Tuesday, December 31, 2024

ಪ್ರಾಮಾಣಿಕತೆ ಜೊತೆಗೆ ನಿಸ್ವಾರ್ಥ ಮನೋಭಾವ ಬೆಳೆಸಿಕೊಳ್ಳಿ : ಶಂಕರ್ ಅಶ್ವಥ್

ಭದ್ರಾವತಿ ನಗರದ ಅಪ್ಪರ್ ಹುತ್ತಾ ಅನನ್ಯ ಪ್ರೌಢಶಾಲೆ ವಾರ್ಷಿಕೋತ್ಸವ `ಅನನ್ಯೋತ್ಸವ' ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ಶಂಕರ್ ಅಶ್ವಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ವಿದ್ಯಾರ್ಥಿಗಳು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳುವ ಜೊತೆಗೆ ನಿಸ್ವಾರ್ಥತೆ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ಭವಿಷ್ಯದಲ್ಲಿ ಸಮಾಜದ ಸೇವೆಯಲ್ಲಿ ತಮ್ಮ ಕೊಡುಗೆಯನ್ನು ನೀಡಬೇಕೆಂದು ಹಿರಿಯ ಚಲನಚಿತ್ರ ಶಂಕರ್ ಅಶ್ವಥ್ ಹೇಳಿದರು. 
    ನಗರದ ಅಪ್ಪರ್ ಹುತ್ತಾ ಅನನ್ಯ ಪ್ರೌಢಶಾಲೆ ವಾರ್ಷಿಕೋತ್ಸವ `ಅನನ್ಯೋತ್ಸವ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅವರೇ ರಚಿಸಿ, ನಿರ್ದೇಶಿಸಿದ `ನಮ್ಮ ಮೇಷ್ಟ್ರು' ಎಂಬ ಚಲನಚಿತ್ರದ ಕಥೆಯನ್ನು ಹೇಳುವ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವಿನ ಬಾಂದವ್ಯದ ಬಗ್ಗೆ ತಿಳಿಸಿದರು. 
    ಶಂಕರ್ ಅಶ್ವಥ್ ಅವರನ್ನು ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಡಾ. ಕೆ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. 
  ರಾಧಿಕಾ ಮತ್ತು ಸುಪ್ರಿಯ ಕಾರ್ಯಕ್ರಮ ನಿರೂಪಿಸಿ, ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್ ಅನಿಲ್‌ಕುಮಾರ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಕೆ. ಕಲ್ಲೇಶ್ ಕುಮಾರ್ ಶಾಲಾ ವಾರ್ಷಿಕ ವರದಿ ಮಂಡಿಸಿದರು. 
    ಕಳೆದ ವರ್ಷ ಉತ್ತಮ ಅಂಕ ಪಡೆದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪಾರಿತೋಷಕ ನೀಡುವ ಮೂಲಕ ಅಭಿನಂದಿಸಲಾಯಿತು. ಶಾಲೆಯಲ್ಲಿ ವ್ಯಾಸಂಗ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.                   
     ಆರ್. ಸುನಿತಾ ಹಾಗೂ ಎ. ತನುಜಾ ವಿದ್ಯಾರ್ಥಿಗಳ ಬಹುಮಾನ ವಿತರಣೆ ಹಾಗೂ ಪೋಷಕರ  ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆ ಮೇಲೆ ಸಂಸ್ಥೆಯ ಟ್ರಸ್ಟಿಗಳಾದ ಜಿ. ಸುರೇಶ್ ಕುಮಾರ್  ಹಾಗೂ ಎಸ್.ಎನ್ ಭಾಗ್ಯಲಕ್ಷ್ಮಿ  ಉಪಸ್ಥಿತರಿದ್ದರು. ಟ್ರಸ್ಟ್ ಉಪಾಧ್ಯಕ್ಷ ಕೆ.ಪಿ ಹರೀಶ್ ಕುಮಾರ್ ವಂದಿಸಿದರು.  ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ನೃತ್ಯ  ಹಾಗೂ ನಾಟಕ ಪ್ರದರ್ಶನ ನಡೆಸಿಕೊಟ್ಟರು. 

ಮಹಿಳೆ ಮಕ್ಕಳಿಗೆ ಉತ್ತಮ ಸಂಸ್ಕಾರ ಹೇಳಿ ಕೊಡುವ ಚೈತನ್ಯ ಹೊಂದಿದ್ದಾಳೆ : ಡಾ. ಧನಂಜಯ ಸರ್ಜಿ

ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ನಡೆದ ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ೬ನೇ ವಾರ್ಷಿಕೋತ್ಸವ ಮತ್ತು ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ವಿಧಾನ ಪರಿಷತ್ ಸದಸ್ಯ, ವೈದ್ಯ ಡಾ. ಧನಂಜಯ ಸರ್ಜಿ ಉಧ್ಘಾಟಿಸಿದರು. 
    ಭದ್ರಾವತಿ : ಇಂದು ಮಹಿಳೆಯರು ಪುರುಷರಷ್ಟೇ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆಯ ಹೊರಗೆ ಪರುಷರು ದುಡಿದರೆ ಮಹಿಳೆಯರು ಮನೆಯಲ್ಲಿ ಸಂಸಾರ ನಿಭಾಯಿಸುವುದಲ್ಲದೆ ಮಕ್ಕಳಿಗೆ ಉತ್ತಮ ಸಂಸ್ಕಾರ ಹೇಳಿ ಕೊಡುವ ಚೈತನ್ಯ ಹೊಂದಿದ್ದಾಳೆ ಎಂದು ವಿಧಾನ ಪರಿಷತ್ ಸದಸ್ಯ, ವೈದ್ಯ ಡಾ. ಧನಂಜಯ ಸರ್ಜಿ ಹೇಳಿದರು.
    ಅವರು ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ನಡೆದ ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ೬ನೇ ವಾರ್ಷಿಕೋತ್ಸವ ಮತ್ತು ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಉಧ್ಘಾಟಿಸಿ ಮಾತನಾಡಿದರು.
    ಮಹಿಳಾ ಸಮಾಜ ಸಮಾಜಮುಖಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುವ  ಮೂಲಕ ಮಹಿಳೆಯರ ಸರ್ವತೋಮುಖ ಅಭಿವೃಧ್ಧಿ ಹಾಗು ಅವರ ಪ್ರತಿಭೆಗಳ ಅನಾವರಣಕ್ಕೆ ಸರಿಯಾದ ವೇದಿಕೆ ಕಲ್ಪಿಸಬೇಕು ಎಂದರು. 
    ಮುಖಂಡ ಕೂಡ್ಲಿಗೆರೆ ಹಾಲೇಶ್ ಮಾತನಾಡಿ, ಸಮಾಜ ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ಗ್ರಾಮಾಂತರ ಪ್ರದೇಶದ ಮಹಿಳೆಯರನ್ನು ಸಹ ಒಳಗೊಂಡು ಸಂಘಟನೆ ಮತ್ತಷ್ಟು  ಬಲಿಷ್ಟಗೊಳಿಸಬೇಕು ಎಂದರು.      
    ಆರ್.ಎಸ್ ಶೋಭಾ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ಅಧ್ಯಕ್ಷೆ ನಾಗರತ್ನ ವಾಗೀಶ್ ಕೋಠಿ, ಪ್ರಧಾನ ಕಾರ್ಯದರ್ಶಿ ಕುಸುಮಾ ತೀರ್ಥಯ್ಯ, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್ ಕುಮಾರ್, ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ಗೌರವಾಧ್ಯಕ್ಷೆ ಗೌರಮ್ಮ ಶಂಕರಯ್ಯ, ಯಶೋಧ ವೀರಭದ್ರಪ್ಪ, ಮಧು ಪರಮೇಶ್, ಕೆ.ಎಚ್.ತೀರ್ಥಯ್ಯ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾಗಳನ್ನು ವಿತರಿಸಲಾಯಿತು. ಕವಿತಾ ಅಶೋಕ್, ಮಮತ ಪ್ರಕಾಶ್ ಪ್ರಾರ್ಥಿಸಿ. ಗೀತಾ ಡಾ.ಬೆಂಗಳೂರಿ ಸ್ವಾಗತಿಸಿದರು. ಉಷಾ ವೀರಶೇಖರ್ ವಂದಿಸಿದರು. ಯಶೋಧ ಡಾ.ವೀರಭದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.  

ದೃಷ್ಟಿ ಜೈಸ್ವಾಲ್ ಐಎಎಸ್ ೨ ದಿನ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಣೆ : ಅಭಿನಂದನೆ

ಭದ್ರಾವತಿ ನಗರಸಭೆಯಲ್ಲಿ ೭ ದಿನಗಳ ಕಾಲ ಪೌರಾಯುಕ್ತರ ಹುದ್ದೆಗೆ ಪರೀಕ್ಷಾರ್ಥ ಕರ್ತವ್ಯಕ್ಕೆ ನಿಯೋಜಿನೆ ಮಾಡಲಾಗಿದ್ದ ಉತ್ತರ ಪ್ರದೇಶ ಮೂಲದ ದೃಷ್ಟಿ ಜೈಸ್ವಾಲ್ ಐಎಎಸ್ ಅವರನ್ನು ನಗರಸಭೆ ವತಿಯಿಂದ ಅಭಿನಂದಿಸಲಾಯಿತು. 
    ಭದ್ರಾವತಿ: ನಗರಸಭೆಯಲ್ಲಿ ೭ ದಿನಗಳ ಕಾಲ ಪೌರಾಯುಕ್ತರ ಹುದ್ದೆಗೆ ಪರೀಕ್ಷಾರ್ಥ ಕರ್ತವ್ಯಕ್ಕೆ ನಿಯೋಜಿನೆ ಮಾಡಲಾಗಿದ್ದ ಉತ್ತರ ಪ್ರದೇಶ ಮೂಲದ ದೃಷ್ಟಿ ಜೈಸ್ವಾಲ್ ಐಎಎಸ್ ಅವರನ್ನು ನಗರಸಭೆ ವತಿಯಿಂದ ಅಭಿನಂದಿಸಲಾಯಿತು. 
    ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ದೃಷ್ಟಿ ಜೈಸ್ವಾಲ್ ಅವರನ್ನು ಪರಿಚಯಿಸುವ ಮೂಲಕ ೭ ದಿನಗಳ ಕರ್ತವ್ಯದ ಅವಧಿಯಲ್ಲಿ ರಜಾ ಅವಧಿ ಕಳೆದ ೨ ದಿನ ಮಾತ್ರ ದೃಷ್ಟಿ ಜೈಸ್ವಾಲ್ ಕರ್ತವ್ಯ ನಿರ್ವಹಿಸಿದ್ದು, ಈ ಸಂದರ್ಭದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ವೀಕ್ಷಿಸಿದ್ದಾರೆ. ನಗರಸಭೆ ವಿವಿಧ ವಿಭಾಗಗಳ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದರು. 
    ನಗರಸಭೆ ಸದಸ್ಯರಾದ ಟಿಪ್ಪುಸುಲ್ತಾನ್, ಚನ್ನಪ್ಪ, ಲತಾ ಚಂದ್ರಶೇಖರ್, ಬಿ.ಟಿ ನಾಗರಾಜ್, ಅನುಸುಧಾ ಮೋಹನ್ ಪಳನಿ ಸೇರಿದಂತೆ ಇನ್ನಿತರರು ಮಾತನಾಡಿದರು. ನಗರಸಭೆ ಅಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಮತ್ತು ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್ ಉಪಸ್ಥಿತರಿದ್ದರು. ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.  

ಜ.೧ರಂದು ಭೀಮಾ ಕೊರೆಗಾವ್ ವಿಜಯೋತ್ಸವ

 

