಶಾಸಕರು ಹಾಗು ನಾನು ಬೇರೆ ಬೇರೆ ಪಕ್ಷದಲ್ಲಿದ್ದರೂ ಸಹ ಚುನವಣೆ ಸಂದರ್ಭದಲ್ಲಿ ಮಾತ್ರ ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಇರುತ್ತವೆ. ಆದರೆ ಜನಪ್ರತಿನಿಧಿಯಾಗಿ ಆಯ್ಕೆಯಾದ ನಂತರ ಇಬ್ಬರು ಸಹ ಅಭಿವೃದ್ಧಿ ವಿಚಾರದಲ್ಲಿ ಒಗ್ಗಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕ್ಷೇತ್ರದಲ್ಲಿ ಹಾಗು ಜಿಲ್ಲೆಯಲ್ಲಿ ಎಷ್ಟೋ ಜನ ಶಾಸಕರು, ಸಂಸದರು ಬಂದು ಹೋದರೂ ಆದರೆ ಯಾರಿಂದಲೂ ಸಹ ಹಕ್ಕು ಪತ್ರ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ನಾನು ಹಾಗು ಸಂಸದರು ಒಗ್ಗಟ್ಟಾಗಿ ಈ ಕೆಲಸ ಯಶಸ್ವಿಯಾಗಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಫಲಾನುಭವಿಗಳಿಗೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಾಣಕ್ಕೂ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿ ಸಂಸದರು ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳಿಗೆ ನೀಡುವಷ್ಟು ಆದ್ಯತೆಯನ್ನು ನನ್ನ ಕ್ಷೇತ್ರಕ್ಕೂ ಸಹ ನೀಡಬೇಕೆಂದು ಮನವಿ ಮಾಡಿದರು.
ಕಲವಗುಂದಿ ಒಟ್ಟು ೩೦ ನೆರೆ ಸಂತ್ರಸ್ಥರ ಪೈಕಿ ೨೮ ಮಂದಿಗೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ನಗರಸಭೆ ಜೇಡಿಕಟ್ಟೆ ಗ್ರಾಮದಲ್ಲಿ ಸುಮಾರು ೧೮ ಎಕರೆ ಪ್ರದೇಶದಲ್ಲಿ ಹಕ್ಕು ಪತ್ರ ನೀಡಲಾಗಿದೆ. ಇಬ್ಬರು ಫಲಾನುಭವಿಗಳಿಗೆ ತಾಂತ್ರಿಕ ಕಾರಣಗಳಿಂದ ಇನ್ನೂ ಹಕ್ಕು ಪತ್ರ ನೀಡಿಲ್ಲ.
ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ದೊಡ್ಡೇಗೌಡರ್, ತಹಸೀಲ್ದಾರ್ ಆರ್. ಪ್ರದೀಪ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಕಂದಾಯಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಗರಸಭೆ ವಾರ್ಡ್ ನಂ.೨ರ ವ್ಯಾಪ್ತಿಯ ಭದ್ರಾ ನದಿ ತಗ್ಗು ಪ್ರದೇಶದ ಕವಲಗುಂದಿ ಗ್ರಾಮದ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಹಾಗು ನಗರಸಭೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಅಂತಿಮವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಸಂಸದರು-ಶಾಸಕರ ಮುಂದೆಯೇ ಮಾತಿನ ಚಕಮಕಿ : ಅವಾಚ್ಯ ಶಬ್ದ
ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಭಾಷಣದಲ್ಲಿ ಸಂಸದರಿಗೆ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಗಮನ ಹರಿಸುವಂತೆ ಮನವಿ ಮಾಡಿದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗು ನಗರಸಭೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಅಂತಿಮವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ನಡುವೆ ಸ್ವತಃ ಸಂಸದರು ಸಮಾಧಾನ ಮಾಡಲು ಮುಂದಾದರೂ ಸಹ ಸಾಧ್ಯವಾಗಲಿಲ್ಲ. ಈ ನಡುವೆ ಶಾಸಕರು ಬಿಜೆಪಿ ಮುಖಂಡರೊಬ್ಬರಿಗೆ ಅವಾಚ್ಯ ಶಬ್ದ ಬಳಸಿದ್ದು, ಈ ಸಂದರ್ಭದಲ್ಲಿ ಸಂಸದರು ತಕ್ಷಣ ಸ್ಥಳದಿಂದ ಕಾಲ್ಕಿತ್ತರು. ಶಾಸಕರ ಅವಾಚ್ಯ ಶಬ್ದ ಬಳಕೆಯಿಂದ ಸಂಸದರೇ ಬೆಚ್ಚಿ ಬಿದ್ದ ಘಟನೆ ನಡೆಯಿತು. ಈ ನಡುವೆ ಶಾಸಕರ ವರ್ತನೆಗೆ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭದ್ರಾವತಿ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾದಲ್ಲಿ ಶ್ರೀ ವಿನಾಯಕ ಚುತುರ್ಥಿ ಅಂಗವಾಗಿ ಡಾ. ರಾಜ್‌ಕುಮಾರ್ ಅಭಿಮಾನಿಗಳು ಹಾಗು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ವೀರ ಸಾವರ್ಕರ್ ಮತ್ತು ಬಾಲಗಂಗಾಧರನಾಥ ತಿಲಕ್ ಸೇರಿದಂತೆ sಸ್ವಾತಂತ್ರ್ಯ ಯೋಧರ, ದೇಶ ಭಕ್ತರನ್ನೊಳಗೊಂಡ ದ್ವಾರಬಾಗಿಲು ನಿರ್ಮಿಸಲಾಗಿದೆ.
ಭದ್ರಾವತಿ, ಆ. ೨೯: ನಗರದ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾದಲ್ಲಿ ಶ್ರೀ ವಿನಾಯಕ ಚುತುರ್ಥಿ ಅಂಗವಾಗಿ ಡಾ. ರಾಜ್‌ಕುಮಾರ್ ಅಭಿಮಾನಿಗಳು ಹಾಗು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ವೀರ ಸಾವರ್ಕರ್ ಮತ್ತು ಬಾಲಗಂಗಾಧರನಾಥ ತಿಲಕ್ ಸೇರಿದಂತೆ ಸ್ವಾತಂತ್ರ್ಯ ಯೋಧರ, ದೇಶ ಭಕ್ತರನ್ನೊಳಗೊಂಡ ದ್ವಾರಬಾಗಿಲು ನಿರ್ಮಿಸಲಾಗಿದೆ.
ನಗರದ ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಚಾಮೇಗೌಡ ಏರಿಯಾದಲ್ಲಿ ಪ್ರತಿ ವರ್ಷ ಶ್ರೀ ವಿನಾಯಕ ಚತುರ್ಥಿ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ವಿಶೇಷವಾಗಿ ದ್ವಾರ ಬಾಗಿಲು ನಿರ್ಮಿಸಲಾಗಿದ್ದು, ಸ್ವಾತಂತ್ರ್ಯ ಯೋಧರು, ದೇಶ ಭಕ್ತರಾದ ವೀರ ದಾಮೋದರ ವಿನಾಯಕ ಸಾರ್ವಕರ್, ಲೋಕಮಾನ್ಯ ಬಾಲಗಂಗಾಧರನಾಥ ತಿಲಕ್, ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್, ರಾಜ್‌ಗುರು, ಚಂದ್ರಶೇಖರ್ ಆಜಾದ್, ಸ್ವಾಮಿ ವಿವೇಕಾನಂದ, ಕಿತ್ತೂರು ರಾಣಿ ಚನ್ನಮ್ಮ ಹಾಗು ಡಾ. ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಮತ್ತು ಪುನೀತ್‌ರಾಜ್‌ಕುಮಾರ್ ಅವರ ಭಾವಚಿತ್ರಗಳು ರಾರಾಜಿಸುತ್ತಿವೆ.
ಗೌರಿ-ಗಣೇಶ ಮೂರ್ತಿಗಳು ಕಳೆದ ೨ ದಿನಗಳ ಹಿಂದೆಯೇ ಭದ್ರಾವತಿಯಲ್ಲಿ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿವೆ. ತಮಗೆ ಇಷ್ಟವಾದ ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಲು ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸುತ್ತಿರುವುದು.
ಭರ್ಜರಿಯಾಗಿ ಖರೀದಿ:
ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಸೋಮವಾರ ಜನಸಂದಣಿ ಅಧಿಕವಾಗಿದ್ದು, ಜನರು ಹಬ್ಬಕ್ಕಾಗಿ ಅಗತ್ಯ ವಸ್ತುಗಳ ಖರೀದಿ ಭರಾಟೆಯಲ್ಲಿ ತೊಡಗಿರುವುದು ಕಂಡು ಬಂದಿತು. ಈ ಬಾರಿ ಸಹ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡು ಬಂದಿದ್ದು, ಆದರೂ ಸಹ ವಿಧಿವಿಲ್ಲದೆ ವ್ಯಾಪಾರಸ್ಥರು ಕೇಳಿದಷ್ಟು ನೀಡಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು.
ಗೌರಿ-ಗಣೇಶ ಮೂರ್ತಿಗಳು ಕಳೆದ ೨ ದಿನಗಳ ಹಿಂದೆಯೇ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿವೆ. ತಮಗೆ ಇಷ್ಟವಾದ ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಲು ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡು ಬಂದರೆ ಮತ್ತೆ ಕೆಲವರು ಮೊಬೈಲ್‌ಗಳಲ್ಲಿ ಮೂರ್ತಿಗಳನ್ನು ಕ್ಲಿಕ್ಕಿಸಿಕೊಂಡು, ಇನ್ನೂ ಕೆಲವರು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಆನಂದಿಸುತ್ತಿರುವುದು ಕಂಡು ಬಂದಿತು.
ರಾಷ್ಟ್ರಾಭಿಮಾನ, ಸ್ವಾಭಿಮಾನ, ಪ್ರತಿಷ್ಠೆ ಹಾಗೂ ಸಾರ್ವಭೌಮತ್ವದ ಸಂಕೇತ
ಭದ್ರಾವತಿ ಹಿಂದೂ ಮಹಾಸಭಾ ವಿನಾಯಕ ಮೂರ್ತಿ ಪ್ರತಿಷ್ಠಾಪನಾ ಸ್ಥಳ
ಅನಂತಕುಮಾರ್
ಭದ್ರಾವತಿ: ಹಿಂದೂ ಸಂಘಟನೆಗಾಗಿ ರೂಪುಗೊಂಡ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನೆ ವತಿಯಿಂದ ನಗರದಲ್ಲಿ ಆಚರಿಸಲ್ಪಡುವ ಶ್ರೀ ವಿನಾಯಕ ಚತುರ್ಥಿಗೆ ಇದೀಗ ೫೦ರ ಸಂಭ್ರಮ.
ನಗರದ ಹೊಸಮನೆ ಮುಖ್ಯರಸ್ತೆಯಲ್ಲಿ ತಮಿಳು ಶಾಲೆ ಬಳಿ ಶ್ರೀ ಗಣಪತಿ ದೇವಸ್ಥಾನದಲ್ಲಿ ತನ್ನ ಶಾಖೆಯನ್ನು ತೆರೆದಿರುವ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನೆ ಇದೀಗ ಬಲಿಷ್ಠ ಸಂಘಟನೆಯಾಗಿ ಬೆಳೆದು ನಿಂತಿದೆ. ಕೇವಲ ಹಿಂದೂ ಸಂಘಟನೆ ಮಾಡುವುದು ಮಾತ್ರವಲ್ಲ ಇತರೆ ಧರ್ಮಿಯರನ್ನು ಸಹ ತನ್ನೊಂದಿಗೆ ಸೇರಿಸಿಕೊಂಡು ಮುನ್ನಡೆಯುತ್ತಿರುವುದು ಇದರ ವಿಶಿಷ್ಟತೆಗಳಲ್ಲಿ ಒಂದಾಗಿದೆ. ಕಳೆದ ೫೦ ವರ್ಷಗಳಿಂದ ತನ್ನ ಚಟುವಟಿಕೆಗಳನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿದೆ.
ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿ ಎಂಬುವಂತೆ ಹಲವಾರು ಕಾರ್ಯಕ್ರಮಗಳನ್ನು ನಗರದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದೆ. ಈ ಸಂಘಟನೆಯ ಬೆಳವಣಿಗೆಗೆ ಸ್ಥಳೀಯ ಸಂಸ್ಥೆಗಳು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಹ ಕೈಜೋಡಿಸುತ್ತಿರುವುದು ಮತ್ತೊಂದು ವಿಶೇಷ.
ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನೆಗೆ ಕೇವಲ ಇದೊಂದು ಹಬ್ಬವಲ್ಲ. ರಾಷ್ಟ್ರಾಭಿಮಾನ, ಸ್ವಾಭಿಮಾನ, ಪ್ರತಿಷ್ಠೆ ಹಾಗೂ ಸಾರ್ವಭೌಮತ್ವದ ಸಂಕೇತವಾಗಿದೆ. ಈ ಹಿನ್ನಲೆಯಲ್ಲಿ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜನೆ ಮಾಡುವುದು ಎಂದರೆ ಸವಾಲಿನ ಕೆಲಸವಾಗಿದೆ. ಈ ಸಂಘಟನೆ ನೇತೃತ್ವ ವಹಿಸಿ ಮುನ್ನಡೆಸುವವರು ಸಹ ಹೆಚ್ಚು ಶ್ರಮಪಡಬೇಕಾಗುತ್ತಿದೆ. ಕಳೆದ ಸುಮಾರು ೩೦ಕ್ಕೂ ಹೆಚ್ಚು ವರ್ಷಗಳಿಂದ ಹಿರಿಯ ನಗರಸಭಾ ಸದಸ್ಯ, ಬಿಜೆಪಿ ಮುಖಂಡ ವಿ. ಕದಿರೇಶ್ ಸಾರಥ್ಯ ವಹಿಸಿಕೊಂಡಿದ್ದಾರೆ. ಸರಿ ಸಮಾರು ೬೫ರ ಇಳಿವಯಸ್ಸಿನಲ್ಲೂ ಬತ್ತದ ಅವರ ಉತ್ಸಾಹ ಯುವಕರಿಗೆ ಸ್ಪೂರ್ತಿದಾಯಕವಾಗಿದೆ.
