ಭಾನುವಾರ, ಆಗಸ್ಟ್ 31, 2025

ಬಲಿಜ ಸಮುದಾಯದವರು ಸಂಘಟಿತಗೊಂಡಲ್ಲಿ ಮಾತ್ರ ಭವಿಷ್ಯದಲ್ಲಿ ಬಲಾಢ್ಯಗೊಳ್ಳಲು ಸಾಧ್ಯ : ಎಂ.ಆರ್ ಸೀತಾರಾಮು

ಭದ್ರಾವತಿ ಹಳೇನಗರದ ಬಸವೇಶ್ವರವೃತ್ತದ ಬಲಿಜ ಸಮುದಾಯ ಭವನದಲ್ಲಿ ತಾಲೂಕು ಬಲಿಜ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೯೦ನೇ ಜಯಂತ್ಯೋತ್ಸವ ಕಾರ್ಯಕ್ರಮ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮು ಉದ್ಘಾಟಿಸಿ ಮಾತನಾಡಿದರು. 
    ಭದ್ರಾವತಿ : ಬಲಿಜ ಸಮುದಾಯದವರು ಸಂಘಟಿತಗೊಂಡಲ್ಲಿ ಮಾತ್ರ ಭವಿಷ್ಯದಲ್ಲಿ ಬಲಾಢ್ಯಗೊಳ್ಳಲು ಸಾಧ್ಯ. ಇದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡು ಸಂಘಟನೆಯಲ್ಲಿ ಮುನ್ನಡೆಯಬೇಕೆಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮು ಹೇಳಿದರು. 
    ಹಳೇನಗರದ ಬಸವೇಶ್ವರವೃತ್ತದ ಬಲಿಜ ಸಮುದಾಯ ಭವನದಲ್ಲಿ ತಾಲೂಕು ಬಲಿಜ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೯೦ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಪ್ರತಿಭಾವಂತರು, ಬುದ್ದಿವಂತರು ಇರುವ ಬಲಿಜ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಇದನ್ನು ಸರಿಪಡಿಸಿಕೊಂಡಲ್ಲಿ ಮಾತ್ರ ಸಮಾಜ ಬಲಾಢ್ಯವಾಗಿ ಬೆಳೆಯಲು ಸಾಧ್ಯ. ಬಲಿಜ ಸಮುದಾಯದವರು ಯಾವುದೇ ಪಕ್ಷದಲ್ಲಿರಲಿ, ಯಾವುದೇ ಕ್ಷೇತ್ರದಲ್ಲಿರಲಿ, ಯಾವುದೇ ಹುದ್ದೆಯಲ್ಲಿರಲಿ  ಅವರನ್ನು ಸಂಘಟನೆ ಮೂಲಕ ಪ್ರೋತ್ಸಾಹಿಸಿ ಬೆಂಬಲಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು. ಆ ಮೂಲಕ ಸಮುದಾಯಕ್ಕೆ ಉತ್ತಮ ಸಂದೇಶ ನೀಡಬೇಕೆಂದರು. 
    ರಾಜಕಾರಣದಲ್ಲಿ ಹಲವಾರು ಜಾತಿಯವರಿದ್ದಾರೆ. ಆಯಾ ಜಾತಿಯ ರಾಜಕಾರಣಿಗಳು ಆಯಾ ಸಮಾಜದ ಮೇಲೆ ಪ್ರೀತಿ, ವಿಶ್ವಾಸದ ಮೂಲಕ ಅಭಿವೃದ್ದಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ನಾಯಕರು ರಾಜಕೀಯವಾಗಿ ಹೆಚ್ಚು ಹೆಚ್ಚಾಗಿ ಬೆಳೆಯಬೇಕು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಮ್ಮ ಸಮುದಾಯದವರು ಪ್ರತಿನಿಧಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನು ಪ್ರತಿನಿಧಿಸುವ ವ್ಯಕ್ತಿ ಇದ್ದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದರು. 
    ಈ ಕ್ಷೇತ್ರದಲ್ಲಿನ ಬಲಿಜ ಸಮುದಾಯದವರ ಸಮಸ್ಯೆಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಅವರ ಕುಟುಂಬ ಸದಸ್ಯರು ಹೆಚ್ಚಿನ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಭವಿಷ್ಯದಲ್ಲಿ ಸಮುದಾಯದವರು ಶಾಸಕರು ಮತ್ತು ಅವರ ಕುಟುಂಬ ಸದಸ್ಯರನ್ನು ಬೆಂಬಲಿಸಲು ಮುಂದಾಗುವುದು ಸೂಕ್ತ ಎಂದರು. 
     ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕ್ಷೇತ್ರದಲ್ಲಿ ಬಲಿಜ ಸಮುದಾಯದ ಅಭಿವೃದ್ದಿಗೆ ಶಾಸಕರು ಸಾಕಷ್ಟು ಶ್ರಮಿಸಿದ್ದಾರೆ. ಎಂ.ಆರ್ ಸೀತಾರಾಮು ಅವರು ಸಹ ತಮಗೆ ಲಭ್ಯವಿರುವ ಅನುದಾನ ಕ್ಷೇತ್ರಕ್ಕೆ ನೀಡಿದ್ದಾರೆ. ಶ್ರೀಕೃಷ್ಣ ದೇವರಾಯ ರಸ್ತೆ ಹೆಸರು ನಾಮಕರಣಗೊಳಿಸುವಲ್ಲಿ ಪಕ್ಷತೀತವಾಗಿ ಸಹಕರಿಸಿದ ನಗರಸಭೆ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.  
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕೈವಾರ ತಾತಯ್ಯನವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಸಮುದಾಯದ ಅಭಿವೃದ್ದಿಗಾಗಿ ನಾನು ಹಾಗೂ ನನ್ನ ಕುಟುಂಬದವರು ಸದಾ ನಿಮ್ಮೊಂದಿಗಿರುವುದಾಗಿ ಭರವಸೆ ನೀಡಿದರು. 
    ಬಲಿಜ ಸಂಘದ ಅಧ್ಯಕ್ಷ ಎಚ್.ಆರ್ ರಂಗನಾಥ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯರಾದ ಚನ್ನಪ್ಪ, ವಿ. ಕದಿರೇಶ್, ಬಸವರಾಜ ಬಿ. ಆನೇಕೊಪ್ಪ, ಅನುಸುಧ ಮೋಹನ್ ಪಳನಿ, ಕೆ. ಸುದೀಪ್ ಕುಮಾರ್, ಅನುಪಮ ಚನ್ನೇಶ್, ಮಾಜಿ ಸದಸ್ಯ ಕರಿಯಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಮಾಜಿ ಉಪ ಮೇಯರ್ ಮಹಮದ್ ಸನಾವುಲ್ಲಾ, ತಾಲೂಕು ಮಾಜಿ ಸದಸ್ಯ ಕೆ. ಮಂಜುನಾಥ್, ಬಲಿಜ ಸಮಾಜದ ತಾಲೂಕು ಗೌರವಾಧ್ಯಕ್ಷರಾದ ಜೆ.ಎಸ್ ಸಂಜೀವಮೂರ್ತಿ, ಎಸ್.ಎನ್ ಸುಬ್ರಮಣ್ಯ, ಉಪಾಧ್ಯಕ್ಷರಾದ ಪದ್ಮ ಹನುಮಂತಪ್ಪ, ಎಸ್.ಬಿ ಜಂಗಮಪ್ಪ, ಪ್ರಧಾನ ಕಾರ್ಯದರ್ಶಿ ಪಿ. ಸತೀಶ್, ಸಹ ಕಾರ್ಯದರ್ಶಿ ಟಿ. ರಮೇಶ್, ಮುಖಂಡರಾದ ಬಿ. ಗಂಗಾಧರ್, ಟಿ.ಡಿ ಶಶಿಕುಮಾರ್,  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಧಾರ್ಮಿಕರ ಸೇವಕರ ದಿನ : ಧರ್ಮಗುರು ರೋಮನ್ ಪಿಂಟೋಗೆ ಸನ್ಮಾನ

ಭದ್ರಾವತಿ ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ೯ ದಿನಗಳ ಭಕ್ತಿ ಕಾರ್ಯದಲ್ಲಿ ಭಾನುವಾರ ಧಾರ್ಮಿಕ ಸೇವಕರ ದಿನದ ಅಂಗವಾಗಿ ಕಬಳೆ ಧರ್ಮ ಕೇಂದ್ರದ ಧರ್ಮ ಗುರುಗಳಾದ ಫಾದರ್ ರೋಮನ್ ಪಿಂಟೋರವರನ್ನು ಸನ್ಮಾನಿಸಿ, ಗೌರವಿಸಲಾಯಿತು.  
    ಭದ್ರಾವತಿ: ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ೯ ದಿನಗಳ ಭಕ್ತಿ ಕಾರ್ಯದಲ್ಲಿ ಭಾನುವಾರ ಧಾರ್ಮಿಕ ಸೇವಕರ ದಿನವನ್ನಾಗಿ ಆಚರಿಸಲಾಯಿತು. 
    ಕಳೆದ ೨೩ ವರ್ಷಗಳಿಂದ ಸತತವಾಗಿ ಧಾರ್ಮಿಕ ಸೇವೆ ಸಲ್ಲಿಸುತ್ತಿರುವ ಕಬಳೆ ಧರ್ಮ ಕೇಂದ್ರದ ಧರ್ಮ ಗುರುಗಳಾದ ಫಾದರ್ ರೋಮನ್ ಪಿಂಟೋ ರವರಿಗೆ ಧರ್ಮ ಕೇಂದ್ರದ ಪರವಾಗಿ ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ,  ಸಿಸ್ಟರ್ ವಿನ್ಸಿ , ಸಿಸ್ಟರ್ ಶೋಭನ ರವರು ಸನ್ಮಾನಿಸಿ, ಗೌರವಿಸಿದರು. ಧರ್ಮಭಗಿನಿಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.

ದೇವಸ್ಥಾನ ನಿರ್ಮಾಣದ ಜೊತೆಗೆ ವಿನಾಯಕ ಮಹೋತ್ಸವ : ೧೭ನೇ ವರ್ಷದ ಮೂರ್ತಿ ವಿಸರ್ಜನೆ

ಭದ್ರಾವತಿ ನಗರಸಭೆ ವಾರ್ಡ್ ನಂ.೯ ಮತ್ತು ೧೦ರ ವ್ಯಾಪ್ತಿಯ ತಾಲೂಕು ಶ್ರೀ ವೈಷ್ಣವ ಸಂಸ್ಥಾಪಕರು ದೇವಸ್ಥಾನ, ಶ್ರೀ ಮಹಾವಿಷ್ಣು ಮೃತ್ಯುಂಜಯ ಮತ್ತು ಅಭಯ ಹಸ್ತ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಕಳೆದ ಸುಮಾರು ೧೭ ವರ್ಷಗಳಿಂದ ವಿನಾಯಕ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಭಾನುವಾರ ಸಂಜೆ ಮೂರ್ತಿ ವಿಸರ್ಜನೆ ನಡೆಸಲಾಯಿತು.   
    ಭದ್ರಾವತಿ: ನಗರಸಭೆ ವಾರ್ಡ್ ನಂ.೯ ಮತ್ತು ೧೦ರ ವ್ಯಾಪ್ತಿಯ ವಿಜಯನಗರದ ತಾಲೂಕು ಶ್ರೀ ವೈಷ್ಣವ ಸಂಸ್ಥಾಪಕರು ದೇವಸ್ಥಾನ, ಶ್ರೀ ಮಹಾವಿಷ್ಣು ಮೃತ್ಯುಂಜಯ ಮತ್ತು ಅಭಯ ಹಸ್ತ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಕಳೆದ ಸುಮಾರು ೧೭ ವರ್ಷಗಳಿಂದ ವಿನಾಯಕ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಭಾನುವಾರ ಸಂಜೆ ಮೂರ್ತಿ ವಿಸರ್ಜನೆ ನಡೆಸಲಾಯಿತು. 
    ದೇವಸ್ಥಾನದ ಪ್ರಧಾನ ಅರ್ಚಕರಾದ ನಗರದ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ನೌಕರ ಎನ್. ಗೋವಿಂದರಾಜುರವರು ತಮ್ಮ ಸ್ವಂತ ಜಾಗದಲ್ಲಿ ಕಳೆದ ಸುಮಾರು ೧೩ ವರ್ಷಗಳಿಂದ ಹಂತ ಹಂತವಾಗಿ ದೇವಸ್ಥಾನ ನಿರ್ಮಿಸುತ್ತಿದ್ದು, ಟ್ರಸ್ಟ್ ರಚಿಸಿಕೊಂಡು ಜಾಗ ಹಸ್ತಾಂತರಿಸುವ ಜೊತೆಗೆ ತಮ್ಮದೇ ಸುಮಾರು ೧೦ ಲಕ್ಷಕ್ಕೂ ಹೆಚ್ಚಿನ ಹಣ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ವ್ಯಯ ಮಾಡಿದ್ದಾರೆ. ಈ ನಡುವೆ ಜನಪ್ರತಿನಿಧಿ, ಸ್ಥಳೀಯ ಸಂಸ್ಥೆಗಳು ಹಾಗು ದಾನಿಗಳಿಂದ ಸಹಾಯ ಹಸ್ತ ನಿರೀಕ್ಷಿಸುತ್ತಿದ್ದಾರೆ. ಈ ಅವರ ನಿರೀಕ್ಷೆಗೆ ತಕ್ಕಂತೆ ನೆರವು ಬಂದಲ್ಲಿ ಶೀಘ್ರದಲ್ಲಿಯೇ ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. 
    ಈ ನಡುವೆ ವಿನಾಯಕ ಮಹೋತ್ಸವ, ಶ್ರೀ ರಾಮ ನವಮಿ, ವೈಕುಂಠ ಏಕಾದಶಿ ಸೇರಿದಂತೆ ಇನ್ನಿತರ ಹಬ್ಬ, ಉತ್ಸವಗಳನ್ನು ಸಹ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ವಿನಾಯಕ ಮೋಹತ್ಸವ ಅದ್ದೂರಿಯಾಗಿ ನಡೆಸುವ ಮೂಲಕ ಹೊಸಮನೆ ಅಶ್ವತ್ಥನಗರ ಭೂತಪ್ಪ ದೇವಸ್ಥಾನದ ಬಳಿ ಗೊಂದಿ ಕಾಲುವೆಯಲ್ಲಿ ಮೂರ್ತಿ ವಿಸರ್ಜನೆಯೊಂದಿಗೆ ಮುಕ್ತಾಯಗೊಳಿಸಲಾಗಿದೆ. 
    ಟ್ರಸ್ಟ್ ಅಧ್ಯಕ್ಷರಾದ ಪ್ರಧಾನ ಅರ್ಚಕ ಎನ್. ಗೋವಿಂದರಾಜು, ವ್ಯವಸ್ಥಾಪಕಿ ಡಿ. ಮಂಜುಳ ಗೋವಿಂದರಾಜು, ಪತ್ರಿಕಾ ವಿತರಕ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಲಕ್ಷಾಂತರ ರು. ಮೌಲ್ಯದ ಮಾಂಗಲ್ಯ ಸರ ಕಳ್ಳತನ : ಇಬ್ಬರ ಸೆರೆ

ಮನೆಯ ಬೀರುವಿನಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಇಬ್ಬರನ್ನು ಭದ್ರಾವತಿ ಪೇಪರ್‌ಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಭದ್ರಾವತಿ : ಮನೆಯ ಬೀರುವಿನಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಇಬ್ಬರನ್ನು ಪೇಪರ್‌ಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಬೆಂಗಳೂರಿನ ಕೆಂಗೇರಿ ನಿವಾಸಿಗಳಾದ ಆರ್. ಮಂಜುಳಾ(೨೧) ಮತ್ತು ಸುಜೈನ್ ಖಾನ್(೨೪) ಎಂಬುವರನ್ನು ಬಂಧಿಸಲಾಗಿದೆ. ಇಬ್ಬರು ದಂಪತಿಯಾಗಿದ್ದು, ಕಳ್ಳತನ ಮಾಡಿದ್ದ ಸುಮಾರು ೭,೮೨,೦೦೦ ರು. ಮೌಲ್ಯದ ೮೩ ಗ್ರಾಂ ತೂಕದ ಮಾಂಗಲ್ಯ ಸರ ವಶಪಡಿಸಿಕೊಳ್ಳಲಾಗಿದೆ. 
    ಘಟನೆ ವಿವರ : 
    ಆ.೧೮ ರಂದು ಕಾಗದನಗರದ ೫ನೇ ವಾರ್ಡ್ ನಿವಾಸಿ ಚಂದ್ರಮ್ಮ ಎಂಬುವರ ಮನೆಯ ಬೀರುವಿನಲ್ಲಿದ್ದ ೯೫ ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾಗಿರುವ ಸಂಬಂಧ ದೂರು ದಾಖಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪತ್ತೆ ಕಾರ್ಯಾಚರಣೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎ.ಜಿ ಕಾರಿಯಪ್ಪ ಹಾಗು ಎಸ್. ರಮೇಶ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ಹಾಗೂ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜರವರ ಮೇಲ್ವಿಚಾರಣೆಯಲ್ಲಿ, ಠಾಣಾ ಪೊಲೀಸ್ ನಿರೀಕ್ಷಕಿ ಕೆ. ನಾಗಮ್ಮರವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಾದ ಸಹಾಯಕ ಠಾಣಾ ನಿರೀಕ್ಷಕ ರತ್ನಾಕರ್, ಪ್ರಕಾಶ, ಅರುಣ್, ನಾಗರಾಜ, ಹನುಮಂತ, ಆಸ್ಮಾ, ಸ್ವೀಕೃತ ಮತ್ತು ಅನುರೂಪ ಅವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. 
    ಆರ್. ಮಂಜುಳಾ ಮತ್ತು ಸುಜೈನ್ ಖಾನ್ ಇಬ್ಬರು ಚಂದ್ರಮ್ಮನವರ ಸಂಬಂಧಿಗಳಾಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವಾಗ ಬೀರುವಿನಲ್ಲಿದ್ದ ಮಾಂಗಲ್ಯ ಸರ ಕಳ್ಳತನ ಮಾಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. 
    ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎ.ಜಿ ಕಾರಿಯಪ್ಪ ಹಾಗು ಎಸ್. ರಮೇಶ್ ಕುಮಾರ್‌ರವರು ತನಿಖಾ ತಂಡದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. 
 