    ಭದ್ರಾವತಿ: ಜನವರಿ ೧, ಜಗತ್ತಿಗೆ ಹೊಸ ವರ್ಷದ ಸಂಭ್ರಮಾಚಾರಣೆಯಾದರೆ ಶೋಷಿತರ ಪಾಲಿಗೆ ಇದು ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದು ವಿಜಯ ಸಾಧಿಸಿದ ಮಹಾರ್ ಯೋಧರ ಶೌರ್ಯದ ದಿನ. ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್‌ರವರ ಬದುಕಿನಲ್ಲಿ ಮುಖ್ಯ ಪ್ರೇರಣೆ ನೀಡಿದ ಈ ದಿನವು ನಮ್ಮೆಲ್ಲರ ಪಾಲಿಗೆ ವಿಜಯೋತ್ಸವದ ದಿನವಾಗಿದೆ. ಈ ಹಿನ್ನಲೆಯಲ್ಲಿ ನಗರದಲ್ಲಿ ಹೊಲಯ-ಮಾದಿಗರ ಸಮನ್ವಯ ಸಮಿತಿ ವತಿಯಿಂದ ಜ.೧ರ ಬುಧವಾರ ಸಂಜೆ ೫.೩೦ಕ್ಕೆ  ನ್ಯೂಟೌನ್, ಉಂಬ್ಳೆಬೈಲ್ ರಸ್ತೆ, ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ೨೦೭ನೇ ವರ್ಷದ ಭೀಮಾ ಕೊರೆಗಾವ್ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ ಸುರೇಶ್ ಹೇಳಿದರು. 
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ರಿ.ಶ. ೧೮೦೦ರ ಸಂದರ್ಭದಲ್ಲಿ ಮಹರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿದ್ದ ಪೇಶ್ವೆಗಳು ಮನು ಸಂವಿಧಾನವನ್ನು ಜಾರಿಗೆ ತರುವ ಮೂಲಕ ಅಸ್ಪೃಷ್ಯದ ಜೀವನವನ್ನು ಕಠೋರವಾಗಿಸಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಊರೊಳಗೆ ಸತ್ತ ದನಗಳನ್ನು ಹೊತ್ತುಕೊಂಡು ಹೋಗಿ ಮಾಂಸವನ್ನು ತಿನ್ನಬೇಕಾಗಿತ್ತು, ಅವರಿಗೆ ವಿದ್ಯೆ ಕಲಿಯುವ ಹಕ್ಕನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಚಿನ್ನ ಅಥವಾ ಬೆಳ್ಳಿಯ ಆಭರಣ ತೊಡುವಂತಿರಲಿಲ್ಲ. ಅಸ್ಪೃಶ್ಯ ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರಗಳನ್ನು ನಡೆಸಲಾಗುತ್ತಿತ್ತು. ಸಾರ್ವಜನಿಕ ಕೆರೆಗಳನ್ನು ಬಳಸದಂತೆ ನಿರ್ಬಂಧ ಹೇರಲಾಗಿತ್ತು. ತಮ್ಮ ಮೇಲೆ ಈ ರೀತಿಯ ಅಮಾನುಷ ಕೃತ್ಯಗಳನ್ನು ನಡೆಸುತ್ತಿದ್ದ ಪೇಶ್ವೆಗಳ ದೌರ್ಜನ್ಯ ದಬ್ಬಾಳಿಕೆಯಿಂದ ರೋಸಿ ಹೋಗಿದ್ದ ಅಸ್ಪಷ್ಯರು ತಮ್ಮ ಜನಾಂಗದ ಮುಕ್ತಿಗಾಗಿ ಹಾತೊರೆಯುತ್ತಿದ್ದರು ಎಂದರು. 
    ಇದೇ ಸಂದರ್ಭದಲ್ಲಿ ಉತ್ತರಭಾರತದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಬ್ರಿಟಿಷರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮಹಾರ್ ವೀರ ಸಿದ್ಧನಾಕನ ನೇತೃತ್ವದಲ್ಲಿ ಮಾತುಕತೆ ನಡೆಸಿ ತಮ್ಮನ್ನು ಬೆಂಬಲಿಸಿದರೆ ಅಸ್ಪೃಷ್ಟರ ಎಲ್ಲಾ ದೌರ್ಜನ್ಯ ದಬ್ಬಾಳಿಕೆಗೆ ಅಂತ್ಯ ಹಾಡುತ್ತೇವೆ ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸುವ ಭರವಸೆ ನೀಡಿದರು. ಅಸ್ಪೃಷ್ಯ ಆಚರಣೆಯಿಂದ ನೊಂದು ಬೆಂದಿದ್ದ ವೀರ ಮಹಾರ್ ಜನಾಂಜದ ೫೦೦ ಜನ ಯುವ ಯೋಧರು ಯುದ್ಧ ತರಬೇತಿಯೊಂದಿಗೆ ೧೮೧೮ರ ಜನವರಿ ೧ ರಂದು ಬ್ರಿಟಿಷ್ ಕ್ಯಾಪ್ಟನ್ ಎಸ್.ಎಸ್. ಸಂಡನ್ ನೇತೃತ್ವದಲ್ಲಿ ಭೀಮಾ ನದಿಯ ತೀರದಲ್ಲಿ ಕೊರೆಗಾವ್ ಎಂಬ ಸ್ಥಳದಲ್ಲಿ ಸುಮಾರು ೨೮೦೦೦ ಸೈನಿಕರಿದ್ದ ಬ್ರಾಹ್ಮಣ ಪೇಶ್ವೆಗಳ ಮೇಲೆ ಯುದ್ಧ ಸಾರಿ ಸುಮಾರು ೫೦೦೦ಕ್ಕೂ ಹೆಚ್ಚಿನ ಪೇಶ್ವೆ ಸೈನಿಕರನ್ನು ಕೊಂದು ರಾಜ್ಯವನ್ನು ವಶಪಡಿಸಿಕೊಳ್ಳುವ ಮೂಲಕ ತಮ್ಮ ಮೇಲಿನ ಅಸ್ಪೃಷ್ಯತಾ ಆಚರಣೆಗೆ ಅಂತ್ಯ ಹಾಡಿದರು. ಈ ಸಂದರ್ಭದಲ್ಲಿ ಸುಮಾರು ೨೨ ಜನ ವೀರ ಮಹಾರ್ ಯೋಧರು ಬಲಿದಾನವಾಗುವ ಮೂಲಕ ನಮ್ಮ ಸಮುದಾಯವೇ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಎಂದರು. 
    ವೀರ ಯೋಧರ ಗೌರವಾರ್ಥ ಯುದ್ಧ ನಡೆದ ಜಾಗದಲ್ಲಿ ೬೫ ಅಡಿಯ ಎತ್ತರದ ಭವ್ಯ `ವಿಜಯ ಸ್ಥಂಭ' ನಿರ್ಮಿಸಿ ಆ ಸ್ಥಂಭದ ಮೇಲೆ ಅಮರ ವೀರರ ಹೆಸರನ್ನು ಕೆತ್ತಿಸಿದ್ದಾರೆ. ಅಸ್ಪೃಷ್ಯರ ಸ್ವಾಭಿಮಾನದ ಸಂಕೇತವಾದ ಈ ಘಟನೆಯು ನಮ್ಮೆಲ್ಲರಿಗೂ ಆತ್ಮ ಗೌರವನ್ನು ಎತ್ತಿ ಹಿಡಿಯುವ ದಿನವಾಗಿದೆ. ಇಂತಹ ಸ್ವಾಭಿಮಾನದ, ಆತ್ಮಗೌರವದ ದಿನವನ್ನು ಶೋಷಿತ ಸಮುದಾಯದವರು ನೆನಪಿಸಿಕೊಂಡು ಅಮರ ವೀರರ ಕೆಚ್ಚೆದೆಯ ಸ್ವಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಅವರ ತ್ಯಾಗ ಬಲಿದಾನದಿಂದ ಮನು ಸಂವಿದಾನಕ್ಕೆ ಪೆಟ್ಟು ಬಿದ್ದು ಅಸ್ಪೃಷ್ಯರಿಗೆ ವಿದ್ಯಾಭ್ಯಾಸ ನೀಡಲು, ಸೈನ್ಯಕ್ಕೆ ಸೇರಲು, ಸಾಮಾಜಿಕವಾಗಿ ಅಲ್ಪ ಪ್ರಮಾಣದಲ್ಲಿ ನಾಗರೀಕ ಬದುಕು ಕಾಣಲು ಸಾಧ್ಯವಾಗಿದೆ ಎಂದರು. 
    ಅಂದು ಅಸ್ಪೃಷ್ಯರು ಬ್ರಿಟಿಷರ ಪರವಾಗಿ ಯುದ್ಧ ಮಾಡಿದ್ದು ಅಭಿಮಾನ ಪಡುವ ಸಂಗತಿಯಲ್ಲದಿದ್ದರೂ ಅಸ್ಪಷ್ಟತೆಯಿಂದ ನೊಂದ ಜನಾಂಗಕ್ಕೆ ತಮ್ಮ ಮಕ್ಕಳ ಮುಂದಿನ ಭವಿಷ್ಯ, ಹೊಟ್ಟೆಗೆ ಅನ್ನ ದೊರಕಿಸಿಕೊಳ್ಳುವ ಸ್ವಾಭಿಮಾನದಿಂದ ಬದುಕುವ ಉದ್ದೇಶಕ್ಕೆ ತಮ್ಮ ಅಮೂಲ್ಯ ಜೀವವನ್ನು ಅರ್ಪಣೆ ಮಾಡಿದ ನಮ್ಮ ಹುತಾತ್ಮ ವೀರ ಯೋಧರಿಗೆ ನಾವೆಲ್ಲ ಗೌರವಿಸಬೇಕಾಗಿದೆ. ನಮ್ಮ ವೀರ ಯೋಧರ ಸ್ವಾಭಿಮಾನದ ಯುದ್ಧವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ. ಶೋಷಿತರ ಸ್ವಾಭಿಮಾನಕ್ಕೆ ಪೆಟ್ಟು ಕೊಡುವ ಎಲ್ಲಾ ಶಕ್ತಿಗಳ ವಿರುದ್ದ ತಲೆ ಎತ್ತಿ ನಿಂತು ನಮ್ಮಲ್ಲಿರುವ ಸ್ವಾಭಿಮಾನದ ಜಾಗೃತಿಯನ್ನು ಪ್ರದರ್ಶಿಸಬೇಕಾಗಿದೆ. ನಮ್ಮ ಪೂರ್ವಜರ ಗತ ಇತಿಹಾಸವು ನಮ್ಮನ್ನು ವೀರ ಯೋಧರನ್ನಾಗಿಸಬೇಕಾಗಿದೆ. ಮನುವಾದಿಗಳ ಗುಲಾಮತನದಿಂದ ಹೊರ ಬಂದು ಬಾಬಾ ಸಾಹೇಬರ ವಿಚಾರ ಧಾರೆಗಳಿಂದ ಶೋಷಿತರ ವಿಮೋಚನೆಗಾಗಿರುವ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವಬಸಪ್ಪ, ಸತ್ಯ ಭದ್ರಾವತಿ, ಚಿನ್ನಯ್ಯ, ಶಿವಕುಮಾರ್, ಧರ್ಮರಾಜ್, ಮಹೇಶ್ ಛಲವಾದಿ, ಕುಬೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Monday, December 30, 2024

ಪ್ರಸ್ತುತ ರಾಜಕಾರಣದಲ್ಲಿ ಪಾಳೇಗಾರಿಕೆ ಸಂಸ್ಕೃತಿ : ಜಿ.ಬಿ ವಿನಯ್ ಕುಮಾರ್

ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಭದ್ರಾವತಿ ನಗರದ ಬಿ.ಎಚ್ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ವಿಶೇಷ ಸನ್ಮಾನಿತರಾಗಿ ಮಾತನಾಡಿದರು. 
    ಭದ್ರಾವತಿ : ಇಂದು ರಾಜಕಾರಣದಲ್ಲಿ ಪಾಳೇಗಾರಿಕೆ ಸಂಸ್ಕೃತಿ ವಿಜೃಂಭಿಸುತ್ತಿದ್ದು, ಎಲ್ಲೆಡೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಗಂಡ, ಹೆಂಡತಿ, ಮಕ್ಕಳು, ಸೊಸೆ, ಮೊಮ್ಮಕ್ಕಳು ರಾಜಕಾರಣದಲ್ಲಿದ್ದು, ಕುಟುಂಬದ ಅಧಿಕಾರ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಈ ವ್ಯವಸ್ಥೆ ತೊಡೆದು ಹಾಕಲು ಎಲ್ಲಾ ಸಮಾಜದವರು ಬೆಂಬಲ ನೀಡಬೇಕು ಎಂದು ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದರು.
    ನಗರದ ಬಿ.ಎಚ್ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ವಿಶೇಷ ಸನ್ಮಾನಿತರಾಗಿ ಮಾತನಾಡಿದ ಅವರು, ಗುಲಾಮಗಿರಿ ಬಿಟ್ಟು ಸ್ವಾಭಿಮಾನಿಗಳಾಗಿ, ಸ್ವಾವಲಂಬಿಗಳಾಗಿ ಹೋರಾಡಬೇಕಿದೆ ಎಂದರು. 
    ಪ್ರತಿಷ್ಠೆಗೋಸ್ಕರ ಜನಪ್ರತಿನಿಧಿಗಳಾಗುತ್ತಿದ್ದಾರೆ. ಜನಸೇವೆಗೆಂದು ಬರುತ್ತಿಲ್ಲ. ಕುರುಬರು ಕುರಿ ಕಾಯಬೇಕು, ಮಡಿವಾಳರು ಬಟ್ಟೆ ಸ್ವಚ್ಚಗೊಳಿಸಬೇಕು ಎಂಬಂತೆ ಹಿಂದುಳಿದ ವರ್ಗದ ಜನರು ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ಕಾಯಕ ಮುಂದುವರಿಸಿಕೊಂಡು ಹೋಗಬೇಕೆಂದು ರಾಜಕೀಯ ನೇತಾರರು ಅಂದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಂಭೀರ ಚಿಂತನೆ ನಡೆಸಬೇಕಾದ ಅವಶ್ಯಕತೆ ಇದೆ ಎಂದರು.
    ಕುರುಬ ಸಮಾಜದವರು ರಾಜ್ಯದಲ್ಲಿ ೬೫ ಲಕ್ಷದಷ್ಟಿದ್ದಾರೆ. ಆದರೆ ಶಾಸಕರಿರುವುದು ಕೇವಲ ೧೨ ಮಂದಿ ಮಾತ್ರ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ಎಂದರೂ ಸಮಾಜದ ೩೦ ಶಾಸಕರು ವಿಧಾನಸೌಧಕ್ಕೆ ಆರಿಸಿ ಹೋಗಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂದರು.
    ಹೊಸದುರ್ಗದ ಶ್ರೀ ಕಾಗಿನೆಲೆ ಕನಕ ಗುರುಪೀಠ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ. ಸಂತೋಷ್ ಅಧ್ಯಕ್ಷತೆ ವಹಿಸಿದ್ದರು.
    ವೇದಿಕೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಉದ್ಯಮಿ ಸಿ.ಮಹೇಶ್‌ಕುಮಾರ್, ಸಮಾಜದ ಮುಖಂಡರುಗಳಾದ ಕರಿಯಪ್ಪ, ಡಾ. ಡಿ. ಪ್ರಭಾಕರ ಬೀರಯ್ಯ, ಡಾ. ಎಚ್. ಆರ್.ನರೇಂದ್ರ, ರಾಕೇಶ್, ಹೇಮಾವತಿ, ವೈ.ರೇಣುಕಮ್ಮ, ಬಿ.ಎಚ್ ವಸಂತ, ಬಿ.ಎಸ್ ನಾಗರಾಜ್, ಬಿ.ಎಸ್.ಗೋಪಾಲ್, ಎಚ್. ರವಿಕುಮಾರ್, ಎನ್.ಸತೀಶ್, ವಿನೋದ್‌ಕುಮಾರ್, ಸಣ್ಣಯ್ಯ, ಕೇಶವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 

ಜ.೨ರವರೆಗೆ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿಯಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಜ.೨ರವರೆಗೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ಭದ್ರಾ ನದಿಯಿಂದ ತೀರ್ಥ ಕೊಡ ತೆಗೆದುಕೊಂಡು ಅಮ್ಮನವರ ಗರ್ಭಗುಡಿಗೆ ಅಭಿಷೇಕ ನಡೆಸಲಾಯಿತು. 

   ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿಯಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಜ.೨ರವರೆಗೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ಭದ್ರಾ ನದಿಯಿಂದ ತೀರ್ಥ ಕೊಡ ತೆಗೆದುಕೊಂಡು ಅಮ್ಮನವರ ಗರ್ಭಗುಡಿಗೆ ಅಭಿಷೇಕ ನಡೆಸಲಾಯಿತು. 
   ೩೧ರ ಮಂಗಳವಾರ ರಾತ್ರಿ ೮ ಗಂಟೆಗೆ ಭದ್ರಾ ನದಿಯಿಂದ ಶಕ್ತಿ ಕರಗ ತರುವುದು ಮತ್ತು ಅಗ್ನಿಕುಂಡ ತ್ರಿಶೂಲ ಮದ್ರೆಯೊಂದಿಗೆ ದೇವಸ್ಥಾನಕ್ಕೆ ಬಂದು ಸೇರುವ ಕಾರ್ಯಕ್ರಮ ನಡೆಯಲಿದೆ. 
   ಜ.೧ರಂದು ಬುಧವಾರ ಬೆಳಿಗ್ಗೆ ೫ ಗಂಟೆಗೆ ಪೊಂಗಲ್ ಹಾಗು ಅನ್ನಸಂತರ್ಪಣೆ ಕಾರ್ಯಕ್ರಮ ಮತ್ತು ಸಂಜೆ ೪ ಗಂಟೆಗೆ ಶ್ರೀ ಮಾರಿಯಮ್ಮ ದೇವಿಯ ರಾಜಬೀದಿ ಉತ್ಸವ ಹಾಗು ಮಹಾಮಂಗಳಾರತಿಯೊಂದಿಗೆ ಪೂಜೆ ನಡೆಯಲಿದೆ. 
    ಜ.೨ರಂದು ಗುರುವಾರ ಅಮ್ಮನವರಿಗೆ ಅರಿಶಿನ ನೀರಿನ ಅಭಿಷೇಕ ನಡೆಯಲಿದ್ದು, ಸಂಜೆ ೬ ಗಂಟೆಗೆ ರಂಸಮಂಜರಿ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ. 
 

ಲೋಕಾಯುಕ್ತಕ್ಕೆ ೯ಕ್ಕೂ ಹೆಚ್ಚು ದೂರು ಸಲ್ಲಿಕೆ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಸೋಮವಾರ ಲೋಕಾಯುಕ್ತ ಇಲಾಖೆಯಿಂದ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಯಿತು. 
    ಭದ್ರಾವತಿ: ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಇಲಾಖೆಗೆ ಸೋಮವಾರ ಸುಮಾರು ೯ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾದವು. 
    ನಗರಸಭೆ ಸಭಾಂಗಣದಲ್ಲಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕುಂದು ಕೊರತೆಗಳ ಸಭೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ನಿರೀಕ್ಷಕ ವೀರಬಸಪ್ಪರವರಿಗೆ ತಾಲೂಕು ಆಡಳಿತ, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ವಿರುದ್ಧ ದೂರುಗಳು ಸಲ್ಲಿಕೆಯಾದವು. 
    ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ದೂರು ಸಲ್ಲಿಸಿ, ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೨೮ ಕೋ.ರು ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಫುಟ್‌ಪಾತ್ ಕಾಮಗಾರಿ ವಿಳಂಬವಾಗಿದ್ದು, ಅಲ್ಲದೆ ಕಳಪೆ ಗುಣಮಟ್ಟದಿಂದ ಕೂಡಿದೆ ಇದರ ಕ್ರಮ ಕೈಗೊಳ್ಳುವಂತೆ ಹಾಗು ನಗರದಲ್ಲಿ ಅನಧಿಕೃತ ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ಇದರ ವಿರುದ್ಧ ಸಹ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. 
    ಸಾಮಾಜಿಕ ಹೋರಾಟಗಾರ ಜನ್ನಾಪುರ ಫಿಲ್ಟರ್‌ಶೆಡ್ ನಿವಾಸಿ ಶಶಿಕುಮಾರ್ ಗೌಡ, ಶಿಕ್ಷಕನೋರ್ವನ ಅಸಭ್ಯ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಶಾಲೆಯೊಂದರ ವಿರುದ್ಧ  ಕ್ರಮ ಕೈಗೊಳ್ಳುವಂತೆ ಹಾಗು ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಡೊನೇಷನ್ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. 
    ಪ್ರಗತಿಪರ ಸಂಘಟನೆಗಳ ಮುಖಂಡ ಸುರೇಶ್ ದೂರು ಸಲ್ಲಿಸಿ, ಕ್ಷೇತ್ರದಲ್ಲಿ ನಡೆಯುವ ಸರ್ಕಾರಿ ಕಾಮಗಾರಿಗಳ ಸ್ಥಳದಲ್ಲಿ ಕರ್ನಾಟಕ ಪಾರದರ್ಶಕ ೨೦೧೬ರ ಕಾಯ್ದೆಯಡಿ ಕಾಮಗಾರಿ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 
    ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್‌ರವರು ದೂರು ಸಲ್ಲಿಸಿ, ತಮಗೆ ಸೇರಿದ ನಗರದ ಜೇಡಿಕಟ್ಟೆಯಲ್ಲಿರುವ ನಿವೇಶನದ ಜಾಗದ ಅಳತೆಯಲ್ಲಿ ೧೦ ಅಡಿ ಜಾಗ ವಂಚನೆಯಾಗಿದ್ದು, ಇದಕ್ಕೆ ಕಾರಣಕರ್ತರಾಗಿರುವ ಸರ್ವೇಯರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.  
    ಉಜ್ಜನಿಪುರ ನಗರಸಭೆ ವಾರ್ಡ್ ೨೨ವ್ಯಾಪ್ತಿಯಲ್ಲಿ ಸುಮಾರು ೩೦೦೦ ಆಶ್ರಯ ಮನೆಗಳಿಗಿದ್ದು, ಈ ಭಾಗದ ಗೊಂದಿ ನಾಲೆಯಲ್ಲಿ ಹರಿಯುತ್ತಿರುವ ನೀರಿಗೆ ತ್ಯಾಜ್ಯ ಎಸೆಯಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ರವಿಕುಮಾರ್ ಎಂಬುವರು ದೂರು ಸಲ್ಲಿಸಿ ಮನವಿ ಮಾಡಿದ್ದಾರೆ. 
    ಉಳಿದಂತೆ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಇದರಿಂದಾಗಿ ಕಳೆದ ೩ ವರ್ಷಗಳಿಂದ ರಥೋತ್ಸವ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಿವಾಸಿಗಳು ಹಾಗು ಭಕ್ತರು ನಿರಾಸೆಗೊಂಡಿದ್ದು, ತಕ್ಷಣ ನಗರಸಭೆ ಆಡಳಿತ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ನ್ಯಾಯವಾದಿ ಸುಧೀಂದ್ರ ಮಾತನಾಡಿ, ನಗರದ ಪ್ರಮುಖ ವಾಣಿಜ್ಯ ರಸ್ತೆಯೊಂದರಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದ ಮಾಲೀಕರು ಚರಂಡಿಗೆ ಮೀಸಲಿಟ್ಟಿರುವ ಜಾಗವನ್ನು ಅತಿಕ್ರಮಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. 
    ಒಟ್ಟಾರೆ ೯ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾದವು. ಸಭೆಯಲ್ಲಿ ಉಪತಹಸೀಲ್ದಾರ್ ಮಂಜ್ಯಾನಾಯ್ಕ, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ತಾಲೂಕು ಕಂದಾಯ ಇಲಾಖೆ, ನಗರಸಭೆ ಹಾಗು ಇನ್ನಿತರ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. 