೯ ದಿನಗಳವರೆಗೆ ಪ್ರತಿಷ್ಠಾಪನೆ : ಸಡಗರ ಸಂಭ್ರಮದ ಆಚರಣೆ
ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಈ ಬಾರಿ ಆ.೩೧ ರಂದು ನಡೆಯಲಿದ್ದು, ಸೆ.೮ರಂದು ವಿಸರ್ಜನೆ ನಡೆಯಲಿದೆ. ೯ ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ೫೦ನೇ ವರ್ಷದ ಅಂಗವಾಗಿ ಪ್ರತಿ ದಿನ ಸಂಜೆ ೬.೩೦ರಿಂದ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಸೆ.೧ರಂದು ಕಾರ್ಯಕ್ರಮಗಳಸುವರ್ಣ ಸಂಭ್ರಮದ ಹಿಂದೂ ಜಾಗೃತಿ ಸಭೆ ನಡೆಯಲಿದ್ದು, ಹಿಂದು ವಾಗ್ಮಿ ಚೈತ್ರ ಕುಂದಾಪುರ ಹಾಗೂ ಬಾಲವಾಗ್ಮಿ ಹರಿಕಾ ಮಂಜುನಾಥ್, ಸೆ.೨ರಂದು ಬಿಗ್‌ಬಾಸ್ ಖ್ಯಾತಿಯ ರಾಜ್ಯ ಸರ್ಕಾರದ ಪ್ರಶಸ್ತಿ ಪುರಸ್ಕೃತೆ ಮೈಸೂರಿನ ಪ್ರಥಮ ಮಹಿಳಾ ಕಲಾವಿದೆ ಸುಮರಾಜ್ ಕುಮಾರ್ ಅವರಿಂದ ಹಾಸ್ಯಮಯ ಜಾದು ಹಾಗು ಮಾತನಾಡುವ ಗೊಂಬೆ ಪ್ರದರ್ಶನ ನಡೆಯಲಿದೆ. ಸೆ.೩ರಂದು ಚರಣ್ ಸಂಗೀತ ಆರ್ಕೇಸ್ಟ್ರಾ, ಸೆ.೪ರಂದು ಸುಧಾ ಬರಗೂರು ಮತ್ತು ತಂಡದಿಂದ ನಗೆ ಹಬ್ಬ, ಸೆ.೫ ರಂದು ಕಾಮಿಡಿ ಕಿಲಾಡಿಗಳು ಕೆ.ಆರ್ ಪೇಟೆ ಶಿವರಾಜ್ ಮತ್ತು ನಯನ ತಂಡದವರಿಂದ ಹಾಸ್ಯ ಸಂಜೆ ಮತ್ತು ಸೆ.೬ರಂದು ಜೀ ಟಿವಿ ಖ್ಯಾತಿಯ ಮಂಗಳೂರಿನ ರಾಜ್‌ಶೆಟ್ಟಿ ನೃತ್ಯ ತಂಡದವರಿಂದ ಡ್ಯಾನ್ಸ್ ನೈಟ್ ಹಾಗು ಸೆ.೭ರಂದು ಬೆಳಿಗ್ಗೆ ೯ ಗಂಟೆಗೆ ಗಣಹೋಮ ಮತ್ತು ಸಮುದಾಯ ಭವನ ಲೋಕಾರ್ಪಣೆ, ಅನ್ನಸಂತರ್ಪಣೆ ನಂತರ ಹಿಂದೂ ಧಾರ್ಮಿಕ ಸಭೆ ನಡೆಯಲಿದೆ.
ಭದ್ರಾವತಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ ಸೇನಾ ವತಿಯಿಂದ ಹಮ್ಮಿಕೊಳ್ಳಲಾಗಿರುವ ೫೦ನೇ ವರ್ಷದ ವಿನಾಯಕ ಚತುರ್ಥಿ ಹಿನ್ನಲೆಯಲ್ಲಿ ರಂಗಪ್ಪ ವೃತ್ತದಲ್ಲಿ ಸುಮಾರು ೫೦ ಅಡಿ ಎತ್ತರ ಶ್ರೀ ಆಂಜನೇಯ ಸ್ವಾಮಿಯ ದ್ವಾರ ಬಾಗಿಲು ನಿರ್ಮಿಸುತ್ತಿರುವುದು. ಅಧ್ಯಕ್ಷರು ಹಾಗು ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿರುವುದು.
೫೦ ಅಡಿ ಎತ್ತರದ ಶ್ರೀ ಆಂಜನೇಯ ಸ್ವಾಮಿ ದ್ವಾರಬಾಗಿಲು :
ಪ್ರತಿ ವರ್ಷ ನಗರದ ಪ್ರಮುಖ ವೃತ್ತಗಳಲ್ಲಿ ಹಬ್ಬದ ಅಂಗವಾಗಿ ಬೃಹತ್ ದ್ವಾರಬಾಗಿಲುಗಳನ್ನು ನಿರ್ಮಿಸಲಾಗುತ್ತಿದೆ. ಈ ಬಾರಿ ವಿಶೇಷವಾಗಿ ರಂಗಪ್ಪ ವೃತ್ತದ ಹೊಸಮನೆ ಮುಖ್ಯರಸ್ತೆಯಲ್ಲಿ ಸುಮಾರು ೫೦ ಅಡಿ ಎತ್ತರದ ಆಕರ್ಷಕವಾದ ಶ್ರೀ ಆಂಜನೇಯ ಸ್ವಾಮಿ ದ್ವಾರಬಾಗಿಲು ನಿರ್ಮಿಸಲಾಗುತ್ತಿದ್ದು, ಉಳಿದಂತೆ ಮಾಧವಚಾರ್ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಹಿಂದೂ ರಾಷ್ಟ್ರ ನಿರ್ಮಾಣದ ನಾಯಕರ ಭಾವಚಿತ್ರಗಳೊಂದಿಗೆ ಬೃಹತ್ ದ್ವಾರಬಾಗಿಲುಗಳು ನಿರ್ಮಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಹಬ್ಬದ ಸಂಭ್ರಮಕ್ಕೆ ಹೆಚ್ಚುತ್ತಿದೆ. ಕಳೆದ ಸುಮಾರು ೨ ವರ್ಷಗಳಿಂದ ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಹಬ್ಬದ ಸಂಭ್ರಮ ಕ್ಷೀಣಿಸಿತ್ತು. ಈ ಬಾರಿ ಪುನಃ ಹಬ್ಬದ ಎಲ್ಲೆಡೆ ಕಂಡು ಬರುತ್ತಿದೆ.
ಸುಮಾರು ೩೦ ವರ್ಷಗಳಿಂದ ಒಂದೇ ಕುಟುಂಬದಿಂದ ಮೂರ್ತಿ ತಯಾರಿಕೆ :
ಹಳೇನಗರದ ಕುಂಬಾರರ ಬೀದಿ ನಿವಾಸಿ ಬಿ.ಎಸ್ ರುದ್ರಪ್ಪ ಕಳೆದ ಸುಮಾರು ೩೦ ವರ್ಷಗಳಿಂದ ಹಿಂದೂ ಮಹಾಸಭಾ ವಿನಾಯಕ ಮೂರ್ತಿ, ಮಾಧವಚಾರ್ ವೃತ್ತದ ವಿನಾಯಕ ಮೂರ್ತಿ ಸೇರಿದಂತೆ ನಗರದ ಪ್ರಮುಖ ದೊಡ್ಡ ವಿನಾಯಕ ಮೂರ್ತಿಗಳನ್ನು ಇವರು ತಯಾರಿಸಿಕೊಡುತ್ತಿದ್ದಾರೆ. ಅಲ್ಲದೆ ಇವರ ತಂದೆ ಸಿದ್ದಪ್ಪ ಸಹ ಇದೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ಭದ್ರಾವತಿ ಹಳೇನಗರದ ಕುಂಬಾರರ ಬೀದಿಯ ಬಿ.ಎಸ್ ರುದ್ರಪ್ಪನವರ ಮನೆಯಲ್ಲಿ ತಯಾರಾಗುತ್ತಿರುವ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ಈ ಪ್ರತಿಷ್ಠಾಪಿಸಲಿರುವ ವಿನಾಯಕ ಮೂರ್ತಿ.
ಹಿಂದೂ ಸಂಘ ಪರಿವಾರಗಳ ಕಾವಲು:
ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಕಾರ್ಯದಿಂದ ಹಿಡಿದು ವಿಸರ್ಜನೆವರೆಗೂ ಸಂಘ ಪರಿವಾರಗಳಾದ ಆರ್‌ಎಸ್‌ಎಸ್, ಬಜರಂಗದಳ, ಕೇಸರಿಪಡೆ, ಹಿಂದೂ ಪಡೆ ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹಿಂದುಪರ ಸಂಘಟನೆಗಳು ಕಾವಲು ನಿಂತು ಯಶಸ್ವಿಗೆ ಮುಂದಾಗುವ ಮೂಲಕ ಹಿಂದೂತ್ವದ ಬಹುದೊಡ್ಡ ಶಕ್ತಿಯೇ ಇಲ್ಲಿ ಅನಾವರಣಗೊಳ್ಳುತ್ತದೆ.
ವಿಸರ್ಜನೆಯಲ್ಲಿ ಸಾವಿರಾರು ಮಂದಿ ಬಾಗಿ:
ಪ್ರತಿವರ್ಷ ವಿನಾಯಕ ಮೂರ್ತಿ ವಿಸರ್ಜನೆಯಲ್ಲಿ ಸ್ವಯಂ ಪ್ರೇರಣೆಯಿಂದ ಸಾವಿರಾರು ಮಂದಿ ಕನಿಷ್ಠ ೧೦ ಸಾವಿರದಿಂದ ಗರಿಷ್ಠ ೩೦ ಸಾವಿರದ ವರೆಗೆ ಪಾಲ್ಗೊಳ್ಳುತ್ತಾರೆ. ಭಕ್ತರಿಂದ ಹಲವು ಸೇವೆಗಳು ಸಹ ಸ್ವಯಂ ಪ್ರೇರಣೆಯಿಂದ ಜರುಗುತ್ತವೆ. ಇವೆಲ್ಲವೂ ವಿಶೇಷ ಎಂದರೆ ತಪ್ಪಾಗಲಾರದು. ಭಕ್ತಿಯೋ, ಧರ್ಮ ಪ್ರೇಮವೋ, ರಾಷ್ಟ್ರ ಪ್ರೇಮವೋ ಒಟ್ಟಾರೆ ಒಂದು ದೈತ್ಯ ಶಕ್ತಿ ಅನಾವರಣಗೊಂಡು ಐಕ್ಯತೆಗೆ ಕಾರಣವಾಗುತ್ತಿದೆ.
ಉಳಿದ ದೇಣಿಗೆ ಹಣ ಸೇವಾ ಕಾರ್ಯಗಳಿಗೆ:
ಭಕ್ತರಿಂದ ಹಾಗೂ ದಾನಿಗಳಿಂದ ಸಂಗ್ರಹವಾಗುವ ದೇಣಿಗೆ ಹಣದಲ್ಲಿ ಪ್ರತಿವರ್ಷ ಅದ್ದೂರಿಯಾಗಿ ಹಬ್ಬ ಆಚರಣೆ ಮಾಡುವುದರೊಂದಿಗೆ ಉಳಿದ ಹಣವನ್ನು ಹಲವಾರು ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತಿದೆ. ಅಲ್ಲದೆ ಸುಮಾರು ೧ ಕೋ. ರು.ಗಳಿಗೆ ಅಧಿಕ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಇದುವರೆಗೂ ಖರ್ಚು-ವೆಚ್ಚಗಳಲ್ಲಿ ಯಾವುದೇ ಗೊಂದಲ ಉಂಟಾಗದಿರುವುದು ಸಂಘಟನೆಯಲ್ಲಿ ಪಾರದರ್ಶಕತೆಯನ್ನು ಎತ್ತಿ ತೋರಿಸುತ್ತದೆ.
ಬಿಗಿ ಪೊಲೀಸ್ ಭದ್ರತೆ:
ಕಳೆದ ಸುಮಾರು ೨೫ ವರ್ಷಗಳಿಂದ ವಿನಾಯಕ ಮೂರ್ತಿ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೂ ಬಿಗಿ ಪೊಲೀಸ್ ಬಂದೋಬಸ್ತ್ ಕಂಡು ಬರುತ್ತಿದೆ. ಈ ಹಿಂದಿಗಿಂತಲೂ ಪ್ರಸ್ತುತ ಇನ್ನೂ ಹೆಚ್ಚಿನ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಗಣಪತಿ ಹಬ್ಬ ಯಶಸ್ವಿಗೊಳಿಸುವುದು ಸಂಘಟನೆಗೆ ಮಾತ್ರವಲ್ಲ ಪೊಲೀಸರಿಗೂ ದೊಡ್ಡ ಸವಾಲಾಗಿ ಬಿಟ್ಟಿದೆ.
ಭದ್ರಾವತಿ ಹಳೇನಗರದದ ಕುಂಬಾರರ ಬೀದಿಯಲ್ಲಿರುವ ಮೂರ್ತಿ ತಯಾರಕ ಬಿ.ಎಸ್ ರುದ್ರಪ್ಪ ಮತ್ತು ಕುಟುಂಬದವರು.