ಭದ್ರಾವತಿ ಪೇಪರ್‌ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಲಕ್ಷಾಂತರ ರು. ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಬೆಂಗಳೂರಿನ ದಂಪತಿ ಆರ್. ಮಂಜುಳಾ-ಸುಜೈನ್ ಖಾನ್. 

ಶ್ರೀ ಕೃಷ್ಣ ದೇವರಾಯ ರಸ್ತೆ ಉದ್ಘಾಟನೆ

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಹಾಗು ಸಂಗೊಳ್ಳಿ ರಾಯಣ್ಣ ಖಾಸಗಿ ಬಸ್ ನಿಲ್ದಾಣದಿಂದ ರಂಗಪ್ಪ ವೃತ್ತ ಸಂಪರ್ಕಿಸುವ ಹೊಸಸೇತುವೆ ಮಾರ್ಗದ ರಸ್ತೆ ಇದೀಗ ಶ್ರೀ ಕೃಷ್ಣ ದೇವರಾಯ ರಸ್ತೆಯಾಗಿ ನಾಮಕರಣಗೊಂಡು ಭಾನುವಾರ ಉದ್ಘಾಟನೆಗೊಂಡಿತು. 
    ಭದ್ರಾವತಿ: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಹಾಗು ಸಂಗೊಳ್ಳಿ ರಾಯಣ್ಣ ಖಾಸಗಿ ಬಸ್ ನಿಲ್ದಾಣದಿಂದ ರಂಗಪ್ಪ ವೃತ್ತ ಸಂಪರ್ಕಿಸುವ ಹೊಸಸೇತುವೆ ಮಾರ್ಗದ ರಸ್ತೆ ಇದೀಗ ಶ್ರೀ ಕೃಷ್ಣ ದೇವರಾಯ ರಸ್ತೆಯಾಗಿ ನಾಮಕರಣಗೊಂಡು ಭಾನುವಾರ ಉದ್ಘಾಟನೆಗೊಂಡಿತು. 
    ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಂ.ಆರ್ ಸೀತಾರಾಮು ಹಾಗು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಅಳವಡಿಸಲಾಗಿರುವ ನಾಮಫಲಕ ಅನಾವರಣಗೊಳಿಸುವ ಮೂಲಕ ಶ್ರೀ ಕೃಷ್ಣ ದೇವರಾಯ ರಸ್ತೆ ಉದ್ಘಾಟಿಸಿದರು. 


    ಬಲಿಜ ಸಮುದಾಯದವರ ಕೋರಿಕೆ ಮೇರೆಗೆ ಈ ಹಿಂದೆ ಶ್ರೀ ಕೃಷ್ಣ ದೇವರಾಯ ರಸ್ತೆ ಹೆಸರು ನಾಮಕರಣಗೊಳಿಸುವ ಸಂಬಂಧ ನಗರಸಭೆಯಲ್ಲಿ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ನಗರಸಭೆ ಎಲ್ಲಾ ಸದಸ್ಯರು ಪಕ್ಷ ಬೇಧ ಮರೆತು ಒಮ್ಮತ ಸೂಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸರ್ಕಾರದಿಂದ ಅನುಮೋದನೆಗೊಂಡಿದೆ. 
    ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯರಾದ ಬಿ.ಟಿ ನಾಗರಾಜ್, ಬಸವರಾಜ ಬಿ. ಆನೇಕೊಪ್ಪ, ಅನುಸುಧ ಮೋಹನ್ ಪಳನಿ, ಕೆ. ಸುದೀಪ್ ಕುಮಾರ್, ಬಲಿಜ ಸಮಾಜದ ತಾಲೂಕು ಅಧ್ಯಕ್ಷ ಎಚ್.ಆರ್ ರಂಗನಾಥ್, ಉಪಾಧ್ಯಕ್ಷರಾದ ಪದ್ಮ ಹನುಮಂತಪ್ಪ, ಎಸ್.ಬಿ ಜಂಗಮಪ್ಪ, ಪ್ರಧಾನ ಕಾರ್ಯದರ್ಶಿ ಪಿ. ಸತೀಶ್, ಸಹ ಕಾರ್ಯದರ್ಶಿ ಟಿ. ರಮೇಶ್, ಮುಖಂಡರಾದ ಬಿ. ಗಂಗಾಧರ್, ಟಿ.ಡಿ ಶಶಿಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು. 

ಶನಿವಾರ, ಆಗಸ್ಟ್ 30, 2025

೨ನೇ ವರ್ಷದ ವಿನಾಯಕ ಮಹೋತ್ಸವ : ೩೧ರಂದು ವಿಸರ್ಜನೆ

ಭದ್ರಾವತಿ ನಗರದ ಭಾವಸಾರ ಯುವಕ ಮಂಡಳಿ ವತಿಯಿಂದ ೨ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಆ.೩೧ರ ಭಾನುವಾರ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ. 
    ಭದ್ರಾವತಿ: ನಗರದ ಭಾವಸಾರ ಯುವಕ ಮಂಡಳಿ ವತಿಯಿಂದ ೨ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಆ.೩೧ರ ಭಾನುವಾರ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ. 
    ಭೂತಗುಡಿಯ ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ಸುಮಾರು ೫ ಅಡಿ ಎತ್ತರದ ಆಕರ್ಷಕವಾದ ಗೋಕುಲ ಕೃಷ್ಣ ಗಣಪತಿ ಪ್ರತಿಷ್ಠಾಪಿಸಲಾಗಿದೆ. ಯುವಕ ಮಂಡಳಿ ಕಳೆದ ಬಾರಿ ಮೊದಲನೇ ವರ್ಷದ ವಿನಾಯಕ ಮಹೋತ್ಸವ ಅದ್ದೂರಿಯಾಗಿ ಆಚರಿಸಿದ್ದು, ಈ ಬಾರಿ ಸಹ ಅದ್ದೂರಿ ಆಚರಣೆ ನಡೆಯುತ್ತಿದ್ದು, ವಿಸರ್ಜನೆಗೂ ಮೊದಲು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ನಂತರ ಕಲಾ ತಂಡಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಸಂಜೆ ಭದ್ರಾ ನದಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದೆ. ಭಕ್ತದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಬಿ. ಮಂಜುನಾಥ್ ನಿಧನ

ಬಿ. ಮಂಜುನಾಥ್
    ಭದ್ರಾವತಿ : ಬೆಂಗಳೂರಿನ ಕರಣ್ ಎಚ್.ಆರ್ ಅಕಾಡೆಮಿ ತರಬೇತಿ ಕೇಂದ್ರದ ತರಬೇತಿದಾರ, ಮೂಲತಃ ನಗರದ ಬಿ. ಮಂಜುನಾಥ್(೪೩) ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ನಗರದ ಬೈಪಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಹಿಂದೂ ರುದ್ರಭೂಮಿಯಲ್ಲಿ ಶನಿವಾರ ಸಂಜೆ ನೆರವೇರಿತು. 
    ಮಂಜುನಾಥ್‌ರವರು ಬೆಂಗಳೂರಿನಲ್ಲಿ ಕರಣ್ ಎಚ್.ಆರ್ ಅಕಾಡೆಮಿ ತರಬೇತಿ ಆರಂಭಿಸುವ ಮೂಲಕ ಸಾವಿರಾರು ಮಂದಿ ನಿರುದ್ಯೋಗಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ತರಬೇತಿ ನೀಡಿ ಅವರಿಗೆ ಉದ್ಯೋಗ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. 
    ಮಂಜುನಾಥ್ ನಗರದ ವಿದ್ಯಾಮಂದಿರ ಶಾಲೆ ನಿವೃತ್ತ ಶಿಕ್ಷಕ ದಿವಂಗತ ಹುಲಿಗೆಮ್ಮನವರ ಪುತ್ರರಾಗಿದ್ದು, ಅಲ್ಲದೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕ ಶ್ರೀನಿವಾಸ್‌ರವರ ಸಹೋದರ(ತಮ್ಮ)ರಾಗಿದ್ದಾರೆ. ಇವರ ನಿಧನಕ್ಕೆ ಕಾರ್ಮಿಕ ಮುಖಂಡ ಐಸಾಕ್ ಲಿಂಕನ್, ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸೇರಿದಂತೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

೫೫ನೇ ವರ್ಷದ ವಿನಾಯಕ ಮಹೋತ್ಸವ : ಸತ್ಯನಾರಾಯಣ ಪೂಜೆ, ಹೋಮ, ಅನ್ನಸಂತರ್ಪಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಗಣೇಶ್ ಕಾಲೋನಿ ಜಿ.ಸಿ ಬಾಯ್ಸ್ ಯುವಕರ ಸಂಘದ ವತಿಯಿಂದ ೫೫ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಶನಿವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಹೋಮ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ ಗಣೇಶ್ ಕಾಲೋನಿ ಜಿ.ಸಿ ಬಾಯ್ಸ್ ಯುವಕರ ಸಂಘದ ವತಿಯಿಂದ ೫೫ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಶನಿವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಹೋಮ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. 
    ನ್ಯಾಯಬೆಲೆ ಅಂಗಡಿ ವಿತರಕರಾದ ಸಚ್ಚಿದಾನಂದ-ಎ.ಎಸ್ ಪದ್ಮಾವತಿ ದಂಪತಿ ಸತ್ಯನಾರಾಯಣ ಪೂಜೆ, ಹೋಮ ಧಾರ್ಮಿಕ ಆಚರಣೆ ನೆರವೇರಿಸಿದರು. ಗಣೇಶ್ ಕಾಲೋನಿ, ವಿದ್ಯಾಮಂದಿರ, ಹಾಲಪ್ಪ ಶೆಡ್, ಕಿತ್ತೂರುರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್), ಎನ್‌ಟಿಬಿ ಬಡಾವಣೆ ಸೇರಿದಂತೆ ಜನ್ನಾಪುರ ಸುತ್ತಮುತ್ತಲಿನ ನಿವಾಸಿಗಳು ಪಾಲ್ಗೊಂಡಿದ್ದರು.  ಸ್ಥಳೀಯ ಯುವಕರು ಒಗ್ಗಟ್ಟಾಗಿ ನಿರಂತರವಾಗಿ ವಿನಾಯಕ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದು, ೩೧ರ ಭಾನುವಾರ ವಿವಿಧ ಕಲಾತಂಡಗಳೊಂದಿಗೆ ಉತ್ಸವ ಮೆರವಣಿಗೆ ಮೂಲಕ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ.

ಶುಕ್ರವಾರ, ಆಗಸ್ಟ್ 29, 2025

ಗಣಪತಿ ಮೂರ್ತಿ ವಿಸರ್ಜನೆ : ಮೆರವಣಿಗೆಯಲ್ಲಿ ಯುವಕರ ಸಂಭ್ರಮ

ಭದ್ರಾವತಿ ನಗರದ ಜನ್ನಾಪುರ ಜಯಶ್ರೀ ವೃತ್ತದ ಸರ್ಕಾರಿ ಶಾಲೆ ಮುಂಭಾಗ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಶುಕ್ರವಾರ ವಿಸರ್ಜಿಸಲಾಯಿತು. 
    ಭದ್ರಾವತಿ: ನಗರದ ಜನ್ನಾಪುರ ಜಯಶ್ರೀ ವೃತ್ತದ ಸರ್ಕಾರಿ ಶಾಲೆ ಮುಂಭಾಗ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಶುಕ್ರವಾರ ವಿಸರ್ಜಿಸಲಾಯಿತು. 
    ಸುಮಾರು ೬ ಅಡಿ ಎತ್ತರದ ಆಕರ್ಷಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ೩ ದಿನಗಳ ಕಾಲ ಆರಾಧಿಸಿ ಸಂಜೆ ಕಲಾತಂಡಗಳೊಂದಿಗೆ ಜನ್ನಾಪರ ಪ್ರಮುಖ ರಸ್ತೆಗಳಲ್ಲಿ ಗಣಪತಿ ಮೂರ್ತಿ ಮೆರವಣಿಗೆ ನಡೆಸಲಾಯಿತು. ಯುವಕರು ಕಲಾತಂಡಗಳ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ರಾತ್ರಿ ಜನ್ನಾಪುರ ಕೆರೆಯಲ್ಲಿ ಮೂರ್ತಿ ವಿಸರ್ಜನೆ ನಡೆಯಿತು.

೯ ದಿನಗಳ ವೆಲಾಂಗಣಿ ಆರೋಗ್ಯ ಮಾತೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆ




ಭದ್ರಾವತಿ ಗಾಂಧಿನಗರದ ವೆಲಾಂಗಣಿ ಆರೋಗ್ಯ ಮಾತೆ ದೇವಾಲಯದ ೪೧ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೋರವರು ಮಾತೆಯ ಧ್ವಜಾರೋಹಣ ನೆರವೇರಿಸುವ ಮೂಲಕ ಅದ್ದೂರಿ ಚಾಲನೆ ನೀಡಿದರು. 
    ಭದ್ರಾವತಿ : ಇಲ್ಲಿನ ಗಾಂಧಿನಗರದ ವೆಲಾಂಗಣಿ ಆರೋಗ್ಯ ಮಾತೆ ದೇವಾಲಯದ ೪೧ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೋರವರು ಮಾತೆಯ ಧ್ವಜಾರೋಹಣ ನೆರವೇರಿಸುವ ಮೂಲಕ ಅದ್ದೂರಿ ಚಾಲನೆ ನೀಡಿದರು. 
    ಬ್ಯಾಂಡ್‌ಸೆಟ್ ತಂಡದೊಂದಿಗೆ ದೇವಾಲಯದ ಆವರಣಕ್ಕೆ ಮಾತೆಯ ಧ್ವಜವನ್ನು ಮೆರವಣಿಗೆ ಮೂಲಕ ತರಲಾಯಿತು. ದೇವಾಲಯದ ಮುಖ್ಯದ್ವಾರದ  ಮುಂಭಾಗ ನೂತನವಾಗಿ ಧ್ವಜಸ್ಥಂಭ ನಿರ್ಮಿಸಲಾಗಿದ್ದು, ಅದರ ಉದ್ಘಾಟನೆ ಕಾರ್ಯವನ್ನು ಸಹ ನೆರವೇರಿಸಲಾಯಿತು. 
    ಸೆ.೮ ರಂದು ನಡೆಯಲಿರುವ ಮಾತೆಯ ಮಹೋತ್ಸವದ ಅಂಗವಾಗಿ ೯ ದಿನಗಳು ಧಾರ್ಮಿಕ ಆಚರಣೆಗಳು ನಡೆಯಲಿದ್ದು, ದೇವಾಲಯವನ್ನು ತಳಿರು, ತೋರಣಗಳಿಂದ ಅಲಂಕರಿಸಲಾಗಿದೆ. 
    ದೇವಾಲಯದ ಧರ್ಮಗುರು ಫಾದರ್ ಸ್ಟೀವನ್ ಡೇಸಾ, ಶಿವಮೊಗ್ಗ ಧರ್ಮ ಕ್ಷೇತ್ರದ ಯುವಜನ ನಿರ್ದೇಶಕರಾದ ಫಾದರ್ ಫ್ರಾಂಕ್ಲಿನ್, ಫಾದರ್ ಸಂತೋಷ್ ಪೆರೇರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹಾಗು ಸುತ್ತಮುತ್ತಲ ಧರ್ಮ ಕೇಂದ್ರದ ಗುರುಗಳು, ಧರ್ಮಭಗಿನಿಯರು, ಗಾಯನ ಮಂಡಳಿ ಹಾಗೂ ಧರ್ಮ ಕೇಂದ್ರದ ಭಕ್ತರು ಉಪಸ್ಥಿತರಿದ್ದರು.