Sunday, December 29, 2024

ಹಳೇನಗರ ಪೊಲೀಸ್ ಠಾಣೆಯಲ್ಲಿ ರಕ್ತದಾನ ಶಿಬಿರ : ೬೫ ದಾನಿಗಳಿಂದ ರಕ್ತದಾನ

ಶಿವಮೊಗ್ಗ ಆಶಾ ಜ್ಯೋತಿ ರಕ್ತಕೇಂದ್ರರವರ ಸಹಯೋಗದೊಂದಿಗೆ ಭದ್ರಾವತಿ ನಗರದ ಹೊಸಮನೆ ಶಿವಾಜಿ ಸರ್ಕಲ್, ಹಳೇನಗರ, ನ್ಯೂಟೌನ್ ಮತ್ತು ಸಂಚಾರಿ ಪೊಲೀಸ್ ಠಾಣೆಗಳ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಉದ್ಘಾಟಿಸಿದರು. 
    ಭದ್ರಾವತಿ: ಶಿವಮೊಗ್ಗ ಆಶಾ ಜ್ಯೋತಿ ರಕ್ತಕೇಂದ್ರರವರ ಸಹಯೋಗದೊಂದಿಗೆ ನಗರದ ಹೊಸಮನೆ ಶಿವಾಜಿ ಸರ್ಕಲ್, ಹಳೇನಗರ, ನ್ಯೂಟೌನ್ ಮತ್ತು ಸಂಚಾರಿ ಪೊಲೀಸ್ ಠಾಣೆಗಳ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಉದ್ಘಾಟಿಸಿದರು. 
    ಹೆಚ್ಚುವರಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮಾರೆಡ್ಡಿ, ಪೊಲೀಸ್ ಉಪ ಅಧೀಕ್ಷಕ ಕೆ.ಆರ್ ನಾಗರಾಜು, ಗ್ರಾಮಾಂತರ ವೃತ್ತ ನಿರೀಕ್ಷಕ ಜಗದೀಶ ಹಂಚಿನಾಳ್, ಪೇಪರ್‌ಟೌನ್ ಪೊಲೀಸ್ ಠಾಣೆ ಠಾಣಾಧಿಕಾರಿ ನಾಗಮ್ಮ, ಹಳೇನಗರ ಪೊಲೀಸ್ ಠಾಣೆ ಉಪ ನಿರೀಕ್ಷಕರಾದ ಚಂದ್ರಶೇಖರ್ ನಾಯ್ಕ, ಮಂಜುನಾಥ ಕುರಿ, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್, ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಶಾಂತಲ ಸೇರಿದಂತೆ ವಿವಿಧ ಠಾಣೆಗಳ ಉಪ ನಿರೀಕ್ಷಕರು, ಸಿಬ್ಬಂದಿ ವರ್ಗದವರು ಮತ್ತು ಆಶಾ ಜ್ಯೋತಿ ರಕ್ತಕೇಂದ್ರದ ಸಿಬ್ಬಂದಿಗಳು, ನಗರದ ಜೀವ ಸಂಜೀವಿನ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಹರೀಶ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ಹಳೇನಗರ ಪೊಲೀಸ್ ಠಾಣೆ ಆವರಣದಲ್ಲಿ ಜರುಗಿದ ಶಿಬಿರದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗು ಸಾರ್ವಜನಿಕರು ಸೇರಿದಂತೆ ಒಟ್ಟು ೬೫ ದಾನಿಗಳು ರಕ್ತದಾನ ಮಾಡಿದರು. 
    ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಹುದ್ದೆಯಲ್ಲಿರುವ ಹಾಲೇಶಪ್ಪನವರು ಓರ್ವ ರಕ್ತದಾನಿಯಾಗಿದ್ದು, ಅಲ್ಲದೆ ಪರಿಸರ ಪ್ರೇಮಿಯಾಗಿದ್ದಾರೆ. ಹಾಲೇಶಪ್ಪನವರು ಸುಮಾರು ೪೦ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದು, ಅಲ್ಲದೆ ರಕ್ತ ಅವಶ್ಯಕತೆಯ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿದ್ದಾರೆ.  ಇವರ ಪ್ರಯತ್ನದಿಂದಾಗಿ ಪ್ರತಿ ಭಾನುವಾರ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿಗಳ ಸಹಕಾರ ಪಡೆದು ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಶಿಬಿರ ಯಶಸ್ವಿಗೊಳಿಸಿದ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗು ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 

ಸರ್ವ ಸದಸ್ಯರ ಸಭೆ : ರಾಜ್ಯಾಧ್ಯಕ್ಷರಾಗಿ ವಿ. ವಿನೋದ್ ಪುನರ್ ಆಯ್ಕೆ

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ನೂತನ  ಪದಾಧಿಕಾರಿಗಳ ಆಯ್ಕೆ ಸಭೆ ಭದ್ರಾವತಿ ನಗರದ ಸಿ.ಎನ್ ರಸ್ತೆ, ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿರುವ ಒಕ್ಕೂಟದ ಕೇಂದ್ರ ಕಾರ್ಯಾಲಯದಲ್ಲಿ ಜರುಗಿತು. 
    ಭದ್ರಾವತಿ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ನೂತನ  ಪದಾಧಿಕಾರಿಗಳ ಆಯ್ಕೆ ಸಭೆ ನಗರದ ಸಿ.ಎನ್ ರಸ್ತೆ, ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿರುವ ಒಕ್ಕೂಟದ ಕೇಂದ್ರ ಕಾರ್ಯಾಲಯದಲ್ಲಿ ಜರುಗಿತು. 
    ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಲೆಕ್ಕಪತ್ರ ಹಾಗೂ ವಾರ್ಷಿಕ ವರದಿ ಮಂಡಿಸಲಾಯಿತು. ಅಲ್ಲದೆ ಕಾರ್ಮಿಕರ ಕುಂದು ಕೊರತೆಗಳ ಕುರಿತು ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಯಿತು. ನಂತರ ನೂತನ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. 
    ರಾಜ್ಯಾಧ್ಯಕ್ಷರಾಗಿ ವಿ. ವಿನೋದ್ ಪುನರ್ ಆಯ್ಕೆಯಾಗಿದ್ದು, ರಾಜ್ಯ ಉಪಾಧ್ಯಕ್ಷರಾಗಿ ಸುರೇಶ್, ಶಿವಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ಪ,  ಕಾರ್ಯದರ್ಶಿಯಾಗಿ ರಮೇಶ್, ಸಹ ಕಾರ್ಯದರ್ಶಿಯಾಗಿ ಆಶೀರ್ವಾದ್, ಖಜಾಂಚಿಯಾಗಿ ಸುಶೀಲ ಮತ್ತು ನಿರ್ದೇಶಕರಾಗಿ ಶಶಿಕುಮಾರ್, ಪವಿತ್ರ, ವೆಂಕಟೇಶ್, ಮೋಹನ್, ಜಗನ್ನಾಥ್, ನೇತ್ರಾವತಿ, ಶೇಖರಪ್ಪ ಉಬ್ಳೆಬೈಲು, ಭಾಗ್ಯ, ಸಂದೇಶ ಪೈ, ಗೌರವ ಸಲಹೆಗಾರರಾಗಿ ಬಿ.ಆರ್ ಯಲ್ಲಪ್ಪ, ರಾಮಾಚಾರಿ ಹಾಗೂ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಮಂಜುನಾಥ್‌ರಾವ್, ಪ್ರಧಾನ ಕಾರ್ಯದರ್ಶಿಯಾಗಿ ಸೆಂದಿಲ್‌ಕುಮಾರ್, ಭದ್ರಾವತಿ ತಾಲೂಕು ಅಧ್ಯಕ್ಷರಾಗಿ ಅವಿನಾಶ್, ಉಪಾಧ್ಯಕ್ಷರಾಗಿ ತೇಜುನಾಯಕ್. ಭದ್ರಾವತಿ ಗ್ರಾಮಾಂತರ ಅಧ್ಯಕ್ಷರಾಗಿ ವಸಂತ್‌ರಾವ್, ಭದ್ರಾವತಿ ನಗರ ಅಧ್ಯಕ್ಷರಾಗಿ ಜಾರ್ಜ್ ಮಾರ್ಟಿನ್, ಭದ್ರಾವತಿ ತಾಲೂಕು ಮಹಿಳಾ ಅಧ್ಯಕ್ಷರಾಗಿ ಮಂಜುಳಾ ಸೇರಿದಂತೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 
    ಒಕ್ಕೂಟದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳಿಗೆ ಸಂವಿಧಾನದ ಪೀಠಿಕೆ ಬೋಧಿಸಲಾಯಿತು. ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಒಕ್ಕೂಟದ ಬೈಲಾ ನಿಯಮಗಳ ಓದಿ ತಿಳಿಸಿ ಪದಗ್ರಹಣ ಮಾಡಲಾಯಿತು.  ನೇತ್ರಾವತಿ ಸ್ವಾಗತಿಸಿ, ಜಯಪ್ಪ ನಿರೂಪಿಸಿ, ಶಶಿಕುಮಾರ್ ವಂದಿಸಿದರು. 

ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ : ರಥಯಾತ್ರೆಗೆ ಅದ್ದೂರಿ ಸ್ವಾಗತ

ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ನಗರಕ್ಕೆ ಆಗಮಿಸಿದ ರಥಯಾತ್ರೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ನೇತೃತ್ವದಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಪ್ರತಿಮೆಗೆ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಪುಷ್ಪ ಮಾಲೆ ಹಾಕುವ ಮೂಲಕ ಸ್ವಾಗತಿಸಿದರು. 
    ಭದ್ರಾವತಿ: ಸಾವಿರಾರು ವರ್ಷಗಳ ಹಿಂದೆ ಕಪಿಲಾ ನದಿ ತೀರದಲ್ಲಿ ಶ್ರೀ ಸುತ್ತೂರು ಕ್ಷೇತ್ರವನ್ನು ದಿವ್ಯ ತಪ್ಪಸ್ಸಿನಿಂದ ಸಂಸ್ಥಾಪಿಸಿ ಬೆಳಗಿದ ಮಹಾಮಹಿಮ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಜ.೨೬ ರಿಂದ ೩೧ರವರೆಗೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ರಥಯಾತ್ರೆಯನ್ನು ಭಾನುವಾರ ನಗರದ ಲೋಯರ್ ಹುತ್ತಾ ಬಸ್ ನಿಲ್ದಾಣದ ಸಮೀಪ ಅದ್ದೂರಿಯಾಗಿ ಸ್ವಾಗತಿಸಲಾಯಿತು. 
    ನಗರಕ್ಕೆ ಆಗಮಿಸಿದ ರಥಯಾತ್ರೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ನೇತೃತ್ವದಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಪ್ರತಿಮೆಗೆ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಪುಷ್ಪ ಮಾಲೆ ಹಾಕುವ ಮೂಲಕ ಸ್ವಾಗತಿಸಿದರು. 
    ಪ್ರಮುಖರಾದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನ್, ಉದ್ಯಮಿ ಬಿ.ಕೆ ಜಗನ್ನಾಥ್, ಡಾ. ಜಿ.ಎಂ ನಟರಾಜ್, ಡಾ. ಬಿ.ಜಿ ಧನಂಜಯ, ಜಗದೀಶ್ ಕವಿ, ಸಿದ್ದಲಿಂಗಯ್ಯ, ನಂದಿನಿ, ಮಲ್ಲಿಕಾಂಬ, ಪೂರ್ಣಿಮಾ, ಹೇಮಾವತಿ ಚಿಗಟೇರಪ್ಪ, ಎಂ. ವಿರುಪಾಕ್ಷಪ್ಪ, ಟಿ.ಜಿ ಬಸವರಾಜಯ್ಯ, ರಾಜೇಂದ್ರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ; ಅಪಘಾತ ನಿಯಂತ್ರಿಸಿ

ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಮನವಿ 


ಭದ್ರಾವತಿ ನಗರದ ರಂಗಪ್ಪ ವೃತ್ತದಲ್ಲಿ ಭಾನುವಾರ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಕಾನೂನು ಉಲ್ಲಂಘಿಸಿದ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿದ ಸೈಲೆನ್ಸರ್ ಹಾಗು ಕಳಪೆ ಗುಣಮಟ್ಟದ ಮತ್ತು ಅರ್ಧ ಹೆಲ್ಮೆಟ್‌ಗಳನ್ನು ಬುಲ್ಡೋಜರ್ ಬಳಸಿ ನಾಶಪಡಿಸಲಾಯಿತು. 
    ಭದ್ರಾವತಿ: ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಅಪಘಾತಗಳನ್ನು ನಿಯಂತ್ರಿಸುವಲ್ಲಿ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಮನವಿ ಮಾಡಿದರು. 
    ಅವರು ಭಾನುವಾರ ನಗರದ ರಂಗಪ್ಪ ವೃತ್ತದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಕಾನೂನು ಉಲ್ಲಂಘಿಸಿದ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿದ ಸೈಲೆನ್ಸರ್ ಹಾಗು ಕಳಪೆ ಗುಣಮಟ್ಟದ ಮತ್ತು ಅರ್ಧ ಹೆಲ್ಮೆಟ್‌ಗಳನ್ನು ಬುಲ್ಡೋಜರ್ ಬಳಸಿ ನಾಶಪಡಿಸಿದ ನಂತರ ಮಾತನಾಡಿದರು. 
    ವಾಹನ ಸವಾರರು ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ರಸ್ತೆ ಸುರಕ್ಷತಾ ನಿಯಮಗಳನ್ನು ತಿಳಿದುಕೊಂಡು ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು. 
    ಸಂಚಾರಿ ಪೊಲೀಸ್ ಠಾಣೆ ನೇತೃತ್ವದಲ್ಲಿ ನಗರದ ವಿವಿಧೆಡೆ ವಶಪಡಿಸಿಕೊಳ್ಳಲಾಗಿದ್ದ ಸುಮಾರು ೨೦ಕ್ಕೂ ಹೆಚ್ಚು ಸೈಲೆನ್ಸರ್, ಸುಮಾರು ೩೦೦೦ಕ್ಕೂ ಹೆಚ್ಚು ಕಳಪೆ ಗುಣಮಟ್ಟದ ಮತ್ತು ಅರ್ಧ ಹೆಲ್ಮೆಟ್‌ಗಳನ್ನು ನಾಶಪಡಿಸಲಾಯಿತು. 
    ಹೆಚ್ಚುವರಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮಾರೆಡ್ಡಿ, ಪೊಲೀಸ್ ಉಪ ಅಧೀಕ್ಷಕ ಕೆ.ಆರ್ ನಾಗರಾಜು, ಗ್ರಾಮಾಂತರ ವೃತ್ತ ನಿರೀಕ್ಷಕ ಜಗದೀಶ ಹಂಚಿನಾಳ್, ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಶಾಂತಲ, ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಭಾರತಿ, ಪೇಪರ್‌ಟೌನ್ ಪೊಲೀಸ್ ಠಾಣೆ ಠಾಣಾಧಿಕಾರಿ ನಾಗಮ್ಮ, ಸೇರಿದಂತೆ ವಿವಿಧ ಠಾಣೆಗಳ ಉಪ ನಿರೀಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  

Saturday, December 28, 2024

ಡಿ.೨೯ರಂದು ಪ್ರತಿಭಾ ಪುರಸ್ಕಾರ-ಸನ್ಮಾನ ಸಮಾರಂಭ


  
 ಭದ್ರಾವತಿ: ತಾಲೂಕು ಕುರುಬರ ಸಂಘದ ವತಿಯಿಂದ ಡಿ.೨೯ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ  ಪ್ರತಿಭಾ ಪುರಸ್ಕಾರ ಹಾಗು ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. 
    ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ಶಾಖಾ ಮಠ, ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಲಿದ್ದು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಅಧ್ಯಕ್ಷತೆ ವಹಿಸಲಿದ್ದಾರೆ. 
ಬೆಂಗಳೂರು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ, ಇನ್‌ಸೈಟ್-ಐಎಎಸ್ ಸಂಸ್ಥೆ ಸಂಸ್ಥಾಪಕ ಬಿ.ಜಿ ವಿನಯ್‌ಕುಮಾರ್, ತಹಸೀಲ್ದಾರ್ ಪರುಶಪ್ಪ ಕುರುಬರ , ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ ರಾಮಚಂದ್ರಪ್ಪ, ಕುರುಬರ ಸಂಘದ ಮಾಜಿ ಅಧ್ಯಕ್ಷ ಕೆ. ಕರಿಯಪ್ಪ, ಶ್ರೀ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ. ಪ್ರಭಾಕರ ಬೀರಯ್ಯ, ಉಪಾಧ್ಯಕ್ಷ ಡಾ. ಎಚ್.ಆರ್ ನರೇಂದ್ರ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಚ್ ಉಮೇಶ್, ಕನಕ ಯುವ ಪಡೆ ಅಧ್ಯಕ್ಷ ಕೆ. ಲೋಕೇಶ್, ಸಂಗೊಳ್ಳಿರಾಯಣ್ಣ ಯುವಪಡೆ ಅಧ್ಯಕ್ಷ ಜಿ.ಎಸ್ ಹನುಮಂತಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.  