ಕಳೆದ ೫೦ ವರ್ಷಗಳ ಹಿಂದೆ ಈ ಭಾಗದಲ್ಲಿ ಅನೇಕ ಮುಖಂಡರು ಒಗ್ಗೂಡಿ ಹಿಂದೂ ಸಂಘಟನೆಗಾಗಿ ಹೋರಾಟ ನಡೆಸಬೇಕಾಯಿತು. ಈ ಸಂಬಂಧ ಜೈಲಿಗೂ ಸಹ ಹೋಗಬೇಕಾಯಿತು. ಜೈಲಿನಿಂದ ಬಿಡುಗಡೆಗೊಂಡ ನಂತರ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಘಟನೆಯನ್ನು ಬಲಪಡಿಸಲಾಯಿತು. ಅಂದಿನಿಂದ ಇಂದಿನವರೆಗೂ ಯಾವುದೇ ಅಡೆತಡೆಗಳಿಲ್ಲದೆ ನಡೆಸಿಕೊಂಡು ಬರಲಾಗುತ್ತಿದೆ.
- ವಿ. ಕದಿರೇಶ್, ಅಧ್ಯಕ್ಷರು, ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ.
ವಿನಾಯಕ ಮಹೋತ್ಸವದ ವೈಭವ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದ ಸುಮಾರು ೧೦ ವರ್ಷಗಳಿಂದ ಸಮಿತಿ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದಿನ ಕೆಲವು ವರ್ಷಗಳ ವರೆಗೆ ಸುಮಾರು ೭ ರಿಂದ ೮ ಲಕ್ಷ ರು. ಒಟ್ಟು ವೆಚ್ಚವಾಗುತ್ತಿತ್ತು. ಈ ಬಾರಿ ೫೦ನೆ ವರ್ಷದ ಹಿನ್ನಲೆಯಲ್ಲಿ ಇದರ ವೆಚ್ಚ ಎರಡು ಪಟ್ಟು ಅಂದರೆ ಸುಮಾರು ೧೫ ರಿಂದ ೧೬ ಲಕ್ಷ ವೆಚ್ಚವಾಗುವ ನಿರೀಕ್ಷೆ ಇದೆ.
- ಮಣಿ ಎಎನ್‌ಎಸ್, ಖಜಾಂಚಿ, ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ.
ನನ್ನ ತಂದೆ ಕಾಲದಿಂದಲೂ ನಗರದ ಪ್ರಮುಖ ದೊಡ್ಡ ದೊಡ್ಡ ಮೂರ್ತಿಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಪ್ರತಿ ವರ್ಷ ೩೦೦ ರಿಂದ ೪೦೦ ಮೂರ್ತಿಗಳನ್ನು ತಯಾರಿಸುತ್ತಿದ್ದು, ನಮಗೆ ಮೂರ್ತಿಗಳ ತಯಾರಿಕೆಯಿಂದ ಇದುವರೆಗೂ ಇದುವರೆಗೂ ಯಾವುದೇ ರೀತಿ ನಷ್ಟ ಉಂಟಾಗಿಲ್ಲ. ಎಲ್ಲಾ ಮೂರ್ತಿಗಳು ಮಾರಾಟವಾಗುತ್ತವೆ.
ಭದ್ರಾವತಿ ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ಸಿ.ಎನ್ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಹನಿ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಭಾನುವಾರ ಮಾಜಿ ರೂಪದರ್ಶಿ, ಚಲನಚಿತ್ರ ನಟಿ ಆಶಾಭಟ್ ಉದ್ಘಾಟಿಸಿದರು. ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ, ಆ. ೨೮: ಕೇಶ ವಿನ್ಯಾಸ, ಸೌಂದರ್ಯ ವರ್ಧನೆ ಕ್ಷೇತ್ರದ ಉನ್ನತ ಮಟ್ಟದ ಸೌಲಭ್ಯಗಳು ಸ್ಥಳೀಯವಾಗಿ ಲಭ್ಯವಾಗುವ ಮೂಲಕ ಈ ಕ್ಷೇತ್ರದಲ್ಲೂ ಭದ್ರಾವತಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕೆಂದು ಮಾಜಿ ರೂಪದರ್ಶಿ, ಚಲನಚಿತ್ರ ನಟಿ ಆಶಾಭಟ್ ಹೇಳಿದರು.
ಅವರು ಭಾನುವಾರ ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ಸಿ.ಎನ್ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಹನಿ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಉದ್ಘಾಟಿಸಿ ಮಾತನಾಡಿದರು.
ಕೇಶ ವಿನ್ಯಾಸ, ಸೌಂದರ್ಯ ವರ್ಧನೆ ಕೇವಲ ವ್ಯವಹಾರಕ್ಕೆ ಸೀಮಿತವಾಗದೆ ಈ ಕ್ಷೇತ್ರದಲ್ಲಿ ಇತರರು ಸಹ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಉದ್ಯೋಗ ಸೃಷ್ಟಿಸಿಕೊಡಬೇಕು. ಆ ಮೂಲಕ ಸಾರ್ಥಕ ಸೇವೆ ಸಲ್ಲಿಸಬೇಕೆಂದರು. ಈ ನಿಟ್ಟಿನಲ್ಲಿ ನೂತನ ಆರಂಭಗೊಂಡಿರುವ ಹನಿ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಸಹಕಾರಿಯಾಗಿದೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಉದ್ಯಮಿ ಬಿ.ಕೆ ಜಗನ್ನಾಥ್, ಸೂಡಾ ಸದಸ್ಯೆ ಹೇಮಾವತಿ ವಿಶ್ವನಾಥ್, ಸುಂದರ್ ಬಾಬು, ಎಂ.ಎಸ್ ರವಿ, ಅನ್ನಸತೀಶ್, ರಾಜ್‌ಕುಮಾರ್, ಅಬಿದ್‌ಆಲಿ, ಹನಿ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ ಮಾಲೀಕರಾದ ಸವಿತಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ
ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಜಾನುವಾರು ಸಂತೆಗೆ ಚಾಲನೆ ನೀಡಿದರು.
ಭದ್ರಾವತಿ, ಆ. ೨೮: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಹೈನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ೨ ದಿನ ಜಾನುವಾರು ಸಂತೆ ನಡೆಸಲು ಅನುಮತಿ ನೀಡುವ ಮೂಲಕ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
ಅವರು ಭಾನುವಾರ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರು ಸಂತೆಗೆ ಚಾಲನೆ ನೀಡಿ ಮಾತನಾಡಿದರು.
ಮಾರುಕಟ್ಟೆಯಲ್ಲಿ ಇದೀಗ ಒಂದು ರೀತಿಯ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಾನುವಾರು ಸಂತೆ ಪುನಃ ಆರಂಭಗೊಂಡಿರುವುದು ರೈತರು ಹಾಗು ವ್ಯಾಪಾರಸ್ಥರಲ್ಲಿ ಸಂತಸವನ್ನುಂಟು ಮಾಡಿದೆ. ಅಲ್ಲದೆ ಇಬ್ಬರು ಒಂದೆಡೆ ಸೇರಲು ಅನುಕೂಲವಾಗಿದೆ. ಜಾನುವಾರು ಸಂತೆ ಕೇವಲ ಭಾನುವಾರಕ್ಕೆ ಮಾತ್ರ ಸೀಮಿತವಾಗಬಾರದು. ಶನಿವಾರ ಮತ್ತು ಭಾನುವಾರ ೨ ದಿನ ಸಹ ಸಂತೆ ನಡೆಯಲು ಅವಕಾಶ ಮಾಡಿಕೊಡಬೇಕು. ಪಶು ಇಲಾಖೆ ವೈದ್ಯರು ಹಾಗು ಸಿಬ್ಬಂದಿಗಳು ರೈತರಿಗೆ ಇಲಾಖೆಯಿಂದ ಲಭ್ಯವಿರುವ ಸೇವೆಗಳನ್ನು ಕಲ್ಪಿಸಿಕೊಡಬೇಕು. ಜಾನುವಾರುಗಳ ಆರೋಗ್ಯ ಹಾಗು ಆರೈಕೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಮುಂದಿನ ದಿನಗಳಲ್ಲಿ ರೈತರು ಹಾಗು ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಸಂಘವನ್ನು ನೋಂದಾಯಿಸಿ ಕೊಡಲಾಗುವುದು. ಅಲ್ಲದೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಎಂದು ಭರವಸೆ ನೀಡಿದರು.
ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ಮಾತನಾಡಿ, ಜಾನುವಾರು ಸಂತೆಯೇ ಒಂದು ರೀತಿಯ ರೋಮಾಂಚಕಾರಿಯಾಗಿದೆ. ರೈತರು ಹಾಗು ವ್ಯಾಪಾರಸ್ಥರು ಒಂದೆಡೆ ಸೇರುವ ಹಾಗು ವ್ಯಾಪಾರ ನಡೆಸುವ ಪರಿ ನೋಡಿ ಕಣ್ತುಂಬಿಕೊಳ್ಳುವ ದಿನಗಳು ಪುನಃ ಆರಂಭಗೊಂಡಿರುವುದು ಸಂತಸವನ್ನುಂಟು ಮಾಡಿದೆ. ಮಾರುವವರು ಹಾಗು ಕೊಳ್ಳುವವರು ಒಂದೆಡೆ ಸೇರುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಸೂಕ್ತ ಬೆಲೆಗೆ ಕೊಂಡುಕೊಳ್ಳುವ ಅಥವಾ ಮಾರಾಟ ಮಾಡುವ ಅವಕಾಶ ಲಭಿಸುತ್ತದೆ. ಮಾರುಕಟ್ಟೆಯಿಂದ ಹೊರಗೆ ವ್ಯವಹಾರ ನಡೆಸುವುದರಿಂದ ರೈತರು ಹಾಗು ವ್ಯಾಪಾರಸ್ಥರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಜಾನುವಾರು ಸಂತೆ ನಿರಂತರವಾಗಿ ಮುನ್ನಡೆಯಬೇಕು. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಸಂತೆ ನಡೆಯುವಂತಾಗಬೇಕೆಂದರು.
ಹಿರಿಯ ಪತ್ರಕರ್ತ ಕಣ್ಣಪ್ಪ ಮಾತನಾಡಿ, ಭದ್ರಾವತಿ ಸಂತೆ ಎಂದರೆ ಎಲ್ಲೆಡೆ ಹೆಸರುವಾಸಿಯಾಗಿದೆ. ಈ ಹಿಂದೆ ಹಳೇ ಸಂತೆ ಮೈದಾನದಲ್ಲಿ ಜಾನುವಾರು, ಕುರಿ ಸಂತೆ ನಡೆಯುತ್ತಿತ್ತು. ಜಾನುವಾರು, ಕುರಿ ಸಂತೆ ಪ್ರತ್ಯೇಕವಾಗಿ ನಡೆಸುವಂತೆ ಕಾನೂನು ರೂಪುಗೊಂಡ ನಂತರ ನಗರಸಭೆ ಆಡಳಿತ ಜಾನುವಾರು, ಕುರಿ ಸಂತೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಿತು. ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಎಲ್ಲರ ಆರೋಗ್ಯ ದೃಷ್ಟಿಯಿಂದ ಜಾನುವಾರು ಸಂತೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಪುನಃ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೇ ಮಾದರಿ ಸಂತೆಯಾಗಿ ರೂಪುಗೊಳ್ಳಬೇಕೆಂದರು.
ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಬಿ.ಎಂ ಮಂಜುನಾಥ್, ಪೌರಾಯುಕ್ತ ಮನುಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮಹೇಶ್, ಯುವ ಮುಖಂಡ ಬಿ.ಎಸ್ ಗಣೇಶ್ ಹಾಗು ಹಿರಿಯ ರೈತ ಮುಖಂಡರು ಉಪಸ್ಥಿತರಿದ್ದರು.
ಜಾನುವಾರು ಸಂತೆಯಲ್ಲಿ ಮೊದಲ ದಿನವೇ ಭರ್ಜರಿ ವಹಿವಾಟು ನಡೆದಿದ್ದು, ವಿವಿಧಡೆಗಳಿಂದ ರೈತರು, ವ್ಯಾಪಾರಸ್ಥರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದರು.
ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಭಾನುವಾರ ನಡೆದ ಜಾನುವಾರು ಸಂತೆಯಲ್ಲಿ ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಸದಸ್ಯ ಬಿ.ಕೆ ಮೋಹನ್, ಪೌರಾಯುಕ್ತ ಮನುಕುಮಾರ್ ಹಾಗು ರೈತರ ಸಮ್ಮುಖದಲ್ಲಿ ಜಾನುವಾರು ಖರೀದಿ ಪ್ರಕ್ರಿಯೆ ನಡೆಯಿತು.
ಹೈನುಗಾರಿಕೆ, ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಜಾನುವಾರುಗಳ ಮಾರಾಟ
ಭದ್ರಾವತಿ, ಆ. ೨೭: ನಗರದ ಸಿ.ಎನ್ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುಮಾರು ೫-೬ ವರ್ಷಗಳ ನಂತರ ಆ.೨೮ರ ಭಾನುವಾರ ಜಾನುವಾರ ಸಂತೆ ನಡೆಸಲಾಗುತ್ತಿದೆ.