ಜಿ.ಸಿ ಬಾಯ್ಸ್ ಯುವಕರ ಸಂಘದಿಂದ ವಿನಾಯಕ ಮಹೋತ್ಸವ : ಆ.೩೦ರಂದು ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಗಣೇಶ್ ಕಾಲೋನಿ ಜಿ.ಸಿ ಬಾಯ್ಸ್ ಯುವಕರ ಸಂಘದ ವತಿಯಿಂದ ೫೫ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಈ ಬಾರಿ ನವಿಲಿನ ಮೇಲೆ ಕುಳಿತ ಆಕರ್ಷಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ ಗಣೇಶ್ ಕಾಲೋನಿ ಜಿ.ಸಿ ಬಾಯ್ಸ್ ಯುವಕರ ಸಂಘದ ವತಿಯಿಂದ ೫೫ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಆ.೩೧ರ ಭಾನುವಾರ ಮೂರ್ತಿ ವಿಸರ್ಜನೆ ನಡೆಯಲಿದೆ. 
    ಸ್ಥಳೀಯ ಯುವಕರು ಒಗ್ಗಟ್ಟಾಗಿ ನಿರಂತರವಾಗಿ ವಿನಾಯಕ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿ ನವಿಲಿನ ಮೇಲೆ ಕುಳಿತ ಆಕರ್ಷಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 
    ಆ.೩೦ರ ಶನಿವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ ಮತ್ತು ಮಧ್ಯಾಹ್ನ ೧೨ ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ೩೧ರ ಭಾನುವಾರ ವಿವಿಧ ಕಲಾತಂಡಗಳೊಂದಿಗೆ ಉತ್ಸವ ಮೆರವಣಿಗೆ ಮೂಲಕ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.  

ರಮೇಶ್ ನಿಧನ

ರಮೇಶ್ 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಸುರಗಿತೋಪು, ೪ನೇ ಕ್ರಾಸ್ ನಿವಾಸಿ ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಅಭಿಮಾನಿ ರಮೇಶ್(೫೫) ಶುಕ್ರವಾರ ನಿಧನ ಹೊಂದಿದ್ದಾರೆ. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಕಳೆದ ೩ ದಿನಗಳ ಹಿಂದೆ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ರಸ್ತೆಯಲ್ಲಿ ತೀವ್ರ ಅಸ್ವಸ್ಥಗೊಂಡು ಬಿದ್ದಿದ್ದ ಇವರನ್ನು ಬೆಳಗಿನ ಜಾವ ರಸ್ತೆಯಲ್ಲಿ ವಾಯು ವಿಹಾರಕ್ಕೆ ಬರುವವರು ಕಂಡು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. 
    ರಮೇಶ್ ಸುರಗಿತೋಪಿನಲ್ಲಿ ಒಬ್ಬರೇ ವಾಸವಿದ್ದು, ಪತ್ನಿ ಮತ್ತು ಮಕ್ಕಳು ದಾವಣಗೆರೆ ವಾಸವಿದ್ದಾರೆ. ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿ ಆವರಣದ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.  
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಅಭಿಮಾನಿಯಾಗಿದ್ದ ಇವರ ನಿಧನಕ್ಕೆ ಜೆಡಿಎಸ್ ಯುವ ಮುಖಂಡ ಎಂ.ಎ ಅಜಿತ್, ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿ ಹಾಗು ಸುರಗಿತೋಪು ನಿವಾಸಿಗಳು ಸಂತಾಪ ಸೂಚಿಸಿದ್ದಾರೆ. 

ಗುರುವಾರ, ಆಗಸ್ಟ್ 28, 2025

ಕಾಗದನಗರ ಕನ್ನಡ ಯುವಕರ ಸಂಘದ ೫೩ನೇ ವರ್ಷದ ವಿನಾಯಕ ಮಹೋತ್ಸವ

ಭದ್ರಾವತಿ ಕಾಗದನಗರದ ಕನ್ನಡ ಯುವಕರ ಸಂಘದ ವತಿಯಿಂದ ೫೩ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ. 
    ಭದ್ರಾವತಿ : ಕಾಗದನಗರದ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೩ನೇ ವರ್ಷದ ಗಣಪತಿ ಮೂರ್ತಿ ವಿಸರ್ಜನೆ ಆ.೩೧ರ ಭಾನುವಾರ ನಡೆಯಲಿದೆ.
    ಕನ್ನಡ ಯುವಕರ ಸಂಘ ತನ್ನದೇ ಆದ ಇತಿಹಾಸ ಹೊಂದಿದ್ದು, ಎಂಪಿಎಂ ಕಾರ್ಖಾನೆಯ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗ ಹಾಗು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳ ನಿವಾಸಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಈ ಹಿಂದೆ ಪ್ರತಿ ವರ್ಷ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಈ ಭಾಗದಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿತ್ತು. ಸಾವಿರಾರು ಮಂದಿ ಗಣಪತಿ ಮೂರ್ತಿ ವೀಕ್ಷಣೆಗೆ ಆಗಮಿಸುತ್ತಿದ್ದರು. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಹಾಗು ಮನರಂಜನೆ ಕಾರ್ಯಕ್ರಮಗಳು ಜರುಗುತ್ತಿದ್ದವು. ಸುಮಾರು ೧೦ ರಿಂದ ೧೫ ಸಾವಿರ ಮಂದಿ ಕಾರ್ಯಕ್ರಮ ವೀಕ್ಷಣೆಗಾಗಿ ಆಗಮಿಸುತ್ತಿದ್ದರು. ಅಲ್ಲದೆ ಲಾಟರಿ ಡ್ರಾ ಸಹ ಏರ್ಪಡಿಸಲಾಗುತ್ತಿತ್ತು. ಆದರೆ ಇದೀಗ ಎಲ್ಲವೂ ಇತಿಹಾಸದ ಪುಟದಲ್ಲಿ ಉಳಿದುಕೊಂಡಿವೆ.
    ಕಳೆದ ಸುಮಾರು ೧೦ ವರ್ಷಗಳಿಂದ ಎಂಪಿಎಂ ಕಾರ್ಖಾನೆ ಮುಚ್ಚಲ್ಪಟ್ಟಿದ್ದು, ಕಾರ್ಮಿಕರು ಕಾರ್ಖಾನೆಯ ವಸತಿ ಗೃಹಗಳನ್ನು ತೊರೆದಿದ್ದಾರೆ. ಈ ನಡುವೆ ಕೆಲವು ವಸತಿ ಗೃಹಗಳನ್ನು ಕಳೆದ ಸುಮಾರು ೩-೪ ವರ್ಷಗಳಿಂದ ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ಸಿಬ್ಬಂದಿಗಳಿಗೆ ನೀಡಲಾಗಿದ್ದು, ಬಹುತೇಕ ಸಿಬ್ಬಂದಿಗಳು ಹೊರ ರಾಜ್ಯದಿಂದ ಬಂದವರಾಗಿದ್ದಾರೆ. ಕಾರ್ಖಾನೆ ಒಳ ಭಾಗದಲ್ಲಿರುವ ಆಡಳಿತ ಕಛೇರಿಯ ಕೆಲವು ಕಟ್ಟಡಗಳನ್ನು ಕ್ಷಿಪ್ರ ಕಾರ್ಯ ಪಡೆ ಕಛೇರಿಗಳಿಗೆ ನೀಡಲಾಗಿದೆ. ಇದರಿಂದಾಗಿ ಈ ಭಾಗ ಸ್ವಲ್ಪ ಮಟ್ಟಿಗೆ ಜನ ವಸತಿ ಪ್ರದೇಶವಾಗಿ ಕಂಡು ಬರುತ್ತಿದೆ. ಉಳಿದಂತೆ ಕಾರ್ಖಾನೆಯ ಬಹುತೇಕ ವಸತಿ ಗೃಹಗಳು ಪಾಳು ಬಿದ್ದಿವೆ. ಖಾಲಿ ಜಾಗಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ.  ಆದರೂ ಈ ನಡುವೆ ಕೆಲವು ಯುವಕರು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಪುನಃ ಹಿಂದಿನ ವೈಭವ ಮರುಕಳುಹಿಸುವ ಆಶಾಭಾವನೆ ಹೊಂದಿದ್ದಾರೆ.
    ಈ ಬಾರಿ ೫ ದಿನಗಳ ಕಾಲ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ್ದು, ಕಾಗದನಗರದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೆರವಣಿಗೆಯೊಂದಿಗೆ ಮೂರ್ತಿ ವಿಸರ್ಜನೆ ನಡೆಯಲಿದೆ.

೫೩ನೇ ವರ್ಷದ ಹಿಂದೂ ಮಹಾಸಭಾ ಗಣಪತಿ

ಭದ್ರಾವತಿ ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ೫೩ನೇ ವರ್ಷದ ವಿನಾಯಕ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ಬಾರಿ ಶ್ವೇತ ವರ್ಣದ ಅರಳಿದ ಕಮಲದ ಆಕರ್ಷಕ ಆಲಂಕಾರದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 
     ಭದ್ರಾವತಿ : ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ೫೩ನೇ ವರ್ಷದ ವಿನಾಯಕ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಸೆ.೪ರಂದು ಮೂರ್ತಿ ವಿಸರ್ಜನೆ ನಡೆಯಲಿದೆ. 
    ನಗರದ ಪ್ರತಿಷ್ಠಿತ ವಿನಾಯಕ ಮೂರ್ತಿ ಇದ್ದಾಗಿದ್ದು, ಹಲವು ವಿಶಿಷ್ಟತೆ, ವಿಭಿನ್ನತೆಯಿಂದ ಕೂಡಿದೆ. ಹಿಂದೂ ಸಂಘಟನೆಗಳ ಶಕ್ತಿ ಕೇಂದ್ರ ಸ್ಥಾನವೇ ಇದಾಗಿದ್ದು, ಹಿಂದೂ ಧರ್ಮ, ಸಂಸ್ಕೃತಿ ಅನಾವರಣ, ಪ್ರತಿಷ್ಠೆ ಎಲ್ಲವೂ ಅಡಗಿದೆ. ಕಳೆದ ೫೩ ವರ್ಷಗಳಿಂದ ನಿರಂತರವಾಗಿ ವಿನಾಯಕ ಚತುರ್ಥಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. 
    ಈ ಬಾರಿ ಶ್ವೇತ ವರ್ಣದ ಅರಳಿದ ಕಮಲದ ಆಕರ್ಷಕ ಆಲಂಕಾರದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಳೇನಗರದ ಶಿಲ್ಪ ಕಲಾವಿದರಾದ ರಂಗಪ್ಪ ಕುಟುಂಬದವರು ಪ್ರತಿ ವರ್ಷದಂತೆ ಈ ಬಾರಿ ಸಹ ಮೂರ್ತಿ ತಯಾರಿಸಿದ್ದು, ಸುಮಾರು ೬ ಅಡಿ ಎತ್ತರವಿದೆ. 
    ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಹೋಮ-ಹವನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈಗಾಗಲೇ ನಗರದ ಪ್ರಮುಖ ವೃತ್ತಗಳಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಸೆ.೪ರಂದು ನಡೆಯಲಿರುವ ವಿಸರ್ಜನಾ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. 

ಪತ್ರಿಕಾ ವಿತರಕರ ಒಕ್ಕೂಟದಿಂದ ಕೀರ್ತನಾಗೆ ಪ್ರತಿಭಾ ಪುರಸ್ಕಾರ

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಸಮಾರಂಭದಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಭದ್ರಾವತಿ ನಗರದ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ : ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಸಮಾರಂಭದಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ನಗರದ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. 
    ಕೀರ್ತನಾ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೧೧ ಅಂಕ ಪಡೆದು ಶೇ.೯೭.೭೬ ಫಲಿತಾಂಶದೊಂದಿಗೆ ಅತ್ಯನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಶೇಷ ಎಂದರೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದು ಕೀರ್ತನಾ ಗಮನ ಸೆಳೆದಿದ್ದು, ಇವರು ನಗರದ ಹುಡ್ಕೋ ಕಾಲೋನಿ ನಿವಾಸಿ, ದಿನ ಪತ್ರಿಕೆಗಳ ವಿತರಕ ಕೃಷ್ಣಮೂರ್ತಿ ಮತ್ತು ಸ್ವರ್ಣಾಂಬ ದಂಪತಿ ಪುತ್ರಿಯಾಗಿದ್ದಾರೆ. 
    ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ಶಂಭುಲಿಂಗಪ್ಪ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹೊಸಮನೆ ಬೋವಿ ಕಾಲೋನಿಯಲ್ಲಿ 41ನೇ ವರ್ಷದ ಶ್ರೀ ವಿನಾಯಕ ಸ್ವಾಮಿ ಮಹೋತ್ಸವ


ಭದ್ರಾವತಿ ನಗರದ ಹೊಸಮನೆ ಭೋವಿ ಕಾಲೋನಿ, ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 41ನೇ ವರ್ಷದ ಶ್ರೀ ವಿನಾಯಕ ಸ್ವಾಮಿ ಮಹೋತ್ಸವ ಈ ಬಾರಿ ಸಹ ವಿಜೃಂಭಣೆಯಿಂದ ನಡೆಯುತ್ತಿದ್ದು, ಕಾಗದ ನಗರದ 7ನೇ ವಾರ್ಡ್ ನಾಗರಕಟ್ಟೆ ದೇವಸ್ಥಾನದ ಪ್ರಧಾನ ಅರ್ಚಕರಾದ ರಮೇಶ್  ತರಳಿ ಮಠರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗುತ್ತಿವೆ.
    ಭದ್ರಾವತಿ : ನಗರದ ಹೊಸಮನೆ ಭೋವಿ ಕಾಲೋನಿ, ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 41ನೇ ವರ್ಷದ ಶ್ರೀ ವಿನಾಯಕ ಸ್ವಾಮಿ ಮಹೋತ್ಸವ ಈ ಬಾರಿ ಸಹ ವಿಜೃಂಭಣೆಯಿಂದ ನಡೆಯುತ್ತಿದ್ದು, ಆ.31ರಂದು ವಿಸರ್ಜನೆಗೊಳ್ಳಲಿದೆ. 
    ಹಳೆನಗರದ ಕುಂಬಾರ ಬೀದಿ ಕಲಾವಿದ ಬಸವರಾಜು ಈ ಬಾರಿ ವಿನಾಯಕ ಮೂರ್ತಿ ತಯಾರಿಸಿದ್ದು, ಭಕ್ತರ ಮನಸೂರೆಗೊಳ್ಳುತ್ತಿದೆ. ಭೋವಿ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಈ ಪ್ರದೇಶದಲ್ಲಿ  ಭೋವಿ ಸಮಾಜದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ ಅವರ ದಿವ್ಯ ಸಾನಿಧ್ಯದಲ್ಲಿ ಸಮುದಾಯದವರು ಹಾಗು ವಿವಿಧ ಸಂಘಟನೆಗಳು ಸಂಘಟಿತರಾಗಿ ಶಾಂತಿ, ಸೌಹಾರ್ದಯುತವಾಗಿ ಶ್ರೀ ವಿನಾಯಕ ಚತುರ್ಥಿ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.   5 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ವಿನಾಯಕ ಮಹೋತ್ಸವದಲ್ಲಿ ಆರ್ಕೆಸ್ಟ್ರಾ ಮತ್ತು ಡ್ಯಾನ್ಸ್ ಈವೆಂಟ್ಸ್ ಕಾರ್ಯಕ್ರಮಗಳು ನಡೆಯಲಿದ್ದು, ಅಲ್ಲದೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಗಣಪತಿ ಹೋಮ, ಸಾಮೂಹಿಕ ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿದೆ.  
     ಕಾಗದ ನಗರದ 7ನೇ ವಾರ್ಡ್ ನಾಗರಕಟ್ಟೆ ದೇವಸ್ಥಾನದ ಪ್ರಧಾನ ಅರ್ಚಕರಾದ ರಮೇಶ್  ತರಳಿ ಮಠರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗುತ್ತಿವೆ.
    ಆ.31ರಂದು ವಿವಿಧ ಕಲಾ ತಂಡಗಳೊಂದಿಗೆ ಬೆಳಗ್ಗೆ 10:30ಕ್ಕೆ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ನಡೆಯಲಿದ್ದು, ಉತ್ಸವ ಮೆರವಣಿಗೆ ಪ್ರತಿಷ್ಠಾಪನೆ ಸ್ಥಳದಿಂದ ಶಿವಾಜಿ ವೃತ್ತ, ಹೊಸ ಮನೆ ಮುಖ್ಯರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ ಮೂಲಕ ನಗರದ ಕೆಎಸ್ಆರ್ ಟಿಸಿ ಮುಖ್ಯ ಬಸ್ ನಿಲ್ದಾಣದವರೆಗೆ ಸಾಗಿ ಪುನಹ ಹಿಂದಿರುಗಿ ಮಹಾತ್ಮ ಗಾಂಧಿ ರಸ್ತೆಯಲ್ಲಿ ಸಾಗಿ ಸಂಜೆ 7:30ಕ್ಕೆ ನಗರಸಭೆ ಮುಂಭಾಗದ ಭದ್ರ ನದಿಯಲ್ಲಿ ವಿಸರ್ಜನೆಗೊಳ್ಳಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಶ್ರೀ ವಿನಾಯಕ ಸೇವಾ ಸಮಿತಿ ಕೋರಿದೆ.