ಕೃಷಿ ಪತ್ತಿನ ಸಹಕಾರಕ್ಕೆ ನೂತನ ನಿರ್ದೇಶಕರು ಆಯ್ಕೆ


ಭದ್ರಾವತಿ: ತಾಲೂಕಿನ ಕಡದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ನೂತನ ನಿರ್ದೇಶಕರು ಆಯ್ಕೆಯಾಗಿದ್ದಾರೆ. 
    ಸಾಮಾನ್ಯ ಸ್ಥಾನದಿಂದ ಬಿ. ಆನಂದ, ಇಂದ್ರೇಗೌಡ, ಸುರೇಶ್, ಉಮೇಶ್, ಕೆ.ಜಿ ರವಿಕುಮಾರ್, ಮಹಿಳಾ ಮೀಸಲು ಕ್ಷೇತ್ರದಿಂದ ಎ. ಭಾಗ್ಯಲಕ್ಷ್ಮೀ, ಪಾರ್ವತಮ್ಮ, ಹಿಂದುಳಿದ `ಎ' ವರ್ಗದಿಂದ ಬಿ.ಎಸ್ ಹನುಮಂತಪ್ಪ, `ಬಿ' ವರ್ಗದಿಂದ ಡಿ. ಶಿವಶಂಕರ್, ಪರಿಶಿಷ್ಟ ಜಾತಿ ನಾಗರಾಜನಾಯ್ಕ ಮತ್ತು ಪರಿಶಿಷ್ಟ ಪಂಗಡದಿಂದ ಹನುಮಂತಪ್ಪ ಹಾಗು ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ವೆಂಕಟೇಶ್ ಸೇರಿದಂತೆ ಒಟ್ಟು ೧೨ ಮಂದಿ ನಿರ್ದೇಶಕರು ನೂತನವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. 


ನಿರ್ಮಲ ಆಸ್ಪತ್ರೆಯಲ್ಲಿ ಅಪರಾಧ ತಡೆ ಮಾಸಾಚರಣೆ

ಭದ್ರಾವತಿ ನಗರದ ಸಂಚಾರಿ ಪೊಲೀಸ್ ಠಾಣೆವತಿಯಿಂದ ಹಳೇನಗರದ ನಿರ್ಮಲ ಸೇವಾ ಕೇಂದ್ರದ ಸಹಯೋಗದೊಂದಿಗೆ ನಿರ್ಮಲ ಆಸ್ಪತ್ರೆಯಲ್ಲಿ ಶನಿವಾರ ಅಪರಾಧ ತಡೆ ಮಾಸಾಚರಣೆ ನಡೆಯಿತು. 
    ಭದ್ರಾವತಿ:  ನಗರದ ಸಂಚಾರಿ ಪೊಲೀಸ್ ಠಾಣೆವತಿಯಿಂದ ಹಳೇನಗರದ ನಿರ್ಮಲ ಸೇವಾ ಕೇಂದ್ರದ ಸಹಯೋಗದೊಂದಿಗೆ ನಿರ್ಮಲ ಆಸ್ಪತ್ರೆಯಲ್ಲಿ ಶನಿವಾರ ಅಪರಾಧ ತಡೆ ಮಾಸಾಚರಣೆ ನಡೆಯಿತು. 
    ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಶಾಂತಲರವರು ಅಪರಾಧ ತಡೆ ಮಾಸಾಚರಣೆ ಅಂಗವಾಗಿ, ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ, ಪೋಕ್ಸೋ ಕಾಯ್ದೆ, ಸೈಬರ್ ಅಪರಾಧ, ಸಂಚಾರ ನಿಯಮಗಳ ಕುರಿತು ಕಾನೂನು ಅರಿವು ಮೂಡಿಸಿದರು. 
    ನಿರ್ಮಲ ಸೇವಾ ಕೇಂದ್ರದ ಪ್ರಮುಖರು, ಮಹಿಳೆಯರು ಪಾಲ್ಗೊಂಡಿದ್ದರು. ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಸಾರ್ವಜನಿಕ ಸ್ಥಳಗಳು, ಶಾಲಾ-ಕಾಲೇಜು ಸೇರಿದಂತೆ ವಿವಿಧೆಡೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. 

ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕೇಂದ್ರ ಉಕ್ಕು ಪ್ರಾಧಿಕಾರ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ಶನಿವಾರ ಶಿವಮೊಗ್ಗ ಎನ್.ಯು ಆಸ್ಪತ್ರೆ ಹಾಗು ಎಂಡಿ ಇಂಡಿಯಾ ಇನ್ಸೂರೆನ್ಸ್ ಕಂಪನಿ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬರ ಆಯೋಜಿಸಲಾಗಿತ್ತು. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ಶನಿವಾರ ಶಿವಮೊಗ್ಗ ಎನ್.ಯು ಆಸ್ಪತ್ರೆ ಹಾಗು ಎಂಡಿ ಇಂಡಿಯಾ ಇನ್ಸೂರೆನ್ಸ್ ಕಂಪನಿ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬರ ಆಯೋಜಿಸಲಾಗಿತ್ತು. 
    ಎನ್.ಯು ಆಸ್ಪತ್ರೆಯ ಸಹಾಯಕ ವೈದ್ಯಕೀಯ ನಿರ್ದೇಶಕ ಡಾ. ಪ್ರವೀಣ್ ಮಳವಾಡೆ ಹಾಗು ತಜ್ಞ ವೈದ್ಯ ಡಾ. ಶರತ್ ಮೂತ್ರ ಶಾಸ್ತ್ರ, ಮೂತ್ರ ಪಿಂಡ ಹಾಗು ಬಂಜೆತನ ನಿವಾರಣೆ ಕುರಿತು ಆರೋಗ್ಯ ಮಾಹಿತಿ ನೀಡಿದರು. ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ ಶಿಬಿರದ ನೇತೃತ್ವದ ವಹಿಸಿದ್ದರು. 
    ಎನ್.ಯು ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಶ್ರೀಜಿತ್, ಮಾರುಕಟ್ಟೆ ಅಧಿಕಾರಿ ಪ್ರಿನ್ಸನ್ ಲೋಬೊ, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಪ್ರಮುಖರಾದ ಉಪಾಧ್ಯಕ್ಷ ಅಡವೀಶಯ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕಾರ್ಯದರ್ಶಿಗಳಾದ ಹನುಮಂತರಾವ್, ಜಯರಾಜ್, ರವೀಂದ್ರ ರೆಡ್ಡಿ, ನಿರ್ದೇಶಕರಾದ ನರಸಿಂಹಚಾರ್, ಶಂಕರ್, ನಾಗರಾಜ್, ಮಹೇಶ್ವರಪ್ಪ, ವೆಂಕಟೇಶ್ ಪ್ರಸಾದ್, ರಾಮಪ್ಪ ಹಾಗು ಕೆಂಪಯ್ಯ ಸೇರಿದಂತೆ ನಿವೃತ್ತ ಕಾರ್ಮಿಕರು, ಎಂ.ಡಿ ಇಂಡಿಯಾ ಇನ್ಸೂರೆನ್ಸ್ ಕಂಪನಿ ಅಧಿಕಾರಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. 
    ಶಿಬಿರದ ಆರಂಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು. 

Friday, December 27, 2024

ನೋಟುಗಳ ಮೂಲಕ ಮಾಜಿ ಪ್ರಧಾನಿ ನಿಧನಕ್ಕೆ ಸಂತಾಪ

ಭದ್ರಾವತಿ ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರ ಗಣೇಶ್‌ರವರು ದೇಶದ ಆರ್ಥಿಕ ಸುಧಾರಣೆಗಳ ಹರಿಕಾರ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರವರ ನಿಧನಕ್ಕೆ ವಿಶೇಷವಾಗಿ ೧೦ ರು. ಮುಖಬೆಲೆ ನೋಟು ಮೂಲಕ ಸಂತಾಪ ಸೂಚಿಸಿದ್ದಾರೆ. 
    ಭದ್ರಾವತಿ : ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹಗಾರ ಗಣೇಶ್‌ರವರು ದೇಶದ ಆರ್ಥಿಕ ಸುಧಾರಣೆಗಳ ಹರಿಕಾರ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರವರ ನಿಧನಕ್ಕೆ ವಿಶೇಷವಾಗಿ ೧೦ ರು. ಮುಖಬೆಲೆ ನೋಟು ಮೂಲಕ ಸಂತಾಪ ಸೂಚಿಸಿದ್ದಾರೆ. 
    ಸಿಂಗ್‌ರವರ ಜನ್ಮದಿನ ಹಾಗು ನಿಧನ ಹೊಂದಿದ ದಿನದ ದಿನಾಂಕ ಹೊಂದಿರುವ ೧೦ ರು. ಮುಖಬೆಲೆಯ ನೋಟುಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ಗಣೇಶ್‌ರವರು ಸುಮಾರು ೫ ದಶಕ್ಕೂ ಹೆಚ್ಚು ಕಾಲದಿಂದ ನಾಣ್ಯ, ನೋಟು ಹಾಗು ಅಂಚೆ ಚೀಟಿ ಸಂಗ್ರಹ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದು, ಗಣ್ಯ ವ್ಯಕ್ತಿಗಳ ಹುಟ್ಟು, ನಿಧನ ಹೊಂದಿದ ದಿನ ಹಾಗು ಪ್ರಮುಖ ಐತಿಹಾಸಿಕ ಘಟನೆಗಳ ಸಂದರ್ಭದಲ್ಲಿ ನೋಟುಗಳ ಮೂಲಕ ಶುಭ ಹಾರೈಕೆ, ಸಂತಾಪ ಸೂಚಿಸುವ ಮೂಲಕ ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ. 

ಡಿ.೨೮ರಂದು ಶ್ರೀ ರಾಮಾಯಣ ದರ್ಶನಂ ಆಧಾರಿತ ಉಪನ್ಯಾಸ-ಪ್ರಾತ್ಯಕ್ಷಿಕೆ



    ಭದ್ರಾವತಿ: ನಗರದ ರೋಟರಿ ಕ್ಲಬ್ ವತಿಯಿಂದ ಆನಂದ ಆರೋಗ್ಯ ನೃತ್ಯ ಪ್ರಾತ್ಯಕ್ಷಿಕಾ ಮಾಲಿಕೆ `ರಾಮಂಗೆ ಮೊದಲಲ್ತೆ ರಾಮಾಯಣಂ?' ವಿಶೇಷ ಕಾರ್ಯಕ್ರಮ ರಾಷ್ಟ್ರಕವಿ ಕುವೆಂಪುರವರ ಜ್ಞಾನಪೀಠ ಪುರಸ್ಕೃತ ಶ್ರೀ ರಾಮಾಯಣ ದರ್ಶನಂ ಆಧಾರಿತ ಉಪನ್ಯಾಸ-ಪ್ರಾತ್ಯಕ್ಷಿಕೆ ಡಿ.೨೮ರಂದು ಸಂಜೆ ೬ ಗಂಟೆಗೆ ನಗರದ ರೋಟರಿ ಕ್ಲಬ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
    ಮನೋವೈದ್ಯೆ, ನೃತ್ಯ ಕಲಾವಿದೆ ಡಾ.ಕೆ.ಎಸ್ ಪವಿತ್ರಾ ಅವರಿಂದ ಉಪನ್ಯಾಸ-ಪ್ರಾತ್ಯಕ್ಷಿಕೆ ನಡೆಯಲಿದ್ದು, ಡಾ. ಅನುರಾಧ ಪಟೇಲ್ ಉದ್ಘಾಟಿಸಲಿದ್ದಾರೆ. ರೋಟರಿ ಕ್ಲಬ್ ಅಧ್ಯಕ್ಷ ಜಿ. ರಾಘವೇಂದ್ರ ಉಪಾಧ್ಯಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಜ.೪ರಂದು `ಸಾರ್ಥಕ ಸೇವೆಯ ಸವಿನೆನಪಿನ ಕ್ಷಣದ' ಅಭಿನಂದನಾ ಕಾರ್ಯಕ್ರಮ

ಅಪೇಕ್ಷ ಮಂಜುನಾಥ್ 
    ಭದ್ರಾವತಿ: ಜ್ಯೂನಿಯರ್ ವಿಷ್ಣವರ್ಧನ್ ಎಂದೇ ಗುರುತಿಸಿಕೊಂಡಿರುವ ಕಾಗದನಗರ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಅಪೇಕ್ಷ ಮಂಜುನಾಥ್ ೩೫ ವರ್ಷಗಳ ವೃತ್ತಿ ಕರ್ತವ್ಯದಿಂದ ನಿವೃತ್ತಿ ಹೊಂದುತ್ತಿದ್ದು, ಈ ಹಿನ್ನಲೆಯಲ್ಲಿ ಜ.೪ರಂದು `ಸಾರ್ಥಕ ಸೇವೆಯ ಸವಿನೆನಪಿನ ಕ್ಷಣದ' ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. 
    ಅಪೇಕ್ಷ ಕಲಾ ನೃತ್ಯ ವೃಂದ ಹಾಗು ಸ್ನೇಹ ಬಳಗದ ವತಿಯಿಂದ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಮಧ್ಯಾಹ್ನ ೩ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸ್ನೇಹ ಬಳಗದವರು, ಅಭಿಮಾನಿಗಳು, ಶಿಕ್ಷಕರು, ಕಲಾವಿದರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 
    ಅಪೇಕ್ಷ ಮಂಜುನಾಥ್ : 
    ಅಪೇಕ್ಷ ಮಂಜುನಾಥ್‌ರವರು ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ವೃತ್ತಿ ಜೊತೆಯಲ್ಲಿ ನೃತ್ಯ ಕಲಾವಿದರಾಗಿ ಬೆಳೆದು ಅಪೇಕ್ಷ ಕಲಾ ನೃತ್ಯ ವೃಂದ ಆರಂಭಿಸಿ ಆ ಮೂಲಕ ನೂರಾರು ಯುವ ಕಲಾ ಪ್ರತಿಭೆಗಳನ್ನು ಪ್ರೋತ್ಸಾಯಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಕಾರಣಕರ್ತರಾಗಿದ್ದಾರೆ. ಅಲ್ಲದೆ ಮಂಜುನಾಥ್‌ರವರು ಹಿರಿಯ ನಟ, ದಿವಂಗತ ಡಾ. ವಿಷ್ಣುವರ್ಧನ್‌ರವರ ಅಭಿಮಾನಿಯಾಗಿದ್ದು, ಅವರ ಅಭಿನಯದ ಮೂಲಕ ಜ್ಯೂನಿಯರ್ ವಿಷ್ಣುವರ್ಧನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜ್ಯದ ವಿವಿಧೆಡೆ ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮ ಅಭಿನಯ ಪ್ರದರ್ಶಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಪ್ರತಿವರ್ಷ ವಿಷ್ಣುವರ್ಧನ್‌ರವರ ಜನ್ಮದಿನ ಹಾಗು ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದು, ವಿಷ್ಣುವರ್ಧನ್‌ರವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಸಹ ನೀಡುತ್ತಿದ್ದಾರೆ. ಅಲ್ಲದೆ ಅಪೇಕ್ಷ ಕಲಾ ನೃತ್ಯ ವೃಂದ ಮೂಲಕ ಪ್ರತಿಭಾವಂತ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದಾರೆ. ಇವರಿಗೆ ಜಿಲ್ಲಾ ಹಾಗು ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿವೆ. 