ಹೈನುಗಾರಿಕೆ ಹಾಗು ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದೀಗ ಜಾನುವಾರು ಸಂತೆ ಪ್ರತಿ ಶನಿವಾರ ನಡೆಸಲು ಉದ್ದೇಶಿಸಲಾಗಿದೆ. ೫-೬ ವರ್ಷಗಳ ಹಿಂದೆ ಕೆಲವು ಕಾರಣಾಂತರಗಳಿಂದ ಜಾನುವಾರು ಸಂತೆ ಸ್ಥಗಿತಗೊಂಡಿತು. ಎಲ್ಲಾ ರೀತಿಯ ಜಾನುವಾರುಗಳ ಮಾರಾಟ ನಡೆಯುತ್ತಿತ್ತು. ಸರ್ಕಾರ ಇದೀಗ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವ ಹಿನ್ನಲೆಯಲ್ಲಿ ರೈತರು ಮಾರುಕಟ್ಟೆಯಿಂದ ಹೊರಗೆ ಸಹ ಜಾನುವಾರುಗಳನ್ನು ಖರೀದಿಸಲು ಸಾಕಷ್ಟು ಸಮಸ್ಯೆ ಎದುರಾಗಿದೆ. ಈ ಹಿನ್ನಲೆಯಲ್ಲಿ ರೈತರು, ಜಾನುವಾರು ವ್ಯಾಪಾರಸ್ಥರು ಇತ್ತೀಚೆಗೆ ಸಭೆ ನಡೆಸಿ ಜಾನುವಾರ ಸಂತೆ ನಡೆಸಲು ನಿರ್ಧರಿಸಿದ್ದಾರೆ.
ಮಧ್ಯವರ್ತಿಗಳಿಗೆ ಅಥವಾ ೩ನೇ ವ್ಯಕ್ತಿಗೆ ಅವಕಾಶ ನೀಡದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕ ನೇರವಾಗಿ ಖರೀದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಜಾನುವಾರುಗಳನ್ನು ನೇರವಾಗಿ ಖರೀದಿದಾರರ ಮನೆಗೆ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಸರ್ಕಾರದ ಮಾರ್ಗಸೂಚಿಗಳನ್ವಯ ಜಾನುವಾರು ಸಂತೆ ನಡೆಯಲಿದೆ. ಹೈನುಗಾರಿಕೆ ಹಾಗು ಕೃಷಿಗೆ ಅಗತ್ಯವಿರುವ ಜಾನುವಾರುಗಳ ಮಾರಾಟ ಮಾತ್ರ ನಡೆಯಲಿದೆ.
ಜಾನುವಾರು ಸಂತೆಗೆ ಬೆಳಿಗ್ಗೆ ೯ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಲಿದ್ದು, ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಅಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್, ಪೊಲೀಸ್ ನಗರ ವೃತ್ತ ನಿರೀಕ್ಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
ಹೆಚ್ಚಿನ ಮಾಹಿತಿಗೆ ಮೊ: ೮೯೭೧೬೦೩೯೬೪ ಅಥವಾ ೯೭೪೧೮೮೫೯೪೯ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.
ಭದ್ರಾವತಿ ಕಾಗದನಗರದ ಪೇಪರ್‌ಟೌನ್ ಆಂಗ್ಲ ಶಾಲೆಯಲ್ಲಿ ಕಾಗದ ನಗರ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರಜರುಗಿತು.
ಭದ್ರಾವತಿ, ಆ. ೨೭: ಪ್ರತಿಭೆ, ಸಾಧನೆ ಎಂಬುದು ಯಾರ ಸ್ವತ್ತು ಅಲ್ಲ. ಕಲಿಯುವ ಛಲ ಇದ್ದಾಗ ಮಾತ್ರ ನಾವು ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಹೇಳಿದರು.
ಅವರು ಶನಿವಾರ ಕಾಗದನಗರದ ಪೇಪರ್‌ಟೌನ್ ಆಂಗ್ಲ ಶಾಲೆಯಲ್ಲಿ ಕಾಗದ ನಗರ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಏಕಲವ್ಯನಿಗೆ ಗುರುಗಳು ವಿದ್ಯೆ ಕಲಿಸಲು ನಿರಾಕರಿಸಿದರೂ ಸಹ ಅವನು ಕಲಿಯುವ ಛಲದೊಂದಿಗೆ ತನ್ನಲ್ಲಿನ ಪ್ರತಿಭೆ ಮೂಲಕ ಸಾಧನೆಯನ್ನು ಸಾಧಿಸಿದನು. ಇಂತಹ ಮನೋಭಾವನೆ ಪ್ರತಿಯೊಬ್ಬ ವಿದ್ಯಾರ್ಥಿ ಬೆಳೆಸಿಕೊಳ್ಳಬೇಕು. ತಮ್ಮಲ್ಲಿನ ಪ್ರತಿಭೆಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ಕಲ್ಪಿಸಿಕೊಡಲಾಗಿದೆ. ಇದರ ಸದುಪಯೋಗಪಡೆದುಕೊಳ್ಳಬೇಕೆಂದರು.
ನಗರಸಭಾ ಸದಸ್ಯ ಬಸವರಾಜ ಬಿ ಆನೆಕೊಪ್ಪ ಮಾತನಾಡಿ, ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುವಲ್ಲಿ ಶಿಕ್ಷಣ ಇಲಾಖೆ ಹೆಚ್ಚಿನ ಗಮನ ನೀಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸುವ ಮೂಲಕ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವಂತಾಗಬೇಕೆಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ. ನಟರಾಜ್ ಮಾತನಾಡಿ, ಪ್ರತಿ ಮಕ್ಕಳು ಉನ್ನತ ಹುದ್ದೆ ಅಲಂಕರಿಸಬೇಕೆಂಬ ಗುರಿಯೊಂದಿಗೆ ತಮ್ಮ ಪ್ರತಿಭೆಗಳನ್ನು ಸಹ ಅನಾವರಣಗೊಳಿಸುವ ಮೂಲಕ ಮುನ್ನಡೆಯಬೇಕು. ಕೆಲವು ಮಕ್ಕಳಿಗೆ ಪ್ರತಿಭೆ ಅನಾವರಣಗೊಳಿಸಲು ಇದು ವೇದಿಕೆಯಾದರೆ ಉಳಿದ ಮಕ್ಕಳಿಗೆ ನಾವು ಸಹ ಅವರ ದಾರಿಯಲ್ಲಿ ಸಾಗಲು ಪ್ರೇರೇಪಿಸುವ ವೇದಿಕೆಯಾಗಿದೆ ಎಂದರು.
ಶಾಲೆಯ ಪ್ರಾಂಶುಪಾಲ ಆರ್. ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಪಿಎಂ ನಗರಾಡಳಿತ ಇಲಾಖೆ ವ್ಯವಸ್ಥಾಪಕ ಸತೀಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಸುಮತಿ ಕಾರಂತ್, ಶಿಕ್ಷಣ ಇಲಾಖೆಯ ಸಿ. ಚನ್ನಪ್ಪ, ಶಾಲೆಯ ಉಪಪ್ರಾಂಶುಪಾಲ ನಾಗರಾಜ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೇರಣಾ ಮತ್ತು ಪರಿಣಿತ ಪ್ರಾರ್ಥಿಸಿದರು. ಕೆ.ಎಸ್ ರಾಘವೇಂದ್ರ ನಿರೂಪಿಸಿದರು. ಸಿಆರ್‌ಪಿ ಗಿರಿಜಮ್ಮ ವಂದಿಸಿದರು. ಕಾಗದ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಶಿಕ್ಷಕರು, ಮಕ್ಕಳು, ಪೋಷಕರು ಪಾಲ್ಗೊಂಡಿದ್ದರು.
ಭದ್ರಾವತಿ, ಆ.27: ನಗರದ ರಂಗಪ್ಪ ವೃತ್ತದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಹನಿ ಯುನಿಸೆಕ್ಸ್ ಲೂನ್ ಅಂಡ್ ಸ್ಪಾ ಉದ್ಘಾಟನೆ ಆ. 28 ರಂದು ಬೆಳಗ್ಗೆ 10:30ಕ್ಕೆ ನಡೆಯಲಿದೆ. ಮಾಜಿ ರೂಪದರ್ಶಿ ಚಲನಚಿತ್ರ ನಟಿ ಆಶಾ ಭಟ್ ಉದ್ಘಾಟಿಸುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ಭದ್ರಾವತಿ, ಆ. ೨೭: ತಿಮ್ಲಾಪುರ ನಿವಾಸಿ ನಗರಸಭೆ ಮಾಜಿ ಸದಸ್ಯ ಟಿ. ರಮೇಶ್‌ರವರ ತಂದೆ, ನಿವೃತ್ತ ಕಾರ್ಮಿಕ ಮುಖಂಡ ತಿಮ್ಮೇಗೌಡ(೮೦) ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಪತ್ನಿ ಟಿ.ರಮೇಶ್ ಸೇರಿದಂತೆ ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿಯನ್ನು ಹೊಂದಿದ್ದರು. ತಿಮ್ಮೇಗೌಡರವರು ವಿಐಎಸ್‌ಎಲ್ ಕಾರ್ಖಾನೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸುವ ಜೊತೆಗೆ ಎಐಟಿಯುಸಿ ಕಾರ್ಮಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ್ದರು. ತಿಮ್ಮಗೌಡರವರು ಎಂಪಿಎಂ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಮರಿಸ್ವಾಮಿ ಅವರ ಸಹೋದರರಾಗಿದ್ದಾರೆ. ಇವರ ಅಂತ್ಯಕ್ರಿಯೆ ಹೊಸಬುಳ್ಳಾಪುರ-ಬಾಳೇಮಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ಸತ್ಯಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸುರೇಶ್, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
ಸಹಕಾರ ನೀಡಿದ ಎಲ್ಲರಿಗೂ ಗೀತಾ ಕೆ.ಜಿ ರಾಜ್‌ಕುಮಾರ್ ಕೃತಜ್ಞತೆ
ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಮಾತನಾಡಿದರು.
ಭದ್ರಾವತಿ, ಆ. ೨೬: ನಗರಸಭೆ ಅಧ್ಯಕ್ಷೆಯಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕಳೆದ ೧೦ ತಿಂಗಳು ಉತ್ತಮವಾಗಿ ಸೇವೆ ಸಲ್ಲಿಸಿದ್ದು, ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನಗರಸಭೆ ನಿರ್ಗಮಿತ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರಸಭೆಗೆ ಕಳೆದ ವರ್ಷ ಏ.೨೬ರಂದು ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ವಾರ್ಡ್ ನಂ.೨ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಮೊದಲ ಅವಧಿಯಲ್ಲಿಯೇ ನನಗೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕಾಂಗ್ರೆಸ್ ಪಕ್ಷದ ಮುಖಂಡರು, ನಗರಸಭಾ ಸದಸ್ಯರು ಅಧ್ಯಕ್ಷರಾಗಲು ಅವಕಾಶ ಕಲ್ಪಿಸಿಕೊಟ್ಟರು. ಈ ಹಿನ್ನಲೆಯಲ್ಲಿ ಅ.೧೬ರಂದು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ೧೦ ತಿಂಗಳ ಅವಧಿಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದೇನೆ ಎಂದರು.
ಕುಡಿಯುವ ನೀರು, ರಸ್ತೆ ನಿರ್ಮಾಣ, ಉದ್ಯಾನವನಗಳ ಅಭಿವೃದ್ಧಿ, ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿ, ಸುಸಜ್ಜಿತವಾದ ಖಾಸಗಿ ಬಸ್ ನಿಲ್ದಾಣ, ಪೌರಕಾರ್ಮಿಕರಿಗೆ ಗೃಹ ನಿರ್ಮಾಣ, ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ ಎಂದರು.
ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಮತ್ತು ಕೆ.ಜಿ ರಾಜ್‌ಕುಮಾರ್ ಉಪಸ್ಥಿತರಿದ್ದರು.
೧೦ ತಿಂಗಳ ಅವಧಿಯಲ್ಲಿ ಪ್ರಮುಖ ಅಭಿವೃದ್ಧಿ ಕಾರ್ಯಗಳು:-
- ನಗರೋತ್ಥಾನ ಯೋಜನೆಯಡಿ ೩೪ ಕೋ. ರು. ವೆಚ್ಚದ ಅಭಿವೃದ್ಧಿ ಕಾರ್ಯಗಳು.
- ಎಸ್‌ಎಫ್‌ಸಿ ಹಾಗು ಇತರೆ ಯೋಜನೆಯಡಿ ೭ ಕೋ.ರು. ಅನುದಾನದ ಅಭಿವೃದ್ಧಿ ಕಾರ್ಯಗಳು
- ೯೨ ಲಕ್ಷ ರು. ವೆಚ್ಚದಲ್ಲಿ ಜಯಶ್ರೀ, ಹುತ್ತಾಕಾಲೋನಿ, ಬಸವೇಶ್ವರ, ಮಾಧವಚಾರ್,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಪ್ರಗತಿ ಬಂಧು-ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಭದ್ರಾವತಿ ಹಳೇನಗರದ ಭೂತನಗುಡಿ ಶ್ರೀ ಶನೈಶ್ವರ, ಶ್ರೀ ಗಣಪತಿ, ಶ್ರೀ ಕೆಂಚಮ್ಮ ಮತ್ತು ಶ್ರೀ ಭೂತಪ್ಪ ದೇವಸ್ಥಾನದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ವಿಜೃಂಭಣೆಯಿಂದ ಜರುಗಿತು. ಧಾರ್ಮಿಕ ಸಭೆಯನ್ನು ನ್ಯಾಯವಾದಿ, ನೋಟರಿ ಆರ್.ಎಸ್ ಶೋಭಾ ಉದ್ಘಾಟಿಸಿ ಮಾತನಾಡಿದರು.
ಭದ್ರಾವತಿ, ಆ. ೨೬: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಪ್ರಗತಿ ಬಂಧು-ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಹಳೇನಗರದ ಭೂತನಗುಡಿ ಶ್ರೀ ಶನೈಶ್ವರ, ಶ್ರೀ ಗಣಪತಿ, ಶ್ರೀ ಕೆಂಚಮ್ಮ ಮತ್ತು ಶ್ರೀ ಭೂತಪ್ಪ ದೇವಸ್ಥಾನದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ವಿಜೃಂಭಣೆಯಿಂದ ಜರುಗಿತು.