ಮಂಗಳವಾರ, ಆಗಸ್ಟ್ 26, 2025

ನಿವೃತ್ತ ಇಂಜಿನಿಯರ್ ಜೆ. ಚಂದ್ರಶೇಖರಪ್ಪ ನಿಧನ

ಜೆ. ಚಂದ್ರಶೇಖರಪ್ಪ 
    ಭದ್ರಾವತಿ : ನಗರದ ಸೈಲ್-ವಿಐಎಸ್‌ಎಲ್ ಕಾರ್ಖಾನೆಯ ನಿವೃತ್ತ ಇಂಜಿನಿಯರ್ ಜೆ. ಚಂದ್ರಶೇಖರಪ್ಪ(೮೨) ವಯೋಸಹಜವಾಗಿ ನಿಧನ ಹೊಂದಿದರು.   
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಕಾರ್ಖಾನೆಯ ಮೆಟಲರ್ಜಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ನಿವೃತ್ತಿ ಹೊಂದಿದ ನಂತರ ನಗರದ ಚನ್ನಗಿರಿ ರಸ್ತೆಯ ರಂಗಪ್ಪ ವೃತ್ತದಲ್ಲಿ ಕಿರಣ್ ಏಜೆನ್ಸಿಸ್ ಹೆಸರಿನಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತಿದ್ದರು. .ಉಂಬ್ಳೆಬೈಲ್ ಬೈಲ್ ಸಮೀಪದ ಕಣಗಲಸರ ಗ್ರಾಮದಲ್ಲಿರುವ ಇವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿತು. ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಆ.೨೯ರಿಂದ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದಲ್ಲಿ ೪೧ನೇ ವಾರ್ಷಿಕ ಮಹೋತ್ಸವ

ಭದ್ರಾವತಿ ಗಾಂಧಿನಗರದ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ಧರ್ಮಗುರು ಪಾದರ್ ಸ್ಟೀವನ್ ಡೇಸಾರವರು ಪತ್ರಿಕಾಗೋಷ್ಠಿಯಲ್ಲಿ ೪೧ನೇ ವಾರ್ಷಿಕ ಮಹೋತ್ಸವ ಕುರಿತು ಮಾಹಿತಿ ನೀಡಿದರು. 
    ಭದ್ರಾವತಿ : ಗಾಂಧಿನಗರದ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದಲ್ಲಿ ಆ.೨೯ ರಿಂದ ಸೆ.೮ರವರೆಗೆ ೪೧ನೇ ವಾರ್ಷಿಕ ಮಹೋತ್ಸವ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪುಣ್ಯಕ್ಷೇತ್ರದ ಧರ್ಮಗುರು ಪಾದರ್ ಸ್ಟೀವನ್ ಡೇಸಾ ತಿಳಿಸಿದರು. 
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಕುರಿತು ಮಾಹಿತಿ ನೀಡಿದರು. ಆ.೨೯ರ ಸಂಜೆ ೫.೩೦ಕ್ಕೆ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಎಸ್.ಜೆ ಸೆರಾವೊರವರು ಧ್ವಜಾರೋಹಣ ನೆರವೇರಿಸುವ ಮೂಲಕ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿ ವರ್ಷ ವಾರ್ಷಿಕ ಮಹೋತ್ಸವ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. 
    ಈ ಬಾರಿ ಸಹ ಪ್ರತಿದಿನ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ಹಿರಿಯರ ದಿನ, ಧಾರ್ಮಿಕರ ದಿನ, ವ್ಯಾಧಿಷ್ಟರ ದಿನ, ಯುವಜನರ ದಿನ, ವೈದ್ಯ, ದಾದಿಯರ ದಿನ, ಮಕ್ಕಳ ದಿನ, ಶಿಕ್ಷಕರ ದಿನ, ಕುಟುಂಬದ ದಿನ, ಯಾತ್ರಿಕರ ದಿನ ಮತ್ತು ಕೊನೆಯದಾಗಿ ಸರ್ವರ ದಿನ ಹೀಗೆ ಒಂದೊಂದು ದಿನ ಒಂದೊಂದು ಆಚರಣೆಗಳು ನಡೆಯಲಿವೆ. ಪ್ರತಿಯೊಂದು ಆಚರಣೆಯ ಹಿಂದೆ ಒಂದೊಂದು ಮಹತ್ವವಿದೆ. ಒಂದೊಂದು ಧ್ಯೆಯ ವಾಕ್ಯದೊಂದಿಗೆ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು.
    ಕಬಳೆ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಧರ್ಮಗುರು ಫಾ. ರೋಮನ್ ಪಿಂಟೋ ಪ್ರಬೋಧಕರಿಂದ ಆ.೩೧ರ ಭಾನುವಾರ ಬೆಳಿಗ್ಗೆ ೮.೩೦ ರಿಂದ ಸಂಜೆ ೭ ಗಂಟೆವರೆಗೆ ಆಧ್ಯಾತ್ಮಿಕ ನವೀಕರಣ ಧ್ಯಾನ ಕೂಟ & ನವೇನ ಮತ್ತು ಬಲಿಪೂಜೆ ನಡೆಯಲಿದೆ. ಸೆ.೭ರ ಭಾನುವಾರ ಸಂಜೆ ೫ ಗಂಟೆಗೆ ಜಪಸರ, ಬಲಿಪೂಜೆ, ಪ್ರಬೋಧನೆ ಮತ್ತು ನವೇನ ಸಂಜೆ ೬.೩೦ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾತೆಯ ಅಲಂಕೃತ ತೇರಿನ ಭಕ್ತಿಯುತ ಮೆರವಣಿಗೆ ನಡೆಯಲಿದೆ. ಸೆ.೮ರ ಸೋಮವಾರ ಮಾತೆಯ ಮಹೋತ್ಸವ ನಡೆಯಲಿದ್ದು, ಬೆಳಿಗ್ಗೆ ೭ಕ್ಕೆ, ೮.೩೦ಕ್ಕೆ ಮತ್ತು ೧೦ ಗಂಟೆಗೆ ಪೂಜೆಗಳು ಮತ್ತು ೧೧ ಗಂಟೆಗೆ ಸಿರೋ ಮಲಬಾರ್ ವಿಧಿಯಲ್ಲಿ ದಿವ್ಯ ಬಲಿಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಅನ್ನದಾನ, ಸಂಜೆ ೫.೩೦ಕ್ಕೆ ಮಹೋತ್ಸವದ ಸಾಂಭ್ರಮಿಕ ದಿವ್ಯ ಬಲಿಪೂಜೆ ಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಎಸ್.ಜೆ ಸೆರಾವೊರವರಿಂದ ನೆರವೇರಲಿದೆ ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಪುಣ್ಯಕೇತ್ರದ ಪಾಲನ ಕಾರ್ಯದರ್ಶಿ ಅಂತೋಣಿ ವಿಲ್ಸನ್, ಕ್ಯಾಥೋಲಿಕ್ ಅಸೋಯೇಷನ್‌ನ ಅಂತೋಣಿ, ನಿರ್ಮಲ ಆಸ್ಪತ್ರೆ ವ್ಯವಸ್ಥಾಪಕಿ ಸಿಸ್ಟರ್ ವಿಲ್ಮಾ, ಪುಣ್ಯಕೇತ್ರದ ಕಾರ್ಯದರ್ಶಿ ಎಲಿಜಾ ಲಾರೆನ್ಸ್, ಜೆಸ್ಸಿ ಗೋನ್ಸಾಲಿಸ್ ಮತ್ತು ಪೌಲ್ ಡಿಸೋಜಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ಭದ್ರಾ ಜಲಾಶಯದಲ್ಲಿ ಪರಿವೀಕ್ಷಣಾ ಮಂದಿರ ಲೋಕಾರ್ಪಣೆ

ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಲ್ಲಿ ನೀರಾವರಿ ಇಲಾಖೆಯಿಂದ ನೂತನವಾಗಿ ಪರಿವೀಕ್ಷಣಾ ಮಂದಿರ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಲೋಕಾರ್ಪಣೆಗೊಳಿಸಿದರು. 
    ಭದ್ರಾವತಿ: ತಾಲೂಕಿನ ಭದ್ರಾ ಜಲಾಶಯದಲ್ಲಿ ನೀರಾವರಿ ಇಲಾಖೆಯಿಂದ ನೂತನವಾಗಿ ಪರಿವೀಕ್ಷಣಾ ಮಂದಿರ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಲೋಕಾರ್ಪಣೆಗೊಳಿಸಿದರು. 
    ಪ್ರತಿ ವರ್ಷ ಜಲಾಶಯಕ್ಕೆ ಸಚಿವರು, ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ರೈತ ಮುಖಂಡರು, ಸರ್ಕಾರದ ಉನ್ನತ ಅಧಿಕಾರಿಗಳು, ಗಣ್ಯರು ಭೇಟಿ ನೀಡಿ ಭದ್ರೆಗೆ ಪೂಜೆ ಸಲ್ಲಿಸುತ್ತಿದ್ದಾರೆ. ಸುಸಜ್ಜಿತವಾದ ಪರಿವೀಕ್ಷಣಾ ಮಂದಿರ ನಿರ್ಮಾಣಗೊಂಡಿರುವುದು ಹೆಚ್ಚು ಅನುಕೂಲವಾಗಿದೆ. 
    ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ವಿವಿಧ ದೇವಾಲಯಗಳ ಅರ್ಚಕರಿಂದ ಧಾರ್ಮಿಕ ಆಚರಣೆಗಳು ನೆರವೇರಿದವು. 
    ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಪ್ರಮುಖರಾದ ಎಸ್. ಕುಮಾರ್, ಸಿ.ಎಂ ಖಾದರ್, ಮಣಿಶೇಖರ್, ಎಚ್. ರವಿಕುಮಾರ್, ಬಿ.ಕೆ ಜಗನ್ನಾಥ್, ಸೈಯದ್ ರಿಯಾಜ್, ಬಿ.ಎಸ್ ಗಣೇಶ್, ಬಿ.ಎಂ. ರವಿಕುಮಾರ್, ಬಿ.ಎಂ ಮಂಜುನಾಥ್, ಬಸವೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಪ್ರಮುಖರು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸೋಮವಾರ, ಆಗಸ್ಟ್ 25, 2025

ಪ್ರತಿಯೊಬ್ಬರೂ ಕಲಾವಿದರಿಗೆ ನೆರವಾಗಿ : ಎಸ್. ಮಣಿಶೇಖರ್

ಸಂತೋಷ್ ಸವದತ್ತಿ ಕರ್ನಾಟಕ ಸ್ಟಾರ್ ಸಿಂಗರ್-೨೦೨೫ 

ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಹಕಾರದೊಂದಿಗೆ ಸಂಘದ ೫ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭದ್ರಾವತಿ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಸ್ಟಾರ್ ಸಿಂಗರ್-೨೦೨೫, ಸೀಸನ್-೨ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯ ಅಂತಿಮ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಬೆಳಗಾವಿ ಸವದತ್ತಿ ತಾಲೂಕಿನ ಸಂತೋಷ್ ಸವದತ್ತಿ ಅವರಿಗೆ ನಗದು, ಪ್ರಶಸ್ತಿ ಪತ್ರ ಹಾಗು ಟ್ರೋಫಿ ವಿತರಿಸಲಾಯಿತು. 