ಡಿ.೨೯ರಂದು ರಕ್ತದಾನ ಶಿಬಿರ


    ಭದ್ರಾವತಿ: ಶಿವಮೊಗ್ಗ ಆಶಾ ಜ್ಯೋತಿ ರಕ್ತಕೇಂದ್ರರವರ ಸಹಯೋಗದೊಂದಿಗೆ ನಗರದ ಹೊಸಮನೆ ಶಿವಾಜಿ ಸರ್ಕಲ್, ಹಳೇನಗರ, ನ್ಯೂಟೌನ್ ಮತ್ತು ಸಂಚಾರಿ ಪೊಲೀಸ್ ಠಾಣೆಗಳ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ. 
    ಹಳೇನಗರ ಪೊಲೀಸ್ ಠಾಣೆ ಆವರಣದಲ್ಲಿ ಡಿ.೨೯ರ ಭಾನುವಾರ ಬೆಳಿಗ್ಗೆ ೧೦ ಗಂಟೆಯಿಂದ ಶಿಬಿರ ನಡೆಯಲಿದ್ದು, ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರ ಯಶಸ್ವಿಗೊಳಿಸುವಂತೆ ಕೋರಲಾಗಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪ್ರತಿ ಭಾನುವಾರ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಪೈಕಿ ರಕ್ತದಾನ ಶಿಬಿರ ಸಹ ಒಂದಾಗಿದೆ. 

ವಿದ್ಯಾರ್ಥಿಗಳು ಅವಕಾಶಗಳ ಸದುಪಯೋಗ ಪಡೆದುಕೊಂಡು ಮುಂದೆ ಬನ್ನಿ : ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

ಭದ್ರಾವತಿ ಹೊಸಸಿದ್ಧಾಪುರ ಎನ್‌ಟಿಬಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಹ್ಯಾದ್ರಿ ಪಬ್ಲಿಕ್ ಸ್ಕೂಲ್ ಕಟ್ಟಡ  ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಆಧುನಿಕ ಯುಗದಲ್ಲಿ ಬೆಳವಣಿಗೆ ಹೊಂದಲು ವಿಫುಲವಾದ ಅವಕಾಶಗಳು ಮುಕ್ತವಾಗಿದ್ದು, ವಿದ್ಯಾರ್ಥಿಗಳು ತಮಗೆ ಲಭ್ಯವಾಗುವ ಅವಕಾಶಗಳ ಸದುಪಯೋಗ ಪಡೆದುಕೊಂಡು ಮುಂದೆ ಬರಬೇಕೆಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. 
    ಅವರು ಹೊಸಸಿದ್ಧಾಪುರ ಎನ್‌ಟಿಬಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಹ್ಯಾದ್ರಿ ಪಬ್ಲಿಕ್ ಸ್ಕೂಲ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
    ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿದ್ದು, ಕೇವಲ ಅಕ್ಷರಾಭ್ಯಾಸ, ಅಂಕಗಳಿಕೆಯ ಸ್ಪರ್ಧೆಗೆ ಮಾತ್ರ ಮಕ್ಕಳನ್ನು ಮೀಸಲುಗೊಳಿಸಲು ಸಜ್ಜುಗೊಳಿಸುವ ಬದಲು ಕ್ರಿಯಾತ್ಮಕವಾಗಿ ರೂಪಿಸಬೇಕಾಗಿದೆ. ಪೋಷಕರ ಪಾತ್ರ ಈ ನಿಟ್ಟಿನಲ್ಲಿ ಪ್ರಮುಖವಾಗಿದೆ ಎಂದರು.
    ಶಿಕ್ಷಣ ಸಂಸ್ಥೆಯ ಪ್ರಮುಖರಾದ ಟ್ರಸ್ಟ್ ಕಾರ್ಯದರ್ಶಿ ಕಾಳೇಗೌಡರವರ ರಾಜೀರಹಿತ ತತ್ವ, ಸಿದ್ಧಾಂತ, ನಿಷ್ಟುರ ಸ್ವಭಾವ, ಕಾರ್ಮಿಕ ರಂಗದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಅವರ ಬದ್ಧತೆ ಮಾದರಿಯಾಗಿದೆ ಎಂದು ಸ್ವಾಮೀಜಿಯವರು ಬಣ್ಣಿಸಿದರು. 
    ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿದ್ದ ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ-ಸಂಸ್ಕಾರ ಕಲಿಸಿದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂದರು.
    ಹತ್ತು ಹಲವು ಸವಾಲು ಹಾಗೂ ಸಂಕಷ್ಟಗಳ ನಡುವೆಯೂ ಛಲಬಿಡದ ತ್ರಿವಿಕ್ರಮನಂತೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿಬೆಳೆಸಿರುವ ಕಾರ್ಯದರ್ಶಿ ಕಾಳೇಗೌಡರವರ ಕಾರ್ಯವೈಖರಿ ಅನುಕರಣೀಯ ಎಂದು ಶ್ಲಾಘಿಸಿದರು.
    ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಡಾ. ಡಿ. ಪ್ರಭಾಕರ ಬೀರಯ್ಯ ಮತನಾಡಿ, ಶಿಕ್ಷಣ ಸಂಸ್ಥೆಗಳು ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು.
    ಕಾರ್ಮಿಕ ಮುಖಂಡ ಡಿ.ಸಿ. ಮಾಯಣ್ಣ ಮಾತನಾಡಿ, ವಿದ್ಯಾವಂತರ ಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸೃಜನೆಮಾಡಿದಾಗ ಮಾತ್ರ ದೇಶ ಪ್ರಗತಿಪಥದತ್ತ ಸಾಗಲು ಸಾಧ್ಯ ಎಂದರು.
    ಕಾರ್ಯದರ್ಶಿ ಕಾಳೇಗೌಡ ಪ್ರಾಸ್ತವಿಕವಾಗಿ ಮಾತನಾಡಿ, ಶಿಕ್ಷಣ ಸಂಸ್ಥೆ ಬೆಳೆದುಬಂದ ದಾರಿ ಹಾಗೂ ಸಿದ್ಧಾಪುರ ಬಡಾವಣೆಯ ಪೋಷಕರು ನೀಡಿದ ಸಹಕಾರ ಸ್ಮರಿಸಿದರು. 
    ಟ್ರಸ್ಟ್ ಅಧ್ಯಕ್ಷ ಪಿ.ದೊರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯೆ ಆರ್. ನಾಗರತ್ನ ಅನಿಲ್ ಕುಮಾರ್, ಟ್ರಸ್ಟಿ ಉಷಾ ಕಾಳೇಗೌಡ, ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್, ಶಿವಲಿಂಗೇಗೌಡ ಮುಂತಾದವರು ಉಪಸ್ಥಿತರಿದ್ದರು.  ಟ್ರಸ್ಟಿ ರವಿಕುಮಾರ್ ವಂದಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ರೈತರಿಗೆ ಸಮಗ್ರ ಕೃಷಿ ನೀರಾವರಿ, ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ

ಭದ್ರಾವತಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-೧ರ ವತಿಯಿಂದ ವಿದ್ಯಾಮಂದಿರ ವಲಯದ ತಿಮ್ಲಾಪುರ ಕಾರ್ಯಕ್ಷೇತ್ರದಲ್ಲಿ ರೈತರಿಗೆ ಸಮಗ್ರ ಕೃಷಿ ನೀರಾವರಿ, ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
    ಭದ್ರಾವತಿ: ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-೧ರ ವತಿಯಿಂದ ವಿದ್ಯಾಮಂದಿರ ವಲಯದ ತಿಮ್ಲಾಪುರ ಕಾರ್ಯಕ್ಷೇತ್ರದಲ್ಲಿ ರೈತರಿಗೆ ಸಮಗ್ರ ಕೃಷಿ ನೀರಾವರಿ, ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
  ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೈತರಿಗಾಗಿ ರೂಪಿಸಿರುವ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವ ಜೊತೆಗೆ ಮಾಹಿತಿ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಲಾಭದಾಯಕ ಕೃಷಿ ಕೈಗೊಳ್ಳುವ ವಿಧಾನಗಳ  ಕುರಿತು ಸಮಗ್ರವಾಗಿ ಯೋಜನಾಧಿಕಾರಿ ಪ್ರಕಾಶ್ ವೈ ನಾಯ್ಕ ವಿವರಿಸಿದರು. ಕಾರ್ಯಕ್ರಮದಲ್ಲಿ ತಿಮ್ಲಾಪುರ ಕಾರ್ಯಕ್ಷೇತ್ರದ ರೈತರು, ಜನಜಾಗೃತಿ ವೇದಿಕೆ ಸದಸ್ಯೆ ಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮನಮೋಹನ ಸಿಂಗ್ ನಿಧನಕ್ಕೆ ಶಾಸಕ ಸಂಗಮೇಶ್ವರ್ ಸಂತಾಪ

    ಭದ್ರಾವತಿ : ದೇಶದ ಆರ್ಥಿಕ ಸುಧಾರಣೆಗಳ ಹರಿಕಾರ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರವರ ನಿಧನಕ್ಕೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ. 
    ಮನಮೋಹನ ಸಿಂಗ್‌ರವರು ಅರ್ಥಶಾಸ್ತ್ರದ ಪ್ರಾಧ್ಯಾಪಕ, ಪ್ರಧಾನ ಆರ್ಥಿಕ ಸಲಹೆಗಾರ ಕೇಂದ್ರ ವಿತ್ತ ಕಾರ್ಯದರ್ಶಿ, ರಿಸರ್ವ್ ಬ್ಯಾಂಕ್ ಗವರ್ನರ್, ಯೋಜನಾ ಆಯೋಗದ ಉಪಾಧ್ಯಕ್ಷ,  ವಿಶ್ವ ವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ, ಕೇಂದ್ರ ವಿತ್ತ ಸಚಿವ ಹಾಗು ೨ ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. 
    ಧೀಮಂತ ನಾಯಕ, ದೇಶದ ಹಿರಿಯ ಮುತ್ಸದ್ದಿ, ಅಜಾತ ಶತೃ ಮನಮೋಹನ ಸಿಂಗ್‌ರವರ ನಿಧನ ದೇಶಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಇವರ ನಿಧನದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿ ಭಗವಂತ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಸಂತಾಪ ಸೂಚಿಸಿದ್ದಾರೆ. 

Thursday, December 26, 2024

ನವಚೇತನ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕಡದಕಟ್ಟೆ ನವಚೇತನ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಸಿದರು.
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಕಡದಕಟ್ಟೆ ನವಚೇತನ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಸಿದರು.
    ವಾರ್ಷಿಕೋತ್ಸವದಲ್ಲಿ ರೈತ ಅಶೋಕ್, ಮಾಜಿ ಸೈನಿಕ ದೇವರಾಜು ಮತ್ತು ನವಚೇತನ ಶಾಲೆಯ ನಿವೃತ್ತ ಶಿಕ್ಷಕ ಎಂ. ಚನ್ನೇಶ್ವರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಕಳೆದ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭಾ ಸದಸ್ಯರಾದ ಶೃತಿ ವಸಂತ್ ಕುಮಾರ್ ಮತ್ತು ಗೀತಾ ರಾಜಕುಮಾರ್, ಶಿಮೂಲ್ ನಿರ್ದೇಶಕ ಕೆಂಚನಹಳ್ಳಿ ಎಸ್. ಕುಮಾರ್, ಜಮೀನ್ದಾರ್ ಪರಮೇಶ್ವರಪ್ಪ, ನಿವೃತ್ತ ಉಪನ್ಯಾಸಕ ನಿಂಗಪ್ಪ, ನಿವೃತ್ತ ಶಿಕ್ಷಕ ಜಿ. ಉಮೇಶ್ವರಪ್ಪ, ಸಿ.ಆರ್.ಪಿ ನಂದಿನಿ, ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ಎನ್.ಪಿ.ಎಸ್ ಅಧ್ಯಕ್ಷ ಎ. ರಂಗನಾಥ್, ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಮುಸ್ವೀರ್ ಬಾಷಾ, ವಿದ್ಯಾಸಂಸ್ಥೆಯ ಸಲಹೆಗಾರರಾದ ಗೀತಾಬಾಯಿ ಸಿದ್ದೇಶ್ವರ, ಅಧ್ಯಕ್ಷ ಎಸ್. ವಿನಯ್, ಕಾರ್ಯದರ್ಶಿ ಎಸ್. ವಿವೇಕ್, ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಶಿಕ್ಷಕಿ ಎಚ್.ಡಿ ಸುವರ್ಣ ಸ್ವಾಗತಿಸಿ, ಬಿ.ಎಂ ಲಿಂಗರಾಜ್ ನಿರೂಪಿಸಿ, ಕೆ.ಎಸ್ ಮಂಜುನಾಥ್ ವಂದಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಸಮರ್ಪಕವಾಗಿ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲ : ಸದಸ್ಯರ ಆರೋಪ

ಭದ್ರಾವತಿ ನಗರಸಭೆ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷ ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದು, ಇದರಿಂದಾಗಿ ವಾರ್ಡ್‌ಗಳಲ್ಲಿ ಸದಸ್ಯರು ತಲೆ ತಗ್ಗಿಸುವಂತಾಗಿದೆ ಎಂದು ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು. 
    ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷ ಭೇದಮರೆತು ಸದಸ್ಯರು ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ವಾರ್ಡ್‌ಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳನ್ನು ನಿಯಂತ್ರಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ ಕಸಕಡ್ಡಿಕಟ್ಟಿಕೊಂಡು ದುರ್ವಾಸನೆ ಬೀರುತ್ತಿವೆ. ಸೊಳ್ಳೆಕಾಟ ಹೆಚ್ಚಾಗಿದೆ. ರೋಗರುಜಿನಗಳು ಹರಡುವ ಭೀತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
    ಅಲ್ಲದೆ ಬಹುತೇಕ ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಕಾಮಗಾರಿಗಳು ಅಪೂರ್ಣಗೊಂಡಿದ್ದು, ಯುಜಿಡಿ ಕಾಮಗಾರಿ ಸಹ ಸಮಪರ್ಕವಾಗಿ ನಡೆದಿಲ್ಲ. ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಮೂಲ ಸೌಕರ್ಯಗಳನ್ನು ಸಮಪರ್ಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು. 
    ನಗರಸಭೆಯಿಂದ ಪೂರೈಕೆ ಮಾಡುತ್ತಿರುವ ಕುಡಿಯುವ ನೀರು ಕಲುಷಿತವಾಗಿದ್ದು, ಈ ಕುರಿತು ನಿವಾಸಿಗಳಿಂದ ಸಾಕಷ್ಟು ದೂರುಗಳು ಬರುತ್ತಿವೆ. ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಬಹುತೇಕ ಸದಸ್ಯರು ಆಗ್ರಹಿಸಿದರು. 
    ನಗರಸಭೆ ಸಾಮಾನ್ಯಸಭೆಗೆ  ಸರ್ಕಾರದ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸದಸ್ಯರು ಒತ್ತಾಯಿಸಿ ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ  ಬಿ.ಎಚ್ ರಸ್ತೆಗೆ ಹುತ್ತಾ ಕಾಲೋನಿಯಿಂದ ಸಿ.ಎನ್ ರಸ್ತೆವರೆಗೂ ಹಲವು ವರ್ಷಗಳ ಹಿಂದೆಯೇ ಡಾ. ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದ್ದರೂ ಸಹ ಎಲ್ಲೂ ಸಹ ಇದುವರೆಗೂ ನಾಮಫಲಕ ಅಳವಡಿಸಿಲ್ಲ. ಇದರಿಂದಾಗಿ ಸಾರ್ವಜನಿಕರು ಈ ರಸ್ತೆಯನ್ನು ರಾಜ್‌ಕುಮಾರ್ ರಸ್ತೆ ಎಂದು ಕರೆಯುತ್ತಿಲ್ಲ. ಇದು ಡಾ. ರಾಜ್‌ಕುಮಾರ್‌ರವರಿಗೆ ಮಾಡಿರುವ ಅಪಮಾನವಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ನಾಮಫಲಕಗಳನ್ನು ಅಳವಡಿಸುವಂಗೆ ಆಗ್ರಹಿಸಿದರು.    
    ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್ ಉಪಸ್ಥಿತರಿದ್ದರು. ನಗರಸಭೆ ಬಹುತೇಕ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 
    ಬೆಳಿಗ್ಗೆ ೧೧ ಗಂಟೆಗೆ ಆರಂಭಗೊಂಡ ಸಭೆಯಲ್ಲಿ ಮಧ್ಯಾಹ್ನ ೧.೩೦ರ ವರೆಗೆ ಕೇವಲ ಸಾಮಾನ್ಯ ಚರ್ಚೆಗಳು ನಡೆದವು. ಅಜೆಂಡಾದಲ್ಲಿರುವ ಪ್ರಸ್ತಾವನೆಗಳ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ. 