ಈ ಸಂಬಂಧ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯನ್ನು ನ್ಯಾಯವಾದಿ, ನೋಟರಿ ಆರ್.ಎಸ್ ಶೋಭಾ ಉದ್ಘಾಟಿಸಿ ಮಾತನಾಡಿ, ಶ್ರಾವಣಮಾಸದಲ್ಲಿ ಮಹಿಳೆಯರಿಗೆ ಹಬ್ಬದ ಸಂಭ್ರಮ. ಮಹಿಳೆಯರು ಒಟ್ಟಾಗಿ ವರಮಹಾಲಕ್ಷ್ಮೀ ಆರಾಧಿಸುವ ಮೂಲಕ ಒಕ್ಕೂಟದ ಕಾರ್ಯ ಚಟುವಟಿಕೆಗಳಲ್ಲಿ ಯಶಸ್ಸು ಸಾಧಿಸಲು ಪ್ರಾರ್ಥಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇಂತಹ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವ ನೀಡುವ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶಯಗಳಿಗೆ ಪೂರಕವಾಗಿ ಒಕ್ಕೂಟವನ್ನು ಮುನ್ನಡೆಸಿಕೊಂಡು ಹೋಗುವಂತೆ ಸಲಹೆ ವ್ಯಕ್ತಪಡಿಸಿದರು.
ಯೋಜನಾಧಿಕಾರಿ ಪ್ರಕಾಶ್‌ನಾಯ್ಕ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರತಿಯೊಂದು ಕಾರ್ಯದ ಆರಂಭದಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ಆ ಮೂಲಕ ಎಲ್ಲರೂ ಧಾರ್ಮಿಕ ಭಾವನೆಗಳನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುತ್ತದೆ. ಧಾರ್ಮಿಕ ಮಾರ್ಗದಲ್ಲಿ ಸಾಗಿದಾಗ ಯಶಸ್ಸು ಖಂಡಿತ ಲಭಿಸುತ್ತದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಅರ್. ಕರುಣಾಮೂರ್ತಿ, ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್, ನಗರಸಭಾ ಸದಸ್ಯೆ ಅನುಸುಧಾ ಮೋಹನ್, ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ರಾಜಣ್ಣ ಸೇರಿದಂತೆ ಇನ್ನಿತರರು ಇನ್ನಿತರರು ಮಾತನಾಡಿದರು. ಒಕ್ಕೂಟದ ಅಧ್ಯಕ್ಷೆ ಯಶೋಧ ಅಧ್ಯಕ್ಷತೆ ವಹಿಸಿದ್ದರು. ನೇತ್ರಾವತಿ ಸ್ವಾಗತಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಭದ್ರಾವತಿ ದೊಡ್ಡಗೊಪ್ಪೇನಹಳ್ಳಿ (ಡಿಜಿ ಹಳ್ಳಿ) ವೈಷ್ಣವಿ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ ಗ್ರಾಮದ ಮುಖಂಡರಾದ ನಂಜುಂಡಪ್ಪ ಉದ್ಘಾಟಿಸಿದರು.
ಭದ್ರಾವತಿ, ಆ. ೨೬ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ದೊಡ್ಡಗೊಪ್ಪೇನಹಳ್ಳಿ (ಡಿಜಿ ಹಳ್ಳಿ) ವೈಷ್ಣವಿ ಜ್ಞಾನ ವಿಕಾಸ ಕೇಂದ್ರದಲ್ಲಿ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಗ್ರಾಮದ ಮುಖಂಡರಾದ ನಂಜುಂಡಪ್ಪ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಹಳೇನಗರದ ಉದ್ಗೀಥ ಆಯುರ್ವೇದ ಮತ್ತು ಪಂಚಕರ್ಮ ಚಿಕಿತ್ಸಾಲಯದ ವೈದ್ಯ ಡಾ. ಸುದರ್ಶನ್ ಆಚಾರ್, ಸಿರಿಧಾನ್ಯಗಳ ಪರಿಚಯ ತಿಳಿಸಿ, ಸಿರಿಧಾನ್ಯಗಳಿಂದ ಮಾಡಬಹುದಾದ ವಿವಿಧ ಖಾದ್ಯಗಳು, ಆರೋಗ್ಯ ಕಾಪಾಡಿಕೊಳ್ಳಲು ಸಿರಿಧಾನ್ಯ ಬಳಕೆಯ ವಿಧಾನಗಳು ಹಾಗು ಸಿರಿಧಾನ್ಯ ಬಳಕೆಯಿಂದ ಆರೋಗ್ಯದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಸಿರಿಧಾನ್ಯ ಮೇಲ್ವಿಚಾರಕ ನಾಗರಾಜ್, ಸಿರಿಧಾನ್ಯ, ಪೌಷ್ಠಿಕ ಆಹಾರದ ಅಗತ್ಯತೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಮಿಲೆಟ್ ಕುರಿತು ಮಾಹಿತಿ ನೀಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸ್ವಸಹಾಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಶೀಲಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಭದ್ರಾವತಿ ತಾಲೂಕಿನ ಗೋಣಿಬೀಡು ಮಲ್ಲಿಗೇನಹಳ್ಳಿ ಶ್ರೀ ನವನಾಗ ಬ್ರಹ್ಮ ದತ್ತ ಕ್ಷೇತ್ರ ಸೇವಾ ಟ್ರಸ್ಟ್ ವತಿಯಿಂದ ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಶ್ರೀ ಅವದೂತ ವಿನಯ್ ಗುರೂಜಿ ರವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಮಲ್ಲಿಗೇನಹಳ್ಳಿ ಅಂಗನವಾಡಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ನಡೆಯಿತು.
ಭದ್ರಾವತಿ, ಆ. ೨೫ : ತಾಲೂಕಿನ ಗೋಣಿಬೀಡು ಮಲ್ಲಿಗೇನಹಳ್ಳಿ ಶ್ರೀ ನವನಾಗ ಬ್ರಹ್ಮ ದತ್ತ ಕ್ಷೇತ್ರ ಸೇವಾ ಟ್ರಸ್ಟ್ ವತಿಯಿಂದ ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಶ್ರೀ ಅವದೂತ ವಿನಯ್ ಗುರೂಜಿ ರವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಮಲ್ಲಿಗೇನಹಳ್ಳಿ ಅಂಗನವಾಡಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ನಡೆಯಿತು.
ಕಾರ್ಯಕ್ರಮಕ್ಕೆ ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ಚಾಲನೆ ನೀಡಿದರು. ಶ್ರೀ ನವನಾಗ ಬ್ರಹ್ಮ ದತ್ತ ಕ್ಷೇತ್ರ ಸೇವಾ ಟ್ರಸ್ಟ್ ವತಿಯಿಂದ ಮಲ್ಲಿಗೇನಹಳ್ಳಿ ಗೋಣಿಬೀಡು ಕ್ಷೇತ್ರದ ಆವರಣದಲ್ಲಿ ಪುಣ್ಯಕೋಟಿ ಎಂಬ ಗೋಶಾಲೆ ಆರಂಭಿಸುವ ಕುರಿತು ಮಾಹಿತಿ ನೀಡಲಾಯಿತು.
ವಿನಯ್ ಗುರೂಜಿ ಭಕ್ತ ವೃಂದದವರು ಹಾಗು ಗ್ರಾಮಸ್ಥರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಭದ್ರಾವತಿ ತಾಲೂಕು ಶಾಮಿಯಾನ ಮಾಲೀಕರ ಸಂಘದ ಅಧ್ಯಕ್ಷರಾಗಿ ಆನೇಕೊಪ್ಪ ಎಂಪಿಎಂ ಬಡಾವಣೆಯ ಸಂತೋಷ್ ಶಾಮಿಯಾನ ಮಾಲೀಕ ಹಾಗು ಬಿಜೆಪಿ ಪಕ್ಷದ ಯುವ ಮುಖಂಡ ಸಂತೋಷ್ ೨ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭದ್ರಾವತಿ, ಆ. ೨೫: ತಾಲೂಕು ಶಾಮಿಯಾನ ಮಾಲೀಕರ ಸಂಘದ ಅಧ್ಯಕ್ಷರಾಗಿ ಆನೇಕೊಪ್ಪ ಎಂಪಿಎಂ ಬಡಾವಣೆಯ ಸಂತೋಷ್ ಶಾಮಿಯಾನ ಮಾಲೀಕ ಹಾಗು ಬಿಜೆಪಿ ಪಕ್ಷದ ಯುವ ಮುಖಂಡ ಸಂತೋಷ್ ೨ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂತೋಷ್ ಸಂಘದ ಅಧ್ಯಕ್ಷರಾಗಿ ಮೊದಲ ಅವಧಿಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ್ದು, ಈ ಹಿನ್ನಲೆಯಲ್ಲಿ ೨ನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂತೋಷ್ ವಿವಿಧ ಸಂಘ-ಸಂಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಹಲವಾರು ಸಮಾಜಮುಖಿ ಸೇವಾಕಾರ್ಯಗಳನ್ನು ಕೈಗೊಂಡಿದ್ದಾರೆ.
ಉಳಿದಂತೆ ಸಂಘದ ಉಪಾಧ್ಯಕ್ಷರಾಗಿ ಎಸ್‌ವಿಎಸ್ ಶಾಮಿಯಾನದ ಸುರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಸನ್ನಿ ಡಿಸೋಜ, ಸಹಕಾರ್ಯದರ್ಶಿಯಾಗಿ ಹೆಬ್ಬಂಡಿ ರಸ್ತೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಶಾಮಿಯಾನದ ರವಿ, ಖಜಾಂಚಿಯಾಗಿ ಹಳೇನಗರದ ವಿನಾಯಕ ಸೌಂಡ್ಸ್‌ನ ಶಾಮಣ್ಣ ಹಾಗು ಗೌರವಾಧ್ಯಕ್ಷರಾಗಿ ನೂರ್ ಶಾಮಿಯಾನದ ಅಸ್ಲಾಂ ಮತ್ತು ನಿರ್ದೇಶಕರಾಗಿ ಕೂಡ್ಲಿಗೆರೆ ಸಾಜನ್ ಶಾಮಿಯಾನದ ಅಕ್ಬರ್ ಸಾಬ್, ಚಂದ್ರಾಲಯದ ರಮೇಶ್(ಸುರಗಿತೋಪು), ಬೀರೇಶ್ವರ ಶಾಮಿಯಾನದ ಸಂಜು, ಪಾರ್ವತಿ ಶಾಮಿಯಾನದ ಮಹದೇವ, ಬಿಆರ್‌ಪಿ ಶಾಮಿಯಾನದ ಯಲ್ಲಪ್ಪ, ಬಾರಂದೂರು ಬಿಎಂಕೆ ಶಾಮಿಯಾನದ ಕುಮಾರ್, ಜೆಎಂಜೆ ಶಾಮಿಯಾನದ ಬ್ಯಾಪ್ಟಿಸ್ಟ್, ಲೈಟಿಂಗ್ಸ್ ರಮೇಶ್(ಸೀಗೆಬಾಗಿ) ಮತ್ತು ಉಜ್ಜನಿಪುರ ವೆಂಕಟೇಶ್ವರ ಸೌಂಡ್ಸ್‌ನ ಶ್ರೀನಿವಾಸ್ ಸೇರಿದಂತೆ ಒಟ್ಟು ೧೨ ಜನ ಆಯ್ಕೆಯಾಗಿದ್ದಾರೆ.
ಭದ್ರಾವತಿ ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರುಗಿತೋಪಿನ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ದೇವಸ್ಥಾನದ ಮಳಿಗೆಗಳ ಉದ್ಘಾಟನೆ ಸಂದರ್ಭದಲ್ಲಿ ಮಳಿಗೆಗಳ ನಿರ್ಮಾಣಕ್ಕೆ ಶ್ರಮಿಸಿದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಆ. ೨೫: ನಗರಸಭೆ ವಾರ್ಡ್ ನಂ.೨೦ರ ವ್ಯಾಪ್ತಿಯ ಸುರುಗಿತೋಪಿನ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ದೇವಸ್ಥಾನದ ಮಳಿಗೆಗಳನ್ನು ಉದ್ಘಾಟಿಸಲಾಯಿತು.
ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಅಸ್ತಿತ್ವಕ್ಕೆ ಬಂದ ನಂತರ ಹಲವಾರು ಅಭಿವೃದ್ಧಿ ಕಾರ್ಯಗಳು ಹಂತ ಹಂತವಾಗಿ ನಡೆಯುತ್ತಿವೆ. ಇದೀಗ ನೂತನವಾಗಿ ನಿರ್ಮಿಸಲಾಗಿರುವ ಮಳಿಗೆಗಳ ಉದ್ಘಾಟನೆ ನೆರವೇರಿಸಲಾಯಿತು. ದೇವಸ್ಥಾನದ ಅರ್ಚಕ ಮುರಳಿಧರ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಮಳಿಗೆಗಳ ನಿರ್ಮಾಣಕ್ಕೆ ಶ್ರಮಿಸಿದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರಸಭೆ ಸದಸ್ಯೆ ಜಯಶೀಲ, ಟ್ರಸ್ಟ್ ಗೌರವಾಧ್ಯಕ್ಷ ರಾಮಕೃಷ್ಣ, ಅಧ್ಯಕ್ಷ ಶಿವರಾಜ್, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಪರಮೇಶ್ ಮತ್ತು ಖಜಾಂಚಿ ರವಿ, ಮುಖಂಡ ಕ್ಲಬ್ ಸುರೇಶ್ ಸೇರಿದಂತೆ ಸ್ಥಳೀಯ ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು.
ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಯಶ್ರೀ ವೃತ್ತದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ನಗರಸಭಾ ಸದಸ್ಯೆ ನಾಗರತ್ನ ವಿತರಿಸಿದರು.