ಭದ್ರಾವತಿ: ಕಲಾವಿದರಿಗೂ ಒಂದು ಬದುಕಿದ್ದು, ಸಮಾಜದಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ಲಭಿಸಿದಾಗ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಕ್ಷೇತ್ರದ ಕೀರ್ತಿ ಪತಾಕೆಯನ್ನು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಾರಿಸುವರು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸಹ ಕಲಾವಿದರಿಗೆ ನೆರವಾಗುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್ ಹೇಳಿದರು. 
     ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಹಕಾರದೊಂದಿಗೆ ಸಂಘದ ೫ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ  ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಸ್ಟಾರ್ ಸಿಂಗರ್-೨೦೨೫, ಸೀಸನ್-೨ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯ ಅಂತಿಮ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಕಲಾವಿದರು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ  ಕಾರ್ಯಕ್ರಮಗಳು ಸಹಕಾರಿಯಾಗಿವೆ. ಸಂಘದ ವತಿಯಿಂದ ಯುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
         ನಗರಸಭೆ ಉಪಾಧ್ಯಕ್ಷರಾದ ಮಣಿ ಎಎನ್‌ಎಸ್ ರವರು ಕಳೆದ ವರ್ಷ ನೀಡಿದ ಭರವಸೆಯಂತೆ ಸಂಘಕ್ಕೆ ತಮ್ಮ ಸ್ವಂತ ನಿವೇಶನ ಉಚಿತವಾಗಿ ಅವರ ತಾಯಿಯ ನೆನಪಿನಲ್ಲಿ ನೀಡುತ್ತಿದ್ದಾರೆ. ಈ ನಿವೇಶನದಲ್ಲಿ ಮುಂದಿನ ದಿನಗಳಲ್ಲಿ ನಿರ್ಮಾಣಗೊಳ್ಳುವ ಕಟ್ಟಡಕ್ಕೆ ಅವರ ತಾಯಿಯ ಹೆಸರನ್ನು ನಾಮಕರಣಗೊಳಿಸುವಂತೆ ಮನವಿ ಮಾಡಿದರು.
          ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ಕಲಾವಿದರಿಗೆ ಶಾಸಕರು ಹಾಗೂ ಕುಟುಂಬ ವರ್ಗದವರು ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಂದ ಇನ್ನು ಹೆಚ್ಚಿನ ಪ್ರೋತ್ಸಾಹ ಲಭಿಸುವ ವಿಶ್ವಾಸವಿದೆ. ನಾನು ಸಹ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲು ಸಿದ್ಧವಿದ್ದೇನೆ. ಕಲಾವಿದರು ತಮ್ಮ ಸಂಘಟನೆಯನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಬಲಪಡಿಸುವ ಮೂಲಕ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮುಂದುವರಿಸಬೇಕೆಂದು ಕರೆ ನೀಡಿದರು.
ಗಾಯಕರಾದ `ಅಜಯ್ ವಾರಿಯರ್' ಮತ್ತು `ಉಷಾ ಕೋಕಿಲ' ತೀರ್ಪುಗಾರರಾಗಿ ಹಾಗು `ವಿದ್ವಾನ್ ಮಹೇಂದ್ರ ಗೋರೆ'  ಸಹ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಅಂತಿಮ ಸ್ಪರ್ಧೆಯಲ್ಲಿ ಕಿರಣ್, ಮಂಜುನಾಥ್, ಅವಿನಾಶ್, ಸಂತೋಷ್, ಜೀವಿಕಾ, ಸಂಗೀತ, ಏಳುಮಲೈ, ಸುಪ್ರಜಾ ಜಿ. ಕಾಮತ್, ವಿಶಾಲ್, ವಿಶ್ವಾ ಜೆ. ಆಚಾರ್ಯ, ಪ್ರಜ್ಞಾ ದೀಪ್ತಿ, ವರ್ಷಿಣಿ, ರಘುಪತಿ ಮತ್ತು ಮಹೇಂದ್ರ ಶೆಟ್ಟಿ ಸೇರಿದಂತೆ ಒಟ್ಟು ೧೬ ಸ್ಪರ್ಧಿಗಳು ಪೈಪೋಟಿ ನಡೆಸಿದರು. 
ಪ್ರಶಸ್ತಿ ವಿಜೇತರು : 
ಬೆಳಗಾವಿ ಸವದತ್ತಿ ತಾಲೂಕಿನ ಸಂತೋಷ್ ಸವದತ್ತಿ ಮೊದಲ ಬಹುಮಾನ ರು. ೨೫ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ, ಶಿವಮೊಗ್ಗ ಸುಪ್ರಜಾ ಜಿ. ಕಾಮತ್ ದ್ವಿತೀಯ ಬಹುಮಾನ ರು. ೧೫ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ ಹಾಗು ಭದ್ರಾವತಿ ಸಿ.ಎನ್ ಚಂದನ ತೃತೀಯ ಬಹುಮಾನ ರು. ೧೦ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ, ಎನ್.ಪುರ ತಾಲೂಕಿನ ವಿಶ್ರಯಾ ಜೆ. ಆಚಾರ್ ಮತ್ತು ಮಂಗಳೂರಿನ ಮಹೇಂದ್ರ ಶೆಟ್ಟಿ  ಸಮಾಧಾನಕರ ಬಹುಮಾನ ರು. ೨ ಸಾವಿರ ನಗದು ಮತ್ತು ಭಿನಂದನ ಪತ್ರ ಪಡೆದುಕೊಂಡರು. ಉಳಿದಂತೆ ತೀರ್ಥಹಳ್ಳಿ ವರ್ಷಿಣಿ ಬೆಸ್ಟ್ ಎಂಟರ್ ಟೈನರ್ ಪ್ರಶಸ್ತಿಗೆ ಭಾಜನರಾದರು. 
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಲಾವಿದರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಜೀವಮಾನ ಸಾಧನೆಗಾಗಿ ಹಿರಿಯ ಕಲಾವಿದರಾದ ಬಿ. ಲೋಕನಾಥರಿಗೆ ದಿವಂಗತ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಂ ರಾಜ್ಯ ಪ್ರಶಸ್ತಿ, ಧನಪಾಲ್ ಸಿಂಗ್ ರಜಪೂತ್‌ರಿಗೆ ದಿವಂಗತ ಜಯಶೀಲನ್ ರಾಜ್ಯ ಪ್ರಶಸ್ತಿ ಮತ್ತು ದೀಪಕ್ ಜಯಶೀಲನ್‌ಗೆ ದಿವಂಗತ ಗೀತಾಂಜಲಿ ಶ್ರೀನಿವಾಸ್ ರಾಜ್ಯಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ ಹಿರಿಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.  ಶ್ರೀ ಬಸವೇಶ್ವರ ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್, ಯುವ ಕಾಂಗ್ರೆಸ್ ಮುಖಂಡ ಜನ್ನಾಪುರ ಪ್ರಭಾಕರ್, ಬೆಂಗಳೂರಿನ ಮಹಿಳಾ ಕೈಗಾರಿಕೋದ್ಯಮಿ ಪವಿತ್ರ ರಾಮಮೂರ್ತಿ, ನಿವೇಶನ ದಾನಿ ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯರಾದ ಚನ್ನಪ್ಪ, ಲತಾ ಚಂದ್ರಶೇಖರ್ ಐ.ವಿ ಸಂತೋಷ್ ಕುಮಾರ್, ಭೋವಿ ಸಮಾಜದ ಅಧ್ಯಕ್ಷ ಶಿವು ಪಾಟೀಲ್, ಗುತ್ತಿಗೆದಾರ ಎಂ.ಜಿ ರಾಮಚಂದ್ರನ್, ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಮಂಜುನಾಥ್, ಲಯನ್ಸ್ ಎಲ್. ದೇವರಾಜ್, ಸಂಘದ ಗೌರವ ಸಲಹೆಗಾರ ಬಿ. ರಾಜಾ ವಿಕ್ರಮ್, ಉಪಾಧ್ಯಕ್ಷ ವೈ.ಕೆ ಹನುಮಂತಯ್ಯ, ಪ್ರಧಾನ ಕಾರ್ಯದರ್ಶಿ ಚರಣ್ ಕವಾಡ್, ಸಹ ಕಾರ್ಯದರ್ಶಿ ಚಿದಾನಂದ, ಖಜಾಂಚಿ ಎ. ಪ್ರಶಾಂತ್, ಸಹ ಕಾರ್ಯದರ್ಶಿ ಬಿ. ಚಿದಾನಂದ್, ಸಂಘಟನಾ ಕಾರ್ಯದರ್ಶಿ ಡಿ.ವಿ ರಾಮು, ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್, ಶಂಕರ್ ಬಾಬು, ಮುರುಗೇಶ್, ದೇವರಾಜ್, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 
 

ಭಾನುವಾರ, ಆಗಸ್ಟ್ 24, 2025

ಭದ್ರಾವತಿ ಕ್ಷೇತ್ರದ ಅಭಿವೃದ್ಧಿ ಹರಿಕಾರ ಶಾಸಕ ಸಂಗಮೇಶ್ವರ್‌ಗೆ ಸಚಿವ ಸ್ಥಾನ ಲಭಿಸಲಿ : ಬಿಳಿಕಿ ಶ್ರೀ

ಭದ್ರೆಗೆ ಬಾಗಿನ ಅರ್ಪಣೆ, ಪರಿವೀಕ್ಷಣಾ ಮಂದಿರ ಉದ್ಘಾಟನೆ ಕಾರ್ಯಕ್ರಮ 

ಭದ್ರಾವತಿ ಜೀವ ನದಿ ಭದ್ರೆ ಈ ಬಾರಿ ಸಹ ಮೈತುಂಬಿ ಹರಿಯುತ್ತಿದ್ದು, ಭದ್ರಾ ಜಲಾಶಯ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿ ವರ್ಷದಂತೆ ಈ ಬಾರಿ ಸಹ ಭಾನುವಾರ ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಭದ್ರೆಗೆ ಬಾಗಿನ ಸಮರ್ಪಿಸಿದರು. 
    ಭದ್ರಾವತಿ : ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸದಾ ಕಾಲ ಶ್ರಮಿಸುತ್ತಿದ್ದಾರೆ. ಇವರ ಕೋರಿಕೆಯಂತೆ ರಾಜ್ಯ ಸರ್ಕಾರ ಸಹ ಪೂರಕವಾಗಿ ಸ್ಪಂದಿಸುವ ಮೂಲಕ ಹೆಚ್ಚಿನ ಅನುದಾನ ಸಹ ಬಿಡುಗಡೆಗೊಳಿಸುತ್ತಿದೆ. ಮುಂದಿನ ದಿನಗಳಲ್ಲಿ ಇವರಿಗೂ ಸಚಿವ ಸ್ಥಾನ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 
    ಅವರು ಭಾನುವಾರ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾ ಜಲಾಶಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೀವನದಿ ಭದ್ರೆಗೆ ಬಾಗಿನ ಅರ್ಪಣೆ, ಗಂಗಾ ಪೂಜೆ ಹಾಗು ನೂತನವಾಗಿ ನಿರ್ಮಾಣಗೊಂಡಿರುವ ಪರಿವೀಕ್ಷಣಾ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. 
    ಜಾತಿ, ಪಂಥ, ಮತಗಳನ್ನು ಮೀರಿದ ಜಿಲ್ಲೆಯ ಏಕೈಕ ಜನಪ್ರತಿನಿಧಿ ಶಾಸಕ ಬಿ.ಕೆ ಸಂಗಮೇಶ್ವರ್ ಎಂದರೆ ತಪ್ಪಾಗಲಾರದು. ಅವರು ಕ್ಷೇತ್ರದಲ್ಲಿ ಶಾಸಕರಾದಾಗಿನಿಂದಲೂ ನಿರಂತರವಾಗಿ ಭದ್ರೆಗೆ ಬಾಗಿನ ಅರ್ಪಿಸುವ ಪುಣ್ಯದ ಕಾರ್ಯ ನೆರವೇರಿಸಿಕೊಂಡು ಬರುತ್ತಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅಭಿವೃದ್ಧಿ ಹರಿಕಾರರಾಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ, ಅಧಿಕಾರ, ಸ್ಥಾನಮಾನಗಳು ಲಭಿಸುವಂತಾಗಲಿ. ಅಲ್ಲದೆ ಕ್ಷೇತ್ರದ ಪ್ರತಿಯೊಬ್ಬರ ಸಹಕಾರ ಬಹಳ ಮುಖ್ಯವಾಗಿದ್ದು, ಶಾಸಕರು ಮಾತ್ರವಲ್ಲ ಅವರ ಇಡೀ ಕುಟುಂಬ ಪ್ರಸ್ತುತ ಜನರ ಸೇವೆಯಲ್ಲಿ ತೊಡಗಿದೆ. ಇಂತಹ ಕುಟುಂಬಕ್ಕೆ ಮುಂದಿನ ದಿನಗಳಲ್ಲೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಭದ್ರೆ ಕೇವಲ ನೀರಲ್ಲ. ಇದೊಂದು ಅಮೃತವಾಗಿದ್ದು, ಇಂದು ಲಕ್ಷಾಂತರ ಜನರು ಅವಲಂಬಿಸಿದ್ದಾರೆ. ಇಂತಹ ಅಮೃತ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುತ್ತಿರುವುದು ಶಾಸಕರು ಪುಣ್ಯ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಳೆಯಾಗದೆ ಬರಗಾಲ ಬರುತ್ತದೆ. ಜಲಾಶಯಗಳಲ್ಲಿ ನೀರಿಲ್ಲದೆ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೆಂದು ಕೆಲವರು ದೂರುತ್ತಾರೆ. ಆದರೆ ಇಂದು ರಾಜ್ಯದೆಲ್ಲೆಡೆ ನಿರಂತರವಾಗಿ ಮಳೆಯಾಗುತ್ತಿದೆ ಜಲಾಶಯಗಳು ಭರ್ತಿಯಾಗಿ ಜನರು ನೆಮ್ಮದಿ ಬದುಕು ಕಾಣುವಂತಾಗಿದೆ ಎಂದರು. 
    ನಗರದ ಜಾಮೀಯಾ ಮಸೀದಿ ಮೌಲಾನ ಖಾದೀರಿ ಮಾತನಾಡಿ, ಪ್ರತಿವರ್ಷ ಶಾಸಕರು ಸರ್ವಧರ್ಮ ಗುರುಗಳ ನೇತೃತ್ವದಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನೆರವೇರಿಸಿಕೊಂಡು ಬರುತ್ತಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿರುವ ಇವರಿಗೆ ಇನ್ನೂ ಹೆಚ್ಚಿನ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. 
    ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಪ್ರಮುಖರಾದ ಎಸ್. ಕುಮಾರ್, ಸಿ.ಎಂ ಖಾದರ್, ಮಣಿಶೇಖರ್, ಎಚ್. ರವಿಕುಮಾರ್, ಬಿ.ಕೆ ಜಗನ್ನಾಥ್, ಸೈಯದ್ ರಿಯಾಜ್, ಬಿ.ಎಸ್ ಗಣೇಶ್, ಬಿ.ಎಂ. ರವಿಕುಮಾರ್, ಬಿ.ಎಂ ಮಂಜುನಾಥ್, ಬಸವೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಪ್ರಮುಖರು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಎಚ್.ಎಲ್ ಷಡಾಕ್ಷರಿ ಸ್ವಾಗತಿಸಿ, ಲತಾ ಚಂದ್ರಶೇಖರ್ ಸಂಗಡಿಗರು ಪ್ರಾರ್ಥಿಸಿದರು. ಎಂ. ಶಿವಕುಮಾರ್, ಮುಸ್ವೀರ್ ಬಾಷಾ ನಿರೂಪಿಸಿದರು. 

ಶನಿವಾರ, ಆಗಸ್ಟ್ 23, 2025

ಅಥರ್ವ ಶಾಲೆಯಲ್ಲಿ ವೈಭವಯುತ ಶ್ರೀ ಕೃಷ್ಣ ಜನ್ಮಾಷ್ಟಮಿ : ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಣ್ಮನ ಸೆಳೆದ ಮಕ್ಕಳು

ಭದ್ರಾವತಿ ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳು ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಂಗೊಳಿಸಿದರು. 
    ಭದ್ರಾವತಿ : ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳು ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಂಗೊಳಿಸಿದರು. 


    ಶ್ರೀ ಕೃಷ್ಣ-ರಾಧೆ ವೇಷದೊಂದಿಗೆ ವೇದಿಕೆ ಮೇಲೆ ಪ್ರದರ್ಶನ ನೀಡಿದ ಮಕ್ಕಳು ತಮ್ಮದೇ ಆದ ಹಾವ-ಭಾವ ಭಂಗಿಗಳಿಂದ, ಮಾತುಗಳಿಂದ ಎಲ್ಲರನ್ನು ರಂಜಿಸುವ ಮೂಲಕ ಕಣ್ಮನ ಸೆಳೆದರು. ಕಾರ್ಯಕ್ರಮಕ್ಕೆ ಪೂರಕವಾಗಿ ವೈಭವಯುತವಾದ ವೇದಿಕೆಯನ್ನು ಸಹ ಸಿದ್ದಪಡಿಸಲಾಗಿತ್ತು. 

ಭದ್ರಾವತಿ ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳು ಬಣ್ಣದ ಮಡಿಕೆ ಒಡೆದು ಸಂಭ್ರಮಿಸಿದರು.
    ಈ ನಡುವೆ ಶಾಲೆ ಒಳ ಭಾಗದಲ್ಲಿ ಶ್ರೀ ಕೃಷ್ಣ-ರಾಧೆ ಇಬ್ಬರೂ ನಿಧಿವನದಲ್ಲಿ ವಿಹಾರಗೊಂಡಿರುವಂತೆ ಅದ್ಭುತವಾಗಿ ಅಲಂಕರಿಸಲಾಗಿತ್ತು. ಮಕ್ಕಳು, ಪೋಷಕರು ಕಣ್ತುಂಬಿಕೊಂಡರು. ಮತ್ತೊಂದೆಡೆ ಶಾಲಾ ಆವರಣದಲ್ಲಿ ಅಲಂಕೃತಗೊಂಡ ಜೋಕಾಲಿಯಲ್ಲಿ ಮಕ್ಕಳು ಕುಳಿತು ಆಟವಾಡಿ ಇನ್ನೊಂದೆಡೆ ಬಣ್ಣದ ಮಡಿಕೆ ಒಡೆದು ಸಂಭ್ರಮಿಸಿದರು. ಶ್ರೀಕೃಷ್ಣ-ರಾಧೆ ವೇಷ ಧರಿಸಿದ್ದ ತಮ್ಮ ಮಕ್ಕಳ ಹಾವ-ಭಾವ ಭಂಗಿಗಳನ್ನು ಪೋಷಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಆನಂದಿಸಿದರು. 


ಭದ್ರಾವತಿ ನಗರದ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಶನಿವಾರ ೨ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಯಿತು. ಅಲಂಕೃತಗೊಂಡ ಜೋಕಾಲಿಯಲ್ಲಿ ಮಕ್ಕಳು ಕುಳಿತು ಆಟವಾಡಿ ಸಂಭ್ರಮಿಸಿದರು. 
    ಅಕ್ಕನ ಬಳಗದ ಕಾರ್ಯದರ್ಶಿ ಸುಧಾಮಣಿ ಮತ್ತು  ಶಿವಮೊಗ್ಗ ಪತಾಂಜಲಿ ನಾಗರಾಜ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಮಕ್ಕಳನ್ನು ಅಭಿನಂದಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ.ಎಚ್ ಲಾವಣ್ಯ, ನಿರ್ವಾಹಕ ಶಿವಕುಮಾರ್ ಸೇರಿದಂತೆ ಶಾಲೆಯ ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಲಾಡು ವಿತರಿಸಲಾಯಿತು. 



