
ಭದ್ರಾವತಿ ನಗರದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಹಾಗು ಬಸವಾಭಿಮಾನಿಗಳ ಸಹಕಾರದೊಂದಿಗೆ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ಗುರು ಬಸವಣ್ಣನವರ ಜಯಂತ್ಯೋತ್ಸವ ಸಮಾರಂಭ ಕುವೆಂಪು ವಿಶ್ವ ವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ, ತಿಪ್ಪಾಯಿಕೊಪ್ಪದ ಶ್ರೀಗುರು ಮೂಕಪ್ಪ ಶಿವಯೋಗಿಗಳ ಮಠದ ಶ್ರೀ ಮ.ನಿ.ಪ್ರ. ಮಹಾಂತಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ : ಈ ನಾಡಿನ ಪ್ರತಿಯೊಬ್ಬರು ಶರಣರ ಬದುಕಿನ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಜೊತೆಗೆ ಅವರ ವಚನಗಳನ್ನು ಕಲಿತು ಇತರರಿಗೆ ಪ್ರೇರೇಪಿಸಬೇಕೆಂದು ತಿಪ್ಪಾಯಿಕೊಪ್ಪದ ಶ್ರೀಗುರು ಮೂಕಪ್ಪ ಶಿವಯೋಗಿಗಳ ಮಠದ ಶ್ರೀ ಮ.ನಿ.ಪ್ರ. ಮಹಾಂತಸ್ವಾಮೀಜಿಯವರು ಹೇಳಿದರು.
ಅವರು ನಗರದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಹಾಗು ಬಸವಾಭಿಮಾನಿಗಳ ಸಹಕಾರದೊಂದಿಗೆ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ಗುರು ಬಸವಣ್ಣನವರ ಜಯಂತ್ಯೋತ್ಸವ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಗುಡಿ ಗುಂಡಾರಗಳನ್ನು ವಿರೋಧಿಸಿದ ಬಸವಣ್ಣನವರು ಇಷ್ಟಲಿಂಗದ ಪರಿಕಲ್ಪನೆಯನ್ನು ನೀಡಿ ದೇಹವೇ ದೇಗುಲವನ್ನಾಗಿಸಿದರು. ಇಂತಹ ಶರಣ ಧರ್ಮ ಪರಂಪರೆಯನ್ನು ಉಳಿಸಿಕೊಳ್ಳಬೇಕು. ಶರಣರ ವಚನಗಳು ಪ್ರತಿಯೊಬ್ಬರಿಗೂ ದಾರಿ ದೀಪಗಳಾಗಿವೆ. ನಾವುಗಳೇ ವಚನಗಳನ್ನು ಕಲಿತು ಪಾಲಿಸದಿದ್ದರೆ ಬೇರೆ ಯಾರು ಕಲಿಯುತ್ತಾರೆಂದು ಪ್ರಶ್ನಿಸಿದರು.
ಕುವೆಂಪು ವಿಶ್ವ ವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರು ಯಾವುದೇ ಧರ್ಮ, ಜಾತಿಯ ಹಿನ್ನಲೆಯಲ್ಲಿ ಕಾಣುವುದಿಲ್ಲ. ಎಲ್ಲಾ ಜಾತಿ-ಜನಾಂಗಕ್ಕೂ ಸಮಾನತೆ ಬೋಧಿಸಿ ಸಮಾಜದಲ್ಲಿ ನಾವು ಹೇಗೆ ವರ್ತಿಸಬೇಕು, ಹೇಗೆ ಬದುಕಬೇಕು ಎಂಬುದರ ಬಗ್ಗೆ ತಮ್ಮ ವಚನಗಳ ಮೂಲಕ ಸಮಾಜಕ್ಕೆ ತಿಳಿಸಿಕೊಟ್ಟ ಮಹಾನ್ ದಾರ್ಶನಿಕ ಎಂದರು.
ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಸಂಘರ್ಷ ಉಂಟಾಗಿ ಆಶಾಂತಿ ತಾಂಡವಾಡುತ್ತಿದೆ. ಇದರಿಂದ ಸಮಾಜದಲ್ಲಿ ಸಾಮರಸ್ಯ ಇಲ್ಲದೆ ಜೀವನ ನಲುಗುತ್ತಿದೆ. ಬಸವಣ್ಣನವರು ಸಮಾಜದಲ್ಲಿನ ತಳ ಸಮುದಾಯಗಳ ಬಗ್ಗೆ, ಅವರ ನೋವು, ಸಂಕಟಗಳ ಬಗ್ಗೆ ಅರಿತಷ್ಟು ಅಂಬೇಡ್ಜರ್ ಹೊರತು ಪಡಿಸಿದರೆ ಬೇರೆ ಯಾರೂ ಅರಿಯಲಿಲ್ಲ. ಹಾಗಾಗಿ ಜಗತ್ತಿನ ವಿಸ್ಮಯ ಬಸವಣ್ಣ. ಮಾತು, ಕೃತಿ, ನಡೆ, ನುಡಿಗಳು ಒಂದಾಗಿ ಅದರಂತೆ ನಡೆದು ಸಮಾಜ ಸಹ ಅದೇ ದಾರಿಯಲಿ, ಅದೇ ರೀತಿಯಲ್ಲಿ ನಡೆಯಬೇಕು ಎಂದರು.
ಇಂದಿನ ಬಹಳಷ್ಟು ಸಮಸ್ಯೆಗಳಿಗೆ, ಪ್ರಶ್ನೆಗಳಿಗೆ ವಚನಗಳಲ್ಲಿ ಸ್ಪಷ್ಟ ಉತ್ತರ ಇದೆ. ಇಂತಹ ವಚನಗಳ ನೈಜತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಬರಿ ಸ್ವಾರ್ಥವೇ ತುಂಬಿರುವ ಈ ಜಗತ್ತಿನಲ್ಲಿ ಹೊಸ ಆಲೋಚನೆಗಳ ಮೂಲಕ ಹೊಸ ಜಗತ್ತನ್ನು ನಿರ್ಮಿಸಬೇಕಿದೆ ಎಂದರು.
ಹೊನ್ನಾವರ ಕವಲಕ್ಕಿಯ ಡಾ. ಎಚ್.ಎಸ್ ಅನುಪಮ ಉಪನ್ಯಾಸಕಾರರಾಗಿ ಆಗಮಿಸಿ ಮಾತನಾಡಿ, ವಚನಗಳು ಪಠ್ಯಗಳಲ್ಲ ಅಚರಣಾ ತತ್ವಗಳು. ಇದನ್ನು ಮನೆಯಲ್ಲಿ ಪ್ರತಿ ದಿನ ಓದಿ ಮನನ ಮಾಡಿಕೊಳ್ಳುವ ಮೂಲಕ ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳಬೇಕು. ಇಲ್ಲದಿದ್ದೆರ ವಚನಗಳು ಸಹ ಮಂತ್ರಗಳ ಪಟ್ಟಿಗೆ ಸೇರಿಕೊಳ್ಳುತ್ತವೆ ಎಂದು ಎಚ್ಚರಿಸಿದರು.
ಬುಧ್ಧನ ನಂತರ ಭಿನ್ನ ಪರಂಪರೆ ನೀಡಿದ್ದು ಶರಣಪರಂಪರೆ. ಒಂದರ್ಥದಲ್ಲಿ ಬುಧ್ಧನ ಬೌಧ್ಧ ಧರ್ಮಕ್ಕೂ ಶರಣಪರಂಪರೆಗೂ ಸಾಮ್ಯತೆ ಇದೆ. ಇದರ ಬಗ್ಗೆ ವಿಸ್ತೃತವಾದ ತುಲನಾತ್ಮಕ ಅಧ್ಯಯನದ ಅವಶ್ಯಕತೆ ಹಾಗು ಆದ್ಯತೆ ಇದೆ ಎಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಟಿ.ಜೆ. ನಾಗರತ್ನ ಗಾಯನ ಸಾರಥ್ಯದಲ್ಲಿ ನಗರದ ೧೦೮ ಗಾಯಕರಿಂದ ನೂರೆಂಟು ಕಂಠದಲ್ಲಿ ಹಾಡಿದ ಸಾಮೂಹಿಕ ವಚನ ಗಾಯನ ಸಮಾರಂಭದ ವಿಶೇಷ ಆಕರ್ಷಣೆಯಾಗಿ ಕಂಡು ಬಂದಿತು.
ಮಹಿಳಾ ಸದಸ್ಯೆಯರು ವಚನ ಗಾಯನ ಮಾಡಿದರು. ಶಂಕರ ಮೂರ್ತಿ ಸ್ವಾಗತಿಸಿದರು. ಎಚ್.ಎನ್.ಮಹಾರುದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಿರಣ್ ಅತಿಥಿ ಪರಿಚಯ ನಡೆಸಿ ಕೊಟ್ಟರು. ನಂದಿನಿ ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿ, ಕತ್ತಲಗೆರೆ ತಿಮ್ಮಪ್ಪ ವಂದಿಸಿದರು.