ಭದ್ರಾವತಿ, ಆ. ೨೫ : ತಾಲೂಕಿನ ಹೊಸ ಸಿದ್ದಾಪುರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಯಶ್ರೀ ವೃತ್ತದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಆರ್.ಎಸ್ ಯಶವಂತ್ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಆರ್. ಸುಶ್ಮಿತಾ ನೀತಿ ಕಥೆಯಲ್ಲಿ ಪ್ರಥಮ, ಖುಷಿ ಅಭಿನಯ ಗೀತೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ನಗರಸಭಾ ಸದಸ್ಯೆ ನಾಗರತ್ನ ವಿತರಿಸಿದರು.
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕ ಶಿವರುದ್ರಯ್ಯ, ಸಹ ಶಿಕ್ಷರುಗಳಾದ ವೈ.ಕೆ ಲಕ್ಷ್ಮಣ್, ಶಿವಕುಮಾರ್, ಕಲ್ಪನಾ, ಸುಧಾ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.
ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶ್ರೀ ಸತ್ಯಸಾಯಿ ಮಂದಿರದಲ್ಲಿ ಶಿಕ್ಷಣಾಧಿಕಾರಿಗಳು ಹಾಗು ಪದವಿನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಚೇತನ ಮಕ್ಕಳ ನ್ಯೂನ್ಯತೆಗಳ ಬಗ್ಗೆ ತಾಲೂಕಿನ ಗೃಹಾಧಾರಿತ ಮಕ್ಕಳ ಪೋಷಕರಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಶಿವಮೊಗ್ಗ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯದ್ಯ ಡಾ. ಧನಂಜಯ ಸರ್ಜಿ ಅವರನ್ನು ಸನ್ಮಾನಿಸಲಾಯಿತು.
ಭದ್ರಾವತಿ, ಆ. ೨೫ : ವಿಕಲಚೇತನ ಮಕ್ಕಳ ನ್ಯೂನ್ಯತೆಗಳು ಅವರ ಬೆಳವಣಿಗೆಗೆ ಮಾರಕವಾಗಬಾರದು. ಈ ನಿಟ್ಟಿನಲ್ಲಿ ಪೋಷಕರು ಹೆಚ್ಚಿನ ಜಾಗ್ರತೆವಹಿಸಬೇಕೆಂದು ಶಿವಮೊಗ್ಗ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯದ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಅವರು ಗುರುವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶ್ರೀ ಸತ್ಯಸಾಯಿ ಮಂದಿರದಲ್ಲಿ ಶಿಕ್ಷಣಾಧಿಕಾರಿಗಳು ಹಾಗು ಪದವಿನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಚೇತನ ಮಕ್ಕಳ ನ್ಯೂನ್ಯತೆಗಳ ಬಗ್ಗೆ ತಾಲೂಕಿನ ಗೃಹಾಧಾರಿತ ಮಕ್ಕಳ ಪೋಷಕರಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಕಲಚೇತನ ಮಕ್ಕಳ ಪೋಷಣೆಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಯಾವುದೇ ಕಾರಣಕ್ಕೂ ಇಂತಹ ಮಕ್ಕಳನ್ನು ನಿರ್ಲಕ್ಷ್ಯತನದಿಂದ ಕಾಣಬಾರದು. ಆತ್ಮಸ್ಥೈರ್ಯ ಹೆಚ್ಚಿಸುವ ಜೊತೆಗೆ ಅವರ ಆರೋಗ್ಯ ಮತ್ತು ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಇಂತಹ ಮಕ್ಕಳಿಗೆ ಪೋಷಕರೇ ಶಿಕ್ಷಕರು, ವೈದ್ಯರು ಎಲ್ಲವೂ ಆಗಿರುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕೆಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿಯ ಡಿವೈಪಿಸಿಗಳಾದ ಉಮಾಮಹೇಶ್, ಗಣಪತಿ, ಡಿಯಟ್ ಹಿರಿಯ ಉಪನ್ಯಾಸಕಿಯರಾದ ಫಾತೀಮಾ, ರೇಣುಕಾ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರಗೌಡ, ತಾಲೂಕು ಅಧ್ಯಕ್ಷ ಪೃಥ್ವಿರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೋಹನ್, ವೈದ್ಯಾಧಿಕಾರಿ ದತ್ತಾತ್ರೇಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ತೀರ್ಥಹಳ್ಳಿ ಸೊಪ್ಪುಗುಡ್ಡೆ ಶಿಕ್ಷಕ ಕುಮಾರ್ ಗೃಹಾಧಾರಿತ ಮಕ್ಕಳಿಗೆ ಫಿಜಿಯೋಥೆರಫಿ ಮಾಡುವ ಕ್ರಮದ ಬಗ್ಗೆ ಪ್ರೋಜೆಕ್ಟರ್ ಮೂಲಕ ವಿವರವಾದ ಮಾಹಿತಿಯನ್ನು ಪೋಷಕರಿಗೆ ತಿಳಿಸಿದರು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೇಣುಕಾ, ಪ್ರತಿಭಾ, ಲಿಲಿತಾಕುಮಾರಿ ಸಂಗಡಿಗರು ಪ್ರಾರ್ಥಿಸಿದರು. ಡಿ.ಎಚ್ ತೀರ್ಥಪ್ಪ ನಿರೂಪಿಸಿ, ಕವಿತ ವಂದಿಸಿದರು.
ಭದ್ರಾವತಿ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಅಧ್ಯಕ್ಷತೆಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮುಂಜಾಗ್ರತೆ ಸಭೆ ನಡೆಯಿತು.
ಭದ್ರಾವತಿ, ಆ. ೨೪: ಸಾರ್ವಜನಿಕ ಸ್ಥಳಗಳಲ್ಲಿ ಈ ಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ವಿವಿಧ ಇಲಾಖೆಗಳಿಂದ ಪರವಾನಗಿ ಪಡೆಯಲು ನಗರ ವ್ಯಾಪ್ತಿಯಲ್ಲಿ ನಗರಸಭೆ ಕಚೇರಿಯಲ್ಲಿ ಏಕ ಗವಾಕ್ಷಿ ಹಾಗೂ ಗ್ರಾಮಾಂತರ ಭಾಗದಲ್ಲಿ ಆಯಾ ಗ್ರಾಮ ಪಂಚಾಯಿತಿಯಲ್ಲಿ ನೇರವಾಗಿ ಅರ್ಜಿಗಳನ್ನು ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ.
ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಅಧ್ಯಕ್ಷತೆಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಮುಂಜಾಗ್ರತ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಗ್ರಾಮಾಂತರ ಭಾಗದಲ್ಲಿ ನೇರವಾಗಿ ಪರವಾನಗಿ ಕೋರಿ ಬರುವ ಅರ್ಜಿಗಳನ್ನು ಪರಿಶೀಲಿಸಿ ಮೆಸ್ಕಾಂ ಅಭಿಪ್ರಾಯ ಪಡೆದು ಸಂಬಂಧಿಸಿದ ಪೊಲೀಸ್ ಠಾಣೆಯಿಂದ ಕನಿಷ್ಠ ಎರಡು ದಿನಗಳಲ್ಲಿ ಅನುಮತಿ ನೀಡುವಂತೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲಿಸಿ ಕ್ರಮ ವಹಿಸಲು ಸೂಚಿಸಲಾಯಿತು.
ಪೆಂಡಾಲ್‌ಗಳಲ್ಲಿ ಆಯೋಜಕರೇ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಲು, ಅಗ್ನಿ ಅವಘಡಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲು, ಸ್ವಯಂಸೇವಕರನ್ನು ಗುರುತಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಹಾಗೂ ಸಾಧ್ಯವಾದಷ್ಟು ಪರಿಸರ ಸ್ನೇಹಿ ಮತ್ತು ರಾಸಾಯನಿಕ ಮುಕ್ತ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮತ್ತು ವಿಸರ್ಜನೆ ಸಂದರ್ಭದಲ್ಲಿ ಈಜು ತಜ್ಞರನ್ನು ನೇಮಿಸಿಕೊಳ್ಳುವಂತೆ ತಿಳಿಸಲು ಕ್ರಮ ಕೈಗೊಳ್ಳುವುದು.
ಪ್ಲೆಕ್ಸ್ ವಿಚಾರದಲ್ಲಿ ಸ್ಥಳೀಯ ಪಂಚಾಯಿತಿಗಳು ಮುನ್ನೆಚ್ಚರಿಕೆ ಕ್ರಮವಹಿಸುವುದು. ಈ ಸಂಬಂಧ ಪಂಚಾಯಿತಿ ಮಟ್ಟದಲ್ಲಿ ಶಾಂತಿ ಸಭೆ ಮಾದರಿಯಲ್ಲಿ ಪೂರ್ವಭಾವಿ ಸಭೆ ನಡೆಸುವುದು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಪಡೆಯುವಂತೆ ಮತ್ತು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಎಲ್ಲರೂ ಹಬ್ಬವನ್ನು ಸಂಭ್ರಮದಿಂದ ಶಾಂತಿ ಸೌಹಾರ್ದತೆಯಿಂದ ಆಚರಿಸುವಂತೆ ನೋಡಿಕೊಳ್ಳಲು ತಿಳಿಸಲಾಯಿತು.
ಸಭೆಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರ, ಗ್ರಾಮಾಂತರ, ಪೇಪರ್ ಟೌನ್ ಮತ್ತು ಹೊಳೆಹೊನ್ನೂರು ಪೊಲೀಸ್ ವೃತ್ತ ನಿರೀಕ್ಷಕರು, ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಕಂದಾಯ, ಮೆಸ್ಕಾಂ, ತಾಲೂಕ್ ಪಂಚಾಯಿತಿ, ಅಬಕಾರಿ, ಅರಣ್ಯ, ಅಗ್ನಿಶಾಮಕ ಅಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.
ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಭದ್ರಾವತಿ ನಗರಸಭೆಯಲ್ಲಿ ಬುಧವಾರ ಅಧ್ಯಕ್ಷೆ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ನಗರಸಭೆ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಅಳವಡಿಕೆಗೆ ವಿರೋಧ :
ಯಾವುದೇ ಸಂದರ್ಭದಲ್ಲೂ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಫ್ಲೆಕ್ಸ್‌ಗಳನ್ನು ಅಳವಡಿಸದಂತೆ ಕ್ರಮ ಕೈಗೊಳ್ಳಬೇಕೆಂದು ನಗರಸಭಾ ಸದಸ್ಯರು ಆಗ್ರಹಿಸಿದರು.
ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಬುಧವಾರ ಅಧ್ಯಕ್ಷೆ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿ.ಕೆ ಮೋಹನ್ ಸೇರಿದಂತೆ ಬಹುತೇಕ ಸದಸ್ಯರು ಮಾತನಾಡಿ, ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಫ್ಲೆಕ್ಸ್‌ಗಳನ್ನು ಅಳವಡಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಇದು ಕಾರ್ಯಗತಗೊಂಡಿಲ್ಲ. ಫ್ಲೆಕ್ಸ್ ಅಳವಡಿಕೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ ಎಂದು ಮನವರಿಕೆ ಮಾಡಿ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷ, ನಗರಸಭಾ ಸದಸ್ಯ ವಿ. ಕದಿರೇಶ್ ಮಾತನಾಡಿ, ಮಹಾಸಭಾ ವತಿಯಿಂದ ಅನೇಕ ವರ್ಷಗಳಿಂದ ರಾಜಕೀಯ ಪ್ರೇರಿತವಲ್ಲದ ಫ್ಲೆಕ್ಸ್‌ಗಳನ್ನು ಅಳವಡಿಸಿಕೊಂಡು ಬರಲಾಗುತ್ತಿದೆ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.
ವಿಸರ್ಜನೆ ಸಂದರ್ಭದಲ್ಲಿ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ:
ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಮೂರ್ತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ಸಂದರ್ಭದಲ್ಲಿ ಪ್ರಮುಖ ವೃತ್ತಗಳು ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ನಗರಸಭೆ ವತಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಕದಿರೇಶ್ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಮನುಕುಮಾರ್ ನಗರಸಭೆಯಲ್ಲಿ ಎಲ್ಲಾ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಷ್ಟು ಹಣ ಇಲ್ಲ. ಆದರೆ ಎಲ್ಲೆಡೆ ಬ್ಯಾರಿಗೇಡ್‌ಗಳನ್ನು ಅಳವಡಿಸಿಕೊಡಲಾಗುವುದು. ಅಲ್ಲದೆ ವಿಸರ್ಜನಾ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಭದ್ರಾವತಿ, ಆ. ೨೪: ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿ ನಗರಸಭೆ ವಾರ್ಡ್ ನಂ.೩ರ ನಿವಾಸಿ ನಕುಲ್ ರೇವಣ್ಕರ್ ಅವರನ್ನು ನೇಮಕಗೊಳಿಸಲಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್ ಸೂಚನೆಯಂತೆ ನಕುಲ್ ಅವರನ್ನು ಕಾರ್ಯದರ್ಶಿಯಾಗಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಎಂ.ವಿ ಹರಿಕೃಷ್ಣ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ನಕುಲ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಯುವ ಮೋರ್ಚಾದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇವನ್ನು ಪಕ್ಷದ ಸ್ಥಳೀಯ ಪ್ರಮುಖರು ಅಭಿನಂದಿಸಿದ್ದಾರೆ.