ಜಾತಿ ನಿಂದನೆ, ಮಾನಹಾನಿಗೆ ಯತ್ನ ೩ ಆರೋಪಿಗಳಿಗೆ ೪ ವರ್ಷ ಶಿಕ್ಷೆ


    ಭದ್ರಾವತಿ: ಪೊಲೀಸ್ ಠಾಣೆಗೆ ದೂರು ನೀಡಿದ ಲಂಬಾಣಿ (ಪರಿಶಿಷ್ಟ ಜಾತಿ) ಜನಾಂಗಕ್ಕೆ ಸೇರಿದ ಮಹಿಳೆಯೊಬ್ಬರ ಮೇಲೆ ಜಾತಿ ನಿಂದನೆ, ಹಲ್ಲೆ ಮಾಡಿ ಮಾನಹಾನಿಗೆ ಯತ್ನಿಸಿದ್ದ ನಾಲ್ವರು ಆರೋಪಿಗಳಿಗೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಶನಿವಾರ ೪ ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ. 
    ತಾಲೂಕಿನ ಸಿರಿಯೂರು ವೀರಾಪುರ ಗ್ರಾಮದ ಮನು (ಮೃತಪಟ್ಟಿದ್ದಾರೆ), ಶ್ರೀಧರ, ಮೋಹನ್ ಮತ್ತು ಹರೀಶ್ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ೧೦ ಆಗಸ್ಟ್, ೨೦೧೮ರಂದು ಇದೆ ಗ್ರಾಮದ ಲಂಬಾಣಿ ಜನಾಂಗದ ಮಹಿಳೆಯೊಬ್ಬರ ಮನೆಗೆ ಈ ನಾಲ್ವರು ಆರೋಪಿಗಳು ನುಗ್ಗಿ ದಾಂಧಲೆ ನಡೆಸುವ ಜೊತೆಗೆ ಆಶ್ಲೀಲ ಪದಗಳಿಂದ ಜಾತಿ ನಿಂದನೆ ಮಾಡಿ ಮನೆಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಮಾನಹಾನಿಗೆ ಯತ್ನಿಸಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
    ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಂದಿನ ಪೊಲೀಸ್ ಉಪಾಧೀಕ್ಷಕರಾಗಿದ್ದ ಓಂಕಾರ ನಾಯ್ಕರವರು ತನಿಖಾಧಿಕಾರಿಯಾಗಿ ಹಾಗು ಸಹಾಯಕ ಠಾಣಾ ಉಪ ನಿರೀಕ್ಷಕರಾಗಿದ್ದ ಕೆ.ಎಚ್ ಜಯಪ್ಪ ಸಹಾಯಕ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 
    ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ರತ್ನಮ್ಮ ವಾದ ಮಂಡಿಸಿದ್ದರು. 

ರಾಷ್ಟ್ರೀಯ ಮಾಸ್ಟರ್‍ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜಂಜುಂಡೇಗೌಡರಿಗೆ ಚಿನ್ನದ ಪದಕ

ಇತ್ತೀಚಿಗೆ ಕೇರಳದ ಕೊಯಿಕೋಡ್(ಕ್ಯಾಲಿಕಟ್)ನಲ್ಲಿ ಜರುಗಿದ ರಾಷ್ಟ್ರೀಯ ಮಾಸ್ಟರ್‍ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭದ್ರಾವತಿ ನಗರದ ವಿಐಎಸ್‌ಎಲ್ ವ್ಯಾಯಾಮ ಶಾಲೆಯ ನಂಜುಂಡೇಗೌಡರವರು ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ: ಇತ್ತೀಚಿಗೆ ಕೇರಳದ ಕೊಯಿಕೋಡ್(ಕ್ಯಾಲಿಕಟ್)ನಲ್ಲಿ ಜರುಗಿದ ರಾಷ್ಟ್ರೀಯ ಮಾಸ್ಟರ್‍ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ವಿಐಎಸ್‌ಎಲ್ ವ್ಯಾಯಾಮ ಶಾಲೆಯ ನಂಜುಂಡೇಗೌಡರವರು ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿಯಾಗಿರುವ ನಂಜುಂಡೇಗೌಡರವರು ೬೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕ ತಮ್ಮದಾಗಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 
    ನಂಜುಂಡೇಗೌಡರವರು ಈಗಾಗಲೇ ರಾಷ್ಟ್ರ ಮತ್ತು ರಾಜ್ಯಮಟ್ಟದ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನಗರದ ಕ್ರೀಡಾಪಟುಗಳು, ಅಭಿಮಾನಿಗಳು ಹಾಗು ಗಣ್ಯರು ಇವರನ್ನು ಅಭಿನಂದಿಸಿದ್ದಾರೆ. 

ಗಂಡನ ಕೊಲೆಗೈದ ಪತ್ನಿ, ಬಾಲ್ಯದ ಸ್ನೇಹಿತನಿಗೆ ಮರಣ ದಂಡನೆ ಶಿಕ್ಷೆ

ಮರಣ ದಂಡನೆ ಶಿಕ್ಷೆಗೆ ಗುರಿಯಾದ ಆರೋಪಿ ಲಕ್ಷ್ಮಿ.
    ಭದ್ರಾವತಿ : ಸುಮಾರು ೯ ವರ್ಷಗಳ ಹಿಂದೆ ನಡೆದಿದ್ದ ವ್ಯಕ್ತಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಮರಣ ದಂಡನೆ ಹಾಗು ಓರ್ವನಿಗೆ ೭ ವರ್ಷ ಶಿಕ್ಷೆ ವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಶನಿವಾರ ತೀರ್ಪು ನೀಡಿ ಆದೇಶಿಸಿದ್ದಾರೆ. 
    ಜನ್ನಾಪುರ ಎನ್‌ಟಿಬಿ ರಸ್ತೆ ನಿವಾಸಿಗಳಾದ ಲಕ್ಷ್ಮಿ(೩೮) ಮತ್ತು ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ(೩೯) ಮರಣ ದಂಡನೆ ಶಿಕ್ಷೆಗೆ ಒಳಗಾದ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿ ಶಿವರಾಜ ಅಲಿಯಾಸ್ ಶಿಷು ಅಲಿಯಾಸ್ ಶಿವರಾಜು(೪೧)ಗೆ ೭ ವರ್ಷ ಶಿಕ್ಷೆ ವಿಧಿಸಲಾಗಿದೆ. 
    ಶಿಕ್ಷಕ ಇಮ್ತಿಯಾಜ್ ಅಹಮದ್ ಖಾನ್ ಕೊಲೆಯಾದ ದುರ್ದೈವಿಯಾಗಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಇವರ ಸಹೋದರ(ತಮ್ಮ) ಜು.೮, ೨೦೧೬ರ ರಾತ್ರಿ ದೂರು ನೀಡಿ ಉದ್ದೇಶ ಪೂರ್ವಕವಾಗಿ ಲಕ್ಷ್ಮಿ ಮತ್ತು ಕೃಷ್ಣಮೂರ್ತಿ ಇಬ್ಬರು ಸೇರಿ ಕೊಲೆ ಮಾಡಿ ಮೃತದೇಹವನ್ನು ಹೊಳೆಗೆ ಎಸೆದಿದ್ದು, ಹುಡುಕಿ ಕೊಡುವಂತೆ ಕೋರಿದ್ದರು. 


ಮರಣ ದಂಡನೆ ಶಿಕ್ಷೆಗೆ ಗುರಿಯಾದ ಆರೋಪಿ ಕೃಷ್ಣಮೂರ್ತಿ 

    ಇದರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಅಂದಿನ ಠಾಣಾಧಿಕಾರಿಯಾಗಿದ್ದ ತನಿಖಾಧಿಕಾರಿ ಟಿ.ಕೆ ಚಂದ್ರಶೇಖರ್ ಮತ್ತು ಮಹಿಳಾ ಕಾನ್ಸ್‌ಸ್ಟೇಬಲ್ ಸಹಾಯಕ ತನಿಖಾಧಿಕಾರಿಯಾಗಿದ್ದ ಅನ್ನಪೂರ್ಣರವರು ೩ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. 
    ಘಟನೆ ವಿವರ : 
    ಇಮ್ತಿಯಾಜ್ ಅಹಮದ್ ಖಾನ್ ಗುಲ್ಬರ್ಗ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮಿಯನ್ನು ಪ್ರೀತಿಸಿ ವಿವಾಹವಾಗಿದ್ದು, ನಂತರ ಇಮ್ತಿಯಾಜ್ ಸೊರಬ ತಾಲೂಕಿನ ತೆಲಗುಂದ ಗ್ರಾಮದ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದಾನೆ. ಲಕ್ಷ್ಮಿ ತಾಲೂಕಿನ ಅಂತರಗಂಗೆ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದಾಳೆ. ಇಮ್ತಿಯಾಜ್ ತನ್ನ ತಮ್ಮನ ಮನೆಯಲ್ಲೇ ಇದ್ದು, ಅಲ್ಲಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದನು. ಲಕ್ಷ್ಮಿ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿ ವಾಸವಿದ್ದಳು. ಈ ನಡುವೆ ಲಕ್ಷ್ಮೀಗೆ ಬಾಲ್ಯದ ಸ್ನೇಹಿತ, ಚಾಲಕ ಕೃಷ್ಣಮೂರ್ತಿಯೊಂದಿಗೆ ಅನೈತಿಕ ಸಂಬಂಧವಿದ್ದು, ಈ ಹಿನ್ನಲೆಯಲ್ಲಿ ಲಕ್ಷ್ಮೀ ಮನೆ ಸಮೀಪದಲ್ಲಿಯೇ ಈತನ ಸಹ ವಾಸವಿದ್ದನು ಎನ್ನಲಾಗಿದೆ. ಈ ವಿಚಾರ ಇಮ್ತಿಯಾಜ್‌ಗೆ ತಿಳಿದು ಆಗಾಗ ಲಕ್ಷ್ಮಿ ಜೊತೆಗೆ ಜಗಳ ಸಹ ನಡೆದಿದೆ. 


೭ ವರ್ಷ ಶಿಕ್ಷೆಗೆ ಗುರಿಯಾದ ಶಿವರಾಜು 
    ಜು.೭, ೨೦೧೬ರ ರಾತ್ರಿ ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದು ಇಮ್ತಿಯಾಜ್ ಕೊಲೆಯೊಂದಿಗೆ ಅಂತ್ಯವಾಗಿದೆ. ಈ ವಿಚಾರ ಲಕ್ಷ್ಮಿ ಇಮ್ಮಿಯಾಜ್ ತಮ್ಮನಿಗೆ ತಿಳಿಸಿದ್ದು, ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿರುವ ಅನುಮಾನದ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದರು. 
    ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದರು. ಲಕ್ಷ್ಮೀ ಮತ್ತು ಕೃಷ್ಣಮೂರ್ತಿ ಇಬ್ಬರು ಸೇರಿ ಕೊಲೆ ಮಾಡಿ ಮೃತದೇಹವನ್ನು ಬೈಪಾಸ್ ರಸ್ತೆಯ ಭದ್ರಾ ಸೇತುವೆ ಬಳಿ ನದಿಗೆ ಎಸೆದಿದ್ದರು. ಈ ಕೃತ್ಯಕ್ಕೆ ಸಹಕರಿಸಿದ್ದ ಶಿವರಾಜುನನ್ನು ಸಹ ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು. 

ಶುಕ್ರವಾರ, ಆಗಸ್ಟ್ 22, 2025

ಆರ್‌ಎಎಫ್ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ೩೮ ಮಂದಿ ರಕ್ತದಾನ

ರಕ್ತದ ಅಗತ್ಯತೆ ಹಾಗು ರಕ್ತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಿರುವ ಜಿಲ್ಲಾ ಪೊಲೀಸ್ ಭದ್ರಾವತಿ ನಗರದ ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್) ಹಾಗು ಜೀವ ಸಂಜೀವಿನಿ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಹಯೋಗದೊಂದಿಗೆ ಶುಕ್ರವಾರ ೫೪ನೇ ರಕ್ತದಾನ ಶಿಬಿರ ಆಯೋಜಿಸುವಲ್ಲಿ ಯಶಸ್ವಿಯಾಗಿದೆ.
  ಭದ್ರಾವತಿ : ರಕ್ತದ ಅಗತ್ಯತೆ ಹಾಗು ರಕ್ತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಿರುವ ಜಿಲ್ಲಾ ಪೊಲೀಸ್ ನಗರದ ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್) ಹಾಗು ಜೀವ ಸಂಜೀವಿನಿ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಹಯೋಗದೊಂದಿಗೆ ಶುಕ್ರವಾರ ೫೪ನೇ ರಕ್ತದಾನ ಶಿಬಿರ ಆಯೋಜಿಸುವಲ್ಲಿ ಯಶಸ್ವಿಯಾಗಿದೆ. 
ಮೈಸೂರು ಕಾಗದ ಕಾರ್ಖಾನೆಯ ೯೭ ಬೆಟಾಲಿಯನ್ ಕ್ಷಿಪ್ರ ಕಾರ್ಯ ಪಡೆ ಕಛೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಬೆಟಾಲಿಯನ್ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸೇರಿದಂತೆ ಒಟ್ಟು ೩೮ ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. 
೯೭ ಬೆಟಾಲಿಯನ್ ಕಮಾಂಡೆಂಟ್ ಕಮಲೇಶ್ ಕುಮಾರ್, ಕಮಾಂಡೆಂಟ್-೨ ಸಚಿನ್ ಗಾಯಕ್‌ವಾಡ್ ಸಂತೋ, ಉಪ ಕಮಾಂಡೆಂಟ್ ರಮೇಶ್ ಸಿಂಗ್, ಸಹಾಯಕ ಕಮಾಂಡೆಂಟ್ ಅನಿಲ್‌ಕುಮಾರ್, ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ಜೀವ ಸಂಜೀವಿನಿ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಂಸ್ಥಾಪಕ ಹರೀಶ್, ವೈದ್ಯಾಧಿಕಾರಿ ಆತ್ಯಾರ, ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಸ್ಟೇಬಲ್, ಹಸಿರು ಸೇನಾನಿ ಹಾಲೇಶಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಶಿಕ್ಷಣದ ಜೊತೆಗೆ ಗುರು-ಹಿರಿಯರಿಗೆ ಗೌರವ ನೀಡುವ ಉತ್ತಮ ಸಂಸ್ಕಾರ ರೂಢಿಸಿಕೊಳ್ಳಿ : ಬೆಕ್ಕಿನಕಲ್ಮಠ ಶ್ರೀ

ಭದ್ರಾವತಿ ನಗರದ ಜೇಡಿಕಟ್ಟೆ ಮಾತೃಶ್ರೀ ಟ್ರಸ್ಟ್, ಶ್ರೀ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶ್ರಾವಣ ಚಿಂತನ ಹಾಗು ಅಕ್ಷರಾಭ್ಯಾಸ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶಿವಮೊಗ್ಗ ಶ್ರೀ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯವರುವಹಿಸಿ ಉದ್ಘಾಟಿಸಿದರು. 
    ಭದ್ರಾವತಿ : ನಗರದ ಜೇಡಿಕಟ್ಟೆ ಮಾತೃಶ್ರೀ ಟ್ರಸ್ಟ್, ಶ್ರೀ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶ್ರಾವಣ ಚಿಂತನ ಹಾಗು ಅಕ್ಷರಾಭ್ಯಾಸ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶಿವಮೊಗ್ಗ ಶ್ರೀ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯವರುವಹಿಸಿ ಆಶೀರ್ವಚನ ನೀಡಿದರು. 
    ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಣದ ಮಹತ್ವ ಹಾಗು ಶಿಕ್ಷಕರ ಪಾತ್ರ ಕುರಿತು ಶ್ರೀಗಳು ಮಾತನಾಡಿ, ಶಿಕ್ಷಣದ ಜೊತೆಗೆ ಗುರು-ಹಿರಿಯರಿಗೆ ಗೌರವ ನೀಡುವುದು ಸೇರಿದಂತೆ ಉತ್ತಮ ಸಂಸ್ಕಾರ ರೂಢಿಸಿಕೊಳ್ಳುವಂತೆ ಕರೆ ನೀಡಿದರು. 
    ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಕುಮಾರಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ವಾಲ್ಮೀಕಿ ಸಮಾಜದ ನಗರ ಅಧ್ಯಕ್ಷ, ನಗರಸಭೆ ಸದಸ್ಯ ಬಸವರಾಜ ಬಿ. ಆನೇಕೊಪ್ಪ, ಜೇಡಿಕಟ್ಟೆ ಶ್ರೀ ಮರುಳ ಸಿದ್ದೇಶ್ವರ ಧಾರ್ಮಿಕ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಕಾರ್ಯದರ್ಶಿ ಎಸ್. ವಾಗೀಶ್,  ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನದ ಅರ್ಚಕ ರುದ್ರೇಶ್, ವಾಲ್ಮೀಕಿ ಸಮಾಜದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ವಿದ್ಯಾರ್ಥಿನಿ ಖುಷಿ ಪ್ರಾರ್ಥಿಸಿ, ಸಹ ಶಿಕ್ಷಕಿ ಭಾರ್ಗವಿ ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಹೇಮಾವತಿ ಮತ್ತು ರಮ್ಯಾ ಕಾರ್ಯಕ್ರಮ ನಿರೂಪಿಸಿ, ಎಂ. ಕಾವ್ಯ ವಂದಿಸಿದರು. 