ಮಾಡೆಲ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಗೆ ನೂತನ ನಿರ್ದೇಶಕರು

    ಭದ್ರಾವತಿ : ಹಳೇನಗರದ ಮಾಡೆಲ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಗೆ ನೂತನವಾಗಿ ೧೨ ಮಂದಿ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 
    ಈ ಕುರಿತು ಡಿ.೨೪ರಂದು ಚುನಾವಣಾಧಿಕಾರಿ ಅವಿರೋಧ ಆಯ್ಕೆ ಘೋಷಿಸಿದ್ದಾರೆ. ಸಾಮಾನ್ಯ ಸ್ಥಾನದಿಂದ ಸಿದ್ಧಾರೂಢನಗರದ ನಿವಾಸಿ ವಿಶ್ವನಾಥ ಕೋಠಿ, ನ್ಯೂಕಾಲೋನಿ ನಿವಾಸಿ ಜಿ.ಟಿ ಬಸವರಾಜಪ್ಪ, ಹುತ್ತಾ ಕಾಲೋನಿ, ಸಹ್ಯಾದ್ರಿ ಬಡಾವಣೆ ನಿವಾಸಿ  ಕೆ.ಎನ್ ಭೈರಪ್ಪಗೌಡ, ಜನ್ನಾಪುರ ಮರಾಠ ಬೀದಿ ನಿವಾಸಿ ಟಿ.ಎನ್ ರಮೇಶ್, ಸಿದ್ಧಾರೂಢ ನಗರದ ನಿವಾಸಿ ಬಿ.ಪಿ ಶಂಕರ್, ಜನ್ನಾಪುರ ಕೆ.ಸಿ ರಸ್ತೆ ನಿವಾಸಿ ನರಸಿಂಹಸ್ವಾಮಿ ಮತ್ತು ಹೊಸಮನೆ ಮುಖ್ಯರಸ್ತೆ ವಿನಾಯಕ ಚಿತ್ರಮಂದಿರದ ಮುಂಭಾಗದ ನಿವಾಸಿ ಎಂ.ಎನ್ ಸತೀಶ್, ಪರಿಶಿಷ್ಟ ಜಾತಿ ಸ್ಥಾನದಿಂದ ಗೋಲ್ಡನ್ ಜ್ಯೂಬಿಲಿ ನಿವಾಸಿ ಎಂ. ನಾಗರಾಜ, ಪ್ರವರ್ಗ ಎ ಸ್ಥಾನದಿಂದ ಅಪ್ಪರ್ ಹುತ್ತಾ ನಿವಾಸಿ ಸಣ್ಣಯ್ಯ, ಪ್ರವರ್ಗ ಬಿ ಸ್ಥಾನದಿಂದ ತಾಲೂಕಿನ ಗೌರಾಪುರ ಗ್ರಾಮದ ನಿವಾಸಿ ಸಿ.ಆರ್ ಶಿವರಾಮು, ಮಹಿಳಾ ಮೀಸಲು ಸ್ಥಾನದಿಂದ ನ್ಯೂಕಾಲೋನಿ ನಿವಾಸಿ ಉಮಾ ರಮೇಶ್ ಹಾಗು ಜನ್ನಾಪುರ ನಿವಾಸಿ ಟಿ.ಎಸ್ ವಿಜಯಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರ ಉದ್ಘಾಟನೆ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಎಸ್.ಎಸ್ ಕಾಂಪ್ಲೆಕ್ಸ್(ನಮ್ಮ ಬಜಾರ್) ಮೊದಲನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರ ಗುರುವಾರ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಡಾ. ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. 
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಎಸ್.ಎಸ್ ಕಾಂಪ್ಲೆಕ್ಸ್(ನಮ್ಮ ಬಜಾರ್) ಮೊದಲನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರ ಗುರುವಾರ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಡಾ. ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. 
    ನಗರದಲ್ಲಿ ತುರ್ತು ಸಂದರ್ಭದಲ್ಲಿ ರಕ್ತ ಕೇಂದ್ರದ ಅವಶ್ಯಕತೆ ಇದ್ದು, ಪ್ರಸ್ತುತ ಶಿವಮೊಗ್ಗದಲ್ಲಿರುವ ವಿವಿಧ ರಕ್ತ ನಿಧಿ ಕೇಂದ್ರಗಳಿಂದ ತುರ್ತು ಸಂದರ್ಭದಲ್ಲಿ ರಕ್ತ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಇದೀಗ ಸಿರಿ ವೆಲ್‌ಫೇರ್ ಫೌಂಡೇಷನ್‌ರವರು ರಕ್ತ ಕೇಂದ್ರದ ಘಟಕ ಆರಂಭಿಸಿದ್ದು, ರಕ್ತ ಮತ್ತು ರಕ್ತದ ಅಂಶಗಳು ಸುಲಭವಾಗಿ ಲಭ್ಯವಾಗಲಿವೆ. 


    ಶಿವಮೊಗ್ಗ-ಚಿಕ್ಕಮಗಳೂರು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದಸ್ವಾಮೀಜಿ, ಮುಸ್ಲಿಂ ಧರ್ಮಗುರು ಶಾಹುಲ್ ಹಮೀದ್ ಮಡಾಡಿ, ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಬಷೀರ್ ಅಹಮದ್, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಎಸ್.ಎಸ್ ಕಾಂಪ್ಲೆಕ್ಸ್ ಮಾಲೀಕ ಶಶಿಕುಮಾರ್, ಮುಖಂಡರಾದ ಜೆಬಿಟಿ ಬಾಬು, ಕೇಸರಿಪಡೆ ಗಿರೀಶ್ ಹಾಗು ರಕ್ತ ಕೇಂದ್ರದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಉದ್ಘಾಟನೆ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 

Wednesday, December 25, 2024

ಪ್ರೊ.ಜೆ.ಎಲ್ ಪದ್ಮನಾಭರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ

ಇತ್ತೀಚೆಗೆ ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಶಿವಮೊಗ್ಗದ ಶಿಕ್ಷಣತಜ್ಞರು ಹಾಗೂ ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ಜೆ.ಎಲ್ ಪದ್ಮನಾಭರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ: ಇತ್ತೀಚೆಗೆ ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಶಿವಮೊಗ್ಗದ ಶಿಕ್ಷಣತಜ್ಞರು ಹಾಗೂ ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ಜೆ.ಎಲ್ ಪದ್ಮನಾಭರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಪ್ರೊ.ಪದ್ಮನಾಭ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಇವರು ಕುವೆಂಪು ವಿಶ್ವವಿದ್ಯಾನಿಲಯದ ಶಿಕ್ಷಣಮಂಡಳಿ, ಸೆನೆಟ್ ಹಾಗೂ ಹಣಕಾಸು ಸಮಿತಿ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರಲ್ಲದೇ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದು, ಶಿವಮೊಗ್ಗ ಜಿಲ್ಲಾ ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. 
    ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೪೬ ಜನರಿಗೆ ಸನ್ಮಾನಿಸಲಾಯಿತು. ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ, ಸಚಿವ ಚಲುವರಾಯಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜ.೧ರಂದು ಕೋರೆಗಾಂವ್ ವಿಜಯೋತ್ಸವ ಆಚರಣೆ : ದಲಿತ ಸಂಘಟನೆಗಳ ಸಭೆ

ನೂತನ ವರ್ಷ ಆರಂಭದ ಮೊದಲ ದಿನ ಕೋರೆಗಾಂವ್ ವಿಜಯೋತ್ಸವ ಆಚರಿಸುವ ಸಂಬಂಧ ಭದ್ರಾವತಿ ನಗರದ ವಿವಿಧ ದಲಿತ ಸಂಘಟನೆಗಳು ಸಭೆ ನಡೆಸಿ ಚರ್ಚಿಸಿದವು. 
    ಭದ್ರಾವತಿ: ನೂತನ ವರ್ಷ ಆರಂಭದ ಮೊದಲ ದಿನ ಕೋರೆಗಾಂವ್ ವಿಜಯೋತ್ಸವ ಆಚರಿಸುವ ಸಂಬಂಧ ನಗರದ ವಿವಿಧ ದಲಿತ ಸಂಘಟನೆಗಳು ಸಭೆ ನಡೆಸಿ ಚರ್ಚಿಸಿದವು. 
    ಹೊಲಯ ಮಾದಿಗ ಸಮನ್ವಯ ಸಮಿತಿ ರಚಿಸಿಕೊಂಡು ಜ.೧ರಂದು ವಿಜಯೋತ್ಸವ ನಡೆಸುವ ಮೂಲಕ ಯಶಸ್ವಿಗೊಳಿಸಲು ಹಾಗು ಮುಂದಿನ ದಿನಗಳಲ್ಲಿ ಒಳಮೀಸಲಾತಿಗಾಗಿ ಜಂಟಿ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು. 
    ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರುಗಳಾದ  ಶಿವಬಸಪ್ಪ, ಸತ್ಯ ಭದ್ರಾವತಿ, ಸುರೇಶ್, ಕುಬೇಂದ್ರಪ್ಪ, ಪುಟ್ಟರಾಜ, ಜಯರಾಮ್, ಧರ್ಮರಾಜ್, ಕೃಷ್ಣ, ಮಹೇಶ್, ಜಿಂಕ್‌ಲೈನ್ ಮಣಿ, ಮೂರ್ತಿ, ಸಿ. ಚನ್ನಪ್ಪ, ಜಗದೀಶ್, ಎಸ್. ಉಮಾ, ಗಂಗಾಧರ್, ಕೂಡ್ಲಿಗೆರೆ ರಮೇಶ್, ನಂಜಾಪುರ ರವಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ತಾಲೂಕಿನಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ

ಕ್ರೈಸ್ತ ದೇವಾಲಯಗಳಲ್ಲಿ ಸಿಹಿ ಹಂಚಿ ಪರಸ್ಪರ ಶುಭಾಶಯಗಳು  

ಜಗತ್ತಿಗೆ ತ್ಯಾಗ, ಪ್ರೀತಿಯ ಸಂದೇಶ ಸಾರಿದ ಯೇಸುಕ್ರಿಸ್ತರ ಜನ್ಮದಿನ ಬುಧವಾರ ಭದ್ರಾವತಿ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. 
    ಭದ್ರಾವತಿ : ಜಗತ್ತಿಗೆ ತ್ಯಾಗ, ಪ್ರೀತಿಯ ಸಂದೇಶ ಸಾರಿದ ಯೇಸುಕ್ರಿಸ್ತರ ಜನ್ಮದಿನ ಬುಧವಾರ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. 
    ತಾಲೂಕಿನ ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯ, ನ್ಯೂಟೌನ್ ಅಮಲೋಧ್ಭವಿ ಮಾತೆ ದೇವಾಲಯ, ಕಾರೆಹಳ್ಳಿಯ ಸಂತ ಅಂತೋಣಿಯವರ ದೇವಾಲಯ, ಕಾಗದ ನಗರದ ಸಂತ ಜೋಸೆಫರ ದೇವಾಲಯಗಳು ಸೇರಿದಂತೆ ತಾಲೂಕಿನ ಇನ್ನಿತರ ಕ್ರೈಸ್ತ ದೇವಾಲಯಗಳಲ್ಲಿ ನಿರ್ಮಾಣ ಮಾಡಲಾದ ಕ್ರಿಸ್‌ಮಸ್ ಟ್ರೀ, ವಿವಿಧ ರೀತಿಯ ನಕ್ಷತ್ರಗಳು, ಯೇಸುವಿನ ಜನನ ಸಂದರ್ಭದ ಕ್ಷಣಗಳನ್ನು ನೆನಪಿಸುವ ಗೋದಲಿಗಳು ಗಮನ ಸೆಳೆದವು. ಮಂಗಳವಾರ ಮಧ್ಯರಾತ್ರಿ ಹಾಗೂ ಬುಧವಾರ ಮುಂಜಾನೆ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತ ಧರ್ಮೀಯರು ಪಾಲ್ಗೊಂಡಿದ್ದರು. 
    ಚರ್ಚ್‌ಗಳಲ್ಲಿ ಕೇಕ್, ಚಾಕೋಲೇಟ್, ಸಿಹಿತಿಂಡಿಗಳನ್ನು ಹಂಚಲಾಯಿತು. ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ, ಹಬ್ಬಕ್ಕಾಗಿ ವಿಶೇಷ ಭೋಜನ ವ್ಯವಸ್ಥೆ ಕೈಗೊಂಡಿರುವುದು ಕಂಡು ಬಂದಿತು. ಕ್ರಿಸ್ತನ ಜನನದ ಶುಭ ಗಳಿಗೆಯ ಸ್ಮರಣೆಗೆ ಸಂಕೇತವಾಗಿ ಮೇಣದ ಬತ್ತಿಗಳನ್ನು ಬೆಳಗಿಸಲಾಯಿತು. ಪುಟ್ಟ ಮಕ್ಕಳು ಸಾಂತಾ ಕ್ಲಾಸ್ ವೇಷ ಧರಿಸಿ ಗಮನ ಸೆಳೆದರು. 
    ಶಾಂತಿ, ದೀನತೆಗಾಗಿ ಪ್ರಾರ್ಥನೆ ಸಲ್ಲಿದ ಭಕ್ತರು :  
    ಕ್ರಿಸ್‌ಮಸ್ ಬಾಹ್ಯ ಆಡಂಬರವಾಗಿರದೆ ಪರರ ಕಷ್ಟಕ್ಕೆ ಸಹಾಯ, ಸೇವೆ ಸಲ್ಲಿಸುವ ಹಬ್ಬವಾಗಿದೆ ಎಂದು ಕಾರೇಹಳ್ಳಿ ಸಂತ ಅಂತೋಣಿ ದೇವಾಲಯದ ಧರ್ಮಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಅಲ್ಮೇಡ ತಿಳಿಸಿದರು. 
    ಪ್ರತಿಯೊಬ್ಬರ ಮನಸ್ಸು, ಹೃದಯದಲ್ಲಿ ಯೇಸು ಜನಿಸಬೇಕು. ಇರುವವರು ಇಲ್ಲದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು. 
    ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳು, ದೇಶದ ಭ್ರಷ್ಟಾಚಾರದ ರಾಜಕಾರಣ ದೂರವಾಗಿ ಎಲ್ಲರ ನಡುವೆ ಐಕ್ಯತೆ, ಸಮಾನತೆ ಮೂಡಲಿ, ವಿಶ್ವದಲ್ಲಿ ಶಾಂತಿ ನೆಲೆಸಲಿ. ಯುವಜನರು ಆಧುನಿಕ ಜೀವನದ ಭರಾಟೆಯಲ್ಲಿ ದಾರಿ ತಪ್ಪದೆ ಉತ್ತಮ ಜೀವನ ನಡೆಸಲು ಬೇಕಾದ ಸ್ಥೈರ್ಯ, ಮನೋಬಲವನ್ನು ದೇವರು ನೀಡಲಿ ಎಂದು ಪ್ರಾರ್ಥಿಸಲಾಯಿತು.

ಡಿ.೨೬ರಂದು ನಗರಸಭೆ ಸಾಮಾನ್ಯ ಸಭೆ



    ಭದ್ರಾವತಿ: ಪ್ರಸಕ್ತ ಸಾಲಿನ ಕೊನೆಯ ನಗರಸಭೆ ಸಾಮಾನ್ಯ ಸಭೆ ಡಿ.೨೬ರ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಅಧ್ಯಕ್ಷ ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. 
    ಸಭೆಯಲ್ಲಿ ಸದಸ್ಯರು ತಪ್ಪದೇ ಭಾಗವಹಿಸಿ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಕೋರಿದ್ದಾರೆ. 

ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ಆಚರಣೆ

ಭಾರತರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೦ನೇ ವರ್ಷದ ಜನ್ಮಶತಮಾನೋತ್ಸವ, ಸುಶಾಸನ ದಿನ ಪ್ರಯುಕ್ತ ಭದ್ರಾವತಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಬುಧವಾರ ಶತದೀಪೋತ್ಸವ ಆಚರಿಸಲಾಯಿತು. 
    ಭದ್ರಾವತಿ :  ಭಾರತರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೦ನೇ ವರ್ಷದ ಜನ್ಮಶತಮಾನೋತ್ಸವ, ಸುಶಾಸನ ದಿನ ಪ್ರಯುಕ್ತ ತಾಲೂಕು ಬಿಜೆಪಿ ಮಂಡಲ ವತಿಯಿಂದ ಬುಧವಾರ ಶತದೀಪೋತ್ಸವ ಆಚರಿಸಲಾಯಿತು. 
    ನಗರದ ಮಂಡಲದ ಕಾರ್ಯಾಲಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವ ವಹಿಸಿದ್ದರು. ಕಾರ್ಯಾಲಯದ ಆವರಣ  ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ ಕಾರ್ಯಕರ್ತರು ಶತ ದೀಪಗಳನ್ನು ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.
    ಪಕ್ಷದ ಮುಖಂಡರಾದ ಕೆ.ಎನ್ ಶ್ರೀಹರ್ಷ ಮಾತನಾಡಿ, ಕವಿ ಹೃದಯದ ಅಟಲ್ ಜೀ ಅವರಿಗೂ ಭದ್ರಾವತಿ ನಗರಕ್ಕೂ ಅವಿನಾಭಾವ ಸಂಬಂಧವಿದೆ. ೧೯೮೪ರ ಲೋಕಸಭಾ ಚುನಾವಣೆಯಲ್ಲಿ ಗ್ವಾಲಿಯರ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಾಜಪೇಯಿ ಸೋಲು ಕಂಡಿದ್ದರು, ಇದರಿಂದ ನೊಂದ ಸಿದ್ದಾಪುರ ಲಕ್ಷ್ಮೀನಾರಾಯಣ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದ ವಾಜಪೇಯಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಇದಾದ ನಂತರ ಈ ಜಿಲ್ಲೆಗೆ ಬಂದಾಗಲೆಲ್ಲ ಲಕ್ಷ್ಮೀನಾರಾಯಣನನ್ನು ನೆನೆಯುತ್ತಿದ್ದರು. ಅಟಲ್ ಜೀ ಕಡೆಯದಾಗಿ ೧೯೯೩ರಲ್ಲಿ ಕನಕಮಂಟಪಕ್ಕೆ ಬಂದು ಭಾಷಣ ಮಾಡುವ ವೇಳೆ ಮಳೆ ಹೆಚ್ಚಾಗಿದ್ದರಿಂದ ಭಾಷಣ ಮೊಟಕು ಮಾಡಿ ಪುನಃ ಬರುತ್ತೇನೆ ಎಂದು ಹೇಳಿ ಹೋದವರು ಬರಲೇ ಇಲ್ಲ ಎಂದು ಅಟಲ್ ಜೀ ಅವರನ್ನು ನೆನಪು ಮಾಡಿದರು. 
    ರಾಷ್ಟ್ರದ ಅಭಿವೃದ್ಧಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಆಡಳಿತದಲ್ಲಿ ದೇಶದ ಪ್ರಗತಿಗೆ ಹೊಸ ದಾರಿ ಕೊಂಡುಕೊಳ್ಳುವ ಜೊತೆಗೆ ವಿದೇಶಾಂಗ ನೀತಿಯಲ್ಲಿ ಹೊಸ ದಿಕ್ಕು ಕಾಣಲಾಯಿತು. ರಾಷ್ಟ್ರದ ಸಮಸ್ಯೆಗಳಿಗೆ ಸೂಕ್ತ ದೂರದೃಷ್ಟಿಯ ನಿವಾರಣೆ ಕಂಡವರು. ಅವರ ದರ್ಶನ ಭಾಗ್ಯ ಪಡೆದ ನಾವೇ ಪುಣ್ಯವಂತರು ಎಂದರು. 
    ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್, ಸುಶಾಸನ ದಿನ ಕಾರ್ಯಕ್ರಮದ ಸಂಚಾಲಕ ಡಿ.ಆರ್ ಸಾಗರ್,  ಸಹ ಸಂಚಾಲಕ ಕಲ್ಲೇಶ್, ಎಂ. ಮಂಜುನಾಥ್, ಪ್ರಮುಖರಾದ ಬಿ.ಜಿ ರಾಮಲಿಂಗಯ್ಯ, ವಿವಿಧ ಮೋರ್ಚಾಗಳ ಅಧ್ಯಕ್ಷರಾದ ರಾಜಶೇಖರ್, ಧನುಷ್ ಬೋಸ್ಲೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸನ್ನ ಕುಮಾರ್ ಬಾರಂದೂರು, ಸಚ್ಚಿದಾನಂದ, ಉಮಾವತಿ, ಲೋಲಾಕ್ಷಿ, ಜಯಲಕ್ಷ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, December 24, 2024

ಇಂದಿರಾ ಕ್ಯಾಂಟೀನ್ ಆಹಾರ ಗುಣಮಟ್ಟ ಪರಿಶೀಲಿಸಿ, ಹೊಸ ಡಿಜಿಟಲ್ ಭಾವಚಿತ್ರ ಅಳವಡಿಸಿ

ಭದ್ರಾವತಿ ನಗರದಲ್ಲಿರುವ ಎರಡು ಇಂದಿರಾ ಕ್ಯಾಂಟೀನ್‌ಗಳ ಆಹಾರ ಗುಣಮಟ್ಟ ಪರಿಶೀಲನೆ ನಡೆಸುವ ಜೊತೆಗೆ ಹೊಸದಾಗಿ ಇಂದಿರಾ ಗಾಂಧಿಯವರ ಡಿಜಿಟಲ್ ಭಾವಚಿತ್ರ ಅಳವಡಿಸುವಂತೆ ಒತ್ತಾಯಿಸಿ ನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಮಂಗಳವಾರ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್‌ಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ನಗರದಲ್ಲಿರುವ ಎರಡು ಇಂದಿರಾ ಕ್ಯಾಂಟೀನ್‌ಗಳ ಆಹಾರ ಗುಣಮಟ್ಟ ಪರಿಶೀಲನೆ ನಡೆಸುವ ಜೊತೆಗೆ ಹೊಸದಾಗಿ ಇಂದಿರಾ ಗಾಂಧಿಯವರ ಡಿಜಿಟಲ್ ಭಾವಚಿತ್ರ ಅಳವಡಿಸುವಂತೆ ಒತ್ತಾಯಿಸಿ ನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಮಂಗಳವಾರ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್‌ಗೆ ಮನವಿ ಸಲ್ಲಿಸಲಾಯಿತು. 
    ನಗರದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿರುವ ಹಾಗು ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಅಳವಡಿಸಲಾಗಿರುವ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಭಾವಚಿತ್ರ ತುಂಬಾ ಹಳೇಯದಾಗಿದ್ದು, ಅಲ್ಲದೆ ಹಾಳಾಗಿದೆ.  ಈ ಹಿನ್ನಲೆಯಲ್ಲಿ ಹೊಸದಾಗಿ ಡಿಜಿಟಲ್ ಭಾವಚಿತ್ರ ಅಳವಡಿಸಬೇಕು. ಕ್ಯಾಂಟೀನ್‌ನಲ್ಲಿ ಆಹಾರ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಲಾಗಿದೆ. 
    ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಿ. ಗಂಗಾಧರ್, ಜಗದೀಶ್ ಬೋಸ್ಲೆ, ಹರೀಶ್ ಕುಮಾರ್, ಮಹಮದ್ ರಫಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ವರ್ಣಭೇದ ನೀತಿ ಹುಟ್ಟಿಹಾಕಿ ರಾಜಕೀಯ ಲಾಭ

ಬಿಜೆಪಿ, ಸಂಘ ಪರಿವಾರಗಳ ಏಕೈಕ ಮಾರ್ಗ : ಶಿವಬಸಪ್ಪ ಆರೋಪ 


ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಗೃಹ ಸಚಿವ ಅಮಿತ್ ಶಾರವರು ಅಂಬೇಡ್ಕರ್‌ರವರ ಬಗ್ಗೆ ಹಗುರವಾಗಿ ಮಾತನಾಡಿ ಅಪಮಾನ ಮಾಡಿರುವುದನ್ನು ಖಂಡಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.    
    ಭದ್ರಾವತಿ : ಈ ದೇಶದಲ್ಲಿ ಮನಸ್ಮೃತಿಯನ್ನು ಮತ್ತೆ ಜಾರಿ ಮಾಡಿ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ವರ್ಣಭೇದ ನೀತಿಯನ್ನು ಹುಟ್ಟುಹಾಕುವ ಮೂಲಕ ರಾಜಕೀಯ ಲಾಭ ಪಡೆಯುವುದು ಬಿಜೆಪಿ ಮತ್ತು ಸಂಘ ಪರಿವಾರಗಳಿಗೆ ಇರುವ ಏಕೈಕ ಮಾರ್ಗ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಶಿವಬಸಪ್ಪ ಆರೋಪಿಸಿದರು.
    ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಗೃಹ ಸಚಿವ ಅಮಿತ್ ಶಾರವರು ಅಂಬೇಡ್ಕರ್‌ರವರ ಬಗ್ಗೆ ಹಗುರವಾಗಿ  ಮಾತನಾಡಿ ಅಪಮಾನ ಮಾಡಿರುವುದನ್ನು ಖಂಡಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. 
    ದೇವರು, ಧರ್ಮದ ಹೆಸರಿನಲ್ಲಿ ಸಾವಿರಾರು ವರ್ಷಗಳಿಂದ ಶೋಷಣೆ ಮಾಡಿದ ಮನುವಾದಿಗಳಿಗೆ ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಅಪಮಾನ ಮಾಡುತ್ತಿರುವುದು ಇದೇ ಮೊದಲೆನಲ್ಲ. ಗೃಹ ಸಚಿವ ಅಮಿತ್ ಶಾರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. 
       ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಮಾತನಾಡಿ, ಸಂವಿಧಾನಕ್ಕೆ, ಡಾ. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಗೃಹ ಮಂತ್ರಿ ಅಮಿತ್ ಶಾರವರು ತಮ್ಮ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂಬೇಡ್ಕರ್‌ರವರ ಬಗ್ಗೆ ಗೌರವ ಹೊಂದಿದ್ದರೆ ತಕ್ಷಣ ಗೃಹ ಮಂತ್ರಿ ಅಮಿತ್ ಶಾರವರ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿ ಇಲ್ಲವಾದರೆ ಅಮಿತ್ ಶಾ ರವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕುವವರೆಗೂ ನಡೆಯುವ ಹೋರಾಟಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. 
    ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಎಂ. ಏಳು ಕೋಟಿ, ಜಿಲ್ಲಾ ಸಂಘಟನಾ ಸಂಚಾಲಕ ಆರ್. ತಮ್ಮಯ್ಯ, ಗ್ರಾಮಾಂತರ ವಿಭಾಗದ ಜಿಲ್ಲಾ ಸಂಘಟನಾ ಸಂಚಾಲಕ ಬಿ. ಕೃಷ್ಣಪ್ಪ, ತಾಲೂಕು ಸಂಚಾಲಕ ಕಾಚಗೊಂಡನಹಳ್ಳಿ ನಾಗರಾಜ್, ಶಿವಮೊಗ್ಗ ತಾಲೂಕು ಸಂಚಾಲಕ ರಮೇಶ್ ಚಿಕ್ಮರಡಿ, ಶಿವಮೊಗ್ಗ ನಗರ ಸಂಚಾಲಕ ಹರಿಗೆ ರವಿ, ಕಡದಕಟ್ಟೆ ರಾಜಶೇಖರ್,  ಬೊಮ್ಮೇನಹಳ್ಳಿ ಶ್ರೀನಿವಾಸ್, ಮುತ್ತು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಇದಕ್ಕೂ ಮೊದಲು ರಂಗಪ್ಪ ವೃತ್ತದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 

ಸಮಯ ವ್ಯರ್ಥಮಾಡದೆ ದೇಶದ ಬೆಳವಣಿಗೆಗೆ ಪೂರಕವಾದ ಚರ್ಚೆ ನಡೆಸಿ ಗೌರವಯುತವಾಗಿ ನಡೆದುಕೊಳ್ಳಲಿ

ಅಧಿವೇಶನದಲ್ಲಿ ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ಸದಸ್ಯರಿಗೆ ಎಚ್ಚರಿಕೆ ನೀಡಲಿ : ಮನವಿ 

ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ದೇಶದ ಲೋಕಸಭೆ, ರಾಜ್ಯಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್ ಅಧಿವೇಶಗಳ ಸಂದರ್ಭದಲ್ಲಿ ಸಂಸದರು, ಶಾಸಕರು ಗೌರವಯುತವಾಗಿ ನಡೆದುಕೊಳ್ಳುವಂತೆ ಸೂಚಿಸುವಂತೆ ಭದ್ರಾವತಿ ಜನ್ನಾಪುರ ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ತಹಸೀಲ್ದಾರ್ ಮೂಲಕ ಮನವಿ ಮಾಡಿದ್ದಾರೆ. 
    ಭದ್ರಾವತಿ: ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ದೇಶದ ಲೋಕಸಭೆ, ರಾಜ್ಯಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್ ಅಧಿವೇಶಗಳ ಸಂದರ್ಭದಲ್ಲಿ ಸಂಸದರು, ಶಾಸಕರು ಗೌರವಯುತವಾಗಿ ನಡೆದುಕೊಳ್ಳುವಂತೆ ಸೂಚಿಸುವಂತೆ ಜನ್ನಾಪುರ ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮನವಿ ಮಾಡಿದ್ದಾರೆ. 
    ಈ ಸಂಬಂಧ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಇತ್ತೀಚಿನ ದಿನಮಾನಗಳಲ್ಲಿ ಲೋಕಸಭೆ, ರಾಜ್ಯಸಭೆ ಎಲ್ಲಾ ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ದೇಶದ ರೈತರ, ಎಲ್ಲಾ ವರ್ಗದ ನಾಗರಿಕರ ಹಾಗೂ ಉತ್ತಮ ರೀತಿಯ ಚರ್ಚೆಗಳು ಆಗದೆ ಕೇವಲ ವೈಯಕ್ತಿಕ ಹಿತಾಸಕ್ತಿಗಳಿಂದ ರಾಜಕಾರಣಿಗಳು ಅಧಿವೇಶನ ನಡೆಯುವ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಜಗಳ ಮಾಡಿಕೊಳ್ಳುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹಲ್ಲೆ ಮಾಡುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಶಾಸಕರ, ಸಂಸದರ ಇಂತಹ ನಡವಳಿಕೆಯಿಂದ ದೇಶದ ನಾಗರಿಕರು ತಲೆತಗ್ಗಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಲಾಗಿದೆ. 
    ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತ ದೇಶದಲ್ಲಿ ಸಂವಿಧಾನದ ಉದ್ದೇಶಗಳನ್ನು ಇಂದಿನ ರಾಜಕಾರಣಿಗಳು ಅನುಸರಿಸದೇ ಇರುವುದು ವಿಪರ್ಯಾಸದ ಸಂಗತಿ. ಬುದ್ಧ, ಬಸವ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರು ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳು ಜನ್ಮ ಪಡೆದ ದೇಶ ನಮ್ಮ ಭವ್ಯ ಭಾರತ. ಆದರೆ ಇಂದಿನ ರಾಜಕಾರಣಿಗಳಿಂದ ದೇಶ ಮುಂದುವರೆಯುವುದು ಕಷ್ಟ ಸಾಧ್ಯ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಅಧಿವೇಶನಗಳು ಸಾರ್ವಜನಿಕರ, ರೈತರ, ದೀನದಲಿತರ, ಎಲ್ಲ ಧರ್ಮದವರ ಬದುಕಿಗೆ ಪೂರಕವಾಗಿರುವಂತಹ ಚರ್ಚೆ ಆಗಬೇಕೆ ಹೊರತು ಭ್ರಷ್ಟ ರಾಜಕಾರಣಿಗಳ ಕಚ್ಚಾಟದಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿವೇಶನ ನಡೆಯುವ ಸಂದರ್ಭಗಳಲ್ಲಿ ರಾಜಕಾರಣಿಗಳು ಕ್ಷುಲ್ಲಕ ಕಾರಣಕ್ಕೆ ಅಧಿವೇಶನದ ಸಮಯ ವ್ಯರ್ಥ ಮಾಡಿ ಸದನಗಳು ಸರಿಯಾಗಿ ನಡೆಯದಂತೆ ಮಾಡಿದರೆ ಅಂತಹ ರಾಜಕಾರಣಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅಧಿವೇಶನ ನಡೆಯಲು ತಗಲುವ ಖರ್ಚು ವೆಚ್ಚಗಳನ್ನು ಅವರೇ ಭರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. 
    ಅಲ್ಲದೆ ಅಧಿವೇಶನದ ಸಮಯ ವ್ಯರ್ಥವಾಗಲು ಕಾರಣರಾಗುವ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಕಾನೂನು ಜಾರಿತರುವ ಮೂಲಕ ಸಂವಿಧಾನದ ಆಶಯ ಕಾಪಾಡಬೇಕೆಂದು ಆಗ್ರಹಿಸಿ ಆಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ. 