ಭದ್ರಾವತಿ, ಆ. ೨೪: ರಾಜಕೀಯಕ್ಕೆ ಬರಬೇಕೆಂಬ ಬಯಕೆ ಹೊಂದಿಲ್ಲ. ಆದರೂ ಸಹ ಅನಿವಾರ್ಯ ಕಾರಣಗಳಿಂದ ಪಕ್ಷ ಮುನ್ನಡೆಸಿಕೊಂಡು ಹೋಗುತ್ತಿದ್ದೇನೆ ಎಂದು ಮುಂಬರುವ ವಿಧಾನಸಭಾ ಚುನಾವಣೆಯ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಶಾರದ ಎಂ.ಜೆ ಅಪ್ಪಾಜಿ ಹೇಳಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಂ.ಜೆ ಅಪ್ಪಾಜಿ ಅವರು ೩ ಬಾರಿ ಕ್ಷೇತ್ರದ ಶಾಸಕರಾದರೂ ಸಹ ನಾನು ಎಂದಿಗೂ ರಾಜಕೀಯಕ್ಕೆ ಬರಬೇಕೆಂದು ಬಯಸಲಿಲ್ಲ. ಅಲ್ಲದೆ ಅವರ ಅಧಿಕಾರವನ್ನು ನಾನಾಗಲಿ, ನನ್ನ ಮಕ್ಕಳಾಗಲಿ ಎಂದಿಗೂ ದುರ್ಬಳಕೆ ಮಾಡಿಕೊಂಡಿಲ್ಲ. ಅಪ್ಪಾಜಿ ನಿಧನದ ನಂತರ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಪಕ್ಷ ಮುನ್ನಡೆಸಿಕೊಂಡು ಹೋಗುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ರಾಜಕೀಯದಲ್ಲಿ ಮುಂದುವರೆದಿದ್ದೇನೆ. ಕ್ಷೇತ್ರದಲ್ಲಿ ಅಪ್ಪಾಜಿ ಅವರೊಂದಿಗೆ ಅವರ ರಾಜಕೀಯ ಏಳಿಗಾಗಿ ಶ್ರಮಿಸಿರುವ ಮುಖಂಡರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತೇನೆ ಎಂದರು.
ಕ್ಷೇತ್ರದ ಹಾಲಿ ಶಾಸಕರು ಇತ್ತೀಚೆಗೆ ಕಾಮಗಾರಿಗಳ ಗುದ್ದಲಿ ಪೂಜೆ, ಉದ್ಘಾಟನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿಲ್ಲ. ಶಾಸಕರ ಬದಲಿಗೆ ಅವರ ಸಹೋದರರು, ಪುತ್ರರರು ಪಾಲ್ಗೊಳ್ಳುತ್ತಿದ್ದಾರೆ. ಶಾಸಕರ ಬದಲಾಗಿ ಪಾಲ್ಗೊಳ್ಳುವ ನೈತಿಕತೆ ಅವರಿಗಿಲ್ಲ. ಅದರಲ್ಲೂ ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರ ವಾರ್ಡ್‌ಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಎಷ್ಟು ಸರಿ ?
- ಶಾರದ ಎಂ.ಜೆ ಅಪ್ಪಾಜಿ.
ಹಲವಾರು ವರ್ಷಗಳಿಂದ ಪಕ್ಷದಲ್ಲಿ ಪದಾಧಿಕಾರಿಗಳ ನೇಮಕ ನಡೆದಿರಲಿಲ್ಲ. ಇದೀಗ ವರಿಷ್ಠರ ಆದೇಶದ ಮೇರೆಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ಪಕ್ಷವನ್ನು ಮುನ್ನಡೆಸುವ ಜೊತೆಗೆ ಕ್ಷೇತ್ರದ ನಾಗರೀಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಅಪ್ಪಾಜಿಯವರು ಬಿಟ್ಟು ಹೋಗಿರುವ ಕೆಲಸಗಳನ್ನು ಪೂರ್ಣಗೊಳಿಸುವ ಬಯಕೆ ಹೊಂದಿದ್ದೇನೆ. ಮತದಾರರು ನನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
ಭದ್ರಾವತಿ, ಆ. ೨೪: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ೨ನೇ ವರ್ಷದ ಪುಣ್ಯಸ್ಮರಣೆ ಸೆ.೫ರಂದು ತಾಲೂಕಿನ ಗೋಣಿಬೀಡು ಗ್ರಾಮದಲ್ಲಿರುವ ಅವರ ಶಕ್ತಿಧಾಮದಲ್ಲಿ ನಡೆಯಲಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಶಾರದ ಎಂ.ಜೆ ಅಪ್ಪಾಜಿ ತಿಳಿಸಿದರು.
ಭದ್ರಾವತಿ, ಆ. ೨೪: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ೨ನೇ ವರ್ಷದ ಪುಣ್ಯಸ್ಮರಣೆ ಸೆ.೫ರಂದು ತಾಲೂಕಿನ ಗೋಣಿಬೀಡು ಗ್ರಾಮದಲ್ಲಿರುವ ಅವರ ಶಕ್ತಿಧಾಮದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ ಶಾರದ ಎಂ.ಜೆ ಅಪ್ಪಾಜಿ, ಸೆ.೨ರಂದು ಎಂ.ಜೆ ಅಪ್ಪಾಜಿ ಅವರು ನಿಧನ ಹೊಂದಿ ೨ ವರ್ಷ ಕಳೆಯಲಿದೆ. ಆದರೆ ಅಂದು ಪುಣ್ಯಸ್ಮರಣೆ ನಡೆಸದೆ ಸೆ.೫ರಂದು ಪುಣ್ಯಸ್ಮರಣೆ, ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಣೆ ಹಾಗು ಜೆಡಿಎಸ್ ಪಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲರಿಗೂ ಅನುಕೂಲವಾಗುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಒಟ್ಟಿಗೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಸೆ.೫ರಂದು ಬೆಳಿಗ್ಗೆ ೯ ಗಂಟೆಗೆ ಗೋಣಿಬೀಡಿನ ಅವರ ಶಕ್ತಿಧಾಮದಲ್ಲಿ ಪುಣ್ಯಸ್ಮರಣೆ ನಡೆಯಲಿದೆ. ನಂತರ ೧೧ ಗಂಟೆಯಿಂದ ಬಾಗಿನ ಸಮರ್ಪಣೆ ಹಾಗು ೧೨ ಗಂಟೆಗೆ ಜೆಡಿಎಸ್ ಪಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. ಅಪ್ಪಾಜಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಕ್ಷೇತ್ರದ ಸಮಸ್ತ ನಾಗರೀಕರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಅಪ್ಪಾಜಿ ಒಡನಾಡಿಗಳಾದ ನಗರಸಭೆ ಮಾಜಿ ಸದಸ್ಯ ಕರಿಯಪ್ಪ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್ ಅವರು ಅಪ್ಪಾಜಿ ಅವರೊಂದಿಗಿನ ನೆನೆಪುಗಳನ್ನು ಸ್ಮರಿಸಿಕೊಳ್ಳುವ ಮೂಲಕ ೨ ವರ್ಷ ಪುಣ್ಯಸ್ಮರಣೆ, ಬಾಗಿನ ಸಮರ್ಪಣೆ ಹಾಗು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಧುಕುಮಾರ್, ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷ ಮುತುರ್ಜಾಖಾನ್, ನಗರಸಭೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಡಿ.ಟಿ ಶ್ರೀಧರ್ ಸೇರಿದಂತೆ ಜೆಡಿಎಸ್ ಪಕ್ಷದ ನಗರಸಭೆ ಸದಸ್ಯರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರಿಗೆ ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ರಾಜೀನಾಮೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಮತ್ತು ಕೆ.ಜಿ ರಾಜ್‌ಕುಮಾರ್ ಉಪಸ್ಥಿತರಿದ್ದರು.
ಭದ್ರಾವತಿ, ಆ. ೨೩: ನಗರಸಭೆ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಅವರು ಒಡಂಬಡಿಕೆಯಂತೆ ೧೦ ತಿಂಗಳ ಅಧಿಕಾರ ಪೂರೈಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ೧೦ ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನಕ್ಕಾಗಿ ೩ ಮಂದಿ ನಡುವೆ ಪೈಪೋಟಿ ಎದುರಾಗಿದೆ.
ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಮೊದಲ ಹಂತದ ೩೦ ತಿಂಗಳ ಮೀಸಲಾತಿಯನ್ವಯ ತಲಾ ೧೦ ತಿಂಗಳ ಆಡಳಿತ ಹಂಚಿಕೆ ಮಾಡಿಕೊಂಡಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿದೆ. ಈಗಾಗಲೇ ೧೦ ತಿಂಗಳ ಅವಧಿಯನ್ನು ಗೀತಾ ಕೆ.ಜಿ ರಾಜ್‌ಕುಮಾರ್ ಪೂರೈಸಿದ್ದಾರೆ. ೨೦ ತಿಂಗಳು ಬಾಕಿ ಉಳಿದಿದ್ದು, ೨ನೇ ೧೦ ತಿಂಗಳ ಅವಧಿಗೆ ೩ ಮಂದಿ ನಡುವೆ ಪೈಪೋಟಿ ಎದುರಾಗಿದೆ.
ವಾರ್ಡ್ ನಂ.೧೩ರ ಸದಸ್ಯೆ ಅನುಸುಧಾ ಮೋಹನ್, ವಾರ್ಡ್ ನಂ.೩೪ರ ಲತಾ ಚಂದ್ರಶೇಖರ್ ಮತ್ತು ವಾರ್ಡ್ ನಂ.೩೫ರ ಶೃತಿ ವಸಂತ್ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು, ಈ ಮೂವರ ಇಬ್ಬರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಒಬ್ಬರು ಗೌಂಡರ್ ಸಮುದಾಯಕ್ಕೆ ಸೇರಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ಕೈಗೊಳ್ಳುವ ನಿರ್ಧಾರ ಅಂತಿಮವಾಗಿದ್ದು, ಯಾರು ಅಧ್ಯಕ್ಷಗಿರಿ ಯಾರಿಗೆ ಎಂಬುದನ್ನು ಕಾದು ನೋಡಬೇಕಾಗಿದೆ.
ಭದ್ರಾವತಿ, ಆ. ೨೩ : ತಾಲೂಕಿನ ಸುಲ್ತಾನಮಟ್ಟಿ ಗ್ರಾಮದ ನಿವಾಸಿ, ಯುವ ಮುಖಂಡ ಗೋಕುಲಕೃಷ್ಣನ್ ಅವರನ್ನು ಬಿಜೆಪಿ ಪಕ್ಷದ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಮುಂದುವರೆಸಲಾಗಿದೆ.
ಪಕ್ಷದ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ಅವರ ಸೂಚನೆ ಮೇರೆಗೆ ಗೋಕುಲಕೃಷ್ಣನ್ ಅವರನ್ನು ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಮುಂದುವರೆಯಲು ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಎಂ.ಬಿ ಹರಿಕೃಷ್ಣ ಆದೇಶಿಸಿದ್ದಾರೆ.
ಗೋಕುಲಕೃಷ್ಣನ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಹಂತ ಹಂತವಾಗಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇವರನ್ನು ಪಕ್ಷದ ತಾಲೂಕು ಪ್ರಮುಖರು ಅಭಿನಂದಿಸಿದ್ದಾರೆ.
ಭದ್ರಾವತಿ, ಆ. ೨೩: ಜಾತ್ಯತೀತ ಜನತಾದಳ ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳನ್ನು ಪಕ್ಷದ ವರಿಷ್ಠರ ಆದೇಶದ ಮೇರೆಗೆ ಪಕ್ಷದ ಮುಖಂಡರಾದ ಶಾರದ ಎಂ.ಜೆ ಅಪ್ಪಾಜಿ ನೇಮಕಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಮಧುಕುಮಾರ್, ತಾಲೂಕು ನಗರ ಘಟಕದ ಅಧ್ಯಕ್ಷರಾಗಿ ಆರ್. ಕರುಣಾಮೂರ್ತಿ, ಗ್ರಾಮಂತರ ಘಟಕದ ಅಧ್ಯಕ್ಷರಾಗಿ ಕೆ. ಧರ್ಮಕುಮಾರ, ನಗರ ಘಟಕದ ಮಹಿಳಾ ಅಧ್ಯಕ್ಷರಾಗಿ ವಿಶಾಲಾಕ್ಷಿ, ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಪಾರ್ವತಿಬಾಯಿ, ಅಲ್ಪ ಸಂಖ್ಯಾಂತರ ನಗರ ಘಟಕದ ಅಧ್ಯಕ್ಷರಾಗಿ ಮುತುರ್ಜಾಖಾನ್, ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಎಂ.ಎ ಅಜಿತ್, ನಗರ ಘಟಕದ ಕಾರ್ಯಾಧ್ಯಕ್ಷರಾಗಿ ಬಿ.ಸಿ ಉಮೇಶ್, ಪರಿಶಿಷ್ಟ ಜಾತಿ ನಗರ ಘಟಕದ ಅಧ್ಯಕ್ಷರಾಗಿ ಮೈಲಾರಪ್ಪ, ಪರಿಶಿಷ್ಟ ಜಾತಿ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಶ್ರೀಧರನಾಯ್ಕ, ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗು ವಕ್ತಾರರಾಗಿ ಎಂ. ರಾಜು ಮತ್ತು ನಗರ ಘಟಕದ ಮಹಿಳಾ ಕಾರ್ಯದರ್ಶಿಯಾಗಿ ಭಾಗ್ಯಮ್ಮ ಅವರನ್ನು ನೇಮಕಗೊಳಿಸಿ ಪಕ್ಷದ ತತ್ವ ಸಿದ್ದಾಂತಗಳಿಗೆ ಅನುಗುಣವಾಗಿ ಜವಾಬ್ದಾರಿ ನಿರ್ವಹಿಸುವಂತೆ ಶಾರದ ಎಂ.ಜೆ ಅಪ್ಪಾಜಿ ಸೂಚಿಸಿದ್ದಾರೆ.
ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹೊಸಮನೆ ನೃಪತುಂಗ ಬಡಾವಣೆಯಲ್ಲಿರುವ ಶ್ರೀ ಜ್ಞಾನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅನುದಾನ ಮತ್ತು ಅನುದಾನರಹಿತ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಚಾಲನೆ ನೀಡಿ ಮಾತನಾಡಿದರು.