ಆ.೨೪ರಂದು ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯ ಅಂತಿಮ ಸ್ಪರ್ಧೆ

೧೬ ಗಾಯಕರು ಆಯ್ಕೆ, ಹಿರಿಯ ಕಲಾವಿದರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ 

ಕರ್ನಾಟಕ ಸ್ಟಾರ್ ಸಿಂಗರ್-೨೦೨೫, ಸೀಸನ್-೨ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ
    ಭದ್ರಾವತಿ: ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಹಕಾರದೊಂದಿಗೆ ಸಂಘದ ೫ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ಸ್ಟಾರ್ ಸಿಂಗರ್-೨೦೨೫, ಸೀಸನ್-೨ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯ ಅಂತಿಮ ಸ್ಪರ್ಧೆ ಆ.೨೪ರ ಭಾನುವಾರ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಸಂಜೆ ೪ ಗಂಟೆಗೆ ನಡೆಯಲಿದೆ. 
    ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್, ರಾಜ್ಯದ ವಿವಿಧೆಡೆಗಳಿಂದ ಗಾಯಕ, ಗಾಯಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅಲ್ಲದೆ ಟಿ.ವಿ ಶೋ ಗಳಲ್ಲಿ ನುಡಿಸಿದ ಖ್ಯಾತಿಯುಳ್ಳ ಸಂಗೀತ ವಾದ್ಯಗಾರರು, ನಿರೂಪಕರು ಭಾಗವಹಿಸಲಿದ್ದಾರೆ. ಗಾಯಕರಾದ `ಅಜಯ್ ವಾರಿಯರ್' ಮತ್ತು `ಉಷಾ ಕೋಕಿಲ' ತೀರ್ಪುಗಾರರಾಗಿ ಹಾಗು `ವಿದ್ವಾನ್ ಮಹೇಂದ್ರ ಗೋರೆ' ಮತ್ತು ಚನ್ನಗಿರಿ ಗಾಯಕ `ಶಶಿಕಿರಣ್' ಸಹ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು. 


ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ 
    ಇದೆ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಲಾವಿದರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ, ಹಿರಿಯ ಕಲಾವಿದರಿಗೆ ದಿವಂಗತ ಜಯಶೀಲನ್ ರಾಜ್ಯ ಪ್ರಶಸ್ತಿ ಮತ್ತು ದಿವಂಗತ ಗೀತಾಂಜಲಿ ಶ್ರೀನಿವಾಸ್ ರಾಜ್ಯಪ್ರಶಸ್ತಿ ಪ್ರದಾನ ಮತ್ತು ಸಂಘದ ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು. 
    ಈಗಾಗಲೇ ಆ.೧೬ರಂದು ಸೆಲೆಕ್ಷನ್ ಆಡಿಷನ್ ಮತ್ತು ಆ.೧೭ರಂದು ಸೆಮಿಫೈನಲ್ ಆಡಿಷನ್ ನಗರದ ನ್ಯೂಟೌನ್ ಜೆಟಿಎಸ್ ಶಾಲೆ ಪಕ್ಕದ ಲಯನ್ಸ್ ಕ್ಲಬ್, ಶುಗರ್ ಟೌನ್‌ನಲ್ಲಿ ನಡೆದಿದ್ದು, ಸೆಲೆಕ್ಷನ್ ಆಡಿಷನ್‌ನಲ್ಲಿ ಒಟ್ಟು ೬೬ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ೩೦ ಸ್ಪರ್ಧಿಗಳು ಸೆಮಿಫೈನಲ್ ಆಡಿಷನ್ ತಲುಪಿ ಅಂತಿಮ ಸ್ಪರ್ಧೆಗೆ ೧೬ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಅಂತಿಮ ಸ್ಪರ್ಧೆ ಎಲ್ಲರ ಗಮನ ಸೆಳೆಯುತ್ತಿದೆ. ಮೊದಲ ಬಹುಮಾನ ರು. ೨೫ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರು. ೧೫ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ, ತೃತೀಯ ಬಹುಮಾನ ರು. ೧೦ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ ಹಾಗು ಸಮಾಧಾನಕರ ಬಹುಮಾನ ರು. ೨ ಸಾವಿರ ನಗದು ಮತ್ತು ಭಿನಂದನ ಪತ್ರ ನೀಡಲಾಗುವುದು. ಅಂತಿಮ ಸ್ಪರ್ಧೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಕಲಾವಿದರು, ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಿದರು. 
    ಸಂಘದ ಉಪಾಧ್ಯಕ್ಷ ವೈ.ಕೆ ಹನುಮಂತಯ್ಯ, ಪ್ರಧಾನ ಕಾರ್ಯದರ್ಶಿ ಚರಣ್ ಕವಾಡ್, ಸಹ ಕಾರ್ಯದರ್ಶಿ ಚಿದಾನಂದ, ಖಜಾಂಚಿ ಎ. ಪ್ರಶಾಂತ್, ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 
 

ಗುರುವಾರ, ಆಗಸ್ಟ್ 21, 2025

ಗ್ರಾಮಾಂತರ ಶಾಖೆ ಅಧ್ಯಕ್ಷರಾಗಿ ಶಕುಂತಲಾ ಪ್ರದೀಪ್, ನಗರ ಶಾಖೆ ಅಧ್ಯಕ್ಷರಾಗಿ ರೂಪ ನಾಗರಾಜ್

 ಶಕುಂತಲಾ ಪ್ರದೀಪ್ 
ಭದ್ರಾವತಿ : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಗ್ರಾಮಾಂತರ ಶಾಖೆ ಅಧ್ಯಕ್ಷರಾಗಿ ಶಕುಂತಲಾ ಪ್ರದೀಪ್ ಮತ್ತು ನಗರ ಶಾಖೆ ಅಧ್ಯಕ್ಷರಾಗಿ ರೂಪ ನಾಗರಾಜ್ ನೇಮಕಗೊಂಡಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ರಮೇಶ್ ಮಡಿವಾಳ ನೇಮಕಾತಿ ಪತ್ರ ವಿತರಿಸಿ ಸಂಘಟನೆ ಬಲಪಡಿಸುವ ಜೊತೆಗೆ ಅಸಂಘಟಿತ ಕಾರ್ಮಿಕರ ಸಂಕಷ್ಟಗಳಿಗೆ ಪೂರಕವಾಗಿ ಸ್ಪಂದಿಸುವಂತೆ ಸೂಚಿಸಿದ್ದಾರೆ. ನೂತನವಾಗಿ ನೇಮಕಗೊಂಡಿರುವ ಶಕುಂತಲಾ ಪ್ರದೀಪ್ ಮತ್ತು ರೂಪ ನಾಗರಾಜ್‌ರವರಿಗೆ ಜಿಲ್ಲಾ ಬಿಜೆಪಿ ಮುಖಂಡರು, ಜಮೀನ್ದಾರ್ ಕೂಡ್ಲಿಗೆರೆ ಹಾಲೇಶ್ ಅಭಿನಂದಿಸಿದ್ದಾರೆ. 
 

 ರೂಪ ನಾಗರಾಜ್ 

ಆ.೨೨ರಿಂದ ಎರಡು ದಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ

    ಭದ್ರಾವತಿ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗು ಗಾಂಧಿನಗರ, ವಿಜಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರ-೨, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಆ.೨೨ ಮತ್ತು ೨೩ರಂದು ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. 
    ಶಾಸಕ ಬಿ.ಕೆ ಸಂಗಮೇಶ್ವರ್ ಆ.೨೨ರ ಬೆಳಿಗ್ಗೆ ೯ ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್ ಕ್ರೀಡಾ ಜ್ಯೋತಿ ಸ್ವೀಕರಿಸಲಿದ್ದು, ವಿಜಯ ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ಎಂ. ಬಸವಂತಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. 
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಮಣಿ ಎಎನ್‌ಎಸ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ವಿಐಎಸ್‌ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಎಸ್. ಮಣಿಶೇಖರ್, ರೇಖಾ ಉಮೇಶ್, ಬಿ.ಕೆ ಶಿವಕುಮಾರ್, ವಿ. ಕದಿರೇಶ್, ಟಿಪ್ಪುಸುಲ್ತಾನ್, ಕೆ. ಸುದೀಪ್ ಕುಮಾರ್, ಚನ್ನಪ್ಪ, ಸರ್ವಮಂಗಳ ಭೈರಪ್ಪ, ಈ. ರಮೇಶ್, ಎ. ನಾಗೇಶ್, ಮಂಜೀರಾ ಕೌಸರ್, ವಿ.ಎಚ್ ಪಂಚಾಕ್ಷರಿ, ಗಣೇಶ್, ದಯಾನಂದ್, ಪೃಥ್ವಿರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 

ಆ.೨೪ರಂದು ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯ ಅಂತಿಮ ಸ್ಪರ್ಧೆ


    ಭದ್ರಾವತಿ: ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಹಕಾರದೊಂದಿಗೆ ಸಂಘದ ೫ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ಸ್ಟಾರ್ ಸಿಂಗರ್-೨೦೨೫, ಸೀಸನ್-೨ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯ ಅಂತಿಮ ಸ್ಪರ್ಧೆ ಆ.೨೪ರ ಭಾನುವಾರ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಸಂಜೆ ೪ ಗಂಟೆಗೆ ನಡೆಯಲಿದೆ. 
    ರಾಜ್ಯದ ವಿವಿಧೆಡೆಗಳಿಂದ ಗಾಯಕ, ಗಾಯಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಟಿ.ವಿ ಶೋ ಗಳಲ್ಲಿ ನುಡಿಸಿದ ಖ್ಯಾತಿಯುಳ್ಳ ಸಂಗೀತ ವಾದ್ಯಗಾರರು, ನಿರೂಪಕರು, ತೀರ್ಪುಗಾರರು ಭಾಗವಹಿಸಲಿದ್ದಾರೆ. ಇದೆ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಲಾವಿದರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ, ಹಿರಿಯ ಕಲಾವಿದರಿಗೆ ದಿವಂಗತ ಜಯಶೀಲನ್ ರಾಜ್ಯ ಪ್ರಶಸ್ತಿ ಮತ್ತು ದಿವಂಗತ ಗೀತಾಂಜಲಿ ಶ್ರೀನಿವಾಸ್ ರಾಜ್ಯಪ್ರಶಸ್ತಿ ಪ್ರದಾನ ಮತ್ತು ಸಂಘದ ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. 
    ಈಗಾಗಲೇ ಆ.೧೬ರಂದು ಸೆಲೆಕ್ಷನ್ ಅಡಿಷನ್ ಮತ್ತು ಆ.೧೭ರಂದು ಸೆಮಿಫೈನಲ್ ಅಡಿಷನ್ ನಗರದ ನ್ಯೂಟೌನ್ ಜೆಟಿಎಸ್ ಶಾಲೆ ಪಕ್ಕದ ಲಯನ್ಸ್ ಕ್ಲಬ್, ಶುಗರ್ ಟೌನ್‌ನಲ್ಲಿ ನಡೆದಿದ್ದು, ಅಂತಿಮ ಸ್ಪರ್ಧೆ ಎಲ್ಲರ ಗಮನ ಸೆಳೆಯುತ್ತಿದೆ. ಮೊದಲ ಬಹುಮಾನ ರು. ೨೫ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರು. ೧೫ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ, ತೃತೀಯ ಬಹುಮಾನ ರು. ೧೦ ಸಾವಿರ ನಗದು, ಅಭಿನಂದನಾ ಪತ್ರ ಮತ್ತು ಟ್ರೋಫಿ ಹಾಗು ಸಮಾಧಾನಕರ ಬಹುಮಾನ ರು. ೨ ಸಾವಿರ ನಗದು ಮತ್ತು ಭಿನಂದನ ಪತ್ರ ನೀಡಲಾಗುವುದು. ಅಂತಿಮ ಸ್ಪರ್ಧೆ ಕಾರ್ಯಕ್ರಮದಲ್ಲಿ ಕಲಾವಿದರು, ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಕೋರಿದ್ದಾರೆ. 

ಬುಧವಾರ, ಆಗಸ್ಟ್ 20, 2025

ಆಕಸ್ಮಿಕವಾಗಿ ಗುಂಡಿಯೊಳಗೆ ಬಿದ್ದಿದ್ದ ೨ ಹಸುಗಳ ರಕ್ಷಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸಿದ್ಧಾರೂಢ ನಗರದಲ್ಲಿ ಆಕಸ್ಮಿಕವಾಗಿ ಗುಂಡಿಯೊಳಗೆ ಬಿದ್ದಿದ್ದ ಎರಡು ಹಸುಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಿಯರೊಂದಿಗೆ ರಕ್ಷಿಸಿರುವ ಘಟನೆ ನಡೆದಿದೆ.
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಸಿದ್ಧಾರೂಢ ನಗರದಲ್ಲಿ ಆಕಸ್ಮಿಕವಾಗಿ ಗುಂಡಿಯೊಳಗೆ ಬಿದ್ದಿದ್ದ ಎರಡು ಹಸುಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಿಯರೊಂದಿಗೆ ರಕ್ಷಿಸಿರುವ ಘಟನೆ ನಡೆದಿದೆ. 
    ಶ್ರೀ ಲಕ್ಷ್ಮಿರಂಗನಾಥಸ್ವಾಮಿ ನಿಲಯದ ಪಕ್ಕದಲ್ಲಿ ನಿರ್ಮಾಣ ಹಂತದ ಪಾಯ ಹಾಕಲು ತೆಗೆಸಿದ್ದ ಮಣ್ಣಿನ ಗುಂಡಿಯೊಳಗೆ ಲಿಂಗಪ್ಪ ಎಂಬುವವರಿಗೆ ಸೇರಿದ ೨ ಹಸುಗಳು ಆಕಸ್ಮಿಕವಾಗಿ ಬಿದ್ದು, ಸಿಲುಕಿಕೊಂಡಿವೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಸ್ಥಳೀಯರ ನೆರವಿನೊಂದಿಗೆ ಹೋಸ್ ಹಾಗು ಹಗ್ಗ ಬಳಸಿ ಹಸುಗಳನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ.  
    ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಸಿ.ಎಚ್ ಹುಲಿಯಪ್ಪ, ಮಂಜಪ್ಪ ಮತ್ತು ಬಾಬು ಗೌಡ, ಫೈರ್ ಮ್ಯಾನ್ ಪ್ರಜ್ವಲ್ ಮತ್ತು ವಾಹನ ಚಾಲಕ ಸುರೇಶ್ ಪಾಲ್ಗೊಂಡಿದ್ದರು. 