Monday, December 23, 2024

ಮಾರಾಕಾಸ್ತ್ರ ಹಿಡಿದು ಎರಡು ಗ್ಯಾಂಗ್‌ಗಳಿಂದ ಕೊಲೆಗೆ ಯತ್ನ

ಎರಡು ಗ್ಯಾಂಗ್‌ಗಳ ವಿರುದ್ಧ ಪ್ರಕರಣ ದಾಖಲು 

    ಭದ್ರಾವತಿ: ಹಳೇನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುನಃ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಸೋಮವಾರ ಎರಡು ಗ್ಯಾಂಗ್‌ಗಳ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ. 
    ನಗರದ ಬಿ.ಎಚ್ ರಸ್ತೆಯಲ್ಲಿರುವ ಸ್ಮಾರ್ಟ್ ಫಿಟ್ನೆಸ್ ವ್ಯಾಯಾಮ ಶಾಲೆಯಲ್ಲಿ ಬೆಳಗಿನ ಜಾವ ವ್ಯಾಯಾಮ ಮುಗಿಸಿ ಹೊರ ಬರುತ್ತಿದ್ದ ಜೋಯೆಲ್ ಥಾಮ್ಸನ್ ಎಂಬ ಯುವಕನ ಮೇಲೆ ಸುಮಾರು ೬ ಜನರ ಗ್ಯಾಂಗ್ ಮಚ್ಚು, ಲಾಂಗ್ ಸೇರಿದಂತೆ ಇನ್ನಿತರ ಮಾರಾಕಾಸ್ತ್ರಗಳನ್ನು ಹಿಡಿದು ಕೊಲೆ ಮಾಡಲು ಯತ್ನಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಥಾಮ್ಸನ್ ತಪ್ಪಿಸಿಕೊಂಡು ವ್ಯಾಯಾಮ ಶಾಲೆ ಒಳಗೆ ಓಡಿ ಹೋಗಿದ್ದಾನೆ. ಪೊಲೀಸರಿಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 
    ವಿಶ್ವ ಅಲಿಯಾಸ್ ಮುದ್ದೆ, ಕೋಟೇಶ ಅಲಿಯಾಸ್ ಕೋಟಿ, ನವೀನ ಅಲಿಯಾಸ್ ಡಿಂಗ ಸೇರಿದಂತೆ ೬ ಜನರ ಗ್ಯಾಂಗ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಜೋಯೆಲ್ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. 
    ಇದಕ್ಕೂ ಮೊದಲು ಈ ಗ್ಯಾಂಗ್ ವಿರುದ್ಧ ಜಟ್‌ಪಟ್ ನಗರದಲ್ಲಿ ೭ ಜನರ ಗ್ಯಾಂಗ್ ಓರ್ವನ ಕೊಲೆಗೆ ಯತ್ನಿಸಿದ್ದು, ಇಲ್ಲೂ ಸಹ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಸಹ ಹಳೇನಗರ ಪೊಲೀಸ್ ಠಾಣೆಯಲ್ಲಿ ಮಧುಕುಮಾರ್ ಎಂಬಾತ ದೂರು ನೀಡಿದ್ದಾನೆ. 
    ಎರಡು ಗ್ಯಾಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ನಡುವೆ ನಗರದಲ್ಲಿ ಪುನಃ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. 

ಎಚ್.ಎಸ್ ಶ್ರೀನಾಗ್-ಸುಜಾತ ವಿವಾಹ ಮಹೋತ್ಸವ

ಭದ್ರಾವತಿ ನಗರದ ನ್ಯೂಟೌನ್ ಮೆಸ್ ಸರ್ಕಲ್, ದತ್ತಮಂದಿರದಲ್ಲಿ ಎಚ್.ಎಸ್ ಶ್ರೀನಾಗ್-ಸುಜಾತ ವಿವಾಹ ಮಹೋತ್ಸವದ ಆರತಕ್ಷತೆ ಕಾರ್ಯಕ್ರಮ ಸೋಮವಾರ ಜರುಗಿತು
    ಭದ್ರಾವತಿ : ನಗರದ ಹಿರಿಯ ಪತ್ರಕರ್ತ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ ಶಿವಶಂಕರ್-ಎಂ. ಚಂದ್ರಕಲಾ ದಂಪತಿ ಪುತ್ರ ಎಚ್.ಎಸ್ ಶ್ರೀನಾಗ್ ರವರ ವಿವಾಹ ಮಹೋತ್ಸವ ಡಿ.೨೨ರ ಭಾನುವಾರ ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲೂಕಿನ ನಡುವಿನಹಳ್ಳಿ ಗ್ರಾಮದ ನಾಗರಾಜ ಮಡಿವಾಳರ-ರೇಣುಕಾ ದಂಪತಿ ಪುತ್ರಿ  ಸುಜಾತ ಅವರೊಂದಿಗೆ ಹೊಳಲು ಗ್ರಾಮದಲ್ಲಿ ನೆರವೇರಿತು. 


    ಸೋಮವಾರ ನಗರದ ನ್ಯೂಟೌನ್ ಮೆಸ್ ಸರ್ಕಲ್, ದತ್ತಮಂದಿರದಲ್ಲಿ ಆರತಕ್ಷತೆ ಕಾರ್ಯಕ್ರಮ ಜರುಗಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮಾಚಿದೇವ ಮಡಿವಾಳರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು, ಕುಟುಂಬ ವರ್ಗದವರು, ಬಂಧ-ಮಿತ್ರರು, ಜನಪ್ರತಿನಿಧಿಗಳು ಪಾಲ್ಗೊಂಡು ನೂತನ ದಂಪತಿಗೆ ಶುಭ ಕೋರಿದರು. 

ರೈತರು ಬೆಳೆಗಳನ್ನು ಬೆಳೆಯುವುದರಿಂದಲೇ ಮನುಜ ಕುಲ ಶಾಂತಿಯುತವಾಗಿ ಜೀವನ ನಡೆಸಲು ಸಾಧ್ಯ : ಬಿ. ಸಿದ್ದಬಸಪ್ಪ

ಭದ್ರಾವತಿ ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಎ. ಪ್ರಕಾಶ್, ಅರಳಿಹಳ್ಳಿ ಹಾಗೂ ಜಿ. ಗೋಪಾಲ್ ತಳ್ಳಿಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು, ಬಹಳಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ. ರೈತರು ಬೆಳೆಗಳನ್ನು ಬೆಳೆಯುವುದರಿಂದಲೇ ಮನುಜ ಕುಲ ಶಾಂತಿಯುತವಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಅಧ್ಯಕ್ಷ ಬಿ. ಸಿದ್ದಬಸಪ್ಪ ಹೇಳಿದರು. 
    ಅವರು ಸೋಮವಾರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನ್ನ ನೀಡುವ ರೈತರನ್ನು ಪ್ರತಿಯೊಬ್ಬರು ಗೌರವಿಸುವುದು ಕರ್ತವ್ಯವಾಗಿದೆ ಎಂದರು. 
    ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಎ. ಪ್ರಕಾಶ್, ಅರಳಿಹಳ್ಳಿ ಹಾಗೂ ಜಿ. ಗೋಪಾಲ್ ತಳ್ಳಿಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ರೈತ ಪ್ರಕಾಶ್‌ರವರು, ಕೃಷಿಯ ಐತಿಹಾಸಿಕ ಹಿನ್ನೆಲೆ ಕೃಷಿ ಚಟುವಟಿಕೆಯ ಅದ್ಭುತಾವಕಾಶಗಳನ್ನು ಹೊಂದಿದೆ. ಕೃಷಿ ಕೇವಲ ಮನುಜ ಕುಲಕ್ಕೆ ಮಾತ್ರವಲ್ಲ ಸಕಲ ಜೀವರಾಶಿಗೆ ಅಗತ್ಯವಿದೆ ಎಂದರು. 
    ಗೋಪಾಲ್‌ರವರು ಕೃಷಿ ಚಟುವಟಿಕೆಯ ನೈಜ ಚಿತ್ರಣ ತೆರೆದಿಡುವ ಮೂಲಕ ರೈತರು ಎದುರಿಸುವ ಸಂಕಷ್ಟಗಳು, ಸವಾಲುಗಳನ್ನು ವಿವರಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆ ಬಿ. ಎಲ್.ರಂಗಸ್ವಾಮಿ ವಹಿಸಿದ್ದರು. 
    ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್.ಕೆ ಮೋಹನ್, ನಿರ್ದೇಶಕರುಗಳಾದ ಚೆನ್ನಯ್ಯ ಮತ್ತು ಪುಟ್ಟಲಿಂಗ ಮೂರ್ತಿ, ರಮೇಶ್, ಜನಾರ್ಧನ್, ಶ್ರೀನಿವಾಸ ಬಾಗೋಡಿ, ರಮೇಶ್, ಆಡಳಿತ ಅಧಿಕಾರಿ ಡಾ.ಎಸ್.ಪಿ ರಾಕೇಶ್.ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ಹಾಗೂ ಮುಖ್ಯೋಪಾಧ್ಯಾಯರುಗಳಾದ  ಹೇಮಾವತಿ, ರೇಣುಕಪ್ಪ, ಚೈತ್ರ, ಕಿರಣ್ ಕುಮಾರ್ ಹಾಗೂ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 
    ನೇತ್ರಾವತಿ ಸ್ವಾಗತಿಸಿ, ರೇವತಿ ಅತಿಥಿಗಳನ್ನು ಪರಿಚಯಿಸಿದರು. ರೇಣುಕಪ್ಪ ನಿರೂಪಿಸಿದರು, ಅಲಿಮಿಯ ವಂದಿಸಿದರು. 

ತೋಟಗಾರಿಕೆ ಬೆಳೆಯಲ್ಲಿ ಪ್ರಗತಿ : ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ

ಪತ್ರಕರ್ತ ಸುರೇಶ್ ಸಾಧನೆ

ಭದ್ರಾವತಿ: ಮೂಲತಃ ಪತ್ರಕರ್ತರಾಗಿರುವ ಸುರೇಶ್‌ರವರು ಕಳೆದ ೧೫ ವರ್ಷಗಳಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆದು ಪ್ರಗತಿ ಸಾಧಿಸಿದ್ದು, ರೂರಲ್ ಎಜ್ಯುಕೇಷನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ ನೀಡಿ ಅಭಿನಂದಿಸಿದೆ. 
    ಭದ್ರಾವತಿ: ಮೂಲತಃ ಪತ್ರಕರ್ತರಾಗಿರುವ ಸುರೇಶ್‌ರವರು ಕಳೆದ ೧೫ ವರ್ಷಗಳಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆದು ಪ್ರಗತಿ ಸಾಧಿಸಿದ್ದು, ರೂರಲ್ ಎಜ್ಯುಕೇಷನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ ನೀಡಿ ಅಭಿನಂದಿಸಿದೆ. 
      ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಸುಮಾರು ೨ ಎಕರೆ ಜಮೀನು ಹೊಂದಿರುವ ಸುರೇಶ್‌ರವರು ತೋಟಗಾರಿಕೆ ಬೆಳೆಗಳಾದ ತರಕಾರಿ, ಹಣ್ಣು, ಸೊಪ್ಪು ಮತ್ತು ಅಣಬೆ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದು, ಉತ್ತಮ ಇಳಿವರಿ ಪಡೆಯುವ ಮೂಲಕ ಪ್ರಗತಿ ಸಾಧಿಸಿದ್ದಾರೆ. 
    ಅಲ್ಲದೆ ಹಸು, ಕುರಿ ಮತ್ತು ಕೋಳಿ ಸಾಕಾಣಿಕೆ ಮೂಲಕ ಹೈನುಗಾರಿಕೆಯಲ್ಲೂ ಪ್ರಗತಿ ಸಾಧಿಸಿದ್ದು, ತೋಟಗಾರಿಕೆ ಬೆಳೆ ಹಾಗು ಹೈನುಗಾರಿಕೆ ಇವರ ಬದುಕಿಗೆ ಆಧಾರ ಸ್ತಂಭಗಳಾಗಿವೆ. 
    ಸುರೇಶ್‌ರವರ ಸಾಧನೆಯನ್ನು ಗುರುತಿಸಿ ರೂರಲ್ ಎಜ್ಯುಕೇಷನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿಯನ್ನು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ನೀಡಿ ಅಭಿನಂದಿಸಿದೆ.  

Sunday, December 22, 2024

ಕಸಾಪ ಮನವಿಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಪೂರಕ ಸ್ಪಂದನೆ

ವಿಐಎಸ್‌ಎಲ್ ಕಾರ್ಖಾನೆ ೧೫ ಸಾವಿರ ಕೋ. ರು. ಬಂಡವಾಳ ಹೂಡುವ ಭರವಸೆ 

ಮಂಡದಲ್ಲಿ ಆಯೋಜಿಸಲಾಗಿದ್ದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡಿದ್ದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರು ಮಾತನಾಡಿ, ಭದ್ರಾವತಿ ಸರ್ ಎಂ. ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸುಮಾರು ರು.೧೫,೦೦೦ ಕೋಟಿ ವೆಚ್ಚದಲ್ಲಿ ಪುನಚ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದರು.
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಅಭಿವೃದ್ಧಿ ಪಡಿಸುವ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್‌ರವರು ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿಯವರಿಗೆ ಸಲ್ಲಿಸಿದ್ದ ಮನವಿಗೆ ಕೇಂದ್ರ ಉಕ್ಕು ಹಾಗು ಬೃಹತ್ ಕೈಗಾರಿಕೆ ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಪೂರಕವಾಗಿ ಸ್ಪಂದಿಸಿದ್ದು, ಕಾರ್ಖಾನೆಗೆ ಅಗತ್ಯವಿರುವ ಸುಮಾರು ೧೫,೦೦೦ ಕೋಟಿ ರು. ಬಂಡವಾಳ ತೊಡಗಿಸುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. 
    ಮಂಡದಲ್ಲಿ ಆಯೋಜಿಸಲಾಗಿದ್ದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡಿದ್ದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರು ಮಾತನಾಡಿ, ಸರ್ ಎಂ. ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸುಮಾರು ರು.೧೫,೦೦೦ ಕೋಟಿ ವೆಚ್ಚದಲ್ಲಿ ಪುನಚ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದರು.
    ರಾಜ್ಯದಲ್ಲಿ ನಿರುದ್ಯೋಗ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಕೈಗಾರಿಕಾಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಆ ನಿಟ್ಟಿನಲ್ಲಿಯೇ ವಿಐಎಸ್‌ಎಲ್ ಕಾರ್ಖಾನೆಗೆ ಮರುಜೀವ ಕೊಡಲು ತೀರ್ಮಾನ ಮಾಡಲಾಗಿದೆ ಎಂದರು.
    ಮೈಸೂರು ಮಹಾ ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಭಾರತ ರತ್ನ ಸರ್ ಎಂ ವಿಶ್ವೇಶ್ವರಾಯ ಅವರ ದೂರದೃಷ್ಟಿಯ ಫಲವಾಗಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆ ಮಾಡಲಾಗಿತ್ತು. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಲಭಿಸಿತ್ತು. ಲಕ್ಷಾಂತರ ಜನರು ಪರೋಕ್ಷವಾಗಿ ಬದುಕು ಕಟ್ಟಿಕೊಂಡಿದ್ದರು. ಇಂತಹ ವೈಭವದ ದಿನಗಳು ಮರುಕಳಿಸುವ ದಿನಗಳು ದೂರವಿಲ್ಲ ಎಂದರು. 
    ಕಾರ್ಮಿಕರಿಂದ ಕೃತಜ್ಞತೆ : 
    ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರಿಗೆ ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿ ಅವರ ಗಮನ ಸೆಳೆದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ, ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ತಾಲೂಕು ಅಧ್ಯಕ್ಷ ಕೋಡ್ಲುಯಜ್ಞಯ್ಯ ಸೇರಿದಂತೆ ಪರಿಷತ್ ಪ್ರಮುಖರಿಗೆ ವಿಐಎಸ್‌ಎಲ್ ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರು ಕೃತಜ್ಞತೆ ಸಲ್ಲಿಸಿದ್ದಾರೆ. 
    ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಕೇಶ್, ನಿವೃತ್ತ ನಿವೃತ್ತ ನೌಕರರ ನರಸಿಂಹಚಾರ್ ಸೇರಿದಂತೆ ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರು ಕಾರ್ಖಾನೆ ಅಭಿವೃದ್ಧಿಪಡಿಸುವ ಸಂಬಂಧ ನಡೆಸುತ್ತಿರುವ ಹೋರಾಟಕ್ಕೆ ಕೈಜೋಡಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಪೂರಕವಾಗಿ ಸ್ಪಂದಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.