ಭದ್ರಾವತಿ, ಆ. ೨೩ : ವಿದ್ಯಾರ್ಥಿಗಳಿಗೆ ಕ್ರೀಡೆ ಜೊತೆಗೆ ಅವರಲ್ಲಿನ ಕೌಶಲ್ಯಗಳನ್ನು ಗುರುತಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
ಅವರು ಮಂಗಳವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹೊಸಮನೆ ನೃಪತುಂಗ ಬಡಾವಣೆಯಲ್ಲಿರುವ ಶ್ರೀ ಜ್ಞಾನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅನುದಾನ ಮತ್ತು ಅನುದಾನರಹಿತ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ ಸಹ ಮುಖ್ಯವಾಗಿದೆ. ಎಲ್ಲರೂ ಇಂದು ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದು ವೈದ್ಯರು, ಇಂಜಿನಿಯರ್‌ಗಳಾಗಬೇಕೆಂದು ಬಯಸುತ್ತಾರೆ. ಆದರೆ ಮಕ್ಕಳಲ್ಲಿರುವ ಕೌಶಲ್ಯಗಳನ್ನು ಗುರುತಿಸುವ ಕೆಲಸ ಯಾರು ಸಹ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಶಿಕ್ಷಕರು ಮತ್ತು ಪೋಷಕರು ಮಕ್ಕಳ ಕೌಶಲ್ಯಗಳನ್ನು ಗುರುತಿಸಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದಾಗ ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭಾ ಸದಸ್ಯೆ ಮಂಜುಳಾ ಸುಬ್ಬಣ್ಣ, ಶಿಕ್ಷಣ ಸಂಯೋಜಕ ರವಿಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜಿ. ಪ್ರಭು, ಸಿ. ಚನ್ನಪ್ಪ, ಶಿವಲಿಂಗೇಗೌಡ, ಶ್ರೀ ಜ್ಞಾನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ನಿರ್ದೇಶಕ ಕೇಶವ, ದೈಹಿಕ ಶಿಕ್ಷಕಿ, ಸಮಾಜ ಸೇವಕಿ ಅನಿತಾ ಮೇರಿ, ಕನಕ ವಿದ್ಯಾಸಂಸ್ಥೆ ಪ್ರಾಂಶುಪಾಲ ಸಿ.ಡಿ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ಜ್ಞಾನೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದಲ್ಲಿ ಸೆಂಟ್ ಮೇರಿಸ್, ವಿಜಯ, ಎಸ್‌ಎವಿ (ಕಾರೇಹಳ್ಳಿ), ನವಚೇತನ, ಅಕ್ಕಮಹಾದೇವಿ, ಜೆಎನ್‌ಇಎಸ್, ಸೆಂಟ್ ಡೊಮಿನಿಕ್, ಜ್ಞಾನದೀಪಿಕ, ಸ್ವಾಮಿ ವಿವೇಕಾನಂದ, ವಿಶ್ವ ಬಂಧು, ರಾಘವೇಂದ್ರ ಮತ್ತು ವಿಶ್ವೇಶ್ವರಾಯ ಸೇರಿದಂತೆ ಒಟ್ಟು ೧೨ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು. ಚರಣ್‌ಸಿಂಗ್, ಶಿವರಾಜ್, ಲೋಕೇಶ್, ರವಿ, ರಂಗನಾಥ ಸೇರಿದಂತೆ ವಿವಿಧ ಶಾಲೆಗಳ ದೈಹಿಕ ಶಿಕ್ಷಕರುಗಳು, ಸಿಆರ್‌ಪಿಗಳು ಪಾಲ್ಗೊಂಡಿದ್ದರು.
ಪ್ರವೇಶ ಮುಕ್ತಾಯಗೊಂಡರೂ ವಿಶೇಷ ದಾಖಲಾತಿಗೆ ಮನವಿ ಮಾಡಿದ ಜಿಲ್ಲಾಧಿಕಾರಿ
ಭದ್ರಾವತಿಯಲ್ಲಿ ವೈಯಕ್ತಿಕ ಕೌಟುಂಬಿಕ ಕಾರಣದಿಂದ ಓದು ಮುಂದುವರೆಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದ ಬಾಲಕಿಗೆ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ನೆರವಾಗುವ ಮೂಲಕ ಆಕೆಯ ಮುಂದಿನ ಶಿಕ್ಷಣಕ್ಕೆ ನೆರವಾಯಿತು.
ಭದ್ರಾವತಿ, ಆ. ೨೩: ವೈಯಕ್ತಿಕ ಕೌಟುಂಬಿಕ ಕಾರಣದಿಂದ ಓದು ಮುಂದುವರೆಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದ ಬಾಲಕಿಗೆ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ನೆರವಾಗುವ ಮೂಲಕ ಆಕೆಯ ಮುಂದಿನ ಶಿಕ್ಷಣಕ್ಕೆ ನಾಂದಿ ಹಾಡಿದೆ.
ತಾಲೂಕಿನ ಹುಣಸೇಕಟ್ಟೆ ಗ್ರಾಮದ ಬಡಕುಟುಂಬದ ಕೀರ್ತನಾ ಎಂಬ ಬಾಲಕಿಯೋರ್ವಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದು, ಆದರೂ ಸಹ ಓದು ಮುಂದುವರೆಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾಳೆ.
ಈಕೆಯ ತಾಯಿ ಒಬ್ಬಳೇ ಕೂಲಿ ಕೆಲಸ ಮಾಡಿಕೊಂಡು ಕುಟುಂಬದ ನಿರ್ವಹಣೆ ಮಾಡುತ್ತಿದ್ದು, ಇದರಿಂದಾಗಿ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಈ ನಡುವೆ ಮುಂದಿನ ವಿದ್ಯಾಭ್ಯಾಸಕ್ಕೆ ಕುಟುಂಬದಿಂದಲೂ ಅಸಹಾಯಕತೆ ವ್ಯಕ್ತವಾಗಿದೆ.
ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಂಡರೂ ಸಹ ಈಕೆಯ ಮುಂದಿನ ಓದಿನ ಕನಸು ನನಸಾಗಿರಲಿಲ್ಲ. ಈ ನಡುವೆ ಈಕೆಯ ನೆರವಿಗೆ ಹುಣಸೆಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ, ಸಮಾಜ ಸೇವಕಿ ಅನಿತಾ ಮೇರಿ ಅವರು ಧಾವಿಸಿದ್ದು, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರ ಬಳಿ ಈಕೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರವೇಶ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆದು ವಿಶೇಷ ದಾಖಲಾತಿಯಡಿ ಪ್ರಥಮ ವರ್ಷದ ಪ್ರವೇಶಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಕೋರಿ ಪತ್ರ ಬರೆದಿದ್ದರು. ಇದಕ್ಕೆ ಇಲಾಖೆ ಉಪನಿರ್ದೇಶಕರು ಪೂರಕವಾಗಿ ಸ್ಪಂದಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿನಿಯ ಮುಂದಿನ ಶಿಕ್ಷಣಕ್ಕೆ ನೆರವಾಗಬೇಕೆಂಬ ಉದ್ದೇಶದಿಂದ ವೇದಿಕೆಯ ಕಾರ್ಯಕರ್ತರೆಲ್ಲರೂ ಸೇರಿ ನಮ್ಮ ಬಳಿ ಇರುವ ಹಣ ಸಂಗ್ರಹಿಸಿ ಪಾವತಿಸಲಾಗಿದೆ. ವೇದಿಕೆ ಸಾಮಾಜಿಕ ಕಾಳಜಿಯಿಂದ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ.
- ಪ್ರಾನ್ಸಿಸ್, ಮಾಜಿ ಸದಸ್ಯರು, ನಗರಸಭೆ ಹಾಗು ವೇದಿಕೆ ಮುಖಂಡರು, ಭದ್ರಾವತಿ.
ಈಕೆಗೆ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ(ಗರ್ಲ್ಸ್ ಕಾಲೇಜು)ನಲ್ಲಿ ಪ್ರವೇಶ ಪಡೆಯಲು ಅವಕಾಶ ಲಭಿಸಿದರೂ ಸಹ ಪ್ರವೇಶ ಶುಲ್ಕ ಹಾಗು ಸಮವಸ್ತ್ರ, ನೋಟ್ ಬುಕ್ ಮತ್ತು ಪಠ್ಯ ಪುಸ್ತಕಗಳಿಗಾಗಿ ಎದುರು ನೋಡುವಂತಾಯಿತು. ಈ ನಡುವೆ ಈಕೆಯ ಸಂಕಷ್ಟ ಅರಿತ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ಕಾಲೇಜಿಗೆ ತೆರಳಿ ಈಕೆಯ ಪ್ರವೇಶ ಶುಲ್ಕ ಹಾಗು ಸಮವಸ್ತ್ರ, ನೋಟ್ ಬುಕ್ ಮತ್ತು ಪಠ್ಯ ಪುಸ್ತಕಗಳಿಗಾಗಿ ಒಟ್ಟು ೫,೭೦೦ ರು. ಪಾವತಿಸುವ ಮೂಲಕ ಮುಂದಿನ ಶಿಕ್ಷಣಕ್ಕೆ ನೆರವಾಯಿತು.
ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಕುಟುಂಬಸ್ಥರು ಈಕೆಯ ಶಿಕ್ಷಣವನ್ನು ಮೊಟಕುಗೊಳಿಸಲು ಮುಂದಾಗಿದ್ದರು. ಇದನ್ನು ಅರಿತು ಆಕೆ ಶಿಕ್ಷಣ ಮುಂದುವರೆಸಲು ನೆರವಿಗೆ ಧಾವಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಿಕೊಡಲಾಯಿತು. ಈಕೆಗೆ ಹೆಚ್ಚಿನ ನೆರವಿನ ಅಗತ್ಯವಿದ್ದು, ಸಂಘ-ಸಂಸ್ಥೆಗಳು, ದಾನಿಗಳನ್ನು ಕೋರಲಾಗಿತ್ತು. ಇದೀಗ ಆಕೆಯ ಕನಸು ನನಸಾಗಿರುವುದು ತುಂಬಾ ಸಂತೋಷದ ವಿಚಾರವಾಗಿದೆ.
- ಅನಿತಾ ಮೇರಿ, ಶಿಕ್ಷಕಿ ಹಾಗು ಸಮಾಜ ಸೇವಕಿ, ಭದ್ರಾವತಿ.
ಈ ಸಂದರ್ಭದಲ್ಲಿ ವೇದಿಕೆ ತಾಲೂಕು ಅಧ್ಯಕ್ಷ ಜಗದೀಶ್, ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸುದೀಪ್‌ಕುಮಾರ್, ನಗರಸಭೆ ಮಾಜಿ ಸದಸ್ಯ ಪ್ರಾನ್ಸಿಸ್, ಮುಖಂಡರಾದ ಶರವಣ, ಪ್ರಮೋದ್, ಲಾರೆನ್ಸ್, ಪುರುಷೋತ್ತಮ್, ಮದನ್‌ಕುಮಾರ್, ವಿನಯ್ ಮತ್ತು ಅಂತೋಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಾಲ್ಕು ಮಕ್ಕಳು, ಸೊಸೆಯಂದಿರು, ಅಳಿಯಂದಿರು ಹಾಗು ಮೊಮ್ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಸಂಸ್ಕಾರ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಮಂಗಳವಾರ ಮಧ್ಯಾಹ್ನ ೧೧ ನೆರವೇರಲಿದೆ. ಶಾರದಮ್ಮನವರು ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಶಾಸಕ ಬಿ.ಕೆ.ಸಂಗಮೇಶ್ವರ್, ಪ್ರಮುಖರಾದ ಸಿದ್ದಲಿಂಗಯ್ಯ, ಸುವರ್ಣಮ್ಮ ಹೀರೇಮಠ್, ಟಿ.ಜಿ.ಬಸವರಾಜಯ್ಯ ಸೇರಿದಂತೆ ಇತರರು ಸಂತಾಪ ಸೂಚಿಸಿದ್ದಾರೆ.
ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಕುಂದುಕೊರತೆ ಸಭೆ ಹಾಗು ಇನ್ನಿತರ ಸಭೆಗಳಿಗೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪ್ರಮುಖ ಸಂಘ-ಸಂಸ್ಥೆಗಳ ಮುಖಂಡರುಗಳಿಗೆ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ ಅವರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಆ. ೨೨: ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಕುಂದುಕೊರತೆ ಸಭೆ ಹಾಗು ಇನ್ನಿತರ ಸಭೆಗಳಿಗೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪ್ರಮುಖ ಸಂಘ-ಸಂಸ್ಥೆಗಳ ಮುಖಂಡರುಗಳಿಗೆ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವ್ಯಾಪ್ತಿಯ ಕೆಲವೇ ಕೆಲವು ಮುಖಂಡರುಗಳಿಗೆ ಮಾತ್ರ ಸಭೆಯ ಮಾಹಿತಿ ನೀಡಲಾಗುತ್ತಿದೆ. ಉಳಿದಂತೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪ್ರಮುಖ ಸಂಘ-ಸಂಸ್ಥೆಗಳ ಮುಖಂಡರುಗಳಿಗೆ ಮಾಹಿತಿ ನೀಡದಿರುವುದು ಖಂಡನೀಯ. ಈ ಸಂಬಂಧ ಠಾಣೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರವಹಿಸುವ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪ್ರಮುಖ ಸಂಘ-ಸಂಸ್ಥೆಗಳ ಮುಖಂಡರುಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಮನವಿಯನ್ನು ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್ ಮತ್ತು ಸಂಯುಕ್ತ ಕರ್ನಾಟಕ ಜನಾತದಳ(ಜೆಡಿಯು) ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಸಲ್ಲಿಸಿದರು.