ಆ.೨೪ರಂದು ಭದ್ರೆಗೆ ಶಾಸಕರಿಂದ ಬಾಗಿನ ಅರ್ಪಣೆ



    ಭದ್ರಾವತಿ : ತಾಲೂಕಿನ ಜೀವ ನದಿ, ಸಾವಿರಾರು ರೈತ ಕುಟುಂಬಗಳ ಆಧಾರಸ್ತಂಭ ಭದ್ರಾ ನದಿ ಈ ಬಾರಿ ಸಹ ತುಂಬಿ ಹರಿಯುತ್ತಿದ್ದು, ಭದ್ರಾ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಪ್ರತಿ ವರ್ಷದಂತೆ ಈ ಬಾರಿ ಸಹ ಆ.೨೪ರ ಭಾನುವಾರ ಗಂಗಾಪೂಜೆಯೊಂದಿಗೆ ಬಾಗಿನ ಅರ್ಪಿಸಲಿದ್ದಾರೆ. 
    ಭದ್ರಾ ಜಲಾಶಯದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪಾಲ್ಗೊಳ್ಳಲಿದ್ದಾರೆ. ರೈತರು, ಕಾರ್ಮಿಕರು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಕಾಂಗ್ರೆಸ್ ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಹಲವಾರು ಭೂ ಸುಧಾರಣೆ ಕಾಯ್ದೆಗಳನ್ನು ಜಾರಿಗೆ ತಂದ ಧೀಮಂತ ನಾಯಕ ದೇವರಾಜ ಅರಸು

೧೧೦ನೇ ಜನ್ಮದಿನ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಬಣ್ಣನೆ 

ಭದ್ರಾವತಿಯಲ್ಲಿ ಬುಧವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಳೇನಗರದ ಬಸವೇಶ್ವರ ವೃತ್ತದ ಬಲಿಜ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ೧೧೦ನೇ ಜನ್ಮದಿನ ಕಾರ್ಯಕ್ರಮ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಬಿ.ಕೆ ಮೋಹನ್, ಪರುಸಪ್ಪ ಕುರುಬರ, ಕೆ.ಎನ್ ಹೇಮಂತ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ : ಬಾಲ್ಯದಲ್ಲಿಯೇ ರೈತರ ಸಂಕಷ್ಟಗಳನ್ನು ಅರಿತುಕೊಂಡಿದ್ದ ಡಿ. ದೇವರಾಜ ಅರಸುರವರು ತಮ್ಮ ಆಡಳಿತ ಅವಧಿಯಲ್ಲಿ ಹಲವಾರು ಭೂ ಸುಧಾರಣೆ ಕಾಯ್ದೆಗಳನ್ನು ಜಾರಿಗೆ ತಂದ ಧೀಮಂತ ನಾಯಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಬಣ್ಣಿಸಿದರು. 
    ಅವರು ಬುಧವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಳೇನಗರದ ಬಸವೇಶ್ವರ ವೃತ್ತದ ಬಲಿಜ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ೧೧೦ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ತಮ್ಮ ಜೀವನದಲ್ಲಿ ಕೃಷಿ ಪ್ರಮುಖ ಉದ್ಯೋಗವನ್ನಾಗಿಸಿಕೊಂಡಿದ್ದ ದೇವರಾಜ ಅರಸುರವರು ತಾವು ಕಂಡ ಹಾಗು ಅನುಭವಿಸಿದ ನೋವುಗಳು ಭವಿಷ್ಯದಲ್ಲಿ ರೈತರ ಬದುಕಿನಲ್ಲಿ ಹೊಸ ಬದಲಾವಣೆಗಳನ್ನು ತರಲು ಸಾಧ್ಯವಾಯಿತು. ಭೂ ಮಾಲೀಕರ ಕೈಯಿಂದ ಹೂಳುವವನ ಕೈಗೆ ಭೂಮಿ ಹಂಚಿಕೆ ಮಾಡುವ ಭೂ ಸುಧಾರಣೆ, ಜೀತ ಪದ್ದತಿ ನಿರ್ಮೂಲನೆ ಸೇರಿದಂತೆ ಹಲವಾರು ಕ್ರಾಂತಿಕಾರಕ ಕಾಯ್ದೆಗಳು ಜಾರಿಗೆ ತರುವಲ್ಲಿ ಯಶಸ್ವಿಯಾದರು ಎಂದರು. 
    ದೇಶದಲ್ಲಿ ಹಿಂದುಳಿದ ಹಾಗು ದಲಿತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗು ರಾಜಕೀಯ ಏಳಿಗಾಗಿ ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಜಾರಿಗೆ ತಂದ ೨೦ ಅಂಶಗಳ ಕಾರ್ಯಕ್ರಮಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಿದ ದೇಶದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ದೇವರಾಜ ಅರಸುರವರು ಪಾತ್ರರಾಗಿದ್ದರು. ಇಂದಿರಾಗಾಂಧಿಯವರ ಆಡಳಿತದಿಂದ ಪ್ರೇರೇಪಿತರಾಗಿದ್ದ ಅರಸುರವರು ಹಿಂದುಳಿದ ಹಾಗು ದಲಿತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಈ ಹಿನ್ನಲೆಯಲ್ಲಿ ಇಂದಿಗೂ ಹಿಂದುಳಿದ ಹಾಗು ದಲಿತರ ಧೀಮಂತ ಶಕ್ತಿಯಾಗಿ ಉಳಿದುಕೊಂಡಿದ್ದಾರೆ ಎಂದರು. 
    ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್ ಮಾತನಾಡಿ, ಮಾನವೀಯ ಮೌಲ್ಯಗಳ ಹರಿಕಾರ ದೇವರಾಜ ಅರಸು. ಜೀತ ಪದ್ದತಿ, ಮಲ ಹೊರುವ ಪದ್ದತಿ ಸೇರಿದಂತೆ ಹಲವಾರು ಅನಿಷ್ಠ ಪದ್ದತಿಗಳನ್ನು ನಿರ್ಮೂಲನೆ ಮಾಡುವ ಮೂಲಕ ಎಲ್ಲರ ಬದುಕಿನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ. ಇಂತಹ ಧೀಮಂತ ನಾಯಕ ಸಮಾಜಕ್ಕೆ ಎಂದಿಗೂ ಆದರ್ಶಪ್ರಾಯ ಎಂದರು. 
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಮಣಿ ಎಎನ್‌ಎಸ್, ಹಿರಿಯ ಸದಸ್ಯ ಬಿ.ಕೆ ಮೋಹನ್, ತಹಸೀಲ್ದಾರ್ ಪರುಸಪ್ಪ ಕುರುಬರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸದಸ್ಯರಾದ ಸರ್ವಮಂಗಳ ಭೈರಪ್ಪ, ಅನುಸುಧಾ ಮೋಹನ್ ಪಳನಿ, ಬಸವರಾಜ ಬಿ. ಆನೇಕೊಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ವಿವಿಧ ಸಂಘ-ಸಂಸ್ಥೆಗಳ ಮುಖಂಡರಾದ ಟಿ. ವೆಂಕಟೇಶ್, ಸತ್ಯ ಭದ್ರಾವತಿ, ಚಿನ್ನಯ್ಯ, ವಿ. ವಿನೋದ್, ಈಶ್ವರಪ್ಪ, ಚೌಡಪ್ಪ, ಎಚ್.ಆರ್ ರಂಗನಾಥ್, ಎಸ್. ಉಮಾ, ಸಿ. ಜಯಪ್ಪ, ಪುಟ್ಟರಾಜ್, ಶಿವಬಸಪ್ಪ, ಎಂ.ಎಸ್ ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮಂಗಳವಾರ, ಆಗಸ್ಟ್ 19, 2025

೧೮೬ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ

ಭದ್ರಾವತಿ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಮಂಗಳವಾರ ೧೮೬ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಬಡವರಿಗೆ, ನಿರ್ಗತಿಕರಿಗೆ ಅನ್ನದಾನ ನೆರವೇರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. 
    ಭದ್ರಾವತಿ: ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಮಂಗಳವಾರ ೧೮೬ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಬಡವರಿಗೆ, ನಿರ್ಗತಿಕರಿಗೆ ಅನ್ನದಾನ ನೆರವೇರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.  
    ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಪ್ರತಿ ವರ್ಷ ವಿಶ್ವ ಛಾಯಾಗ್ರಾಹಕರ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಆರೋಗ್ಯ ಶಿಬಿರ, ಕ್ರೀಡಾ ಹಾಗು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ವಿಶೇಷವಾಗಿ ನ್ಯೂಟೌನ್ ದಯಾ ಸಾಗರ್ ಟ್ರಸ್ಟ್‌ನಲ್ಲಿ ಬಡವರಿಗೆ, ನಿರ್ಗತಿಕರಿಗೆ ಅನ್ನದಾನ ನೆರವೇರಿಸಲಾಯಿತು.
      ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಚ್. ಶ್ರೀನಿವಾಸ್ ನೇತೃತ್ವ ವಹಿಸಿದ್ದರು. ಸಂಘದ ಕಾರ್ಯದರ್ಶಿ ಶೈಲೇಶ್ ಕುಮಾರ್, ಖಜಾಂಚಿ ಜಿ.ಡಿ ಮಂಜುನಾಥ್. ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ .ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು. ದಯಾಸಾಗರ್ ಟ್ರಸ್ಟ್ ಅಧ್ಯಕ್ಷ ಆರ್. ಮೋಸಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

೨೫ ವರ್ಷಗಳನ್ನು ಪೂರೈಸಿದ ಮಣಿಪಾಲ ಆರೋಗ್ಯ ಕಾರ್ಡ್ : ನೋಂದಣಿ ಪ್ರಾರಂಭ

ಭದ್ರಾವತಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ ಆಸ್ಪತ್ರೆ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಮತ್ತು ಪ್ರತಿನಿಧಿ ಅನಿಲ್ ೨೫ನೇ ವರ್ಷದ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿಗೆ ಚಾಲನೆ ನೀಡಿದರು. 
    ಭದ್ರಾವತಿ :  ಮಣಿಪಾಲ್ ಸಂಸ್ಥೆ ಸಂಸ್ಥಾಪಕ ಡಾ. ಟಿ.ಎಂ.ಎ. ಪೈರವರ ದೂರದೃಷ್ಟಿಯ ನಾಯಕತ್ವದಲ್ಲಿ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈರವರ ಮಾರ್ಗದರ್ಶನದಲ್ಲಿ ಪ್ರಾರಂಭಿಸಲಾದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ಇದೀಗ ರಜತ ಮಹೋತ್ಸವದ ಮೈಲಿಗಲ್ಲನ್ನು ತಲುಪಿದೆ. ೨೫ ವರ್ಷಗಳಲ್ಲಿ ಇದು ಕೋಟ್ಯಂತರ ಫಲಾನುಭವಿಗಳ ಜೀವನವನ್ನು ಮುಟ್ಟಿದೆ. ಪ್ರಸ್ತುತ  ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಆರಂಭಗೊಂಡಿದ್ದು, ಇದರ ಸದುಪಯೊಗ ಪಡೆದುಕೊಳ್ಳುವಂತೆ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಮನವಿ ಮಾಡಿದರು. 
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೦೦ನೇ ಇಸವಿಯಲ್ಲಿ, ೩,೨೦೦ ಕುಟುಂಬಗಳು ಮಣಿಪಾಲ ಆರೋಗ್ಯಕಾರ್ಡ್ ಯೋಜನೆಯಡಿ ನೋಂದಣಿ ಮಾಡಿದ್ದರು. ಕಳೆದ ವರ್ಷ ೧.೨೫ ಲಕ್ಷ ಕುಟುಂಬಗಳು ಈ ಯೋಜನೆಯಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು ಈ ಯೋಜನೆಯಡಿ ೬.೭೨ ಲಕ್ಷ ಸದಸ್ಯರನ್ನು ಹೊಂದಲಾಗಿದೆ. ಈ ಯೋಜನೆಯಿಂದ ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಪ್ರಯೋಜನವಾಗುತ್ತಿದೆ ಎಂದರು.  
    ಒಂದು ವರ್ಷ ಮತ್ತು ಎರಡು ವರ್ಷಗಳ ಸದಸ್ಯತ್ವ ಆಯ್ಕೆಗಳನ್ನು ನೀಡುತ್ತಿದ್ದು, ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ, ಯಾರಾದರೂ ಸದಸ್ಯರಾಗಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು. "ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ" ಎಂಬುದು ಮಣಿಪಾಲ್ ಆರೋಗ್ಯ ಕಾರ್ಡ್ ಧ್ಯೇಯ ವಾಕ್ಯ ಎಂದರು. 
    ಸದಸ್ಯತ್ವ ವಿವರಗಳು: ಮಣಿಪಾಲ್ ಆರೋಗ್ಯ ಕಾರ್ಡ್ ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವ ಒಬ್ಬರಿಗೆ ರು. ೩೫೦, ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ. ಅವರ ಸಂಗಾತಿ, ೨೫ ವರ್ಷದೊಳಗಿನ ಮಕ್ಕಳಿಗೆ ರು. ೭೦೦ ಮತ್ತು ಕುಟುಂಬ ಫ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ. ಅವರ ಸಂಗಾತಿ, ೨೫ ವರ್ಷದೊಳಗಿನ ಮಕ್ಕಳು ಮತ್ತು ೪ ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ರು. ೯೦೦. ಇದೊಂದು ಹೆಚ್ಚುವರಿ ಲಾಭವಾಗಿದೆ. ೨ ವರ್ಷದ ಯೋಜನೆಯಲ್ಲಿ ಒಬ್ಬರಿಗೆ ರು. ೬೦೦, ಕುಟುಂಬಕ್ಕೆ ರು. ೯೫೦ ಮತ್ತು ಕೌಟಂಬಿಕ ಪ್ಲಸ್ ಯೋಜನೆಗೆ ರು. ೧,೧೦೦  ಆಗಿರುತ್ತದೆ ಎಂದರು. 
    ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕಾರ್ಡ್‌ದಾರರಿಗೆ ರಿಯಾಯಿತಿ ಪ್ರಯೋಜನಗಳು: 
    ತಜ್ಞ ಮತ್ತು ಸೂಪರ್-ಸ್ಪೆಷಲಿಸ್ಟ್ ಸಮಾಲೋಚನೆ ಶುಲ್ಕಗಳಲ್ಲಿ ಶೇ.೫೦ ರಿಯಾಯಿತಿ (ಓಪಿಡಿ ದಿನಗಳು) ರೋಗನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆಗಳ ಮೇಲೆ ಶೇ.೨೫ ರಿಯಾಯಿತಿ ರೇಡಿಯಾಲಜಿ, ಓಪಿಡಿ ಕಾರ್ಯವಿಧಾನಗಳು ಮತ್ತು ಮಧುಮೇಹ ಪಾದದ ಆರೈಕೆಯ ಮೇಲೆ ಶೇ.೨೦ ರಿಯಾಯಿತಿ, ಡಯಾಲಿಸಿಸ್‌ನಲ್ಲಿ ರು. ೧೦೦ ರಿಯಾಯಿತಿ. ಆಸ್ಪತ್ರೆ ಔಷಧಿಗಳ ಮೇಲೆ ಶೇ. ೧೦ರವರೆಗೆ ರಿಯಾಯಿತಿ, ಸಾಮಾನ್ಯ ವಾರ್ಡ್ ಒಳರೋಗಿಗಳ ಬಿಲ್‌ಗಳಲ್ಲಿ ಶೆ.೨೫ ರಿಯಾಯಿತಿ (ಉಪಭೋಗ್ಯ ವಸ್ತುಗಳು ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ). ನೀಡಲಾಗುತ್ತಿದೆ ಎಂದರು. 
    ಕಾರ್ಡ್‌ದಾರರು ಕಸ್ತೂರ್ಬಾ ಆಸ್ಪತ್ರೆ-ಮಣಿಪಾಲ, ಡಾ.ಟಿಎಂಎ ಪೈ ಆಸ್ಪತ್ರೆ-ಉಡುಪಿ, ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ-ಕಾರ್ಕಳ, ಕೆಎಂಸಿ ಆಸ್ಪತ್ರೆ-ಮಂಗಳೂರು ಮತ್ತು ಅತ್ತಾವರ, ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ-ಕಟೀಲು, ಮಣಿಪಾಲ ಆಸ್ಪತ್ರೆ-ಗೋವಾ ಮತ್ತು ಮಣಿಪಾಲ ಹಾಗೂ ಮಂಗಳೂರಿನಲ್ಲಿನ ದಂತ ಕಾಲೇಜುಗಳಲ್ಲಿ ಪ್ರಯೋಜನಗಳನ್ನು ಪಡೆಯಬಹುದು. ಮಣಿಪಾಲ ಮತ್ತು ಮಂಗಳೂರಿನಲ್ಲಿ ಇತರ ಆಸ್ಪತ್ರೆಗಳಲ್ಲಿ ಸಹ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು. 
    ತಾಲೂಕಿನಲ್ಲಿ ಅಧಿಕೃತ ಪ್ರತಿನಿಧಿಗಳ ಬಳಿ ಅರ್ಜಿಗಳನ್ನು ಪಡೆಯಬಹುದಾಗಿದ್ದು, ರಾಜೇಶ್ - ೯೪೪೯೮೧೨೫೨೩ (ಕಸ್ತೂರ್ಬಾ ಆಸ್ಪತ್ರೆಮಾಹಿತಿ ಕೇಂದ್ರ, ಭದ್ರಾವತಿ) ವಿಪ  ಸೌಹಾರ್ದ ೮೧೦೫೮೫೯೧೫೭, ಡಿ. ಶಬರಿವಾಸನ್ ೮೯೦೩೫೬೧೬೧೮೮ ಮತ್ತು ಕಾರುಣ್ಯ ಚಾರಿಟೇಬಲ್ ಟ್ರಸ್ -೯೭೩೧೧೫೭೭೬೧ ಸಂಪರ್ಕಿಸಬಹುದಾಗಿದೆ.  
    ಹೆಚ್ಚಿನ ಮಾಹಿತಿಗಾಗಿ, www.manipalhealthcard.com ಮೊ: ೯೯೮೦೮೫೪೭೦೦ / ೦೮೨೦೨೯೨೩೭೪೮ ಸಂಪರ್ಕಿಸಿ. ಎಲ್ಲಾ ನಮ್ಮ ಅಧಿಕೃತ ಪ್ರತಿನಿಧಿಗಳ ಮೂಲಕ ನೋಂದಣಿ ಮಾಡಬಹುದು. ಪತ್ರಿಕಾಗೋಷ್ಠಿಯಲ್ಲಿ  ಪ್ರತಿನಿಧಿ ಅನಿಲ್ ಉಪಸ್ಥಿತರಿದ್ದರು.